ಮಹಾಶಿವರಾತ್ರಿ – ಸರ್ವಂ ಶಿವಮಯಂ


ಶಿಶಿರ ಋತುವಿನ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ನಾವು ಶಿವರಾತ್ರಿ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತೇನೆ. ತ್ರಯೋದಶಿಯು ಶಕ್ತಿರೂಪ ಮತ್ತು ಚತುರ್ದಶಿಯು ಶಿವ ರೂಪ. ಹಾಗಾಗಿ ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದನ್ನು ಶಿವಶಕ್ತಿಯೋಗವೆನ್ನುತ್ತಾರೆ. ಇದು ಶಿವರಾತ್ರಿಯ ವಿಶೇಷವೆಂದು ನಮ್ಮ ಹಿರಿಯರು ಹೇಳಿದ್ದಾರೆ.

ಶಿವನೆಂದರೆ ಮಂಗಳಕರ ಎಂದರ್ಥವಾಗುತ್ತದೆ. ಸಮುದ್ರ ಮಂಥನ ಕಾಲದಲ್ಲಿ ಮೊದಲಿಗೆ ಹಾಲಾಹಲ ಉತ್ಪತ್ತಿಯಾದಾಗ, ಲೋಕಕಲ್ಯಾಣಕ್ಕಾಗಿ ಪರಶಿವನು ಆ ವಿಷವನ್ನು ತಾನೇ ಕುಡಿದುಬಿಟ್ಟನು. ಆದರೆ ಪಾರ್ವತಿಯು ಆ ವಿಷವು ಶಿವನ ಕಂಠದಿಂದ ಕೆಳಗಿಳಿಯದಂತೆ  ಆ ರಾತ್ರಿಯಿಡೀ ತಡೆಹಿಡಿದಳು. ಆಗ ನೆರೆದಿದ್ದ ದೇವತೆಗಳು ರಾತ್ರಿಯೆಲ್ಲಾ ಶಿವನ ಭಜನೆ ಮಾಡಿದ ದಿನವಿದು ಎಂಬುದನ್ನು ಶಿವಪುರಾಣದಲ್ಲಿ ನೋಡಬಹುದು. ಹಾಗಾಗಿ ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ,ಶಿವಧ್ಯಾನವನ್ನು ಮಾಡುವ ಪದ್ಧತಿ ಬೆಳೆದುಬಂದಿದೆ.

ಸರ್ವೇಶ್ವರನಾದ ಪರಶಿವನ ಆದಿ ಅಂತ್ಯವನ್ನು ಹುಡುಕಲು ಹೊರಟ ವಿಷ್ಣು ಬ್ರಹ್ಮರಿಗೆ ಶಿವರಾತ್ರಿಯಂದೇ ಜಗದೀಶ್ವರನು ಲಿಂಗರೂಪದಲ್ಲಿ ದರ್ಶನವಿತ್ತನೆಂದು ಪ್ರತೀತಿಯಿದೆ. ಶಿವ ಪಾರ್ವತಿಯರ ವಿವಾಹ ಮಹೋತ್ಸವ ನಡೆದ ದಿನವೂ ಇದೆಂದು ಉಲ್ಲೇಖವಿದೆ. ಅಲ್ಲದೆ ಈ ದಿನವು ಶಿವನಿಗೆ ತುಂಬಾ ಪ್ರಿಯವಾದ ದಿನ. ಮಹೇಶ್ವರನು ತನ್ನ ವಲ್ಲಭೆ ಪಾರ್ವತಿಯೊಡನೆ ಈ ದಿನ ಕೈಲಾಸದಿಂದ ಇಳಿದುಬಂದು ತನ್ನ ಭಕ್ತರ ಪೂಜೆಯನ್ನು  ಸ್ವೀಕರಿಸಿ, ಅನುಗ್ರಹಿಸುತ್ತಾನೆ ಎಂಬುದು ನಮ್ಮ ನಂಬಿಕೆ.

ಶಿವರಾತ್ರಿಯಂದು ಜಗತ್ತೇ ಶಿವಮಯವು.ಶಿವನು ಅಭಿಷೇಕ ಪ್ರಿಯ. ಬಿಲ್ವ ಪ್ರಿಯ. ತುಂಬೆ ಪ್ರಿಯ. ಹಾಗಾಗಿ ಈ ದಿನದಂದು ಹಗಲೆಲ್ಲ  ಉಪವಾಸ ಮಾಡಿ ರಾತ್ರಿಯಿಡೀ ಶಿವಪೂಜೆ – ಶಿವಧ್ಯಾನದಿಂದ ಜಾಗರಣೆ ಮಾಡಿದರೆ ಪಾಪಕರ್ಮಗಳು ನಿವಾರಣೆಯಾಗಿ ಮುಕ್ತಿ ದೊರೆಯುತ್ತದೆ. ಅಜ್ಞಾನದ ಅಂಧಕಾರವನ್ನು ನೀಗಿಸಿ  ಜ್ಞಾನದ ಬೆಳಕನ್ನು ಕರುಣಿಸು ಎಂದು ಶಿವನಲ್ಲಿ ಬೇಡುವ ದಿನವೇ ಶಿವರಾತ್ರಿಯಾಗಿದೆ. ಶಿವನು ಭಕ್ತಿಪ್ರಿಯ. ಬಸವಣ್ಣನವರು ಹೇಳಿದಂತೆ ನಮ್ಮ ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ. ಆಡಂಬರ ಪ್ರಿಯನಲ್ಲವೇ ಅಲ್ಲ. ಇವೆಲ್ಲಕ್ಕಿಂತ ಶಿವನು  ಭಕ್ತಿಪ್ರಿಯ. ನಿಷ್ಕಲ್ಮಶವಾದ ,ಪರಿಶುದ್ಧವಾದ ಭಕ್ತಿಗೆ ಒಲಿಯುವಂಥವನು. ಅದ್ದರಿಂದ ಶುದ್ಧ ಮನಸ್ಸಿನಿಂದ ಅವನ ಪೂಜೆಯನ್ನು ಮಾಡಿ ಪರಶಿವನ ಕೃಪೆಗೆ ಪಾತ್ರರಾಗೋಣ. ಜಗತ್ತಿನ ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಆ ಪರಮೇಶ್ವರನನ್ನು ಪ್ರಾರ್ಥನೆ ಮಾಡೋಣ. 
                            ಸರ್ವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.

ಬಾಲ್ಯದ ನೆನಪುಗಳು - 4 -"ಪುಣ್ಯಕೋಟಿ"


"ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆ
ಎಂದು ಗೊಲ್ಲನು ಕರೆದನು"

ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಈ ಪದ್ಯವನ್ನು ನಾವೆಲ್ಲರೂ ಓದಿಯೇ ಇರುತ್ತೇವೆ. ಆ ದಿನಗಳು ಇಂದೇಕೋ ಮತ್ತೆ ಮತ್ತೆ ನನಗೆ ನೆನಪಾಗುತ್ತಿದೆ....!!!. ನಮ್ಮಲ್ಲಿ ಎಂದರೆ ಹಿಂದೂಗಳಲ್ಲಿ ಹಸುಗಳನ್ನು "ಗೋಮಾತೆ" ಎಂದು ಪೂಜಿಸುತ್ತೇವೆ,ಗೌರವಿಸುತ್ತೇವೆ. ಅದರ ಪೂಜನೀಯತೆಗೆ ಕಿರೀಟವಿಟ್ಟಂತೆ ತೋರುವ ಕತೆ (ಆಗಲೂ ,ಈಗಲೂ ನಾವ್ಯಾರೂ ಇದನ್ನು ಒಂದು ಕತೆ ಅಂತ ಓದಲೇ ಇಲ್ಲ ಎನ್ನುವುದು ಬೇರೆ ಮಾತು.) "ಪುಣ್ಯಕೋಟಿ"ಯದು. ಕೊಟ್ಟ ವಚನವನ್ನು ಪಾಲಿಸಿದ್ದಕ್ಕಾಗಿ, ತನ್ನ ಸತ್ಯ ಸಂಧತೆ ತೋರಿದ್ದಕ್ಕಾಗಿ ಪ್ರಚಲಿತವಾದ ಕತೆಯಿದು.ಮಾತನ್ನು ಉಳಿಸಿಕೊಳ್ಳಲೋಸುಗ ತನ್ನ ಎಳೆಗರುವನ್ನು ತಬ್ಬಲಿಯಾಗಿಸಿ, ಹುಲಿಯ ಬಾಯಿಗೆ ಆಹಾರವಾಗಿ ಹೊರಟು ನಿಲ್ಲುವ ತಾಯಿಯೊಬ್ಬಳ ಮನಮಿಡಿಯುವ ಕಥಾನಕವಿದು.

ಅಂದು ತರಗತಿಯಲ್ಲಿ "ಪುಣ್ಯಕೋಟಿ" ಪಾಠ ನಡೆಯುತ್ತಿತ್ತು. ಚಿಕ್ಕವರಾದ ನಾವೆಲ್ಲಾ ಒಂದು ರೀತಿಯ ಕಾತರತೆ ಮತ್ತು ಮುಂದೇನಾಗುತ್ತೋ ಅನ್ನುವ ಭಯದಿಂದ ಪಾಠದಲ್ಲಿ ಮುಳುಗಿಹೋಗಿದ್ದೆವು. ಹುಲ್ಲುಮೇಯಲು ಕಾಡಿಗೆ ಹೋದಾಗ, ದಾರಿತಪ್ಪಿದ ಪುಣ್ಯಕೋಟಿ ಹಸು ಹುಲಿಯ ಕೈಗೆ ಸಿಕ್ಕಿಬಿಟ್ಟಿದೆ. ತನ್ನನ್ನು ಕೊಂದು ತಿನ್ನಲು ಬಂದ ಹುಲಿರಾಯನಿಗೆ ’ಮನೆಯಲ್ಲಿರುವ ತನ್ನ ಕಂದಮ್ಮನಿಗೆ ಒಮ್ಮೆ ಮಾತನಾಡಿಸಿ,ಹಾಲು ಕುಡಿಸಿ ಬಂದುಬಿಡುತ್ತೇನೆ. ಆಮೇಲೆ ನನ್ನನ್ನು ತಿನ್ನು’ ಎಂದು ಬೇಡಿಕೊಳ್ಳುತ್ತದೆ.ಆಗ ಹುಲಿ,

"ಹಸಿದ ವೇಳೆಗೆ ಸಿಕ್ಕಿದೊಡನೆಯೆ
ವಶವ ಮಾಡದೆ ಬಿಡಲು ನೀನು
ನುಸುಳಿ ಪೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು"

"ಸತ್ಯವೇ ನಮ್ಮ ತಾಯಿತಂದೆ
ಸತ್ಯವೇ ನಮ್ಮ ಬಂಧುಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು"

ಎಂದು ಹುಲಿಗೆ ಭಾಷೆಯನ್ನು ಕೊಟ್ಟು ,ಅನುಮತಿ ಪಡೆದು ಹಸು ತನ್ನ ಕರುವಿನ ಕಡೆಗೆ ತೆರಳಿದಾಗ ಉಸಿರು ಬಿಗಿಹಿಡಿದು ಕುಳಿತಿದ್ದ ನಾವೆಲ್ಲಾ ನಿಟ್ಟುಸಿರು ಬಿಟ್ಟೆವು.ಆದರೆ ಪಾಠ ಅಷ್ಟಕ್ಕೇ ಮುಗಿಯಲಿಲ್ಲ...! ಕರುವಿನ ಬಳಿ ಬಂದ ಹಸು, ಅದಕ್ಕೆ ಹಾಲುಣಿಸಿ ಕಾಡಿನಲ್ಲಾದ ವಿಷಯವನ್ನೆಲ್ಲಾ ತಿಳಿಸಿ, ತಾನೀಗ ಹುಲಿಗೆ ಆಹಾರವಾಗಿ ಹೋಗಬೇಕು ಎಂದು ತನ್ನ ಕರುವಿಗೆ ತಿಳಿ ಹೇಳುತ್ತದೆ.ತಬ್ಬಿಬ್ಬಾದ ಕರು ನುಡಿಯುವ ಸಾಲುಗಳನ್ನು ಕೇಳುತ್ತಿದ್ದರೆ ಕಂಠ ಬಿಗಿದಂತಾಗುತ್ತದೆ.


"ಆರ ಮೊಲೆಯನು ಕುಡಿಯಲಮ್ಮ

ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು"

ಎಂದು ಹೃದಯ ಕರಗುವ ಹಾಗೆ ದುಃಖಿಸುತ್ತದೆ.

ಆಗ........ ಇದ್ದಕ್ಕಿದ್ದಂತೆ ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ದನಿ ಹಿಂದಿನ ಬೆಂಚಿನಿಂದ ತೂರಿಬಂತು.......!!  ಪಾಠದಲ್ಲಿ ಲೀನವಾಗಿದ್ದ ನಾವೆಲ್ಲ ಒಮ್ಮೆಲೆ ಬೆಚ್ಚಿ ಹಿಂದೆ ತಿರುಗಿದೆವು.  ತನ್ನ ತಾಯಿಯನ್ನು ಕಳೆದುಕೊಂಡ ನಮ್ಮ ಗೆಳತಿಯ ಅಳು ಮೇರೆಮೀರಿತ್ತು. ...!!ಪಾಠ ನಿಲ್ಲಿಸಿದ ನಮ್ಮ ಮೇಷ್ಟ್ರು ಆಕೆಯ ಬಳಿ ತೆರಳಿ ಸಮಾಧಾನ ಮಾಡತೊಡಗಿದರು.  ಎಷ್ಟೇ ಸಂತೈಸಿದರೂ ಆಕೆಯ ಅಳು ನಿಲ್ಲಲಿಲ್ಲ. .....ಪಾಠ ಅಲ್ಲಿಗೇ ನಿಂತಿತು.!  ಚಿಕ್ಕವರಾದ ನಮಗೆಲ್ಲ ಮಂಕುಬಡಿದಂತಾಗಿತ್ತು.... ಇಷ್ಟು ವರುಷಗಳು ಕಳೆದರೂ, ನನ್ನ ಬಾಲ್ಯದ ಸಹಪಾಠಿಯ ಆ ಬಿಕ್ಕಳಿಕೆಯನ್ನು ನನ್ನಿಂದ ಈಗಲೂ, ಈ ಕ್ಷಣವೂ ಮರೆಲಾಗಿಲ್ಲ.......!!!!!  ನನ್ನ ಬಾಲ್ಯದ ಅನೇಕ ಸವಿ ನೆನಪುಗಳ ನಡುವೆ ಇದೊಂದು ಮರೆಯಲಾಗದ ಕಹಿ ನೆನಪಾಗಿ ನನ್ನನ್ನು ಕಾಡುತ್ತದೆ. ಆಕೆ ಈಗ ಎಲ್ಲೇ ಇದ್ರೂ ಚೆನ್ನಾಗಿರಲಿ ಅಂತ ಮನ ಹಾರೈಸುತ್ತದೆ.

ಇನ್ನೊಂದು ವಿಚಾರ ಹೇಳಬೇಕು.ಆ ಚಿಕ್ಕ ವಯಸ್ಸಿನಲ್ಲಿ "ಹಸು ತನ್ನ ಕರುವನ್ನ ಬಿಟ್ಟು ಆ ಹುಲಿ ಬಳಿ ಮತ್ತ್ಯಾಕೆ ಹೋಗ್ಬೇಕು? ಹುಲಿ ತುಂಬಾ ಕ್ರೂರಿ’ ಎನ್ನಿಸುತ್ತಿತ್ತು. ಆದರೆ ಈಗ ನನ್ನ ಭಾವನೆ ಬದಲಾಗಿದೆ.....! ಕೈಗೆ ಸಿಕ್ಕ ಹಸುವನ್ನು ಮನೆಗೆ ಕಳುಹಿಸಿದಾಗ ಹುಲಿ ಅದರ ಆಸೆಯನ್ನೂ ಬಿಟ್ಟಿರಬಹುದು. ಇದು ಹುಲಿಯ ತ್ಯಾಗದ ಗುಣವನ್ನು ತೋರಿಸುತ್ತದೆ.ಹಸು ಹಿಂತಿರುಗಿ ಬಂದಾಗ ಅದರ ಸತ್ಯ ಸಂಧತೆಗೆ ಅಚ್ಚರಿಪಡುತ್ತದೆ. ಭಾಷೆಗೆ ತಪ್ಪದ ಪುಣ್ಯಕೋಟಿಯ ಗುಣವನ್ನು ಮೆಚ್ಚಿ, ಅದನ್ನು ಕೊಂದು ತಿನ್ನಲು ಯೋಚಿಸಿದ ತನಗೆ ಸಾವೇ ಸರಿಯಾದ ಶಿಕ್ಷೆ ಎಂದು ತಿಳಿದು ತನ್ನ  ಪ್ರಾಣವನ್ನೇ ಕೊಟ್ಟಿತು. ಒಂದು ಕ್ರೂರ ಪ್ರಾಣಿಯಲ್ಲೂ ಇಂತಹ ಪರಿವರ್ತನೆ ಕಾಣಲು ಸಾಧ್ಯವೆ ಎಂಬ ಸಂಶಯ ಮೂಡದಿರದು.....!!!!

 ಹಾಗಾಗಿ ಪುಣ್ಯಕೋಟಿ ಕತೆ ಹಸುವಿನ ಸತ್ಯಸಂಧತೆಯನ್ನು ತೋರಿದಂತೆಯೇ ಹುಲಿಯ ತ್ಯಾಗವನ್ನೂ ಎತ್ತಿತೋರಿಸಿದೆ . ನಾಯಕನ ಹಿರಿಮೆಯನ್ನು ಹೇಳುವುದರೊಂದಿಗೆ ಖಳನಾಯಕನಲ್ಲಾದ  ಮನಃ ಪರಿವರ್ತನೆಯನ್ನೂ ಎತ್ತಿ ತೋರಿಸುವ ಇಂತಹ ಕತೆಗಳನ್ನು ಮಕ್ಕಳಿಗೆ ಹೇಳುತ್ತಿದ್ದ ನಮ್ಮ ಹಿರಿಯರ ಸುಸಂಸ್ಕೃತಿಯನ್ನು ಎಷ್ಟು ಹೊಗಳಿದರೂ ಕಡಿಮೆಯೇ ಅಲ್ಲವೇ? 
ಒಳಿತು, ಸದ್ವಿಚಾರಗಳು, ಸದಾಚಾರಗಳು ಎಲ್ಲಿಂದಲಾದರೂ ಬರಲಿ ಅದಕ್ಕೆ ಸ್ವಾಗತವಿರಲಿ......

ಗೋವಿನ  ಹಾಡಿನ ಪೂರ್ಣಪಾಠ ಕೆಳಗಿದೆ.  ಹಾಡಿಕೊಳ್ಳಲು ಚೆನ್ನಾಗಿದೆ
ಮೂಲ ಗೀತೆ

ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ

ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ

ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು

ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು

ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು

ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು

ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆಂದದಿ ತಾ ಬರುತಿದೆ

ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು

ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯಒಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ

ಹಸಿದವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು

ಮೂರುಮೂರ್ತಿಗಳಾಣೆ ಬರುವೆನು ಸೂರ್ಯಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು

ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು

ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆ ನೆಂದು ಬಂದೆನು ದೊಡ್ಡಿಗೆ

ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲಾರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ

ಸತ್ಯವೇ ನಮ್ಮತಾಯಿತಂದೆ ಸತ್ಯವೇ ನಮ್ಮ ಸಕಲ ಬಳಗೆ
ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನ್ನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ

ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು

ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ

ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು

ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನುಎನುತಲಿ ತನ್ನ ಮನದೊಳು ಧ್ಯಾನಿಸಿ

ಮೂರುಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.


ಹಿಂದೆ ಪ್ರಾಥಮಿಕ ಶಾಲಾ ಮಕ್ಕಳ ಪಠ್ಯದಲ್ಲಿದ್ದ ರೀತಿ- (ಇದನ್ನೇ ತಬ್ಬಲಿಯು ನೀನಾದೆ ಮಗನೆ’ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ)


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೋಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಶದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಶದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
    
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

(ಚಿತ್ರ ಮತ್ತು ಗೀತೆಗಳ ಕೃಪೆ :-- ಅಂತರ್ಜಾಲ) 

ಸಮರ್ಪಣೆ


ಪ್ರಕೃತಿದೇವಿ

ತನ್ನ ಮಡಿಲ

ಫಲ ಪುಷ್ಪಗಳನ್ನೆಲ್ಲ

ಹಸಿರು ಹರಿವಾಣದೊಳಿಟ್ಟು

ಸೃಷ್ಠಿಕರ್ತನಿಗೆ

ಸಮರ್ಪಿಸಿದಾಗ

ಮೂಡಿದ..ಧನ್ಯತೆಯ ಹನಿ

ನೀ..... ಇಬ್ಬನಿ....!!!!!

ಅಭಿರುಚಿ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವ



ಅಭಿರುಚಿ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಕೈವಲ್ಯ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಸಮಾನತೆಯನ್ನು ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ "ಸ್ವರವಚನ-ಕೀರ್ತನಾ ಸಾಮರಸ್ಯ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಮುಪ್ಪಿನ ಷಡಕ್ಷರಿ ಮತ್ತು ನಿಜಗುಣ ಶಿವಯೋಗಿಯವರ ರಚನೆಗಳನ್ನು ವಿದುಷಿ ಶ್ರೀಮತಿ ಸುಕನ್ಯಾ ಪ್ರಭಾಕರ್, ಮೈಸೂರು ಮತ್ತು ಕನಕ-ಪುರಂದರರ ಕೀರ್ತನೆಗಳನ್ನು ವಿದ್ವಾನ್ ಬಳ್ಳಾರಿ ರಾಘವೇಂದ್ರ, ಮೈಸೂರು ಅವರು ಹಾಡಿದರು.ಈ ಸಂಗೀತಗಾರರಿಬ್ಬರೂ ತಮ್ಮ ಸುಶ್ರಾವ್ಯ ಗಾಯನದಿಂದ ಪ್ರೇಕ್ಷಕರ ಮನತಣಿಸಿದರು.ಇಬ್ಬರು ಕಲಾವಿದರ ನಡುವೆ ಸೇತುವೆಯಂತಿದ್ದ  ಡಾ||ಎ.ಜಿ.ಗೋಪಾಲಕೃಷ್ಣಕೊಳ್ತಾಯರವರು ತಮ್ಮ ಅತ್ಯುತ್ತಮ ನಿರೂಪಣೆಯ ಮೂಲಕ  ವಚನ-ದಾಸ ಸಾಹಿತ್ಯಗಳಲ್ಲಿರುವ ಸಮಾನತೆಯನ್ನು ಸಮರ್ಥವಾಗಿ ನಿರೂಪಿಸಿದರು.




ಇದೇ ಸಂದರ್ಭದಲ್ಲಿ ಅಭಿರುಚಿ ಸಂಸ್ಥೆಯು ತನ್ನದೇ ಆದ ಅಂತರ್ಜಾಲತಾಣವನ್ನು ಬಿಡುಗಡೆಗೊಳಿಸಿತು.
ಅಧ್ಯಕ್ಷರಾದ ಡಾ|| ಶಿವರಾಮಕೃಷ್ಣ ಅವರು ಅಂತರ್ಜಾಲ ತಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ದಯಮಾಡಿ http://abhiruchivedike.blogspot.in/  ವಿಳಾಸಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನು ತಿಳಿಸಿ.









ಚಿಣ್ಣರ ದೀಪಾವಳಿ

        ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳು


ಮರಳಿ ಬಂದಿದೆ ದೀಪಾವಳಿ
ಮರೆಯದೆ ತಂದಿದೆ ಹರುಷಾವಳಿ
ಮನೆಮನ ಬೆಳಗಿವೆ ದೀಪಗಳು
ಮಕ್ಕಳ ಕುಣಿಸಿವೆ ಪಟಾಕಿಗಳು

ಎಳೆಯರ ಕೈಗೆ ಗನ್ನನು ತಂದಿದೆ
ಚಟಪಟ ಸದ್ದಿನ ಚಿನಕುರಳಿ
ಜಂಬದೆ ಢಂ ಢಂ ನಾದವ ಮಾಡುತ
ಸಂತಸ ತಂದಿದೆ ಈ ಸುರಳಿ

ಗದ್ದಲವಿಲ್ಲದೆ ಮೆಲ್ಲಗೆ
ಬೆಳಗಿದೆ ಮತಾಪು ಕಡ್ಡಿಗಳು
ಭಯವನು ಮರೆಸಲು ಅಮ್ಮನ 
ಕೈ ಜೊತೆ ಕಂದನ ಕೈಯಿಗಳು


ಸುರು ಸುರು ನಾದವಗೈಯ್ಯುತ
ಬೆಳಗುವ ನಕ್ಷತ್ರ ಕಡ್ಡಿಗಳು
ಇದ ಸವಿಯುತ ಮನ
ಲಗ್ಗೆಯಿಟ್ಟಿದೆ ತಾರಾಲೋಕದೊಳು

ಕಿಡಿಯನು ಸೋಕಿಸೆ ಒಡನೆಯೆ
ಚಿಮ್ಮಿದೆ ಸೊಯ್ಯನೆ ಗಗನಕೆ ರಾಕೇಟು
ಚಿಣ್ಣರ ರಂಜಿಸೆ ಇಸ್ರೋ
ಕಳುಹಿದೆ ಚಂದ್ರಲೋಕಕೆ ಟಿಕೇಟು

ಬೆಂಕಿಯನುಗುಳುತ ಗರಗರ
ತಿರುಗಿವೆ ತರತರ ಚಕ್ರಗಳು
ಬಣ್ಣಬಣ್ಣದ ಹೂ ಮಳೆಗರೆಯುತ
ಕಣ್ಮನ ತಣಿಸಿವೆ ಹೂ ಕುಂಡಗಳು

ಧರೆಯನು ನಡುಗಿಸಿ
ಕಿವಿಗಪ್ಪಳಿಸಿವೆ ಆಟಂಬಾಂಬುಗಳು
ದೀಪ ಧೂಪಗಳ ಸಂಗಮದಾರತಿ
ಇದುವೇ ನಲಿವಿನ ದೀಪಾವಳಿಯು.

ಬಾಲ್ಯದ ನೆನಪುಗಳು - ೩ - ಬಾಲ್ಯದ ಭಾನುವಾರವೆಂದರೆ....!!

ಎಲ್ಲರ ಬಾಲ್ಯದಲ್ಲೂ ಭಾನುವಾರವೆಂದರೆ ರಜಾ-ಮಜದ ದಿನ. ಶಾಲೆಗೆ ಓಡಬೇಕೆಂಬ ಒತ್ತಡವಿಲ್ಲದೆ ನಮ್ಮ ಆಟದ ಸಾಮಾನುಗಳನ್ನೆಲ್ಲ ಹರಡಿಕೊಂಡು ದಿನವೆಲ್ಲಾ ಸಂತಸದಿಂದ ಕಳೆಯುತ್ತಿದ್ದೆವು. ಟ್ಯೂಷನ್-ಹೋಂವರ್ಕ್ ಎನ್ನುವ ಯಾವ ಜಂಜಾಟಗಳೂ ನಮಗಿರಲಿಲ್ಲ...! 

ಆದರೆ ಚಿಕ್ಕವಳಾದ ನನಗೆ ರೇಜಿಗೆ ತರಿಸುತ್ತಿದ್ದ ಒಂದು ಕಾರ್ಯಕ್ರಮ ಈ ಭಾನುವಾರದಲ್ಲಿ ಸೇರಿಹೋಗಿತ್ತು ಎನ್ನುವುದು ಮರೆಯಲಾಗದ ವಿಷಯ.... ಅದೆಂದರೆ ಎಣ್ಣೆಸ್ನಾನ...... ಇದು  ಪೂರ್ವನಿಶ್ಚಿತ ಕೆಲಸ.... ಇದರಲ್ಲಿ ಬದಲಾವಣೆ ಅಗುತ್ತಿದ್ದುದು ಮಾತ್ರ ಬಹು ಅಪರೂಪ..... ಶಾಂಪೂ ಹಾಕಿ ನೊರೆ ಅರಳಿಸಿ, ಶವರ್ ನೀರಿನಲ್ಲಿ ೧೫-೨೦ ನಿಮಿಷಗಳಲ್ಲಿ ತಲೆಸ್ನಾನ ಮುಗಿಸುವ ಇಂದಿನ ಧಾವಂತ, ಅಂದಿನ ದಿನಗಳಲ್ಲಿ ಇರಲಿಲ್ಲ... ಹಾಗೆಂದು ರಸಋಷಿ ಶ್ರೀ ಕುವೆಂಪುರವರು ಬಣ್ಣಿಸಿರುವ ’ಅಜ್ಜಯ್ಯನ ಅಭ್ಯಂಜನ’ವನ್ನು ನೀವು ನೆನಪಿಸಿಕೊಳ್ಳಬೇಡಿ. ! ಅಜ್ಜಯ್ಯನವರದು ’ಅಭ್ಯಂಜನ’ , ಆದರೆ ನನ್ನದು ಕೇವಲ ’ಎಣ್ಣೆಸ್ನಾನ’.... ಏಕೆಂದರೆ ಅಷ್ಟು ಸುಧೀರ್ಘವಾಗಿ ಎಣ್ಣೆಸ್ನಾನವನ್ನು ಅನುಭವಿಸುವ ತಾಕತ್ತು ನಮಗೆಲ್ಲಿಂದ ಬರಬೇಕು......! ಅದರ ಮುಂದೆ ನನ್ನ ಈ ಅನುಭವ ತೃಣ ಸಮಾನ ಎನ್ನಿಸದಿರಲಿಲ್ಲ....! ಆದರೆ ಚಿಕ್ಕವಳಾದ ನನಗೆ ಎಣ್ಣೆಸ್ನಾನ ಬಹಳ ಕಠಿಣವೆನ್ನಿಸುತ್ತಿದ್ದುದು ಮಾತ್ರ ನಿಜ. ಆ ವೇಳೆಗೆ ಕುವೆಂಪುರವರ ಪ್ರಬಂಧ ಓದಿದ್ದರೆ ನಾನು ಹಾಗೆ ಯೋಚಿಸುತ್ತಿರಲಿಲ್ಲ ಅಂತ ಈಗ ನನ್ನ ಅನುಭವಕ್ಕೆ ಬಂದಿದೆ. 

ಬೆಚ್ಚಗೆ ಕಾಯಿಸಿದ ಹರಳೆಣ್ಣೆ ಮೈಗೆಲ್ಲ ಹಚ್ಚಿ, ಅದು ಮುಟ್ಟಬೇಡ,ಇದು ಮುಟ್ಟಬೇಡ ಅಂತ ನಮ್ಮಮ್ಮ ಹೇಳಿದಾಗ ಸುಮ್ಮನೆ ನಿಲ್ಲಬೇಕಾದ ಶಿಕ್ಷೆ ಎಂದು ಮುಖ ಊದಿಸಿಕೊಳ್ಳುತ್ತಿದ್ದೆ....!ಮೈಗಂಟಿದ ಎಣ್ಣೆ.....ಬಿಸಿಬಿಸಿ ನೀರು....ಅಂಟುವಾಳದಕಾಯಿ-ಸೀಗೆಪುಡಿ ಮಿಶ್ರಣದಿಂದ ತಲೆ ಉಜ್ಜುವಾಗ ಕಣ್ಣಿಗೆ ಸೀಗೆಪುಡಿ ಸೇರಿ ಉರಿ ತರಿಸುತ್ತಿದ್ದುದು- ಇವೆಲ್ಲಾ ನನಗೆ ಎಣ್ಣೆಸ್ನಾನದ ಮೇಲೆ ಕೋಪ ತರಿಸಲು ಕಾರಣವಾಗಿದ್ದವು..... ಆದರೆ ನನ್ನ ಕೋಪಕ್ಕೆ ಚಿಕ್ಕಾಸಿನ ಬೆಲೆ ಸಿಕ್ಕದೆ ಹೋ.... ಎಂದು ಅಳುತ್ತಾ ನನ್ನ ಸ್ನಾನ ಮುಗಿಯುತ್ತಿದ್ದುದನ್ನು ಈಗ  ನೆನೆದಾಗ ನಗು ಉಕ್ಕುತ್ತದೆ.

ಬಾಲ್ಯದ ಭಾನುವಾರದ ಮತ್ತೊಂದು ನೆನಪೆಂದರೆ ಸಂಜೆಗೆ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿಮುದ್ರಿಕೆ ಕಾರ್ಯಕ್ರಮವನ್ನು ಕೇಳಿ ಆನಂದಿಸುವುದು. ಇದು ಬಹು ಜನಪ್ರಿಯವಾದ ಕಾರ್ಯಕ್ರಮವಾಗಿತ್ತು. ಅತ್ಯುತ್ತಮ ಸಿನಿಮಾಗಳು ಇಲ್ಲಿ ಪ್ರಸಾರವಾಗುತ್ತಿದ್ದವು. ಬರೀ ಆಡಿಯೋ ಆಗಿದ್ರು ಕೂಡ ಅದನ್ನು ಕೇಳುವುದರಲ್ಲಿ ನಾನು ತಲ್ಲೀನಳಾಗುತ್ತಿದ್ದೆ....  ಈ ಸಮಯದಲ್ಲಿ ಅಂದರೆ ಸಂಜೆ ನಾಲ್ಕು ಗಂಟೆಯ ನಂತರ, ನಮ್ಮಮ್ಮ ನನ್ನ ಕೂದಲಿನ ಸಿಕ್ಕು ಬಿಡಿಸಿ ಜಡೆ ಹೆಣೆಯುತ್ತಾ ಸಿನಿಮಾ ಕೇಳುವ ಪದ್ಧತಿ. ಚಿತ್ರದ ಹಾಸ್ಯ ಪ್ರಸಂಗಗಳಿಂದಾಗಿ ಕೂದಲಿನ ಸಿಕ್ಕು ಬಿಡಿಸುವಾಗಿನ ನೋವಿನ ಅನುಭವ ನನಗಾಗುತ್ತಿರಲಿಲ್ಲ. ..!ಆದರೆ "ನಾಂದಿ" ಸಿನಿಮಾ ನೋಡುವಾಗ, ಸಿಕ್ಕಿನ ನೆಪ ಮಾಡಿಕೊಂಡು ಬಿಕ್ಕಳಿಸಿ ಅತ್ತಿದ್ದು ಮಾತ್ರ ನನ್ನಿಂದ ಈಗಲೂ ಮರೆಯಲಾಗಿಲ್ಲ....!! ಕಿವುಡ-ಮೂಗರ ಸಮಸ್ಯೆಯ ಕತೆಯನ್ನು ಹೊಂದಿದ ಅತ್ಯುತ್ತಮ ಚಿತ್ರವದು. ರಾಜ್,ಕಲ್ಪನ ಮತ್ತು ಹರಿಣಿ ಪ್ರಧಾನ ಭೂಮಿಕೆಯಲ್ಲಿರುವ ಈ ಚಲನಚಿತ್ರ, ಅನನ್ಯ ಅಭಿನಯ ಮತ್ತು ಸುಮಧುರ ಹಾಡುಗಳಿಂದಾಗಿ ಎಂದಿಗೂ ಮರೆಯಲಾರದ ಒಂದು ಅಮೋಘ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
      ಆಗಿನ ದಿನಗಳಲ್ಲಿ ಬರುತ್ತಿದ್ದ ಉತ್ತಮ ಗುಣಮಟ್ಟದ ಚಲನಚಿತ್ರಗಳು ಈಗೆಲ್ಲಿ?

      ಹಾಗೆಯೇ ಅಂದಿನ ದಿನಗಳು ಇಂದೆಲ್ಲಿ...?

      ಓ...ನೆನಪೇ.... ನೀನೆಷ್ಟು ಮಧುರ..ಮಧುರ..ಮಧುರ. ..!!!   

ನಾಂದಿ ಚಿತ್ರದ ಒಂದೆರಡು ಹಾಡುಗಳನ್ನು ಕೆಳಗೆ ಲಿಂಕ್ ಮಾಡಿದ್ದೇನೆ. ಆ ಸವಿಯನ್ನು ನೀವೂ ಆಸ್ವಾದಿಸಿ ನೋಡಿ...!!

ಹಾಡೊಂದ ಹಾಡುವೆ ನೀ ಕೇಳು ಮಗುವೆ..

ಉಡುಗೊರೆಯೊಂದ ತಂದಾ..

ಚಂದ್ರಮುಖಿ.. ಪ್ರಾಣಸಖಿ...


ಚಲನಚಿತ್ರ ಅಂತ್ಯಾಕ್ಷರಿ - ಉತ್ತರಗಳು

ಸನ್ನಿವೇಶ ಸುತ್ತು:-

೧.ಚಿತ್ರ - ಮಯೂರ
  ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
  ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲಾ ಹಾಯಾಗಿ)

೨.ಚಿತ್ರ -  ಬೆಳ್ಳಿಮೋಡ
ಮೂಡಲಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
 ನುಣ್ಣನೆ ಎರಕಾವಾ ಹೊಯ್ದ
 ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ

೩.ಚಿತ್ರ - ಗುರುಶಿಷ್ಯರು
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎಂದೂ ನಿಜವಲ್ಲ.

೪.ಚಿತ್ರ - ಜೀವನ ಚೈತ್ರ 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
 ಸಾಯೊತನಕ ಸಂಸಾರದೊಳಗೆ ಗಂಡಾಗುಂಡಿ
 ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ

೫.ಚಿತ್ರ - ಬಂಧನ
ಬಣ್ಣ ನನ್ನ ಒಲವಿನ ಬಣ್ಣ
ನನ್ನ ....... ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಕನಸಿನ ಬಣ್ಣ

೬.ಚಿತ್ರ - ನಾನೂ ನನ್ನ ಕನಸು
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲ್
 ನಿನ್ನ ಪುಟ್ಟ ಕೈ ನಿನ್ನ ಪುಟ್ಟ ಕಾಲ್

ಅಂತ್ಯ ಪದ ಸುತ್ತು:-

೧.ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ
ಪಯಣಿಗ ನಾನಮ್ಮ

೨.ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ

೩.ಒಲವೆ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

೪.ತುಂತುರು ಅಲ್ಲಿ ನೀರಹಾಡು
ಕಂಪನ ಇಲ್ಲಿ ಪ್ರೀತಿಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

೫.ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

೬.ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು

ಚಿತ್ರಗೀತೆಯಾಗಿ ಕವಿಗಳ ಕವನ ಸುತ್ತು:-

೧.ತೆರೆದಿದೆ ಮನೆ ಓ.. ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯ
ಹೊಸ ಬಾಳನು ತಾ ಅತಿಥಿ

೨.ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

೩.ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯಹೇ ರಸಋಷಿಗಳ ಬೀಡೆ

೪.ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.  

೫. ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೊ ಬಂದು ನನ್ನ ಸೆಳೆದಳು

೬.ಕುಹೂ ಕುಹೂ ಕುಹೂ ಕುಹೂ
 ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ

ಚರಣ - ಪಲ್ಲವಿ ಸುತ್ತು:-

೧.ಹುವ್ವೇ ಹುವ್ವೇ ಹುವ್ವೇ ಹುವ್ವೇ ಹುವ್ವೇ
ನಿನ್ನೀ ನಗುವಿಗೆ ಕಾರಣವೇನೆ
ಸೂರ್ಯನ ನಿಯಮಾನೇ.. ಚಂದ್ರನ ನೆನಪೇನೇ...

೨.ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾಬಂಡಿ
ಇದು ವಿಧಿಯೋಡಿಸುವ ಬಂಡಿ

೩.ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೆ

೪.ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ