ವಿದೇಶ ವಿಹಾರ - 3 - ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

ರಸ್ತೆಗಳಲ್ಲಿ  ಚಲಿಸುವ  ಮನೆಗಳು (Moving House)
(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಆಸ್ಟ್ರೇಲಿಯನ್ನರು ಪ್ರವಾಸ ಪ್ರಿಯರು. ವಾರದ ಐದು ದಿನ ದುಡಿದು ವೀಕೆಂಡಿನಲ್ಲಿ ಕುಟುಂಬ ಸಮೇತರಾಗಿ ತಿರುಗಾಡಲು ಹೊರಟುಬಿಡುತ್ತಾರೆ.ಈ ಚಿತ್ರದಲ್ಲಿ  ಕಾಣುತ್ತಿರುವುದು ಕ್ಯಾರಾವಾನ್ (Caravan).ಇದೊಂದು ಐಶಾರಾಮಿಯಾದ ಮೂವಿಂಗ್ ಹೌಸ್.ಒಂದು ಸುಸಜ್ಜಿತವಾದ ಗೃಹದಲ್ಲಿ ಇರುವ ಎಲ್ಲಾ ಸೌಕರ್ಯಗಳೂ ಇದರಲ್ಲಿರುತ್ತದೆ.ಇದರಲ್ಲಿ ಕಿಚನ್,ಬೆಡ್ ರೂಂ,ಟಾಯ್ಲೆಟ್ ಮತ್ತು ಬಾತ್ ರೂಂ ಸೌಲಭ್ಯವಿರುತ್ತದೆ. ಅಡಿಗೆಗೆ ಬೇಕಾದ ಸಾಮಾಗ್ರಿಗಳು, ವಿಶ್ರಮಿಸಲು ಅಗತ್ಯವಾದ ವಸ್ತುಗಳು ಮತ್ತು ಸನ್ ಬಾತ್ ಗೆ ಬೇಕಾದ ಮಂಚಗಳ ವ್ಯವಸ್ಥೆಯೂ ಇರುತ್ತದೆ. ಇದನ್ನು ತಮ್ಮ ಕಾರಿಗೆ ಸೇರಿಸಿಕೊಂಡು ಹೊರಟರೆ ಮುಗಿಯಿತು ,ದೇಶ-ವಿದೇಶಗಳ ಪ್ರವಾಸವನ್ನು ನಿರಾತಂಕವಾಗಿ ಮಾಡಬಹುದು.

ಕ್ಯಾರಾವಾನುಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡುವಂತಿಲ್ಲ.ಇವುಗಳಿಗಾಗಿಯೇ ವಿಶೇಷವಾದ ಪಾರ್ಕಿಂಗ್ ಸೌಲಭ್ಯವಿರುತ್ತದಂತೆ.ಈ ಸ್ಥಳಗಳಲ್ಲಿ ನಿಲ್ಲಿಸಲು ವರ್ಷಕ್ಕೊಮ್ಮೆ ಡಾಲರುಗಳನ್ನು ಪಾವತಿಸಿ ಸದಸ್ಯತ್ವವನ್ನು ಪಡೆದಿರಬೇಕು ಅಷ್ಟೆ.ಕ್ಯಾರಾವಾನ್ ಪಾರ್ಕಿಂಗಿಗೆ ಮೆಂಬರಾದವರಿಗೆ ಆಸ್ಟ್ರೇಲಿಯಾದಲ್ಲಿ ಎಲ್ಲಿಯಾದರೂ, ಇದಕ್ಕಾಗಿ ನಿಗದಿತವಾದ ಸ್ಥಳದಲ್ಲಿ ಪಾರ್ಕ್ ಮಾಡಲು ಅನುಮತಿ ಇರುತ್ತದೆ.

ವಿಶಿಷ್ಟ ವಿನ್ಯಾಸದ ಮನೆಗಳು









ಇವು ಈ ದೇಶದಲ್ಲಿ ಕಾಣುವ ವಿಶಿಷ್ಟ ವಿನ್ಯಾಸದ ಹಳೆಯ ಕಾಲದ ಮನೆಗಳು.ಹಿಂದೆಲ್ಲ ಅಂದರೆ ಮೊದಲಿಗೆ ಯುರೋಪಿಯನ್ನರು ಈ ಖಂಡಕ್ಕೆ ಬಂದಾಗ  ಇಲ್ಲಿ  ಹಾವುಗಳು ಮತ್ತು ಅನೇಕ ರೀತಿಯ ವಿಷಜಂತುಗಳು ಹೆಚ್ಚಾಗಿದ್ದುದರಿಂದ ಅವುಗಳಿಂದ ರಕ್ಷಣೆಗಾಗಿ ಮನೆಗಳನ್ನು ಎತ್ತರದಲ್ಲಿ ಕಟ್ಟಿಕೊಳ್ಳುತ್ತಿದ್ದರು.ಹಾಗಾಗಿ ಈ ದೇಶದಲ್ಲಿ ೮-೧೦ ಅಡಿ ಪಿಲ್ಲರ್ ಗಳ ಮೇಲೆ ವಾಸಕ್ಕೆ ಕಟ್ಟಿದ ವಿಶಿಷ್ಟ ಶೈಲಿಯ ಮನೆಗಳನ್ನು ನೋಡಬಹುದು.ಕೆಳಗಡೆ ಕಾರು ನಿಲ್ಲಿಸಲು ಮತ್ತು ಹೂವಿನ ತೋಟವನ್ನು ಮಾಡಿಕೊಂಡು,ಮೇಲ್ಛಾವಣೆಯಲ್ಲಿ ವಾಸಕ್ಕೆ ಕಟ್ಟಿದ ಹಳೆಯ ಕಾಲದ ಮನೆಗಳು ನನ್ನನ್ನು ತುಂಬಾ ಆಕರ್ಷಿಸಿದವು.ಎತ್ತರದ ಗುಡ್ಡಗಳ ಮೇಲೆ ಅಲ್ಲಲ್ಲಿ ಕಟ್ಟಿರುವ ಇಂತಹ ಮನೆಗಳನ್ನು ನಾವು ನೋಡಬಹುದು.ಅಲ್ಲಿನ ಸುತ್ತಮುತ್ತಲ ದ್ವೀಪಗಳಲ್ಲಿ ಈಗಲೂ ಈ ರೀತಿಯ ಕಾಟೇಜುಗಳಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಅನುಕೂಲವಿದೆ.ಈ ಮನೆಗಳು ನನಗೆ ನಮ್ಮ  ಹಳ್ಳಿಗಳಲ್ಲಿ ಈಗಲೂ ಇರುವ ಹಳೆಯ ಕಾಲದ ಸುಂದರ ವಿನ್ಯಾಸದ ಮನೆಗಳನ್ನು ನೆನಪಿಗೆ ತಂದಿತು.

ದ್ವಿಚಕ್ರ ವಾಹನಗಳು


ಈ ದೇಶದಲ್ಲಿ ದ್ವಿಚಕ್ರ ವಾಹನಗಳು ತುಂಬಾ ಕಡಿಮೆ.ಎಲ್ಲೆಂದರಲ್ಲಿ ಐಶಾರಾಮಿ ಕಾರುಗಳೇ ಕಾಣುತ್ತವೆ.ಮನೆ ಬಿಟ್ಟು ಹೊರಗೆ ಬಂದರೆ ನನಗೆ ಜಯಶ್ರೀಯವರು ಹಾಡಿರುವ  "ಕಾರ್.. ಕಾರ‍್.. ಕಾರ್.. ಕಾರ್.. ಎಲ್ನೋಡಿ ಕಾರ್...." ಹಾಡು ನೆನಪಾಗುತ್ತಿತ್ತು.ಟ್ಯಾಕ್ಸಿ ವ್ಯವಸ್ಥೆ ಇದೆ.ಆದರೆ ಆಟೋಗಳ ಗಲಾಟೆ ಇಲ್ಲ. ಮ್ಯಾಗ್ನೆಟಿಕ್ ಐಲ್ಯಾಂಡಿನಲ್ಲಿ ನಾನು ಗಮನಿಸಿದ ದ್ವಿಚಕ್ರ ವಾಹನದಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು.

ಸೈಕಲ್ಲುಗಳು

ಆದರೆ ಇಲ್ಲಿ ಸೈಕಲ್ಲುಗಳ ಬಳಕೆ ಹೆಚ್ಚು.ಹೈವೇಗಳಲ್ಲಿ ಕೂಡ ಸೈಕಲ್ಲು ಸವಾರರು ಹೋಗಲು ಮತ್ತು ರಸ್ತೆ ದಾಟಲು ಪ್ರತ್ಯೇಕ ಏರ್ಪಾಟುಗಳನ್ನು ಮಾಡಿದ್ದಾರೆ.ಇದು ಇಲ್ಲಿನವರ ಪರಿಸರದ ಬಗ್ಗೆ ತೋರಿಸುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.ಜೊತೆಗೆ ಪೆಟ್ರೋಲನ್ನು ಉಳಿಸಿದ ಹಾಗೂ ಆಗುತ್ತದೆ ಅಂಬೋಣ.


ವಿದೇಶ ವಿಹಾರ - 2 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಇದು ಪಾರ್ಕಿಂಗ್ ಟಿಕೆಟ್ ಮಿಶನ್.ಆಸ್ಟ್ರೇಲಿಯಾದ ಎಲ್ಲಾ ರಸ್ತೆಗಳ ಫುಟ್ಪಾತಿನಲ್ಲಿ ಅಲ್ಲಲ್ಲಿ ಕಾಣಬರುತ್ತದೆ.ಇಲ್ಲಿ ನಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲು ಗಂಟೆಗೆ ಇಂತಿಷ್ಟು ಎಂದು ಹಣ ತೆಗೆದುಕೊಳ್ಳುವ ವ್ಯವಸ್ಥೆ ಇದೆ.ನಾವು ಈ ಸ್ಥಳದಲ್ಲಿ ಎಷ್ಟು ಸಮಯ ನಿಲ್ಲಿಸಬೇಕಾಗಬಹುದೊ ಅಷ್ಟು ಸಮಯಕ್ಕೆ ಅನುಗುಣವಾಗಿ  ಡಾಲರನ್ನು ಈ ಮಿಶನ್ನಿನಲ್ಲಿ ಹಾಕಿದರೆ ನಮಗೆ ವಾಹನ ನಿಲ್ಲಿಸಲು ಬೇಕಾದ ಸಮಯಕ್ಕೆ ಅನುಮತಿಸುವ ಒಂದು ಚಿಕ್ಕ ಕಾರ್ಡ್ ಬರುತ್ತದೆ. ಈ ಕಾರ್ಡನ್ನು ನಮ್ಮ ಕಾರಿನ ಒಳಗೆ ಗ್ಲಾಸಿನ ಮೂಲಕ ಕಾಣುವಂತೆ ಇಟ್ಟು ನಮ್ಮ ಕೆಲಸಗಳಿಗೆ ಹೋಗಬಹುದು.ಸಿಟಿ ಕೌನ್ಸಿಲ್ ನ ಟಿಕೆಟ್ ಮ್ಯಾನ್ ಚೆಕ್ಕಿಂಗಿಗೆ ಬಂದರೆ ಕಾರಿನೊಳಗೆ ಕಾಣುವ ಕಾರ್ಡನ್ನು ನೋಡುತ್ತಾರೆ.ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್ಡನ್ನು ಪಡೆಯುತ್ತಾರೆ.ಇದು ಮೆಚ್ಚತಕ್ಕ ವಿಷಯ. ನಮ್ಮ ದೇಶದಲ್ಲೂ ಈ ವ್ಯವಸ್ಥೆ ಬಂದರೆ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಸ್ವಲ್ಪ ಕಡಿವಾಣ ಬೀಳಬಹುದೇನೋ...?


ತನ್ನ ಪುಟ್ಟ ಕೈಯಿಂದ ಕಾಂಗರೂ ಮೈ ಸವರಲು ಹೊರಟ ಮುದ್ದು ಆಸ್ಟ್ರೇಲಿಯನ್ ಬೇಬಿ.ನಾವು ಫೋಟೊ ತೆಗೆಯುತ್ತಿರುವುದನ್ನು ನೋಡಿ ಬಾಲೆ ಗಲಿಬಿಲಿಯಾದ ಹಾಗಿದೆ. ಅಲ್ಲಿನ ಮಕ್ಕಳನ್ನು ಕಂಡರೆ ಮತ್ತೆ ಮತ್ತೆ ನೋಡುತ್ತಿರಬೇಕು ಎನಿಸುತ್ತದೆ.


ಗತ್ತಿನಲ್ಲಿ ನಿಂತು ತನ್ನ ವಾಹನಕ್ಕೆ ಪೆಟ್ರೋಲನ್ನು ತುಂಬಿಸಿಕೊಳ್ಳುತ್ತಿರುವ ಲೇಡಿ ಪೋಲಿಸ್.


’ಬಿಲ್ಲಬ್ಯಾಂಗೊ ಸ್ಯಾಂಚುರಿ’ಯಲ್ಲಿ ಕಂಡು ಬಂದ ಚಿಕ್ಕ ಬಿದಿರು ಮೆಳೆ.ನಮ್ಮ ಮಲೆನಾಡಿನಲ್ಲಿರುವಂತೆ ದೊಡ್ಡ ಬಿದಿರು ಮೆಳೆಗಳಲ್ಲ.ಆದರೆ ಅಲ್ಲೂ ಬಿದಿರುಂಟು.

ಇದೇನು ಹೇಳಿ ನೋಡೋಣ...... ? ಸರಿಯಾಗಿದೆ ನಿಮ್ಮ ಊಹೆ....ಇದು ಕೆಸವಿನಸೊಪ್ಪಿರಬಹುದು... ಆ ದೇಶದಲ್ಲಿ ಇದನ್ನು ಕಂಡು ಅಚ್ಚರಿಪಟ್ಟೆ!.....ಕ್ಯಾಮರಾದಲ್ಲಿ ಸೆರೆಹಿಡಿದೆ.

ನಾನು ಚಿಕ್ಕವರಿದ್ದಾಗ ನಮ್ಮ ದೇಶದಲ್ಲಿ ಮರದ ಲೈಟು ಕಂಬಗಳನ್ನು ನೋಡಿದ್ದೆನು. ಆದರೆ ಇತ್ತೀಚೆಗೆ ಇವುಗಳನ್ನು ಕಂಡಿಲ್ಲ. ಆಸ್ಟ್ರೇಲಿಯಾದಲ್ಲಿ ಮರದ ಲೈಟು ಕಂಬಗಳು ನನ್ನನ್ನು ಆಶ್ಚರ್ಯ ಚಕಿತಳನ್ನಾಗಿಸಿತು.ಅಲ್ಲಿನ ಕಾಡುಗಳಲ್ಲಿ ರೆಂಬೆ-ಕೊಂಬೆಗಳಿಲ್ಲದೆ ನೇರವಾಗಿ ,ಎತ್ತರಕ್ಕೆ ಬೆಳೆಯುವ   ಮರಗಳು ಹೆಚ್ಚು. ಹಾಗಾಗಿ ಅವುಗಳ ಉಪಯೋಗವನ್ನು ಮಾಡಿಕೊಳ್ಳುತ್ತಾರ‍ೆ.


ಕ್ವೀನ್ಸ್ ಲ್ಯಾಂಡ್ ನಲ್ಲಿ ಹೋದೆಡೆಯಲ್ಲೆಲ್ಲಾ ನನಗೆ ಸುಂದರ ಆಕಾಶವನ್ನು ಗಮನಿಸಿ ಆಸ್ವಾದಿಸುವುದೇ ಪ್ರಿಯವಾಗಿತ್ತು.ದಟ್ಟ ನೀಲಿ ಬಣ್ಣದ ಆಗಸ, ಅಚ್ಚಬಿಳಿ ಬಣ್ಣದ ಮೋಡಗಳು ನನ್ನ ಮನಸೆಳೆಯುತ್ತಿದ್ದವು.ಹತ್ತಿರವೇ ಸಾಗರವಿರುವುದರಿಂದ ಇಷ್ಟು ನೀಲಿಯೋ, ಮೋಡಗಳ ಶುಭ್ರತೆ ಇದಕ್ಕೆ ಕಾರಣವೋ ಅಥವಾ ಅಲ್ಲಿ ಓಝೋನ್ ಪದರವು ತೂತಾಗಿರುವುದು ಕಾರಣವೋ ನನಗೆ ತಿಳಿದಿಲ್ಲ.ಇದನ್ನು ತಿಳಿದವರು ಹೇಳಬೇಕು.


ತನ್ನ ಕಂಪನಿಯ ವಸ್ತುಗಳ ಜಾಹೀರಾತಿಗಾಗಿ ಮನೆಮನೆಗೆ ಪಾಂಪ್ಲೆಟ್ ಹಂಚುತ್ತಿರುವ ಯುವತಿ.

ವಿದೇಶ ವಿಹಾರ-1---ಗೃಹ ಪ್ರವೇಶ ಸಮಾರಂಭ


ಆಸ್ಟ್ರೇಲಿಯಾ ದೇಶದ ಕ್ವೀನ್ಸ್ ಲ್ಯಾಂಡ್  ರಾಜ್ಯದ ಟೌನ್ಸ್ವಿಲ್ ನಲ್ಲಿ ನಮ್ಮ ಅಳಿಯ-ಮಗಳು ಮನೆ ಕಟ್ಟಿಸಿದ್ದಾರೆ. ನೂತನ ಮನೆ ’ಮಿಲನ’ ದ ಗೃಹಪ್ರವೇಶಕ್ಕೆಂದು ನಮ್ಮೆಲ್ಲರನ್ನು  (ನಾನು,ನನ್ನವರು ಮತ್ತು ನಮ್ಮ ಅಳಿಯನ ತಂದೆ-ತಾಯಿ,ತಂಗಿ-ತಮ್ಮ) ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದರು. ಹಾಗಾಗಿ ನಾವೆಲ್ಲರೂ ಒಟ್ಟಿಗೆ ವಿದೇಶ ಪ್ರವಾಸ ಮಾಡುವ ಯೋಗ ಕೂಡಿಬಂದಿತ್ತು.ಇದು ನಮ್ಮ ಮೊದಲ ವಿದೇಶಯಾತ್ರೆ. ಆಗಸ್ಟ್ ೨೦೧೧ ರಲ್ಲಿ ಮಗಳ ಮನೆಯಲ್ಲಿ ಕಳೆದ ಆ ದಿನಗಳು ನನ್ನ ಬದುಕಿನ ಅವಿಸ್ಮರಣೀಯ ಗಳಿಗೆಗಳು.  ಅ ಸವಿ ನೆನಪಿನ ಗುಂಗಿನಲ್ಲಿ ನಾನು ಈ ಲೇಖನಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಒಂದು ತಿಂಗಳ ವಿದೇಶದಲ್ಲಿನ ನನ್ನ ಅನುಭವಗಳನ್ನು ನನ್ನದೇ ಆದ ಮಾತುಗಳಲ್ಲಿ ನನ್ನ ಬ್ಲಾಗಿನಲ್ಲಿ ದಾಖಲಿಸುವುದು ನನಗೆ ಅತ್ಯಾನಂದವೇ ಸರಿ.

ಪರದೇಶಕ್ಕೆ ಮೊದಲು ಹೋದಾಗ  ನಮ್ಮ ದೇಶದಲ್ಲಿ ಸಿಗುವ ಯಾವ ವಸ್ತುಗಳು ಇಲ್ಲಿ ಸಿಗುತ್ತವೆ,ಅಲ್ಲಿನವರಿಗೂ ನಮಗೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳೇನು ಎಂಬುದನ್ನು ನಾವು ಹುಡುಕಲು ಶುರುಮಾಡಿಕೊಳ್ಳುತ್ತೇವೆ.ನಮ್ಮ ದೇಶದ ಜನ ಮತ್ತು ವಸ್ತುಗಳನ್ನು ಕಂಡರೆ ಅಭಿಮಾನ ಉಕ್ಕಿ ಹರಿಯುತ್ತದೆ.ಅಲ್ಲದೆ ಆ ದೇಶದ ಜನರ ನಡೆ-ನುಡಿಯ ಬಗ್ಗೆ ಅರಿಯಬೇಕೆಂಬ ಕುತೂಹಲ ಮೂಡುವುದೂ ಸಹಜವೇ.  ಇಲ್ಲಿ ಈ ವಿಷಯಗಳೇ ನನ್ನ ಲೇಖನದ ವಸ್ತುಗಳು.

ನಾವು ಟೌನ್ಸ್ವಿಲ್ ನ ನನ್ನ ಮಗಳ ಮನೆ ತಲುಪಿದ  ಮರುದಿನವೇ ಅಂದರೆ ಆಗಸ್ಟ್ ನಾಲ್ಕನೆ ತಾರೀಖು  ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು.ಹಾಗಾಗಿ ಅಲ್ಲಿಂದಲೇ ನನ್ನ ವಿದೇಶ ಯಾತ್ರೆಯ ಅನುಭವವನ್ನು ಆರಂಭಿಸುತ್ತೇನೆ.

ಟೌನ್ಸ್ವಿಲ್ ಏರ್ ಪೋರ್ಟಿನಿಂದ ಇಳಿದು ನನ್ನ ಮಗಳ ಮನೆಯನ್ನು ಪ್ರವೇಶಿಸುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಬಾಳೆಯ ಕಂದು ಮತ್ತು ಮಾವಿನಸೊಪ್ಪು.ಗೃಹಪ್ರವೇಶ ಸಮಾರಂಭಕ್ಕಾಗಿ ನಮ್ಮ ಅಳಿಯನ ಸ್ನೇಹಿತರ ತೋಟದಿಂದ ಅವುಗಳನ್ನು ತರಿಸಿಟ್ಟಿದ್ದರು.ದಾಸವಾಳದ ಹೂಗಳೂ ಸಮೃದ್ಧಿಯಾಗಿ ಸಿಕ್ಕಿದ್ದವು.ಶಿವನ ಪೂಜೆಗೆ ಶ್ರೇಷ್ಟವಾದ ರುದ್ರ ಗೊರಟೆ ಗಿಡವನ್ನು ನೋಡಿ ಬಿಲ್ವಪತ್ರೆಯನ್ನು ಕಂಡಂತೆ ಆನಂದವಾಯಿತು.

ಇವುಗಳನ್ನು ನೋಡಿ ನಮ್ಮ ದೇಶದಲ್ಲೇ ಇದ್ದೇವೇನೋ ಎನ್ನುವ ಭಾವ ಒಂದು ಕ್ಷಣ ಬಂದು ಹೋಯಿತು....


ಗೃಹಪ್ರವೇಶದ ಹೋಮಕ್ಕೆಂದು ಸಿಡ್ನಿಯಿಂದ ಭಟ್ಟರನ್ನು ಕರೆಸಿದ್ದರು.ಅವರ ಹೆಸರು ಶ್ರೀ ಹೃಷಿಕೇಶ್ ಭಟ್. ಅವರು ಮೂಲತಃ ದಕ್ಷಿಣ ಭಾರತದ ತಿರುಪತಿಯವರು.ಇಪ್ಪತ್ತು ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳೇ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ.ಅಲ್ಲಿ ನೆಲೆಸಿರುವ ಭಾರತೀಯರ ಮನೆಗಳಲ್ಲಿ ಸತ್ಯನಾರ‍ಾಯಣ ಪೂಜೆ,ಶುಭ ಸಮಾರಂಭಗಳಲ್ಲಿ ಹೋಮ ಹವನಗಳನ್ನು ಮಾಡಿಕೊಡುತ್ತಾರೆ.

ಹೃಷಿಕೇಶ್ ಭಟ್ ರವರ ನೇತೃತ್ವದಲ್ಲಿ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ವಿನಾಯಕನ ಪೂಜೆ ಮೊದಲುಗೊಂಡು ಕಲಶ ಪೂಜೆ,ವಾಸ್ತು ,ನವಗ್ರಹ ಮತ್ತು ಮೃತ್ಯುಂಜಯ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು.ಹೋಮವನ್ನು  ಮಾಡಿಸುವ ಉದ್ದೇಶವನ್ನು ಈಗಿನ ಮಕ್ಕಳಿಗೆ ಅರ್ಥವಾಗುವಂತೆ ಅಂದರೆ ಕಂಪ್ಯೂಟರ್ ಹಾರ್ಡ್ವೇರ್, ಸಾಫ್ಟ್ ವೇರ್ ಗಳ ಉದಾಹರಣೆಯೊಂದಿಗೆ ಪುರೋಹಿತರು ಚೆನ್ನಾಗಿ ವಿವರಿಸಿದರು.ಮಗಳು-ಅಳಿಯ ಇಬ್ಬರೂ ಭಟ್ಟರೊಂದಿಗೆ ಕುಳಿತು ಹೋಮವನ್ನು ಸಾಂಗವಾಗಿ ನೆರವೇರಿಸಿದರು.

ಅಗ್ನಿದೇವ ಸುಪ್ರೀತನಾದನು. ಮನೆಯೆಲ್ಲಾ ಹೋಮದ ಸುಗಂಧದಿಂದ ತುಂಬಿತು.ಅಂತೆಯೇ ನಮ್ಮ ಮನದಲ್ಲಿ ಹರುಷವೂ ತುಂಬಿ ಬಂತು.

ವಿದೇಶದಲ್ಲಿ ಅದರಲ್ಲೂ ಆಸ್ಟೇಲಿಯಾದಲ್ಲಿ ಹೋಮಕುಂಡವನ್ನು ಕಂಡು ನಮಗೆಲ್ಲಾ ಆಶ್ಚರ್ಯವಾಯಿತು. ಅಲ್ಲಿನ ಭಾರತೀಯರೊಬ್ಬರು ಹೋಮಕುಂಡವನ್ನು ಇಟ್ಟುಕೊಂಡಿದ್ದು, ಸಮಯಕ್ಕೆ ನಮಗೆ ಸಿಕ್ಕಿದ್ದು ತುಂಬಾ ಅನುಕೂಲವಾಯಿತು.ದಂಪತಿಗಳಿಂದ ಹೊಸ ಮನೆಯ ಬಾಗಿಲ ಪೂಜೆಯನ್ನೂ ಮಾಡಿಸಿದರು.

ಅತ್ತ ಹೋಮ ನಡೆಯುತ್ತಿರುವಾಗ ಮನೆಯವರು ಮತ್ತು ಅಗಮಿಸಿದ್ದ ಭಾರತೀಯ ಮಿತ್ರರೆಲ್ಲಾ ಸೇರಿ ಗ್ಯಾಸ್ ಸ್ಟವ್ ಪೂಜೆ ಮಾಡಿ ಹಾಲು ಉಕ್ಕಿಸಿ ನೂತನ ಮನೆಯಲ್ಲಿ ಸುಖ,ಶಾಂತಿ,ಸಮೃದ್ಧಿಯನ್ನು ತಾರೆಂದು ಬೇಡಿಕೊಂಡೆವು.


ಕುಂಬಳಕಾಯಿಯನ್ನು(ಸಮಯಕ್ಕೆ ಸರಿಯಾಗಿ ಬೂದುಗುಂಬಳ ಸಿಗಲಿಲ್ಲ ಅಷ್ಟೆ)  ಒಡೆದು ದೃಷ್ಟಿ ತೆಗೆದದ್ದೂ ಆಯಿತು.

ಬಂದವರಿಗೆಲ್ಲಾ ಭಟ್ಟರ ಆಶೀರ್ವಾದದೊಂದಿಗೆ ಪ್ರಸಾದ ವಿನಿಯೋಗವಾಯಿತು.ನಮ್ಮೂರಿನ ಕಾಯಿಹೋಳಿಗೆಯೊಡನೆ ಅಲ್ಲಿ ತಯಾರಿಸಿದ ರುಚಿಯಾದ ಪರೋಟ,ಮೋದಕ, ಪಾಯಸದ ಮಿನಿ ಔತಣವಾಯಿತು.  


ದೂರದ ದೇಶದಲ್ಲಿ ಗೃಹಪ್ರವೇಶ ಹೇಗೆ ನಡೆಯುತ್ತದೋ ಎಂಬ ಅಳುಕಿತ್ತು.ದೇವರ ಅನುಗ್ರಹದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ವಿಧಿವತ್ತಾಗಿ ಕಾರ್ಯಕ್ರಮ ನೆಡೆದದ್ದು ಸಮಾಧಾನವಾಯಿತು.ಪರಸ್ಥಳದಲ್ಲಿ ಮನೆ ಕಟ್ಟಲು ಮತ್ತು ನಮ್ಮ ಸಂಪ್ರದಾಯದಂತೆ ಗೃಹಪ್ರವೇಶ ಮಾಡಬೇಕೆಂದು ನಮ್ಮ ಅಳಿಯ-ಮಗಳು ಇಬ್ಬರೂ ತುಂಬಾ ಕಷ್ಟಪಟ್ಟಿದ್ದರು.ಅವರ ಶ್ರಮ ಇಂದು ಸಾರ್ಥಕವಾಯಿತು.ಅವರಿಬ್ಬರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ.

ಜಾಗತೀಕರಣದ ಪ್ರಭಾವದಿಂದಾಗಿ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಭಾರತೀಯರು ವಾಸವಾಗಿದ್ದಾರೆ. ಪರದೇಶದಲ್ಲೂ ನಮ್ಮ ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ನಾವು ಉಳಿಸಿಕೊಳ್ಳಲು ಬೇಕಾದ ಸಾಕಷ್ಟು ವ್ಯವಸ್ಥೆಯೂ ಈಗ ಎಲ್ಲೆಡೆಯೂ ಇದೆ.ಇದನ್ನು ಹುಡುಕಿಕೊಂಡು ಹೋಗುವ ತಾಳ್ಮೆ,ಮನೋಬಲ ನಮ್ಮಲ್ಲಿರಬೇಕು. ಅಲ್ಲದೆ ಅಲ್ಲಿರುವ ಭಾರತೀಯರೆಲ್ಲ ಬೆರೆತು ಬಾಳಬೇಕು ಅಷ್ಟೆ. ಟೌನ್ಸ್ವಿಲ್ ನಲ್ಲಿ ನೆಲೆಸಿರುವ ಭಾರತೀಯರಲ್ಲಿ ನಾನಿದನ್ನು ಕಂಡು ಸಂತಸಪಟ್ಟೆ.

ಕಾಮನ ಬಿಲ್ಲು



                ಚಿಣ್ಣರಿಗೆಲ್ಲಾ ಮಕ್ಕಳ ದಿನಾಚರಣೆಯ ಶುಭಾಶಯಗಳು




ಭೂಮಿಗೂ ಬಾನಿಗೂ ಸೇತುವೆಯಾಗಿ
ನಯನ ಮನೋಹರ ಚಿತ್ರವದಾಗಿ
ಬಾನಂಚಲಿ ಮೂಡಿದೆ ಮಳೆಬಿಲ್ಲು
ಗೆಳೆಯರ ಕರೆಯುವೆ ನೀ ನಿಲ್ಲು....

ಬರಿ ಬಿಸಿಲಾದರೆ ನೀ ಇರಲಾರೆ
ಬರಿ ಮಳೆ ಸುರಿಯೇ ನೀ ಬರಲಾರೆ
ಮೂಡಿದ ಕೆಲವೇ ಕ್ಷಣದಲಿ ಮುಳುಗುವೆ
ಸೃಷ್ಠಿಯ ವಿಸ್ಮಯ ನೀನಾಗಿರುವೆ

ಊದಾ ಕೆಂಪು ಬಣ್ಣದ ನಡುವೆ
ಹರಡಿದೆ ಬಗೆಬಗೆ ರಂಗುಗಳು
ಸೂರ್ಯನ ರಶ್ಮಿ ಮಳೆ ಹನಿ ಮೈತ್ರಿಗೆ
ದೇವರು ನೀಡಿದ ಬಳುವಳಿಯು

ಬಣ್ಣಗಳೇಳು ಒಡಲೊಳಗಿದ್ದರೂ
ಕಿರಣದೆ ಕಾಣುವುದೊಂದೆ ಬಿಳಿ
ಬಾಗುವುದರಲ್ಲೂ ಬದುಕಿದೆ ಸೊಗಸು
ಎನ್ನುವ ತತ್ವವ ಇನ್ನು ಕಲಿ

ಜೀವನವೆಂಬೀ ಬಾಂದಳದಲ್ಲಿ
ಜ್ಞಾನದ ಕಿರಣವು ಬೆಳಗಿಹುದು
ಅದರಾ ಸೊಬಗಿನ ಕಾಣ್ಕೆಗೆ ಬೇಕು
ಪರಿಶ್ರಮವೆಂಬ ಸಿಂಚನವು.

(ಚಿತ್ರಕೃಪೆ - ಅಂತರ್ಜಾಲ)

ಗಿಣಿರಾಮ!..... ಪಂಚರಂಗಿರಾಮ.... !

ಒಂದು ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ನಿಧಾನವಾಗಿ ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ.


ಆದರೆ ನಾ ಕಂಡ ದೃಶ್ಯ ನನಗೆ ಸಂತಸ ನೀಡಿತು.ಕೂಡಲೇ ಒಳಗೆ ಬಂದು ನನ್ನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ಆ ಕ್ಷಣಗಳನ್ನು ಸೆರೆಹಿಡಿದೆ. ಅಂದದ ಅರಗಿಳಿಯೊಂದು ಹಾರಿ ಬಂದು ನಮ್ಮ ಮನೆಯ ಕಾಂಪೌಂಡ್ ಮೇಲೆ ಕುಳಿತಿತ್ತು.


ನಾನು ಹತ್ತಿರದಿಂದ ಒಂದೆರಡು ಫೋಟೋ ತೆಗೆದಾಗಲೂ ಅದು ಹಾರಿಹೋಗದಿದ್ದಾಗ ಆ ಪುಟ್ಟಮರಿಗೆ ಹಾರಲು ಶಕ್ತಿ ಕಡಿಮೆ ಇರಬಹುದು ಎಂದು ಮರುಗುತ್ತಾ,ಹಣ್ಣು ತಿನ್ನಿಸಿ ನೋಡೋಣವೆಂದು ತಿನ್ನಿಸಿದರೆ ಒಂದೇ ನಿಮಿಷದಲ್ಲಿ ಹಣ್ಣನ್ನು ಪೂರ್ತಿಯಾಗಿ ತಿಂದಿತು.



 ಈ ಹೊತ್ತಿಗಾಗಲೇ ನಮ್ಮ ಅಕ್ಕಪಕ್ಕದ ಮನೆಯವರು, ಮಕ್ಕಳು ಸೇರಿ ಕುತೂಹಲ, ಸಂತೋಷದಿಂದ ಕಲರವ ಮಾಡಿದ್ದರಿಂದ ಪುಟ್ಟ ಗಿಣಿ ತಬ್ಬಿಬ್ಬುಗೊಂಡಿತು.



ಹಾರಲಾರದೆ ಅಸಹಾಯಕವಾದ ಆ ಮರಿಯನ್ನು ಚಿಕ್ಕ ಪಂಜರದಲ್ಲಿಟ್ಟು ಹಣ್ಣು, ಮೆಣಸಿನಕಾಯಿ,ಕಾಳುಗಳನ್ನು ಹಾಕಿದೆವು.


ಒಂದೆರಡು ಗಂಟೆಯಲ್ಲಿ ಚೇತರಿಸಿಕೊಂಡ ಮರಿಯನ್ನು ಹೊರ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಪುರ್ರನೆ ಹಾರಿ ಎತ್ತರದ ಮರವನ್ನೇರಿ ಕೀ...ಕೀ....ಎನ್ನುತ್ತಾ ತನ್ನ ಬಳಗವನ್ನು ಸೇರಿಕೊಂಡಿತು. ಆ ಗಿಳಿಮರಿ ನಮ್ಮೊಡನೆ ಇದ್ದಷ್ಟು ಸಮಯ ನಮ್ಮ ಮನಸ್ಸಿಗೆ ಮುದ ನೀಡಿ ರಜೆಯ ಸವಿಯನ್ನು ಹೆಚ್ಚಿಸಿತು.ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !


ಮಧುರ ಮಧುರವೀ ಮಂಜುಳಗಾನ..

ಕುವೆಂಪು ವಿರಚಿತ ಈ ಭಾವಗೀತೆ ನನ್ನ ಮೆಚ್ಚಿನ ಗೀತೆಗಳಲ್ಲೊಂದು.

ಋತುಗಾನ.....


            
ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ.ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿರುತ್ತದೆ. ಕಾಲದೊಂದಿಗೆ ಆಗುವ ಬದಲಾವಣೆ ನಮಗೆ ಜೀವನದಲ್ಲಿ ಬಹಳಷ್ಟನ್ನು ಕಲಿಸುತ್ತದೆ. ಕಾಲದ ಚಲನೆಯಲ್ಲಿ ವಸಂತನ ಚಿಗುರಿದೆ, ವರ್ಷನ ಸಿಂಚನವಿದೆ, ಶರತ್ -ಹೇಮಂತರ ಸಂತೃಪ್ತಿಯಿದೆ, ಹಾಗೇ ಗ್ರೀಷ್ಮ-ಶಿಶಿರದ ಬೇಗೆಯೂ ಇದೆ.ಕಷ್ಟಗಳನ್ನು ಕಂಡಾಗಲೇ ಸುಖದ ಬೆಲೆ ತಿಳಿಯುತ್ತದೆ.ಇವುಗಳನ್ನು ಒಂದರ ನಂತರ ಒಂದನ್ನು ಅನುಭವಿಸಿದಾಗಲೇ ಈ ಬದುಕು ಸಾರ್ಥಕ.ಯಾವುದು ಅತಿಯಾದರೂ ಬದುಕು ಬಾಡುತ್ತದೆ. ಸಮರಸದ ಬದುಕು ಎಲ್ಲರ ಆಶಯ. ಪ್ರಕೃತಿಯಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ಗಮನಿಸಿದರೆ ನಮ್ಮ ಬದುಕಿನೊಡನೆ ಅದು ಎಷ್ಟೊಂದು ಹೋಲುತ್ತದೆ ಎನ್ನಿಸುತ್ತದೆ.ಇದರಿಂದ ನಾವು ಕಲಿಯುವುದು ಬಹಳವಿದೆ ಎನ್ನಿಸದಿರದು. ಕಾಲಮಾನಕ್ಕೆ ತಕ್ಕಂತೆ ನಲಿಯುವ,ಉಲಿಯುವ  ಪ್ರಕೃತಿಯಲ್ಲಿನ ಈ ಋತುಗಾನ ಮಾನವನ ಬದುಕಿಗೊಂದು ಪಾಠ.


ಋತುಗಳ ರಾಜನಾದ ವಸಂತಋತುವಿನ ಆಗಮನದಿಂದ ನೂತನ  ಯುಗದ ಆರಂಭ. ಚೈತ್ರ-ವೈಶಾಖ ಮಾಸಗಳ ಕಾಲ. ಹಿತವಾದ ಚಳಿ, ಮಿತವಾದ ಬಿಸಿಲು ವಸಂತನ ಹಿರಿಮೆ. ಪ್ರಕೃತಿಯಲ್ಲಿ ಆಹ್ಲಾದತೆ ತುಂಬಿರುತ್ತದೆ. ಕೋಗಿಲೆಯ ಗಾಯನ, ಹಕ್ಕಿ ಪಕ್ಷಿಗಳ ಕಲರವ, ದುಂಭಿಗಳ ಝೇಂಕಾರ ಮೊಳಗುವ, ನವಿಲು ನರ್ತಿಸುವ ಮೋಹಕ ಕಾಲವಿದು. ಪ್ರಕೃತಿಯಲ್ಲಿ ಜೀವನ್ಮುಖಿಯಾದ ಚಿಗುರು ಕುಡಿಯೊಡೆಯುವ ಸಮಯ.ಎಲ್ಲೆಲ್ಲೂ ಸಂತಸದ ಕಾರಂಜಿ ಚಿಮ್ಮಿಸುವ ಮಧುರವಾದ ಮಾಸವಿದು. ಕಬ್ಬಿಗನ ಕಾವ್ಯಕ್ಕೆ ಸ್ಫೂರ್ತಿ ನೀಡುವ ಮಧುಮಾಸವಿದು.
"ಬೆಡಗಿನ ಲೋಕದ ಹುಡುಗಿಯ ತೆರದಲಿ
 ಬನವಿರೆ ಹೊಸ ವೈಯ್ಯಾರದಲಿ" ಎಂದು ರಸಋಷಿ ಹಾಡಿದರೆ
"ಚಿಗುರು ಚಿಗುರಿಗೆ ಚೆಲುವ ತುಂಬಿಸಿ ಹೂವು ತೋರಣ ಕಟ್ಟಿತು" ಎಂದು ವಿ ಸೀ ಚೈತ್ರಮಾಸವನ್ನು ಬಣ್ಣಿಸುತ್ತಾರೆ.


ಜೇಷ್ಠ-ಆಷಾಢ ಮಾಸಗಳೊಂದಿಗೆ ಗ್ರೀಷ್ಮನ ಆಗಮನವಾಗುತ್ತದೆ. ಆಗತಾನೆ ಕುಡಿಯೊಡೆಯುತ್ತಿರುವ ಜೀವರಾಶಿಯನ್ನು ಪೋಷಿಸಿ,ಬೆಳೆಯಲು ಸಹಕರಿಸುವುದು ಇವನ ಕೆಲಸ. ಇದಕ್ಕೆ ತಕ್ಕುದಾದ ವೇಷವನ್ನು ಧರಿಸುವುದು ಇವನ ಹೊಣೆ. ಗ್ರೀಷ್ಮ- ಹೆಸರೇ ಸೂಚಿಸುವಂತೆ ತೀಕ್ಷ್ಣವಾದ ಬಿಸಿಲಿನ ತಾಪದ ಜೊತೆಗೆ ಆಗಾಗ ಸಿಡಿಲು-ಗುಡುಗಿನ ಆರ್ಭಟದೊಂದಿಗೆ ಸುರಿವ ಮುಂಗಾರಿನ ಮಳೆ ಇವನ ವೈಭೋಗ. ಸೂರ್ಯ,ವರುಣರ ಆರೈಕೆಯಲ್ಲಿ ಸಸ್ಯರಾಶಿ ಭೂಮಿಯಲ್ಲಿ ಬೇರೂರಿ ತಲೆ ಎತ್ತಿ ಬೆಳೆಯುವುದು ಈ ಋತುವಿನ ಒಡನಾಟದಲ್ಲಿ.ಆಷಾಢ ಮಾಸದಲ್ಲಿ ಬೀಸಿ ಬರುವ ಗಾಳಿ, ಮಳೆ ಮೋಡಗಳನ್ನು ಹೊತ್ತು ತಂದು ಸಸ್ಯರಾಶಿಯ ಬೆಳವಣಿಗೆಗೆ ಸಹಕರಿಸುತ್ತದೆ.

ಶ್ರಾವಣ- ಭಾದ್ರಪದ ಮಾಸಗಳ ಜೊತೆಗೆ ಬರುವುದು ವರ್ಷಋತು. ಇದು ಮಳೆಗಾಲ.’ಶ್ರಾವಣ ಬಂತು ಬೆಟ್ಟಕ.. ಬಾನ ಮಟ್ಟಕ..
ಏರ‍್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು’ ಎಂದು ಮಳೆರಾಯನ ಮಹಿಮೆಯನ್ನು ಹಾಡಿದ ಕವಿನುಡಿಯನ್ನು ಮರೆಯಲಾದೀತೆ? ಗುಡುಗು,ಸಿಡಿಲಿನ ಅಬ್ಬರವಿಲ್ಲದೆ, ಘನಗಾಂಭೀರ್ಯದಿಂದ ಸುರಿವ ಮಳೆ ಈ ಋತುವಿನ ವಿಶೇಷ.ಬೇರೂರಿ ನಿಂತ ಸಸ್ಯಕುಲಕ್ಕೆ ಹಸಿರು ಉಡುಗೆಯ ತೊಡಿಸಿ ಮೈಮರೆಸುವ ಕಾಲ. ಹಸಿರು ಹೂವಾಗಿ, ಹೂ ಕಾಯಾಗುವ ಪರ್ವಕಾಲ. ಇದೆಲ್ಲ ವರ್ಷಋತುವಿನ ಕೈಚಳಕ.



ವರ್ಷನ ಕರಾಮತ್ತಿನಿಂದ ಫಲಭರಿತವಾದ ಪ್ರಕೃತಿ ಶರದೃತುವಿನಲ್ಲಿ ವೈಭವದಿಂದ ಕಾಣುತ್ತಾಳೆ.ಆಶ್ವಯುಜ-ಕಾರ್ತಿಕ ಮಾಸಗಳು ಇವನ ಗೆಳೆಯರು.ಸುಡುವ ಬಿಸಿಲ ಬೇಗೆಯಿಲ್ಲ, ಸುರಿವ ಜಡಿಮಳೆಯೂ ಇಲ್ಲದೆ ಜೀವಕ್ಕೆ ಹಿತ ನೀಡುವ ಕಾಲವಿದು. ಕಾಯಿ ಹಣ್ಣಾಗಿ ನಿಲ್ಲುವ ಈ ದಿನಗಳು ಜೀವಕುಲಕ್ಕೆ ಸಂತೃಪ್ತಭಾವ ನೀಡುತ್ತದೆ.


ಮಾರ್ಗಶಿರ-ಪುಷ್ಯ ಮಾಸಗಳೊಡನೆ ಹೇಮಂತನ ಆಗಮನವಾಗುತ್ತದೆ.ಹೇಮಂತನ ಆಣತಿಯಂತೆ ಪ್ರಕೃತಿಯಲ್ಲಿನ ಗಿಡಮರಗಳಲ್ಲಿ ಕಾಯಿ ಹಣ್ಣಾಗಿ,ಹಣ್ಣು ಕಳಿತು ಮುಂದಿನ ಸಂತತಿಗೆ ಬೀಜವಾಗುವ ಪರಿ, ಈ ಕಾಲದ ಮಹಿಮೆ.ಪ್ರಕೃತಿದೇವಿ ಈ ಕಾಲದಲ್ಲಿ ಮಂಜಿನ ಸೆರಗನ್ನೊದ್ದು, ಹಿಮಮಣಿಯ ಆಭರಣವನ್ನಿಟ್ಟು ನಿಂತಿದ್ದಾಳೆ.ಹಿತವಾದ ಬಿಸಿಲಿನೊಡನೆ ಸಣ್ಣದಾಗಿ ಚಳಿ ಅಡಿಯಿಡುವುದು ಈ ಋತುವಿನ ನಿಯಮ.



ಮಾಘ-ಪಾಲ್ಗುಣ ಮಾಸದಲ್ಲಿ ಮೈ ನಡುಗಿಸುವ ಚಳಿಯೊಡನೆ ಶಿಶಿರನ ಪ್ರತಾಪ ಪ್ರಾರಂಭವಾಗುತ್ತದೆ.   ಜೀವಜಲವನ್ನೆಲ್ಲಾ ಹೀರಿ ಮರಗಿಡಗಳ ಹಸಿರಿಗೆ ವಿದಾಯ ಹೇಳುವ, ಯುಗಾಂತ್ಯವ ಸಾರುವ ಋತುವಿದು.ಮರಣಮುಖಿ ಹಣ್ಣೆಲೆಗಳನ್ನೆಲ್ಲ ನಿರ್ದಯವಾಗಿ ಉದುರುಸಿ ಬರಡಾಗಿಸುವ ಇವನ ಹೊಡೆತಕ್ಕೆ ಪ್ರಕೃತಿ ಬೋಳಾಗುತ್ತಾಳೆ. ಇದು ಬಂದ ನೋವನ್ನು ನುಂಗುವ ಸಮಯ.ಸುಖದ ನಿರೀಕ್ಷೆಯಲ್ಲಿ ಕಾಲತಳ್ಳುವ ದಿನಗಳಿವು. ಆದರೆ ಶಿಶಿರನು ವಸಂತನಿಗೆ ಮಾರ್ಗ ತೋರಲು ಬಂದಿದ್ದಾನೆ ಎಂಬುದಂತೂ ಸತ್ಯ.



ಕಾಲಚಕ್ರ ತಿರುಗಲೇಬೇಕು. ಮತ್ತೆ ವಸಂತ ಬರಲೇಬೇಕು.ಮಾವು ಚಿಗುರಲೇಬೇಕು,ಕೋಗಿಲೆಯ ಮಧುರ ಕಂಠ ಮೊಳಗಲೇಬೇಕು.ಕಾಯುವ ತಾಳ್ಮೆಯೊಂದಿರಬೇಕು ಅಷ್ಟೇ."ತೊಲಗಿತು ಮಾಗಿ ಎನ್ನುತ ಕೂಗಿ ಮುಕ್ತಿಯ ಸಾರೈ ಸ್ವರಯೋಗಿ" ಎನ್ನುತ್ತಾರೆ ಕುವೆಂಪು.ಕಾಲಕ್ಕೆ ತಕ್ಕಂತೆ ಬದಲಾಗುವ ಋತುವಿನ ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕಿದಾಗಲೇ ಬದುಕು ಪರಿಪೂರ್ಣ.ಇದು ಪ್ರಕೃತಿಯಿಂದ ಮಾನವ ಕಲಿಯಬೇಕಾದ ಪಾಠ. ಋತುಗಳ ರಾಜ ವಸಂತ ಮತ್ತೊಮ್ಮೆ ಬರುತ್ತಿದ್ದಾನೆ, ನಮ್ಮ ಸುತ್ತಮುತ್ತಲಿನ ನಿಸರ್ಗದಲ್ಲಿ ಬದಲಾವಣೆ ನಿಚ್ಚಳವಾಗಿ ಕಾಣತೊಡಗಿದೆ. ಸಸ್ಯಸಂಕುಲದಲ್ಲಿ, ಪಕ್ಷಿಸಂಕುಲದಲ್ಲಿ ವಸಂತನ ಆಗಮನಕ್ಕೆ ಎಲ್ಲವೂ ಅಣಿಯಾಗಿದೆ. ಸಂತಸ ಮೇರೆ ಮೀರಿದೆ. ನಾವೂ ಈ ಹರುಷದಲ್ಲಿ ಭಾಗಿಯಾಗೋಣ.

"ಮಧುವೆ ಬಾರ ಮುದವ ತಾರ ನೀನೆ ದೇವ ದೂತನು
ಪರದ ಚಿಂತೆ ಮರೆಯದಂತೆ ಕಳುಹುವನು ವಿಧಾತನು
ಭುವಿಯ ಸಿಂಗರಿಸುತ ಬಾರ
ಪರದ ಬೆಳಕನಿಳೆಗೆ ತಾರ
ಸೊಬಗೆ ಶಿವನು ಎಂದು ಸಾರ
ಬಾರ ಶಕ್ತಿದಾಯಕ
ಹಳೆತ ಕೂಡಿ ಹೊಸತು ಮಾಡಿ ಬಾರೆಲೆ ಋತುನಾಯಕ" ಎಂದು ಕವಿನುಡಿಯನ್ನು ನಾವೆಲ್ಲರೂ ಹಾಡೋಣ,ಶುಭಹಾರೈಸೋಣ.

ಆತ್ಮೀಯ ಬ್ಲಾಗಿಗರೆ, ನಿಮಗೆಲ್ಲರಿಗೂ ವಸಂತೋತ್ಸವದ ಶುಭಾಶಯಗಳು.



“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ




ಭಾರತೀಯ ಸಾಂಸ್ಕೃತಿಕ ವೇದಿಕೆ  ಅಭಿರುಚಿ  ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್  ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ ಜನತೆಗೆ ಚಿರಪರಿಚಿತರು. ಅವರ ಉಪನ್ಯಾಸವಿರಲಿ,ಕಾವ್ಯವಾಚನಕ್ಕೆ ವ್ಯಾಖ್ಯಾನವಿರಲಿ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ತರುವುದು ನಿಶ್ಚಿತ. ಅದರಲ್ಲೂ ಗಣೇಶ್ ಅವರ ಅಷ್ಟಾವಧಾನವೆಂದ ಮೇಲೆ ಕೇಳಬೇಕೆ ...?! ಸುವರ್ಣ ಸಾಂಸ್ಕೃತಿಕ ಭವನ ಪ್ರೇಕ್ಷಕರಿಂದ ತುಂಬಿಹೋಗಿತ್ತು.ಸ್ಥಳಾಭಾವದ ನಿಮಿತ್ತ ಅನೇಕ ಮಂದಿ ನೆಲದ ಮೇಲೆ, ಮೆಟ್ಟಿಲುಗಳ ಮೇಲೆ ಕುಳಿತು ಕಾರ್ಯಕ್ರಮದ ಸವಿಯನ್ನು ಆಸ್ವಾದಿಸಿದ್ದು, ಈ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಆಸಕ್ತಿ, ಕುತೂಹಲವನ್ನು ವ್ಯಕ್ತಪಡಿಸಿತು. ’ಅಷ್ಟಾವಧಾನ’ ವೆಂಬುದು ಒಂದು ಅಪರೂಪದ ಕಲೆ. ಇದರಲ್ಲಿ ಅವಧಾನಿಯು ಪುಸ್ತಕ,ಪೆನ್ನು ಮುಂತಾದ ಬರವಣೆಗೆಯ ಸಾಮಾಗ್ರಿಗಳನ್ನು ಬಳಸುವಂತಿಲ್ಲ.ಇಲ್ಲವನ್ನೂ ತನ್ನ ಮಸ್ತಕದಲ್ಲೇ ನೆನಪಿಟ್ಟುಕೊಂಡು ತನ್ನ ಪಾಂಡಿತ್ಯವನ್ನು ಮೆರೆಯಬೇಕು. ಎಂಟು ಜನ ಪೃಚ್ಛಕರು ಹಾಕಿದ ಸವಾಲುಗಳನ್ನು ತನ್ನ ಮನಸ್ಸಿನಲ್ಲೇ ನೆನಪಿಟ್ಟುಕೊಂಡು, ಅವರವರು ಕೇಳಿದ ವಿಷಯದ ಮೇಲೆ, ಕೇಳಿದ ಛಂಧಸ್ಸಿನಲ್ಲಿ ಕಾವ್ಯ ರಚಿಸಿ, ಸಂಖ್ಯಾಬಂಧ ಬಿಡಿಸಿ ತನ್ನ ಭಾಷಾ ಪಾಂಡಿತ್ಯವನ್ನು ಮೆರೆಯಬೇಕು. ತಮ್ಮ ಪರಿಶ್ರಮ, ಅಪಾರವಾದ ಪ್ರತಿಭೆ ಮತ್ತು ಬಹು ಭಾಷಾ ಪಾಂಡಿತ್ಯದಿಂದ ಈ ಕಲೆಯನ್ನು ಉಳಿಸಿ-ಬೆಳೆಸಿದ ಕೀರ್ತಿ ಶ್ರೀ ಗಣೇಶ್ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮದಲ್ಲಿ ಶ್ರೀಯುತರು ತಮಗಿರುವ ಅಪಾರವಾದ ವಿಧ್ವತ್ತನ್ನು ಪ್ರದರ್ಶಿಸುವುದರೊಂದಿಗೆ ತಮ್ಮಲ್ಲಿರುವ ಏಕಾಗ್ರತೆ,ಸಮಯಸ್ಫೂರ್ತಿ,ಹಾಸ್ಯಪ್ರಙ್ಞೆ ಯನ್ನೂ ತೋರಿ ಪ್ರೇಕ್ಷಕರ ಗಮನ ಅತ್ತಿತ್ತ ಸುಳಿಯದಂತೆ ಮಾಡುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದ ಎಂಟು ವಿಭಾಗಗಳ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಕೊಡುವ ಚಿಕ್ಕ ಪ್ರಯತ್ನ ನನ್ನದು.


 ೧.ನಿಷೇಧಾಕ್ಷರಿ
ಈ ವಿಭಾಗದ ಪೃಚ್ಛಕರು, ಅವಧಾನಿಗಳಿಗೆ ಪದ್ಯದ ವಿಷಯ ಮತ್ತು ಛಂಧಸ್ಸನ್ನು ತಿಳಿಸಿ ಪದ್ಯ ರಚಿಸಲು ಸೂಚಿಸುತ್ತಾರೆ.ಅವಧಾನಿಗಳು ಪದ್ಯ ರಚನಾಮಗ್ನರಾಗಿ,ಪದ್ಯದ ಮೊದಲ ಪದದ ಮೊದಲ ಅಕ್ಷರವನ್ನು ಹೇಳಿದೊಡನೆಯೇ ಪೃಚ್ಛಕರು ಮುಂದಿನ ಅಕ್ಷರವನ್ನು ಊಹಿಸಿ ,ಆ ಅಕ್ಷರವನ್ನು ಬಳಸಕೂಡದೆಂದು ನಿಷೇಧ ಒಡ್ಡುತ್ತಾರೆ. ಈ ರೀತಿಯ ಅಕ್ಷರ ನಿಷೇಧ ಕಾವ್ಯ ಪೂರ್ಣಗೊಳ್ಳುವವರೆಗೂ ಮುಂದುವರೆಯುತ್ತದೆ.
  ಈ ಭಾಗದಲ್ಲಿ ಪೃಚ್ಛಕರಾದವರು ಶ್ರೀ ಡಾ|| ಪಿ. ಶಾಂತಾರಾಮಪ್ರಭು, ನಿಟ್ಟೂರು. ಇವರು ಅಂದಿನ ಅಷ್ಟಾವಧಾನಕ್ಕೆ ತೆಗೆದುಕೊಂಡ ಪ್ರಶ್ನೆ ವೃಶ್ಚಿಕ ಕುಟುಕುವುದಕ್ಕೂ, ಅವಧಾನದಲ್ಲಿ ಪೃಚ್ಛಕರು ಕೇಳುವ ಪ್ರಶ್ನೆಗಳಿಗೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತಂತೆ ಕಂದಪದ್ಯ ರಚಿಸಬೇಕು ಎಂಬುದು ಇವರ ನಿಬಂಧನೆಗಳಾಗಿದ್ದವು. ಅವಧಾನಿಗಳು ಕಾವ್ಯ ರಚನೆಗೆ ತೊಡಗಿ ಒಂದೊಂದು ಅಕ್ಷರ ಹೇಳಿದಂತೆ , ಮುಂದಿನ ಅಕ್ಷರ ಯಾವುದನ್ನು ಬಳಸಬಹುದೆಂಬ ಸುಳಿವನ್ನು ಪತ್ತೆ ಹಚ್ಚಿದ ಶಾಂತಾರಾಮಪ್ರಭುಗಳು,ಮುಂದಿನ ಅಕ್ಷರ ಯಾವುದಿರಬಾರದೆಂದು ನಿಷೇಧ ಹೇರುತ್ತಾ, ಸಾಹಿತ್ಯಾಸಕ್ತರಿಗೆ ಕುತೂಹಲ ಮೂಡುವಂತೆ ಮಾಡಿದರು. ಈ ವಿಭಾಗದಲ್ಲಿ ಅವಧಾನಿಗಳು ಮತ್ತು ಪೃಚ್ಛಕರಿಬ್ಬರೂ ಒಳ್ಳೆಯ ಪಟ್ಟುಗಳನ್ನು ಹಾಕಿ , ನಿಷೇಧಾಕ್ಷರಿ ಸ್ವಾರಸ್ಯಪೂರ್ಣವಾಗಿರುವಂತೆ ಮಾಡುವುದರಲ್ಲಿ  ಯಶಸ್ವಿಯಾದರು. ಎಷ್ಟೇ ಅಕ್ಷರಗಳ ನಿಷೇಧ ಹೇರಿದರೂ ಗಣೇಶ್ ಅವರು ತಮ್ಮ ಅಗಾಧವಾದ ಸಾಹಿತ್ಯಾನುಭವದಿಂದ ಲೀಲಾಜಾಲವಾಗಿ ಕಾವ್ಯವನ್ನು ರಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.ಅವಧಾನಿಗಳಿಂದ ರಚಿತವಾದ ಕಾವ್ಯ ಹೀಗಿತ್ತು.

ನವಲವಧಾನಕೆ ಕೇಳ್ಮೆವಿ
 ಭವಮೆನೆ  ನೀಂ ಬನ್ದಪಾಳಿ ಚೇಳಂತಕ್ಕುಂ
 ತಿವಿಯಲ್ ಮಾತಿಂ ಮುನ್ನಂ
 ಕವಿಯಲ್ ಕೊಂಡಿಯಿಂ ನಹೋರಸಂ ಮೇಣ್ ಸಲ್ಗುಂ

೨.ದತ್ತಪದಿ
 ಈ ವಿಭಾಗದಲ್ಲಿ ಪೃಚ್ಛಕರು ವಿಷಯ ಮತ್ತು ಛಂದಸ್ಸಿನೊಡನೆ ಕೆಲವು ಪದಗಳನ್ನು ನೀಡಿ ಅವು ಪದ್ಯದ ಯಾವುದೋ ಭಾಗದಲ್ಲಿ ಬರಬೇಕೆಂದು ಸೂಚಿಸುತ್ತಾರೆ.
 ಇಲ್ಲಿ ಪೃಚ್ಛಕರಾಗಿ ಭಾಗಿಗಳಾಗಿದ್ದವರು ಶ್ರೀ ಸಿ.ಎಸ್. ಚಂದ್ರಶೇಖರ್.ಇವರು ಅವಧಾನಿಗಳಿಗೆ ಲಲಿತರಗಳೆ, ದ್ವಿಪದಿಯಲ್ಲಿ ಪದ್ಯ ರಚಿಸುವಂತೆ ಆಹ್ವಾನವಿತ್ತರು.ಪ್ರಜಾಪರಿಪಾಲಕನಾದ ರಾಜ ದೈವಾನುಗ್ರಹಕ್ಕಾಗಿ ಬೇಡುವುದು ದತ್ತಪದಿಯ ವಸ್ತು. ಆದರೆ ಕಾವ್ಯದ ಮೊದಲ ಸಾಲಿನಲ್ಲಿ ’ಕಾರಂತ’ , ಎರಡನೆ ಸಾಲಿನಲ್ಲಿ ’ನಾಡಿಸೋಜ’, ಮೂರನೆ ಸಾಲಿನಲ್ಲಿ ’ಕುವೆಂಪು’  ಮತ್ತು ಕೊನೆಯ ಸಾಲಿನಲ್ಲಿ ’ಡಿವಿಜಿ’  ಬರಬೇಕೆಂಬುದು ಇವರ ನಿಬಂಧನೆ. ಈ ಕವಿಗಳ ಹೆಸರು ಬರುವಂತೆ ಅರ್ಥಭರಿತ ಕಾವ್ಯ ರಚಿಸಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತ್ತು.

ಸಿರಿ ಅಲಂಕಾರಂ ತ ಮಾಲನೀಲನೆ ನಿನಗೆ
 ಪರಮಾತ್ಮನೊಡನಾಡಿಸೋ ಜಗಜ್ಜನಕನಿಗೆ    
 ಸರಿಯು ಚಯಮನಂ ನೂಂಕುವೆಂ ಪುಣ್ಯದಿಂ ವೈರಿ
 ವಿರಚಿಸೈ ನೋಡಿ ವಿಜಿತಾದಿಯಪ್ಪಂತೆ ನಾಂ

  ಎಲ್ಲಾ  ನಿಬಂಧನೆಗಳನ್ನೂ ಒಳಗೊಂಡ ಸುಂದರವಾದ ಕಾವ್ಯ ಅವಧಾನಿಗಳಿಂದ ರಚಿತವಾದ ನಂತರ ಜನ ತಮ್ಮ ಅಭಿನಂದನೆಯನ್ನು ತಮ್ಮ ಕರತಾಡನದ ಮೂಲಕ ಸಲ್ಲಿಸಿದರು.

 ೩.ಸಮಸ್ಯೆ
 ಈ ವಿಭಾಗದಲ್ಲಿ ಛಂದೋಬದ್ಧವಾದ ಅಸಂಗತ ವಾಕ್ಯವೊಂದನ್ನು ಪೃಚ್ಛಕರು ನೀಡುವರು.ಅವಧಾನಿಗಳು ವಾಕ್ಯ ಸುಸಂಗತವಾಗುವಂತೆ ಅದೇ ಛಂದಸ್ಸಿನಲ್ಲಿ ಪದ್ಯ ರಚಿಸುತ್ತಾರೆ.
  ಇಲ್ಲಿ ಪೃಚ್ಛಕರಾಗಿದ್ದ ಶ್ರೀ ಡಾ|| ಸನತ್ಕುಮಾರ , ಮತ್ತೂರು ಇವರು ನೀಡಿದ ಅಸಂಗತ ವಾಕ್ಯ ಹೀಗಿತ್ತು.
   ಪತ್ನೀದಾಸಂ ವರಯತಿವರಂ ಶಂಕರಾರ್ಕ್ಕಂ ಕುಡಲ್ಕೆ
 ಎಲ್ಲಿಯ ಪತ್ನೀದಾಸ,ಎಲ್ಲಿಯ ವರಯತಿ, ಎಲ್ಲಿಯ ಶಂಕರ. ಆದರೂ ಅರ್ಥಪೂರ್ಣವಾದ ಪದ್ಯ ರಚಿಸುವಲ್ಲಿ ಅವಧಾನಿಗಳು ಯಶಸ್ವಿಯಾದರು.

ಯತ್ನೋಪಾಸ್ಯರ್  ಶ್ರುತಿ ಯುವತಿಯರ್ ಸರ್ವಥಾ ಸಾಧುಸತ್ವರ್
ಪ್ರತ್ನೋದಂತಂ ಪ್ರತಿತ ವಿಭವಂ ಕೇವಲಾಧ್ವೈತ ತತ್ವಂ
ಜಿತ್ನಂ ನಿಲ್ಗುಂ ಜಗದ ಹಿತಕಂ ನೋಂತಿರಲಕಿಂತು ತಾನಾ ಕಾಂತಾದಾಸಂ

೪. ನ್ಯಸ್ತಾಕ್ಷರಿ
  ಪದ್ಯದ ನಿರ್ಧಿಷ್ಟ  ಸಾಲು ಹಾಗೂ ಸ್ಥಾನಗಳಲ್ಲಿ ಪೃಚ್ಛಕರು ಸೂಚಿಸುವ ಅಕ್ಷರಗಳೇ ಬರುವಂತೆ , ಕೇಳಿದ ಛಂದಸ್ಸಿನಲ್ಲಿ ,ಅಪೇಕ್ಷಿಸುವ ವಿಷಯದ ಬಗ್ಗೆ ಅವಧಾನಿಗಳು ಪದ್ಯ ರಚಿಸಬೇನ್ನುವ ನಿಬಂಧನೆಗೆ  ನ್ಯಸ್ತಾಕ್ಷರಿ ಎನ್ನುವರು.
 ಈ ವಿಭಾಗದಲ್ಲಿ ಅನುಭವಿ ಅವಧಾನಿಗಳಿಗೆ ಪ್ರಶ್ನೆ ಹಾಕಿದ ಪೃಚ್ಛಕರು ಒಬ್ಬ ಸಾಫ್ಟ್ವೇರ್  ಇಂಜಿನಿಯರ್, ಯುವಕ ಶ್ರೀ ಹೆಚ್.ಆರ್.ಶ್ರೀಶ ಎಂಬುದು ವಿಶೇಷವಾಗಿತ್ತು. ಈ ಹುಡುಗನ ಕನ್ನಡ ಸಾಹಿತ್ಯಾಸಕ್ತಿಗೆ ಭಲೇ ಎನ್ನಲೇಬೇಕು. ಇಂದಿನ ರಾಜಕೀಯದಿಂದಾಗಿ ಉಂಟಾಗಿರುವ ಜನರ ದುಸ್ಥಿತಿ ಯನ್ನು ಭಾಮಿನಿ ಷಟ್ಪದಿಯಲ್ಲಿ, ಕನ್ನಡೀಂಗ್ಲೀಷ್ ಪದಗಳನ್ನೊಳಗೊಂಡ ಪದ್ಯದಲ್ಲಿ ಹೇಳಬೇಕೆಂಬುದು ಪೃಚ್ಛಕರ ಪ್ರಶ್ನೆಯಾಗಿತ್ತು. ಇದಲ್ಲದೆ, ಒಂದನೇ ಸಾಲಿನ ಎರಡನೆ ಅಕ್ಷರ ’ನ್ದ’ , ಮೂರನೇ ಸಾಲಿನ  ಆರನೆ ಅಕ್ಷರ ’ಗ್ರಾ’ ,ನಾಲ್ಕನೇ ಸಾಲಿನ ನಾಲ್ಕನೆ ಅಕ್ಷರ ’ಡ್ರ’ ಮತ್ತು ಐದನೇ ಸಾಲಿನ ಐದನೆ ಅಕ್ಷರ  ’ಪ್ಪು’ ಆಗಿರಬೇಕೆಂಬ ನಿಬಂಧನೆಯನ್ನೂ ಇಟ್ಟಿದ್ದರು. ಇದಕ್ಕೆ ಶತಾವಧಾನಿ ಗಣೇಶ್ ರವರು ರಚಿಸಿದ ಪದ್ಯ ಹೀಗಿತ್ತು.

ನ್ದನಂದನ ಕುಲದವೋಲೀ
 ಕಂದು ಕಪೃತಿಯಂದದಿ ಚಕ್ಕಂದವಾ
 ಟವನಡೆಸಿ ಗ್ರಾಮಲೀಲೆಯ ಸಾಗಿಸುವ ವಿಭುಗಳ್
 ಬಂದು ಸ್ಕ್ರೂಡ್ರೈವರ್ಗಳಂದದಿ
 ಕೊಂದಿರಲ್ಕಪ್ಪುಗಳು  ಡೌನುಗಳು
 ಬಂದುವೀಗಣತಂತ್ರಕೆನ್ನುವೆ ಮರ್ಸಿಲೆಸ್ಸ್

೫. ಆಶುಕವಿತ್ವ
  ಪೃಚ್ಛಕರು ಬಯಸುವ ವಿಷಯದ ಬಗ್ಗೆ , ಬಯಸುವ ಛಂದಸ್ಸಿನಲ್ಲಿ ಆ ಕ್ಷಣದಲ್ಲಿಯೇ ಪೂರ್ಣ ಪದ್ಯವನ್ನು ರಚಿಸುವುದು ಆಶುಕವಿತ್ವ.
 ಈ ವಿಭಾಗದಲ್ಲಿ ನಮಗೆಲ್ಲರಿಗೂ ಚಿರಪರಿಚಿತರಾದ ಕಗ್ಗ ನಟೇಶ್ ಅವರು ಪೃಚ್ಛಕರಾಗಿದ್ದರು.ಇವರು ಆಶುಕವಿತೆಗಳನ್ನು ಕಟ್ಟಲು ಅವಧಾನಿಗಳಿಗೆ ವಿಷಯವನ್ನು ನೀಡಿದರು.
 ಮೊದಲನೆಯದಾಗಿ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡಾಭಿಮಾನ ಮೆರೆದರೆ ಸಾಕೆ ಎಂಬ ವಿಷಯವನ್ನಿಟ್ಟುಕೊಂಡು ಕಂದಪದ್ಯದಲ್ಲಿ ಕವಿತೆ ರಚಿಸಲು ಕೇಳಿಕೊಂಡರು.
  ಎರಡನೆಯದು ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ರಾಮರಾಜ್ಯದ ಪ್ರಸ್ತಾಪವಿರುವ ಪದ್ಯ ರಚನೆ.
 ಮೂರನೆಯದು ಅನಧೀಕೃತ ದೇವಸ್ಥಾನಗಳಿಗಿರುವ ಆತಂಕ ಬಾರ್ ಗಳಿಗಿಲ್ಲದಿರುವ ವಿಷಯದ ಮೇಲೆ ಕುಸುಮ ಷಟ್ಪದಿಯಲ್ಲಿ ಆಶುಕವಿತೆ ರಚಿಸಲು ಕೇಳಿಕೊಂಡರು. ಈ ಭಾಗದಲ್ಲಿ ಸೊಗಸಾದ ಕವಿತೆಗಳು ಮೂಡಿಬಂದವು. ಅವಧಾನಿಗಳು ಈ ಮೂರು ಕವಿತೆಗಳನ್ನು ಪಟಾಪಟ್ ಎಂದು ಹೇಳಿ ಮುಗಿಸಿದ್ದರಿಂದ ನನಗೆ ಆ ಪದ್ಯಗಳನ್ನು ಸರಿಯಾಗಿ ಬರೆದುಕೊಳ್ಳಲು ಸಾಧ್ಯವಾಗಲಿಲ್ಲ.
  ಒಂದೇ ಒಂದು ಕವಿತೆಯನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಅದು ಪರಿವರ್ಧಿನಿ ಷಟ್ಪದಿಯಲ್ಲಿ ರಚಿಸಿದ ಸ್ತ್ರೀ ಪ್ರಧಾನವೋ ಪುರುಷ ಪ್ರಧಾನವೋ ಎಂಬ ವಿಷಯಕ್ಕೆ ಸಂಬಂಧಪಟ್ಟದ್ದು. 

ಮುಡಿಯೊಳ್ ಮಾನಿನಿ ಮೆರೆವಳ್ ಶಿವನಾ
 ಜಡಜತೆವರಿಗೊ ಮುಖದೊಳ್ ಮಡದಿಯೊ
 ಪಡಿಮೂಡಿಹಳಾ ಸಿರಿ ನಾರಾಯಣನೆದೆಯೊಳಗೆ
 ಸಡಗರ ಪಡುವೆಂ ಸಕಲವೌವ್ಯಕ್ತಿಯೆ
 ತೊಡಗುವುದು ನಾರಿಯ ರೂಪಿಂದ
 ನುಡಿಯೆ ಸಾಕ್ಷಿಗಢಂ ನನ್ನೀ ಪರಿ ತಿಳಿಯೆ ನೀನು ನಟೇಶಾ...

೬. ಕಾವ್ಯವಾಚನ
 ಈ ಭಾಗದ ಪೃಚ್ಛಕರು ಪ್ರಸಿದ್ಧವಾದ ಪ್ರಾಚೀನ ಕಾವ್ಯವೊಂದರ ರಸವತ್ತಾದ ಘಟ್ಟಗಳನ್ನು ಓದಿ ಮುಗಿಸುತ್ತಿದ್ದಂತೆಯೇ ಅವಧಾನಿಗಳು , ಆ ಕಾವ್ಯವನ್ನು ಯಾವ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ ಮತ್ತು ಕವಿಯ ಹೆಸರು ತಿಳಿಸಿ ಪದ್ಯ ಭಾಗದ ತಾತ್ಪರ್ಯವನ್ನು ಸಂದರ್ಭ ಸಹಿತವಾಗಿ ವಿವರಿಸುತ್ತಾರೆ.
 ಕಾವ್ಯವಾಚನದ ವಿಭಾಗದಲ್ಲಿ ಪೃಚ್ಛಕರಾಗಿದ್ದವರು ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ. ಇವರ ಗಾಯನವನ್ನು ಮರೆಯುವಂತೆಯೇ ಇಲ್ಲ. ತುಂಬು ಮಾಧುರ್ಯದ ಕಂಠದಿಂದ , ಭಾವನೆಗಳನ್ನು ಪದಗಳಲ್ಲಿ ತುಂಬಿ ಕಾವ್ಯವಾಚಿಸುತ್ತಿದ್ದರೆ , ನಮ್ಮಂತಹ ಸಾಮಾನ್ಯರಿಗೂ ಕೂಡ  ವ್ಯಾಖ್ಯಾನದ ಅಗತ್ಯವೇ ಇಲ್ಲದೆ ಕಾವ್ಯ ಅರ್ಥವಾಗುತ್ತಿತ್ತು. ಶ್ರೀಯುತರು ಈ ದಿನದ ಅಷ್ಟಾವಧಾನಕ್ಕಾಗಿ ಕುವೆಂಪು ವಿರಚಿತ ’ಶ್ರೀ ರಾಮಾಯಣ ದರ್ಶನಂ’ , ನಾಗವರ್ಮನ ’ ಕರ್ನಾಟಕ ಕಾದಂಬರಿ’ ಮತ್ತು ಕುಮಾರವ್ಯಾಸ ಭಾರತದ  ಕಾವ್ಯಗಳನ್ನೇ ಅಲ್ಲದೇ ಡಿವಿಜಿ ಅವರ ’ಅಂತಃ ಪುರ ಗೀತೆ’ ಯಿಂದಲೂ ಪದ್ಯ ಭಾಗವನ್ನು ತೆಗೆದುಕೊಂಡು ಸುಶ್ರಾವ್ಯವಾಗಿ ವಾಚಿಸಿದ್ದು ವಿಶೇಷವಾಗಿತ್ತು.

 ೭.ಸಂಖ್ಯಾಬಂಧ
 ಪೃಚ್ಛಕರು ಅವಧಾನ ಪ್ರಾರಂಭಕ್ಕೆ ಒಂದು ಸಂಖ್ಯೆಯನ್ನು ತಿಳಿಸುತ್ತಾರೆ.ಐದೈದು ಸಾಲುಗಳ ಇಪ್ಪತೈದು ಮನೆಗಳಲ್ಲಿ ,ಒಂದೊಂದುಮನೆಯಲ್ಲಿ ಇರಬೇಕಾದ ಸಂಖ್ಯೆಯನ್ನು ಅವಧಾನಿಗಳು ಪದ್ಯ ರಚನೆಯಲ್ಲಿ ತೊಡಗಿದ್ದಾಗ ಪೃಚ್ಛಕರು ಕೇಳುತ್ತಾರೆ. ಕೊನೆಯಲ್ಲಿ ಯಾವುದೇ ಸಾಲಿನಿಂದ ಕೂಡಿದರೂ ಮೊತ್ತ ಮೊದಲು ತಿಳಿಸಿದ ಸಂಖ್ಯೆಯಾಗಿರುತ್ತದೆ.
 ಈ ವಿಭಾಗದಲ್ಲಿ ಶ್ರೀ ಎನ್.ಬಿ.ರವೀಶ್, ಶಿವಮೊಗ್ಗ ಇವರು ಅವಧಾನಿಗಳಿಗೆ ಹೇಗೆ ಕೂಡಿದರೂ ೮೧೭ ಬರುವಂತೆ ಸಂಖ್ಯಾಬಂಧವನ್ನು ಪೂರ್ಣಗೊಳಿಸುವಂತೆ ಪ್ರಶ್ನೆಯನ್ನಿಟ್ಟರು.ಅವಧಾನಿಗಳು ಕಾವ್ಯ ರಚನೆಯಲ್ಲಿ ಮಗ್ನರಾಗಿದ್ದಾಗ ,ಅವರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡು ಒಂದೊಂದೇ ಮನೆಯ ಸಂಖ್ಯೆ ತಿಳಿಸಲು ಕಾಡುತ್ತಿದ್ದರು.ಆದರೆ ಅವಧಾನಿಗಳು ಮಾತ್ರ ಸ್ವಲ್ಪವೂ ವಿಚಲಿತರಾಗದೆ ನಗುನಗುತ್ತಲೇ ಸಂಖ್ಯೆಗಳನ್ನು ನೀಡಿ ತಮ್ಮ ಕಾವ್ಯ ರಚನೆಯನ್ನು ಮುಂದುವರೆಸುತ್ತಿದ್ದುದು ಅಚ್ಚರಿಯನ್ನುಂಟುಮಾಡುತ್ತಿತ್ತು.

೮.ಅಪ್ರಸ್ತುತ ಪ್ರಸಂಗ
 ಅಷ್ಟಾವಧಾನವು ಗಂಭೀರವಾಗಿ ನಡೆಯುತ್ತಿರುವಾಗ ಮಧ್ಯೆ ಮಧ್ಯೆ ಏನೇನೋ ಪ್ರಶ್ನೆಗಳನ್ನು ಕೇಳಿ , ಅವಧಾನಿಗಳ ಚಿತ್ತವನ್ನು ಅತ್ತಿತ್ತ ಹೋಗುವಂತೆ ಮಾಡುವುದು ಮತ್ತು ಅವರ ಏಕಾಗ್ರತೆಗೆ ಭಂಗ ತರುವುದು ಈ ಭಾಗದ ಪೃಚ್ಛಕರ ಕೆಲಸ. ಈ ವಿಭಾಗದಲ್ಲಿ ನಮಗೆಲ್ಲರಿಗೂ ಪರಿಚಿತರಾದ ಡಾ|| ಗಜಾನನ ಶರ್ಮ, ಬೆಂಗಳೂರು ಇವರು ಪೃಚ್ಛಕರಾಗಿದ್ದರು.ಇಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಕೇಳಬೇಕೆಂಬ ಕಟ್ಟುಪಾಡುಗಳಿಲ್ಲ. ರಂಜನೆಗಾಗಿ ಯಾವ ನಿಯಮವೂ ಇಲ್ಲದೆ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ಯಾವಾಗ ಬೇಕಾದರೂ ಕೇಳಬಹುದು.ಅವಧಾನಿಗಳು ಗಂಭೀರವಾಗಿ ಇತರ ಪಚ್ಛಕರು ಕೊಟ್ಟ ಪದ್ಯದ ಸಾಲುಗಳನ್ನು ಬಿಡಿಸುತ್ತಿದ್ದಾಗ ಇವರ ಪ್ರಶ್ನೆಗಳು ನಮಗೆ ಅಪ್ರಸ್ತುತ ಎನ್ನಿಸುತ್ತವೆ. ಆದರೆ ಅವಧಾನಿಗಳು ಮಾತ್ರ ನಗುನಗುತ್ತಲೇ ಇವರ ಪ್ರಶ್ನೆಗಳಿಗೆಲ್ಲಾ ಮೊನಚಾದ,ಹಾಸ್ಯದ ಉತ್ತರಗಳನ್ನು ನೀಡುತ್ತಾ , ಪ್ರೇಕ್ಷಕರನ್ನು ನಗಿಸಿ,ವಾತಾವರಣದ ಗಂಭೀರತೆಯನ್ನು ಸ್ವಲ್ಪ ಕಾಲ ಮರೆಸಿ, ನಮ್ಮ ಮನ ಮತ್ತೆ ಅಷ್ಟಾವಧಾನದಲ್ಲಿ  ಮುಳುಗುವಂತೆ ಮಾಡುತ್ತಿದ್ದರು. ಪ್ರಾರಂಭದಿಂದ ಮುಗಿಯುವವರೆಗೆ ಸುಮಾರು ಮುವತ್ತು ಮುವತೈದು ಪ್ರಶ್ನೆಗಳನ್ನು ಕೇಳಿರಬಹುದು. ಅವುಗಳಲ್ಲಿ ಶರ್ಮ ರವರ ಬತ್ತಳಿಕೆಯಿಂದ ಬಂದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವಧಾನಿಗಳಿಂದ ಬಂದ ಮೊನಚು ಉತ್ತರಗಳನ್ನಿಲ್ಲಿ ನೋಡೋಣ.   
 ೧. ರಾವಣನಂತೆ ನಿಮಗೆ ಹತ್ತು ತಲೆ ಇದ್ದಿದ್ದರೆ?
     ಅವಧಾನಿಯಾಗುತ್ತಿರಲಿಲ್ಲ, ಅವಮಾನಿಯಾಗುತ್ತಿದ್ದೆ  ಎಂಬ ಮೊನಚಾದ ಉತ್ತರ ಬಂತು
 ೨. ಭಾರತದಲ್ಲಿ ಹೆರಿಗೆ-ತೆರಿಗೆ ಎರಡೂ ಹೆಚ್ಚು ಅಂತಾರೆ ಸರಿಯೇ?
      ಹೌದು,ಕೆಲವರಿಗೆ ಹೆರಿಗೆ ಹೆಚ್ಚು, ಇನ್ನು ಕೆಲವರಿಗೆ ತೆರಿಗೆ ಹೆಚ್ಚು. ಅಷ್ಟೇ.
 ೩. ಮನುಷ್ಯ ಎಷ್ಟಾದರೂ ಅಂಗಿಗಳನ್ನು ಇಟ್ಕೋಬಹುದಾ?
      ಇಟ್ಕೋಬಹುದು ಆದ್ರೆ ಅರ್ಧಾಂಗಿಯರನ್ನಲ್ಲ.
 ೪. ನಿಮ್ಮನ್ಯಾಕೆ ನಿತ್ಯಾನಂದ ಅಂತಾ ಕರೀಬಾರದು?
       ಸಾಧ್ಯವಿಲ್ಲ. ನಿತ್ಯಾನಂದನಿಗೆ ಆಶ್ರಮವಿದೆ, ಆದರೆ ನನಗೆ ಬರೀ ಶ್ರಮವಿದೆ.
 ೫. ಅಗ್ನಿದೇವ ಹೇಗೆ ಸ್ನಾನ ಮಾಡುತ್ತಾನೆ?
      ಅವನು Oil Bath  ತಗೋಳ್ತಾನೆ.
 ೬. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಗಾದೆ ಈಗ out dated ಅನ್ಸುತ್ತೆ. ಯಾಕೆಂದ್ರೆ ಗ್ಯಾಸ್ ಒಲೆಗೆ    
    ತೂತು ಇರಲೇಬೇಕಲ್ಲ?
       ಇರಬಹುದು. ಆದರೆ ಗ್ಯಾಸ್ ಟ್ಯೂಬಲ್ಲಿ ಸಣ್ಣ ತೂತಾದರೂ ಒಲೆ ಮಾತ್ರವಲ್ಲ ಮನೆಯನ್ನೇ ಕೆಡಿಸುತ್ತದೆ.
 ೭. ಗಗನವು ಎಲ್ಲೋ ಭೂಮಿಯು ಎಲ್ಲೋ- ಗೀತೆ ರಚಿಸಿದವರಿಗೆ ಜಾಂಡೀಸ್ ಇತ್ತಾ?
     ಇರಬಹುದು, ಅವರಿಗೆ ಕಾವ್ಯದ ಕಾಮಾಲೆ ಆವರಿಸಿತ್ತು.ಇಲ್ಲದಿದ್ದರೆ ಅಷ್ಟೊಂದು ಅರ್ಥವತ್ತಾದ ಗೀತೆ ರಚಿಸಲು 
     ಸಾಧ್ಯವಿತ್ತೇ? ಚಲನಚಿತ್ರ ಗೀತೆಗಳಲ್ಲೂ ಉತ್ತಮವಾದವುಗಳಿದ್ದಾವೆ ಎಂದು ಕೆಲವು  ಚಿತ್ರಗೀತೆಗಳನ್ನು
     ಉಲ್ಲೇಖಿಸಿದರು.
 ೮. ಎಳೆದಷ್ಟೂ ಗಿಡ್ಡ ಆಗುವುದು ಯಾವುದು?
     ಅವಧಾನಿಗಳು ಹೆಂಗಸರ ಸೆರಗಿರಬಹುದು ಅಂದ್ರು .ಆದರೆ ಶರ್ಮ ಗಂಡಸರ ಬೀಡಿ ಎಂದರು.ಏನೋ ಎರಡರ
     ಅನುಭವವೂ ನನಗಿಲ್ಲ ಎಂದ ಅವಧಾನಿಗಳ ಮಾತಿನಿಂದ ಸಭೆ ನಗೆಗಡಲಿನಲ್ಲಿ ಮುಳುಗಿತು.

  ಹೀಗೆ ಗಣೇಶ್ ರವರು ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ,ಎಲ್ಲಾ ಎಂಟು ಪೃಚ್ಛಕರ ಪ್ರಶ್ನೆಗಳಿಗೆ ಸಮಂಜಸ   ಉತ್ತರಗಳನ್ನು ತಮ್ಮ ಪಾಂಡಿತ್ಯದಿಂದ ನೀಡಿ ಅಂದಿನ ಆಷ್ಟಾವಧಾನ ಕಾರ್ಯಕ್ರಮಕ್ಕೆ ಯಶಸ್ವೀ ತೆರೆ ಎಳೆದರು.    

 (ವಿ.ಸೂ : ಕಾರ್ಯಕ್ರಮ ನಡೆಯುತ್ತಿರುವಾಗ ಶ್ರೀ ಗಣೇಶ್ ರವರು ಕಾವ್ಯಗಳನ್ನು ಕೇವಲ ಬಾಯಲ್ಲಿ ಹೇಳಿದ್ದನ್ನು, ನಾನು ನನಗೆ ಕೇಳಿಸಿದಮಟ್ಟಿಗೆ  ಮತ್ತು ನನಗೆ ತಿಳಿದಮಟ್ಟಿಗೆ  ಬರೆದುಕೊಂಡಿದ್ದೇನೆ. ಕಾವ್ಯದ ಛಂದಸ್ಸಿನಲ್ಲಿ ತಪ್ಪುಗಳಿದ್ದರೆ ಅದು ನನ್ನ ಗಮನಿಸುವಿಕೆಯಲ್ಲಾದ ತಪ್ಪೆಂದು ತಿಳಿಯಬೇಕೆಂದು ಕೋರಿಕೆ. ಕಾರ್ಯಕ್ರಮದ ಒಟ್ಟಂದವನ್ನು ಇಲ್ಲಿ ಹಂಚಿಕೊಳ್ಳಬೇಕೆಂಬ  ತವಕ  ನನ್ನ ಈ ಬರವಣಿಗೆಗೆ ಸ್ಪೂರ್ತಿ. )