ಸಂಕ್ರಾಂತಿ


ಸುಗ್ಗಿಕಾಲ ಸೊಗದಕಾಲ
ಅಡಿಯನಿಟ್ಟಿತು
ದವಸಧಾನ್ಯ ಕಾಳುಕಡ್ಡಿ
ಕಣಜ  ತುಂಬಿತು

ಸಸ್ಯದೊಡಲು ಹಸಿರು ತುಂಬಿ
ಕಾಂತಿ ನೀಡಿತು
ಸಗ್ಗದ ಸುಖ ಇಳೆಗೆ ಇಳಿದು
ಶಾಂತಿ ಮೂಡಿತು

ಮುದುಡಿ ಕುಳಿತ ಹಕ್ಕಿ ಸೊಕ್ಕಿ
ರೆಕ್ಕೆ ಬಿಚ್ಚಿತು
ಮಾಗಿ ಕಳೆದು ಮನುಜ ಬವಣೆ
ದೂರ ಸರಿಯಿತು

ಅಂಗಳದಲಿ ಚುಕ್ಕಿ ಚಿತ್ರ
ಚಿತ್ತ ಸೆಳೆಯಿತು
ಮನೆಮನೆಯಲಿ "ಎಳ್ಳು ಬೆಲ್ಲ"
ಘಮಲು ಹರಡಿತು

ಚಳಿಯು ಕಳೆದು ಮಂಜು ಕರಗಿ
ಭ್ರಾಂತಿ ಅಳಿಯಿತು
ಸೂರ್ಯರಥದ ಪಥವು ತಿರುಗಿ
"ಸಂಕ್ರಾಂತಿ" ಮರಳಿತು
ಸಂಭ್ರಮವ ತಂದಿತು