ಬಾಲ್ಯದ ನೆನಪುಗಳು - 4 -"ಪುಣ್ಯಕೋಟಿ"


"ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆ
ಎಂದು ಗೊಲ್ಲನು ಕರೆದನು"

ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಈ ಪದ್ಯವನ್ನು ನಾವೆಲ್ಲರೂ ಓದಿಯೇ ಇರುತ್ತೇವೆ. ಆ ದಿನಗಳು ಇಂದೇಕೋ ಮತ್ತೆ ಮತ್ತೆ ನನಗೆ ನೆನಪಾಗುತ್ತಿದೆ....!!!. ನಮ್ಮಲ್ಲಿ ಎಂದರೆ ಹಿಂದೂಗಳಲ್ಲಿ ಹಸುಗಳನ್ನು "ಗೋಮಾತೆ" ಎಂದು ಪೂಜಿಸುತ್ತೇವೆ,ಗೌರವಿಸುತ್ತೇವೆ. ಅದರ ಪೂಜನೀಯತೆಗೆ ಕಿರೀಟವಿಟ್ಟಂತೆ ತೋರುವ ಕತೆ (ಆಗಲೂ ,ಈಗಲೂ ನಾವ್ಯಾರೂ ಇದನ್ನು ಒಂದು ಕತೆ ಅಂತ ಓದಲೇ ಇಲ್ಲ ಎನ್ನುವುದು ಬೇರೆ ಮಾತು.) "ಪುಣ್ಯಕೋಟಿ"ಯದು. ಕೊಟ್ಟ ವಚನವನ್ನು ಪಾಲಿಸಿದ್ದಕ್ಕಾಗಿ, ತನ್ನ ಸತ್ಯ ಸಂಧತೆ ತೋರಿದ್ದಕ್ಕಾಗಿ ಪ್ರಚಲಿತವಾದ ಕತೆಯಿದು.ಮಾತನ್ನು ಉಳಿಸಿಕೊಳ್ಳಲೋಸುಗ ತನ್ನ ಎಳೆಗರುವನ್ನು ತಬ್ಬಲಿಯಾಗಿಸಿ, ಹುಲಿಯ ಬಾಯಿಗೆ ಆಹಾರವಾಗಿ ಹೊರಟು ನಿಲ್ಲುವ ತಾಯಿಯೊಬ್ಬಳ ಮನಮಿಡಿಯುವ ಕಥಾನಕವಿದು.

ಅಂದು ತರಗತಿಯಲ್ಲಿ "ಪುಣ್ಯಕೋಟಿ" ಪಾಠ ನಡೆಯುತ್ತಿತ್ತು. ಚಿಕ್ಕವರಾದ ನಾವೆಲ್ಲಾ ಒಂದು ರೀತಿಯ ಕಾತರತೆ ಮತ್ತು ಮುಂದೇನಾಗುತ್ತೋ ಅನ್ನುವ ಭಯದಿಂದ ಪಾಠದಲ್ಲಿ ಮುಳುಗಿಹೋಗಿದ್ದೆವು. ಹುಲ್ಲುಮೇಯಲು ಕಾಡಿಗೆ ಹೋದಾಗ, ದಾರಿತಪ್ಪಿದ ಪುಣ್ಯಕೋಟಿ ಹಸು ಹುಲಿಯ ಕೈಗೆ ಸಿಕ್ಕಿಬಿಟ್ಟಿದೆ. ತನ್ನನ್ನು ಕೊಂದು ತಿನ್ನಲು ಬಂದ ಹುಲಿರಾಯನಿಗೆ ’ಮನೆಯಲ್ಲಿರುವ ತನ್ನ ಕಂದಮ್ಮನಿಗೆ ಒಮ್ಮೆ ಮಾತನಾಡಿಸಿ,ಹಾಲು ಕುಡಿಸಿ ಬಂದುಬಿಡುತ್ತೇನೆ. ಆಮೇಲೆ ನನ್ನನ್ನು ತಿನ್ನು’ ಎಂದು ಬೇಡಿಕೊಳ್ಳುತ್ತದೆ.ಆಗ ಹುಲಿ,

"ಹಸಿದ ವೇಳೆಗೆ ಸಿಕ್ಕಿದೊಡನೆಯೆ
ವಶವ ಮಾಡದೆ ಬಿಡಲು ನೀನು
ನುಸುಳಿ ಪೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು"

"ಸತ್ಯವೇ ನಮ್ಮ ತಾಯಿತಂದೆ
ಸತ್ಯವೇ ನಮ್ಮ ಬಂಧುಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು"

ಎಂದು ಹುಲಿಗೆ ಭಾಷೆಯನ್ನು ಕೊಟ್ಟು ,ಅನುಮತಿ ಪಡೆದು ಹಸು ತನ್ನ ಕರುವಿನ ಕಡೆಗೆ ತೆರಳಿದಾಗ ಉಸಿರು ಬಿಗಿಹಿಡಿದು ಕುಳಿತಿದ್ದ ನಾವೆಲ್ಲಾ ನಿಟ್ಟುಸಿರು ಬಿಟ್ಟೆವು.ಆದರೆ ಪಾಠ ಅಷ್ಟಕ್ಕೇ ಮುಗಿಯಲಿಲ್ಲ...! ಕರುವಿನ ಬಳಿ ಬಂದ ಹಸು, ಅದಕ್ಕೆ ಹಾಲುಣಿಸಿ ಕಾಡಿನಲ್ಲಾದ ವಿಷಯವನ್ನೆಲ್ಲಾ ತಿಳಿಸಿ, ತಾನೀಗ ಹುಲಿಗೆ ಆಹಾರವಾಗಿ ಹೋಗಬೇಕು ಎಂದು ತನ್ನ ಕರುವಿಗೆ ತಿಳಿ ಹೇಳುತ್ತದೆ.ತಬ್ಬಿಬ್ಬಾದ ಕರು ನುಡಿಯುವ ಸಾಲುಗಳನ್ನು ಕೇಳುತ್ತಿದ್ದರೆ ಕಂಠ ಬಿಗಿದಂತಾಗುತ್ತದೆ.


"ಆರ ಮೊಲೆಯನು ಕುಡಿಯಲಮ್ಮ

ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು"

ಎಂದು ಹೃದಯ ಕರಗುವ ಹಾಗೆ ದುಃಖಿಸುತ್ತದೆ.

ಆಗ........ ಇದ್ದಕ್ಕಿದ್ದಂತೆ ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ದನಿ ಹಿಂದಿನ ಬೆಂಚಿನಿಂದ ತೂರಿಬಂತು.......!!  ಪಾಠದಲ್ಲಿ ಲೀನವಾಗಿದ್ದ ನಾವೆಲ್ಲ ಒಮ್ಮೆಲೆ ಬೆಚ್ಚಿ ಹಿಂದೆ ತಿರುಗಿದೆವು.  ತನ್ನ ತಾಯಿಯನ್ನು ಕಳೆದುಕೊಂಡ ನಮ್ಮ ಗೆಳತಿಯ ಅಳು ಮೇರೆಮೀರಿತ್ತು. ...!!ಪಾಠ ನಿಲ್ಲಿಸಿದ ನಮ್ಮ ಮೇಷ್ಟ್ರು ಆಕೆಯ ಬಳಿ ತೆರಳಿ ಸಮಾಧಾನ ಮಾಡತೊಡಗಿದರು.  ಎಷ್ಟೇ ಸಂತೈಸಿದರೂ ಆಕೆಯ ಅಳು ನಿಲ್ಲಲಿಲ್ಲ. .....ಪಾಠ ಅಲ್ಲಿಗೇ ನಿಂತಿತು.!  ಚಿಕ್ಕವರಾದ ನಮಗೆಲ್ಲ ಮಂಕುಬಡಿದಂತಾಗಿತ್ತು.... ಇಷ್ಟು ವರುಷಗಳು ಕಳೆದರೂ, ನನ್ನ ಬಾಲ್ಯದ ಸಹಪಾಠಿಯ ಆ ಬಿಕ್ಕಳಿಕೆಯನ್ನು ನನ್ನಿಂದ ಈಗಲೂ, ಈ ಕ್ಷಣವೂ ಮರೆಲಾಗಿಲ್ಲ.......!!!!!  ನನ್ನ ಬಾಲ್ಯದ ಅನೇಕ ಸವಿ ನೆನಪುಗಳ ನಡುವೆ ಇದೊಂದು ಮರೆಯಲಾಗದ ಕಹಿ ನೆನಪಾಗಿ ನನ್ನನ್ನು ಕಾಡುತ್ತದೆ. ಆಕೆ ಈಗ ಎಲ್ಲೇ ಇದ್ರೂ ಚೆನ್ನಾಗಿರಲಿ ಅಂತ ಮನ ಹಾರೈಸುತ್ತದೆ.

ಇನ್ನೊಂದು ವಿಚಾರ ಹೇಳಬೇಕು.ಆ ಚಿಕ್ಕ ವಯಸ್ಸಿನಲ್ಲಿ "ಹಸು ತನ್ನ ಕರುವನ್ನ ಬಿಟ್ಟು ಆ ಹುಲಿ ಬಳಿ ಮತ್ತ್ಯಾಕೆ ಹೋಗ್ಬೇಕು? ಹುಲಿ ತುಂಬಾ ಕ್ರೂರಿ’ ಎನ್ನಿಸುತ್ತಿತ್ತು. ಆದರೆ ಈಗ ನನ್ನ ಭಾವನೆ ಬದಲಾಗಿದೆ.....! ಕೈಗೆ ಸಿಕ್ಕ ಹಸುವನ್ನು ಮನೆಗೆ ಕಳುಹಿಸಿದಾಗ ಹುಲಿ ಅದರ ಆಸೆಯನ್ನೂ ಬಿಟ್ಟಿರಬಹುದು. ಇದು ಹುಲಿಯ ತ್ಯಾಗದ ಗುಣವನ್ನು ತೋರಿಸುತ್ತದೆ.ಹಸು ಹಿಂತಿರುಗಿ ಬಂದಾಗ ಅದರ ಸತ್ಯ ಸಂಧತೆಗೆ ಅಚ್ಚರಿಪಡುತ್ತದೆ. ಭಾಷೆಗೆ ತಪ್ಪದ ಪುಣ್ಯಕೋಟಿಯ ಗುಣವನ್ನು ಮೆಚ್ಚಿ, ಅದನ್ನು ಕೊಂದು ತಿನ್ನಲು ಯೋಚಿಸಿದ ತನಗೆ ಸಾವೇ ಸರಿಯಾದ ಶಿಕ್ಷೆ ಎಂದು ತಿಳಿದು ತನ್ನ  ಪ್ರಾಣವನ್ನೇ ಕೊಟ್ಟಿತು. ಒಂದು ಕ್ರೂರ ಪ್ರಾಣಿಯಲ್ಲೂ ಇಂತಹ ಪರಿವರ್ತನೆ ಕಾಣಲು ಸಾಧ್ಯವೆ ಎಂಬ ಸಂಶಯ ಮೂಡದಿರದು.....!!!!

 ಹಾಗಾಗಿ ಪುಣ್ಯಕೋಟಿ ಕತೆ ಹಸುವಿನ ಸತ್ಯಸಂಧತೆಯನ್ನು ತೋರಿದಂತೆಯೇ ಹುಲಿಯ ತ್ಯಾಗವನ್ನೂ ಎತ್ತಿತೋರಿಸಿದೆ . ನಾಯಕನ ಹಿರಿಮೆಯನ್ನು ಹೇಳುವುದರೊಂದಿಗೆ ಖಳನಾಯಕನಲ್ಲಾದ  ಮನಃ ಪರಿವರ್ತನೆಯನ್ನೂ ಎತ್ತಿ ತೋರಿಸುವ ಇಂತಹ ಕತೆಗಳನ್ನು ಮಕ್ಕಳಿಗೆ ಹೇಳುತ್ತಿದ್ದ ನಮ್ಮ ಹಿರಿಯರ ಸುಸಂಸ್ಕೃತಿಯನ್ನು ಎಷ್ಟು ಹೊಗಳಿದರೂ ಕಡಿಮೆಯೇ ಅಲ್ಲವೇ? 
ಒಳಿತು, ಸದ್ವಿಚಾರಗಳು, ಸದಾಚಾರಗಳು ಎಲ್ಲಿಂದಲಾದರೂ ಬರಲಿ ಅದಕ್ಕೆ ಸ್ವಾಗತವಿರಲಿ......

ಗೋವಿನ  ಹಾಡಿನ ಪೂರ್ಣಪಾಠ ಕೆಳಗಿದೆ.  ಹಾಡಿಕೊಳ್ಳಲು ಚೆನ್ನಾಗಿದೆ
ಮೂಲ ಗೀತೆ

ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ

ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ

ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು

ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು

ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು

ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು

ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆಂದದಿ ತಾ ಬರುತಿದೆ

ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು

ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯಒಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ

ಹಸಿದವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು

ಮೂರುಮೂರ್ತಿಗಳಾಣೆ ಬರುವೆನು ಸೂರ್ಯಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು

ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು

ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆ ನೆಂದು ಬಂದೆನು ದೊಡ್ಡಿಗೆ

ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲಾರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ

ಸತ್ಯವೇ ನಮ್ಮತಾಯಿತಂದೆ ಸತ್ಯವೇ ನಮ್ಮ ಸಕಲ ಬಳಗೆ
ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನ್ನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ

ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು

ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ

ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು

ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನುಎನುತಲಿ ತನ್ನ ಮನದೊಳು ಧ್ಯಾನಿಸಿ

ಮೂರುಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.


ಹಿಂದೆ ಪ್ರಾಥಮಿಕ ಶಾಲಾ ಮಕ್ಕಳ ಪಠ್ಯದಲ್ಲಿದ್ದ ರೀತಿ- (ಇದನ್ನೇ ತಬ್ಬಲಿಯು ನೀನಾದೆ ಮಗನೆಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ)


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೋಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಶದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಶದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
    
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

(ಚಿತ್ರ ಮತ್ತು ಗೀತೆಗಳ ಕೃಪೆ :-- ಅಂತರ್ಜಾಲ) 

4 ಕಾಮೆಂಟ್‌ಗಳು:

 1. ಗೋವಿನ ಹಾಡನ್ನು ಮತ್ತೆ ಸಂಪೂರ್ಣ ನೆನೆಪಿಸಿದಿರಿ. ಧನ್ಯವಾದಗಳು.
  ತಾವು ಉಲ್ಲೇಖಿಸಿದ "ತಬ್ಬಲಿಯು ನೀನಾದೆ ಮಗನೆ" ಚಿತ್ರಕ್ಕೆ ಎ.ಕೆ. ಬೀರ್ ಅವರ ಛಾಯಾಗ್ರಹಣವಿತ್ತು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು...... ಛಾಯಾಗ್ರಾಹಕರನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.....

   ಅಳಿಸಿ
 2. ಈ ಕವನದ ಭಾಗವು ನಮ್ಮ ಪಠ್ಯದಲ್ಲೂ ಇತ್ತು. ಈ ಹಾಡನ್ನು ಕೇಳುತ್ತ ನಾವು (ಅಂದರೆ ವಿದ್ಯಾರ್ಥಿಗಳು) ಶೋಕಿಸಿದ್ದೇವೆ. ಮತ್ತೆ ನೆನಪು ಮಾಡಿದಿರಿ. ಕವನದ ಪೂರ್ತಿ ಪಾಠ ಕೊಟ್ಟದ್ದಕ್ಕಾಗಿ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.