ವಿದೇಶ ವಿಹಾರ - 4 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..


ಶಾಂತ ಸಾಗರ - ಪ್ರಶಾಂತ ಸಾಗರ..!!!!

ನಾನು ಹಿಂದೂ ಮಹಾ ಸಾಗರವನ್ನು ನಮ್ಮ ದೇಶದ ತೀರ ಪ್ರದೇಶಗಳಲ್ಲಿ ಕಂಡು ಸಾಗರದ ನೀರಿನಲ್ಲಿ ಆಟವಾಡಿ ಆನಂದಿಸಿದ್ದೇನೆ. ಸಾಗರದ ಅಲೆಗಳ ಅಬ್ಬರ, ಸಮುದ್ರದ ಭೋರ್ಗರೆತವನ್ನು ಕಂಡು ಮಹಾಸಾಗರಗಳೆಂದರೆ ಹೀಗೇ ಎಂದು ಅಂದುಕೊಡಿದ್ದೇನೆ. ಆಳೆತ್ತರಕ್ಕೆ ನೆಗೆಯುತ್ತಾ ಒಂದರ ಹಿಂದೊಂದು ಬರುವ ಅಲೆಗಳು ತನ್ನೊಡಲಿಗೆ ಸಿಕ್ಕ ವಸ್ತುಗಳನ್ನು ದಡಕ್ಕೆ ಎಸೆದು,ದಡದಲ್ಲಿ ಇದ್ದವುಗಳನ್ನು ತನ್ನ ತೋಳುಗಳನ್ನು ಚಾಚಿ ಸೆಳೆದುಕೊಳ್ಳುತ್ತಾ ವಾಪಾಸಾಗುವ ತರಂಗಗಳನ್ನು ದಿನವಿಡೀ ನೋಡಿ ಮೈಮರೆತಿದ್ದೇನೆ.

ಸಮುದ್ರದ ಸೌಂದರ್ಯವನ್ನು ಸವಿಯಬೇಕೆಂದರೆ ಕನ್ಯಾಕುಮಾರಿಯ ವಿವೇಕಾನಂದ ಮೆಮೊರಿಯಲ್ ರಾಕ್ ಗೆ ಹೋಗಬೇಕು.ಭಾರತದ ಭೂಶಿರ ಕನ್ಯಾಕುಮಾರಿಯಲ್ಲಿ ಹಿಂದೂ ಮಹಾಸಾಗರದ ಅಲೆಗಳ ಆರ್ಭಟ ಮತ್ತು ನಾವು ಮಾತಾಡಿದರೂ ಪಕ್ಕದವರಿಗೆ ಕೇಳಿಸದಷ್ಟು ಭೋರ್ಗರೆತದ ಪರಾಕಾಷ್ಟೆಯನ್ನು ಕಂಡು ಆನಂದಿಸಿದರೂ ಒಳಗೊಳಗೆ ಸಣ್ಣಗೆ ನಡುಗಿದ್ದೂ ಇದೆ.


ಪ್ರಪಂಚದಲ್ಲಿಯೇ ಅತ್ಯಂತ ವಿಶಾಲವಾದ ಸಾಗರವೆಂದರೆ ಪೆಸಿಫಿಕ್ ಸಾಗರ. ಆಸ್ಟ್ರೇಲಿಯಾದ ಪೂರ್ವಕ್ಕೆ ವಿಸ್ತಾರವಾದ ಪೆಸಿಫಿಕ್ ಸಾಗರವಿದೆ.ಆದರೆ ಪೆಸಿಫಿಕ್ ಸಾಗರದ ಅನುಭವವೇ ಬೇರೆ.ಆಸ್ಟ್ರೇಲಿಯಾ ಪ್ರವಾಸದ ವೇಳೆ ಈ ಸಾಗರದ ತೀರ ಪ್ರದೇಶಗಳನ್ನು ಮತ್ತು ಈ ಸಾಗರದಲ್ಲಿರುವ ದ್ವೀಪಗಳಿಗೆ ಭೇಟಿ ನೀಡುವ ಅವಕಾಶ ಒದಗಿತು.ನನ್ನ ಮಗಳಿರುವ ಸಿಟಿ ಟೌನ್ಸ್ವಿಲ್ ನಲ್ಲಿ ಸಹ ಪೆಸಿಫಿಕ್ ಸಾಗರವನ್ನು ಕಾಣಬಹುದು. ಇಲ್ಲಿ ಪೊಲ್ಲರಾಂಡ  ಮತ್ತು ಸ್ಟ್ರ್ಯಾಂಡ್ ಬೀಚುಗಳಿವೆ. ಕೈರ್ನ್ಸ್ ಪ್ರದೇಶದ ಸುತ್ತಾಮುತ್ತಾ ಅನೇಕ ಬೀಚುಗಳಿಗೆ ಹೋಗಿದ್ದೆವು.

ಪೆಸಿಫಿಕ್ ಸಾಗರದಲ್ಲಿ ಎಲ್ಲಿಯೂ ಅಲೆಗಳ ಆರ್ಭಟವಾಗಲಿ, ಮೈ ನಡುಗಿಸುವ ಭೋರ್ಗರೆತವಾಗಲಿ ನನ್ನ ಅನುಭವಕ್ಕೆ ಬರಲೇ ಇಲ್ಲ.ಯಾವುದೇ ಭಯವಿಲ್ಲದೆ ಸಮುದ್ರದ ನೀರಿನಲ್ಲಿ ಅಲೆಗಳೊಂದಿಗೆ ಆಟವಾಡುತ್ತಾ ಕಾಲಕಳೆಯಬಹುದು.ದೊಡ್ಡ ಕಡಲೂ ಸಹ ಮೇಲ್ನೋಟಕ್ಕೆ ಪ್ರಶಾಂತವಾಗಿರಬಲ್ಲುದು ಎಂಬುದು ಈಗ ನನ್ನ ಅರಿವಿಗೆ ಬಂತು.ಇದು ಹೆಸರಿಗೆ ತಕ್ಕಂತೆ "ಶಾಂತ ಸಾಗರ" ವೇ ಸರಿ.

ಸಮುದ್ರ ರಾಜನ ಮತ್ತೊಂದು ಅವತಾರವನ್ನು ವೀಕ್ಷಿಸಿ ಮನ ಮೂಕವಿಸ್ಮಿತವಾಯಿತು.ನಮ್ಮ ಕಲ್ಪನೆಗೆ ಎಟುಕದ ವೈವಿಧ್ಯತೆಯನ್ನು ತುಂಬಿ ಬ್ರಹ್ಮಾಂಡವನ್ನು ಸೃಷ್ಠಿಸಿದ ಕಾಣದ ಆ ಶಕ್ತಿಗೆ ಮನ ನಮೋ ಎಂದಿತು.

ಸಾಗರದ ಮೇಲಿಂದ ಬೀಸುವ ಗಾಳಿಗೆ ಉಂಟಾದ ಮರಳಿನ ಚಿತ್ತಾರ.


ಕೈರ್ನ್ಸ್ ನಿಂದ ಹದಿನೈದು ಕಿಲೋಮೀಟರ್ ಹೋದರೆ ಅನೇಕ ಬೀಚ್ ಗಳನ್ನು ನೋಡಬಹುದು. ಈ ಶಾಂತ ಸಾಗರದ ತೀರ ಪ್ರದೇಶವನ್ನು ಗಮನಿಸಿ.ಅಲೆಗಳ ಅಬ್ಬರವಿಲ್ಲ. ಗುಡ್ಡಬೆಟ್ಟಗಳಿಂದ ಸುತ್ತುವರೆದಿರುವ ಸಮುದ್ರ.ಕಡಲ ತಡಿಯಲ್ಲಿ ಗಾಳಿ,ನೀರಿನ ಹೊಡೆತಕ್ಕೆ ಸವೆದು ಸೊಗಸಾದ ಆಕಾರಗಳನ್ನು ಪಡೆದ ಕಲ್ಲುಗಳ ರಾಶಿಯೇ ಇಲ್ಲಿದೆ.ನಾವು ಕಲ್ಲುಗಳ ವಿವಿಧ ಆಕೃತಿಗೆ ಮನಸೋತು ಎಂಟು-ಹತ್ತು ಕಲ್ಲುಗಳನ್ನು ನಮ್ಮ ಕಾರಿನಲ್ಲಿ ಹಾಕಿಕೊಂಡು ಬಂದು ನನ್ನ ಮಗಳ ಮನೆಯ ಮುಂದಿನ ಲಾನಿನಲ್ಲಿ ಇಟ್ಟೆವು. ಭಾರತಕ್ಕೆ ತರುವಂತಿದ್ದರೆ ಇಲ್ಲಿಗೂ ತಂದೇ ಬಿಡುತ್ತಿದ್ದೆವೇನೋ ಅನ್ನಿಸಿತು.

2 ಕಾಮೆಂಟ್‌ಗಳು:

  1. ಮಂಜುಳಾವ್ರೇ, ಪ್ರವಾಸದ ಸೊಗಸಾದ ಅನುಭವವನ್ನು ನಮ್ಮೊಮ್ದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದ....ಇದಕ್ಕಿಂತ ಹೆಚ್ಚು ಮುದ ನೀಡಿದ್ದು ನಿಮ್ಮ ಚಿತ್ರ ಸರಣಿ..

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.