ವಿದೇಶ ವಿಹಾರ - 13 - Sky Rail Experience









ಕೈರ್ನ್ಸ್ ನಿಂದ ಹದಿನೈದು ನಿಮಿಷಗಳ ಡ್ರೈವ್ ಮಾಡಿದರೆ "ಕುರಾಂಡ" ತಲುಪಬಹುದು.
ಸಾಮಾನ್ಯವಾಗಿ ಹಳಿಗಳ ಮೇಲೆ ಚಲಿಸುವ ರೈಲಿನಲ್ಲಿ ನಾವೆಲ್ಲರೂ ಕುಳಿತು ಆನಂದಿಸಿರುತ್ತೇವೆ. ಕುರಾಂಡದಲ್ಲಿ ಇರುವುದು ಸ್ಕೈರೈಲು.....!!! ಕೇವಲ ಒಂದು ಕೇಬಲ್ಲಿನ ಆಧಾರ  ದಿಂದ ಚಲಿಸುವ ಸ್ಕೈರೈಲಿನ ಗೊಂಡಾಲದಲ್ಲಿ ಕುಳಿತು, ಸಾವಿರಾರು ಅಡಿಗಳ ಮೇಲೆ ಪಯಣಿಸುವ ವಿಭಿನ್ನ ಅನುಭವವನ್ನು ನಾವಿಲ್ಲಿ ಪಡೆಯಬಹುದು.

ಸ್ಕೈರೈಲಿನಲ್ಲಿ ಬಾರೋನ ಫಾಲ್ಸಿನತ್ತ ನಮ್ಮ ಪಯಣ...
ಆಕಾಶರೈಲಿನಲ್ಲಿ ನಾವು...ಕೆಳಗೆ ಮಾಮೂಲಿ ರೈಲು...!!!!
 ಇಲ್ಲಿನ ಸಂರಕ್ಷಿತ ಮಳೆ ಕಾಡನ್ನು ಗೊಂಡಾಲ(ಕ್ಯಾಬಿನ್)ದಲ್ಲಿ ಕುಳಿತು ಕೇಬಲ್ ವೇನಲ್ಲಿ ಹೋಗುತ್ತಾ ವೀಕ್ಷಿಸುವುದು ಒಂದು ವಿನೂತನ ಅನುಭವ.ಇದಕ್ಕೆ ಸ್ಕೈರೈಲ್ ಎಂದು ಕರೆಯುವರು. ಈ ಅರಣ್ಯದಲ್ಲಿ ಅನೇಕ ಜಾತಿಯ ಸಸ್ಯ ಪ್ರಭೇದಗಳು ಮತ್ತು ಆರ್ಕಿಡ್,ಚಿಟ್ಟೆಗಳ ಮತ್ತು ಪಕ್ಷಿಗಳ ಪ್ರಭೇದಗಳಿವೆ. ಗೊಂಡಾಲದಲ್ಲಿ ಕುಳಿತು ಕೆಳಗೆ ಕಾಣುವ ವನಸಿರಿಯ ಸೊಬಗನ್ನು ಸವಿಯಬಹುದು.

ಬಾರೋನ ಜಲಪಾತದ ರಮ್ಯ ನೋಟ

 ಕುರಾಂಡ ಟರ್ಮಿನಲ್ ನಿಂದ ಕೇಬಲ್ ಕಾರಿನಲ್ಲಿ ಹೊರಟರೆ ನಡುವೆ ಎರಡು ನಿಲ್ದಾಣಗಳಿವೆ. ಬಾರೋನ ಫಾಲ್ಸ್ ಸ್ಟೇಷನ್ ಮತ್ತು ರೆಡ್ ಪೀಕ್ ಸ್ಟೇಷನ್.ಇಲ್ಲಿ ಇಳಿದು ಕಾಡಿನಲ್ಲಿ ನಡೆದುಕೊಂಡು ಹೋಗಿ(ಇದಕ್ಕಾಗಿ ದಾರಿಯನ್ನು ಮಾಡಿದ್ದಾರೆ) ಫಾಲ್ಸ್ ಮತ್ತು ಪ್ರಕೃತಿಯ ಸೊಬಗನ್ನು ಹತ್ತಿರದಿಂದ ನೋಡಿ ಮತ್ತೆ ಗೊಂಡಾಲ ಹತ್ತಬೇಕು.
ಅಟ್ಟಣೆಗೆಯಲ್ಲಿ ನಿಂತು ಸಮೀಪದಿಂದ ಜಲಪಾತ ದರ್ಶನ
Red Peak Station










ಇಲ್ಲಿನ ಎರಡೂ ನಿಲ್ದಾಣಗಳಲ್ಲಿ ಇರುವ ಕಂಪ್ಯೂಟರ್ ಮತ್ತು ಭಿತ್ತಿಚಿತ್ರಗಳ ಮೂಲಕ ಈ ಅರಣ್ಯದಲ್ಲಿ ವಾಸಿಸುವ ಜೀವಿಗಳು,ವೃಕ್ಷ ಸಂಪತ್ತು ಮತ್ತು ಅವುಗಳ ಸಂರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಸಮಗ್ರ ಪರಿಚಯ ಮಾಡಿಕೊಡಲಾಗುತ್ತದೆ.ನಮ್ಮ ಈ ಆಕಾಶರೈಲಿನ ಪಯಣ ಕಾರ್ನವೋನಿಕಾ ಟರ್ಮಿನಲ್ಲಿನಲ್ಲಿ ಮುಕ್ತಾಯಗೊಂಡಿತು.

 ಮೇಲಕ್ಕೆ ಏರುವಾಗ ನಿಧಾನವಾಗಿ ಚಲಿಸುವ ಗೊಂಡಾಲಗಳು ಇಳಿಯುವಾಗ ಸರಸರನೆ ಇಳಿದಂತೆ ಭಾಸವಾಗುತ್ತದೆ.ಇದು ಒಂದು ಅದ್ಭುತವಾದ ಅನುಭವ ನೀಡುವುದರೊಂದಿಗೆ ಮನಸ್ಸಿಗೆ ಉಲ್ಲಾಸವನ್ನು ತಂದುಕೊಟ್ಟಿತು.

ಹಿಂದಿಯಲ್ಲಿ ಬರೆದಿರುವ ಅನಿಸಿಕೆಯನ್ನು ಗಮನಿಸಿ..! 
ಕುರಾಂಡದಲ್ಲಿನ ಬಟರ್ ಫ್ಲೈ ಸ್ಯಾನ್ಚುರಿ ಯಲ್ಲಿ ಚಿಟ್ಟೆಗಳ ವೈವಿಧ್ಯಮಯ ಲೋಕ ಮನಸೆಳೆಯುತ್ತದೆ. ವಿವಿಧ ಜಾತಿಯ,ರಂಗು ರಂಗಿನ ಚಿಟ್ಟೆಗಳ ಜೀವನ ಶೈಲಿ, ಅವುಗಳ ಸ್ವಚ್ಛಂದ ವಿಹಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.   ಇದಲ್ಲದೆ ಕೋಯಲ ಪಾರ್ಕ್,ಆರ್ಟ್ ಗ್ಯಾಲರಿಗಳು ಕುರಾಂಡದಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳು. 

ವಿದೇಶ ವಿಹಾರ - 12 - "Indian cuisine"


ಕೈರ್ನ್ಸ್ ನಲ್ಲಿ ಒಂದು ಇಂಡಿಯನ್ ರೆಸ್ಟೋರೆಂಟಿದೆ. ಅಲ್ಲಿಗೆ ನೀವು ಊಟಕ್ಕೆ ಹೋಗಿ ಎಂದು ನಮ್ಮ ಅಳಿಯ ಅಲ್ಲಿನ ಅಡ್ರೆಸ್ ಕೊಟ್ಟಿದ್ದರು.ಹಾಗಾಗಿ ನಮಗೆ ಸಸ್ಯಾಹಾರಿ ಊಟ ಸಿಗುವುದು ತೊಂದರೆ ಆಗಲಿಲ್ಲ.ಆದರೆ ಅಲ್ಲಿಗೆ ಹೋದಾಗ ನಮಗೆ ಇನ್ನೂ ಅಚ್ಚರಿಯಾಗಿದ್ದೆಂದರೆ "ಇಂಡಿಯನ್ ಕ್ಯೂಸಿನ್" ಮಾಲೀಕರು ನಮ್ಮ ಮಂಗಳೂರಿನವರು ಎಂಬುದು.ನಾವು ಕನ್ನಡದಲ್ಲಿ ಮಾತನಾಡುವುದನ್ನು ಕಂಡು ಅವರು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೆ ಆತ್ಮೀಯತೆ ಹೆಚ್ಚಾಯಿತು.ಅವರು ನಮಗಾಗಿ ೨-೩ ದಿನವೂ ಸಸ್ಯಾಹಾರಿ ಊಟ-ತಿಂಡಿಯನ್ನು ತಯಾರು ಮಾಡಿಕೊಟ್ಟರು.ನಾವು ಸುತ್ತಮುತ್ತಲ ಸ್ಥಳಗಳನ್ನು ನೋಡಿಕೊಂಡು ಊಟಕ್ಕೆ ಇಲ್ಲಿಗೇ ಬರುತ್ತಿದ್ದೆವು.

ಅವರು ಆಸ್ಟ್ರೇಲಿಯಾಕ್ಕೆ ಹೋಗಿ ಇಪ್ಪತೈದು ವರ್ಷಗಳಾದುವಂತೆ.ಮಕ್ಕಳಿಬ್ಬರೂ ಓದಿ ಬೇರೆಡೆ ಕೆಲಸದಲ್ಲಿದ್ದಾರೆ. ಇವರು ಮತ್ತು ಇವರ ಪತ್ನಿ ಇಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.ಕೆಲಸಕ್ಕೆ ಜನ ಸಿಗದ ಬಿಸಿ ಇವರಿಗೂ ತಟ್ಟಿದೆ. ಯಾರೂ ಸಿಗದಿದ್ದಾಗ ಈ ಗಂಡ-ಹೆಂಡತಿಯೇ ಅಡಿಗೆಯವರು,ಸಪ್ಲೈಯರ್,ಕ್ಲೀನರ್ ಎಲ್ಲವೂ ಆಗಬೇಕಾದ ಅನಿವಾರ್ಯತೆಯನ್ನು ಕೊಂಚ ಬೇಸರದಿಂದಲೇ ತಿಳಿಸಿದರು.

ಹೋಟೆಲ್ಲಿನ ಗೋಡೆಯಲ್ಲಿ ಶಿವಾಜಿ ಮತ್ತು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಫೋಟೋಗಳನ್ನು ಹಾಕಿದ್ದಾರೆ.ಆ ದೇಶದಲ್ಲಿ ನಮ್ಮವರನ್ನು ಕಂಡು ಸಂತಸವಾಯಿತು. ಕೈರ್ನ್ಸ್ ಪ್ರವಾಸದಲ್ಲಿ ನಮಗೆ ಖುಷಿ ನೀಡಿದ ಅನುಭವಗಳಲ್ಲಿ ಇದೂ ಒಂದು.ವಾಪಾಸಾಗುವಾಗ ಈ ದಂಪತಿಗಳಿಗೆ ಧನ್ಯವಾದ ಸಲ್ಲಿಸಿ ಹೊರಟೆವು.   

ವಿದೇಶ ವಿಹಾರ - 11-The Great Barrier Reef,Australia - ಹವಳದ್ವೀಪಗಳು


Green Island
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶ, ಪ್ರವಾಸಿಗರಿಗೆ ಅದ್ಭುತ ಅನುಭವಗಳನ್ನು ನೀಡುವ ವಿಶಿಷ್ಟ ತಾಣಗಳನ್ನು ಒಳಗೊಂಡಿದೆ.ಅಂತಹ ಸ್ಥಳಗಳಲ್ಲಿ ಕೈರ್ನ್ಸ್ ಸಹ ಒಂದು.ಇಲ್ಲಿ ೨-೩ ದಿನವಿದ್ದು,ಕೈರ್ನ್ಸ್ ಮಾತ್ರವಲ್ಲದೆ, ಹೆಸರಾಂತ ಗ್ರ‍ೇಟ್ ಬ್ಯಾರಿಯರ್ ರೀಫ್ ನ ಹವಳದ್ವೀಪ,ಕುರಾಂಡದ ಸ್ಕೈರೈಲಿನಲ್ಲಿ ಪಯಣಿಸುವ ಮತ್ತು ಸುತ್ತಮುತ್ತಲ ಅನೇಕ ಸುಂದರ ಬೀಚ್ ಗಳನ್ನು  ನೋಡುವ ಅವಕಾಶವನ್ನು ನಮಗೆ ಕಲ್ಪಿಸಿಕೊಟ್ಟ ನನ್ನ ಮಗಳು-ಅಳಿಯ ಇಬ್ಬರನ್ನೂ ನಾನಿಲ್ಲಿ ಮತ್ತೊಮ್ಮೆ ಸ್ಮರಿಸಲೇಬೇಕು.


ನಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿ "ಗ್ರೀನ್ ಐಲ್ಯಾಂಡ್" ಗೆ ಭೇಟಿ ನೀಡಿದ್ದು ನನಗೆ ಮರೆಯಲಾಗದ ಅನುಭವ ನೀಡಿತು.ಈ ದೇಶದ ಕ್ವೀನ್ಸ್ ಲ್ಯಾಂಡ್ ರಾಜ್ಯಕ್ಕೆ ಸೇರಿದ ಅನೇಕ ದ್ವೀಪಗಳಲ್ಲಿ ಸಮೃದ್ಧವಾದ, ವರ್ಣರಂಜಿತವಾದ ಹವಳದಿಬ್ಬಗಳಿವೆ.ಈ ಹವಳ ದ್ವೀಪಗಳ ಸಮೂಹವೇ ಜಗತ್ಪ್ರಸಿದ್ಧವಾದ "ಗ್ರೇಟ್ ಬ್ಯಾರಿಯರ್ ರೀಫ್".ಇದರ ಒಂದು ಭಾಗವಾದ ’ಗ್ರೀನ್ ಐಲ್ಯಾಂಡ್" ಗೆ ನಾವು ಕೈನ್ರ್ಸ್ ನಿಂದ ಕ್ರೂಝಸ್ ನಲ್ಲಿ ಹೋದೆವು.

ಈ ದ್ವೀಪದಲ್ಲಿ ಬಣ್ಣಬಣ್ಣದ ಹವಳ ಸಮೂಹಗಳನ್ನಲ್ಲದೆ ವೈವಿಧ್ಯಮಯವಾದ ಅಸಂಖ್ಯಾತ ಸಮುದ್ರ ಜೀವಿಗಳನ್ನು ನಾವಿಲ್ಲಿ ವೀಕ್ಷಿಸಬಹುದು.


ಅನೇಕ ಬಗೆಯ ಮೀನುಗಳು,ಆಮೆಗಳು,ನಕ್ಷತ್ರ ಮೀನುಗಳು,ಸ್ಪಾಂಜುಗಳು,ವಿವಿಧ ಆಕೃತಿಯ ಚಿಪ್ಪಿನಲ್ಲಿರುವ ಜೀವಿಗಳನ್ನು ಹತ್ತಿರದಿಂದ ನೋಡಿ ನಮ್ಮ ಕಣ್ತುಂಬಿಕೊಳ್ಳಬಹುದು.ಇವುಗಳನ್ನು ವೀಕ್ಷಿಸಲು ಗ್ಲಾಸ್ ಬಾಟಂ ಬೋಟ್ ವ್ಯವಸ್ಥೆ ಇದೆ. ಧೈರ್ಯವಿರುವವರು ಸ್ಕೂಬಾ ಡೈವಿಂಗ್,ಸ್ನಾರ್ಕಲಿಂಗ್,ಪ್ಯಾರಾಸೈಲಿಂಗ್ ಮಾಡಬಹುದು. ದಂಡೆಯಲ್ಲಿ ಬಿಳಿ ಮರಳಿನ ಮೇಲೆ ನಡೆದಾಡುತ್ತಾ ಸಮುದ್ರದ ಅಲೆಗಳೊಡನೆ ಆಡಬಹುದು.







ದಿನವಿಡೀ  ಮೈನವಿರೇಳಿಸುವ ಅನುಭವಗಳನ್ನು ನಮ್ಮದಾಗಿಸಿಕೊಳ್ಳುವುದರೊಂದಿಗೆ ಮನಸ್ಸನ್ನು ಉಲ್ಲಾಸಗೊಳಿಸುವ ಇಲ್ಲಾ ವ್ಯವಸ್ಥೆಗಳೂ ಇಲ್ಲಿವೆ.ನನ್ನ ಜೀವಿತದ ಅಮೂಲ್ಯ ಕ್ಷಣಗಳಲ್ಲಿ ಇದೂ ಸಹ ಒಂದು.





ನಾನು ಹವಳದ್ವೀಪಗಳ ಬಗ್ಗೆ ಅಲ್ಲಿ ಇಲ್ಲಿ ಕೇಳಿ ಮತ್ತು ಓದಿ ತಿಳಿದ ಕೆಲವು ವಿಷಯಗಳನ್ನಿಲ್ಲಿ ದಾಖಲಿಸಲು ಇಷ್ಟಪಡುತ್ತೇನೆ. ಹವಳ (ಪಾಲಿಪ್ಸ್) ಒಂದು ಪುಟ್ಟ ಸಮುದ್ರಜೀವಿ.ಈಜೀವಿಗಳು ಸ್ವಚ್ಛವಾದ ಸಮುದ್ರದ ತೀರಪ್ರದೇಶದಲ್ಲಿ ಬೆಳೆಯುತ್ತವೆ.ಇವುಗಳನ್ನು ’ಸಮುದ್ರದ ಮಳೆ ಕಾಡು’ಗಳೆಂದೂ ಕರೆಯುತ್ತಾರಂತೆ.ಸೂಕ್ಷ್ಮ ಸ್ವಭಾವದ ಈ ಪಾಲಿಪ್ಸ್ ನ ಲಾರ್ವಾಗಳು ಗಟ್ಟಿಯಾದ ಶಿಲೀಂದ್ರಗಳ ಮೇಲೆ ನೆಲೆಯೂರುತ್ತವೆ ಮತ್ತು ಕಾಲೋನಿಗಳನ್ನು
ನಿರ್ಮಿಸಿಕೊಳ್ಳುತ್ತವೆ.ಈ ಪುಟ್ಟ ಜೀವಿಗಳ ಸಮುದಾಯವೇ ಹವಳ. ಅಸಂಖ್ಯಾತ ಹವಳಗಳು ಒಂದನ್ನೊಂದು ಗಟ್ಟಿಯಾಗಿ ಅಂಟಿಕೊಂಡು ಸಾಮರಸ್ಯದಿಂದ ನಿರ್ಮಿಸಿಕೊಳ್ಳುವ ಸುಂದರ ರಚನೆಯೇ ಹವಳದ್ವೀಪಗಳು.ಇವುಗಳ ಬದುಕು ವಿಚಿತ್ರವಾದುದು. ಇವುಗಳು ಗಟ್ಟಿ ಶಿಲೀಂದ್ರಗಳನ್ನು ಆಶ್ರಯಿಸಿದಂತೆ,ಇವುಗಳನ್ನು ಆಶ್ರಯಿಸಿ ಕೆಲವು ವರ್ಣರಂಜಿತ ಆಲ್ಗೈಗಳು ಬೆಳೆಯುತ್ತವೆ.ಈ ವರ್ಣವಿನ್ಯಾಸದ ಆಲ್ಗೈಗಳಿಂದ ಹವಳಗಳೂ ವಿವಿಧ ಬಣ್ಣಗಳನ್ನು ಹೊಂದಿವೆ.ಹವಳದ ದಿಬ್ಬಗಳು ಅನೇಕ ಜಲಚರ ಜೀವಿಗಳಿಗೆ ಆಶ್ರಯ ನೀಡುತ್ತದೆ.ಇದು ಸಾಗರದಾಳದಲ್ಲಿರುವ ಜೀವಿ-ಜೀವಿಗಳಲ್ಲಿ ಕಂಡುಬರುವ ಸಾಮರಸ್ಯದ ಬದುಕಿಗೆ ಒಂದು ಉದಾಹರಣೆ.





ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಮಾತ್ರವಲ್ಲದೆ ನಮ್ಮ ಭಾರತದ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ,ನ್ಯೂಜಿಲ್ಯಾಂಡ್,ಥೈಲ್ಯಾಂಡ್,ಕುವೈತ್ ಮತ್ತು ಕ್ಯಾರಿಬಿಯನ್ ಸಮುದ್ರದ ಭಾಗಗಳಲ್ಲೂ ಹವಳದ ದ್ವೀಪಗಳು ಕಂಡುಬರುತ್ತವೆ.






ವಿಷಾದದ ಸಂಗತಿಯೆಂದರೆ ಇಂತಹ ಅಪರೂಪದ ಸಮುದ್ರಜೀವಿಗಳಿಗೆ ವಿನಾಶದ ಕಾಲ ಆರಂಭವಾಗಿದೆ.ದಿನೇದಿನೇ ಏರುತ್ತಿರುವ ಭೂತಾಪಮಾನ, ಸಮುದ್ರಕ್ಕೆ ಹರಿದುಬರುತ್ತಿರುವ ವಿನಾಶಕಾರಕ ರಾಸಾಯನಿಕ ವಸ್ತುಗಳು ಇವುಗಳ ಅಳಿವಿಗೆ ಕಾರಣವಾಗುತ್ತಿದೆ. ಪ್ರಕೃತಿದತ್ತವಾದ ಸಾಗರದ ಸಂಪತ್ತಾದ ಹವಳದ್ವೀಪಗಳ ಉಳಿವಿಗೆ ಮತ್ತು ಇವುಗಳ ಪುನರುಜ್ಜೀವನಗೊಳಿಸಲು ನಮ್ಮ ಸರ್ಕಾರಗಳೂ, ನಾವೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಅಪರೂಪದ ಈ ಜೀವಿಗಳನ್ನು ಸಂರಕ್ಷಿಸಲು ಆಸ್ಟ್ರೇಲಿಯಾ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿರುವುದು ಸಂತಸದ ವಿಷಯ.ಇವುಗಳ ಸಂರಕ್ಷಣೆ ಮಾನವರಾದ ನಮ್ಮ ಆದ್ಯ ಕರ್ತವ್ಯ.ಇದನ್ನು ನಾವು ಮರೆಯಬಾರದು...!!!

ಬನದ ಕಾಮನಬಿಲ್ಲು....!!!!!



ಚಿಟ್ಟೆ ಬಣ್ಣದ ಚಿಟ್ಟೆ
ಅಂದದ ಕಸೂತಿ ಬಟ್ಟೆ..!
ನಿನ್ನಯ ಮೈಯನು ಮುಟ್ಟೆ
ಸುಸ್ತಾಗಿ ಕಣ್ ಕಣ್ ಬಿಟ್ಟೆ.....!!

ಹೂವಿಂದುವ್ವಿಗೆ ಹಾರೇ
ಮಕರಂದವ ನೀ ಹೀರೇ..!
ಪರಾಗಸ್ಪರ್ಶವ ತಾರೇ
ಮೊಳಕೆಯೊಡೆಯಲಿ ಹಸಿರೇ..!!

ಅಸ್ಥಿರ ಬದುಕಿನ ಕೋಮಲೆ
ನಿನಗೆನ್ನುವರು ಚಂಚಲೆ...
ಬನದಂಗಳದ ಕಾಮನಬಿಲ್ಲೆ....!!!!
ಮನದಂಗಳದಲಿ ನೀ ನಿಂತೆಯಲ್ಲೆ...!!

(ಚಿತ್ರಕೃಪೆ-ಅಂತರ್ಜಾಲ)

                   ಬ್ಲಾಗ್ ಗೆಳೆಯರಿಗೆಲ್ಲ ನಂದನ ಸಂವತ್ಸರದ                
                              ಶುಭಾಶಯಗಳು


ಇಬ್ಬನಿಯ ಹನಿ


ಹಿಮಮಣಿ


ಚತುರ ನೇಕಾರ
ಕುಶಲ ಕಲೆಗಾರ
ಜೇಡನೆಣೆದ 
ಬಲೆಯ ಚಿತ್ತಾರಕೆ
ಅ...ಲ್ಲ...ಲ್ಲಿ
ಅಂದದ ಹಿಮಮಣಿಯ 
ಕುಸುರಿ ಕೆಲಸದ
ಅಲಂಕಾರ......!!!!!


ಮಂಜಿನ ಹನಿ


ತುಂಬು ಚಂದಿರನನ್ನು
ಹಿಡಿಯಲೇಬೇಕೆಂದು
ಇರುಳೆಲ್ಲ...
ಬೆನ್ನಟ್ಟಿ ದಣಿದ,
ಮುಗಿಲುಗಳಿಂದಿಳಿದ
ಬೆವರಿನ ಹನಿ....
ಈ... ಮಂಜಿನಹನಿ.....!!


(ಚಿತ್ರಕೃಪೆ-ಅಂತರ್ಜಾಲ)

ಸ್ತ್ರೀ.......!!

ಮಹಿಳಾ ದಿನಾಚರಣೆಯ ಶುಭಾಶಯಗಳು


ಮುಂಜಾನೆ ಬಾಗಿಲಿಗೆ
ಚುಕ್ಕಿ ಗೆರೆಗಳ ಎಳೆದು
ಶುಭದ ರಂಗೋಲಿಯನು ಬಿಡಿಸುವಾಕೆ...

ಅಮೃತದ ಗಳಿಗೆಗಳ
ಮನೆಯೊಳಗೆ ಕರೆಯುತಲಿ
ಹಸಿರು ತೋರಣವನ್ನು ಕಟ್ಟುವಾಕೆ....

ಒಲುಮೆಯನು ಹಂಚುತ್ತಾ
ನಲುಮೆಯನು ತೋರುತ್ತಾ
ಮನೆಮನವನೆಂದೆಂದು ಬೆಳಗುವಾಕೆ...

ನಲಿವುಗಳೆ ಕರಗದಿರಿ
ನೋವುಗಳೆ ಕಾಡದಿರಿ
ಎಂದೆಲ್ಲ ಮನದಲ್ಲಿ ಬಯಸುವಾಕೆ...

ನಿರುತವೂ ದೇವರಿಗೆ
ಬೆಲ್ಲದಾರತಿ ಬೆಳಗಿ
ತನ್ನವರ ಒಳಿತನ್ನು ಬೇಡುವಾಕೆ
ತನಗಾಗಿ ಏನನ್ನು ಬೇಡದಾಕೆ...

ಅಳಿಲೇ... ಅಳಿಲೇ...



ಅಳಿಲೇ... ಅಳಿಲೇ...
ಮುದ್ದಿನ ಅಳಿಲೇ..
ಚೀವ್.. ಚೀವ್.. ಎಂದು 
ಉಲಿಯುವ ಅಳಿಲೇ..

ವೇಗದಿ ಮರವನು
ಏರುವ ಅಳಿಲೇ
ಪಿಳಿ ಪಿಳಿಯೆಂದು 
ನೋಡುವ ಅಳಿಲೇ

ನನ್ನಯ ಕೈಯಿಗೆ 
ಸಿಕ್ಕರೆ ನೀನು
ನಿನ್ನಯ ನೆತ್ತಿಯ 
ಸವರುವೆ ನಾನು

ಮೃದು ಮೈಯ್ಯನ್ನು 
ಮುದ್ದಿಸಲೇನು?
ಬೆನ್ನಿನ ಗೆರೆಗಳ 
ಮುಟ್ಟಲೆ ನಾನು?

ಪುಟು ಪುಟು ಎಂದು
ಓಡುವೆ ಏಕೆ?
ತಿನ್ನಲು ಹಣ್ಣನು 
ಕೊಡುವೆನು ಬೇಕೆ?

ಬಾ..ಬಾ... ಅಳಿಲೇ
ಪುಟಾಣಿ ಅಳಿಲೇ..
ಮುದ್ದಿನ ಅಳಿಲೇ...

(ಚಿತ್ರಕೃಪೆ-ಅಂತರ್ಜಾಲ)

ವಿದೇಶ ವಿಹಾರ - 10 ಆಸ್ಟ್ರೇಲಿಯಾ ದೇಶ.. ಜನ..ಪರಿಸರ...


ವಿಸ್ತಾರವಾದ ದೇಶ.ವಿರಳ ಜನಸಂಖ್ಯೆ.ಆಸ್ಟ್ರ‍ೇಲಿಯಾ ದೇಶದ ಸುತ್ತಲಿರುವ ಕಡಲತಡಿಯಲ್ಲಿ ಮಾತ್ರ ನಾವು ನಗರಗಳನ್ನು ಮತ್ತು ಜನವಸತಿಯನ್ನು ಕಾಣಬಹುದು. ಮಧ್ಯ ಭಾಗದಲ್ಲಿ ದಟ್ಟ ಅರಣ್ಯ.ಕೃಷಿ, ಹೈನುಗಾರಿಕೆ, ಗಣಿಗಾರಿಕೆ ಇಲ್ಲಿನ ಜನರ ಮುಖ್ಯ ಉದ್ಯೋಗ.ವಾರವೆಲ್ಲ ಕಷ್ಟಪಟ್ಟು ದುಡಿದು, ವಾರಾಂತ್ಯದ ಎರಡು ದಿನ ತಮ್ಮ ಕುಟುಂಬದೊಂದಿಗೆ ಜಾಲಿಯಾಗಿ ಕಾಲಕಳೆಯುವ ಮನೋಭಾವದ ಜನರೇ ಇಲ್ಲಿ ಹೆಚ್ಚು.ಇಂಗ್ಲೆಂಡಿನ ಮೂಲದವರೇ ಹೆಚ್ಚಿರುವ ಕಾರಣ,ಇಂಗ್ಲೀಷ್ ಇಲ್ಲಿನವರ ಮಾತೃಭಾಷೆ.ಸಹಜವಾಗಿಯೇ ಕ್ರಿಸ್ಮಸ್ ಈ ದೇಶದ ದೊಡ್ಡಹಬ್ಬ.
   







ನಗರ ಪ್ರದೇಶವಿರಲಿ ಹಳ್ಳಿಗಳಿರಲಿ (ಇಲ್ಲಿ ಹಳ್ಳಿಗಳಿಗೆ ಕಂಟ್ರಿಸೈಡ್ ಎನ್ನುತ್ತಾರೆ) ಅಲ್ಲಿನ ಶುಚಿತ್ವ ಮೆಚ್ಚುಗೆಗೆ ಪಾತ್ರವಾಗುತ್ತದೆ.ಅಲ್ಲಿನ ಜನರ ನಗುಮೊಗದ ನಡೆನುಡಿ ಮನಸ್ಸಿಗೆ ಹಿತವೆನ್ನಿಸುತ್ತದೆ.ಕಾನೂನು ಪರಿಪಾಲನೆ ಎಲ್ಲರ  ಧ್ಯೇಯ.ಸೌಜನ್ಯಯುತ ನಡವಳಿಕೆ.ಮಿತ ಮಾನವ ಶಕ್ತಿಯ ಪರಿಣಾಮ ಯಂತ್ರಗಳ ಬಳಕೆ ಅಧಿಕ.

ಎಲ್ಲೆಲ್ಲೂ ಶುಚಿಯೋ ಶುಚಿ.......


ರಸ್ತೆಯಲ್ಲಿ,ಫುಟ್ಪಾತ್ ನಲ್ಲಿ ಉಗುಳುವುದು,ಗಲೀಜು ಮಾಡುವುದು ಹಾಳು ಮಾಡುವುದು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ಎಲ್ಲೆಡೆಯೂ ಕಸದ ತೊಟ್ಟಿ ಕಂಡುಬರುತ್ತದೆ.ನಮ್ಮ ದೇಶದಂತೆ ಅವು ತುಂಬಿ ಚೆಲ್ಲಿದರೂ ಖಾಲಿ ಮಾಡದ್ದನ್ನು ನಾನಿಲ್ಲಿ ಎಲ್ಲಿಯೂ ಕಾಣಲಿಲ್ಲ.ಇಲ್ಲಿನ ರಸ್ತೆಗಳು ನುಣುಪಾಗಿ ವಿಶಾಲವಾಗಿರುತ್ತದೆ.ಒಂದು ಚಿಕ್ಕ ಗುಂಡಿಯನ್ನಾಗಲೀ, ಕಸಕಡ್ಡಿಯನ್ನಾಗಲೀ ರಸ್ತೆಗಳಲ್ಲಿ ಹುಡುಕಿದರೂ ಸಿಕ್ಕದು. ಸ್ವಚ್ಛತೆಗೆ ಮೊದಲ ಆದ್ಯತೆ.ಸಾರ್ವಜನಿಕ ಸ್ಥಳಗಳು ಶುಚಿಯಾಗಿರಲು ಇಲ್ಲಿನ ಜನರ ಮನೋಭಾವನೆ ,ಸಹಕಾರದೊಂದಿಗೆ ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆಯೂ ಕಾರಣ.ಕಂಡಲ್ಲಿ ಉಗಿಯುವುದು, ತಿಂದು-ಕುಡಿದು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ರಸ್ತೆ,ಏರ್ ಪೋರ್ಟ್, ಬೀಚ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಎಲ್ಲೆಡೆಯೂ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಇಟ್ಟಿರುತ್ತಾರೆ. ಜನರೂ ಸಹ ಇವುಗಳನ್ನು ಹುಡುಕಿ ಕಸ ಹಾಕುತ್ತಾರೆ.ನಿಯಮಿತವಾಗಿ ಕಸವನ್ನು ಖಾಲಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿಡುವ ವ್ಯವಸ್ಥೆಯನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು.ನಮ್ಮ ಮುನ್ಸಿಪಾಲಿಟಿಯ ಕಸದತೊಟ್ಟಿ ತುಂಬಿ ಕೊಳೆತು ನಾರುತ್ತಿದ್ದರೂ ಖಾಲಿ ಮಾಡುವ ಸೌಜನ್ಯ ನಮ್ಮ ಸರ್ಕಾರಿ ಇಲಾಖೆಯಲ್ಲಿ ಯಾಕಿಲ್ಲ ಎಂದು ಬೇಸರವಾಗುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ನಿರ್ವಹಣೆ ಜನರು ಮತ್ತು ಸರ್ಕಾರ ಎರಡೂ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂಬುದನ್ನು ನಾವಿಲ್ಲಿ ತಿಳಿಯಬಹುದು.         

ಈ ದೇಶದಲ್ಲಿ ಪ್ರತಿದಿನದ ಕಸ ಮತ್ತು ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆ ಮನಮೆಚ್ಚುವಂತಿದೆ.ಪ್ರತಿಯೊಂದು ಮನೆಗೂ ದೊಡ್ಡದಾದ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಸಿಟಿ ಕೌನ್ಸಿಲ್ ಒದಗಿಸಿರುತ್ತದೆ. ತ್ಯಾಜ್ಯವಸ್ತುಗಳನ್ನು Dust Binಗೂ ಮತ್ತು  ಪ್ಲಾಸ್ಟಿಕ್, ಪೇಪರ್ ಮುಂತಾದುವುಗಳನ್ನು Recycle Binಗೂ ಹಾಕಿಡಬೇಕು.ನಿಗದಿಯಾದ ದಿನ ಮನೆಯ ಹೊರಗೆ,ರಸ್ತೆಯ ಪಕ್ಕದಲ್ಲಿ ತುಂಬಿರುವ ಈ ಕಸದ ಡಬ್ಬಗಳನ್ನು ಇಟ್ಟರೆ ಕಸ ವಿಲೇವಾರಿಯ ವಾಹನ ಬಂದು ಅದನ್ನು ಖಾಲಿ ಮಾಡಿ ಇಟ್ಟು ಹೋಗುತ್ತದೆ.ಮನೆಗಳಿಗಾದರೆ ವಾರದಲ್ಲಿ ಎರಡು ಬಾರಿ ಕಸ ವಿಲೇವಾರಿ ಮಾಡುತ್ತಾರೆ. ಹೆಚ್ಚು ಕಸ ಬೀಳುವ ಹೋಟೆಲ್,ಹಾಸ್ಪಿಟಲ್ ಮುಂತಾದುವೆಡೆಗಳಲ್ಲಿ ದಿನವೂ ಕಸವನ್ನು ನಿಯಮಿತವಾಗಿ ತೆಗೆದುಕೊಂಡು ಹೋಗುವ  ವ್ಯವಸ್ಥೆಯಿರುವುದರಿಂದ ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಣಬಹುದು.


ನುಣುಪಾದ ರಸ್ತೆಗಳು ಮತ್ತು ಸಂಚಾರಿ ನಿಯಮ


ಇಲ್ಲಿನ ಜನ ಟ್ರಾಫಿಕ್ ನಿಯಮಗಳನ್ನು ತುಂಬಾ ಚೆನ್ನಾಗಿ ಪಾಲಿಸುತ್ತಾರೆ.ವಾಹನ ಚಾಲನೆಗೆ ಲೈಸನ್ಸ್ ನೀಡುವಾಗಲೇ ಎರಡು Test ಗಳನ್ನು ಕಟ್ಟುನಿಟ್ಟಾಗಿ ಮಾಡಿ , ಪಾಸಾದ ನಂತರ ಡ್ರೈವಿಂಗ್ ಲೈಸನ್ಸ್ ನೀಡುತ್ತಾರೆ. ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೋಲಿಸರಿರುವುದಿಲ್ಲ. ಎಲ್ಲೆಡೆಯೂ ಸಿ ಸಿ ಕ್ಯಾಮರಾಗಳನ್ನು ಅಳವಡಿಸಿರುತ್ತಾರೆ.ಯಾರಾದರು ರೂಲ್ಸ್ ಮುರಿದರೆ ಈ ಕ್ಯಾಮರಾದಲ್ಲಿ ಚಿತ್ರಿತವಾಗಿರುತ್ತದೆ. ನಂತರ ವಾಹನ ಮಾಲಿಕರ ಮನೆಗೆ ಫೈನ್ ಕಟ್ಟಲು ನೋಟೀಸ್ ಕಳುಹಿಸುತ್ತಾರೆ.ಇಂತಹ ನೋಟೀಸ್ ಗಳನ್ನು ಆಗ್ಗಾಗ್ಗೆ ಪಡೆದವರ ಡ್ರ‍ೈವಿಂಗ್ ಲೈಸನ್ಸನ್ನು ರದ್ದು ಮಾಡುವ ಕಟ್ಟುನಿಟ್ಟಿನ ಕ್ರಮ ಇಲ್ಲಿದೆ.ಹಾಗಾಗಿ ಇಲ್ಲಿನ ಜನ ರಸ್ತೆ ನಿಯಮಗಳನ್ನು ಪರಿಪಾಲಿಸುವುದರಿಂದ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಸುಲಭ ಮತ್ತು ಸುರಕ್ಷಿತ.ಪ್ರತಿ ರಸ್ತೆಯಲ್ಲಿಯೂ ಮಿತಿಮೀರಿದ ವೇಗದಿಂದ ವಾಹನವನ್ನು ಚಲಾಯಿಸುವಂತಿಲ್ಲ.ಇದೇ ವೇಗದಲ್ಲಿಯೇ ನಿಮ್ಮ ವಾಹನವನ್ನು ಓಡಿಸಬೇಕೆಂಬ ಸೂಚನಾ ಫಲಕಗಳನ್ನು  ರಸ್ತೆ ಬದಿಯಲ್ಲಿ ನಿಲ್ಲಿಸಿರುತ್ತಾರೆ. ಆ ಮಿತಿಯೊಳಗೇ  ನಾವು ಹೋಗಬೇಕು ಇಲ್ಲದಿದ್ದರೆ ಫೈನ್ ಗ್ಯಾರಂಟಿ.ನಮ್ಮ ಮುಂದಿರುವ ವಾಹನಕ್ಕೂ ನಮ್ಮ ವಾಹನಕ್ಕೂ ಇಂತಿಷ್ಟೇ ಅಂತರವಿರಬೇಕು.ಸಿಕ್ಕ ಸಿಕ್ಕಲ್ಲಿ ನಮ್ಮ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವಂತಿಲ್ಲ.ಓವರ್ ಟೇಕ್ ಮಾಡಲು ಅನುಮತಿ ಇರುವೆಡೆ ಮಾತ್ರ ನಮ್ಮ ಮುಂದಿನ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಬೇಕು. ಜನರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಕಾನೂನುಗಳನ್ನು ಮಾಡಿದ್ದಾರೆ. ಜನರೂ ಸಹ ಅದನ್ನು ತಪ್ಪದೆ ಪಾಲಿಸುತ್ತಾರೆ.ಇಲ್ಲದಿದ್ದರೆ ಅಲ್ಲಿನ ಕಟ್ಟಿನಿಟ್ಟಿನ ಕಾನೂನಿನಿಂದಾಗಿ ಲೈಸನ್ಸ್ ರದ್ದಾಗುವ ಭಯವಿದೆ. ನಮ್ಮಲ್ಲೂ ನಮ್ಮ ಸರ್ಕಾರ ಜನರ ಸುರಕ್ಷತೆಗಾಗಿ ಅನೇಕ ಕಾನೂನುಗಳನ್ನು ಮಾಡಿರುವುದು ನಿಜ.ಆದರೆ ಅದನ್ನು ಪರಿಪಾಲಿಸುವ ಅಧಿಕಾರಿಗಳು ಮತ್ತು ಜನರು ಬಹಳ ಕಡಿಮೆ. ಇದೇ ನಮ್ಮ ದೇಶದಲ್ಲಿ ಅಪಘಾತಗಳು ಹೆಚ್ಚಲು ಕಾರಣ.ನಮ್ಮ ಜನರಲ್ಲಿ ಕಾನೂನಿಗೆ ಅನುಗುಣವಾಗಿ ನೆಡೆಯುವ ಪ್ರಜ್ಞೆ ಮೂಡಿಬರಬೇಕು.ಆಗಲೇ ಶಿಸ್ತುಬದ್ಧ ಜೀವನ ಸಾಧ್ಯ.    
     
ನಮ್ಮ ದೇಶದಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು,ದನಕರುಗಳು,ಕತ್ತೆ,ಕುದುರೆಗಳು ಅಲ್ಲದೆ ಹಂದಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ಮತ್ತು ಹಿಂಡುಹಿಂಡಾಗಿ ಮಲಗಿರುವುದನ್ನು ನೋಡಿದ್ದೇವೆ.ನಮ್ಮ ದೇಶದ ಅನೇಕ ಅಪಘಾತಗಳಿಗೆ ಇವೇ ಕಾರಣವೆನ್ನುವುದು ಸಹ ನಮಗೆ ತಿಳಿಯದ್ದೇನಲ್ಲ.ಆದರೆ ಇದನ್ನು ತಡೆಯಲು ನಮ್ಮಲ್ಲಿ ಸಾಧ್ಯವಾಗಿಲ್ಲ.ಆದರೆ ಆಸ್ಟ್ರೇಲಿಯಾದಲ್ಲಿ ರಸ್ತೆಗಳಲ್ಲಿ ಒಂದಾದರೂ ಪ್ರಾಣಿಯನ್ನು ನಾನು ನೋಡಲಿಲ್ಲ. ಪಟ್ಟಣ ಪ್ರದೇಶದಿಂದ ಹೊರಗೆ ವಿಶಾಲವಾದ ಜಾಗಗಳಲ್ಲಿ ಮಾತ್ರ (ನಮ್ಮಲ್ಲಿ ಗೋಮಾಳವಿದ್ದಂತೆ) ಪ್ರಾಣಿಗಳನ್ನು,ಹಸುಗಳನ್ನು ಸಾಕಬಹುದು.ಆದ್ದರಿಂದ ನಮ್ಮಲ್ಲಿಯಂತೆ ಹಾದಿಬೀದಿಗಳಲ್ಲಿ ಸಾಕುಪ್ರಾಣಿಗಳ ಹಾವಳಿ ಕಂಡುಬರುವುದಿಲ್ಲ.

ರಸ್ತೆಯ ಇಕ್ಕೆಲಗಳಲ್ಲೂ ಹುಲ್ಲಿನ ಲಾನುಗಳನ್ನು ಬೆಳೆಸಿರುವುದರಿಂದ ರಸ್ತೆಯಲ್ಲಿ ಧೂಳೇಳುವ ಸಾಧ್ಯತೆಗಳಿಲ್ಲ.ಇದರಿಂದ ಸುತ್ತಮುತ್ತಲ ಪರಿಸರ ಶುಭ್ರವಾಗಿರುತ್ತದೆ.

ಇಲ್ಲಿ ಕರೆಂಟ್ ಹೋಗುವುದೇ ಇಲ್ಲ.....!!!!!

ಪ್ರತಿ ಮನೆಮನೆಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಶುದ್ಧವಾದ ನೀರು ಮತ್ತು ವಿದ್ಯುತ್ತನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸೋಲಾರ್ ಪವರ್ ಉಪಯೋಗಿಸಲು ಇಲ್ಲಿನ ಸರಕಾರ ಹೆಚ್ಚಿನ ಒತ್ತು ನೀಡಿ, ಸೋಲಾರ್ ಉಪಯೋಗಿಸುವವರಿಗಾಗಿ ಕೆಲವು ಆಕರ್ಷಕ ರಿಯಾಯಿತಿಗಳನ್ನೂ ಜನರಿಗೆ ನೀಡಿ ಪ್ರೋತ್ಸಾಹ ಕೊಡುತ್ತದೆ.  
ಒಟ್ಟಿನಲ್ಲಿ ನೆಮ್ಮದಿಯಾಗಿ ಬದುಕಲು ಇರಬೇಕಾದ ಮೂಲಭೂತ ಸೌಕರ್ಯಗಳನ್ನು ಇಲ್ಲಿನ ಜನರು ಪಡೆದಿದ್ದಾರೆ.ನಿರ್ಮಲವಾದ ಗಾಳಿ,ಬೆಳಕು,ನೀರು ಮತ್ತು ಸ್ವಚ್ಛವಾದ ಪರಿಸರ ಇಲ್ಲಿನ ಜನರ ಸೌಭಾಗ್ಯವೆಂದು ನನ್ನ ಅನಿಸಿಕೆ.....!!