ಬಾಲ್ಯದ ನೆನಪುಗಳು-೨

ನಾನು ಚಿಕ್ಕವಳಾಗಿದ್ದಾಗ ರೇಡಿಯೊ ಒಂದೇ ನಮಗೆ ಮನರಂಜನೆ ಒದಗಿಸುವ ಸಾಧನವಾಗಿತ್ತು... ಮಧ್ಯಮ ವರ್ಗದವರಾದ ನಮ್ಮ ಮನೆಯಲ್ಲಿ ಈಗಿನಂತೆ ಟೇಪ್ ರೆಕಾರ್ಡರ್ ಇರಲಿಲ್ಲ, ಟಿವಿ ಆಗಿನ್ನು ಬಂದಿರಲಿಲ್ಲ......... ಶಾಲೆಗೆ ಹೊರಡುವ ಮುಂಚೆ, ಶಾಲೆಯಿಂದ ಬಂದ ನಂತರ ರೇಡಿಯೊಗೆ ಕಿವಿಹಚ್ಚಿ ಕೂರುವುದು ನನ್ನ ನೆಚ್ಚಿನ ಹವ್ಯಾಸವಾಗಿತ್ತು.....

ಬೆಂಗಳೂರು ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಎಂ.ಎಸ್.ಸುಬ್ಬಲಕ್ಷಿಯವರ ಇಂಪಾದ ಸುಪ್ರಭಾತದೊಂದಿಗೆ ನನಗೆ ಬೆಳಗಾಗುತ್ತಿತ್ತು. "ವಂದೇ ಮಾತರಂ"ನೊಂದಿಗೇ ಬೆಳಗಾಗುತ್ತಿದ್ದ ದಿನಗಳೂ ಇದ್ದವು........ ! ಆದರೆ ಅಂತಹ ದಿನಗಳು ತುಂಬಾ ಕಡಿಮೆ ಅನ್ನುವುದನ್ನು ತಿಳಿಸಲು ಸಂಕೋಚವೆನ್ನಿಸುತ್ತೆ.

ಚಿಂತನ, ಬಾಲಜಗತ್,ಚಿತ್ರಗೀತೆಗಳ ಕಾರ್ಯಕ್ರಮಗಳು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿದ್ದವು. ...........
ಚಿಂತನದಲ್ಲಿ ಬಿತ್ತರವಾಗುತ್ತಿದ್ದ ಪ್ರಸಿದ್ಧ ಕವಿಗಳ ನುಡಿಮುತ್ತುಗಳ ಬರಹ ಈಗಲೂ ನನ್ನ ಬಳಿ ಇದೆ. .....ರೇಡಿಯೋ ಅಂದ ಮೇಲೆ ಎ.ಎಸ್,ಮೂರ್ತಿಯವರನ್ನ ನೆನಪಿಸಿಕೊಳ್ಳದಿದ್ದರೆ ನನ್ನ ಈ ಬರಹ ಅಪೂರ್ಣ ಅಂತ ನನಗನ್ನಿಸುತ್ತೆ..............  ಎ.ಎಸ್,ಮೂರ್ತಿಯವರು ಆಕಾಶವಾಣಿಯಲ್ಲಿ ನೆಡೆಸಿಕೊಡುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ,ಅದರಲ್ಲೂ ’ರೇಡಿಯೊ ಈರಣ್ಣ’ನ ಮಾತಿನ ಮೋಡಿಗೆ ಮನಸೋತವಳಲ್ಲಿ ನಾನೂ ಒಬ್ಬಳಾಗಿದ್ದೆ............’ನಾವು-ನಮ್ಮವರು’ - ಕೇಳುಗರ ಪತ್ರಗಳಿಗೆ ಉತ್ತರ
- ಈ ವಿಭಾಗಕ್ಕೆ ಪತ್ರ ಬರೆಯುವುದು ನನ್ನ ಹವ್ಯಾಸವಾಗಿತ್ತು..... ಅದನ್ನು  ಎ.ಎಸ್,ಮೂರ್ತಿಯವರು ಓದಿದರೆ ಸಾಕು ಸಂತಸದಿಂದ ಕುಣಿದಾಡುತ್ತಿದ್ದ ದಿನಗಳವು................

ನನ್ನ ಬಾಲ್ಯದ ದಿನಗಳಲ್ಲಿ ನನ್ನ ಜೊತೆಗಿದ್ದ ಆಕಾಶವಾಣಿಗೆ ನಾನು ಚಿರಋಣಿಯಾಗಿದ್ದೇನೆ.......

" ಓ ನೆನಪೆ, ನೀನೆಷ್ಟು ಮಧುರ
  ಓ ಬಾಲ್ಯವೆ, ನೀನೆಷ್ಟು ಸುಂದರ" 

ಅಂದಿನ ದಿನಗಳಲ್ಲಿ ಚಿಕ್ಕಚಿಕ್ಕ ವಿಷಯಗಳೂ ತರುತ್ತಿದ್ದ ತೃಪ್ತಿ- ಸಂತಸಗಳು ಇಂದಿನ ದಿನಗಳಲ್ಲಿ ನಮ್ಮಲ್ಲಾಗಲಿ ಅಥವ ನಮ್ಮ ಮಕ್ಕಳಲ್ಲಾಗಲಿ ಏಕಿಲ್ಲ ...............? ಇದು ನನ್ನನ್ನು ಇತ್ತೀಚಿನ ದಿನಗಳಲ್ಲಿ ಕಾಡುವ ಪ್ರಶ್ನೆ...... ನಿಮಗೂ ಹೀಗನ್ನಿಸುತ್ತಿದೆಯೆ ........?

ನೆನಪುಗಳ ಮಾತು ಮಧುರ...೩

ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.

ನೆನಪುಗಳ ಮಾತು ಮಧುರ...೩

 "ಏರ್ ಇಂಡಿಯಾ" ಸಿಂಬಲ್ ನೋಡಿದ್ರೆ ಏನ್ ರಾಯಲ್ಲಾಗಿದೆ ಅನ್ಸುತ್ತೆ ಅಲ್ವಾ? ಇದೇ ರೀತಿಯ ಸ್ವಾಗತಕಾರನೊಬ್ಬ ಮದುವೆ ಛತ್ರದ ಬಾಗಿಲಲ್ಲಿ ಕಾಣುವಂತಾದರೆ  ಹೇಗನ್ನಿಸಬಹುದು.....? ಹುಬ್ಬಳ್ಳಿಯವರಾದ ಶ್ರೀ ಚನ್ನಬಸಪ್ಪನವರು ಕುಳ್ಳನಾದರೂ ತನ್ನ ವೇಷಭೂಷಣದಿಂದ, ಹಾವಭಾವಗಳಿಂದ ಮದುವೆ ಮನೆಯಲ್ಲಿ ಎಲ್ಲರ ಗಮನವನ್ನ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲರಾದರು. ಇವರು ವಧೂವರರನ್ನು ವೇದಿಕೆಗೆ ಕರೆದು ತಂದದ್ದು ವಿಶೇಷ. 

 
ತಮ್ಮನ್ನು ಹಾರೈಸಲು ಬಂದ ಅತಿಥಿಗಳೊಂದಿಗೆ ಮಾತನಾಡಿ ದಣಿದ ಮದುಮಕ್ಕಳಿಗೆ ಉದ್ದ ಪೈಪಿನ ಎಳನೀರನ್ನು ನೀಡಿ ತಮ್ಮ ಕಾಳಜಿ ಮೆರೆದರು. ಛತ್ರಕ್ಕೆ ಬರುತ್ತಿದ್ದ ಎಲ್ಲಾ ಆಮಂತ್ರಿತರನ್ನು ನಮ್ರತೆಯಿಂದ ಸ್ವಾಗತಿಸಿ ಆಕರ್ಷಣೆಯ ಬಿಂದುವಾದರು. ಬಂದವರೆಲ್ಲ ಬಾಗಿಲಿನಲ್ಲಿ ಸ್ವಲ್ಪ ಹೊತ್ತು ನಿಂತು ಈ ಕುಳ್ಳನ ಚಮತ್ಕಾರವನ್ನು ನೋಡಿ ಆನಂದಿಸಿ ಒಳಗೆ ಪ್ರವೇಶಿಸುತ್ತಿದ್ದುದು ಸಾಮಾನ್ಯವಾಗಿತ್ತು.ಮಕ್ಕಳಂತೂ ಇವರ ಮುಂದೆಯೇ ಜಮಾಯಿಸಿ, ನಗಿಸಿದಾಗ ನಕ್ಕು, ಹೆದರಿಸಿದಂತೆ ನಟಿಸಿದಾಗ ಹೆದರಿ ದೂರದಿಂದಲೇ ಕುತೂಹಲದಿಂದ ನೋಡುತ್ತಿದ್ದರು. ಒಟ್ಟಿನಲ್ಲಿ  ಈ ಕುಳ್ಳನ ಉಪಸ್ಥಿತಿ ಮಕ್ಕಳು ಕುಣಿದು ಕುಪ್ಪಳಿಸುವಂತೆ ಮಾಡಿದ್ದಂತೂ ನಿಜ.

ಚೈತನ್ಯದ ನುಡಿಗಳು..... ಅಲ್ಲಿ ಇಲ್ಲಿ ಹೆಕ್ಕಿದ್ದು - ೨

೧.  ಕಾದ ಹೆಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೋಗುತ್ತದೆ.
     ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
     ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ.
     ನಾವು ಯಾರ ಸಂಗ ಮಾಡುತ್ತೇವೆಯೊ ಅದರಂತೆ ನಾವಾಗುತ್ತೇವೆ.

೨. ಎರಡು ಒಳ್ಳೆಯ ಮಾತು, ಮುಖದಲ್ಲಿ ಮಂದಹಾಸ ಇವಿಷ್ಟು ಸಾಕು ಇಡೀ ಪರಿಸರವನ್ನು ಸುಂದರವಾಗಿಡಲು.

೩. ಕೋಪ, ಮಾತಿನಲ್ಲಿ ಮತ್ತು ಕೃತಿಯಲ್ಲಿ ವ್ಯಕ್ತವಾಗುವುದು ಬೇಡ. ಅದರಿಂದ ವೃಥಾ ತೊಂದರೆ.

೪. ಅವಶ್ಯಕತೆ ಇದ್ದಾಗ ಅವಶ್ಯಕವಾದುದನ್ನು ಮಾತ್ರ ಮಾತನಾಡಿ.ಅನಾವಶ್ಯಕವಾಗಿ ಮಾತನಾಡಬೇಡಿ.

೫. ನಿಮ್ಮ ಜೀವನ ಮಧುರವಾಗಿರಬೇಕೇ?
     ಮಧುರವಾಗಿರುವುದೆಲ್ಲ ಬೇಕೆಂಬ ಬಯಕೆಯಿಂದ ದೂರವಿರಿ.

೬. ಕೀರ್ತಿಯನ್ನು ಎಂದೂ ಹಿಂಬಾಲಿಸದಿರು. ಏಕೆಂದರೆ ಅದು ಎಲ್ಲಾ ದುರ್ಗುಣಗಳಿಗೆ ದಾರಿ.
     ಅದು ನಿನ್ನನ್ನೇ ಹಿಂಬಾಲಿಸುವಂತೆ ಸಾಧಿಸು.

೭. ನಮ್ಮಲ್ಲಿ ವಿವೇಕ ಜಾಗೃತವಾದಾಗ ಮಾತ್ರ ನಮ್ಮಿಂದ ಒಂದಷ್ಟು ಒಳ್ಳೆಯ ಕೆಲಸವಾಗುತ್ತದೆ.

೮. ಅಪಾತ್ರರಿಗೆ ಮಾಡಿದ ದಾನ ಒಳ್ಳೆಯ ಫಲವನ್ನು ಕೊಡುವುದಿಲ್ಲ ಬದಲಿಗೆ ನಮ್ಮನ್ನೇ ಸುಡುತ್ತದೆ.

೯. ಸಾಧ್ಯಾಸಾಧ್ಯತೆಗಳನ್ನು ದೇವರಿಗೆ ಬಿಡಿ ಆದರೆ ನಿಮ್ಮ ಪ್ರಯತ್ನ ಮಾತ್ರ ಗಟ್ಟಿಯಾಗಿರಲಿ.

೧೦. ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ವಿಘ್ನ ಕಟ್ಟಿಟ್ಟ ಬುತ್ತಿ. ಇದು ದೇವರು ಹೂಡುವ ಪರೀಕ್ಷೆಯಾಟ.

ನೆನಪುಗಳ ಮಾತು ಮಧುರ....೨

ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.  

                                               ನೆನಪುಗಳ ಮಾತು ಮಧುರ....೨

ಮದುವೆಯ ಸಿದ್ಧತೆಗಳು ನೆಡೆಯುತ್ತಿದ್ದಂತೆ, ನನ್ನ ಮೈದುನರು ಮದುವೆಯಲ್ಲಿ ಪಟಾಕಿ ಹೊಡೆಯೋಣ ಎಂದಾಗ ನನಗೆ ಸ್ವಲ್ಪ ಹೆದರಿಕೆಯಾಗಿತ್ತು. ಸಂಜೆ ಆರತಕ್ಷತೆಗೆ ಬರುವ ಜನ ಜಾಸ್ತಿ. ಮಕ್ಕಳು ಮರಿ ಸಂಭ್ರಮದಿಂದ ಓಡಾಡುವ ಜಾಗ. ಛತ್ರದ ಹೊರಗೆ ಮದುವೆಗೆ ಬಂದವರ ವಾಹನಗಳು ನಿಂತಿರುತ್ತವೆ. ಶಾಮಿಯಾನ ಮತ್ತು ಲೈಟಿಂಗ್ ಇರುವೆಡೆ ಪಟಾಕಿಯಿಂದಾಗಿ ಏನಾದ್ರು ಅನಾಹುತವಾದರೆ ಎಂಬ ಸಹಜವಾದ ಆತಂಕ ನನ್ನಲ್ಲಿ ಮನೆಮಾಡಿತ್ತು.  


ಮದುಮಕ್ಕಳಿಂದ ಪಟಾಕಿ ಹಚ್ಚುವ ಕಾರ್ಯ ಚಾಲನೆಯಾಯಿತು. ಹಚ್ಚಿದೊಡನೆ ಮೇಲೆ ಚಿಮ್ಮಿ, ಬಣ್ಣ ಬಣ್ಣದ ನಕ್ಷತ್ರಗಳಂತೆ ಕಂಗೊಳಿಸಿ, ಹೂಮಳೆ ಸುರಿಸಿದ  ದೃಶ್ಯ ನಯನ ಮನೋಹರವಾಗಿತ್ತು. ಆಗಮಿಸಿದವರೆಲ್ಲಾ ನಿಂತು ನೋಡಿ ಆನಂದಿಸಿದರು. ಮಕ್ಕಳ ಸಂಭ್ರಮವಂತೂ ಮೇರೆ ಮೀರಿತ್ತು. ಆತಂಕ ಮರೆಯಾಗಿ ಆನಂದ ತಂದಿತು.

ನೆನಪುಗಳ ಮಾತು ಮಧುರ....೧

ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.   ಶ್ರೀಯುತ ಕುಮಾರ ಸ್ವಾಮಿಯವರು ಶಿವಮೊಗ್ಗದ ಹೆಮ್ಮೆಯ ಕಲಾವಿದರಲ್ಲೊಬ್ಬರು. ಇವರು ರಾಜ್ಯಪ್ರಶಸ್ತಿ ವಿಜೇತ ಸ್ಯಾಕ್ಸೋಫೋನ್ ವಾದಕರು.ಇವರ ಸ್ಯಾಕ್ಸೋಫೋನ್  ವಾದನ ಕರ್ಣಾನಂದಕರವಾದುದು. ಇವರು ಸ್ಯಾಕ್ಸೋಫೋನ್ ನುಡಿಸುತ್ತಿದ್ದರೆ, ನಾವೆಷ್ಟೇ ಮದುವೆ ಮನೆಯ ಗದ್ದಲದಲ್ಲಿದ್ದರೂ ನಮ್ಮ ಕಿವಿ ನಮಗರಿವಿಲ್ಲದೆ ಅತ್ತ ಹೋಗುವುದು ಖಂಡಿತ..... ನನ್ನ ಮಗಳ ಮದುವೆಯ ಆರತಕ್ಷತೆಯಲ್ಲಿ ಇವರ ಸ್ಯಾಕ್ಸೋಫೋನ್ ವಾದನವು ಅಲೆ ಅಲೆಯಾಗಿ ತೇಲಿ ಬರುತ್ತಿತ್ತು.....ಭಕ್ತಿಗೀತೆಗಳು, ವಿವಾಹದ ಸಂದರ್ಭದಲ್ಲಿ
ನುಡಿಸಬಹುದಾದ ಚಲನಚಿತ್ರ ಗೀತೆಗಳನ್ನು ಒಂದಾದ ಮೇಲೆ ಒಂದರಂತೆ ನುಡಿಸಿ, ಆ ಸಂಜೆಯ ಆರತಕ್ಷತೆಗೆ ಮೆರಗನ್ನು ನೀಡಿದರು.... ಮದುವೆಗೆ ವಿಶಿಷ್ಟವಾದ ಕಳೆಯನ್ನು ತಂದುಕೊಟ್ಟರು.....


ಬಾಲ್ಯದ ನೆನಪುಗಳು - ೧

ಸವಿ ಸವಿ ನೆನಪು-೧

ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು.ಆಗಿನ ಮುಗ್ಧತೆ, ಬೆಳೆದಂತೆ ಮಾಯವಾಗುತ್ತದೆ.ಈ  ಮಾಲಿಕೆಯಲ್ಲಿ ನಾನು ನನ್ನ ಬಾಲ್ಯದ ಕೆಲವು ಕ್ಷಣಗಳನ್ನು ಮೆಲುಕು ಹಾಕಲು ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು  ಇಚ್ಛಿಸುತ್ತೇನೆ. ಜೊತೆಜೊತೆಗೆ ಅಂದಿನ ದಿನಗಳಲ್ಲಿ ನನಗೆ ತುಂಬಾ ಅಚ್ಚುಮೆಚ್ಚಾದ ಮತ್ತು ನನ್ನ ಚಿಕ್ಕಂದಿನ ದಿನಗಳ ಮೇಲೆ ಪ್ರಭಾವ ಬೀರಿದ ಕೆಲವು ಚಲನಚಿತ್ರ ಗೀತೆಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ.

ನಾನು ನನ್ನ ಬಾಲ್ಯವನ್ನೆಲ್ಲ ಮಲೆನಾಡಿನ ಮಡಿಲಲ್ಲಿ, ಭದ್ರೆಯ ತಟದಲ್ಲಿ ಕಳೆದಿದ್ದೇನೆ.ನನ್ನ ಅಜ್ಜ,ಅಜ್ಜಿ,ಅಪ್ಪ,ಅಮ್ಮ ಮತ್ತು ನನ್ನ ಒಡಹುಟ್ಟಿದವರೊಂದಿಗೆ ಕಳೆದ ಆ ದಿನಗಳು ನನ್ನ ಪಾಲಿಗೆ ಅವಿಸ್ಮರಣೀಯ.ನನ್ನ ಎಳೆತನದ ದಿನಗಳು ಎಂದೊಡನೆ "ನಮ್ಮ ಮಕ್ಕಳು" ಸಿನಿಮಾ ನನ್ನ ಸ್ಮೃತಿಪಟಲದ ಮೇಲೆ ಮೂಡಿಬರುತ್ತದೆ.ದೃಶ್ಯ ಮಾಧ್ಯಮ ಒಂದು ಪರಿಣಾಮಕಾರಿಯಾದ ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ.


ಆ ದಿನಗಳಲ್ಲಿ ಬಿಡುಗಡೆಯಾದ "ನಮ್ಮ ಮಕ್ಕಳು" ಮಧ್ಯಮವರ್ಗದ ಬಹುತೇಕ ಸಂಸಾರಗಳಲ್ಲಿ ತುಂಬಾ ಪ್ರಭಾವ ಬೀರಿದ ಅತ್ಯುತ್ತಮ ಚಿತ್ರವಾಗಿತ್ತು.ಈ ಚಿತ್ರ ನಮ್ಮ ಮನೆಯಲ್ಲೂ ಕೂಡ ಬದಲಾವಣೆಯ ಗಾಳಿಯನ್ನ ಬೀಸಿತ್ತು.ಪ್ರತಿದಿನ ಸ್ನಾನ ಮುಗಿಸಿ ದೇವರಿಗೊಂದು ನಮಸ್ಕಾರ ಹಾಕುವುದರೊಂದಿಗೆ ಮುಗಿಯುತ್ತಿದ್ದ ನಮ್ಮ ಪೂಜೆ ಸಿನಿಮಾದ ಪ್ರಭಾವದಿಂದಾಗಿ  ಮನೆಯವರೆಲ್ಲಾ ಒಟ್ಟಾಗಿ ಸೇರಿ ಶ್ಲೋಕ, ಹಾಡುಗಳನ್ನ ಹೇಳಿಕೊಳ್ಳುತ್ತಾ ಭಕ್ತಿಪೂರ್ವಕವಾಗಿ ಮುಗಿಸುವಂತಾಯ್ತು. ಇದರಿಂದ ಒಳ್ಳೆಯ ಸಂಸ್ಕಾರ ಪಡೆಯುವುದರ ಜೊತೆಗೆ ಕುಟುಂಬದಲ್ಲಿ ಸ್ನೇಹ, ಪ್ರೀತಿ ಹೆಚ್ಚಾಗಲು ದಾರಿಯಾಯಿತು.

ಪ್ರತಿ ಮಂಗಳವಾರ, ಶುಕ್ರವಾರಗಳಂದು ನಮ್ಮ ಮನೆಯಲ್ಲಿ ದೇವರಿಗೆ ವಿಶೇಷವಾದ ಪೂಜೆ.ಅಂದು ನಮ್ಮ ತಂದೆಯವರು ಪೂಜೆ ಪ್ರಾರಂಭಿಸುವ ವೇಳೆಗೆ ನಾನು,ನನ್ನ ತಮ್ಮ-ತಂಗಿಯರು ದೇವರ ಮನೆಯಲ್ಲಿ ಪೂಜೆಗೆ ಸಹಕರಿಸುತ್ತಿದ್ದೆವು. ಮಂಗಳಾರತಿಯ ಹೊತ್ತಿಗೆ ನಮ್ಮ ತಾಯಿಯವರೂ ಬೆಳಗಿನ ತಿಂಡಿ ಮಾಡುವುದನ್ನು ಮುಗಿಸಿ ನಮ್ಮೊಡನೆ ಸೇರುತ್ತಿದ್ದರು.ತೀರ್ಥ-ಪ್ರಸಾದದ ನಂತರ ತಿಂಡಿ ಮುಗಿಸಿ ಶಾಲೆಗೆ ಹೋಗುವ ಪದ್ಧತಿ ಬೆಳೆದು ಬಂತು.ಮೊದಲೆಲ್ಲಾ ಯಾಂತ್ರಿಕವಾಗಿ ಮುಗಿಯುತ್ತಿದ್ದ ಪೂಜೆ ದೃಶ್ಯ ಮಾಧ್ಯಮದ ಪ್ರಭಾವದಿಂದಾಗಿ ಮನೆಯಲ್ಲಿ ಆತ್ಮೀಯ ವಾತಾವರಣವನ್ನುಂಟು ಮಾಡಿತ್ತು. ಚಿಕ್ಕವರಾದ ನಮಗೆ ಹಿರಿಯರಿಗೆ ಗೌರವಿಸುವ ,ಕಿರಿಯರಿಗೆ ಪ್ರೀತಿ ತೋರಿಸುವ ಮಾರ್ಗದರ್ಶನ ನೀಡಿತು.ಈ ಘಟನೆ ನನ್ನ ಮನಸ್ಸಿನಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ.’
’ನಿನ್ನೊಲುಮೆ ನಮಗಿರಲಿ ತಂದೆ
 ಕೈ ಹಿಡಿದು ನೀ ನೆಡೆಸು ಮುಂದೆ’ ಪ್ರತಿದಿನ ದೇವರ ಮುಂದೆ ಭಕ್ತಿಪೂರ್ವಕವಾಗಿ ಹೇಳುತ್ತಿದ್ದೆವು. ಈಗಲೂ ಈ ಹಾಡಿನ ಸಾಲುಗಳನ್ನು ಆಗಾಗ್ಗೆ ಗುಣುಗುಣಿಸುತ್ತಿರುತ್ತೇನೆ.
  ’ ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
    ಅಂಬಿಗನೆ ನೀ ನೆಡೆಸು ಈ ಬಾಳನೌಕೆ
    ಯಾವ ನೋವೇ ಬರಲಿ ಎದೆಗುಂದದಿರಲಿ
    ಸತ್ಯ ಮಾರ್ಗದೆ ನೆಡೆವ ಶಕ್ತಿ ಕೊಡು ತಂದೆ’ 
ಎಷ್ಟೊಂದು ಅರ್ಥವತ್ತಾದ ಸಾಲುಗಳು ಅಲ್ಲವೆ? ಇಂತಹ ಹಾಡುಗಳು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲವೇ? ಇಂತಹ ಉತ್ತಮ ಅಭಿರುಚಿಯ ಸಿನಿಮಾವನ್ನ ಈಗಿನ ಮಕ್ಕಳೂ ನೋಡಿ ಕಲಿಯುವುದಿದೆ ಎಂದು ನಿಮಗನ್ನಿಸುವುದಿಲ್ಲವೆ?

ಈ ಹಾಡಿನ ಸಾಹಿತ್ಯವನ್ನೊಮ್ಮೆ ನೋಡಲು ಇಲ್ಲಿ ಕ್ಲಿಕ್ಕಿಸಿ.
"ನಿನ್ನೊಲುಮೆ ನಮಗಿರಲಿ ತಂದೆ"

" ನಾನೂ... ನನ್ನ ಕನಸು"

ಪ್ರಕಾಶ್ ರೈ ರವರ " ನಾನೂ... ನನ್ನ ಕನಸು" ಚಿತ್ರ ಮಕ್ಕಳನ್ನು ಅದರಲ್ಲೂ ಮಗಳನ್ನು ಅತಿಯಾಗಿ ಪ್ರೀತಿಸುವ ಎಲ್ಲಾ ಅಪ್ಪ-ಅಮ್ಮಂದಿರ ಕನಸೆಂದರೆ ಖಂಡಿತಾ ತಪ್ಪಲ್ಲ. ನಮ್ಮ ಮನೆಯಲ್ಲಿಯೇ ನಡೆದ, ನಡೆಯುತ್ತಿರುವ ಬಹಳಷ್ಟು ಸನ್ನಿವೇಶಗಳು ಚಿತ್ರದಲ್ಲಿ ಯಥಾವತ್ತಾಗಿ ಮೂಡಿಬಂದಿವೆ. ನಮ್ಮ ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಅವರು ತೆಗೆದುಕೊಳ್ಳುವ ನಿರ್ಣಯಗಳು ಎಲ್ಲಿ ತಪ್ಪಾಗಿಬಿಡುತ್ತದೋ, ಅವರಿಗೆ ನೋವು-ನಿರಾಶೆಗಳಾಗಿಬಿಡುತ್ತದೋ ಎಂಬ ಆತಂಕ ಹೆತ್ತವರಿಗಿದ್ದೇ ಇರುತ್ತದೆ. ಆದರೆ ಮಕ್ಕಳ ಬಗೆಗಿನ ಅತಿಯಾದ ಕಾಳಜಿ ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡಬಹುದು ಮತ್ತು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ಮನವರಿಕೆ ಮಾಡಿಕೊಡಲಾಗಿದೆ.
ಆದರೆ ನಾವೇ ಎತ್ತಿ ಆಡಿಸಿ,ಬೆಳೆಸಿದ ನಮ್ಮ ಮಕ್ಕಳು ಉನ್ನತ ಧ್ಯೇಯಗಳನ್ನು ತಮ್ಮದಾಗಿಸಿಕೊಂಡು ನಮಗೇ ಮಾದರಿಯಾದಾಗ ಹೆತ್ತವರಿಗೆ ಹೆಮ್ಮೆಯಾಗುವುದು ಸಹಜ. ಪ್ರಕಾಶ್ ರೈ ಹೇಳುವ " ನಾನು ಬೆಳೆದಿಲ್ಲ, ನನ್ನ ಮಗಳು ನನ್ನನ್ನು ಬೆಳೆಸಿದಳು" ಎಂಬ ಮಾತು ಅಪ್ಪ-ಅಮ್ಮಂದಿರಿಗೆ ಹೆಮ್ಮೆಯ ವಿಷಯ. ಒಬ್ಬಳೇ ಮಗಳೆಂದರೆ ಹಟಮಾರಿ, ಸ್ವಾರ್ಥಿ ಎಂದು ಸಾಧಾರಣವಾಗಿ ಭಾವಿಸಲಾಗುತ್ತದೆ. ಇದು ತಪ್ಪು ಅಭಿಪ್ರಾಯ. ಒಬ್ಬಳೇ ಮಗಳಾಗಿ ಬೆಳೆದರೂ ಪರರ ನೋವಿಗೆ ಸ್ಪಂದಿಸುವ, ಅಪ್ಪ-ಅಮ್ಮನ ಭಾವನೆಗಳಿಗೆ ಬೆಲೆಕೊಡುವ ,ಸಮಯಕ್ಕೆ ತಕ್ಕಂತೆ, ಸರಿಯಾದ ರೀತಿಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ , ಉತ್ತಮ ಸಮಾಜಕ್ಕೆ ನಾಂದಿ ಹಾಡುವ ಮಗಳಾಗಿ ಬೆಳೆದದ್ದು ಹೇಗೆ ಎಂಬುದು ಅಚ್ಚರಿತರಿಸುತ್ತದೆ.
ತನ್ನೆಲ್ಲಾ ಭಾವನೆಗಳನ್ನು ಬದಿಗಿರಿಸಿ ಗಂಡ-ಮಗಳನ್ನು ಮುನ್ನೆಡೆಸಿದ ಅಮ್ಮ, ತನ್ನ ಜೀವನದಲ್ಲಿ ತಾನೇನು ತಪ್ಪು ಹೆಜ್ಜೆಗಳನ್ನಿರಿಸಿದೆ ಎಂದು ತನ್ನ ಮಗಳ ನಡವಳಿಕೆಯಿಂದ ಕಲಿತು ಎತ್ತರಕ್ಕೇರಿದ ಅಪ್ಪ ಮತ್ತು ವಿದ್ಯಾವಂತರಾಗಿ,ಬುದ್ಧಿವಂತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಮೈಗೂಡಿಸಿಕೊಂಡ ಮಗಳು- ಅಳಿಯನನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರವಿದು. ನವಿರಾದ ಹಾಸ್ಯ, ಪ್ರಕೃತಿಯ ಚೆಲುವು, ಅತ್ಯುತ್ತಮವಾದ ಮೆಸೇಜ್ ಈ ಚಿತ್ರದಲ್ಲಿದೆ.

ಚುಕ್ಕಿ ಚಂದ್ರಮರ ಜೂಟಾಟ

 (ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ
  ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ
  ತಾಯಿಯೊಂದಿಗೆ ನಡೆಸಿದ ಸಂವಾದದ ತುಣುಕು ಇಲ್ಲಿದೆ)    

ಬಾಲೆ:-    ಮನೆಯಂಗಳಕೆ ನೀ ಬಾರಮ್ಮಾ
              ಸೊಬಗಿನ ಚಂದ್ರನ ನೋಡಮ್ಮ
              ಕಾಡಿದೆ ಪ್ರಶ್ನೆ ನನಗಮ್ಮ
              ಉತ್ತರ ನೀನು ಹೇಳಮ್ಮ

              ಬಿದಿಗೆ ಚಂದ್ರನ ಕಾಣಮ್ಮ
              ತೇಲುವ ದೋಣಿ ಇವನಮ್ಮ
             ದೋಣಿಯ ಅಂಚಿಗೆ ಇಂದೀಗ
             ದೀಪ ಹಚ್ಚಿದವರಾರಮ್ಮ ?  

             ನಂಮ್ಮನೆಗೆ ಚಂದಿರ ಬಂದಿದ್ದನೆ ?
             ನನ್ನಯ ಬಿಂದಿಯ ಕದ್ದೊಯ್ದನೆ ?
             ತನ್ನಯ ಹಣೆಗೆ ಇರಿಸಿಹನೆ ?
             ನನಗೂ ಟಿಕಳಿಯ ಉಳಿಸಿಹನೆ ?

ತಾಯಿ(ನಗುತ್ತಾ):-  ಓಡುತ ಓಡುತ ಚಂದಿರನು
                           ಬಿಡದೆ ತಾರ‍ೆಯ ಹಿಡಿದಿಹನು
                           ತನ್ನಯ ಮುಡಿಗೆ ಮುಡಿದಿಹನು
                           ಬೀಗುತ ಬಾನಲಿ ನಿಂದಿಹನು

                           ಮುಂದೆ ಅರಿಯುವೆ ನೀ ಕಂದ
                           ವಿಸ್ಮಯ ವಿಶ್ವದ ಈ ಬಂಧ
                           ಇದು ಚುಕ್ಕಿ ಚಂದ್ರಮರ ಜೂಟಾಟ
                           ಕಣ್ಮನ ತಣಿಸಿದೆ ಈ ನೋಟ

ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು.

೧.ಪೂರ್ಣ ವಿರಾಮವೇ ಕೊನೆಯಲ್ಲ,ಅದರ ಮುಂದೆ ಸಹ ಬರೆಯಬಹುದು.ಸೋಲೇ ಕೊನೆಯಲ್ಲ, ಅದು ಯಶಸ್ಸಿನ ಆರಂಭವೂ ಆಗಬಹುದು.

೨.ಯಶಸ್ಸಿನ ಕೀಲಿ ಕೈಯನ್ನು ಯಾರೂ ತಯಾರಿಸಿರುವುದಿಲ್ಲ. ಅದನ್ನು ಮಾತ್ರ ನಾವೇ ತಯಾರಿಸಿಕೊಳ್ಳಬೇಕು.ನಮಗೆಂಥ ಕೀಲಿಕೈ ಬೇಕೆಂಬುದನ್ನು ನಿರ್ಧರಿಸುವವರೂ ನಾವೇ.

೩.ನಾವು ಸರಿಯಾಗಿದ್ದಾಗ ಕೋಪಿಸಿಕೊಳ್ಳುವ ಅಗತ್ಯವೇ ಇಲ್ಲ.ತಪ್ಪಿದ್ದಾಗ ಕೋಪಿಸಿಕೊಳ್ಳುವ ಹಕ್ಕೇ ನಮಗಿಲ್ಲ.

೪. ಕೊಳಲಿಗೆ ಹಲವು ತೂತು. ಒಳಗೆಲ್ಲ ಖಾಲಿ.ಆದರೂ ಅದು ಇಂಪಾದ ಸ್ವರವನ್ನು ಹೊಮ್ಮಿಸುವಾಗ ನಾವೇಕೆ ಖಾಲಿ ಎಂದುಕೊಳ್ಳಬೇಕು.ನಮ್ಮ ಜೀವನವೂ ಕೊಳಲಿನಂತಾಗುವುದು ನಮ್ಮ ಕೈಯಲ್ಲೇ ಇದೆ.

೫. ಕೆಳಗೆ ಬಿದ್ದಾಗ ಬಿದ್ದ ಜಾಗವನ್ನು ನೋಡಬೇಡಿ.ಜಾರಿದ್ದೇಲ್ಲಿ ಎಂದು ನೋಡಿ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದೇ ಯಶಸ್ಸು.

೬. ಜೀವನವೆಂದರೆ ಸರಳರೇಖೆಯಂತೆ ನೇರವಲ್ಲ.ಆದರೆ ಜೀವನಪಥವನ್ನು ಸರಳ ಮತ್ತು ನೇರಗೊಳಿಸಿಕೊಳ್ಳಲು ಸಾಧ್ಯವಿದೆ.

೭. ನಿಮ್ಮ ಆಸೆಗಳ ಪಟ್ಟಿಯನ್ನು ಎಂದೂ ಕಡಿಮೆ ಮಾಡಿಕೊಳ್ಳಬೇಡಿ. ಆದನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.

೮. ಸೋತ ನಂತರ ಪ್ರಯತ್ನಿಸದಿರುವುದು ಸೋಲನ್ನು ಒಪ್ಪಿಕೊಂಡಂತೆ.ಪುನಃ ಪುನಃ ಪ್ರಯತ್ನಿಸುವುದು ಸೋಲನ್ನು ಪ್ರಶ್ನಿಸಿದಂತೆ.ಸೋಲನ್ನು ಪ್ರಶ್ನಿಸುವುದು ಗೆಲುವಿಗೆ ಮುನ್ನುಡಿ.

೯. ಎಲ್ಲಾ ಟೀಕೆಗಳಿಗೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅನೇಕ ಸಂದರ್ಭಗಳಲ್ಲಿ ಟೀಕೆ ಮಾಡಿದವರ ಬಂಡವಾಳವೇ ಬಯಲಾಗುತ್ತದೆ.ಈ ಅವಕಾಶಕ್ಕಾಗಿ ಕಾಯುವ ಸಹನೆ ನಮ್ಮಲ್ಲಿರಬೇಕು.

೧೦.ಎಲ್ಲಾ ನಕ್ಷತ್ರಗಳೂ ಹೊಳೆಯಬಹುದು. ಆದರೆ ಒಂದೂ ಸಹ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುವುದಿಲ್ಲ. ಎಲ್ಲರಂತೆ ನೀವಿದ್ದರೆ ನೀವೆಷ್ಟೇ ಶ್ರಮ ಹಾಕಿದರೂ ಪ್ರಯೋಜನವಿಲ್ಲ.ಭಿನ್ನವಾಗಿರಲು ಪ್ರಯತ್ನಿಸಿ.

ಕಡಲ ಒಡಲು

ಪೂರ್ಣಚಂದಿರನ ತನ್ನ
ತೆಕ್ಕೆಗೆ ಸೆಳೆದುಕೊಳ್ಳಲು
ತೆರೆಬಾಹುಗಳ ಚಾಚಿ
ಸೋತಿದೆ ಕಡಲು

***********
ಅನಂತತೆಯ ಪ್ರತೀಕ ಕಡಲು
ಮುತ್ತು ರತ್ನಗಳ ಒಡಲು
ಸಾವಿರಾರು ಜೀವರಾಶಿಯ ಮಡಿಲು
ಮೇಲ್ನೋಟಕ್ಕೆ ನೀರಿನಲೆಗಳ ಕಮಾಲು
      ********

ಮುಗಿಲ ಆಟ


                ಮುಗಿಲ ಆಟ
                 ------------
ವಸಂತಕಾಲದ ಒಂದು ಸಂಜೆಯಲಿ
ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ
ಬೆಳ್ಳಿಮೋಡಗಳ ಮೆರವಣಿಗೆ ನೀಲಿ ಆಗಸದಲ್ಲಿ
ಭಾಸ್ಕರನೆಡೆಗೆ ವೈಯಾರದ ನೋಟವ ತಾ ಬೀರುತಲಿ

ದಿನದ ಪಯಣ ಮುಗಿಸುವ ಆತುರ ರವಿಗೆ
ಚಿನ್ನಾಟವಾಡುವ ಬಯಕೆ ಬೆಳ್ಮುಗಿಲ ಸಾಲಿಗೆ
ಮುಗಿಲು ಧರಿಸಿತು ಸೂರ್ಯರಶ್ಮಿಯ ಬೆಳ್ಳಿಗೆರೆ ತನ್ನಂಚಿಗೆ
ನಾಚಿದ ಬೆಳ್ಳಿಮೋಡದ ಒಡಲಾಯಿತು ಕೆಂಪಗೆ

ಇದ ಕಂಡು ರವಿ ತಾನೂ ಮುಂದಾದ ಓಕುಳಿಗೆ
ಎರಚಿದ ಇನ್ನಷ್ಟು ರಂಗುಗಳ ಮುಗಿಲ ಕಡೆಗೆ
ಭಾನು ಮುಗಿಲಿನ ಆಟದಲಿ ನಾ ಮೈ ಮರೆತೆ
ರಂಗುರಂಗಾದ ಮುಗಿಲೆ ನಾ ನಿನಗೆ ಮನಸೋತೆವರ್ಷಾರ‍ಂಭದ ಇನ್ನೊಂದು ಸಂಜೆಯಲಿ
ರವಿಯ ಮರೆ ಮಾಡಿತ್ತು ಕರಿಮುಗಿಲು ಪಡುವಣದಲಿ
ಗಂಭೀರ ವದನವ ತಾ ತೋರುತಲಿ
ಮೆಲು ನಡೆಯಲಿ ಸಾಗುತಿವೆ ಕಾರ್ಮುಗಿಲು ಸಾಲಿನಲಿ

ಗುಡುಗು ಸಿಡಿಲುಗಳ ಹಿಮ್ಮೇಳವೇಕೆ ಈ ಕಾರ್ಮುಗಿಲಿಗೆ?
ತಟ್ಟನೆ ಹೊಳೆಯಿತು ಕರಿಮೋಡದಂಚಿನ ಕೋಲ್ಮಿಂಚಿಗೆ
ದುಗುಡ ದುಮ್ಮಾನಗಳಿರಬಹುದು ಪ್ರಸವಕ್ಕೆ ಹೊರಟ ಹೆಣ್ಣಿಗೆ
ತುಂಬಿದ ತನ್ನೊಡಲ ಭಾರ ಇಳಿಸಿಕೊಳ್ಳುವ ಕಾಲ ಕರಿಮುಗಿಲಿಗೆ

ಕಾರ್ಮುಗಿಲು ಕರಗಿ ನೀರಾಗಿ ಮಳೆ ಸುರಿಯಿತು
ಒಣ ಭೂಮಿ ಮಿಂದು ತಂಪಾಯಿತು
ಹಸಿರುಟ್ಟು ನಲಿದಳು ವಸುಂಧರೆ
ಜೀವಸಂಕುಲಕೆ ನೀಡಿತು ಹರ್ಷ ಈ ವರ್ಷಧಾರೆ