ಆಸ್ಟ್ರೇಲಿಯಾ ದೇಶ ಸರೀಸೃಪಗಳ ನಾಡು.ವಿಶ್ವದಾದ್ಯಂತ ವಾಸವಾಗಿರುವ ಸರೀಸೃಪಗಳ ಸುಮಾರು ೮೬೦ ಪ್ರಭೇಧಗಳು ಇಲ್ಲಿನ ಮೂಲದವುಗಳಂತೆ.ಇವು ಮಾನವನಿಗೆ ತುಂಬಾ ಅಪಾಯಕಾರಿಯಾದವುಗಳು.ಪ್ರಪಂಚದ ಅತಿ ದೊಡ್ಡ ಸರೀಸೃಪ "ಸಾಲ್ಟ್ ವಾಟರ್ ಕ್ರೊಕೊಡೈಲ್" ಕೂಡ ಆಸ್ಟೇಲಿಯಾ ಮೂಲದ್ದು.
ಇಲ್ಲಿನ ಕಾಡುಗಳಲ್ಲಿ ದೊಡ್ಡ ದೊಡ್ಡ ಪ್ರಾಣಿಗಳಾದ ಆನೆ,ಸಿಂಹ,ಹುಲಿ,ಚಿರತೆಗಳನ್ನು ಕಾಣಲು ಸಾಧ್ಯವಿಲ್ಲ.ಇಲ್ಲಿನ ಹವಾಮಾನಕ್ಕನುಗುಣವಾಗಿ ಮೊಸಳೆ, ವಿವಿಧ ಜಾತಿಯ ಹಾವುಗಳು ಮತ್ತು ದೊಡ್ಡ ಹಲ್ಲಿಯ ಜಾತಿಗೆ ಸೇರಿದ ಅನೇಕ ರೀತಿಯ ಸರೀಸೃಪಗಳು,ಆಮೆಗಳು ಇಲ್ಲಿ ಕಾಣಸಿಗುತ್ತವೆ.ಹಿಂದೆಲ್ಲ ಅಂದರೆ ಮೊದಲಿಗೆ ಯುರೋಪಿಯನ್ನರು ಈ ಖಂಡಕ್ಕೆ ಬಂದಾಗ ಇಲ್ಲಿ ಹಾವುಗಳು ಮತ್ತು ಅನೇಕ ರೀತಿಯ ವಿಷಜಂತುಗಳು ಹೆಚ್ಚಾಗಿದ್ದುದರಿಂದ ಅವುಗಳಿಂದ ರಕ್ಷಣೆಗಾಗಿ ಮನೆಗಳನ್ನು ಎತ್ತರದಲ್ಲಿ ಕಟ್ಟಿಕೊಳ್ಳುತ್ತಿದ್ದರು.
ಮೊಸಳೆ ಜಾತಿಯ ಒಂದು ಪ್ರಾಣಿಯನ್ನು ತನಗೆ ಹಿಡಿದುಕೊಳ್ಳಲು ಕೊಡಲಿಲ್ಲವೆಂದು ಆಸ್ಟ್ರೇಲಿಯಾದ ಚಿಕ್ಕ ಬಾಲಕನೊಬ್ಬ ಅತ್ತು ರಂಪಾಟ ಮಾಡಿದ್ದನ್ನು ನಾನೆಂದೂ ಮರೆಯಲಾರೆ.ಭಾರವಾಗಿರುವ ಈ ಪ್ರಾಣಿಯನ್ನು ಚಿಕ್ಕ ಮಕ್ಕಳು ಎತ್ತಿ ಹಿಡಿಯುವುದು ಬಲು ಕಷ್ಟ. ತಾಯಿ ಮತ್ತು ಅಲ್ಲಿನ ಪ್ರಾಣಿಸಂರಕ್ಷಕರು ಅವನಿಗೆ ಅದನ್ನು ಎತ್ತಿಕೊಳ್ಳಲು ಕೊಟ್ಟ ನಂತರವೇ ಆ ಹುಡುಗ ಸಮಾಧಾನವಾಗಿದ್ದು..!!!
ಆಸ್ಟ್ರೇಲಿಯನ್ನರು ಹಲ್ಲಿ ಜಾತಿಯ ಸರೀಸೃಪಗಳ ಆಕೃತಿಗಳನ್ನು ಮನೆಯ ಗೋಡೆಯಲ್ಲಿ ಹಾಕುವುದನ್ನು ಶುಭಕರವೆಂದು ತಿಳಿಯುತ್ತಾರೆ.ಹಾಗಾಗಿ ಸಮಾರಂಭಗಳಲ್ಲಿ ವಿಧ ವಿಧವಾದ ಸರೀಸೃಪಗಳ ಆಕೃತಿಯನ್ನು ಉಡುಗೊರೆಯಾಗಿ ನೀಡುವುದೂ ಉಂಟು.