ವಿದೇಶ ವಿಹಾರ - 11-The Great Barrier Reef,Australia - ಹವಳದ್ವೀಪಗಳು


Green Island
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶ, ಪ್ರವಾಸಿಗರಿಗೆ ಅದ್ಭುತ ಅನುಭವಗಳನ್ನು ನೀಡುವ ವಿಶಿಷ್ಟ ತಾಣಗಳನ್ನು ಒಳಗೊಂಡಿದೆ.ಅಂತಹ ಸ್ಥಳಗಳಲ್ಲಿ ಕೈರ್ನ್ಸ್ ಸಹ ಒಂದು.ಇಲ್ಲಿ ೨-೩ ದಿನವಿದ್ದು,ಕೈರ್ನ್ಸ್ ಮಾತ್ರವಲ್ಲದೆ, ಹೆಸರಾಂತ ಗ್ರ‍ೇಟ್ ಬ್ಯಾರಿಯರ್ ರೀಫ್ ನ ಹವಳದ್ವೀಪ,ಕುರಾಂಡದ ಸ್ಕೈರೈಲಿನಲ್ಲಿ ಪಯಣಿಸುವ ಮತ್ತು ಸುತ್ತಮುತ್ತಲ ಅನೇಕ ಸುಂದರ ಬೀಚ್ ಗಳನ್ನು  ನೋಡುವ ಅವಕಾಶವನ್ನು ನಮಗೆ ಕಲ್ಪಿಸಿಕೊಟ್ಟ ನನ್ನ ಮಗಳು-ಅಳಿಯ ಇಬ್ಬರನ್ನೂ ನಾನಿಲ್ಲಿ ಮತ್ತೊಮ್ಮೆ ಸ್ಮರಿಸಲೇಬೇಕು.


ನಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿ "ಗ್ರೀನ್ ಐಲ್ಯಾಂಡ್" ಗೆ ಭೇಟಿ ನೀಡಿದ್ದು ನನಗೆ ಮರೆಯಲಾಗದ ಅನುಭವ ನೀಡಿತು.ಈ ದೇಶದ ಕ್ವೀನ್ಸ್ ಲ್ಯಾಂಡ್ ರಾಜ್ಯಕ್ಕೆ ಸೇರಿದ ಅನೇಕ ದ್ವೀಪಗಳಲ್ಲಿ ಸಮೃದ್ಧವಾದ, ವರ್ಣರಂಜಿತವಾದ ಹವಳದಿಬ್ಬಗಳಿವೆ.ಈ ಹವಳ ದ್ವೀಪಗಳ ಸಮೂಹವೇ ಜಗತ್ಪ್ರಸಿದ್ಧವಾದ "ಗ್ರೇಟ್ ಬ್ಯಾರಿಯರ್ ರೀಫ್".ಇದರ ಒಂದು ಭಾಗವಾದ ’ಗ್ರೀನ್ ಐಲ್ಯಾಂಡ್" ಗೆ ನಾವು ಕೈನ್ರ್ಸ್ ನಿಂದ ಕ್ರೂಝಸ್ ನಲ್ಲಿ ಹೋದೆವು.

ಈ ದ್ವೀಪದಲ್ಲಿ ಬಣ್ಣಬಣ್ಣದ ಹವಳ ಸಮೂಹಗಳನ್ನಲ್ಲದೆ ವೈವಿಧ್ಯಮಯವಾದ ಅಸಂಖ್ಯಾತ ಸಮುದ್ರ ಜೀವಿಗಳನ್ನು ನಾವಿಲ್ಲಿ ವೀಕ್ಷಿಸಬಹುದು.


ಅನೇಕ ಬಗೆಯ ಮೀನುಗಳು,ಆಮೆಗಳು,ನಕ್ಷತ್ರ ಮೀನುಗಳು,ಸ್ಪಾಂಜುಗಳು,ವಿವಿಧ ಆಕೃತಿಯ ಚಿಪ್ಪಿನಲ್ಲಿರುವ ಜೀವಿಗಳನ್ನು ಹತ್ತಿರದಿಂದ ನೋಡಿ ನಮ್ಮ ಕಣ್ತುಂಬಿಕೊಳ್ಳಬಹುದು.ಇವುಗಳನ್ನು ವೀಕ್ಷಿಸಲು ಗ್ಲಾಸ್ ಬಾಟಂ ಬೋಟ್ ವ್ಯವಸ್ಥೆ ಇದೆ. ಧೈರ್ಯವಿರುವವರು ಸ್ಕೂಬಾ ಡೈವಿಂಗ್,ಸ್ನಾರ್ಕಲಿಂಗ್,ಪ್ಯಾರಾಸೈಲಿಂಗ್ ಮಾಡಬಹುದು. ದಂಡೆಯಲ್ಲಿ ಬಿಳಿ ಮರಳಿನ ಮೇಲೆ ನಡೆದಾಡುತ್ತಾ ಸಮುದ್ರದ ಅಲೆಗಳೊಡನೆ ಆಡಬಹುದು.ದಿನವಿಡೀ  ಮೈನವಿರೇಳಿಸುವ ಅನುಭವಗಳನ್ನು ನಮ್ಮದಾಗಿಸಿಕೊಳ್ಳುವುದರೊಂದಿಗೆ ಮನಸ್ಸನ್ನು ಉಲ್ಲಾಸಗೊಳಿಸುವ ಇಲ್ಲಾ ವ್ಯವಸ್ಥೆಗಳೂ ಇಲ್ಲಿವೆ.ನನ್ನ ಜೀವಿತದ ಅಮೂಲ್ಯ ಕ್ಷಣಗಳಲ್ಲಿ ಇದೂ ಸಹ ಒಂದು.

ನಾನು ಹವಳದ್ವೀಪಗಳ ಬಗ್ಗೆ ಅಲ್ಲಿ ಇಲ್ಲಿ ಕೇಳಿ ಮತ್ತು ಓದಿ ತಿಳಿದ ಕೆಲವು ವಿಷಯಗಳನ್ನಿಲ್ಲಿ ದಾಖಲಿಸಲು ಇಷ್ಟಪಡುತ್ತೇನೆ. ಹವಳ (ಪಾಲಿಪ್ಸ್) ಒಂದು ಪುಟ್ಟ ಸಮುದ್ರಜೀವಿ.ಈಜೀವಿಗಳು ಸ್ವಚ್ಛವಾದ ಸಮುದ್ರದ ತೀರಪ್ರದೇಶದಲ್ಲಿ ಬೆಳೆಯುತ್ತವೆ.ಇವುಗಳನ್ನು ’ಸಮುದ್ರದ ಮಳೆ ಕಾಡು’ಗಳೆಂದೂ ಕರೆಯುತ್ತಾರಂತೆ.ಸೂಕ್ಷ್ಮ ಸ್ವಭಾವದ ಈ ಪಾಲಿಪ್ಸ್ ನ ಲಾರ್ವಾಗಳು ಗಟ್ಟಿಯಾದ ಶಿಲೀಂದ್ರಗಳ ಮೇಲೆ ನೆಲೆಯೂರುತ್ತವೆ ಮತ್ತು ಕಾಲೋನಿಗಳನ್ನು
ನಿರ್ಮಿಸಿಕೊಳ್ಳುತ್ತವೆ.ಈ ಪುಟ್ಟ ಜೀವಿಗಳ ಸಮುದಾಯವೇ ಹವಳ. ಅಸಂಖ್ಯಾತ ಹವಳಗಳು ಒಂದನ್ನೊಂದು ಗಟ್ಟಿಯಾಗಿ ಅಂಟಿಕೊಂಡು ಸಾಮರಸ್ಯದಿಂದ ನಿರ್ಮಿಸಿಕೊಳ್ಳುವ ಸುಂದರ ರಚನೆಯೇ ಹವಳದ್ವೀಪಗಳು.ಇವುಗಳ ಬದುಕು ವಿಚಿತ್ರವಾದುದು. ಇವುಗಳು ಗಟ್ಟಿ ಶಿಲೀಂದ್ರಗಳನ್ನು ಆಶ್ರಯಿಸಿದಂತೆ,ಇವುಗಳನ್ನು ಆಶ್ರಯಿಸಿ ಕೆಲವು ವರ್ಣರಂಜಿತ ಆಲ್ಗೈಗಳು ಬೆಳೆಯುತ್ತವೆ.ಈ ವರ್ಣವಿನ್ಯಾಸದ ಆಲ್ಗೈಗಳಿಂದ ಹವಳಗಳೂ ವಿವಿಧ ಬಣ್ಣಗಳನ್ನು ಹೊಂದಿವೆ.ಹವಳದ ದಿಬ್ಬಗಳು ಅನೇಕ ಜಲಚರ ಜೀವಿಗಳಿಗೆ ಆಶ್ರಯ ನೀಡುತ್ತದೆ.ಇದು ಸಾಗರದಾಳದಲ್ಲಿರುವ ಜೀವಿ-ಜೀವಿಗಳಲ್ಲಿ ಕಂಡುಬರುವ ಸಾಮರಸ್ಯದ ಬದುಕಿಗೆ ಒಂದು ಉದಾಹರಣೆ.

ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಮಾತ್ರವಲ್ಲದೆ ನಮ್ಮ ಭಾರತದ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ,ನ್ಯೂಜಿಲ್ಯಾಂಡ್,ಥೈಲ್ಯಾಂಡ್,ಕುವೈತ್ ಮತ್ತು ಕ್ಯಾರಿಬಿಯನ್ ಸಮುದ್ರದ ಭಾಗಗಳಲ್ಲೂ ಹವಳದ ದ್ವೀಪಗಳು ಕಂಡುಬರುತ್ತವೆ.


ವಿಷಾದದ ಸಂಗತಿಯೆಂದರೆ ಇಂತಹ ಅಪರೂಪದ ಸಮುದ್ರಜೀವಿಗಳಿಗೆ ವಿನಾಶದ ಕಾಲ ಆರಂಭವಾಗಿದೆ.ದಿನೇದಿನೇ ಏರುತ್ತಿರುವ ಭೂತಾಪಮಾನ, ಸಮುದ್ರಕ್ಕೆ ಹರಿದುಬರುತ್ತಿರುವ ವಿನಾಶಕಾರಕ ರಾಸಾಯನಿಕ ವಸ್ತುಗಳು ಇವುಗಳ ಅಳಿವಿಗೆ ಕಾರಣವಾಗುತ್ತಿದೆ. ಪ್ರಕೃತಿದತ್ತವಾದ ಸಾಗರದ ಸಂಪತ್ತಾದ ಹವಳದ್ವೀಪಗಳ ಉಳಿವಿಗೆ ಮತ್ತು ಇವುಗಳ ಪುನರುಜ್ಜೀವನಗೊಳಿಸಲು ನಮ್ಮ ಸರ್ಕಾರಗಳೂ, ನಾವೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಅಪರೂಪದ ಈ ಜೀವಿಗಳನ್ನು ಸಂರಕ್ಷಿಸಲು ಆಸ್ಟ್ರೇಲಿಯಾ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿರುವುದು ಸಂತಸದ ವಿಷಯ.ಇವುಗಳ ಸಂರಕ್ಷಣೆ ಮಾನವರಾದ ನಮ್ಮ ಆದ್ಯ ಕರ್ತವ್ಯ.ಇದನ್ನು ನಾವು ಮರೆಯಬಾರದು...!!!

6 ಕಾಮೆಂಟ್‌ಗಳು:

 1. ಸುಂದರವಾದ ಚಿತ್ರಗಳೊಂದಿಗೆ ಉತ್ತಮ ಮಾಹಿತಿಯನ್ನು ನೀಡುತ್ತಿರುವ ನಿಮಗೆ ಧನ್ಯವಾದಗು.

  ಪ್ರತ್ಯುತ್ತರಅಳಿಸಿ
 2. ಪ್ರವಾಸ ಕಥನ ಮತ್ತು ಫೋಟೋಗಳು ಸೂಪರ್....ಚನ್ನಾಗಿದೆ...ಲೇಖನ

  ಪ್ರತ್ಯುತ್ತರಅಳಿಸಿ
 3. ಚೆ೦ದದ ಫೋಟೋಗಳೊಡನೆ ಒಳ್ಳೆಯ ವಿವರಣೆ ಓದಿ ಖುಶಿಯಾಯಿತು.. :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.