ವಿದೇಶ ವಿಹಾರ- 7 - Indian Cultural Festival In Australia

                    (ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ನನ್ನ ಮಗಳು-ಅಳಿಯ ಇರುವ ಟೌನ್ಸ್ವಿಲ್ ನಲ್ಲಿ ವಾಸಿಸುವ ಭಾರತೀಯರೆಲ್ಲ ಒಟ್ಟು ಸೇರಿ ಇಂಡಿಯನ್ ಸೊಸೈಟಿಯನ್ನು ಹುಟ್ಟುಹಾಕಿದ್ದಾರೆ.ಇವರೆಲ್ಲ ವೀಕೆಂಡಿನಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಒಂದೆಡೆ ಸೇರುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಗೌರಿ-ಗಣಪತಿ, ದೀಪಾವಳಿ, ವರಮಹಾಲಕ್ಷ್ಮಿ ಮುಂತಾದ ಹಬ್ಬಗಳನ್ನು ಒಂದೆಡೆ ಸೇರಿ ಆಚರಿಸುತ್ತಾರೆ.ನಮ್ಮ ನಾಡ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಪೂಜೆಯೆಲ್ಲಾ
ಸಾಂಗವಾಗಿ ನೆರವೇರಿದ ನಂತರ ಪ್ರತಿಯೊಬ್ಬರೂ ಮಾಡಿ ತಂದ ಬಗೆಬಗೆಯ ಅಡಿಗೆಯ ರುಚಿಯನ್ನು ಎಲ್ಲರೂ ಸವಿಯುತ್ತಾ ,ಕಲೆತು ಮಾತನಾಡುತ್ತಾ ಹಬ್ಬದ ಸುಖವನ್ನು ಅನುಭವಿಸುವ ಪರಿ ಅನನ್ಯವೆನಿಸಿತು.  ವರ್ಷಕ್ಕೊಮ್ಮೆನಮ್ಮ ಮಹಾನ್ ಸಂಸ್ಕೃತಿಯನ್ನು ಬಿಂಬಿಸುವ ಇಂಡಿಯನ್ ಕಲ್ಚರಲ್ ಫೆಸ್ಟಿವಲ್ ನಡೆಸಿಕೊಂಡು ಬಂದಿದ್ದಾರೆ.

ನಾರ್ತ್ ಕ್ವೀನ್ಸ್ ಲ್ಯಾಂಡ್ ಹಿಂದೂ ಕಮ್ಯುನಿಟಿ ಯವರು ಪ್ರಸ್ತುತ ಪಡಿಸಿದ ’ಅರ್ಪಣ್ - ಒಂದು ಕೊಡುಗೆ" ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನಮಗೆ ಅಲ್ಲಿದ್ದಾಗ ದೊರಕಿತು. ಇಲ್ಲಿರುವ ನಮ್ಮ ಭಾರತೀಯರು ವರ್ಷಕ್ಕೊಮ್ಮೆ ’ಇಂಡಿಯನ್ ಕಲ್ಚರಲ್ ಫೆಸ್ಟಿವಲ್’ ಅನ್ನು ಆಚರಿಸುತ್ತಾರೆ.ಬೇರೆ ದೇಶದಲ್ಲಿದ್ದರೂ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿ-ಬೆಳೆಸುವುದೇ ಅಲ್ಲದೆ ವಿದೇಶಿಯರಿಗೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸಬೇಕೆಂಬ ತುಡಿತವನ್ನು ನಾವಿಲ್ಲಿ ಕಾಣಬಹುದು.
ಪ್ರತಿ ದಿನ ತಮ್ಮ ಅನುಕೂಲಕ್ಕಾಗಿ ಬಗೆಬಗೆಯ ಉಡುಗೆಗಳನ್ನು ಧರಿಸುವ ನಮ್ಮ ಹೆಣ್ಣುಮಕ್ಕಳು ಇಂದು ಸೀರೆಯನ್ನು ಮತ್ತು ಗಂಡಸರು ಕುರ್ತಾ ಧರಿಸಿ ಈ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಓಡಾಡುವುದು ಕಂಡುಬಂದಿತು.ಇಲ್ಲಿಗೆ ಆಗಮಿಸಿದವರಿಗೆಲ್ಲಾ, ವಿದೇಶಿಯರಿಗೂ ಸಹ ಹಣೆಗೆ ತಿಲಕವನ್ನಿಟ್ಟು ಆರತಿ ಬೆಳಗಿ ಬರಮಾಡಿಕೊಂಡುದು ನಮ್ಮ ಪರಂಪರೆಯನ್ನು ಬಿಂಬಿಸುತ್ತಿತ್ತು.









ಪ್ರತಿಯೊಂದು ಟೇಬಲ್ಲಿನ ಮೇಲೂ ತಮ್ಮ ಕೈಯಾರೆ ತಯಾರಿಸಿದ ಸುಂದರ ಹೂವಿನ ಬೊಕ್ಕೆಗಳ ಅಲಂಕಾರ ಮನಸೆಳೆಯುವಂತಿತ್ತು.ಎಲ್ಲಾ ಮೇಜುಗಳಿಗೂ ನಂಬರುಗಳನ್ನು ಹಾಕಿ,ಆ ದಿನದ ಕಾರ್ಯಕ್ರಮದ ಪಟ್ಟಿ, ನೀರಿನ ಬಾಟಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು.ಲಘು ಉಪಹಾರ ಮತ್ತು ತಂಪು ಪಾನೀಯದ ನಂತರ ಆ ಸಂಜೆಯ ಕಾರ್ಯಕ್ರಮಗಳು ಪ್ರಾರಂಭವಾಯಿತು.
 ಇಂಡಿಯಾದಿಂದ ತರಿಸಲಾದ ಅಮೂಲ್ಯವಾದ ಕರಕುಶಲ ವಸ್ತುಗಳ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನೂ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮ ನಡೆಯುವ ವೇದಿಕೆಯು ನಮ್ಮ ಭಾರತೀಯತೆಯ ಧ್ಯೋತಕವಾಗಿತ್ತು.ಗಣ್ಯರಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸ್ವಾಗತದ ಬಳಿಕ ಹಿಂದೂ ಕಮ್ಯುನಿಟಿಯ ಅಧ್ಯಕ್ಷರಾದ ಶ್ರ‍ೀ ಶಶಿಧರ್ ಅವರಿಂದ ಪ್ರಾಸ್ತಾವಿಕ ನುಡಿಗಳೊಂದಿಗೆ ಕಲಾಪ ಮುಂದುವರೆಯಿತು.ಭಾರತೀಯ ಸಂಗೀತದ ಬಗ್ಗೆ ಪರಿಚಯಿಸುವುದು ಅಂದಿನ ಮುಖ್ಯ ಉದ್ದೇಶ.








ನಿರೂಪಣೆಯಲ್ಲಿ ನಮ್ಮ ದೇಶದ ಶ್ರೀಮಂತಿಕೆಯನ್ನು ಸಾರುವ ಗಾಯನ-ವಾದ್ಯ ಸಂಗೀತ-ನಾಟ್ಯ ಕಲೆಗಳು ಬೆಳೆದು ಬಂದ ದಾರಿ,ಸಂಗೀತ ಸರಸ್ವತಿಯ ಸೇವೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟ ವಿದ್ವಾಂಸರುಗಳ ನೆನಪುಗಳನ್ನು ಮಿತೇಶ್ ಮತ್ತು ರಿಚಾ ಮಾಡಿಕೊಟ್ಟರು. ಜೊತೆಗೆ ಇದಕ್ಕೆ ಪೂರಕವಾದ ವೀಡಿಯೋಗಳನ್ನು ತೋರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರಿನವರಾದ ಈಗ ಸಿಡ್ನಿಯಲ್ಲಿ ನೆಲೆಸಿರುವ ಶ್ರ‍ೀಮತಿ ನಿಖಿಲ ಕಿರಣ್ ಮತ್ತು ಇವರ ಶಿಷ್ಯೆಯಾದ ಪ್ರಿಯಾದತ್ ಇವರಿಂದ ನೃತ್ಯದ ಜೊತೆಗೆ ಟೌನ್ಸ್ ವಿಲ್ ನಲ್ಲಿ ಕರ್ನಾಟಕ ಸಂಗೀತಪಾಠವನ್ನು ಕಲಿಸುತ್ತಿರುವ ಶ್ರೀಮತಿ ನಿತಾ ಫ್ರಾನ್ಸಿಸ್ ರವರಿಂದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ನಿಖಿಲ ಮತ್ತು ಪ್ರಿಯಾರವರು ಗಣೇಶ ಸ್ತುತಿ,ಶಿವ ಪಂಚಾಕ್ಷರಿ ಶ್ಲೋಕಂ,ಜತಿಸ್ವರಂ,ಶೃಂಗಾರ ಲಹರಿ,ಶ್ರೀರಾಮಚಂದ್ರ ಕೃಪಾಳು ಭಜಮನ  ಮುಂತಾದ ರಸವತ್ತಾದ ಭಾಗಗಳನ್ನು ತಮ್ಮ ಮನಸೆಳೆಯುವ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.ನಿಖಿಲ ಕಿರಣ್ ರವರು ಕನ್ನಡ ಮತ್ತು ಸಂಸ್ಕೃತದ ಶ್ಲೋಕಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ವಿಶೇಷವೆನಿಸಿತು.ತಮ್ಮ ವೈವಿಧ್ಯವಾದ ಭಾವಾಭಿನಯದಿಂದ ಇವರಿಬ್ಬರೂ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದರು.

ಇಂಡಿಯಾದಿಂದ ತರಿಸಲಾದ ಅತ್ಯುತ್ತಮ ಕಲಾಕೃತಿಗಳನ್ನು ಹರಾಜು  ಮಾಡಲಾಯಿತು. ಇದರಲ್ಲಿ ಆಸ್ಟ್ರ‍ೇಲಿಯನ್ಸ್ ಉತ್ಸಾಹದಿಂದ ಭಾಗವಹಿಸಿ ಅವುಗಳನ್ನು ಉತ್ತಮ ಡಾಲರಿಗೆ ಕೊಂಡುಕೊಂಡು ನಮ್ಮ ಕಲೆಯ ಬಗ್ಗೆ ತಮಗಿರುವ ಗೌರವವನ್ನು ಪ್ರದರ್ಶಿಸಿದರು.ಈ ರೀತಿಯ ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ಅಲ್ಲಿ ದೇವಾಲಯವನ್ನು ಕಟ್ಟಲು ಉಪಯೋಗಿಸುವ ಆಶಯವನ್ನು ಹಿಂದೂ ಕಮ್ಯುನಿಟಿಯವರು ವ್ಯಕ್ತಪಡಿಸಿದರು. ಆಸ್ಟ್ರೇಲಿಯನ್ನರು ಈ ಎಲ್ಲಾ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ವೀಕ್ಷಿಸಿ ನಮ್ಮ ಮೆಚ್ಚುಗೆಗೆ ಪಾತ್ರರಾದರು.


 ಮುಖ್ಯ ಅತಿಥಿಗಳ ಮೇಜಿನ ಬಳಿಯೇ ಹೋಗಿ ವಂದನಾರ್ಪಣೆಯನ್ನು ಮಾಡಿದುದು ವಿನೂತನವಾಗಿತ್ತು. ಅಂತಿಮವಾಗಿ ರಮಾ ಆಂಟಿಯವರ ನೇತೃತ್ವದಲ್ಲಿ ತಯಾರಿಸಲಾದ ರುಚಿಕಟ್ಟಾದ ಭಾರತೀಯ ಸಂಪ್ರದಾಯದ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಯುವಕ-ಯುವತಿಯರು ಉತ್ಸಾಹದಿಂದ ಭಾಗವಹಿಸಿ,ತಮ್ಮ ಮನೆಯಲ್ಲಿ ಸಮಾರಂಭ ಮಾಡಿದ ಸಂತಸವನ್ನು ಪಡೆದರಲ್ಲದೆ ನಮ್ಮ ದೇಶದಿಂದ ದೂರವಿದ್ದೇವೆಂಬ ಬೇಸರವನ್ನು ಪರಿಹರಿಸಿಕೊಂಡರು ಎಂದು ಹೇಳುವ ಅವಶ್ಯಕತೆಯಿಲ್ಲ.
ನಮಗೆ ಕೂಡ ಈ ಕಾರ್ಯಕ್ರಮಗಳು ತೃಪ್ತಿಯನ್ನು ನೀಡಿದವು.ನಾವು ಎಲ್ಲೇ ಇದ್ದರೂ ನಮ್ಮ ದೇಶ, ನಮ್ಮ ಭಾಷೆ, ನಮ್ಮ ಜನರೊಂದಿಗೆ ಬೆರೆತಾಗ ಸಿಗುವ ಆನಂದಕ್ಕೆ ಮಿಗಿಲಾದದ್ದು ಬೇರೆ ಉಂಟೆ .... ?! ಈ ಸದವಕಾಶಗಳನ್ನು ನಮ್ಮದಾಗಿಸಿಕೊಳ್ಳುವ ಮನಸ್ಸಿದ್ದರೆ ಸಾಕು. ನಾವು ಎಲ್ಲಿದ್ದರೆ ಏನು ಎನ್ನುವ ಭಾವ ನನಗಾಯಿತು.ಕುವೆಂಪುರವರ "ಎಲ್ಲಾದರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು" ನುಡಿಯನ್ನು ಮನ ಸ್ಮರಿಸಿತು.  ಟೌನ್ಸ್ವಿಲ್ ಭಾರತೀಯರ ಅಪೇಕ್ಷೆಯಂತೆ ದೇಗುಲದ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಯಲಿ ಎಂದು ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ.  

    

ವಿದೇಶ ವಿಹಾರ - 6- "ಸೂರ್ಯೋದಯ" ಮತ್ತು "ಚಂದ್ರೋದಯ".


2012-ನೂತನ ವರ್ಷದ ಹಾರ್ಧಿಕ ಶುಭಾಶಯಗಳು 
(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ಸೂರ್ಯೋದಯ

"ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯೆ ಕಣೋ"
ಎಂದಿದ್ದಾರೆ ನಮ್ಮ ಜಗದ ಕವಿ ಯುಗದ ಕವಿ ಕುವೆಂಪು.
ಸೃಷ್ಟಿಯ ಅದ್ಭುತಗಳನ್ನು ಸವಿಯಲು,ಅದರಲ್ಲಿ ದೇವರನ್ನು ಕಾಣಲು ಸಾಮಾನ್ಯರಾದ ನಮಗೆ ಸುಲಭ ಸಾಧ್ಯವೆ....?

ನನ್ನ ಆಸ್ಟೇಲಿಯಾ ಪ್ರವಾಸದಲ್ಲಿ ನಾನು ಕಂಡ ನಯನ ಮನೋಹರ ದೃಶ್ಯಗಳ ವೈಭವವನ್ನಿಲ್ಲಿ ದಾಖಲಿಸಲೇಬೇಕು.ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಿ ಕಂಡ   "ಸೂರ್ಯೋದಯ" ಮತ್ತು ಕ್ರೈನ್ಸ್ ನಿಂದ ಮರಳುವಾಗ ನೋಡಿದ "ಚಂದ್ರೋದಯ"ವನ್ನು ನಾನೆಂದೂ ಮರೆಯಲಾರೆ. ಭೌಗೋಳಿಕವಾಗಿ ನಡೆಯುವ ಈ ಎರಡು ಅಪರೂಪದ ದೃಶ್ಯಗಳನ್ನು ಆನಂದದಿಂದ ಅನುಭವಿಸುವ ಅವಕಾಶ ನಮ್ಮದಾಯಿತು.









ವಿಸ್ತಾರವಾದ,ಅಲೆಗಳ ಆರ್ಭಟವಿಲ್ಲದ, ಹೆಸರಿಗೆ ತಕ್ಕಂತೆ ಪ್ರಶಾಂತವಾಗಿರುವ ಶಾಂತ ಸಾಗರವನ್ನು ನೋಡುವುದೇ ಚೆಂದ. ಮುಂಜಾನೆ ದಿಗಂತದಲ್ಲಿ ಸೂರ್ಯ ಸಮುದ್ರದೊಳಗಿನಿಂದ ಮೇಲೇರಿ ಬರುವ ಅಪೂರ್ವ ದೃಶ್ಯ ಕಣ್ಣಿಗೆ ಹಬ್ಬವೇ ಸರಿ.ಸೂರ್ಯ ಆಗಮಿಸುವ ಸಮಯವಾಯ್ತೆಂದು ಬಾನೆಲ್ಲ ಕೆಂದಾರತಿಯನ್ನಿಡಿದು ಸ್ವಾಗತಕ್ಕೆ ಅಣಿಯಾಯಿತು.ಸಾಗರವೆಲ್ಲಾ ಕೆಂಪಾಗಿ ಭೂಮಿ-ಬಾನಿನ ನಡುವಿನ ಅಂತರವೇ ಕಾಣದಾಯಿತು.ಆಗ ಸುವರ್ಣ ಬಣ್ಣದ ಬೆಳಕು ದಿಗಂತದಲ್ಲಿ ಮೇಲೇರ ತೊಡಗಿದಂತೆ ರಕ್ತ ವರ್ಣದ ಆಗಸ ಚಿನ್ನದ ಬಣ್ಣವಾಗತೊಡಗಿತು.ಸೂರ್ಯನ ರಶ್ಮಿ ನಿಧಾನವಾಗಿ ಜಗತ್ತನ್ನು ತುಂಬತೊಡಗಿತು.ದಿಗಂತದಿಂದ ಮೇಲೇರಿದ ರವಿಯ ಚಿನ್ನದ ಕಿರಣಗಳು ನಮ್ಮನ್ನು ತಾಕಿ ಆನಂದವನ್ನುಂಟು ಮಾಡಿದವು.ಮೋಡದ ವಾತಾವರಣದ ಕಾರಣ ಕನ್ಯಾಕುಮಾರಿಯಲ್ಲಿ ಅನುಭವಿಸಲಾಗದ ದೃಶ್ಯ ವೈಭವದ ಅನುಭವ ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಾಯಿತು.    




"ಚಂದ್ರೋದಯ"


ಕೈರ್ನ್ಸ್ ನ ಸುತ್ತಾಮುತ್ತಾ ಪ್ರ‍ೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ವಾಪಾಸು ನಮ್ಮ ಮಗಳು-ಅಳಿಯನ ಊರು ಟೌನ್ಸ್ವಿಲ್ ಗೆ ಹಿಂದಿರುತ್ತಿದ್ದೆವು.ಆ ದಿನ ಸಂಕಷ್ಟ ಹರ ಚತುರ್ಥಿ. ಪ್ರತಿ ತಿಂಗಳೂ ಈ ದಿನ ಉಪವಾಸವಿದ್ದು ಸಂಜೆ ಗಣಪತಿ ಪೂಜೆ ಮಾಡಿ ರಾತ್ರಿ ಚಂದ್ರನನ್ನು ನೋಡುವ ಪದ್ಧತಿ ನನ್ನದು.ರ‍ಾತ್ರಿ ಎಂಟು ಗಂಟೆಯ ವೇಳೆಗೆ ದಾರಿಯಲ್ಲಿ ನಮ್ಮ ಹುಂಡೈ ವ್ಯಾನು ಗಾಳಿಯಲ್ಲಿ ತೇಲಿದಂತೆ ಹೋಗುತ್ತಿತ್ತು. ರಸ್ತೆ ಉಬ್ಬುತಗ್ಗುಗಳಿಲ್ಲದೆ ಸಮನಾಗಿತ್ತು.ನುಣುಪಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ ಹಾಗೇ ಜೊಂಪು ಬಂದಂತೆ ಆಗುತ್ತಿತ್ತು.ಕನ್ನಡ-ಹಿಂದಿ ಹಾಡುಗಳನ್ನು ಕೇಳುತ್ತಾ ದಾರಿ ಸಾಗುತ್ತಿದ್ದುದೇ ತಿಳಿಯುತ್ತಿರಲಿಲ್ಲ.ಒಂದೇ ದಿನ ೪೫೦-೫೦೦ ಕಿ ಮಿ ಓಡಾಡಿದರೂ ದಣಿವೆನ್ನಿಸಲಿಲ್ಲ.

ನಾನು ಕಿಟಕಿಯಿಂದ ಹೊರಗೆ ಅಷ್ಟೇನೂ ದಟ್ಟವಾಗಿರದ ಕಾಡು, ಮರ-ಗಿಡಗಳನ್ನು ನೋಡುತ್ತಾ ಕುಳಿತಿದ್ದೆ.ರಸ್ತೆಯ ಇಕ್ಕೆಲಗಳಲ್ಲೂ ನಮ್ಮ ಮಲೆನಾಡಿನಷ್ಟು ದಟ್ಟವಾಗಿರದ ಕಾಡು.ನಮ್ಮ ದೇಶದ ಪ್ರಕೃತಿ ಸಂಪತ್ತು ಅಪಾರ.ಅದು ನಮಗೆ ದೇವರಿತ್ತ ವರ.ನಮ್ಮ ದೇಶದಲ್ಲಿನ ಸಮೃದ್ಧವಾದ ಮತ್ತು ವೈವಿಧ್ಯಮಯವಾದ ಸಸ್ಯರಾಶಿಗಳನ್ನಾಗಲೀ, ಪ್ರಾಣಿಪ್ರಪಂಚವನ್ನಾಗಲೀ ಆಸ್ಟೇಲಿಯಾದಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲಿ ನಮ್ಮ ನೀಲಗಿರಿ ಜಾತಿಗೆ ಸೇರಿದ ಮರಗಳೇ ಹೆಚ್ಚು.ಅವು ನೇರವಾಗಿ ಎತ್ತರಕ್ಕೆ ಬೆಳೆದಿರುತ್ತವೆ.ಹಾಗಾಗಿ ಕಾರಿನಲ್ಲಿ ಕುಳಿತು ರಸ್ತೆಯ ಪಕ್ಕಕ್ಕೆ ತುಂಬಾ ದೂರದವರೆಗೆ ದೃಷ್ಠಿಹಾಯಿಸಬಹುದು. ಹಾಗಾಗಿ ದೂರದಲ್ಲಿ ಬಾನು-ಭೂಮಿ ಒಂದಾದ ಅನುಭವ ನನಗಾಗುತ್ತಿತ್ತು. ಮರಗಳ ಮಧ್ಯೆ ದೂರದಲ್ಲಿ ವಸುಂಧರೆಯ ಒಡಲಿನಿಂದ ನಸುಗೆಂಪು ವರ್ಣದ ಆಕೃತಿಯ ತುಣುಕೊಂದು ಗೋಚರವಾದಂತಾಯ್ತು...! ಅರೆ... ಇದೇನು ಎಂದು ಒಂದರೆಕ್ಷಣ ಅಚ್ಚರಿಯಾಯಿತು.ಆದರೆ ತಕ್ಷಣ ತಿಳಿಯಿತು ... ಅದು "ಚಂದ್ರೋದಯ"ವೆಂದು.ನನ್ನ ಕಣ್ಣನ್ನು ಅಲ್ಲಿಂದ ಕದಲಿಸಲಾಗಲಿಲ್ಲ.ಕೊಂಚ ಕೊಂಚವೇ ಮೇಲೇರಿ ಬರುವ ಅರ್ಧ ಚಂದ್ರ ಪೂರ್ಣಚಂದಿರನಾಗುವ ದೃಶ್ಯ ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ನೆಲೆ ನಿಂತಿತು.

ಸಾಮಾನ್ಯವಾಗಿ ನಾವು ನಮ್ಮ ಕಾಂಕ್ರಿಟಿನ ನಗರದಲ್ಲಿ ಉದಯಿಸುತ್ತಿರುವ ಚಂದ್ರನ ಸೊಬಗನ್ನು ಕಾಣಲಸಾಧ್ಯ.ನಾವೇನಿದ್ದರೂ ಬಾನೇರಿ ನಿಂತ ಶಶಿಯನ್ನು ನೋಡಿ ತೃಪ್ತಿಪಡಬೇಕು ಅಷ್ಟೆ .
ನೋಡನೋಡುತ್ತಿದ್ದಂತೆ ಮೇಲೇರಿ ಬರುವ ಕಿತ್ತಳೆ ಬಣ್ಣದ ಪೂರ್ಣಚಂದ್ರ‍ನ ರೂಪವನ್ನು ತುಂಬಿಕೊಳ್ಳಲು ನನ್ನೆರಡು ಕಣ್ಣುಗಳು ಸಾಲದಾಯಿತು.ನಿಮಿಷಗಳು ಸರಿದಂತೆ ಬೆಳ್ಳಗೆ ಹೊಳೆಯುವ ತುಂಬುಚಂದಿರ ನಗುತ್ತಾ ಬೆಳದಿಂಗಳನ್ನು ಚೆಲ್ಲುತ್ತಾ ನಮ್ಮ ದಾರಿಗೆ  ಜೊತೆಯಾದ.ಗಣಪನ ಪೂಜೆಗೆ ಮುನ್ನವೇ ಚಂದ್ರ ದರ್ಶನದ ಅಪರೂಪದ ಗಳಿಗೆಯದು. ಅದರಲ್ಲೂ ವಿದೇಶದಲ್ಲಿ ಮೊದಲ ಸಂಕಷ್ಟ ಹರ ಚತುರ್ಥಿ ಆಚರಣೆ ವಿನೂತನವೆನಿಸಿತು. 

ಸೂರ್ಯೋದಯ ಮತ್ತು ಚಂದ್ರೋದಯಗಳಲ್ಲಿ ಆ ಶಿವನನ್ನೇ ಕಂಡ ಕವಿಯ ನುಡಿಗಳು ನನ್ನನ್ನು ಮತ್ತೊಮ್ಮೆ ಭಾವಪರವಶವಾಗುವಂತೆ ಮಾಡಿತು. ಮರೆಯಲಾರದ ರಸಮಯ ಕ್ಷಣಗಳ ಪಾಲು ನನ್ನದಾಯಿತು.   


ಮಕ್ಕಳಿಂದ ಅರಳಿದ ಕಲೆ


(ಚಿತ್ರಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


"ವಿಕಾಸ ವಿದ್ಯಾ ಸಂಸ್ಥೆ" ಶಿವಮೊಗ್ಗದ ಪ್ರತಿಷ್ಟಿತ ಶಾಲೆಗಳಲ್ಲಿ ಒಂದು. ಈ ಶಾಲೆಯು ಮಕ್ಕಳನ್ನು ಓದು ಬರಹಕ್ಕೆ ಮಾತ್ರ ಸೀಮಿತಗೊಳಿಸದೆ ಅವರಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ.ಪ್ರತಿ ವರ್ಷವೂ ವಾರ್ಷಿಕೋತ್ಸವಕ್ಕೆ ಮುನ್ನ ಮೂರು ದಿನಗಳ ಕಾಲ ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನವನ್ನು ಭರ್ಜರಿಯಾಗಿ ನಡೆಸಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಗೆಳೆಯುವ ಮೂಲಕ ನಮ್ಮ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆ.

ನನಗೆ ಈ ಶಾಲೆಯ ವಸ್ತುಪ್ರದರ್ಶನವನ್ನು ನೋಡುವ ಅವಕಾಶ ಈ ವರ್ಷ ಒದಗಿ ಬಂತು.ಅಲ್ಲಿನ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿನ್ಯಾಸಗಳನ್ನು,ತಮಗೆ ಲಭ್ಯವಾದ ವಸ್ತುಗಳನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ತಯಾರು ಮಾಡಿದ್ದರು.
ಬೆಂಡಿನಿಂದ ತಯಾರಿಸಿದ ವಿವಿಧ ಮಾದರಿಗಳ ವಿಭಾಗವು ನನ್ನ ಮನಸೆಳೆಯಿತು.ಬೆಳವಾಡಿಯ ವೀರನಾರಾಯಣ ದೇವಸ್ಥಾನ, ಖುಜುರಾಹೋ ದೇವಸ್ಥಾನ, ತಾಜ್ ಮಹಲ್ಲುಗಳೊಂದಿಗೆ ವಿದೇಶದಲ್ಲಿರುವ ಚರ್ಚುಗಳು ಮತ್ತು ಸ್ಟೇಡಿಯಂ ಹಾಗು ಇನ್ನೂ ಅನೇಕ ಸುಂದರ ವಿನ್ಯಾಸಗಳು ಅಲ್ಲಿದ್ದವು.ಇವುಗಳನ್ನು ಅಲ್ಲಿನ ಮಕ್ಕಳು ನುರಿತ ಕಲಾವಿದರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ಮಾಡಿದ್ದರು.ಅದರ ಕೆಲವು ಚಿತ್ರಗಳು ಇಲ್ಲಿದೆ.










ಆ ಶಾಲೆಯ ಮಕ್ಕಳು ಮತ್ತು ಶಿಕ್ಷಕ ವೃಂದಕ್ಕೆ ನನ್ನ ಅಭಿನಂದನೆ.    

ವಿದೇಶ ವಿಹಾರ - 5 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..


ಗಾಜಿನ ಬಾಗಿಲುಗಳು (Glass Doors)
ಈ ದೇಶದಲ್ಲಿ ದೊಡ್ಡ ಶಾಪ್ ಗಳಿರಲಿ,ಸರ್ಕಾರಿ ಕಛೇರಿಗಳಿರಲಿ,ಯಾವುದೇ ಕಟ್ಟಡಗಳಿಗೂ ನಮ್ಮಲ್ಲಿರುವಂತೆ ಮರದ ಅಥವಾ ಕಬ್ಬಿಣದ ಬಾಗಿಲುಗಳಿರುವುದಿಲ್ಲ.ಉದ್ದುದ್ದವಾದ ಮೂರ್ನಾಲ್ಕು ಗ್ಲಾಸಿನ ಬಾಗಿಲುಗಳಿರುತ್ತವೆ.ಮನೆಗಳಿಗೆ ಮಾತ್ರ ಹೊರಗಿನಿಂದ ಮೆಶ್ ಡೋರಿರುತ್ತದೆ ಅಷ್ಟೆ.ಆದರೆ ದೊಡ್ಡ ದೊಡ್ಡ ಅಂಗಡಿಗಳಿಗೆ ಮೆಶ್ ಡೋರ್ ಸಹ ಇರುವುದಿಲ್ಲ. ರಾತ್ರಿ ವೇಳೆ ಗಾಜಿನ ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಿದರೆ ಮುಗಿಯಿತು.

 ರಸ್ತೆಯಲ್ಲಿ ಓಡಾಡುವ ನಮಗೆ ಒಳಗೆ ಜೋಡಿಸಿಟ್ಟಿರುವ ಎಲ್ಲಾ ವಸ್ತುಗಳು ಕಾಣುತ್ತಿರುತ್ತವೆ. ಸಂಜೆ ಏಳಕ್ಕೆ ಅಲ್ಲಿನ ಅಂಗಡಿಗಳೆಲ್ಲ ಬಂದಾಗಿರುತ್ತವೆ.ಬರೀ ಗಾಜಿನ ಬಾಗಿಲುಗಳನ್ನು ಹಾಕಿರುವುದನ್ನು ನೋಡಿ ನನಗಂತೂ ಬಹಳ ಆಶ್ಚರ್ಯವಾಯಿತು.ನನ್ನ ಮಗಳ ಮನೆಯಲ್ಲಿಯೂ ಇದೇ ರೀತಿಯ ದೊಡ್ಡ ದೊಡ್ಡ ಗಾಜಿನ ಬಾಗಿಲುಗಳಿವೆ.ರ‍ಾತ್ರಿ ವೇಳೆ  ಗ್ಲಾಸಿನ ಮತ್ತು ಮೆಶ್ ಡೋರುಗಳನ್ನು ಲಾಕ್ ಮಾಡಿ ಕರ್ಟನ್ ಎಳೆದರೆ ಮುಗಿಯಿತು.ಕಳ್ಳತನದ ಭಯವಿಲ್ಲ.  ಅಲ್ಲದೆ ಇಲ್ಲಿನ ಎಲ್ಲಾ ಮನೆಗಳಲ್ಲಿ ಮತ್ತು ಇತರ ಎಲ್ಲಾ ಕಟ್ಟಡಗಳಲ್ಲಿ ಅಲಾರಾಂ ಮತ್ತು ಸಿ ಸಿ ಕ್ಯಾಮರದ ವ್ಯವಸ್ಥೆಯೂ ಇರುತ್ತದೆ.
ಬಾಳೆ ಮತ್ತು ಕಬ್ಬಿನ ಕೃಷಿ


ಟೌನ್ಸ್ವಿಲ್ ನಿಂದ ಕೈರ್ನ್ಸ್ ಗೆ ಹೋಗುವ ಮಾರ್ಗದಲ್ಲಿ ಬಾಳೆಯ ತೋಟ ನಮ್ಮನ್ನು ಸೆಳೆಯಿತು. ಗೊನೆಗಳಿಗೆ ಪ್ಲಾಸ್ಟಿಕ್ಕಿನ ಚೀಲದಿಂದ ಮುಚ್ಚಿರುವುದನ್ನು ನೋಡಬಹುದು.ಮತ್ತೊಂದು ಸಂಗತಿಯೆಂದರೆ ಇಲ್ಲಿ ಸೇಬನ್ನು ಕಡಿಮೆ ಡಾಲರಿಗೆ ಕೊಳ್ಳಬಹುದು. ಆದರೆ ಒಂದು ಬಾಳೆಹಣ್ಣಿನ ಬೆಲೆ ಮೂರರಿಂದ ಮೂರೂವರೆ ಡಾಲರ್... ! ಅಂದರೆ ಬರೋಬ್ಬರಿ ನೂರೈವತ್ತರಿಂದ ನೂರ ಎಪ್ಪತೈದು ರೂಪಾಯಿಗಳು..!!
ಇತ್ತೀಚೆಗೆ ಬೀಸಿದ "ಯಾಸಿ" ಚಂಡಮಾರುತಕ್ಕೆ ಅಲ್ಲಿನ ಬಾಳೆತೋಟಗಳಿಗೆ ಹೆಚ್ಚಿನ ಹಾನಿಯಾಗಿರುವುದರಿಂದ ಬಾಳೇಹಣ್ಣಿನ ಬೆಲೆ ಹೆಚ್ಚಾಗಲು ಕಾರಣವಾಗಿದೆ.


ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅಸ್ಟ್ರೇಲಿಯಾದ ರಾಜ್ಯ ಕ್ವೀನ್ಸ್ ಲ್ಯಾಂಡಿನ ಆರ್ಥಿಕತೆ ನಿಂತಿದೆ. ಇಲ್ಲಿ ಕಬ್ಬು ಪ್ರಮುಖ ಬೆಳೆ.

ಕಬ್ಬನ್ನು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಾರ‍ೆ.ಇದು ಕಬ್ಬನ್ನು ಕಾರ್ಖಾನೆಗೆ ಸಾಗಿಸುವ ರೈಲು.ಬೆಳೆದು ನಿಂತ ಕಬ್ಬನ್ನು ಸಾಗಿಸಲು ಅಲ್ಲಿನವರು ನಮ್ಮಂತೆ ಕಷ್ಟಪಡಬೇಕಿಲ್ಲ. ಕಬ್ಬಿನ ಜಲ್ಲೆಯನ್ನು ಸಣ್ಣ ತುಂಡು ಮಾಡಿ ಈ ರೈಲಿನ ತೊಟ್ಟಿಗಳಲ್ಲಿ ತುಂಬಿಸಲು ಯಂತ್ರವನ್ನು ಬಳಸುತ್ತಾರೆ.ಎಲ್ಲಾ ಬೋಗಿಗಳು ತುಂಬಿದ ನಂತರ ಸ್ವಯಂಚಾಲಿತ ರೈಲು ಅದನ್ನು ಕಾರ್ಖಾನೆಗೆ ತಲುಪಿಸುತ್ತದೆ.

"ನಾವಿಗೇಟರ್ "GPS CAR NAVIGATION SYSTEMS

ಅಲ್ಲಿನ ಅತ್ಯಾಧುನಿಕವಾದ ಮತ್ತು ಕಂಪ್ಯೂಟರೀಕೃತವಾದ ಕಾರುಗಳಲ್ಲಿ "ನಾವಿಗೇಟರ್ "ಅನ್ನು ಅಳವಡಿಸಿರುತ್ತಾರೆ.ಇದರ ಸಹಾಯದಿಂದ ಆ ದೇಶದ ಯಾವ ಸ್ಥಳಕ್ಕಾದರೂ ಯಾರ ಮಾರ್ಗದರ್ಶನವಿಲ್ಲದೆ ಹೋಗಬಹುದು.ನಮ್ಮ ಮನೆಯಿಂದ ಹೊರಡುವಾಗ ನಾವು ತಲುಪಬೇಕಾದ ಸ್ಥಳದ ವಿಳಾಸವನ್ನು ಇದರಲ್ಲಿ ಹಾಕಿದರೆ ಸಾಕು. ನಮಗೆ ಅದೇ ಮಾರ್ಗವನ್ನು ತಿಳಿಸುತ್ತಾ ಹೋಗುತ್ತದೆ. ಸರ್ಕಲ್ಲುಗಳು ಬಂದಾಗ ನಾವು ಯಾವ ಕಡೆ ತಿರುಗಿಸಬೇಕು ,ನಾವು ನಮ್ಮ ಗಮ್ಯವನ್ನು ತಲುಪಲು ಇನ್ನೆಷ್ಟು ದೂರ ಪ್ರಯಾಣಿಸಬೇಕು ಎಂಬುದನ್ನೆಲ್ಲಾ ತಿಳಿಸುತ್ತಿರುತ್ತದೆ.ಕೊನೆಗೆ ನಾವು ತಲುಪ ಬೇಕಾದ ತಾಣಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ.ಇದನ್ನು ಕಂಡು ನಮಗೆ ತುಂಬಾ ಅಚ್ಚರಿಯಾಯಿತು.
ಟೌನ್ಸ್ವಿಲ್ ನಲ್ಲಿ ಫ್ಲೈಟ್ ಇಳಿದಾಗ ನಮ್ಮನ್ನು ಕರೆದುಕೊಂಡು ಹೋಗಲು ತಮ್ಮ BMW ಕಾರಿನಲ್ಲಿ ಬಂದಿದ್ದ ನಮ್ಮ ಅಳಿಯ ನಾವಿಗೇಟರ‍್ ನ ಉಪಯೋಗವನ್ನು ನಮಗೆ ತಿಳಿಸಿ ಕೊಟ್ಟರು. ಜನರೇ ಕಾಣದ ಈ ಊರುಗಳಲ್ಲಿ ಇದು ತುಂಬಾ ಪ್ರಯೋಜನಕಾರಿ.

POST OFFICE
  

ಆಸ್ಟ್ರೇಲಿಯಾ ದೇಶದ ಪೋಸ್ಟ್ ಆಫೀಸು.ನಮ್ಮ ದೇಶದಲ್ಲಿ ಪೋಸ್ಟ್ ಆಫೀಸ್ ಹಿಂದೆ ನಮ್ಮ ಬಿ ಎಸ್ ಎನ್ ಎಲ್ ನ ಸೋದರ ಸಂಸ್ಥೆಯಾಗಿತ್ತು ಎಂಬ ಭಾವ ನನ್ನ ಕ್ಯಾಮರ ಇದರತ್ತ ಹೊರಳಲು ಕಾರಣವಿರಬಹುದು.








ಟೆಲಿಪೋನ್ ಬೂತುಗಳು-CCB



ನಾನು ಬಿ ಎಸ್ ಎನ್ ಎಲ್ ಉದ್ಯೋಗಿ. ಹಾಗಾಗಿ ಯಾವ ಪ್ರದೇಶಕ್ಕೆ ಹೋದರೂ ಅಲ್ಲಿನ ಟೆಲಿಪೋನ್ ಎಕ್ಸ್ಚೇಂಜುಗಳು, ಬೂತುಗಳು ನನ್ನ ಗಮನ ಸೆಳೆಯುತ್ತದೆ. ಅಂಥಾದ್ದರಲ್ಲಿ ವಿದೇಶದಲ್ಲಿ ಟೆಲಿಕಾಂ ಕಂಪನಿಗಳು,ಬೂತುಗಳು ನನ್ನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೆ?



 AUSTRELIAN TELECOMMUNICATION COMPANY



’ಟೆಲ್ ಸ್ಟ್ರಾ’ ಆಸ್ಟ್ರೇಲಿಯಾದ ಅತಿ ದೊಡ್ಡ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆ.ಹಾಗಾಗಿ ಆಸ್ಟ್ರೇಲಿಯಾದ ಯಾವ ಪ್ರದೇಶಕ್ಕೆ ಹೋದರೂ ಈ ಕಂಪನಿಯ ಬೂತುಗಳನ್ನು ಕಾಣಬಹುದು.ನನ್ನ ಮಗಳು ಟೌನ್ಸ್ವಿಲ್ ನಲ್ಲಿ ಇದೇ ಕಂಪನಿಯಲ್ಲಿ ಉದ್ಯೋಗಿ. ಈ ಬೂತುಗಳು ನನ್ನ ಮನಸೆಳೆಯಲು ಇವಿಷ್ಟು ವಿಚಾರಗಳು ಸಾಕೆನಿಸುತ್ತದೆ.
     
ನಮ್ಮ ತ್ರಿವರ್ಣಧ್ವಜ


ಕೈರ್ನ್ಸ್ ಗೆ ಹೋಗುವ ದಾರಿಯಲ್ಲಿ ಜೂಸ್ ಕುಡಿಯಲು ಒಂದು ರೆಸ್ಟೋರೆಂಟಿನ ಬಳಿ ಹೋದಾಗ ನೋಡಿದ ದೃಶ್ಯ.ಬೇರೆ ದೇಶದ ಬಾವುಟಗಳ ಜೊತೆ ನಮ್ಮ ಧ್ವಜವೂ ಹೆಮ್ಮೆಯಿಂದ ಹಾರಾಡುತ್ತಾ ನಮಗೆ ಸ್ವಾಗತ ಕೋರುತ್ತಿತ್ತು.ಪರದೇಶದಲ್ಲಿದ್ದಾಗ ನಮ್ಮ ದೇಶದ ಜನರನ್ನು ಕಂಡರೇ ಅರಳುವ ನಮ್ಮ ಮನ, ನಮ್ಮ ತ್ರಿವರ್ಣ ಧ್ವಜ ಹಾರುತ್ತಿರುವುದನ್ನು ನೋಡಿ ಹೆಮ್ಮೆಯಿಂದ ಬೀಗಿತು.