ಬಾಲ್ಯದ ನೆನಪುಗಳು - ೩ - ಬಾಲ್ಯದ ಭಾನುವಾರವೆಂದರೆ....!!

ಎಲ್ಲರ ಬಾಲ್ಯದಲ್ಲೂ ಭಾನುವಾರವೆಂದರೆ ರಜಾ-ಮಜದ ದಿನ. ಶಾಲೆಗೆ ಓಡಬೇಕೆಂಬ ಒತ್ತಡವಿಲ್ಲದೆ ನಮ್ಮ ಆಟದ ಸಾಮಾನುಗಳನ್ನೆಲ್ಲ ಹರಡಿಕೊಂಡು ದಿನವೆಲ್ಲಾ ಸಂತಸದಿಂದ ಕಳೆಯುತ್ತಿದ್ದೆವು. ಟ್ಯೂಷನ್-ಹೋಂವರ್ಕ್ ಎನ್ನುವ ಯಾವ ಜಂಜಾಟಗಳೂ ನಮಗಿರಲಿಲ್ಲ...! 

ಆದರೆ ಚಿಕ್ಕವಳಾದ ನನಗೆ ರೇಜಿಗೆ ತರಿಸುತ್ತಿದ್ದ ಒಂದು ಕಾರ್ಯಕ್ರಮ ಈ ಭಾನುವಾರದಲ್ಲಿ ಸೇರಿಹೋಗಿತ್ತು ಎನ್ನುವುದು ಮರೆಯಲಾಗದ ವಿಷಯ.... ಅದೆಂದರೆ ಎಣ್ಣೆಸ್ನಾನ...... ಇದು  ಪೂರ್ವನಿಶ್ಚಿತ ಕೆಲಸ.... ಇದರಲ್ಲಿ ಬದಲಾವಣೆ ಅಗುತ್ತಿದ್ದುದು ಮಾತ್ರ ಬಹು ಅಪರೂಪ..... ಶಾಂಪೂ ಹಾಕಿ ನೊರೆ ಅರಳಿಸಿ, ಶವರ್ ನೀರಿನಲ್ಲಿ ೧೫-೨೦ ನಿಮಿಷಗಳಲ್ಲಿ ತಲೆಸ್ನಾನ ಮುಗಿಸುವ ಇಂದಿನ ಧಾವಂತ, ಅಂದಿನ ದಿನಗಳಲ್ಲಿ ಇರಲಿಲ್ಲ... ಹಾಗೆಂದು ರಸಋಷಿ ಶ್ರೀ ಕುವೆಂಪುರವರು ಬಣ್ಣಿಸಿರುವ ’ಅಜ್ಜಯ್ಯನ ಅಭ್ಯಂಜನ’ವನ್ನು ನೀವು ನೆನಪಿಸಿಕೊಳ್ಳಬೇಡಿ. ! ಅಜ್ಜಯ್ಯನವರದು ’ಅಭ್ಯಂಜನ’ , ಆದರೆ ನನ್ನದು ಕೇವಲ ’ಎಣ್ಣೆಸ್ನಾನ’.... ಏಕೆಂದರೆ ಅಷ್ಟು ಸುಧೀರ್ಘವಾಗಿ ಎಣ್ಣೆಸ್ನಾನವನ್ನು ಅನುಭವಿಸುವ ತಾಕತ್ತು ನಮಗೆಲ್ಲಿಂದ ಬರಬೇಕು......! ಅದರ ಮುಂದೆ ನನ್ನ ಈ ಅನುಭವ ತೃಣ ಸಮಾನ ಎನ್ನಿಸದಿರಲಿಲ್ಲ....! ಆದರೆ ಚಿಕ್ಕವಳಾದ ನನಗೆ ಎಣ್ಣೆಸ್ನಾನ ಬಹಳ ಕಠಿಣವೆನ್ನಿಸುತ್ತಿದ್ದುದು ಮಾತ್ರ ನಿಜ. ಆ ವೇಳೆಗೆ ಕುವೆಂಪುರವರ ಪ್ರಬಂಧ ಓದಿದ್ದರೆ ನಾನು ಹಾಗೆ ಯೋಚಿಸುತ್ತಿರಲಿಲ್ಲ ಅಂತ ಈಗ ನನ್ನ ಅನುಭವಕ್ಕೆ ಬಂದಿದೆ. 

ಬೆಚ್ಚಗೆ ಕಾಯಿಸಿದ ಹರಳೆಣ್ಣೆ ಮೈಗೆಲ್ಲ ಹಚ್ಚಿ, ಅದು ಮುಟ್ಟಬೇಡ,ಇದು ಮುಟ್ಟಬೇಡ ಅಂತ ನಮ್ಮಮ್ಮ ಹೇಳಿದಾಗ ಸುಮ್ಮನೆ ನಿಲ್ಲಬೇಕಾದ ಶಿಕ್ಷೆ ಎಂದು ಮುಖ ಊದಿಸಿಕೊಳ್ಳುತ್ತಿದ್ದೆ....!ಮೈಗಂಟಿದ ಎಣ್ಣೆ.....ಬಿಸಿಬಿಸಿ ನೀರು....ಅಂಟುವಾಳದಕಾಯಿ-ಸೀಗೆಪುಡಿ ಮಿಶ್ರಣದಿಂದ ತಲೆ ಉಜ್ಜುವಾಗ ಕಣ್ಣಿಗೆ ಸೀಗೆಪುಡಿ ಸೇರಿ ಉರಿ ತರಿಸುತ್ತಿದ್ದುದು- ಇವೆಲ್ಲಾ ನನಗೆ ಎಣ್ಣೆಸ್ನಾನದ ಮೇಲೆ ಕೋಪ ತರಿಸಲು ಕಾರಣವಾಗಿದ್ದವು..... ಆದರೆ ನನ್ನ ಕೋಪಕ್ಕೆ ಚಿಕ್ಕಾಸಿನ ಬೆಲೆ ಸಿಕ್ಕದೆ ಹೋ.... ಎಂದು ಅಳುತ್ತಾ ನನ್ನ ಸ್ನಾನ ಮುಗಿಯುತ್ತಿದ್ದುದನ್ನು ಈಗ  ನೆನೆದಾಗ ನಗು ಉಕ್ಕುತ್ತದೆ.

ಬಾಲ್ಯದ ಭಾನುವಾರದ ಮತ್ತೊಂದು ನೆನಪೆಂದರೆ ಸಂಜೆಗೆ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿಮುದ್ರಿಕೆ ಕಾರ್ಯಕ್ರಮವನ್ನು ಕೇಳಿ ಆನಂದಿಸುವುದು. ಇದು ಬಹು ಜನಪ್ರಿಯವಾದ ಕಾರ್ಯಕ್ರಮವಾಗಿತ್ತು. ಅತ್ಯುತ್ತಮ ಸಿನಿಮಾಗಳು ಇಲ್ಲಿ ಪ್ರಸಾರವಾಗುತ್ತಿದ್ದವು. ಬರೀ ಆಡಿಯೋ ಆಗಿದ್ರು ಕೂಡ ಅದನ್ನು ಕೇಳುವುದರಲ್ಲಿ ನಾನು ತಲ್ಲೀನಳಾಗುತ್ತಿದ್ದೆ....  ಈ ಸಮಯದಲ್ಲಿ ಅಂದರೆ ಸಂಜೆ ನಾಲ್ಕು ಗಂಟೆಯ ನಂತರ, ನಮ್ಮಮ್ಮ ನನ್ನ ಕೂದಲಿನ ಸಿಕ್ಕು ಬಿಡಿಸಿ ಜಡೆ ಹೆಣೆಯುತ್ತಾ ಸಿನಿಮಾ ಕೇಳುವ ಪದ್ಧತಿ. ಚಿತ್ರದ ಹಾಸ್ಯ ಪ್ರಸಂಗಗಳಿಂದಾಗಿ ಕೂದಲಿನ ಸಿಕ್ಕು ಬಿಡಿಸುವಾಗಿನ ನೋವಿನ ಅನುಭವ ನನಗಾಗುತ್ತಿರಲಿಲ್ಲ. ..!ಆದರೆ "ನಾಂದಿ" ಸಿನಿಮಾ ನೋಡುವಾಗ, ಸಿಕ್ಕಿನ ನೆಪ ಮಾಡಿಕೊಂಡು ಬಿಕ್ಕಳಿಸಿ ಅತ್ತಿದ್ದು ಮಾತ್ರ ನನ್ನಿಂದ ಈಗಲೂ ಮರೆಯಲಾಗಿಲ್ಲ....!! ಕಿವುಡ-ಮೂಗರ ಸಮಸ್ಯೆಯ ಕತೆಯನ್ನು ಹೊಂದಿದ ಅತ್ಯುತ್ತಮ ಚಿತ್ರವದು. ರಾಜ್,ಕಲ್ಪನ ಮತ್ತು ಹರಿಣಿ ಪ್ರಧಾನ ಭೂಮಿಕೆಯಲ್ಲಿರುವ ಈ ಚಲನಚಿತ್ರ, ಅನನ್ಯ ಅಭಿನಯ ಮತ್ತು ಸುಮಧುರ ಹಾಡುಗಳಿಂದಾಗಿ ಎಂದಿಗೂ ಮರೆಯಲಾರದ ಒಂದು ಅಮೋಘ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
      ಆಗಿನ ದಿನಗಳಲ್ಲಿ ಬರುತ್ತಿದ್ದ ಉತ್ತಮ ಗುಣಮಟ್ಟದ ಚಲನಚಿತ್ರಗಳು ಈಗೆಲ್ಲಿ?

      ಹಾಗೆಯೇ ಅಂದಿನ ದಿನಗಳು ಇಂದೆಲ್ಲಿ...?

      ಓ...ನೆನಪೇ.... ನೀನೆಷ್ಟು ಮಧುರ..ಮಧುರ..ಮಧುರ. ..!!!   

ನಾಂದಿ ಚಿತ್ರದ ಒಂದೆರಡು ಹಾಡುಗಳನ್ನು ಕೆಳಗೆ ಲಿಂಕ್ ಮಾಡಿದ್ದೇನೆ. ಆ ಸವಿಯನ್ನು ನೀವೂ ಆಸ್ವಾದಿಸಿ ನೋಡಿ...!!

ಹಾಡೊಂದ ಹಾಡುವೆ ನೀ ಕೇಳು ಮಗುವೆ..

ಉಡುಗೊರೆಯೊಂದ ತಂದಾ..

ಚಂದ್ರಮುಖಿ.. ಪ್ರಾಣಸಖಿ...