ಅಳಿಲು ಸೇವೆ.. ಮಳಲ ಭಕ್ತಿ...!


          ಸೀತೆಯನ್ನು ಕದ್ದೊಯ್ದ ರಾವಣನ ಮೇಲೆ ಯುದ್ಧ ಅನಿವಾರ್ಯವಾದ ಸಂದರ್ಭ. ಆಗ ರಾಮ ಕಪಿಸೇನೆಯ ಸಹಾಯದಿಂದ ಲಂಕೆಗೆ ಸೇತುವೆ ನಿರ್ಮಿಸುವ ಕಾರ್ಯ ಕೈಗೊಳ್ಳುತ್ತಾನೆ. ವಾನರರೆಲ್ಲರೂ ಈ ಕಾರ್ಯವನ್ನು ಭಗವಂತನ ಸೇವೆಯೆಂದು ,ರಾಮನಾಮವನ್ನು ಜಪಿಸುತ್ತಾ, ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತು ತಂದು ಸೇತುವೆ ನಿರ್ಮಿಸಲು ತೊಡಗುತ್ತಾರೆ. ಆಗ  ಚಿಕ್ಕ ಅಳಿಲೊಂದು ಈ ಮಹತ್ತರ ಕಾರ್ಯದಲ್ಲಿ ತಾನೂ ಕೈ ಜೋಡಿಸಬೇಕೆಂದು ಬಯಸಿ, ಸೇತುವೆ ನಿರ್ಮಾಣಕ್ಕೆ ಬೇಕಾದ ಮರಳನ್ನು ಒಟ್ಟುಗೂಡಿಸಿ ಅರ್ಪಿಸಿತಂತೆ. ಸಮುದ್ರದ ನೀರಿನಲ್ಲಿ ಮುಳುಗಿ, ತನ್ನ ಒದ್ದೆ ಮೈಯನ್ನು ಮರಳಿನಲ್ಲಿ ಹೊರಳಿಸಿ ,ತನ್ನ ಮೈಗಂಟಿದ ಮರಳನ್ನು ಸೇತುವೆ ನಿರ್ಮಾಣಕ್ಕೆ ಶೇಖರಿಸಿತಂತೆ. ಆ ಪುಟ್ಟ ಅಳಿಲಿನ ಈ ಕೆಲಸವನ್ನು ಕಂಡ ರಾಮ ಸಂತಸದಿಂದ ಅದರ ಮೈದಡವಿ ಆಶೀರ್ವದಿಸಿದನಂತೆ. ರಾಮನ ಆಶೀರ್ವಾದದ ಕುರುಹಾಗಿ ಅದರ ಬೆನ್ನಿನ ಮೇಲೆ ಈಗಲೂ ಮೂರು ಗೆರೆಗಳಿವೆ ಎಂಬುದು ಪ್ರತೀತಿ. ಇದರಿಂದ "ಅಳಿಲು ಸೇವೆ" ಎಂಬ ಉಕ್ತಿ ಚಾಲ್ತಿಯಾಯಿತು.

ಯಾವುದಾದರು ಮಹತ್ತರವಾದ, ಪುಣ್ಯದ ಕೆಲಸದಲ್ಲಿ - ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ನಮ್ಮ ಕೈಲಾದ ಸಹಾಯಮಾಡುವ ಮನಸ್ಥಿತಿಯನ್ನು  ’ಅಳಿಲು ಸೇವೆ’ ಎಂದು ಕರೆಯಲಾಯಿತು.

ಅಳಿಲು ತನ್ನ ಪುಟ್ಟ ದೇಹದಿಂದ ಅದೆಷ್ಟು ಮರಳನ್ನು ಸಂಗ್ರಹಿಸಿರಲು ಸಾಧ್ಯ. ವಿಸ್ತಾರವಾದ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಬೊಗಸೆಯಷ್ಟು ಮರಳಿಗೆ  ಮಹತ್ವವೆನ್ನಿಸುವುದಿಲ್ಲ.ಆದರೆ ಇಲ್ಲಿ ಅಳಿಲು ಶೇಖರಿಸಿದ ಮರಳಿನ ಪ್ರಮಾಣ ಮುಖ್ಯವಾಗುವುದೇ ಇಲ್ಲ. ಮಹತ್ತರವಾದ ಕಾರ್ಯದಲ್ಲಿ ತನಗಾದ ಸೇವೆಯನ್ನೋ, ಸಹಾಯವನ್ನೋ ಮಾಡಬೇಕೆಂಬ ಮನಸ್ಥಿತಿಯೇ ಹೆಚ್ಚುಗಾರಿಕೆಯಾಗಿ ನಿಲ್ಲುತ್ತದೆ. ವೀರಾಧಿವೀರ ಕಪಿ ಸೈನ್ಯದ ಮುಂದೆ ತಾನೇನು ಮಾಡಬಲ್ಲೆ ಎಂದು ಅಳಿಲು ಅಂದು ಯೋಚಿಸಿದ್ದರೆ ಆ ಭಗವಂತನ ಪ್ರೀತಿಯನ್ನು ಪಡೆಯಲಾಗುತ್ತಿತ್ತೇ?  

ಯಾವುದೇ ಒಳ್ಳೆಯ ಕಾರ್ಯದಲ್ಲಿ ಭಾಗಿಯಾಗುವ ಮನೋಭಾವವನ್ನು ರೂಢಿಸಿಕೊಳ್ಳಲು ಪುಟ್ಟ ಅಳಿಲು ನಮಗೆ ಮಾದರಿ.ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಸಂಕೋಚವನ್ನು ದೂರವಿಡಬೇಕು. ಹಿಂಜರಿಕೆ ತೊರೆದು ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು. ಸೇವೆ ಎಂದರೆ ಸೇವೆ, ಸಹಾಯವೆಂದರೆ ಸಹಾಯ ಅಷ್ಟೆ. ಅದರಲ್ಲಿ ಚಿಕ್ಕದು ದೊಡ್ಡದೆಂಬ ಭೇದವಿಲ್ಲ. ಹನಿ-ಹನಿ ಸೇರಿದರೆ ತಾನೇ ಹಳ್ಳವಾಗುವುದು. 

ಚಿಕ್ಕ ಅಳಿಲಿನ ಬಗ್ಗೆ ಇನ್ನೊಂದು ವಿಷಯವಿದೆ.ಅಳಿಲುಗಳು ತಮಗೆ ತಿಳಿದೋ, ತಿಳಿಯದೆಯೋ ಇನ್ನೊಂದು ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಳಿಲುಗಳು ತಮಗೆ ಮುಂದೆ ಉಪಯೋಗಕ್ಕೆ ಬರಬಹುದೆಂದೋ ಏನೋ ಭೂಮಿಯಲ್ಲಿ ಅಡಗಿಸಿಟ್ಟ ಎಷ್ಟೋ ಬೀಜಗಳು ಮೊಳೆತು, ಹೆಮ್ಮರವಾಗಿ ಬೆಳೆಯಲು ಸಹಾಯಕವಾಗಿದೆ. ಇಂತಹ ಚಿಕ್ಕ ಪ್ರಾಣಿ ಇಷ್ಟೆಲ್ಲಾ ಪರೋಪಕಾರಿಯಾಗಿರುವಾಗ ಮಾನವರಾದ ನಾವೇಕೆ ಹಿಂದೆ ಬೀಳಬೇಕು. ಸಂಕೋಚ ಬಿಡಿ, ಈಗಿನಿಂದಲೇ ನಮ್ಮ "ಅಳಿಲು ಸೇವೆ"ಯನ್ನು ಪ್ರಾರಂಭಿಸೋಣ ಬನ್ನಿ.    

(ಚಿತ್ರಕೃಪೆ - ಅಂತರ್ಜಾಲ)