ಬಹುಮಾನ

ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ ತೇಲಿ ಬರುತ್ತಿದೆ ಎಂದು ಅಚ್ಚರಿಪಡುತ್ತಾ, ಗಾಯನ ಸಂಪೂರ್ಣಗೊಂಡ ನಂತರ ನಿಧಾನವಾಗಿ ಹಾಸಿಗೆಯಿಂದೆದ್ದೆ. ನನಗೆ ಆ ದಿನವೆಲ್ಲಾ ಉಲ್ಲಾಸಕರವೆನ್ನಿಸಿತು. ಮುಂದಿನ ನಾಲ್ಕೈದು ದಿನಗಳೂ ಸವಿಗಾನದ ಸುಪ್ರಭಾತ ನನ್ನದಾಗತೊಡಗಿದಾಗ ಈ ಹಾಡುಗಾರ್ತಿ ಯಾರಿರಬಹುದು ಎಂಬ ಕುತೂಹಲ ಜೊತೆಗೆ ಆಕೆಯನ್ನು ಕಾಣುವ ಹಂಬಲ ಮೆಲ್ಲಗೆ ಮೊಳಕೆಯೊಡೆಯಿತು.

ಮರುದಿನ ನಸುಕಿನಲ್ಲಿಯೇ ಎದ್ದು, ಮಧುರ ಕಂಠದ ಜಾಡನ್ನು ಹಿಡಿದು ಹೊರಟೆ. ಸುತ್ತಮುತ್ತಲೆಲ್ಲಾ ಸುಮಧುರ ತರಂಗಗಳೇ ವಿನಾ ಹಾಡುಗಾರ್ತಿಯ ಸುಳಿವು ಸಿಗಲಿಲ್ಲ. ನನ್ನ ಪ್ರಯತ್ನವನ್ನು ಮಾತ್ರ ನಾನು ನಿಲ್ಲಿಸಲಿಲ್ಲ. ಆಕೆಯನ್ನು ಕಂಡು ಅವಳ ಹಾಡುಗಾರಿಕೆಯನ್ನು ತುಂಬುಕಂಠದಿಂದ ಹೊಗಳಿ ,ಆಕೆಗೊಂದು ಮೆಚ್ಚುಗೆಯ ಬಹುಮಾನವನ್ನು ನೀಡಬೇಕೆಂಬ ಕಾತರ ನನಗೆ ದಿನೇದಿನೇ ಹೆಚ್ಚಾಗತೊಡಗಿತು. ಒಂದು ದಿನವಂತೂ ಆಕೆಯನ್ನು ಕಂಡೆ ಎಂದುಕೊಳ್ಳುತ್ತಿರುವಂತೆಯೇ ನನ್ನನ್ನು ದೂರದಿಂದಲೇ ಗಮನಿಸಿ, ಹಾಡುವುದನ್ನು ನಿಲ್ಲಿಸಿ ಮರಗಳ ಮರೆಗೆ ಹೊರಟುಹೋದಳು. ಈಕೆ ಬಲು ಚೂಟಿ ಎಂದು ನಿರಾಶೆಗೊಳಗಾದೆ.


ಸತತ ಪ್ರಯತ್ನದ ನಂತರ ಒಂದು ಮುಂಜಾನೆ ಸಿರಿಕಂಠದ ಒಡತಿಯ ದರ್ಶನ ಭಾಗ್ಯ ನನ್ನದಾಯಿತು. ಕೆಂಪು ಕಂಗಳ ಚೆಲುವೆಯನ್ನು ಕಣ್ತುಂಬಿಕೊಳ್ಳುತ್ತ ಆತುರಾತುರವಾಗಿ "ನಿನಗಾಗಿ ಎಷ್ಟು ದಿನಗಳಿಂದ ಹುಡುಕುತಿದ್ದೆ ಗೆಳತಿ.ಇಷ್ಟು ಇಂಪಾದ ಸಂಗೀತವನ್ನು ನಿನಗೆ ಕಲಿಸಿದವರಾರು?" ಎಂದೆ. ಏನೋ ನನ್ನ ಪುಣ್ಯ ಆಕೆ ಓಡಿಹೋಗಲಿಲ್ಲ. ನಿಧಾನವಾಗಿ ಉಲಿದಳು ’ಗೆಳತಿ ನನ್ನ ಹಾಡಿನಲ್ಲಿ ಅಂಥಾ ವಿಶೇಷವೇನಿದೆ? ದೇವರಿತ್ತ ಕೊಡುಗೆಯಿದು. ನನ್ನ ಬಳಗದವರೆಲ್ಲಾ ಹಾಡುಗಾರರೇ. ನನ್ನ ಹುಟ್ಟಿನಿಂದಲೇ ಈ ಸಂಗೀತಕಲೆ ನನಗೆ ಒಲಿದು ಬಂದಿದೆ. ನಿತ್ಯದ ಕೆಲಸಗಳ ಜೊತೆಗೆ ನನಗಾಗಿ ನಾನು ಹಾಡಿಕೊಳ್ಳುತ್ತಿರುತ್ತೇನೆ."

"ಗೆಳತಿ, ನಿನ್ನ ಗಾಯನ ಸಾಮರ್ಥ್ಯದ ಅರಿವು ನಿನಗಿದ್ದಂತಿಲ್ಲ. ಸಂಗೀತದಲ್ಲಿ ನಿನ್ನನ್ನು ಮೀರಿಸುವವರುಂಟೆ? ದಿನವೆಲ್ಲ ನಿನ್ನ ಹಾಡನ್ನು ಕೇಳುವ ಬಯಕೆ. ನೀನು ನನ್ನೊಡನೆ ಬರುವೆಯಾ? ನಿನ್ನ ಈ ಸವಿಗಾನಕೆ ಬಹುಮಾನವನ್ನು ನೀಡಿ ಸನ್ಮಾನಿಸುವಾಸೆ. ಬಾ ಗೆಳತಿ" ಎಂದಾಗ ಆಕೆ ಕೊರಳ ಕೊಂಕಿಸಿ " ನನಗೇಕೆ ಬಹುಮಾನಗಳು..ಸನ್ಮಾನಗಳು...ಗೆಳೆಯ ?? ನಾನು ಯಾರಿಗಾಗಿಯೂ ಹಾಡಲಾರೆ. ನನ್ನ ಆತ್ಮತೃಪ್ತಿಗಾಗಿ ಮಾತ್ರ ನನ್ನ ಈ ಗಾಯನ. ಚೈತ್ರದ ಸೌಂದರ್ಯ ಕಣ್ತುಂಬುತ್ತಿದ್ದಂತೆ ನನ್ನ ಕಂಠಕ್ಕೆ ಮತ್ತೇರುತ್ತದೆ. ಹಾಡುವ ಬಯಕೆ ಮೈದುಂಬುತ್ತದೆ. ಹಚ್ಚಹಸಿರಿನ ಬನದ ಚೆಲುವು, ಮಾವು ಬೇವುಗಳ ಹೊಸ ಚಿಗುರು ನನ್ನ ಇಂಚರಕ್ಕೆ ಸ್ಫೂರ್ತಿ. ಅದಿರಲಿ , ನೀನೇನಂದೆ ...? ಬಹುಮಾನ ನೀಡುವೆ ಎಂದೆಯಲ್ಲವೇ? ಹಾಗಾದರೆ ಒಂದು ಕೆಲಸ ಮಾಡುವೆಯಾ? ನನಗಾಗಿ , ನನ್ನ ಪರಿವಾರಕ್ಕಾಗಿ ಮರಗಿಡಗಳನ್ನು ಕಡಿದು ಹಾಕದೆ ಎಲ್ಲೆಲ್ಲಿಯೂ ಹಸಿರನ್ನು ಉಳಿಸಬಲ್ಲೆಯಾ ? ಇದೇ.. ಇದೇ.. ನೀನು ನನಗೆ ನೀಡುವ ಸಮಂಜಸ ಬಹುಮಾನ" ಎಂದು ನನ್ನ ಉತ್ತರಕ್ಕೂ ಕಾಯದೆ ಮತ್ತೆ ತನ್ನ ಮಧುರ ಕಂಠದಿಂದ ಕುಹೂ...ಕುಹೂ.... ಎಂದು ಹಾಡುತ್ತಾ ಪುರ್ರನೆ ಹಾರಿಹೋದ ಕೋಗಿಲೆಯನ್ನೇ ನೋಡುತ್ತಾ , ನಿನಗೆ ಬಹುಮಾನ ನೀಡುವ ಯೋಗ್ಯತೆ ಈ ಸ್ವಾರ್ಥಿ ಮಾನವನಿಗಿದೆಯೇ ಎನ್ನಿಸಿತು. ಆದರೆ ಕರ್ಣಾನಂದಕರವಾದ ಕುಹೂ.. ಇಂಚರಕ್ಕೆ ಪ್ರತಿಯಾಗಿ ಗೆಳತಿ ಕೇಳಿದ ಬಹುಮಾನವನ್ನು ಕೊಡಲು ನನ್ನ ಕೈಲಾದ ಪ್ರಯತ್ನ ಮಾಡಲೇಬೇಕೆಂಬ ನಿಶ್ಚಯಕ್ಕೆ ಬಂದಾಗ ಮನ ಹಗುರಾಯಿತು.