ವಿದೇಶ ವಿಹಾರ - 21 - "ಮಿಲನ" House Warming Ceremony

ನನ್ನ ಮಗಳ ನೂತನ ಮನೆಯ ಗೃಹಪ್ರವೇಶದ ಹೋಮಹವನಾದಿ ಕಾರ್ಯಕ್ರಮಗಳು ಗುರುವಾರ ಬಂದಿದ್ದರಿಂದ ಆತ್ಮೀಯರೆಲ್ಲರಿಗೂ ಬರಲಾಗಿರಲಿಲ್ಲ.ಹಾಗಾಗಿ ಹೊಸ ಮನೆಗೆ ಹೋದ ನಂತರ ಒಂದು ಶನಿವಾರದ ಸಂಜೆ ನಮ್ಮ ಮಗಳು-ಅಳಿಯನ ಸ್ನೇಹಿತರು,ಸಹೋದ್ಯೋಗಿಗಳು ಮತ್ತು ಅಲ್ಲಿನ ಭಾರತೀಯ ಸ್ನೇಹಿತರನ್ನು ಆಹ್ವಾನಿಸಿ House Warming Ceremonyಯನ್ನು ಏರ್ಪಡಿಸಿದ್ದರು.ವಿದೇಶಗಳಲ್ಲಿ ಗೃಹಪ್ರವೇಶ ಕಾರ್ಯಕ್ರಮಕ್ಕೆ  House Warming Ceremony ಎನ್ನುತ್ತಾರಂತೆ. ತಿಂಗಳು ಮುಂಚೆಯೇ ಎಲ್ಲರಿಗೂ ಮೈಲ್ ಮೂಲಕ ಆಮಂತ್ರಣ ಪತ್ರಿಕೆಯನ್ನು ಕಳುಹಿಸಲಾಗಿತ್ತು.

ನಮಗೆ ಹೊಸ ಮನೆಗೆ ಹೋದನಂತರ ಹದಿನೈದು ದಿನಗಳ ಕಾಲಾವಕಾಶ ಸಿಕ್ಕಿದ್ದರಿಂದ ,ಮನೆಯ ಎಲ್ಲಾ ಸಾಮಾನುಗಳನ್ನೂ ವ್ಯವಸ್ಥಿತವಾಗಿ ಜೋಡಿಸಿಕೊಳ್ಳಲು ಅವಕಾಶವಾಯಿತು. 
ನನ್ನ ಮಗಳ ನೇತೃತ್ವದಲ್ಲಿ ಪ್ರತಿಯೊಂದು ವಸ್ತುಗಳೂ ಎಲ್ಲೆಲ್ಲಿಗೆ ಜೋಡಿಸಬೇಕೋ ಅಲ್ಲಲ್ಲಿ ಸಿಂಗಾರಗೊಂಡವು.  Office room, Hall, Dining hall,Kitchen,Bed rooms,Bath rooms, Home Theatre  ಮತ್ತು  Pooja room ಎಲ್ಲವೂ ಅಚ್ಚುಕಟ್ಟಾಗಿ ಸಿದ್ಧಗೊಂಡವು.ಇವಲ್ಲದೆ ಹೊರಗೆ Garden ಮತ್ತು Swimming pool ಸುತ್ತಮುತ್ತಲೂ ಸ್ವಚ್ಛವಾದವು. 

ಮನೆ ಮುಂದೆ ವಿದ್ಯುತ್ ದೀಪಗಳನ್ನು ಬಿಡಲಾಯಿತು.ಒಳಗೆ ಹಾಲ್ ನಲ್ಲಿ ಬಲೂನ್ ಮತ್ತು ಹೂವಿನ ಬೊಕ್ಕೆಗಳನ್ನಿಟ್ಟು ಅಲಂಕರಿಸಲಾಯಿತು. ಭಾರತಾಂಬೆಯ ಮುಂದೆ ದೀಪ  ಬೆಳಗಿಸಿ ಗೌರವಿಸಲಾಯಿತು.
ಬಂದವರು ಹಾಯಾಗಿ ಕುಳಿತುಕೊಳ್ಳಲು Swimming pool ಬಳಿ ಗಾರ್ಡನ್ನಿನಲ್ಲಿ ಕುರ್ಚಿಗಳನ್ನು ಹಾಕಿ ವ್ಯವಸ್ಥೆಗೊಳಿಸಲಾಯಿತು.ಪ್ಯಾಟಿಯೊನಲ್ಲಿ ಬಫೆ(ಊಟ)ಗೆ ಸಿದ್ಧಗೊಳಿಸಲಾಯಿತು.


ಪರ್ತ್ , ಮೆಲ್ಬೋರ್ನ್ ಮತ್ತು ನ್ಯೂಜಿಲ್ಯಾಂಡ್ ನಿಂದ ಸ್ನೇಹಿತರು ಒಂದು ದಿನ ಮೊದಲೇ ಆಗಮಿಸಿದ್ದರು. 
ಭಾರತೀಯರೇ ಅಲ್ಲದೆ ಆಸ್ಟ್ರೇಲಿಯನ್ಸ್,ಅಮೆರಿಕನ್ಸ್,ಚೈನೀಸ್ ಮತ್ತಿತರರು ಸೇರಿದ್ದರಿಂದ ಈ ಕಾರ್ಯಕ್ರಮವು ಒಂದು ರೀತಿ ವಿಶ್ವ ಬ್ರಾತೃತ್ವವನ್ನು ಪ್ರತಿನಿಧಿಸುವಂತಿತ್ತು. ಭಾರತೀಯರಾದ ನಮಗೆ ವಿದೇಶಿಯರ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವ ಕುತೂಹಲ.

ಸಂಜೆ 5.30 ಗಂಟೆಗೆ ಪಾರ್ಟಿ ಎಂದು ಒಂದು ತಿಂಗಳು ಮೊದಲೇ mailನಲ್ಲಿ invitation ಪೋಸ್ಟ್ ಮಾಡಲಾಗಿತ್ತು.ಅಲ್ಲಿ ಟೈಂ ಅಂದ್ರೆ ಟೈಂ.ಸಂಜೆ ಐದರಿಂದಲೇ ಅತಿಥಿಗಳು ಆಗಮಿಸಲಾರಂಭಿಸಿದರು. ಅಲ್ಲೆಲ್ಲಾ ಈ ರೀತಿಯ ಸಮಾರಂಭಗಳು ಸ್ವಲ್ಪ ಅಪರೂಪವಾದ್ದರಿಂದ ಭಾರತೀಯರಿರಲಿ ಅಥವ ಇತರರೇ ಆಗಲಿ ತುಂಬಾ ಸಂತೋಷದಿಂದ ಭಾಗವಹಿಸುತ್ತಾರೆ.ನಮ್ಮಂತೆ ಊಟದ ಸಮಯಕ್ಕೆ ಹೋಗಿ,ಮನೆ ನೋಡಿದ ಶಾಸ್ತ್ರ ಮಾಡಿ, ಶುಭಾಶಯ ತಿಳಿಸಿ ಬರುವುದಿಲ್ಲ. ಒಂದು ಸಂಜೆ ಸ್ನೇಹಿತರು ಒಟ್ಟಿಗೆ ಸೇರಲು ಅವಕಾಶವಾಯಿತೆಂದು ಸಂತಸಪಡುತ್ತಾರೆ.ನೂತನ ಮನೆಯ ಒಂದೊಂದು ಕೋಣೆಯನ್ನೂ ವೀಕ್ಷಿಸಿ,ವಿಶೇಷತೆಗಳನ್ನು ಗುರುತಿಸಿ,ಮೆಚ್ಚುಗೆ ವ್ಯಕ್ತಪಡಿಸಿ ಆತ್ಮೀಯ ಭಾವನೆ ತೋರಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಮೊದಲು ನನ್ನ ಮಗಳು-ಅಳಿಯ ಇಬ್ಬರಿಗೂ ಹೂವಿನ ಬೊಕ್ಕೆಯನ್ನಿತ್ತು ತುಂಬು ಹೃದಯದಿಂದ ಶುಭಾಶಯ ಕೋರುತ್ತಿದ್ದುದು ನೋಡಲು ಖುಷಿಯಾಗುತ್ತಿತ್ತು.ವಿದೇಶಿಯರಲ್ಲೂ ಸಹ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯನ್ನು ಕೊಡುವ ಪದ್ಧತಿಯನ್ನು ನಾನಿಲ್ಲಿ ಕಂಡೆ.  ಆಗಾಗ Juice ಹೀರುತ್ತಾ,ಅತಿಥಿಗಳಿಗಾಗಿಯೇ ಜೋಡಿಸಿಟ್ಟಿದ್ದ ಚಾಕೋಲೆಟ್,ಚಿಪ್ಸ್,ಬಿಸ್ಕತ್ಸ್,ಸಮೋಸ ಮುಂತಾದುವನ್ನು ಮೆಲ್ಲುತ್ತಾ ಇಡೀ ಮನೆಯ ತುಂಬಾ ಓಡಾಡಿ, ಮನೆಯವರೊಂದಿಗೆ ಮತ್ತು ಆಗಮಿಸಿದ್ದ ಇತರರೊಂದಿಗೆ ಮಾತುಕತೆಯಾಡುತ್ತಾ ಕಾಲ ಕಳೆದರು.ಪೂಜಾ ಕೋಣೆ ವಿದೇಶಿಯರನ್ನು ತುಂಬಾ ಆಕರ್ಷಿಸಿತು. 




ರಾತ್ರಿ ಎಂಟರ ನಂತರ ಡಿನ್ನರ್ ಪ್ರಾರಂಭವಾಗಿ ರಾತ್ರಿ ಹನ್ನೊಂದುವರೆ ತನಕವೂ ನೆಡೆಯಿತು. ಗಾರ್ಡನ್ನಿನಲ್ಲಿ  ವ್ಯವಸ್ಥೆ ಮಾಡಿದ್ದ ಕುರ್ಚಿಗಳಲ್ಲಿ ಗುಂಪು ಗುಂಪಾಗಿ ಕುಳಿತು ,ಕೇಸರಿಬಾತ್,ಜಾಮೂನ್,ಸಲಾಡ್,ರಾಯಿತ,ವೆಜಿಟೆಬಲ್ ಪಲಾವ್,ಪೂರಿ,ಸಾಗು,ಮೊಸರನ್ನ ಮುಂತಾದ item ಗಳನ್ನು ಸವಿಯುತ್ತಾ Ice cream ರುಚಿ ನೋಡುತ್ತಾ enjoy ಮಾಡಿದರು.




ಮಕ್ಕಳಿಗಂತೂ ಖುಷಿಯೋ ಖುಷಿ...!!ಮಕ್ಕಳೆಲ್ಲಾ ಸೇರಿ ಬಲೂನಿನಲ್ಲಿ ಆಟವಾಡುತ್ತಾ ತಮಗೆ ಇಷ್ಟವಾದ ಚಾಕೊಲೇಟ್,ಸಮೋಸ Ice cream ತಿನ್ನುತ್ತಾ ತಮ್ಮ ಸಾಂಪ್ರದಾಯಕ ಉಡುಪುಗಳನ್ನು ಧರಿಸಿ ಸಂಭ್ರಮಿಸುತ್ತಿದ್ದುದು ಎದ್ದು ಕಾಣುತ್ತಿತ್ತು.ಮನೆಯ ಒಪ್ಪ ಓರಣವನ್ನು ಗಮನಿದ ಪ್ರತಿಯೊಬ್ಬರೂ " Display homeನಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಎಲ್ಲರಲ್ಲೂ ಭಾನುವಾರದ ಸಂಜೆಯನ್ನು ಸಾರ್ಥಕವಾಗಿ ಕಳೆದ ಸಂತಸ ಕಾಣುತ್ತಿತ್ತು.ಎಲ್ಲರೂ ಹೊರಡುವಾಗ ನನ್ನ ಮಗಳು ನೀಡಿದ ಉಡುಗೊರೆಯನ್ನು ನೋಡಿ ವಿಸ್ಮಿತರಾಗಿ,ಧನ್ಯವಾದಗಳನ್ನು ತಿಳಿಸಿ ಒಬ್ಬೊಬ್ಬರಾಗಿ ತಮ್ಮ ಮನೆಗಳಿಗೆ ಹಿಂದಿರುಗಿದರು.ಕರ್ನಾಟಕ ಮತ್ತು ಭಾರತದ ಕೆಲವು ಸ್ನೇಹಿತರು ರಾತ್ರಿ ಒಂದು ಗಂಟೆಯ ತನಕ ಹಿಂದಿ ಸಿನಿಮಾವನ್ನು ನೋಡಿ ಆನಂದಿಸಿದರು. ಒಟ್ಟಿನಲ್ಲಿ ವಿಭಿನ್ನವಾದ ಒಂದು ಸಂಜೆಯನ್ನು ಕಳೆದ ಅನುಭವ ನಮಗಾಯಿತು.







ಆಸ್ಟ್ರೇಲಿಯಾದ ಜನರು ಹೊಸಮನೆಗೆ ಹೋಗುವಾಗ ನಮ್ಮ ರೀತಿಯಲ್ಲಿ ಗೃಹಪ್ರವೇಶ ಎಂದು ವಿಶೇಷವಾಗಿ ಯಾವುದೇ function ಮಾಡುವುದಿಲ್ಲವಂತೆ.ಆದರೆ ತಮಗೆ ಅತ್ಮೀಯರಾದವರನ್ನು ಒಂದು ದಿನ ಮನೆಗೆ ಆಹ್ವಾನಿಸಿ ಚಿಕ್ಕ ಪಾರ್ಟಿ ಮಾಡುತ್ತಾರೆ ಅಷ್ಟೆ. ನಮ್ಮಂತೆ ನೂರಾರು ಜನರನ್ನು ಒಟ್ಟಿಗೆ ಕರೆಯುವ  ಯಾವುದೇ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವ ಸಂಪ್ರದಾಯ ಅಲ್ಲಿನವರಲ್ಲಿ ಕಂಡುಬರುವುದಿಲ್ಲ.ಮಕ್ಕಳ birthday ಇರಲಿ ,ಮದುವೆ ಇರಲಿ ತಮಗೆ ಬಹಳ ಅತ್ಮೀಯರಾದವರನ್ನು ಮಾತ್ರ ಆಹ್ವಾನಿಸುತ್ತಾರೆ. ಇದೆಲ್ಲ ಅವರು ಬೆಳೆಸಿಕೊಂಡು ಬಂದ ಪದ್ಧತಿ. ಹಾಗಾಗಿಯೇ ವಿದೇಶಿಯರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರವಾದ ಆಸಕ್ತಿ. ಭಾರತೀಯರು ಮಾಡುವ ಯಾವುದೇ ಕಾರ್ಯಕ್ರಮಕ್ಕೆ ಕರೆ ಬಂದರೂ ವಿದೇಶಿಯರು ಅದರಲ್ಲಿ ಭಾಗಿಗಳಾಗಲು ತುದಿಗಾಲಲ್ಲಿ ನಿಂತಿರುತ್ತಾರೆ ಎಂದೇ ಹೇಳಬೇಕು. ನಮಗೂ ಅವರಿಗೂ ಆಹಾರ ಪದ್ದತಿಯಲ್ಲಿ ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ನಮ್ಮಲ್ಲಿಗೆ ಬಂದಾಗ ನಮ್ಮ ಸಂಪ್ರದಾಯಗಳಿಗೆ ಗೌರವಿಸುವ ದೊಡ್ಡ ಗುಣ ಅವರಲ್ಲಿದೆ. ಒಂದು ಉದಾಹರಣೆ ಹೇಳಬೇಕೆಂದರೆ ವಿದೇಶಿಯರಿಗೆ ತಮ್ಮ ಚಪ್ಪಲಿಗಳನ್ನು ಮನೆಯೊಳಗೆಲ್ಲಾ ಹಾಕಿಕೊಳ್ಳುವ ಅಭ್ಯಾಸವಿದೆ. ಆದರೆ ನಮ್ಮ ಮನೆಯ ಗೃಹಪ್ರವೇಶದ ದಿನ,ನಮ್ಮಂತೆ ಅವರೂ ಸಹ   ತಮ್ಮ ತಮ್ಮ ಚಪ್ಪಲಿ,ಶೂಗಳನ್ನು ಹೊರಗಡೆಯೇ ಬಿಟ್ಟು ಬಂದರು. ...!!ನಮ್ಮೊಡನೆ ಕಲೆತು , ನಾವು ಮಾಡಿದ ಅಡಿಗೆಯನ್ನು ಹೊಟ್ಟೆ ತುಂಬಾ ತಿಂದು, ಮನಃ ಪೂರ್ವಕವಾಗಿ ಚೆನ್ನಾಗಿದೆ ಎಂದು ಹೇಳಿ, ಸಮೋಸ, sweet ಗಳನ್ನು ಮತ್ತೆ ಮತ್ತೆ ಹಾಕಿಕೊಂಡು ತಿಂದರು..ಇದನ್ನು ಬರೆಯುವಾಗ ನನ್ನ ಅಳಿಯನ ಸಹೋದ್ಯೋಗಿ ಒಬ್ಬರು ನಮ್ಮ ತಿಳಿಸಾರನ್ನು ಬಹಳ ಇಷ್ಟಪಟ್ಟು ,ಅದನ್ನು ಅನ್ನದೊಡನೆ ಕಲೆಸಿ ತಿನ್ನುವುದನ್ನು ತಿಳಿಯದೆ, ಒಂದು ಸ್ಪೂನ್ ಅನ್ನ ಬಾಯಿಯಲ್ಲಿ ಹಾಕಿಕೊಂಡು ಬೌಲಿನಿಂದ ಸಾರನ್ನು ಹೀರುವ ವಿಷಯವನ್ನು ನನ್ನ ಮಗಳು ಹೇಳಿದ್ದು ನೆನಪಾಗಿ ನಗು ಬರುತ್ತಿದೆ.....!!!

ಭಾರತೀಯರು ತೆಂಗಿನಕಾಯಿಯನ್ನು ಅಡಿಗೆಗೆ ಉಪಯೋಗಿಸುತ್ತಾರೆ ಎಂದು ತಿಳಿದ ಆಸ್ಟ್ರೇಲಿಯಾದ ಒಬ್ಬ ಗೆಳೆಯರು ನಮ್ಮ ಮನೆಗೆ ಒಂದು ದೊಡ್ಡ ಬ್ಯಾಗಿನ ತುಂಬಾ ತೆಂಗಿನಕಾಯಿ ಮತ್ತು  ನೂತನ ಮನೆಯ ಹೋಮದ ದಿನ ಬಾಳೆಕಂದು. ಮಾವಿನಸೊಪ್ಪು ,ಹೂವುಗಳನ್ನು ತಮ್ಮ  ತೋಟದಿಂದ ತಂದುಕೊಟ್ಟದ್ದನ್ನು ನಾನಿಲ್ಲಿ ಉಲ್ಲೇಖಿಸಲು ಇಷ್ಟಪಡುತ್ತೇನೆ.

ಯುರೋಪ್ ದೇಶಗಳಲ್ಲಿ ನಾವು ಅನೇಕ ಚರ್ಚ್ ಗಳನ್ನುಕಾಣಬಹುದು. ಭಾರತದಲ್ಲಿ ಬಿಡಿ… ರಸ್ತೆಗೊಂದು ದೇವಾಲಯ, ಏರಿಯಾಗೊಂದು ಚರ್ಚ್ ಮತ್ತು ಮಸೀದಿಗಳು . ಆದರೆ ಆಸ್ಟ್ರೇಲಿಯಾದಲ್ಲಿ ಚರ್ಚ್ ಗಳು ತುಂಬಾ ಕಡಿಮೆ. ಲ್ಲಿ ನಾನು ಚರ್ಚ್ ಗಳನ್ನು ನೋಡಲಿಲ್ಲವೆಂದೇ ಹೇಳಬೇಕು....! ಅವರು ಮಾಡುವ ಕೆಲಸದಲ್ಲೇ ದೇವರನ್ನು ಕಾಣುತ್ತಾರೆ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.ಇನ್ನೊಬ್ಬರನ್ನು ಗೌರವಿಸುವ ಗುಣ ಅವರಲ್ಲಿದೆ.ಜೀವನದಲ್ಲಿ ಬಂದದ್ದನ್ನು ಬಂದಹಾಗೇ ಸ್ವೀಕರಿಸಿ ದಿನಗಳನ್ನು ಖುಷಿಯಾಗಿ ಕಳೆಯುವ ಲವಲವಿಕೆಯನ್ನು ನಾನು ಅವರಲ್ಲಿ ಗಮನಿಸಿದೆ.

ನವಿಲೇ... ನವಿಲೇ...!!



ನವಿಲೇ... ನವಿಲೇ...
ಬಣ್ಣದ ನವಿಲೇ

ಜುಟ್ಟನು ಜಂಬದಿ ಆಡಿಸೆ ನವಿಲೇ
ಬಿಂಕದಿ ಹೆಜ್ಜೆಯ ಮುಂದಿಡೆ ನವಿಲೇ

ಗರಿಗಳ ಬಿಚ್ಚಿ ಕುಣಿಯಲೆ ನವಿಲೇ
ಭೂಮಿಗೆ ಮಳೆಯನು ಕರೆಯಲೆ ನವಿಲೇ

ಬಾರೆಲೆ ನವಿಲೇ...
ಬಣ್ಣದ ನವಿಲೇ...
ಅಂದದ ನವಿಲೇ...
ಚೆಂದದ ನವಿಲೇ..
ಸಾವಿರ ಕಣ್ಗಳ ಸುಂದರ ನವಿಲೇ...!!!!

ಹೊಸ ವರುಷ ಹೊಸ ಹರುಷ......!!

ಸರ್ವರಿಗೂ ಶ್ರೀಜಯ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು



ಪುಟ್ಟ ಪುಟ್ಟ ಮಕ್ಕಳಿಗೆ ಈ ಚಿಕ್ಕ ಪದ್ಯದೊಂದಿಗೆ ಹಬ್ಬದ ಶುಭ ಹಾರೈಕೆಗಳು

ಕೋಗಿಲೆ

ಮಾವಿನ ಮರದಲಿ
ಚಿಗುರನು ಕಂಡು
ಮಿತ್ರ ವಸಂತ
ಬರುತಿಹನೆಂದು

ಎಲ್ಲೋ ಅಡಗಿದ
ಕೋಗಿಲೆಯೊಂದು
ಕುಹೂ...ಕುಹೂ..
ಗಾನವಗೈದಿಹುದು

ಮಧುರಾಲಾಪನೆ
ಮಾಡಿಹುದು
ಗೆಳೆಯಗೆ ಸ್ವಾಗತ
ಕೋರಿಹುದು
ಬಾ.. ಬಾರೋ...
ವಸಂತ ಎಂದಿಹುದು.



ಮರೆಯಲಾಗದ ಹೊಸ ವರುಷದ ಹಾಡುಗಳು

ಯುಗ ಯುಗಾದಿ ಕಳೆದರೂ.......
ತೆರೆದಿದೆ ಮನೆ ಓ ಬಾ ಅತಿಥಿ......
ಮಾಮರವೆಲ್ಲೊ ಕೋಗಿಲೆ ಎಲ್ಲೋ....
ಪಲ್ಲವಗಳ ಪಲ್ಲವಿಯಲಿ......


"ನನ್ನ ಮಗಳು- ನಾ ಕಂಡಂತೆ"

Facebook ಬಂದ ನಂತರ orkut.comನ ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ.....!!! ನಿನ್ನೆ ಆರ್ಕುಟ್ ನ ನನ್ನ profile ನೋಡುವ ಮನಸ್ಸಾಯಿತು....! ಅದ ನೋಡುತ್ತಾ ಹಳೆಯ ಸಿಹಿ ನೆನಪುಗಳು ಒಂದರ ನಂತರ ಮತ್ತೊಂದು ಮನಸೆಳೆಯಲು ಆರಂಭಿಸಿದವು. ನನ್ನ ಮಗಳ profile ವೀಕ್ಷಿಸುವಾಗ ಅವಳು ಬರೆದ ಕವನಗಳು ಮತ್ತು ನಾನು ಮತ್ತು ಗಿರೀಶ್ ಅವಳಿಗೆ ಬರೆದ Testimonial ಗಳು ನನ್ನನ್ನು ಆಕರ್ಷಿಸಿದವು....!ಅವುಗಳನ್ನು ನನ್ನ ಬ್ಲಾಗಿನಲ್ಲಿ ಹಂಚಿಕೊಳ್ಳುವ ಹಂಬಲವಾಯಿತು.
I LOVE YOU .......I LOVE YOU .......I LOVE YOU .......ಪುಟ್ಟು!!!!!!!






ನಾನು ಮತ್ತು ಗಿರೀಶ್ ಅವಳಿಗೆ ಬರೆದ Testimonial ಗಳು

Dec 17, 2009

"ನನ್ನ ಮಗಳು- ನಾ ಕಂಡಂತೆ"

ಈಗಲೂ ಮನೆಮಂದಿಗೆಲ್ಲ ಪುಟ್ಟು ಇವಳು.ಒಬ್ಬಳೇ ಮಗಳೆಂಬ ಅಹಂಭಾವ ನನ್ನ ಮಗಳಿಗಿಲ್ಲ. ಮಮತೆ, ಮುದ್ದಿನಲ್ಲೇ ಬೆಳೆದರೂ ಶಿಸ್ತನ್ನು ಮರೆತವಳಲ್ಲ. ಆಕಾಶಕ್ಕೆ ಏಣಿ ಹಾಕುವ ಸ್ವಭಾವವಲ್ಲ. ವಾಸ್ತವಿಕತೆಯ ಅರಿವಿದೆ. ಆದರೆ ತನ್ನ ಯೋಗ್ಯತೆಗೆ ನಿಲುಕುವ ಪ್ರತಿಯೊಂದಕ್ಕೂ ಕೈ ಚಾಚುವ ಮತ್ತು ಅದನ್ನು ತನ್ನದಾಗಿಸಿಕೊಳ್ಳಲು ಮುಂದಾಗುವ ಆತ್ಮವಿಶ್ವಾಸವಿದೆ. ಬೇರೆಯವರ ನೋವಿಗೆ ಸ್ಪಂದಿಸುವ ಮನಸ್ಸಿದೆ. ದೇವರು, ಹಿರಿಯರೆಂದರೆ ಗೌರವವಿದೆ. ಆದರೆ ಯಾವುದೇ ತೋರ್ಪಡಿಕೆಯನ್ನು ಇಷ್ಟಪಡುವುದಿಲ್ಲ. ಆಭರಣಗಳ ಮೇಲಿನ ಮೋಹಕ್ಕಿಂತ ತರಾವರಿ ಡ್ರೆಸ್ ಗಳನ್ನು ಹಾಕಿಕೊಳ್ಳುವುದೇ ಅಚ್ಚುಮೆಚ್ಚು. ದೇಶ-ವಿದೇಶ ಸುತ್ತುವ ಹಂಬಲ.ಚಿತ್ರಕಲೆ, ನಾಣ್ಯ ಸಂಗ್ರಹಣೆಯ ಅಚ್ಚುಮೆಚ್ಚಿನ ಹವ್ಯಾಸವಿದೆ. ಯಾವುದೇ ಕೆಲಸವನ್ನು ತನ್ನ ಸ್ವಂತ ಆಲೋಚನೆಯ ಮೂಲಕ ಬೇರೆಯವರಿಗಿಂತ ಭಿನ್ನವಾಗಿ ಮಾಡುವ ತಾಕತ್ತಿದೆ. ಚಿಕ್ಕವಳಿದ್ದಾಗಿಂದ ನನ್ನ ಮಗಳು ಬೇರೆಯವರಿಗೆ ಮಾದರಿಯಾಗಿದ್ದಾಳೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಗಿರೀಶ್ ಹೇಳಿದಂತೆ ಪಾನಿಪೂರಿ ಪ್ರಿಯೆ, ಷಾಪಿಂಗ್ ಅಂದ್ರೆ ರೆಡಿ.

ಬೆಳಗ್ಗೆ ಬೇಗ ಏಳುವುದೆಂದರೆ ಆಗದು. ಆದರೆ ಎದ್ದ ನಂತರ ಎಲ್ಲಾಕೆಲಸವೂ ಚಕಾಚಕ್ ಎಂದು ಮುಗಿಸಿಬಿಡಬೇಕು.ಸ್ವಲ್ಪ ಮುಂಗೋಪಿ. ಕೋಪ ಹೆಚ್ಚು ಹೊತ್ತಿರುವುದಿಲ್ಲ ಎಂಬುದು ಸಮಾಧಾನದ ವಿಷಯ.

ಸ್ಮಿತಾ - ನಮ್ಮ ಮನ-ಮನೆಯ ಸಿಂಗಾರ.ನಮ್ಮ ಬಾಳ ಬಂಗಾರ.
ನಿಮ್ಮ ಬದುಕಾಗಿರಲಿ ಮಧುರ.... ಮಧುರ....ಮಧುರ....


- Nov 18, 2009
Here is my testi for my dearest Smitha urf smi, simi, smith, smiz, grishmi...... is my cutest wife. Good things about her are she is very understanding,patient,adjusting and always cheerfull, but bad thing is she gets very cranky atleast once a day like every women on this earth:). Hogs for shopping, cant stay a day without thinking of shopping, next moment my mind calculates how many extra teeth I have to pull to fulfill her requirements☺.She wants Pani Puri in Townsville, I don’t know from where to get???. Smi and I have been married for four months. It's been a good, arranged marriage. We are getting to know each other well, everyday is a new day for us. But I have noticed all good qualities, a woman should have to handle a happy married life. Before I made up my mind to marry smi,many people told me she is the only daughter in her family so will be over pampered,demanding,dominating etc etc etc. I did not see 0.1% of such attitude in her. I must say that I am proud to be part of her family.LOVE U SMI..

ಮಹಾಶಿವರಾತ್ರಿ – ಸರ್ವಂ ಶಿವಮಯಂ


ಶಿಶಿರ ಋತುವಿನ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ನಾವು ಶಿವರಾತ್ರಿ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತೇನೆ. ತ್ರಯೋದಶಿಯು ಶಕ್ತಿರೂಪ ಮತ್ತು ಚತುರ್ದಶಿಯು ಶಿವ ರೂಪ. ಹಾಗಾಗಿ ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದನ್ನು ಶಿವಶಕ್ತಿಯೋಗವೆನ್ನುತ್ತಾರೆ. ಇದು ಶಿವರಾತ್ರಿಯ ವಿಶೇಷವೆಂದು ನಮ್ಮ ಹಿರಿಯರು ಹೇಳಿದ್ದಾರೆ.

ಶಿವನೆಂದರೆ ಮಂಗಳಕರ ಎಂದರ್ಥವಾಗುತ್ತದೆ. ಸಮುದ್ರ ಮಂಥನ ಕಾಲದಲ್ಲಿ ಮೊದಲಿಗೆ ಹಾಲಾಹಲ ಉತ್ಪತ್ತಿಯಾದಾಗ, ಲೋಕಕಲ್ಯಾಣಕ್ಕಾಗಿ ಪರಶಿವನು ಆ ವಿಷವನ್ನು ತಾನೇ ಕುಡಿದುಬಿಟ್ಟನು. ಆದರೆ ಪಾರ್ವತಿಯು ಆ ವಿಷವು ಶಿವನ ಕಂಠದಿಂದ ಕೆಳಗಿಳಿಯದಂತೆ  ಆ ರಾತ್ರಿಯಿಡೀ ತಡೆಹಿಡಿದಳು. ಆಗ ನೆರೆದಿದ್ದ ದೇವತೆಗಳು ರಾತ್ರಿಯೆಲ್ಲಾ ಶಿವನ ಭಜನೆ ಮಾಡಿದ ದಿನವಿದು ಎಂಬುದನ್ನು ಶಿವಪುರಾಣದಲ್ಲಿ ನೋಡಬಹುದು. ಹಾಗಾಗಿ ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ,ಶಿವಧ್ಯಾನವನ್ನು ಮಾಡುವ ಪದ್ಧತಿ ಬೆಳೆದುಬಂದಿದೆ.

ಸರ್ವೇಶ್ವರನಾದ ಪರಶಿವನ ಆದಿ ಅಂತ್ಯವನ್ನು ಹುಡುಕಲು ಹೊರಟ ವಿಷ್ಣು ಬ್ರಹ್ಮರಿಗೆ ಶಿವರಾತ್ರಿಯಂದೇ ಜಗದೀಶ್ವರನು ಲಿಂಗರೂಪದಲ್ಲಿ ದರ್ಶನವಿತ್ತನೆಂದು ಪ್ರತೀತಿಯಿದೆ. ಶಿವ ಪಾರ್ವತಿಯರ ವಿವಾಹ ಮಹೋತ್ಸವ ನಡೆದ ದಿನವೂ ಇದೆಂದು ಉಲ್ಲೇಖವಿದೆ. ಅಲ್ಲದೆ ಈ ದಿನವು ಶಿವನಿಗೆ ತುಂಬಾ ಪ್ರಿಯವಾದ ದಿನ. ಮಹೇಶ್ವರನು ತನ್ನ ವಲ್ಲಭೆ ಪಾರ್ವತಿಯೊಡನೆ ಈ ದಿನ ಕೈಲಾಸದಿಂದ ಇಳಿದುಬಂದು ತನ್ನ ಭಕ್ತರ ಪೂಜೆಯನ್ನು  ಸ್ವೀಕರಿಸಿ, ಅನುಗ್ರಹಿಸುತ್ತಾನೆ ಎಂಬುದು ನಮ್ಮ ನಂಬಿಕೆ.

ಶಿವರಾತ್ರಿಯಂದು ಜಗತ್ತೇ ಶಿವಮಯವು.ಶಿವನು ಅಭಿಷೇಕ ಪ್ರಿಯ. ಬಿಲ್ವ ಪ್ರಿಯ. ತುಂಬೆ ಪ್ರಿಯ. ಹಾಗಾಗಿ ಈ ದಿನದಂದು ಹಗಲೆಲ್ಲ  ಉಪವಾಸ ಮಾಡಿ ರಾತ್ರಿಯಿಡೀ ಶಿವಪೂಜೆ ಶಿವಧ್ಯಾನದಿಂದ ಜಾಗರಣೆ ಮಾಡಿದರೆ ಪಾಪಕರ್ಮಗಳು ನಿವಾರಣೆಯಾಗಿ ಮುಕ್ತಿ ದೊರೆಯುತ್ತದೆ. ಅಜ್ಞಾನದ ಅಂಧಕಾರವನ್ನು ನೀಗಿಸಿ  ಜ್ಞಾನದ ಬೆಳಕನ್ನು ಕರುಣಿಸು ಎಂದು ಶಿವನಲ್ಲಿ ಬೇಡುವ ದಿನವೇ ಶಿವರಾತ್ರಿಯಾಗಿದೆ. ಶಿವನು ಭಕ್ತಿಪ್ರಿಯ. ಬಸವಣ್ಣನವರು ಹೇಳಿದಂತೆ ನಮ್ಮ ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ. ಆಡಂಬರ ಪ್ರಿಯನಲ್ಲವೇ ಅಲ್ಲ. ಇವೆಲ್ಲಕ್ಕಿಂತ ಶಿವನು  ಭಕ್ತಿಪ್ರಿಯ. ನಿಷ್ಕಲ್ಮಶವಾದ ,ಪರಿಶುದ್ಧವಾದ ಭಕ್ತಿಗೆ ಒಲಿಯುವಂಥವನು. ಅದ್ದರಿಂದ ಶುದ್ಧ ಮನಸ್ಸಿನಿಂದ ಅವನ ಪೂಜೆಯನ್ನು ಮಾಡಿ ಪರಶಿವನ ಕೃಪೆಗೆ ಪಾತ್ರರಾಗೋಣ. ಜಗತ್ತಿನ ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಆ ಪರಮೇಶ್ವರನನ್ನು ಪ್ರಾರ್ಥನೆ ಮಾಡೋಣ. 
                            ಸರ್ವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.

ಬಾಲ್ಯದ ನೆನಪುಗಳು - 4 -"ಪುಣ್ಯಕೋಟಿ"


"ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆ
ಎಂದು ಗೊಲ್ಲನು ಕರೆದನು"

ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಈ ಪದ್ಯವನ್ನು ನಾವೆಲ್ಲರೂ ಓದಿಯೇ ಇರುತ್ತೇವೆ. ಆ ದಿನಗಳು ಇಂದೇಕೋ ಮತ್ತೆ ಮತ್ತೆ ನನಗೆ ನೆನಪಾಗುತ್ತಿದೆ....!!!. ನಮ್ಮಲ್ಲಿ ಎಂದರೆ ಹಿಂದೂಗಳಲ್ಲಿ ಹಸುಗಳನ್ನು "ಗೋಮಾತೆ" ಎಂದು ಪೂಜಿಸುತ್ತೇವೆ,ಗೌರವಿಸುತ್ತೇವೆ. ಅದರ ಪೂಜನೀಯತೆಗೆ ಕಿರೀಟವಿಟ್ಟಂತೆ ತೋರುವ ಕತೆ (ಆಗಲೂ ,ಈಗಲೂ ನಾವ್ಯಾರೂ ಇದನ್ನು ಒಂದು ಕತೆ ಅಂತ ಓದಲೇ ಇಲ್ಲ ಎನ್ನುವುದು ಬೇರೆ ಮಾತು.) "ಪುಣ್ಯಕೋಟಿ"ಯದು. ಕೊಟ್ಟ ವಚನವನ್ನು ಪಾಲಿಸಿದ್ದಕ್ಕಾಗಿ, ತನ್ನ ಸತ್ಯ ಸಂಧತೆ ತೋರಿದ್ದಕ್ಕಾಗಿ ಪ್ರಚಲಿತವಾದ ಕತೆಯಿದು.ಮಾತನ್ನು ಉಳಿಸಿಕೊಳ್ಳಲೋಸುಗ ತನ್ನ ಎಳೆಗರುವನ್ನು ತಬ್ಬಲಿಯಾಗಿಸಿ, ಹುಲಿಯ ಬಾಯಿಗೆ ಆಹಾರವಾಗಿ ಹೊರಟು ನಿಲ್ಲುವ ತಾಯಿಯೊಬ್ಬಳ ಮನಮಿಡಿಯುವ ಕಥಾನಕವಿದು.

ಅಂದು ತರಗತಿಯಲ್ಲಿ "ಪುಣ್ಯಕೋಟಿ" ಪಾಠ ನಡೆಯುತ್ತಿತ್ತು. ಚಿಕ್ಕವರಾದ ನಾವೆಲ್ಲಾ ಒಂದು ರೀತಿಯ ಕಾತರತೆ ಮತ್ತು ಮುಂದೇನಾಗುತ್ತೋ ಅನ್ನುವ ಭಯದಿಂದ ಪಾಠದಲ್ಲಿ ಮುಳುಗಿಹೋಗಿದ್ದೆವು. ಹುಲ್ಲುಮೇಯಲು ಕಾಡಿಗೆ ಹೋದಾಗ, ದಾರಿತಪ್ಪಿದ ಪುಣ್ಯಕೋಟಿ ಹಸು ಹುಲಿಯ ಕೈಗೆ ಸಿಕ್ಕಿಬಿಟ್ಟಿದೆ. ತನ್ನನ್ನು ಕೊಂದು ತಿನ್ನಲು ಬಂದ ಹುಲಿರಾಯನಿಗೆ ’ಮನೆಯಲ್ಲಿರುವ ತನ್ನ ಕಂದಮ್ಮನಿಗೆ ಒಮ್ಮೆ ಮಾತನಾಡಿಸಿ,ಹಾಲು ಕುಡಿಸಿ ಬಂದುಬಿಡುತ್ತೇನೆ. ಆಮೇಲೆ ನನ್ನನ್ನು ತಿನ್ನು’ ಎಂದು ಬೇಡಿಕೊಳ್ಳುತ್ತದೆ.ಆಗ ಹುಲಿ,

"ಹಸಿದ ವೇಳೆಗೆ ಸಿಕ್ಕಿದೊಡನೆಯೆ
ವಶವ ಮಾಡದೆ ಬಿಡಲು ನೀನು
ನುಸುಳಿ ಪೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು"

"ಸತ್ಯವೇ ನಮ್ಮ ತಾಯಿತಂದೆ
ಸತ್ಯವೇ ನಮ್ಮ ಬಂಧುಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು"

ಎಂದು ಹುಲಿಗೆ ಭಾಷೆಯನ್ನು ಕೊಟ್ಟು ,ಅನುಮತಿ ಪಡೆದು ಹಸು ತನ್ನ ಕರುವಿನ ಕಡೆಗೆ ತೆರಳಿದಾಗ ಉಸಿರು ಬಿಗಿಹಿಡಿದು ಕುಳಿತಿದ್ದ ನಾವೆಲ್ಲಾ ನಿಟ್ಟುಸಿರು ಬಿಟ್ಟೆವು.ಆದರೆ ಪಾಠ ಅಷ್ಟಕ್ಕೇ ಮುಗಿಯಲಿಲ್ಲ...! ಕರುವಿನ ಬಳಿ ಬಂದ ಹಸು, ಅದಕ್ಕೆ ಹಾಲುಣಿಸಿ ಕಾಡಿನಲ್ಲಾದ ವಿಷಯವನ್ನೆಲ್ಲಾ ತಿಳಿಸಿ, ತಾನೀಗ ಹುಲಿಗೆ ಆಹಾರವಾಗಿ ಹೋಗಬೇಕು ಎಂದು ತನ್ನ ಕರುವಿಗೆ ತಿಳಿ ಹೇಳುತ್ತದೆ.ತಬ್ಬಿಬ್ಬಾದ ಕರು ನುಡಿಯುವ ಸಾಲುಗಳನ್ನು ಕೇಳುತ್ತಿದ್ದರೆ ಕಂಠ ಬಿಗಿದಂತಾಗುತ್ತದೆ.


"ಆರ ಮೊಲೆಯನು ಕುಡಿಯಲಮ್ಮ

ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು"

ಎಂದು ಹೃದಯ ಕರಗುವ ಹಾಗೆ ದುಃಖಿಸುತ್ತದೆ.

ಆಗ........ ಇದ್ದಕ್ಕಿದ್ದಂತೆ ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ದನಿ ಹಿಂದಿನ ಬೆಂಚಿನಿಂದ ತೂರಿಬಂತು.......!!  ಪಾಠದಲ್ಲಿ ಲೀನವಾಗಿದ್ದ ನಾವೆಲ್ಲ ಒಮ್ಮೆಲೆ ಬೆಚ್ಚಿ ಹಿಂದೆ ತಿರುಗಿದೆವು.  ತನ್ನ ತಾಯಿಯನ್ನು ಕಳೆದುಕೊಂಡ ನಮ್ಮ ಗೆಳತಿಯ ಅಳು ಮೇರೆಮೀರಿತ್ತು. ...!!ಪಾಠ ನಿಲ್ಲಿಸಿದ ನಮ್ಮ ಮೇಷ್ಟ್ರು ಆಕೆಯ ಬಳಿ ತೆರಳಿ ಸಮಾಧಾನ ಮಾಡತೊಡಗಿದರು.  ಎಷ್ಟೇ ಸಂತೈಸಿದರೂ ಆಕೆಯ ಅಳು ನಿಲ್ಲಲಿಲ್ಲ. .....ಪಾಠ ಅಲ್ಲಿಗೇ ನಿಂತಿತು.!  ಚಿಕ್ಕವರಾದ ನಮಗೆಲ್ಲ ಮಂಕುಬಡಿದಂತಾಗಿತ್ತು.... ಇಷ್ಟು ವರುಷಗಳು ಕಳೆದರೂ, ನನ್ನ ಬಾಲ್ಯದ ಸಹಪಾಠಿಯ ಆ ಬಿಕ್ಕಳಿಕೆಯನ್ನು ನನ್ನಿಂದ ಈಗಲೂ, ಈ ಕ್ಷಣವೂ ಮರೆಲಾಗಿಲ್ಲ.......!!!!!  ನನ್ನ ಬಾಲ್ಯದ ಅನೇಕ ಸವಿ ನೆನಪುಗಳ ನಡುವೆ ಇದೊಂದು ಮರೆಯಲಾಗದ ಕಹಿ ನೆನಪಾಗಿ ನನ್ನನ್ನು ಕಾಡುತ್ತದೆ. ಆಕೆ ಈಗ ಎಲ್ಲೇ ಇದ್ರೂ ಚೆನ್ನಾಗಿರಲಿ ಅಂತ ಮನ ಹಾರೈಸುತ್ತದೆ.

ಇನ್ನೊಂದು ವಿಚಾರ ಹೇಳಬೇಕು.ಆ ಚಿಕ್ಕ ವಯಸ್ಸಿನಲ್ಲಿ "ಹಸು ತನ್ನ ಕರುವನ್ನ ಬಿಟ್ಟು ಆ ಹುಲಿ ಬಳಿ ಮತ್ತ್ಯಾಕೆ ಹೋಗ್ಬೇಕು? ಹುಲಿ ತುಂಬಾ ಕ್ರೂರಿ’ ಎನ್ನಿಸುತ್ತಿತ್ತು. ಆದರೆ ಈಗ ನನ್ನ ಭಾವನೆ ಬದಲಾಗಿದೆ.....! ಕೈಗೆ ಸಿಕ್ಕ ಹಸುವನ್ನು ಮನೆಗೆ ಕಳುಹಿಸಿದಾಗ ಹುಲಿ ಅದರ ಆಸೆಯನ್ನೂ ಬಿಟ್ಟಿರಬಹುದು. ಇದು ಹುಲಿಯ ತ್ಯಾಗದ ಗುಣವನ್ನು ತೋರಿಸುತ್ತದೆ.ಹಸು ಹಿಂತಿರುಗಿ ಬಂದಾಗ ಅದರ ಸತ್ಯ ಸಂಧತೆಗೆ ಅಚ್ಚರಿಪಡುತ್ತದೆ. ಭಾಷೆಗೆ ತಪ್ಪದ ಪುಣ್ಯಕೋಟಿಯ ಗುಣವನ್ನು ಮೆಚ್ಚಿ, ಅದನ್ನು ಕೊಂದು ತಿನ್ನಲು ಯೋಚಿಸಿದ ತನಗೆ ಸಾವೇ ಸರಿಯಾದ ಶಿಕ್ಷೆ ಎಂದು ತಿಳಿದು ತನ್ನ  ಪ್ರಾಣವನ್ನೇ ಕೊಟ್ಟಿತು. ಒಂದು ಕ್ರೂರ ಪ್ರಾಣಿಯಲ್ಲೂ ಇಂತಹ ಪರಿವರ್ತನೆ ಕಾಣಲು ಸಾಧ್ಯವೆ ಎಂಬ ಸಂಶಯ ಮೂಡದಿರದು.....!!!!

 ಹಾಗಾಗಿ ಪುಣ್ಯಕೋಟಿ ಕತೆ ಹಸುವಿನ ಸತ್ಯಸಂಧತೆಯನ್ನು ತೋರಿದಂತೆಯೇ ಹುಲಿಯ ತ್ಯಾಗವನ್ನೂ ಎತ್ತಿತೋರಿಸಿದೆ . ನಾಯಕನ ಹಿರಿಮೆಯನ್ನು ಹೇಳುವುದರೊಂದಿಗೆ ಖಳನಾಯಕನಲ್ಲಾದ  ಮನಃ ಪರಿವರ್ತನೆಯನ್ನೂ ಎತ್ತಿ ತೋರಿಸುವ ಇಂತಹ ಕತೆಗಳನ್ನು ಮಕ್ಕಳಿಗೆ ಹೇಳುತ್ತಿದ್ದ ನಮ್ಮ ಹಿರಿಯರ ಸುಸಂಸ್ಕೃತಿಯನ್ನು ಎಷ್ಟು ಹೊಗಳಿದರೂ ಕಡಿಮೆಯೇ ಅಲ್ಲವೇ? 
ಒಳಿತು, ಸದ್ವಿಚಾರಗಳು, ಸದಾಚಾರಗಳು ಎಲ್ಲಿಂದಲಾದರೂ ಬರಲಿ ಅದಕ್ಕೆ ಸ್ವಾಗತವಿರಲಿ......

ಗೋವಿನ  ಹಾಡಿನ ಪೂರ್ಣಪಾಠ ಕೆಳಗಿದೆ.  ಹಾಡಿಕೊಳ್ಳಲು ಚೆನ್ನಾಗಿದೆ
ಮೂಲ ಗೀತೆ

ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ

ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ

ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು

ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು

ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು

ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು

ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆಂದದಿ ತಾ ಬರುತಿದೆ

ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು

ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯಒಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ

ಹಸಿದವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು

ಮೂರುಮೂರ್ತಿಗಳಾಣೆ ಬರುವೆನು ಸೂರ್ಯಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು

ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು

ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆ ನೆಂದು ಬಂದೆನು ದೊಡ್ಡಿಗೆ

ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲಾರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ

ಸತ್ಯವೇ ನಮ್ಮತಾಯಿತಂದೆ ಸತ್ಯವೇ ನಮ್ಮ ಸಕಲ ಬಳಗೆ
ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನ್ನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ

ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು

ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ

ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು

ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನುಎನುತಲಿ ತನ್ನ ಮನದೊಳು ಧ್ಯಾನಿಸಿ

ಮೂರುಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.


ಹಿಂದೆ ಪ್ರಾಥಮಿಕ ಶಾಲಾ ಮಕ್ಕಳ ಪಠ್ಯದಲ್ಲಿದ್ದ ರೀತಿ- (ಇದನ್ನೇ ತಬ್ಬಲಿಯು ನೀನಾದೆ ಮಗನೆಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ)


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೋಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಶದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಶದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
    
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

(ಚಿತ್ರ ಮತ್ತು ಗೀತೆಗಳ ಕೃಪೆ :-- ಅಂತರ್ಜಾಲ) 

ಸಮರ್ಪಣೆ


ಪ್ರಕೃತಿದೇವಿ

ತನ್ನ ಮಡಿಲ

ಫಲ ಪುಷ್ಪಗಳನ್ನೆಲ್ಲ

ಹಸಿರು ಹರಿವಾಣದೊಳಿಟ್ಟು

ಸೃಷ್ಠಿಕರ್ತನಿಗೆ

ಸಮರ್ಪಿಸಿದಾಗ

ಮೂಡಿದ..ಧನ್ಯತೆಯ ಹನಿ

ನೀ..... ಇಬ್ಬನಿ....!!!!!