ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಹಚ್ಚೋಣ ಹಣತೆ


ಬೆಲ್ಲದಂತಹ ಬದುಕು | ಬಲ್ಲಿದರ ಒಡನಾಟ |
ಎಲ್ಲ ಭಾಗ್ಯವ ಕೊಟ್ಟ ಗಣಪಗೆ | ನಮಿಸುತ್ತ
ಎಲ್ಲರೂ ಬೆಳಗೋಣ ಹಣತೆಯೊಂದ |

ಪದವಿಡಲು ನೆಲೆಯಿತ್ತು | ವಿಧವಿಧದ ಬೆಳೆ ಕೊಟ್ಟು |
ಬದುಕಿಗಾಸರೆಯಾದ ತಾಯಿ | ಭೂದೇವಿಗೆ
ಮುದದಲಿ  ಬೆಳಗೋಣ ಹಣತೆಯೊಂದ |

ಹೆತ್ತ ತಾಯಿಯ ಸ್ಮರಿಸಿ | ಪಿತನ ಪಾದಕೆ ನಮಿಸಿ|
ಮತ್ತೆ  ತಿದ್ದಿದ ಗುರುವಿಗೆ | ವಂದಿಸುತ
ಕೂತಲ್ಲೇ ಹಚ್ಚೋಣ ಹಣತೆಯೊಂದ |

ಮಕ್ಕಳಿಗೆ ಹಾಲಿತ್ತು | ಒಕ್ಕಲಿಗೆ ಸಗಣಿಯಿಟ್ಟು|
ಮುಕ್ಕೋಟಿ ದೇವತೆಯ ನೆಲೆಯಾದ | ಗೋಮಾತೆಗೆ 
ಅಕ್ಕರೆಯಲಿ ಹಚ್ಚೋಣ ಹಣತೆಯೊಂದ |



#ಸರ್ವರಿಗೂ ದೀಪಾವಳಿಯ ಶುಭಾಶಯಗಳು. #

ಪ್ರಾರ್ಥನೆ


ಕರಗಳನು ಮುಗಿಯುವೆವು
ಶಿರಬಾಗಿ ನಮಿಸುವೆವು
ವಿದ್ಯಾಧಿದೇವತೆಯೆ ನೀನೊಲಿದು ಬಾರೆ||
ಜ್ಞಾನ ತುಂಗೆಯ ಹರಿಸಿ
ಸಂಗೀತ ಕಲೆ ಬೆಳೆಸಿ
ಕರುಣೆಯಿಂದಲಿ ಕಾಯೇ ಶಾರದಾಮಾತೆ ||
ಎಂದಿನಂತೆಯೆ ಇಂದೂ
“ಮಧುರವಾಣಿ”ಯ ಕುಸುಮ
ಚರಣದಲಿ ಅರ್ಪಿತವು
 ಹರಸು  ತಾಯೇ ||

ಸಂಕ್ರಾಂತಿ


ಸುಗ್ಗಿಕಾಲ ಸೊಗದಕಾಲ
ಅಡಿಯನಿಟ್ಟಿತು
ದವಸಧಾನ್ಯ ಕಾಳುಕಡ್ಡಿ
ಕಣಜ  ತುಂಬಿತು

ಸಸ್ಯದೊಡಲು ಹಸಿರು ತುಂಬಿ
ಕಾಂತಿ ನೀಡಿತು
ಸಗ್ಗದ ಸುಖ ಇಳೆಗೆ ಇಳಿದು
ಶಾಂತಿ ಮೂಡಿತು

ಮುದುಡಿ ಕುಳಿತ ಹಕ್ಕಿ ಸೊಕ್ಕಿ
ರೆಕ್ಕೆ ಬಿಚ್ಚಿತು
ಮಾಗಿ ಕಳೆದು ಮನುಜ ಬವಣೆ
ದೂರ ಸರಿಯಿತು

ಅಂಗಳದಲಿ ಚುಕ್ಕಿ ಚಿತ್ರ
ಚಿತ್ತ ಸೆಳೆಯಿತು
ಮನೆಮನೆಯಲಿ "ಎಳ್ಳು ಬೆಲ್ಲ"ದ
ಘಮಲು ಹರಡಿತು

ಚಳಿಯು ಕಳೆದು ಮಂಜು ಕರಗಿ
ಭ್ರಾಂತಿ ಅಳಿಯಿತು
ಸೂರ್ಯರಥದ ಪಥವು ತಿರುಗಿ
"ಸಂಕ್ರಾಂತಿ" ಮರಳಿತು
ಸಂಭ್ರಮವ ತಂದಿತು


ಹೊಸ ವರುಷ ಹೊಸ ಹರುಷ......!!

ಸರ್ವರಿಗೂ ಶ್ರೀಜಯ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು



ಪುಟ್ಟ ಪುಟ್ಟ ಮಕ್ಕಳಿಗೆ ಈ ಚಿಕ್ಕ ಪದ್ಯದೊಂದಿಗೆ ಹಬ್ಬದ ಶುಭ ಹಾರೈಕೆಗಳು

ಕೋಗಿಲೆ

ಮಾವಿನ ಮರದಲಿ
ಚಿಗುರನು ಕಂಡು
ಮಿತ್ರ ವಸಂತ
ಬರುತಿಹನೆಂದು

ಎಲ್ಲೋ ಅಡಗಿದ
ಕೋಗಿಲೆಯೊಂದು
ಕುಹೂ...ಕುಹೂ..
ಗಾನವಗೈದಿಹುದು

ಮಧುರಾಲಾಪನೆ
ಮಾಡಿಹುದು
ಗೆಳೆಯಗೆ ಸ್ವಾಗತ
ಕೋರಿಹುದು
ಬಾ.. ಬಾರೋ...
ವಸಂತ ಎಂದಿಹುದು.



ಮರೆಯಲಾಗದ ಹೊಸ ವರುಷದ ಹಾಡುಗಳು

ಯುಗ ಯುಗಾದಿ ಕಳೆದರೂ.......
ತೆರೆದಿದೆ ಮನೆ ಓ ಬಾ ಅತಿಥಿ......
ಮಾಮರವೆಲ್ಲೊ ಕೋಗಿಲೆ ಎಲ್ಲೋ....
ಪಲ್ಲವಗಳ ಪಲ್ಲವಿಯಲಿ......


ಸಮರ್ಪಣೆ


ಪ್ರಕೃತಿದೇವಿ

ತನ್ನ ಮಡಿಲ

ಫಲ ಪುಷ್ಪಗಳನ್ನೆಲ್ಲ

ಹಸಿರು ಹರಿವಾಣದೊಳಿಟ್ಟು

ಸೃಷ್ಠಿಕರ್ತನಿಗೆ

ಸಮರ್ಪಿಸಿದಾಗ

ಮೂಡಿದ..ಧನ್ಯತೆಯ ಹನಿ

ನೀ..... ಇಬ್ಬನಿ....!!!!!

ಗರಿಕೆ


ಹಸಿರು ಹಸಿರಾಗಿ ಬೆಳೆವ
ಪುಟ್ಟ ಹುಲ್ಲೇ....!
ಎಂಥ ಸಾರ್ಥಕ
ಬದುಕು ನಿನದಲ್ಲೆ...!!

ಗಾಳಿಮಳೆಗೆ ಧೃತಿಗೆಡದೆ
ನೀ ತಳೆವೆ ಸ್ಥಿರತೆ.
ಧರೆಯನಪ್ಪಿ ಬೆಳೆದು
ತೋರುತಿಹೆ ಧೃಡತೆ..!!

ಪೋಷಣೆಯ ಬಯಸದೆ
ಬೆಳೆವೆ ನೀ ಎಲ್ಲೆಲ್ಲು...
ಹೆಮ್ಮರಗಳೂ ನಮಿಸಿವೆ
ನಿನ್ನ ಅಚಲತೆಗೆ ಮರೆತು ಸೊಲ್ಲು...!!

ಪಶುಗಳ ಹಸಿವ ನೀಗಿ
ನೀನಾದೆ ಜೀವಾಧಾರ.
ಕೋಮಲ ತೆನೆಯಲ್ಲಿ
ತುಂಬಿಕೊಂಡಿರುವೆ ಮದ್ದಿನ ಸಾರ...!!

ಪ್ರಥಮ ಪೂಜ್ಯನಿಗೆ
ನೀನಾದೆ ಪ್ರಿಯ ಗರಿಕೆ..!
ಗಜಮುಖನು ಸೋತನೆ
ನಿನ್ನ ನಿರಹಂಕಾರಕೆ..!!!

ಮಂಗಳ ಕಾರ್ಯಕೆ
ರಕ್ಷಾಸೂತ್ರ ನೀ ದೂರ್ವೆ.
ಪರೋಪಕಾರವೆ ಜೀವನಸೂತ್ರ
ಎಂದು ನೀ ಸಾರುವೆ...!!!
        


ಚೈತ್ರ ಸಂಭ್ರಮ


ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು.
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ.

ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಫೂರ್ತಿಗೊಂಡಿತು ಚೈತ್ರನಿಂದಲೆ.
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮ ಸಿಂಚನ.

ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ.
ಅಳಿಸಿ ಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು.

ಪ್ರಕೃತಿಯಂತೆಯೆ ನಮ್ಮ ಬದುಕು
ಚೈತ್ರದಾಗಮ ಬಯಸಿದೆ.
ಹಳೆಯ ನೋವಿನ ಕೊಳೆಯ ನೀಗಿಸಿ
ಸಂತಸದ ಚಿಗುರಿಗೆ ಕಾದಿದೆ.

ನೇತ್ರದಾನ

                 

ಅನ್ನದಾನವೆ ಶ್ರೇಷ್ಠ ಎಂಬುದೊಂದು ಉಕ್ತಿ
ವಿದ್ಯಾದಾನಕ್ಕಿದೆ ಜ್ಞಾನದಾ ಬೆಳಕು ನೀಡುವ ಶಕ್ತಿ

ಮರಣದ ನಂತರ ನೀವು ಮಾಡುವ ನೇತ್ರದಾನ
ದಾನಗಳಲ್ಲೆಲ್ಲ ಶ್ರೇಷ್ಠ ಎಂದಿದೆ ವೈದ್ಯಕೀಯ ವಿಜ್ಞಾನ

ದೃಷ್ಠಿ ಹೀನರಿಗೆ ಬೆಳಕಾಗಬಲ್ಲ ನಿಮ್ಮ ನಯನ
ನಿಮ್ಮೊಡನೆ ಮಣ್ಣಾಗಿಸದೆ ನೀಡಿ ದೃಷ್ಠಿದಾನ

ಅಂಧಕಾರವೆಂಬುದು ಮನುಜಕುಲಕೆ ಶಾಪ
ನೀವಾಗಬಾರದೇಕೆ ಕಣ್ಣಿಲ್ಲದವರ ಬಾಳಬೆಳಗುವ ದೀಪ?

ಸುಟ್ಟು ಬೂದಿಯಾಗಬಾರದು ದೇಹ ನಿರರ್ಥಕವಾಗಿ
ಸಾರ್ಥಕವಾಗಲಿ ಬದುಕು ಅಂಧರ ಬಾಳಿನ ಬೆಳಕಾಗಿ

           

ಬನದ ಕಾಮನಬಿಲ್ಲು....!!!!!



ಚಿಟ್ಟೆ ಬಣ್ಣದ ಚಿಟ್ಟೆ
ಅಂದದ ಕಸೂತಿ ಬಟ್ಟೆ..!
ನಿನ್ನಯ ಮೈಯನು ಮುಟ್ಟೆ
ಸುಸ್ತಾಗಿ ಕಣ್ ಕಣ್ ಬಿಟ್ಟೆ.....!!

ಹೂವಿಂದುವ್ವಿಗೆ ಹಾರೇ
ಮಕರಂದವ ನೀ ಹೀರೇ..!
ಪರಾಗಸ್ಪರ್ಶವ ತಾರೇ
ಮೊಳಕೆಯೊಡೆಯಲಿ ಹಸಿರೇ..!!

ಅಸ್ಥಿರ ಬದುಕಿನ ಕೋಮಲೆ
ನಿನಗೆನ್ನುವರು ಚಂಚಲೆ...
ಬನದಂಗಳದ ಕಾಮನಬಿಲ್ಲೆ....!!!!
ಮನದಂಗಳದಲಿ ನೀ ನಿಂತೆಯಲ್ಲೆ...!!

(ಚಿತ್ರಕೃಪೆ-ಅಂತರ್ಜಾಲ)

ಇಬ್ಬನಿಯ ಹನಿ


ಹಿಮಮಣಿ


ಚತುರ ನೇಕಾರ
ಕುಶಲ ಕಲೆಗಾರ
ಜೇಡನೆಣೆದ 
ಬಲೆಯ ಚಿತ್ತಾರಕೆ
ಅ...ಲ್ಲ...ಲ್ಲಿ
ಅಂದದ ಹಿಮಮಣಿಯ 
ಕುಸುರಿ ಕೆಲಸದ
ಅಲಂಕಾರ......!!!!!


ಮಂಜಿನ ಹನಿ


ತುಂಬು ಚಂದಿರನನ್ನು
ಹಿಡಿಯಲೇಬೇಕೆಂದು
ಇರುಳೆಲ್ಲ...
ಬೆನ್ನಟ್ಟಿ ದಣಿದ,
ಮುಗಿಲುಗಳಿಂದಿಳಿದ
ಬೆವರಿನ ಹನಿ....
ಈ... ಮಂಜಿನಹನಿ.....!!


(ಚಿತ್ರಕೃಪೆ-ಅಂತರ್ಜಾಲ)

ಸ್ತ್ರೀ.......!!

ಮಹಿಳಾ ದಿನಾಚರಣೆಯ ಶುಭಾಶಯಗಳು


ಮುಂಜಾನೆ ಬಾಗಿಲಿಗೆ
ಚುಕ್ಕಿ ಗೆರೆಗಳ ಎಳೆದು
ಶುಭದ ರಂಗೋಲಿಯನು ಬಿಡಿಸುವಾಕೆ...

ಅಮೃತದ ಗಳಿಗೆಗಳ
ಮನೆಯೊಳಗೆ ಕರೆಯುತಲಿ
ಹಸಿರು ತೋರಣವನ್ನು ಕಟ್ಟುವಾಕೆ....

ಒಲುಮೆಯನು ಹಂಚುತ್ತಾ
ನಲುಮೆಯನು ತೋರುತ್ತಾ
ಮನೆಮನವನೆಂದೆಂದು ಬೆಳಗುವಾಕೆ...

ನಲಿವುಗಳೆ ಕರಗದಿರಿ
ನೋವುಗಳೆ ಕಾಡದಿರಿ
ಎಂದೆಲ್ಲ ಮನದಲ್ಲಿ ಬಯಸುವಾಕೆ...

ನಿರುತವೂ ದೇವರಿಗೆ
ಬೆಲ್ಲದಾರತಿ ಬೆಳಗಿ
ತನ್ನವರ ಒಳಿತನ್ನು ಬೇಡುವಾಕೆ
ತನಗಾಗಿ ಏನನ್ನು ಬೇಡದಾಕೆ...

ಕಡಲ ಒಡಲು

ಪೂರ್ಣಚಂದಿರನ ತನ್ನ
ತೆಕ್ಕೆಗೆ ಸೆಳೆದುಕೊಳ್ಳಲು
ತೆರೆಬಾಹುಗಳ ಚಾಚಿ
ಸೋತಿದೆ ಕಡಲು

***********
ಅನಂತತೆಯ ಪ್ರತೀಕ ಕಡಲು
ಮುತ್ತು ರತ್ನಗಳ ಒಡಲು
ಸಾವಿರಾರು ಜೀವರಾಶಿಯ ಮಡಿಲು
ಮೇಲ್ನೋಟಕ್ಕೆ ನೀರಿನಲೆಗಳ ಕಮಾಲು
      ********

ಮುಗಿಲ ಆಟ


                ಮುಗಿಲ ಆಟ
                 ------------
ವಸಂತಕಾಲದ ಒಂದು ಸಂಜೆಯಲಿ
ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ
ಬೆಳ್ಳಿಮೋಡಗಳ ಮೆರವಣಿಗೆ ನೀಲಿ ಆಗಸದಲ್ಲಿ
ಭಾಸ್ಕರನೆಡೆಗೆ ವೈಯಾರದ ನೋಟವ ತಾ ಬೀರುತಲಿ

ದಿನದ ಪಯಣ ಮುಗಿಸುವ ಆತುರ ರವಿಗೆ
ಚಿನ್ನಾಟವಾಡುವ ಬಯಕೆ ಬೆಳ್ಮುಗಿಲ ಸಾಲಿಗೆ
ಮುಗಿಲು ಧರಿಸಿತು ಸೂರ್ಯರಶ್ಮಿಯ ಬೆಳ್ಳಿಗೆರೆ ತನ್ನಂಚಿಗೆ
ನಾಚಿದ ಬೆಳ್ಳಿಮೋಡದ ಒಡಲಾಯಿತು ಕೆಂಪಗೆ

ಇದ ಕಂಡು ರವಿ ತಾನೂ ಮುಂದಾದ ಓಕುಳಿಗೆ
ಎರಚಿದ ಇನ್ನಷ್ಟು ರಂಗುಗಳ ಮುಗಿಲ ಕಡೆಗೆ
ಭಾನು ಮುಗಿಲಿನ ಆಟದಲಿ ನಾ ಮೈ ಮರೆತೆ
ರಂಗುರಂಗಾದ ಮುಗಿಲೆ ನಾ ನಿನಗೆ ಮನಸೋತೆ



ವರ್ಷಾರ‍ಂಭದ ಇನ್ನೊಂದು ಸಂಜೆಯಲಿ
ರವಿಯ ಮರೆ ಮಾಡಿತ್ತು ಕರಿಮುಗಿಲು ಪಡುವಣದಲಿ
ಗಂಭೀರ ವದನವ ತಾ ತೋರುತಲಿ
ಮೆಲು ನಡೆಯಲಿ ಸಾಗುತಿವೆ ಕಾರ್ಮುಗಿಲು ಸಾಲಿನಲಿ

ಗುಡುಗು ಸಿಡಿಲುಗಳ ಹಿಮ್ಮೇಳವೇಕೆ ಈ ಕಾರ್ಮುಗಿಲಿಗೆ?
ತಟ್ಟನೆ ಹೊಳೆಯಿತು ಕರಿಮೋಡದಂಚಿನ ಕೋಲ್ಮಿಂಚಿಗೆ
ದುಗುಡ ದುಮ್ಮಾನಗಳಿರಬಹುದು ಪ್ರಸವಕ್ಕೆ ಹೊರಟ ಹೆಣ್ಣಿಗೆ
ತುಂಬಿದ ತನ್ನೊಡಲ ಭಾರ ಇಳಿಸಿಕೊಳ್ಳುವ ಕಾಲ ಕರಿಮುಗಿಲಿಗೆ

ಕಾರ್ಮುಗಿಲು ಕರಗಿ ನೀರಾಗಿ ಮಳೆ ಸುರಿಯಿತು
ಒಣ ಭೂಮಿ ಮಿಂದು ತಂಪಾಯಿತು
ಹಸಿರುಟ್ಟು ನಲಿದಳು ವಸುಂಧರೆ
ಜೀವಸಂಕುಲಕೆ ನೀಡಿತು ಹರ್ಷ ಈ ವರ್ಷಧಾರೆ

ಮರಿಹಕ್ಕಿಯಾಸೆ


ನಾನೊಂದು ಮರಿಹಕ್ಕಿ
ಗೂಡಿಂದ ಹೊರಬಂದು

ಅಂಗಳದ ಚೆಲುವನೀಂಟುವಾಸೆ

ಗರಿಬಿಚ್ಚಿ ಮರವೇರಿ

ರೆಂಬೆ ಕೊಂಬೆಗೆ ಹಾರಿ

ಕಲರವವ ಮಾಡುವಾಸೆ



ಗುಡ್ಡಬೆಟ್ಟವ ಸೇರಿ

ಎತ್ತರೆತ್ತರಕ್ಕೇರಿ

ಬಾನಿಂದ ಸೊಬಗನ್ನು ಸವಿಯುವಾಸೆ

ಮಿತ್ರರೊಡನೊಂದಾಗಿ

ಚಿಲಿಪಿಲಿಯ ನಾ ಕಲಿತು

ನನ್ನದೇ ಹಾಡನ್ನು ಹಾಡುವಾಸೆ



ನನ್ನೆದೆಯ ಹತ್ತಾರು

ಕನಸ ಕಡ್ಡಿಗಳನಾಯ್ದು

ಚಂದದ ಗೂಡೊಂದ ಕಟ್ಟುವಾಸೆ

ಬೆಚ್ಚನೆಯ ಗೂಡಲ್ಲಿ

ಹೊಚ್ಚ ಹೊಸ ಭಾವನೆಯ

ತತ್ತಿಗೆ ಚೈತನ್ಯ ತುಂಬುವಾಸೆ.

ಹನಿಗವನಗಳು

ಹನಿಗವನಗಳು

ಇಬ್ಬನಿ - ಎರಡು ಹನಿ

ಶ್ವೇತವಸ್ತ್ರಧಾರ‍ಿಣಿ
ಶುಭ್ರತೆಯ ಪ್ರತಿರೂಪಿಣಿ
ಎಳೆಬಿಸಿಲಿಗೆ ಮಾಯವಾಗುವ
ವಿಸ್ಮಯದ ಮಣಿ


*************

ನಿರಾಭರಣ ಸುಂದರಿ
ಪಾರದರ್ಶಕ ಕಿನ್ನರಿ
ಕಣ್ಮನ ತುಂಬುವ
ಮಂಜಿನ ಹನಿ
ನೀ ಚೇತೋಹಾರಿ

*************