ಎಳ್ಳುಬೆಲ್ಲವ ಮೆಲ್ಲೋಣ.. ಒಳ್ಳೊಳ್ಳೆಯ ಮಾತನಾಡೋಣ....


ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು. ಅದು ಸಂಮೃದ್ಧಿಯ ದಿನಗಳು.ಈಗಿನ ತುಟ್ಟಿ ಕಾಲದಲ್ಲಿ ತಾವಿರುವ ಬಡಾವಣೆಯ ಎಲ್ಲಾ ಮನೆಗಳಿಗೂ ಎಳ್ಳು ಬೀರುವುದೆಂದರೆ ಮಧ್ಯಮ ವರ್ಗದವರಿಗೆ ಸ್ವಲ್ಪ ಭಾರವೇ ಸರಿ. ಹಾಗೆಂದು ಮಕ್ಕಳ ಉತ್ಸಾಹಕ್ಕೆ ತಣ್ಣೀರೆರೆಚುವ ಹಾಗಿಲ್ಲವಲ್ಲ. ಹಾಗಾಗಿ ತುಂಬಾ ಆತ್ಮೀಯರಾದವರಿಗೆ ಮತ್ತು ಅಕ್ಕಪಕ್ಕದವರಿಗೆ ಮಾತ್ರ ಎಳ್ಳು ಬೀರುವುದನ್ನು ನಾವು ಈಗ  ಕಾಣುತ್ತೇವೆ.  ಅಕ್ಕಪಕ್ಕದ ಮಕ್ಕಳೆಲ್ಲ ಒಂದಾಗಿ ಎಳ್ಳು ಬೀರಲು ಹೊರಟರೂ ತಮಗೆ ಬೇಕಾದವರಿಗೆ (ಮನೆಯಲ್ಲಿ ಅಮ್ಮ ಯಾರ‍್ಯಾರಿಗೆ ಕೊಡಲು ಹೇಳಿರುತ್ತಾರೋ ಆ ಮನೆಗಳಿಗೆ) ಮಾತ್ರ ಎಳ್ಳು ಕೊಡುತ್ತಾರೆ. ಇದು ತಪ್ಪಲ್ಲ.ನನ್ನ ಅನುಭವಕ್ಕೆ ಬಂದ ಒಂದು ಚಿಕ್ಕ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.

ಸಂಕ್ರಾಂತಿಯ ಒಂದು ದಿನ ನನ್ನ ಪರಿಚಿತರ ಮಗಳು ಎಳ್ಳುಬೀರಲು ಬಂದಳು. ಎಂದಿನಂತೆ ಎಳ್ಳಿನ ವಿನಮಯವಾಯ್ತು. ’ಬರ್ತೀನಿ ಆಂಟಿ’ ಎಂದು ಹೊರಟವಳನ್ನು ಗೇಟಿನವರೆಗೆ ಬೀಳ್ಕೊಡಲು ಹೊರಟಾಗ,ಅವಳ ಜೊತೆಗೆ ಬಂದ ಅವಳ ಗೆಳತಿಯೊಬ್ಬಳು ಹೊರಗೆ ಕಾಯುತ್ತಾ ನಿಂತಿದ್ದಳು.ಅವಳ ಲಿಸ್ಟ್ ನಲ್ಲಿ ನಮ್ಮ ಮನೆ ಇರಲಿಲ್ಲ ಅಂತ ಕಾಣುತ್ತೆ(ಆ ಹುಡುಗಿಯೂ ನನಗೆ ಪರಿಚಿತಳೆ). ಆಗ ನಾನು ’ಯಾಕಮ್ಮಾ ಹೊರಗೇ ನಿಂತೆ, ಬಾ ಒಳಗೆ’ ಎಂದರೆ , ಅವಳು ’ಇಲ್ಲ ಆಂಟಿ’ ಎಂದು ಬರಲೊಪ್ಪಲಿಲ್ಲ.ಆಗ ನಾನು ಎಳ್ಳಿನ ಕವರನ್ನು ಅಲ್ಲೇ ಕೊಟ್ಟು ಕಳುಹಿಸಿದೆ.

ಆ ಹುಡುಗಿ ಹೊರಗೆ ನಿಂತಿರುವ ಬದಲು ತನ್ನ ಸ್ನೇಹಿತೆಯೊಂದಿಗೆ ಒಳಗೆ ಬಂದು ಶುಭಾಶಯಗಳನ್ನು ಹೇಳಬಹುದಿತ್ತು.ಎಳ್ಳು ಕೊಡಲು ಮಾತ್ರ ಮನೆಯೊಳಗೆ ಬರಬೇಕೆಂಬುದೇನಿಲ್ಲ. ಆಕಸ್ಮಿಕವಾಗಿ ನಾನು ಕಂಡಾಗಲಾದರೂ ಬಂದು ವಿಶ್ ಮಾಡಬಹುದಿತ್ತು.ಹಿರಿಯರಾದ ನಾವು ನಮ್ಮ ಮಕ್ಕಳಲ್ಲಿ ಸಮಯಪ್ರಜ್ಞೆ ಮತ್ತು ಸೌಜನ್ಯಯುತ ನಡವಳಿಕೆಯ ಬಗ್ಗೆ ತಿಳಿಹೇಳುವ ಅಗತ್ಯವಿದೆ.ಇಲ್ಲದಿದ್ದರೆ ಇಂತಹ ಚಿಕ್ಕಪುಟ್ಟ ವಿಷಯಗಳು ಇನ್ನೊಬ್ಬರನ್ನು ಮುಜುಗರಕ್ಕೀಡು ಮಾಡಿಬಿಡುತ್ತವೆ. ಎಳ್ಳುಬೆಲ್ಲವ ಮೆಲ್ಲೋಣ ಒಳ್ಳೊಳ್ಳೆಯ ಮಾತನಾಡೋಣ ಎಂಬುದೇ ಸಂಕ್ರಾಂತಿ ಹಬ್ಬದ ಆಶಯ.ಹಬ್ಬದ ಉದ್ದೇಶವರಿತು ಆಚರಿಸಿದರೆ ಒಳ್ಳೆಯದು. ಒಂದು ಮಗು ಎಳ್ಳು ಕೊಟ್ಟು ಮಿಕ್ಕವರೆಲ್ಲಾ ಶುಭಾಶಯ ಹೇಳುವದು ಒಂದು ಒಳ್ಳೆಯ ಸಂಪ್ರದಾಯವೇ.ಇದನ್ನು ನಾವೂ ಕಲಿತು, ನಮ್ಮ ಮಕ್ಕಳಲ್ಲಿಯೂ ಬೆಳೆಸುವುದು ಇಂದಿನ ದಿನಗಳಲ್ಲಿ ಅವಶ್ಯಕ ಕೂಡ.

’ಪುಟ್ಟ ಮಕ್ಕಳೇ ಬನ್ನಿ
 ಸ್ನೇಹಿತರನ್ನೂ ಕರೆತನ್ನಿ
 ಶುಭಾಶಯಗಳು ನಿಮಗೆನ್ನಿ’

"ಸರ್ವರಿಗೂ ನೂತನ ವರ್ಷದ
ಮತ್ತು
ಮಕರ ಸಂಕ್ರಾಂತಿಯ ಶುಭಾಶಯಗಳು"

’ಹ’ಕಾರಕ್ಕೆ ಹೂಂಗುಟ್ಟುವಿರಾ?

ಹೊಸನಗರದ ಹತ್ತಿರ ಹಾಲ್ಕೊಳವೆಂಬುದೊಂದು ಹೋಬಳಿ. ಹಳ್ಳಿಯ ಹಾಡಿಯಲ್ಲೊಂದು ಹಟ್ಟಿಯಿತ್ತು.ಹಟ್ಟಿ ಹನುಮಪ್ಪನದು. ಹನುಮಪ್ಪನ ಹೆಂಡತಿ ಹೂವಮ್ಮ.ಹನುಮಪ್ಪನೊಬ್ಬ ಹಾಲಿಗನಾಗಿದ್ದನು (ಬೇಸಾಯಗಾರ).ಹನುಮಪ್ಪನ ಹುಟ್ಟೂರಿದೆಯಾಗಿತ್ತು.ಹನುಮಪ್ಪ-ಹೂವಮ್ಮರಿಗೊಬ್ಬಳು ಹೆಣ್ಣುಮಗಳಿದ್ದಳು.ಹೆಸರು ಹೇಮಾವತಿಯೆಂದು.ಹೇಮಾ ಹದಿಹರೆಯದ ಹುಡುಗಿ, ಹಸನ್ಮುಖಿ.ಹನುಮಪ್ಪ, ಹೂವಮ್ಮ,ಹೇಮರು ಹಾಳು ಹರಟೆಗಾರರಲ್ಲ. ಹೊತ್ತು ಹುಟ್ಟುವ ಹೊತ್ತಿಗೆ ಹಾಸಿಗೆಯಿಂದೆದ್ದು ಹೊಲ-ಹೈನುಗಾರಿಕೆಯೆಂದು ಹೈರಾಣಾಗುತ್ತಿದ್ದರು.


ಹಾಸಿಗೆಯಿಂದೆದ್ದ ಹನುಮಪ್ಪನು ಹೇರಂಬನಿಗೆ ಹಣತೆ ಹಚ್ಚಿ ಹೂವೇರ‍ಿಸುತ್ತಾನೆ. ಹೂವಮ್ಮ ಹಾಕಿಕೊಟ್ಟ ಹಾಲನ್ನು ಹೀರಿ ಹೊಲದೆಡೆಗೆ ಹೋಗುತ್ತಾನೆ. ಹೊಲ ಹನುಮಪ್ಪನ ಹರಕೆಯಿಂದ ಹಚ್ಚ ಹಸಿರಾಗಿತ್ತು. ಹೊಲದ ಹತ್ತಿರವೇ ಹಳ್ಳ ಹರಿಯುತ್ತಿತ್ತು. ಹಳ್ಳವೆಂದೂ ಹಿಂಗಿಹೋಗಿದ್ದಿಲ್ಲ.ಹೊಲದಲ್ಲಿ ಹೂಗಳು-ಹಣ್ಣುಹಂಪಲುಗಳು ಹೇರಳವಾಗಿದ್ದವು.ಹೊಂಬಾಳೆ, ಹೊಂಕೇದಿಗೆ, ಹಳದಿ-ಹರಿಶಿನದ ಹೂಗಳಲ್ಲದೆ ಹಲವಾರು ಹೂಗಳು ಹಾಗು ಹಣ್ಣುಗಳಿದ್ದವು. ಹೂಗಳನ್ನು ಹೆಕ್ಕಿ ಹುವ್ವಿನ ಹೆಡಿಗೆಗೂ ಹಾಗೂ ಹಣ್ಣುಗಳನ್ನು ಹಣ್ಣಿನ ಹೆಡಿಗೆಗೂ ಹಾಕಿಕೊಂಡು ಹನುಮಪ್ಪ ಹಟ್ಟಿಗೆ ಹಿಂದಿರುಗುತ್ತಾನೆ. ಹಬ್ಬದಡಿಗೆಯುಂಡು ಹಸಿವನ್ನು ಹಿಂಗಿಸಿಕೊಂಡು ಹೂ-ಹಣ್ಣು ಹಂಚಲು ಹಳ್ಳಿಹಳ್ಳಿಗೆ ಹೋಗುತ್ತಾನೆ.ಹನುಮಪ್ಪನಿಗೆ ಹಾಲು,ಹೂ-ಹಣ್ಣುಗಳೇ ಹಣಗಳಿಕೆಯ ಹಾದಿಯಾಗಿದ್ದವು.

ಹೊತ್ತಾರೆಯೆದ್ದ ಹೂವಮ್ಮ ಹರಿಸ್ಮರಣೆಗೈದು ಹಟ್ಟಿಯಲ್ಲಿರುವ ಹಸುಗಳಿಂದ ಹಾಲನ್ನು ಹಿಂಡುತ್ತಿದ್ದಳು. ಹಾಗೆಯೇ ಹುಳಿಯನ್ನ,ಹುಯಿಗಡಬು,ಹಾಲುಪಾಯಸ,ಹಾಲುಂಡೆಯೆಂದು ಹಬ್ಬದಡಿಗೆಯನ್ನು ಹನುಮಪ್ಪ, ಹೇಮರಿಗಾಗಿ ಹದಮಾಡಿಡುತ್ತಿದ್ದಳು.ಹನುಮಪ್ಪ ಹೂಬನದಿಂದ ಹೊತ್ತುತಂದ ಹೂಗಳನ್ನು ಹೂಮಾಲೆ, ಹೂಗೊಂಚಲು,ಹೂಹಾರಗಳನ್ನಾಗಿಸಿ ಹರಿವಾಣಗಳಲ್ಲಿ ಹಾಗು ಹೆಡಿಗೆಗಳಲ್ಲಿಡುತ್ತಿದ್ದಳು.ಹುಳುಕಾದ ಹೂಗಳನ್ನು ಹೆಕ್ಕಿ ಹಾಕಿ ಹೊಸತು ಹೂಗಳಿಂದ ಹೂಮಾಲೆಯಾಗುತ್ತಿದ್ದುದು ಹೆಗ್ಗಳಿಕೆಯೆನ್ನಿಸಿತ್ತು. ಹೇಮ- ಹೂವಮ್ಮರೂ ಹೆರಳು ಹಾಕಿಕೊಂಡು ಹೂಗೊಂಡೆಯನ್ನು ಹೆರಳಿಗೇರಿಸಿಕೊಳ್ಳುತ್ತಿದ್ದರು.ಹೂವಮ್ಮ ಹಟ್ಟಿಯಲ್ಲಿಯೇ ಹಾಲು, ಹೂ-ಹಣ್ಣುಗಳನ್ನು ಹಟ್ಟಿಯ ಹತ್ತಿರವಿರುವ ಹಳ್ಳಿಗರಿಗೆ ಹಂಚಿ ಹಣಗಳಿಸುತ್ತಿದ್ದಳು.

 ಹೇಮ ಹಳ್ಳಿಯ ಹೆಣ್ಣುಮಕ್ಕಳಿಗೆಲ್ಲ ಹಾಡು-ಹಸೆ ಹೇಳಿಕೊಡುತ್ತಿದ್ದಳು. ಹಳ್ಳಿಯ ಹೆಣ್ಣುಮಕ್ಕಳಿಗೆಲ್ಲ ’ಹೇಮಕ್ಕ’ನೆಂದೇ ಹೆಸರಾಗಿದ್ದಳು. ಹೆಣ್ಣುಮಕ್ಕಳನ್ನು ಹುರಿದುಂಬಿಸಲು, ಹಿತೋಪದೇಶ ಹೇಳಲು ಹೇಮ ಹಿಂಜರಿಯುತ್ತಿರಲಿಲ್ಲ. ಹಳ್ಳಿ ಹೈಕಳಿಗೆ ಹಿಂದಿ ಹೇಳಿಕೊಡುತ್ತಿದ್ದಳು.


ಹತ್ತಾರು ಹಳ್ಳಿಯ ಹೆಂಗೆಳೆಯರ ಹೆರಳಿನಲಂಕಾರಕ್ಕೆ, ಹೂಮುಡಿಯಲು ಹೂವಮ್ಮನ ಹೂದಂಡೆಯಿರಬೇಕು. ಹರಿ,ಹರ,ಹೇರಂಬರಿಗೆ ಹೂಮಾಲೆ ಹಾಕಲು ಹನುಮಪ್ಪನ ಹಟ್ಟಿಯಿಂದಲೇ ಹೂವನ್ನು ಹೊತ್ತೊಯ್ಯುತ್ತಿದ್ದರು. ಹೊಸಮನೆಗೆ ಹಾಲುಕ್ಕಿಸಲು ಹನುಮಪ್ಪ,ಹೂವಮ್ಮರ ಹೂ, ಹಣ್ಣು,ಹಾಲು ಹೋಗುತ್ತಿತ್ತು. ಹಬ್ಬಹರಿದಿನಗಳಿರಲಿ, ಹೂವೀಳ್ಯವಿರಲಿ ಹನುಮಪ್ಪನ ಹೊಲದ ಹೂಹಣ್ಣಿಗೆ ಹಳ್ಳಿಗರೆಲ್ಲ ಹಾತೊರೆಯುತ್ತಿದ್ದರು. ಹಳ್ಳಿಯ ಹೆಗ್ಗಡೆ,ಹೆಗ್ಗಡಿತಿಯರೂ ಹೂ-ಹಣ್ಣಿಗಾಗಿ ಹನುಮಪ್ಪನನ್ನು ಹುಡುಕುತ್ತಿದ್ದುದು ಹೆಚ್ಚುಗಾರಿಕೆಯಾಗಿತ್ತು .

ಹನುಮಪ್ಪ,ಹೂವಮ್ಮ, ಹೇಮರು ಹಳ್ಳಿಯ ಹಾಗು ಹಳ್ಳಿಗರ ಹಿತಚಿಂತಕರಾಗಿದ್ದರು. ಹುರುಪು, ಹುಮ್ಮಸ್ಸಿಗೆ ಹೆಸರುವಾಸಿಯಾಗಿದ್ದರು.ಹೂವಿಗಾಗಲಿ, ಹಾಲಿಗಾಗಲಿ ಹೆಚ್ಚಿನ ಹಣ ಹೇಳಿ ಹಳ್ಳಿಗರಿಗೆ ಹೊರೆಯಾಗದಂತೆ ಹೃದಯವಂತಿಕೆ ಹರಿಸುತ್ತಿದ್ದರು.ಹನುಮಪ್ಪ,ಹೂವಮ್ಮರ ಹಟ್ಟಿ ಹಳ್ಳಿಯವರೆಲ್ಲಾ ಹಾಡಿ ಹೊಗಳುವಂತಿತ್ತು. ಹಾಗೆಂದೇ ಹಳ್ಳಿಯವರಿಗೆಲ್ಲ ಹತ್ತಿರವಾಗಿದ್ದರು.

(ಯಾವುದಾದರೊಂದು ಆಕ್ಷರದ ಗುಣಿತಾಕ್ಷರಗಳನ್ನುಪಯೋಗಿಸಿ ನೀವೂ ಕತೆ,ಕವನ,ಲೇಖನವನ್ನು ಬರೆಯಲು ಪ್ರಯತ್ನಿಸಬಾರದೇಕೆ?)