ವಿದೇಶ ವಿಹಾರ - 2 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಇದು ಪಾರ್ಕಿಂಗ್ ಟಿಕೆಟ್ ಮಿಶನ್.ಆಸ್ಟ್ರೇಲಿಯಾದ ಎಲ್ಲಾ ರಸ್ತೆಗಳ ಫುಟ್ಪಾತಿನಲ್ಲಿ ಅಲ್ಲಲ್ಲಿ ಕಾಣಬರುತ್ತದೆ.ಇಲ್ಲಿ ನಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲು ಗಂಟೆಗೆ ಇಂತಿಷ್ಟು ಎಂದು ಹಣ ತೆಗೆದುಕೊಳ್ಳುವ ವ್ಯವಸ್ಥೆ ಇದೆ.ನಾವು ಈ ಸ್ಥಳದಲ್ಲಿ ಎಷ್ಟು ಸಮಯ ನಿಲ್ಲಿಸಬೇಕಾಗಬಹುದೊ ಅಷ್ಟು ಸಮಯಕ್ಕೆ ಅನುಗುಣವಾಗಿ  ಡಾಲರನ್ನು ಈ ಮಿಶನ್ನಿನಲ್ಲಿ ಹಾಕಿದರೆ ನಮಗೆ ವಾಹನ ನಿಲ್ಲಿಸಲು ಬೇಕಾದ ಸಮಯಕ್ಕೆ ಅನುಮತಿಸುವ ಒಂದು ಚಿಕ್ಕ ಕಾರ್ಡ್ ಬರುತ್ತದೆ. ಈ ಕಾರ್ಡನ್ನು ನಮ್ಮ ಕಾರಿನ ಒಳಗೆ ಗ್ಲಾಸಿನ ಮೂಲಕ ಕಾಣುವಂತೆ ಇಟ್ಟು ನಮ್ಮ ಕೆಲಸಗಳಿಗೆ ಹೋಗಬಹುದು.ಸಿಟಿ ಕೌನ್ಸಿಲ್ ನ ಟಿಕೆಟ್ ಮ್ಯಾನ್ ಚೆಕ್ಕಿಂಗಿಗೆ ಬಂದರೆ ಕಾರಿನೊಳಗೆ ಕಾಣುವ ಕಾರ್ಡನ್ನು ನೋಡುತ್ತಾರೆ.ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್ಡನ್ನು ಪಡೆಯುತ್ತಾರೆ.ಇದು ಮೆಚ್ಚತಕ್ಕ ವಿಷಯ. ನಮ್ಮ ದೇಶದಲ್ಲೂ ಈ ವ್ಯವಸ್ಥೆ ಬಂದರೆ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಸ್ವಲ್ಪ ಕಡಿವಾಣ ಬೀಳಬಹುದೇನೋ...?


ತನ್ನ ಪುಟ್ಟ ಕೈಯಿಂದ ಕಾಂಗರೂ ಮೈ ಸವರಲು ಹೊರಟ ಮುದ್ದು ಆಸ್ಟ್ರೇಲಿಯನ್ ಬೇಬಿ.ನಾವು ಫೋಟೊ ತೆಗೆಯುತ್ತಿರುವುದನ್ನು ನೋಡಿ ಬಾಲೆ ಗಲಿಬಿಲಿಯಾದ ಹಾಗಿದೆ. ಅಲ್ಲಿನ ಮಕ್ಕಳನ್ನು ಕಂಡರೆ ಮತ್ತೆ ಮತ್ತೆ ನೋಡುತ್ತಿರಬೇಕು ಎನಿಸುತ್ತದೆ.


ಗತ್ತಿನಲ್ಲಿ ನಿಂತು ತನ್ನ ವಾಹನಕ್ಕೆ ಪೆಟ್ರೋಲನ್ನು ತುಂಬಿಸಿಕೊಳ್ಳುತ್ತಿರುವ ಲೇಡಿ ಪೋಲಿಸ್.


’ಬಿಲ್ಲಬ್ಯಾಂಗೊ ಸ್ಯಾಂಚುರಿ’ಯಲ್ಲಿ ಕಂಡು ಬಂದ ಚಿಕ್ಕ ಬಿದಿರು ಮೆಳೆ.ನಮ್ಮ ಮಲೆನಾಡಿನಲ್ಲಿರುವಂತೆ ದೊಡ್ಡ ಬಿದಿರು ಮೆಳೆಗಳಲ್ಲ.ಆದರೆ ಅಲ್ಲೂ ಬಿದಿರುಂಟು.

ಇದೇನು ಹೇಳಿ ನೋಡೋಣ...... ? ಸರಿಯಾಗಿದೆ ನಿಮ್ಮ ಊಹೆ....ಇದು ಕೆಸವಿನಸೊಪ್ಪಿರಬಹುದು... ಆ ದೇಶದಲ್ಲಿ ಇದನ್ನು ಕಂಡು ಅಚ್ಚರಿಪಟ್ಟೆ!.....ಕ್ಯಾಮರಾದಲ್ಲಿ ಸೆರೆಹಿಡಿದೆ.

ನಾನು ಚಿಕ್ಕವರಿದ್ದಾಗ ನಮ್ಮ ದೇಶದಲ್ಲಿ ಮರದ ಲೈಟು ಕಂಬಗಳನ್ನು ನೋಡಿದ್ದೆನು. ಆದರೆ ಇತ್ತೀಚೆಗೆ ಇವುಗಳನ್ನು ಕಂಡಿಲ್ಲ. ಆಸ್ಟ್ರೇಲಿಯಾದಲ್ಲಿ ಮರದ ಲೈಟು ಕಂಬಗಳು ನನ್ನನ್ನು ಆಶ್ಚರ್ಯ ಚಕಿತಳನ್ನಾಗಿಸಿತು.ಅಲ್ಲಿನ ಕಾಡುಗಳಲ್ಲಿ ರೆಂಬೆ-ಕೊಂಬೆಗಳಿಲ್ಲದೆ ನೇರವಾಗಿ ,ಎತ್ತರಕ್ಕೆ ಬೆಳೆಯುವ   ಮರಗಳು ಹೆಚ್ಚು. ಹಾಗಾಗಿ ಅವುಗಳ ಉಪಯೋಗವನ್ನು ಮಾಡಿಕೊಳ್ಳುತ್ತಾರ‍ೆ.


ಕ್ವೀನ್ಸ್ ಲ್ಯಾಂಡ್ ನಲ್ಲಿ ಹೋದೆಡೆಯಲ್ಲೆಲ್ಲಾ ನನಗೆ ಸುಂದರ ಆಕಾಶವನ್ನು ಗಮನಿಸಿ ಆಸ್ವಾದಿಸುವುದೇ ಪ್ರಿಯವಾಗಿತ್ತು.ದಟ್ಟ ನೀಲಿ ಬಣ್ಣದ ಆಗಸ, ಅಚ್ಚಬಿಳಿ ಬಣ್ಣದ ಮೋಡಗಳು ನನ್ನ ಮನಸೆಳೆಯುತ್ತಿದ್ದವು.ಹತ್ತಿರವೇ ಸಾಗರವಿರುವುದರಿಂದ ಇಷ್ಟು ನೀಲಿಯೋ, ಮೋಡಗಳ ಶುಭ್ರತೆ ಇದಕ್ಕೆ ಕಾರಣವೋ ಅಥವಾ ಅಲ್ಲಿ ಓಝೋನ್ ಪದರವು ತೂತಾಗಿರುವುದು ಕಾರಣವೋ ನನಗೆ ತಿಳಿದಿಲ್ಲ.ಇದನ್ನು ತಿಳಿದವರು ಹೇಳಬೇಕು.


ತನ್ನ ಕಂಪನಿಯ ವಸ್ತುಗಳ ಜಾಹೀರಾತಿಗಾಗಿ ಮನೆಮನೆಗೆ ಪಾಂಪ್ಲೆಟ್ ಹಂಚುತ್ತಿರುವ ಯುವತಿ.

ವಿದೇಶ ವಿಹಾರ-1---ಗೃಹ ಪ್ರವೇಶ ಸಮಾರಂಭ


ಆಸ್ಟ್ರೇಲಿಯಾ ದೇಶದ ಕ್ವೀನ್ಸ್ ಲ್ಯಾಂಡ್  ರಾಜ್ಯದ ಟೌನ್ಸ್ವಿಲ್ ನಲ್ಲಿ ನಮ್ಮ ಅಳಿಯ-ಮಗಳು ಮನೆ ಕಟ್ಟಿಸಿದ್ದಾರೆ. ನೂತನ ಮನೆ ’ಮಿಲನ’ ದ ಗೃಹಪ್ರವೇಶಕ್ಕೆಂದು ನಮ್ಮೆಲ್ಲರನ್ನು  (ನಾನು,ನನ್ನವರು ಮತ್ತು ನಮ್ಮ ಅಳಿಯನ ತಂದೆ-ತಾಯಿ,ತಂಗಿ-ತಮ್ಮ) ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದರು. ಹಾಗಾಗಿ ನಾವೆಲ್ಲರೂ ಒಟ್ಟಿಗೆ ವಿದೇಶ ಪ್ರವಾಸ ಮಾಡುವ ಯೋಗ ಕೂಡಿಬಂದಿತ್ತು.ಇದು ನಮ್ಮ ಮೊದಲ ವಿದೇಶಯಾತ್ರೆ. ಆಗಸ್ಟ್ ೨೦೧೧ ರಲ್ಲಿ ಮಗಳ ಮನೆಯಲ್ಲಿ ಕಳೆದ ಆ ದಿನಗಳು ನನ್ನ ಬದುಕಿನ ಅವಿಸ್ಮರಣೀಯ ಗಳಿಗೆಗಳು.  ಅ ಸವಿ ನೆನಪಿನ ಗುಂಗಿನಲ್ಲಿ ನಾನು ಈ ಲೇಖನಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಒಂದು ತಿಂಗಳ ವಿದೇಶದಲ್ಲಿನ ನನ್ನ ಅನುಭವಗಳನ್ನು ನನ್ನದೇ ಆದ ಮಾತುಗಳಲ್ಲಿ ನನ್ನ ಬ್ಲಾಗಿನಲ್ಲಿ ದಾಖಲಿಸುವುದು ನನಗೆ ಅತ್ಯಾನಂದವೇ ಸರಿ.

ಪರದೇಶಕ್ಕೆ ಮೊದಲು ಹೋದಾಗ  ನಮ್ಮ ದೇಶದಲ್ಲಿ ಸಿಗುವ ಯಾವ ವಸ್ತುಗಳು ಇಲ್ಲಿ ಸಿಗುತ್ತವೆ,ಅಲ್ಲಿನವರಿಗೂ ನಮಗೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳೇನು ಎಂಬುದನ್ನು ನಾವು ಹುಡುಕಲು ಶುರುಮಾಡಿಕೊಳ್ಳುತ್ತೇವೆ.ನಮ್ಮ ದೇಶದ ಜನ ಮತ್ತು ವಸ್ತುಗಳನ್ನು ಕಂಡರೆ ಅಭಿಮಾನ ಉಕ್ಕಿ ಹರಿಯುತ್ತದೆ.ಅಲ್ಲದೆ ಆ ದೇಶದ ಜನರ ನಡೆ-ನುಡಿಯ ಬಗ್ಗೆ ಅರಿಯಬೇಕೆಂಬ ಕುತೂಹಲ ಮೂಡುವುದೂ ಸಹಜವೇ.  ಇಲ್ಲಿ ಈ ವಿಷಯಗಳೇ ನನ್ನ ಲೇಖನದ ವಸ್ತುಗಳು.

ನಾವು ಟೌನ್ಸ್ವಿಲ್ ನ ನನ್ನ ಮಗಳ ಮನೆ ತಲುಪಿದ  ಮರುದಿನವೇ ಅಂದರೆ ಆಗಸ್ಟ್ ನಾಲ್ಕನೆ ತಾರೀಖು  ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು.ಹಾಗಾಗಿ ಅಲ್ಲಿಂದಲೇ ನನ್ನ ವಿದೇಶ ಯಾತ್ರೆಯ ಅನುಭವವನ್ನು ಆರಂಭಿಸುತ್ತೇನೆ.

ಟೌನ್ಸ್ವಿಲ್ ಏರ್ ಪೋರ್ಟಿನಿಂದ ಇಳಿದು ನನ್ನ ಮಗಳ ಮನೆಯನ್ನು ಪ್ರವೇಶಿಸುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಬಾಳೆಯ ಕಂದು ಮತ್ತು ಮಾವಿನಸೊಪ್ಪು.ಗೃಹಪ್ರವೇಶ ಸಮಾರಂಭಕ್ಕಾಗಿ ನಮ್ಮ ಅಳಿಯನ ಸ್ನೇಹಿತರ ತೋಟದಿಂದ ಅವುಗಳನ್ನು ತರಿಸಿಟ್ಟಿದ್ದರು.ದಾಸವಾಳದ ಹೂಗಳೂ ಸಮೃದ್ಧಿಯಾಗಿ ಸಿಕ್ಕಿದ್ದವು.ಶಿವನ ಪೂಜೆಗೆ ಶ್ರೇಷ್ಟವಾದ ರುದ್ರ ಗೊರಟೆ ಗಿಡವನ್ನು ನೋಡಿ ಬಿಲ್ವಪತ್ರೆಯನ್ನು ಕಂಡಂತೆ ಆನಂದವಾಯಿತು.

ಇವುಗಳನ್ನು ನೋಡಿ ನಮ್ಮ ದೇಶದಲ್ಲೇ ಇದ್ದೇವೇನೋ ಎನ್ನುವ ಭಾವ ಒಂದು ಕ್ಷಣ ಬಂದು ಹೋಯಿತು....


ಗೃಹಪ್ರವೇಶದ ಹೋಮಕ್ಕೆಂದು ಸಿಡ್ನಿಯಿಂದ ಭಟ್ಟರನ್ನು ಕರೆಸಿದ್ದರು.ಅವರ ಹೆಸರು ಶ್ರೀ ಹೃಷಿಕೇಶ್ ಭಟ್. ಅವರು ಮೂಲತಃ ದಕ್ಷಿಣ ಭಾರತದ ತಿರುಪತಿಯವರು.ಇಪ್ಪತ್ತು ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳೇ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ.ಅಲ್ಲಿ ನೆಲೆಸಿರುವ ಭಾರತೀಯರ ಮನೆಗಳಲ್ಲಿ ಸತ್ಯನಾರ‍ಾಯಣ ಪೂಜೆ,ಶುಭ ಸಮಾರಂಭಗಳಲ್ಲಿ ಹೋಮ ಹವನಗಳನ್ನು ಮಾಡಿಕೊಡುತ್ತಾರೆ.

ಹೃಷಿಕೇಶ್ ಭಟ್ ರವರ ನೇತೃತ್ವದಲ್ಲಿ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ವಿನಾಯಕನ ಪೂಜೆ ಮೊದಲುಗೊಂಡು ಕಲಶ ಪೂಜೆ,ವಾಸ್ತು ,ನವಗ್ರಹ ಮತ್ತು ಮೃತ್ಯುಂಜಯ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು.ಹೋಮವನ್ನು  ಮಾಡಿಸುವ ಉದ್ದೇಶವನ್ನು ಈಗಿನ ಮಕ್ಕಳಿಗೆ ಅರ್ಥವಾಗುವಂತೆ ಅಂದರೆ ಕಂಪ್ಯೂಟರ್ ಹಾರ್ಡ್ವೇರ್, ಸಾಫ್ಟ್ ವೇರ್ ಗಳ ಉದಾಹರಣೆಯೊಂದಿಗೆ ಪುರೋಹಿತರು ಚೆನ್ನಾಗಿ ವಿವರಿಸಿದರು.ಮಗಳು-ಅಳಿಯ ಇಬ್ಬರೂ ಭಟ್ಟರೊಂದಿಗೆ ಕುಳಿತು ಹೋಮವನ್ನು ಸಾಂಗವಾಗಿ ನೆರವೇರಿಸಿದರು.

ಅಗ್ನಿದೇವ ಸುಪ್ರೀತನಾದನು. ಮನೆಯೆಲ್ಲಾ ಹೋಮದ ಸುಗಂಧದಿಂದ ತುಂಬಿತು.ಅಂತೆಯೇ ನಮ್ಮ ಮನದಲ್ಲಿ ಹರುಷವೂ ತುಂಬಿ ಬಂತು.

ವಿದೇಶದಲ್ಲಿ ಅದರಲ್ಲೂ ಆಸ್ಟೇಲಿಯಾದಲ್ಲಿ ಹೋಮಕುಂಡವನ್ನು ಕಂಡು ನಮಗೆಲ್ಲಾ ಆಶ್ಚರ್ಯವಾಯಿತು. ಅಲ್ಲಿನ ಭಾರತೀಯರೊಬ್ಬರು ಹೋಮಕುಂಡವನ್ನು ಇಟ್ಟುಕೊಂಡಿದ್ದು, ಸಮಯಕ್ಕೆ ನಮಗೆ ಸಿಕ್ಕಿದ್ದು ತುಂಬಾ ಅನುಕೂಲವಾಯಿತು.ದಂಪತಿಗಳಿಂದ ಹೊಸ ಮನೆಯ ಬಾಗಿಲ ಪೂಜೆಯನ್ನೂ ಮಾಡಿಸಿದರು.

ಅತ್ತ ಹೋಮ ನಡೆಯುತ್ತಿರುವಾಗ ಮನೆಯವರು ಮತ್ತು ಅಗಮಿಸಿದ್ದ ಭಾರತೀಯ ಮಿತ್ರರೆಲ್ಲಾ ಸೇರಿ ಗ್ಯಾಸ್ ಸ್ಟವ್ ಪೂಜೆ ಮಾಡಿ ಹಾಲು ಉಕ್ಕಿಸಿ ನೂತನ ಮನೆಯಲ್ಲಿ ಸುಖ,ಶಾಂತಿ,ಸಮೃದ್ಧಿಯನ್ನು ತಾರೆಂದು ಬೇಡಿಕೊಂಡೆವು.


ಕುಂಬಳಕಾಯಿಯನ್ನು(ಸಮಯಕ್ಕೆ ಸರಿಯಾಗಿ ಬೂದುಗುಂಬಳ ಸಿಗಲಿಲ್ಲ ಅಷ್ಟೆ)  ಒಡೆದು ದೃಷ್ಟಿ ತೆಗೆದದ್ದೂ ಆಯಿತು.

ಬಂದವರಿಗೆಲ್ಲಾ ಭಟ್ಟರ ಆಶೀರ್ವಾದದೊಂದಿಗೆ ಪ್ರಸಾದ ವಿನಿಯೋಗವಾಯಿತು.ನಮ್ಮೂರಿನ ಕಾಯಿಹೋಳಿಗೆಯೊಡನೆ ಅಲ್ಲಿ ತಯಾರಿಸಿದ ರುಚಿಯಾದ ಪರೋಟ,ಮೋದಕ, ಪಾಯಸದ ಮಿನಿ ಔತಣವಾಯಿತು.  


ದೂರದ ದೇಶದಲ್ಲಿ ಗೃಹಪ್ರವೇಶ ಹೇಗೆ ನಡೆಯುತ್ತದೋ ಎಂಬ ಅಳುಕಿತ್ತು.ದೇವರ ಅನುಗ್ರಹದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ವಿಧಿವತ್ತಾಗಿ ಕಾರ್ಯಕ್ರಮ ನೆಡೆದದ್ದು ಸಮಾಧಾನವಾಯಿತು.ಪರಸ್ಥಳದಲ್ಲಿ ಮನೆ ಕಟ್ಟಲು ಮತ್ತು ನಮ್ಮ ಸಂಪ್ರದಾಯದಂತೆ ಗೃಹಪ್ರವೇಶ ಮಾಡಬೇಕೆಂದು ನಮ್ಮ ಅಳಿಯ-ಮಗಳು ಇಬ್ಬರೂ ತುಂಬಾ ಕಷ್ಟಪಟ್ಟಿದ್ದರು.ಅವರ ಶ್ರಮ ಇಂದು ಸಾರ್ಥಕವಾಯಿತು.ಅವರಿಬ್ಬರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ.

ಜಾಗತೀಕರಣದ ಪ್ರಭಾವದಿಂದಾಗಿ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಭಾರತೀಯರು ವಾಸವಾಗಿದ್ದಾರೆ. ಪರದೇಶದಲ್ಲೂ ನಮ್ಮ ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ನಾವು ಉಳಿಸಿಕೊಳ್ಳಲು ಬೇಕಾದ ಸಾಕಷ್ಟು ವ್ಯವಸ್ಥೆಯೂ ಈಗ ಎಲ್ಲೆಡೆಯೂ ಇದೆ.ಇದನ್ನು ಹುಡುಕಿಕೊಂಡು ಹೋಗುವ ತಾಳ್ಮೆ,ಮನೋಬಲ ನಮ್ಮಲ್ಲಿರಬೇಕು. ಅಲ್ಲದೆ ಅಲ್ಲಿರುವ ಭಾರತೀಯರೆಲ್ಲ ಬೆರೆತು ಬಾಳಬೇಕು ಅಷ್ಟೆ. ಟೌನ್ಸ್ವಿಲ್ ನಲ್ಲಿ ನೆಲೆಸಿರುವ ಭಾರತೀಯರಲ್ಲಿ ನಾನಿದನ್ನು ಕಂಡು ಸಂತಸಪಟ್ಟೆ.

ಕಾಮನ ಬಿಲ್ಲು                ಚಿಣ್ಣರಿಗೆಲ್ಲಾ ಮಕ್ಕಳ ದಿನಾಚರಣೆಯ ಶುಭಾಶಯಗಳು
ಭೂಮಿಗೂ ಬಾನಿಗೂ ಸೇತುವೆಯಾಗಿ
ನಯನ ಮನೋಹರ ಚಿತ್ರವದಾಗಿ
ಬಾನಂಚಲಿ ಮೂಡಿದೆ ಮಳೆಬಿಲ್ಲು
ಗೆಳೆಯರ ಕರೆಯುವೆ ನೀ ನಿಲ್ಲು....

ಬರಿ ಬಿಸಿಲಾದರೆ ನೀ ಇರಲಾರೆ
ಬರಿ ಮಳೆ ಸುರಿಯೇ ನೀ ಬರಲಾರೆ
ಮೂಡಿದ ಕೆಲವೇ ಕ್ಷಣದಲಿ ಮುಳುಗುವೆ
ಸೃಷ್ಠಿಯ ವಿಸ್ಮಯ ನೀನಾಗಿರುವೆ

ಊದಾ ಕೆಂಪು ಬಣ್ಣದ ನಡುವೆ
ಹರಡಿದೆ ಬಗೆಬಗೆ ರಂಗುಗಳು
ಸೂರ್ಯನ ರಶ್ಮಿ ಮಳೆ ಹನಿ ಮೈತ್ರಿಗೆ
ದೇವರು ನೀಡಿದ ಬಳುವಳಿಯು

ಬಣ್ಣಗಳೇಳು ಒಡಲೊಳಗಿದ್ದರೂ
ಕಿರಣದೆ ಕಾಣುವುದೊಂದೆ ಬಿಳಿ
ಬಾಗುವುದರಲ್ಲೂ ಬದುಕಿದೆ ಸೊಗಸು
ಎನ್ನುವ ತತ್ವವ ಇನ್ನು ಕಲಿ

ಜೀವನವೆಂಬೀ ಬಾಂದಳದಲ್ಲಿ
ಜ್ಞಾನದ ಕಿರಣವು ಬೆಳಗಿಹುದು
ಅದರಾ ಸೊಬಗಿನ ಕಾಣ್ಕೆಗೆ ಬೇಕು
ಪರಿಶ್ರಮವೆಂಬ ಸಿಂಚನವು.

(ಚಿತ್ರಕೃಪೆ - ಅಂತರ್ಜಾಲ)

ಗಿಣಿರಾಮ!..... ಪಂಚರಂಗಿರಾಮ.... !

ಒಂದು ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ನಿಧಾನವಾಗಿ ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ.


ಆದರೆ ನಾ ಕಂಡ ದೃಶ್ಯ ನನಗೆ ಸಂತಸ ನೀಡಿತು.ಕೂಡಲೇ ಒಳಗೆ ಬಂದು ನನ್ನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ಆ ಕ್ಷಣಗಳನ್ನು ಸೆರೆಹಿಡಿದೆ. ಅಂದದ ಅರಗಿಳಿಯೊಂದು ಹಾರಿ ಬಂದು ನಮ್ಮ ಮನೆಯ ಕಾಂಪೌಂಡ್ ಮೇಲೆ ಕುಳಿತಿತ್ತು.


ನಾನು ಹತ್ತಿರದಿಂದ ಒಂದೆರಡು ಫೋಟೋ ತೆಗೆದಾಗಲೂ ಅದು ಹಾರಿಹೋಗದಿದ್ದಾಗ ಆ ಪುಟ್ಟಮರಿಗೆ ಹಾರಲು ಶಕ್ತಿ ಕಡಿಮೆ ಇರಬಹುದು ಎಂದು ಮರುಗುತ್ತಾ,ಹಣ್ಣು ತಿನ್ನಿಸಿ ನೋಡೋಣವೆಂದು ತಿನ್ನಿಸಿದರೆ ಒಂದೇ ನಿಮಿಷದಲ್ಲಿ ಹಣ್ಣನ್ನು ಪೂರ್ತಿಯಾಗಿ ತಿಂದಿತು. ಈ ಹೊತ್ತಿಗಾಗಲೇ ನಮ್ಮ ಅಕ್ಕಪಕ್ಕದ ಮನೆಯವರು, ಮಕ್ಕಳು ಸೇರಿ ಕುತೂಹಲ, ಸಂತೋಷದಿಂದ ಕಲರವ ಮಾಡಿದ್ದರಿಂದ ಪುಟ್ಟ ಗಿಣಿ ತಬ್ಬಿಬ್ಬುಗೊಂಡಿತು.ಹಾರಲಾರದೆ ಅಸಹಾಯಕವಾದ ಆ ಮರಿಯನ್ನು ಚಿಕ್ಕ ಪಂಜರದಲ್ಲಿಟ್ಟು ಹಣ್ಣು, ಮೆಣಸಿನಕಾಯಿ,ಕಾಳುಗಳನ್ನು ಹಾಕಿದೆವು.


ಒಂದೆರಡು ಗಂಟೆಯಲ್ಲಿ ಚೇತರಿಸಿಕೊಂಡ ಮರಿಯನ್ನು ಹೊರ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಪುರ್ರನೆ ಹಾರಿ ಎತ್ತರದ ಮರವನ್ನೇರಿ ಕೀ...ಕೀ....ಎನ್ನುತ್ತಾ ತನ್ನ ಬಳಗವನ್ನು ಸೇರಿಕೊಂಡಿತು. ಆ ಗಿಳಿಮರಿ ನಮ್ಮೊಡನೆ ಇದ್ದಷ್ಟು ಸಮಯ ನಮ್ಮ ಮನಸ್ಸಿಗೆ ಮುದ ನೀಡಿ ರಜೆಯ ಸವಿಯನ್ನು ಹೆಚ್ಚಿಸಿತು.ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !