ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು. ಅದು ಸಂಮೃದ್ಧಿಯ ದಿನಗಳು.ಈಗಿನ ತುಟ್ಟಿ ಕಾಲದಲ್ಲಿ ತಾವಿರುವ ಬಡಾವಣೆಯ ಎಲ್ಲಾ ಮನೆಗಳಿಗೂ ಎಳ್ಳು ಬೀರುವುದೆಂದರೆ ಮಧ್ಯಮ ವರ್ಗದವರಿಗೆ ಸ್ವಲ್ಪ ಭಾರವೇ ಸರಿ. ಹಾಗೆಂದು ಮಕ್ಕಳ ಉತ್ಸಾಹಕ್ಕೆ ತಣ್ಣೀರೆರೆಚುವ ಹಾಗಿಲ್ಲವಲ್ಲ. ಹಾಗಾಗಿ ತುಂಬಾ ಆತ್ಮೀಯರಾದವರಿಗೆ ಮತ್ತು ಅಕ್ಕಪಕ್ಕದವರಿಗೆ ಮಾತ್ರ ಎಳ್ಳು ಬೀರುವುದನ್ನು ನಾವು ಈಗ ಕಾಣುತ್ತೇವೆ. ಅಕ್ಕಪಕ್ಕದ ಮಕ್ಕಳೆಲ್ಲ ಒಂದಾಗಿ ಎಳ್ಳು ಬೀರಲು ಹೊರಟರೂ ತಮಗೆ ಬೇಕಾದವರಿಗೆ (ಮನೆಯಲ್ಲಿ ಅಮ್ಮ ಯಾರ‍್ಯಾರಿಗೆ ಕೊಡಲು ಹೇಳಿರುತ್ತಾರೋ ಆ ಮನೆಗಳಿಗೆ) ಮಾತ್ರ ಎಳ್ಳು ಕೊಡುತ್ತಾರೆ. ಇದು ತಪ್ಪಲ್ಲ.ನನ್ನ ಅನುಭವಕ್ಕೆ ಬಂದ ಒಂದು ಚಿಕ್ಕ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.
ಸಂಕ್ರಾಂತಿಯ ಒಂದು ದಿನ ನನ್ನ ಪರಿಚಿತರ ಮಗಳು ಎಳ್ಳುಬೀರಲು ಬಂದಳು. ಎಂದಿನಂತೆ ಎಳ್ಳಿನ ವಿನಮಯವಾಯ್ತು. ’ಬರ್ತೀನಿ ಆಂಟಿ’ ಎಂದು ಹೊರಟವಳನ್ನು ಗೇಟಿನವರೆಗೆ ಬೀಳ್ಕೊಡಲು ಹೊರಟಾಗ,ಅವಳ ಜೊತೆಗೆ ಬಂದ ಅವಳ ಗೆಳತಿಯೊಬ್ಬಳು ಹೊರಗೆ ಕಾಯುತ್ತಾ ನಿಂತಿದ್ದಳು.ಅವಳ ಲಿಸ್ಟ್ ನಲ್ಲಿ ನಮ್ಮ ಮನೆ ಇರಲಿಲ್ಲ ಅಂತ ಕಾಣುತ್ತೆ(ಆ ಹುಡುಗಿಯೂ ನನಗೆ ಪರಿಚಿತಳೆ). ಆಗ ನಾನು ’ಯಾಕಮ್ಮಾ ಹೊರಗೇ ನಿಂತೆ, ಬಾ ಒಳಗೆ’ ಎಂದರೆ , ಅವಳು ’ಇಲ್ಲ ಆಂಟಿ’ ಎಂದು ಬರಲೊಪ್ಪಲಿಲ್ಲ.ಆಗ ನಾನು ಎಳ್ಳಿನ ಕವರನ್ನು ಅಲ್ಲೇ ಕೊಟ್ಟು ಕಳುಹಿಸಿದೆ.
ಆ ಹುಡುಗಿ ಹೊರಗೆ ನಿಂತಿರುವ ಬದಲು ತನ್ನ ಸ್ನೇಹಿತೆಯೊಂದಿಗೆ ಒಳಗೆ ಬಂದು ಶುಭಾಶಯಗಳನ್ನು ಹೇಳಬಹುದಿತ್ತು.ಎಳ್ಳು ಕೊಡಲು ಮಾತ್ರ ಮನೆಯೊಳಗೆ ಬರಬೇಕೆಂಬುದೇನಿಲ್ಲ. ಆಕಸ್ಮಿಕವಾಗಿ ನಾನು ಕಂಡಾಗಲಾದರೂ ಬಂದು ವಿಶ್ ಮಾಡಬಹುದಿತ್ತು.ಹಿರಿಯರಾದ ನಾವು ನಮ್ಮ ಮಕ್ಕಳಲ್ಲಿ ಸಮಯಪ್ರಜ್ಞೆ ಮತ್ತು ಸೌಜನ್ಯಯುತ ನಡವಳಿಕೆಯ ಬಗ್ಗೆ ತಿಳಿಹೇಳುವ ಅಗತ್ಯವಿದೆ.ಇಲ್ಲದಿದ್ದರೆ ಇಂತಹ ಚಿಕ್ಕಪುಟ್ಟ ವಿಷಯಗಳು ಇನ್ನೊಬ್ಬರನ್ನು ಮುಜುಗರಕ್ಕೀಡು ಮಾಡಿಬಿಡುತ್ತವೆ. ಎಳ್ಳುಬೆಲ್ಲವ ಮೆಲ್ಲೋಣ ಒಳ್ಳೊಳ್ಳೆಯ ಮಾತನಾಡೋಣ ಎಂಬುದೇ ಸಂಕ್ರಾಂತಿ ಹಬ್ಬದ ಆಶಯ.ಹಬ್ಬದ ಉದ್ದೇಶವರಿತು ಆಚರಿಸಿದರೆ ಒಳ್ಳೆಯದು. ಒಂದು ಮಗು ಎಳ್ಳು ಕೊಟ್ಟು ಮಿಕ್ಕವರೆಲ್ಲಾ ಶುಭಾಶಯ ಹೇಳುವದು ಒಂದು ಒಳ್ಳೆಯ ಸಂಪ್ರದಾಯವೇ.ಇದನ್ನು ನಾವೂ ಕಲಿತು, ನಮ್ಮ ಮಕ್ಕಳಲ್ಲಿಯೂ ಬೆಳೆಸುವುದು ಇಂದಿನ ದಿನಗಳಲ್ಲಿ ಅವಶ್ಯಕ ಕೂಡ.
’ಪುಟ್ಟ ಮಕ್ಕಳೇ ಬನ್ನಿ
ಸ್ನೇಹಿತರನ್ನೂ ಕರೆತನ್ನಿ
ಶುಭಾಶಯಗಳು ನಿಮಗೆನ್ನಿ’
"ಸರ್ವರಿಗೂ ನೂತನ ವರ್ಷದ
ಮತ್ತು
ಮಕರ ಸಂಕ್ರಾಂತಿಯ ಶುಭಾಶಯಗಳು"
ನಿಮಗೂ ಸಂಕ್ರಾಂತಿಯ ಶುಭಾಶಯಗಳು.
ಪ್ರತ್ಯುತ್ತರಅಳಿಸಿWish you and your family Happy Sankramana.
ಪ್ರತ್ಯುತ್ತರಅಳಿಸಿಸುಬ್ರಹ್ಮಣ್ಯ ಮತ್ತು ಲತಾಶ್ರೀ ಹೆಗಡೆ,
ಪ್ರತ್ಯುತ್ತರಅಳಿಸಿಧನ್ಯವಾದಗಳು
ನಿಮಗೆ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು.