ಬಾಲ್ಯದ ನೆನಪುಗಳು - ೧

ಸವಿ ಸವಿ ನೆನಪು-೧

ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು.ಆಗಿನ ಮುಗ್ಧತೆ, ಬೆಳೆದಂತೆ ಮಾಯವಾಗುತ್ತದೆ.ಈ  ಮಾಲಿಕೆಯಲ್ಲಿ ನಾನು ನನ್ನ ಬಾಲ್ಯದ ಕೆಲವು ಕ್ಷಣಗಳನ್ನು ಮೆಲುಕು ಹಾಕಲು ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು  ಇಚ್ಛಿಸುತ್ತೇನೆ. ಜೊತೆಜೊತೆಗೆ ಅಂದಿನ ದಿನಗಳಲ್ಲಿ ನನಗೆ ತುಂಬಾ ಅಚ್ಚುಮೆಚ್ಚಾದ ಮತ್ತು ನನ್ನ ಚಿಕ್ಕಂದಿನ ದಿನಗಳ ಮೇಲೆ ಪ್ರಭಾವ ಬೀರಿದ ಕೆಲವು ಚಲನಚಿತ್ರ ಗೀತೆಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ.

ನಾನು ನನ್ನ ಬಾಲ್ಯವನ್ನೆಲ್ಲ ಮಲೆನಾಡಿನ ಮಡಿಲಲ್ಲಿ, ಭದ್ರೆಯ ತಟದಲ್ಲಿ ಕಳೆದಿದ್ದೇನೆ.ನನ್ನ ಅಜ್ಜ,ಅಜ್ಜಿ,ಅಪ್ಪ,ಅಮ್ಮ ಮತ್ತು ನನ್ನ ಒಡಹುಟ್ಟಿದವರೊಂದಿಗೆ ಕಳೆದ ಆ ದಿನಗಳು ನನ್ನ ಪಾಲಿಗೆ ಅವಿಸ್ಮರಣೀಯ.ನನ್ನ ಎಳೆತನದ ದಿನಗಳು ಎಂದೊಡನೆ "ನಮ್ಮ ಮಕ್ಕಳು" ಸಿನಿಮಾ ನನ್ನ ಸ್ಮೃತಿಪಟಲದ ಮೇಲೆ ಮೂಡಿಬರುತ್ತದೆ.ದೃಶ್ಯ ಮಾಧ್ಯಮ ಒಂದು ಪರಿಣಾಮಕಾರಿಯಾದ ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ.


ಆ ದಿನಗಳಲ್ಲಿ ಬಿಡುಗಡೆಯಾದ "ನಮ್ಮ ಮಕ್ಕಳು" ಮಧ್ಯಮವರ್ಗದ ಬಹುತೇಕ ಸಂಸಾರಗಳಲ್ಲಿ ತುಂಬಾ ಪ್ರಭಾವ ಬೀರಿದ ಅತ್ಯುತ್ತಮ ಚಿತ್ರವಾಗಿತ್ತು.ಈ ಚಿತ್ರ ನಮ್ಮ ಮನೆಯಲ್ಲೂ ಕೂಡ ಬದಲಾವಣೆಯ ಗಾಳಿಯನ್ನ ಬೀಸಿತ್ತು.ಪ್ರತಿದಿನ ಸ್ನಾನ ಮುಗಿಸಿ ದೇವರಿಗೊಂದು ನಮಸ್ಕಾರ ಹಾಕುವುದರೊಂದಿಗೆ ಮುಗಿಯುತ್ತಿದ್ದ ನಮ್ಮ ಪೂಜೆ ಸಿನಿಮಾದ ಪ್ರಭಾವದಿಂದಾಗಿ  ಮನೆಯವರೆಲ್ಲಾ ಒಟ್ಟಾಗಿ ಸೇರಿ ಶ್ಲೋಕ, ಹಾಡುಗಳನ್ನ ಹೇಳಿಕೊಳ್ಳುತ್ತಾ ಭಕ್ತಿಪೂರ್ವಕವಾಗಿ ಮುಗಿಸುವಂತಾಯ್ತು. ಇದರಿಂದ ಒಳ್ಳೆಯ ಸಂಸ್ಕಾರ ಪಡೆಯುವುದರ ಜೊತೆಗೆ ಕುಟುಂಬದಲ್ಲಿ ಸ್ನೇಹ, ಪ್ರೀತಿ ಹೆಚ್ಚಾಗಲು ದಾರಿಯಾಯಿತು.

ಪ್ರತಿ ಮಂಗಳವಾರ, ಶುಕ್ರವಾರಗಳಂದು ನಮ್ಮ ಮನೆಯಲ್ಲಿ ದೇವರಿಗೆ ವಿಶೇಷವಾದ ಪೂಜೆ.ಅಂದು ನಮ್ಮ ತಂದೆಯವರು ಪೂಜೆ ಪ್ರಾರಂಭಿಸುವ ವೇಳೆಗೆ ನಾನು,ನನ್ನ ತಮ್ಮ-ತಂಗಿಯರು ದೇವರ ಮನೆಯಲ್ಲಿ ಪೂಜೆಗೆ ಸಹಕರಿಸುತ್ತಿದ್ದೆವು. ಮಂಗಳಾರತಿಯ ಹೊತ್ತಿಗೆ ನಮ್ಮ ತಾಯಿಯವರೂ ಬೆಳಗಿನ ತಿಂಡಿ ಮಾಡುವುದನ್ನು ಮುಗಿಸಿ ನಮ್ಮೊಡನೆ ಸೇರುತ್ತಿದ್ದರು.ತೀರ್ಥ-ಪ್ರಸಾದದ ನಂತರ ತಿಂಡಿ ಮುಗಿಸಿ ಶಾಲೆಗೆ ಹೋಗುವ ಪದ್ಧತಿ ಬೆಳೆದು ಬಂತು.ಮೊದಲೆಲ್ಲಾ ಯಾಂತ್ರಿಕವಾಗಿ ಮುಗಿಯುತ್ತಿದ್ದ ಪೂಜೆ ದೃಶ್ಯ ಮಾಧ್ಯಮದ ಪ್ರಭಾವದಿಂದಾಗಿ ಮನೆಯಲ್ಲಿ ಆತ್ಮೀಯ ವಾತಾವರಣವನ್ನುಂಟು ಮಾಡಿತ್ತು. ಚಿಕ್ಕವರಾದ ನಮಗೆ ಹಿರಿಯರಿಗೆ ಗೌರವಿಸುವ ,ಕಿರಿಯರಿಗೆ ಪ್ರೀತಿ ತೋರಿಸುವ ಮಾರ್ಗದರ್ಶನ ನೀಡಿತು.ಈ ಘಟನೆ ನನ್ನ ಮನಸ್ಸಿನಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ.’
’ನಿನ್ನೊಲುಮೆ ನಮಗಿರಲಿ ತಂದೆ
 ಕೈ ಹಿಡಿದು ನೀ ನೆಡೆಸು ಮುಂದೆ’ ಪ್ರತಿದಿನ ದೇವರ ಮುಂದೆ ಭಕ್ತಿಪೂರ್ವಕವಾಗಿ ಹೇಳುತ್ತಿದ್ದೆವು. ಈಗಲೂ ಈ ಹಾಡಿನ ಸಾಲುಗಳನ್ನು ಆಗಾಗ್ಗೆ ಗುಣುಗುಣಿಸುತ್ತಿರುತ್ತೇನೆ.
  ’ ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
    ಅಂಬಿಗನೆ ನೀ ನೆಡೆಸು ಈ ಬಾಳನೌಕೆ
    ಯಾವ ನೋವೇ ಬರಲಿ ಎದೆಗುಂದದಿರಲಿ
    ಸತ್ಯ ಮಾರ್ಗದೆ ನೆಡೆವ ಶಕ್ತಿ ಕೊಡು ತಂದೆ’ 
ಎಷ್ಟೊಂದು ಅರ್ಥವತ್ತಾದ ಸಾಲುಗಳು ಅಲ್ಲವೆ? ಇಂತಹ ಹಾಡುಗಳು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲವೇ? ಇಂತಹ ಉತ್ತಮ ಅಭಿರುಚಿಯ ಸಿನಿಮಾವನ್ನ ಈಗಿನ ಮಕ್ಕಳೂ ನೋಡಿ ಕಲಿಯುವುದಿದೆ ಎಂದು ನಿಮಗನ್ನಿಸುವುದಿಲ್ಲವೆ?

ಈ ಹಾಡಿನ ಸಾಹಿತ್ಯವನ್ನೊಮ್ಮೆ ನೋಡಲು ಇಲ್ಲಿ ಕ್ಲಿಕ್ಕಿಸಿ.
"ನಿನ್ನೊಲುಮೆ ನಮಗಿರಲಿ ತಂದೆ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.