ಶ್ರಾವಣ ಮಾಸ - ಒಂದೇ ಬಳ್ಳಿಯ ಹೂಗಳ ಮಾಸದ ಸಂಬಂಧಕ್ಕೆ ಸಂಕೇತ


ವರ್ಷಋತುವಿನೊಡನೆ ಶ್ರಾವಣಮಾಸ ಧರೆಗೆ ಕಾಲಿಟ್ಟಿತೆಂದರೆ ಆಷಾಢದ ಜಡತೆ ಪಲಾಯನಗೈಯ್ಯುತ್ತದೆ.ಭೋರೆಂದು ಸುರಿವ ಮಳೆ, ಹಸಿರು ಸೀರೆಯನುಟ್ಟು ಬಣ್ಣಬಣ್ಣದ ಹೂಗಳ ತೊಟ್ಟ ಪ್ರಕೃತಿದೇವಿಯ ವೈಭವ ಈ ಮಾಸಕ್ಕೆ ವಿಶೇಷವಾದ ಕಳೆ ನೀಡುತ್ತದೆ. ಪೇಟೆಯಲ್ಲಿ ಹಲವು ಬಗೆಯ ಫಲಪುಷ್ಪಗಳ ಆಗಮನ.ಮನೆಮನೆಗಳಲ್ಲಿ ದಿನಕ್ಕೊಂದು ಹಬ್ಬ-ವ್ರತಗಳೆಂದು ಸಂತಸ.ಜರಿತಾರಿ ಸೀರೆಯನ್ನುಟ್ಟು ಸಂಭ್ರಮಿಸುವ ಹೆಂಗೆಳೆಯರು ಕಣ್ಮನ ತುಂಬುತ್ತಾರೆ.ಇದೆಲ್ಲವೂ ಶ್ರಾವಣಮಾಸದ ವೈಶಿಷ್ಟ್ಯಗಳು.ಈ ಮಾಸದಲ್ಲಿ ಬರುವ ಹಬ್ಬಗಳ ಅವಲೋಕನ ಮಾಡಿದಾಗ ಒಡಹುಟ್ಟಿದವರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬಗಳ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಅಣ್ಣ-ತಮ್ಮ,ಅಕ್ಕ-ತಂಗಿಯರು ಎಲ್ಲಿದ್ದರೂ ಮರೆಯದೆ ಪರಸ್ಪರ ಶುಭಕೋರುವ ತಿಂಗಳಿದು. ತವರಿನ ಸಂಬಂಧವನ್ನು ಉಳಿಸಿ ಬೆಳೆಸಲು ಸಹಕಾರಿಯಾದ ಹಬ್ಬಗಳು ಶ್ರಾವಣ ಸಂಭ್ರಮಕ್ಕೆ ಗರಿ ಮೂಡಿಸಿದೆ.ಈ ಮಾಸದಲ್ಲಿ ಆಚರಿಸುವ  ಭ್ರಾತೃಪ್ರೇಮವನ್ನು ಬಿಂಬಿಸುವ ಒಂದೆರಡು ಹಬ್ಬಗಳತ್ತ ಗಮನಹರಿಸೋಣ. 

ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆವ ಹಬ್ಬ.ಈ ದಿನ ಹೆಣ್ಣುಮಕ್ಕಳು ತಮ್ಮ ಪತಿಯ ಏಳಿಗೆ, ದೀರ್ಘಾಯಸ್ಸನ್ನು ಕೋರುವುದು ವಿಶೇಷವಾದರೂ ತಮ್ಮ ಸೋದರನನ್ನು ಕರೆಸಿ,ಭಂಢಾರ ಒಡೆದು, ಉಡುಗೊರೆ ನೀಡಿ ತಮ್ಮ ನಡುವಿನ ಆತ್ಮೀಯತೆ ಬೆಸೆಯುವ ಪರಂಪರೆ ಸಹ ನಮ್ಮಲ್ಲಿ ಕೆಲವೆಡೆ ಇದೆ.

ಈ ಮಾಸದ ಶುಕ್ಲಪಕ್ಷದ ಚೌತಿ,ಪಂಚಮಿ,ಷಷ್ಟಿಯಂದು ನಾಗಪ್ಪನಿಗೆ ತನಿ ಎರೆಯುವ ಸಂಪ್ರದಾಯವಿದೆ.ಇದರಲ್ಲಿ "ನಾಗರ ಪಂಚಮಿ" ನಾಡಿಗೇ ದೊಡ್ಡದಾದ ಹಬ್ಬವೆಂಬ ಹೆಗ್ಗಳಿಕೆಯಿದೆ. ಗ್ರಾಮಾಂತರ ಪ್ರದೇಶದಲ್ಲಿ, ನಮ್ಮ ಜನಪದರಲ್ಲಿ ’ಪಂಚ್ಮಿಹಬ್ಬ’ವೆಂದು ಹೆಸರು ಪಡೆದಿದೆ. 

’ಪಂಚ್ಮಿಹಬ್ಬ ಪಂಚ್ಮಿಹಬ್ಬ ಉಳಿದಾವ್ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರಿಯಾಕ’
ಎಂದು ತೌರಿನ ಕರೆಯನ್ನು ಹೆಂಗಳೆಯರು ಕಾತರದಿಂದ ಕಾಯುವ ಹಬ್ಬವಿದು.ನಾಗರಪಂಚಮಿಯಂದು ನಾಗನನ್ನು ಭಕ್ತಿಯಿಂದ ಪೂಜಿಸಿ, ಹಾಲುತುಪ್ಪದ ತನಿ ಎರೆದು,ಅರಿಶಿನದ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಪದ್ಧತಿ. ಈ ಪವಿತ್ರ ದಿನ ತನಿ ಎರೆದು ತಾಯಿಯ ಎದೆಹಾಲಿನ ಋಣ ತೀರಿಸುವ ಆಶಯವೂ ಇದರಲ್ಲಿದೆ.ಈದಿನ ಹೆಣ್ಣುಮಕ್ಕಳು ತಮ್ಮ ಸೋದರನ ಬೆನ್ನು ತೊಳೆದು, ಬೆನ್ನು-ನಾಭಿಗೆ ನಾಗನಿಗೆ ನೈವೇದ್ಯ ಮಾಡಿದ ಹಾಲು-ತುಪ್ಪ ಹಚ್ಚಿ ಅವರಿಗೆ ಶುಭಹಾರೈಸುತ್ತಾಳೆ. ತನ್ನ ತೌರಿನ ಬಳ್ಳಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿತ್ತಾಳೆ.ತನ್ನ ಶ್ರೇಯಸ್ಸನ್ನು ಬಯಸುವ ಸಹೋದರಿಗೆ ಉಡುಗೊರೆ ನೀಡಿ ಸೌಭಾಗ್ಯವತಿಯಾಗುವಂತೆ ಹರಸುತ್ತಾನೆ.ಇದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪದ್ಧತಿ.

ಶ್ರಾವಣದಲ್ಲಿ ಜಾತಿಮತ ಬೇಧವಿಲ್ಲದೆ ಆಚರಿಸುವ ಒಂದು ವಿಶೇಷವಾದ ಹಬ್ಬವೆಂದರೆ ’ರಕ್ಷಾಬಂಧನ’ ಅಥವ ರಾಖಿಹಬ್ಬ.ಇದನ್ನು ಶ್ರಾವಣ ಶುಕ್ಲ ಪೂರ್ಣಿಮೆಯಂದು ಆಚರಿಸುತ್ತೇವೆ.ಈ ಹಬ್ಬದಂದು ’ರಕ್ಷೋಪವೀತಂ ಬಲಮಸ್ತು ತೇಜಃ’ ಎಂದು ಹೇಳಿ ತಂಗಿ ತನ್ನ ಅಣ್ಣನಿಗೆ ರಾಖಿ ಕಟ್ಟಿ, ಆರತಿ ಬೆಳಗಿ, ಆತನಿಗೆ ಸಿಹಿ ತಿನ್ನಿಸಿ ರಕ್ಷಣೆಯನ್ನು ಕೋರುತ್ತಾಳೆ. ತನ್ನ ಮೇಲಿಟ್ಟ ನಂಬಿಕೆಗೆ ಬದ್ಧನಾದ ಅಣ್ಣ, ತನ್ನ ತಂಗಿಗೆ ಉಡುಗೊರೆ ನೀಡಿ ಒತ್ತಾಸೆಯಾಗಿ ನಿಲ್ಲುವ ಭರವಸೆ ನೀಡುತ್ತಾನೆ. ಇಂದಿನ ದಿನಗಳಲ್ಲಿ ಹೆಣ್ಣುಗಂಡೆಂಬ ಬೇಧಭಾವವಿಲ್ಲದೆ ತಮ್ಮ ಸ್ನೇಹಿತರಿಗೆ,ಆಪ್ತಬಂಧುಗಳಿಗೆ ರಾಖಿ ಕಟ್ಟಿ ಅಥವಾ ಅಂಚೆ ಮೂಲಕ ರಾಖಿಯನ್ನು ರವಾನಿಸಿ ಪರಸ್ಪರ ವಿಶ್ವಾಸ,ಆತ್ಮೀಯತೆ ವ್ಯಕ್ತಪಡಿಸುವುದನ್ನು ಕಾಣುತ್ತಿದ್ದೇವೆ.ಆದ್ದರಿಂದ ಇಂದಿನ ರಕ್ಷಾಬಂಧನ ವಿಶ್ವಭ್ರಾತೃತ್ವ ಬಿಂಬಿಸುತ್ತಿದೆ ಎಂದರೆ ತಪ್ಪಲ್ಲ.ಒಟ್ಟಿನಲ್ಲಿ ಶ್ರಾವಣಮಾಸದಲ್ಲಿ ಆಚರಿಸುವ ಈ ಎಲ್ಲಾ ಹಬ್ಬಗಳ ಧ್ಯೇಯ ಮಾತ್ರ ಒಂದೇ. ಅದೇ ಒಡಹುಟ್ಟಿದವರಲ್ಲಿ ಮಧುರ ಭಾಂಧವ್ಯದ ಬೆಸುಗೆ.ನಮ್ಮ ಹಿರಿಯರು ಆಚರಣೆಗೆ ತಂದ ಈ ಎಲ್ಲಾ ಹಬ್ಬಗಳ ಒಳಾರ್ಥ ತಿಳಿದಾಗ ಸಂತಸವಾಗುತ್ತದೆ.     

10 ಕಾಮೆಂಟ್‌ಗಳು:

  1. ಅಣ್ಣ ತಂಗಿ ಹಬ್ಬ ಅಂತಲೇ ನಾವು ಹಳ್ಳಿ ಕಡೆ ಕರೆಯುವ ಪಂಚಮಿ ಹಬ್ಬದ ಬಗ್ಗೆ ಅತ್ಯುತ್ತಮ ಬರಹ ಮೇಡಂ.

    ನಿಮ್ಮ ವೈವಿಧ್ಯತೆಗೆ ನಮ್ಮ ಸಲಾಂ.

    ಪ್ರತ್ಯುತ್ತರಅಳಿಸಿ
  2. ಭಾವನಾತ್ಮಕ ಸ೦ಬ೦ಧಗಳು ತು೦ಬಾ ಶ್ರೇಷ್ಟವಾದವು ಎ೦ದು ಶಾಸ್ತ್ರವು ತಿಳಿಸುತ್ತದೆ. ಸೋದರ ಸ೦ಬ೦ಧಗಳನ್ನು ಗಟ್ಟಿಗೊಳಿಸುವ ಈ ಮಾಸದ ಹಬ್ಬಗಳು ನಿಮಗೆ ಶುಭ ತರಲಿ ಎ೦ದು ಹಾರೈಸುತ್ತೇನೆ.

    ಅನ೦ತ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ನಿಮಗೂ ಸಹ ಶ್ರಾವಣ ಮಾಸ ಹಬ್ಬಗಳ ಶುಭಾಶಯಗಳು.

      ಅಳಿಸಿ
  3. ಶ್ರಾವಣಮಾಸದ ಬಗ್ಗೆ ತುಂಬಾ ಒಳ್ಳೆಯ ಲೇಖನ, ನಿಮಗೆಲ್ಲರಿಗೂ ಶುಭಶ್ರಾವಣ, ಪ್ರೀತಿಯಹಾರೈಕೆಗಳು ವಿಜಯಕಾoತೇಶ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಿಜಯಾ ಕಾಂತೇಶ್, ಮೊದಲಿಗೆ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮನ್ನು ಇಲ್ಲಿ ನೋಡಿ ನನಗೆ ತುಂಬಾ ಸಂತಸವಾಯ್ತು.ನಿಮಗೂ ಸಹ ಶ್ರಾವಣ ಮಾಸದ ಶುಭಾಶಯಗಳು.ಭಾನುವಾರ ’ಅಭಿರುಚಿ’ ತಿಂಗಳ ಕಾರ್ಯಕ್ರಮಕ್ಕೆ ಬರಬಹುದಿತ್ತು.ಭೇಟಿ ಮಾಡಲು ಒಂದು ಅವಕಾಶ ಸಿಕ್ಕಿತ್ತು..... ಓ ಕೆ... ಮತ್ತೆ ಸಿಗೋಣ.ಬ್ಲಾಗಿಗೆ ಬರ್ತಾ ಇರಿ.... ನೀವೂ ಬ್ಲಾಗ್ ಶುರುಮಾಡಿದ್ದೀರಿ...! ಬರಹಗಳು ಪ್ರಾರಂಭವಾಗಲಿ.....! ಶುಭಾಶಯಗಳು.

      ಅಳಿಸಿ
  4. ಹಬ್ಬಗಳ ಆಚರಣೆ ಹಾಗೂ ಅವುಗಳಲ್ಲಿ ಹುದುಗಿರುವ ಭಾವನೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
    ನಿಮಗೂ, ನಿಮ್ಮ ಕುಟು೦ಬಕ್ಕೂ ಶ್ರಾವಣದಲ್ಲಿ ಬರುವ ಎಲ್ಲಾ ಹಬ್ಬಗಳ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಮನಮುಕ್ತರವರೆ. ನಿಮಗೂ ಸಹ ಶ್ರಾವಣಮಾಸದ ಹಬ್ಬಗಳ ಶುಭಾಶಯಗಳು.

      ಅಳಿಸಿ
  5. ಊರಲ್ಲಿ ಇರದ ಕಾರಣ, ನಿಮ್ಮ ಲೇಖನವನ್ನು ಈಗ ನೋಡುತ್ತಿದ್ದೇನೆ. ನಮ್ಮ ಹಬ್ಬಗಳ ಒಳತಿರುಳನ್ನು, ವಿಶೇಷತಃ ಶ್ರಾವಣಮಾಸವನ್ನು ಚೆನ್ನಾಗಿ ವಿವರಿಸಿರುವಿರಿ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಧಾನವಾಗಿ ಓದಿದ್ರೂ ನಿಮ್ಮ ಅಭಿಪ್ರಾಯ ತಿಳಿಸೋದಕ್ಕೆ ಮರೆಯಲಿಲ್ಲವಲ್ಲ ಸಾರ್....!! ಅದಕ್ಕೆ ನಿಮಗೆ ಧನ್ಯವಾದಗಳು ಜೊತೆಗೆ ಶ್ರಾವಣದ ಶುಭಾಶಯಗಳು.

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.