ಶ್ರಾವಣ ಮಾಸ - ಒಂದೇ ಬಳ್ಳಿಯ ಹೂಗಳ ಮಾಸದ ಸಂಬಂಧಕ್ಕೆ ಸಂಕೇತ


ವರ್ಷಋತುವಿನೊಡನೆ ಶ್ರಾವಣಮಾಸ ಧರೆಗೆ ಕಾಲಿಟ್ಟಿತೆಂದರೆ ಆಷಾಢದ ಜಡತೆ ಪಲಾಯನಗೈಯ್ಯುತ್ತದೆ.ಭೋರೆಂದು ಸುರಿವ ಮಳೆ, ಹಸಿರು ಸೀರೆಯನುಟ್ಟು ಬಣ್ಣಬಣ್ಣದ ಹೂಗಳ ತೊಟ್ಟ ಪ್ರಕೃತಿದೇವಿಯ ವೈಭವ ಈ ಮಾಸಕ್ಕೆ ವಿಶೇಷವಾದ ಕಳೆ ನೀಡುತ್ತದೆ. ಪೇಟೆಯಲ್ಲಿ ಹಲವು ಬಗೆಯ ಫಲಪುಷ್ಪಗಳ ಆಗಮನ.ಮನೆಮನೆಗಳಲ್ಲಿ ದಿನಕ್ಕೊಂದು ಹಬ್ಬ-ವ್ರತಗಳೆಂದು ಸಂತಸ.ಜರಿತಾರಿ ಸೀರೆಯನ್ನುಟ್ಟು ಸಂಭ್ರಮಿಸುವ ಹೆಂಗೆಳೆಯರು ಕಣ್ಮನ ತುಂಬುತ್ತಾರೆ.ಇದೆಲ್ಲವೂ ಶ್ರಾವಣಮಾಸದ ವೈಶಿಷ್ಟ್ಯಗಳು.ಈ ಮಾಸದಲ್ಲಿ ಬರುವ ಹಬ್ಬಗಳ ಅವಲೋಕನ ಮಾಡಿದಾಗ ಒಡಹುಟ್ಟಿದವರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬಗಳ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಅಣ್ಣ-ತಮ್ಮ,ಅಕ್ಕ-ತಂಗಿಯರು ಎಲ್ಲಿದ್ದರೂ ಮರೆಯದೆ ಪರಸ್ಪರ ಶುಭಕೋರುವ ತಿಂಗಳಿದು. ತವರಿನ ಸಂಬಂಧವನ್ನು ಉಳಿಸಿ ಬೆಳೆಸಲು ಸಹಕಾರಿಯಾದ ಹಬ್ಬಗಳು ಶ್ರಾವಣ ಸಂಭ್ರಮಕ್ಕೆ ಗರಿ ಮೂಡಿಸಿದೆ.ಈ ಮಾಸದಲ್ಲಿ ಆಚರಿಸುವ  ಭ್ರಾತೃಪ್ರೇಮವನ್ನು ಬಿಂಬಿಸುವ ಒಂದೆರಡು ಹಬ್ಬಗಳತ್ತ ಗಮನಹರಿಸೋಣ. 

ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆವ ಹಬ್ಬ.ಈ ದಿನ ಹೆಣ್ಣುಮಕ್ಕಳು ತಮ್ಮ ಪತಿಯ ಏಳಿಗೆ, ದೀರ್ಘಾಯಸ್ಸನ್ನು ಕೋರುವುದು ವಿಶೇಷವಾದರೂ ತಮ್ಮ ಸೋದರನನ್ನು ಕರೆಸಿ,ಭಂಢಾರ ಒಡೆದು, ಉಡುಗೊರೆ ನೀಡಿ ತಮ್ಮ ನಡುವಿನ ಆತ್ಮೀಯತೆ ಬೆಸೆಯುವ ಪರಂಪರೆ ಸಹ ನಮ್ಮಲ್ಲಿ ಕೆಲವೆಡೆ ಇದೆ.

ಈ ಮಾಸದ ಶುಕ್ಲಪಕ್ಷದ ಚೌತಿ,ಪಂಚಮಿ,ಷಷ್ಟಿಯಂದು ನಾಗಪ್ಪನಿಗೆ ತನಿ ಎರೆಯುವ ಸಂಪ್ರದಾಯವಿದೆ.ಇದರಲ್ಲಿ "ನಾಗರ ಪಂಚಮಿ" ನಾಡಿಗೇ ದೊಡ್ಡದಾದ ಹಬ್ಬವೆಂಬ ಹೆಗ್ಗಳಿಕೆಯಿದೆ. ಗ್ರಾಮಾಂತರ ಪ್ರದೇಶದಲ್ಲಿ, ನಮ್ಮ ಜನಪದರಲ್ಲಿ ’ಪಂಚ್ಮಿಹಬ್ಬ’ವೆಂದು ಹೆಸರು ಪಡೆದಿದೆ. 

’ಪಂಚ್ಮಿಹಬ್ಬ ಪಂಚ್ಮಿಹಬ್ಬ ಉಳಿದಾವ್ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರಿಯಾಕ’
ಎಂದು ತೌರಿನ ಕರೆಯನ್ನು ಹೆಂಗಳೆಯರು ಕಾತರದಿಂದ ಕಾಯುವ ಹಬ್ಬವಿದು.ನಾಗರಪಂಚಮಿಯಂದು ನಾಗನನ್ನು ಭಕ್ತಿಯಿಂದ ಪೂಜಿಸಿ, ಹಾಲುತುಪ್ಪದ ತನಿ ಎರೆದು,ಅರಿಶಿನದ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಪದ್ಧತಿ. ಈ ಪವಿತ್ರ ದಿನ ತನಿ ಎರೆದು ತಾಯಿಯ ಎದೆಹಾಲಿನ ಋಣ ತೀರಿಸುವ ಆಶಯವೂ ಇದರಲ್ಲಿದೆ.ಈದಿನ ಹೆಣ್ಣುಮಕ್ಕಳು ತಮ್ಮ ಸೋದರನ ಬೆನ್ನು ತೊಳೆದು, ಬೆನ್ನು-ನಾಭಿಗೆ ನಾಗನಿಗೆ ನೈವೇದ್ಯ ಮಾಡಿದ ಹಾಲು-ತುಪ್ಪ ಹಚ್ಚಿ ಅವರಿಗೆ ಶುಭಹಾರೈಸುತ್ತಾಳೆ. ತನ್ನ ತೌರಿನ ಬಳ್ಳಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿತ್ತಾಳೆ.ತನ್ನ ಶ್ರೇಯಸ್ಸನ್ನು ಬಯಸುವ ಸಹೋದರಿಗೆ ಉಡುಗೊರೆ ನೀಡಿ ಸೌಭಾಗ್ಯವತಿಯಾಗುವಂತೆ ಹರಸುತ್ತಾನೆ.ಇದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪದ್ಧತಿ.

ಶ್ರಾವಣದಲ್ಲಿ ಜಾತಿಮತ ಬೇಧವಿಲ್ಲದೆ ಆಚರಿಸುವ ಒಂದು ವಿಶೇಷವಾದ ಹಬ್ಬವೆಂದರೆ ’ರಕ್ಷಾಬಂಧನ’ ಅಥವ ರಾಖಿಹಬ್ಬ.ಇದನ್ನು ಶ್ರಾವಣ ಶುಕ್ಲ ಪೂರ್ಣಿಮೆಯಂದು ಆಚರಿಸುತ್ತೇವೆ.ಈ ಹಬ್ಬದಂದು ’ರಕ್ಷೋಪವೀತಂ ಬಲಮಸ್ತು ತೇಜಃ’ ಎಂದು ಹೇಳಿ ತಂಗಿ ತನ್ನ ಅಣ್ಣನಿಗೆ ರಾಖಿ ಕಟ್ಟಿ, ಆರತಿ ಬೆಳಗಿ, ಆತನಿಗೆ ಸಿಹಿ ತಿನ್ನಿಸಿ ರಕ್ಷಣೆಯನ್ನು ಕೋರುತ್ತಾಳೆ. ತನ್ನ ಮೇಲಿಟ್ಟ ನಂಬಿಕೆಗೆ ಬದ್ಧನಾದ ಅಣ್ಣ, ತನ್ನ ತಂಗಿಗೆ ಉಡುಗೊರೆ ನೀಡಿ ಒತ್ತಾಸೆಯಾಗಿ ನಿಲ್ಲುವ ಭರವಸೆ ನೀಡುತ್ತಾನೆ. ಇಂದಿನ ದಿನಗಳಲ್ಲಿ ಹೆಣ್ಣುಗಂಡೆಂಬ ಬೇಧಭಾವವಿಲ್ಲದೆ ತಮ್ಮ ಸ್ನೇಹಿತರಿಗೆ,ಆಪ್ತಬಂಧುಗಳಿಗೆ ರಾಖಿ ಕಟ್ಟಿ ಅಥವಾ ಅಂಚೆ ಮೂಲಕ ರಾಖಿಯನ್ನು ರವಾನಿಸಿ ಪರಸ್ಪರ ವಿಶ್ವಾಸ,ಆತ್ಮೀಯತೆ ವ್ಯಕ್ತಪಡಿಸುವುದನ್ನು ಕಾಣುತ್ತಿದ್ದೇವೆ.ಆದ್ದರಿಂದ ಇಂದಿನ ರಕ್ಷಾಬಂಧನ ವಿಶ್ವಭ್ರಾತೃತ್ವ ಬಿಂಬಿಸುತ್ತಿದೆ ಎಂದರೆ ತಪ್ಪಲ್ಲ.ಒಟ್ಟಿನಲ್ಲಿ ಶ್ರಾವಣಮಾಸದಲ್ಲಿ ಆಚರಿಸುವ ಈ ಎಲ್ಲಾ ಹಬ್ಬಗಳ ಧ್ಯೇಯ ಮಾತ್ರ ಒಂದೇ. ಅದೇ ಒಡಹುಟ್ಟಿದವರಲ್ಲಿ ಮಧುರ ಭಾಂಧವ್ಯದ ಬೆಸುಗೆ.ನಮ್ಮ ಹಿರಿಯರು ಆಚರಣೆಗೆ ತಂದ ಈ ಎಲ್ಲಾ ಹಬ್ಬಗಳ ಒಳಾರ್ಥ ತಿಳಿದಾಗ ಸಂತಸವಾಗುತ್ತದೆ.     

ವಿದೇಶ ವಿಹಾರ - 14- ಆಸ್ಟ್ರೇಲಿಯಾದ ಮಹಿಳೆಯರು

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು, ಸಾಮರ್ಥ್ಯವನ್ನು ಮೆರೆದು ಮೆಚ್ಚುಗೆಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯ.ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬ ಮಾತು, ದೈಹಿಕವಾಗಿ ಪುರುಷನಿಗಿಂತ ಬಲಹೀನಳಾದ ಹೆಣ್ಣು ಸಂದರ್ಭ ಒದಗಿದಾಗ ಎಂಥಹ ಕೆಲಸವನ್ನಾದರೂ ನಿರ್ವಹಿಸುವ ಜಾಣ್ಮೆಯನ್ನು ಹೊಂದಿದ್ದಾಳೆ ಎನ್ನುವುದನ್ನು ಬಿಂಬಿಸುತ್ತದೆ.ಅಡುಗೆ ಮನೆಯಲ್ಲಿ ಆಧುನಿಕ ಸೌಲಭ್ಯಗಳು ಲಭ್ಯವಿರುವ ಇಂದಿನ ದಿನಗಳಲ್ಲಿ ಹೆಣ್ಣು ಮನೆಯಲ್ಲಿಯೇ ಕುಳಿತು ವ್ಯರ್ಥವಾಗಿ ಕಾಲಕಳೆಯುವುದು ಸಮಂಜಸವೂ ಅಲ್ಲ.
ಈ ಮಾತಿಗೆ ಭಾರತೀಯರಂತೆ ಆಸ್ಟ್ರೇಲಿಯಾ ದೇಶದ ಮಹಿಳೆಯರೂ ಹೊರತಲ್ಲ.ಇಲ್ಲಿನ ಹೆಣ್ಣು ತನ್ನ ಕುಟುಂಬವನ್ನು ನೋಡಿಕೊಳ್ಳುವುದರೊಂದಿಗೆ ತನ್ನ ಬೌದ್ಧಿಕ ಮಟ್ಟಕ್ಕೆ ಹೊಂದುವ ಯಾವುದಾದರೂ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿತು.ಈ ದೇಶದ ನಾರಿ ಇಲ್ಲಾ ಕೆಲಸಗಳಿಗೂ ರೆಡಿ.ಯಾವುದೇ ಕೆಲಸವನ್ನು ಸಮರ್ಪಕವಾಗಿ ಮಾಡಿ ಮುಗಿಸುವ ಮನೋಭಾವವನ್ನು ಇಲ್ಲಿನ ಸ್ತ್ರೀಯರಲ್ಲಿ ಕಂಡೆ!!!!

ಇಲ್ಲಿನ ಮಹಿಳಾಮಣಿಗಳು ದುಡಿಯದ ಕ್ಷೇತ್ರವಿಲ್ಲ ಎನ್ನಬಹುದು.
ಆಸ್ಟ್ರೇಲಿಯಾದ ಮಹಿಳೆ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದು ದೇಶವನ್ನು ಸಮರ್ಥವಾಗಿ ಮುನ್ನೆಡೆಸುವ ಜವಾಬ್ದಾರಿಯಿಂದ ಹಿಡಿದು ಪ್ರತಿ ಕಾರ್ಯ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದಾಳೆ ಎನ್ನಬಹುದು.
ಏಕೆಂದರೆ ಆಸ್ಟ್ರೇಲಿಯಾ ದೇಶದ ಈಗಿನ ಪ್ರಧಾನಮಂತ್ರಿ ಓರ್ವ ಮಹಿಳೆ.ಇಲ್ಲಿನ ಮಹಿಳೆಯರ ಸಾಮರ್ಥ್ಯಕ್ಕೆ ಇದು ಒಂದು ನಿದರ್ಶನ.

ಪ್ರತಿಷ್ಟಿತ ಕಂಪನಿಗಳ ಉನ್ನತ ಹುದ್ದೆಗಳಲ್ಲಿ,ಸರಕಾರಿ ಇಲಾಖೆಗಳ ಹುದ್ದೆಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿ ದುಡಿಯುತ್ತಾರೆ.ಶಾಪಿಂಗ್ ಕಾಂಪ್ಲೆಕ್ಸ್ ಗಳಿರಲಿ,ಏರ್ ಪೋರ್ಟ್ ಗಳಿರಲಿ ದುಡಿಯುವ ಹೆಣ್ಣುಮಕ್ಕಳು ಕಂಡುಬರುತ್ತಾರೆ.   ಅಷ್ಟೇ ಅಲ್ಲದೆ  ರೆಸ್ಟೋರೆಂಟ್ ಮತ್ತು ಪಬ್ ಮುಂತಾದ ದೊಡ್ಡ ದೊಡ್ಡ ಉದ್ದಿಮೆಗಳನ್ನು ಸ್ವಂತವಾಗಿ ನಿರ್ವಹಿಸಬಲ್ಲ ಪರಿಣತಿ ಇಲ್ಲಿನ ಮಹಿಳೆಯರಿಗಿದೆ.ಹಾಗಾಗಿ ಇಲ್ಲಿನ ಮಹಿಳೆಯರು ವ್ಯವಹಾರ ಚತುರೆಯರು.

ಇಲ್ಲಿ ನಾನು ಗಮನಿಸಿದ ಮತ್ತೊಂದು ಸಂಗತಿಯೆಂದರೆ,ಇಲ್ಲಿನ ಮಹಿಳೆಯರು ದೈಹಿಕವಾಗಿ ಹೆಚ್ಚು ಶ್ರಮವನ್ನು ಬೇಡುವ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು...! ಇದು  ನನಗೆ ಅಚ್ಚರಿ ಎನಿಸಿತು.
ಆಸ್ಟ್ರೇಲಿಯನ್ ಮಹಿಳೆಯರು ಭಾರಿ ಟ್ರಕ್ ಗಳನ್ನೂ ಸಹ ಸಲೀಸಾಗಿ ಚಾಲನೆ ಮಾಡುವುದನ್ನು ಕಂಡು ಅಚ್ಚರಿಪಟ್ಟೆ.ದೊಡ್ಡದೊಡ್ಡ ಸಾಮಾನುಗಳನ್ನು ಒರ್ವ ಮಹಿಳೆಯೇ ಸಾಗಿಸುವುದಾಗಲಿ, ಭಾರಿ ಫೆರ್ರಿ(ಲಾಂಚ್ ಗಳು)ಗಳಿಗೆ ಲಂಗರು ಹಾಕಿ ನಿಲ್ಲಿಸುವಂತಹ ಕಷ್ಟದ ಕೆಲಸಗಳನ್ನೂ ಇಲ್ಲಿನ ಮಹಿಳೆ ಲೀಲಾಜಾಲವಾಗಿ ಮಾಡುತ್ತಾಳೆ.ಒಟ್ಟಿನಲ್ಲಿ ದುಡಿಮೆ ಇಲ್ಲಿನವರ ಮಂತ್ರ.

ಇಲ್ಲಿನ ಕೆಲಸಗಳಲ್ಲಿ ಹೆಂಗಸು-ಗಂಡಸೆಂಬ ಭೇದಭಾವವಿಲ್ಲ.ಹೆಚ್ಚಿನ ಗಂಡಸರು ಮೈನಿಂಗ್ ಕೆಲಸಕ್ಕೆ ತಿಂಗಳಗಟ್ಟಲೆ ಹೊರಗೆ ಹೋಗಿ ದುಡಿಯುತ್ತಾರೆ.ನಗರ ಪ್ರದೇಶದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಮತ್ತು ಇತರೆಡೆಗಳಲ್ಲಿ ಮಹಿಳಾ ಕೆಲಸಗಾರರೇ ಹೆಚ್ಚು.ನಮ್ಮ ಮಗಳು ನೂತನವಾಗಿ ಕಟ್ಟಿರುವ ಮನೆಗೆ ಸೋಫಾಸೆಟ್ ಗಳು,ಫರ್ನಿಚರ್ ಗಳು, ದೊಡ್ಡ ಕಾಟ್ ಗಳು,ರೆಫ್ರಿಜರೇಟರ್ ಇನ್ನು ಅನೇಕ ಗೃಹೋಪಯೋಗಿ ವಸ್ತುಗಳನ್ನು ಬುಕ್ ಮಾಡಿದ್ದರು. ಇವೆಲ್ಲವನ್ನು ಲಾರಿಯಲ್ಲಿ ಲೋಡ್ (ಡ್ರೈವ್ ಕೂಡ)  ಮಾಡಿಕೊಂಡು ಬಂದು ನಮ್ಮ ಮನೆಗೆ ತಂದಿಟ್ಟುಕೊಟ್ಟಿದ್ದು ಓರ್ವ ಮಹಿಳೆ....ನಮ್ಮಲ್ಲಾಗಿದ್ರೆ ಇಷ್ಟು ಕೆಲಸಕ್ಕೆ ಕಡಿಮೆಯೆಂದರೂ ಮೂರು ಜನ ಗಂಡಸರಾದರೂ ಬರುತ್ತಾರೆ..!.ಇಲ್ಲಿನ ಈ ಕೆಲಸಗಳಿಗೆ ಅಷ್ಟು ಜನರ ಅವಶ್ಯಕತೆಯೂ ಇರುವುದಿಲ್ಲ.ಲಾರಿಗೆ ವಸ್ತುಗಳನ್ನು ಹಾಕಲು,ಇಳಿಸಲು ಮತ್ತು ಮನೆಯೊಳಗೆ ತಂದಿಡಲು ಬೇಕಾದ ಎರಡು ಗಾಲಿಗಳಿರುವ ಚಿಕ್ಕ ಗಾಡಿಯ ವ್ಯವಸ್ಥೆಯನ್ನು ಅಲ್ಲಿ ಎಲ್ಲೆಡೆಯೂ ಕಾಣಬಹುದು.ಹಾಗಾಗಿ ಈಎಲ್ಲಾ ಕೆಲಸಗಳನ್ನು ಮಹಿಳೆಯರೇ ಸುಲಭವಾಗಿ ನಿರ್ವಹಿಸಬಲ್ಲರು.ಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ಯಂತ್ರಗಳಿಗೆ ಮೊರೆಹೋಗುವುದು ಅನಿವಾರ್ಯ. ಆದರೆ ನಮ್ಮ ದೇಶದಲ್ಲಿ ಮೂರು ಜನರ ಕೆಲಸವನ್ನು ಒಂದು ಯಂತ್ರ ಮಾಡಿದರೆ ದುಡಿಯುವ ಕೈಗಳಿಗೆ ಕೆಲಸ ಒದಗಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.ಹಾಗಾಗಿ ಇದನ್ನು ನಮ್ಮ ದೇಶಕ್ಕೆ ಅನ್ವಯಿಸಿಕೊಳ್ಳದಿರುವುದೇ ಒಳ್ಳೆಯದು ಎಂದು ನನ್ನ ಅನಿಸಿಕೆ.

ಇಲ್ಲಿನ ಹೆಣ್ಣು ಸಂಸಾರದ ಜವಾಬ್ದಾರಿಯನ್ನೂ ತಾನೇ ಹೊರುತ್ತಾಳೆ. ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ,ಮಕ್ಕಳನ್ನು ಬೆಳೆಸುವುದರಲ್ಲಿ ಮಹಿಳೆಯರು ಗಂಡಸರಿಗಿಂತಾ ಹೆಚ್ಚಿನ ಆಸಕ್ತಿ ವಹಿಸುತ್ತಾರೆ.ನಮ್ಮ ದೇಶದಲ್ಲಿರುವಂತೆ ಇಲ್ಲಿ ಕುಟುಂಬ ಯೋಜನೆ ಎಂಬುದಿಲ್ಲ.ಇಲ್ಲಿನ ಸರಕಾರ ತನ್ನ ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಹೆಚ್ಚು ಮಕ್ಕಳನ್ನು ಪಡೆಯಲು ಪ್ರೋತ್ಸಾಹಿಸುತ್ತದೆ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಅನೇಕ ಸವಲತ್ತುಗಳನ್ನು ಕೂಡ ಕೊಡುತ್ತದೆ....!!

ಇಲ್ಲಿನ ಮಕ್ಕಳು ಮತ್ತು ಹುಡುಗಿಯರನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಆಸೆಯಾಗುತ್ತದೆ.ನನಗಂತೂ ಮುದ್ದಾದ ಗೊಂಬೆಗಳನ್ನು ನೋಡಿದಂತೆನಿಸುತ್ತಿತ್ತು.ತಮ್ಮ ಕೆನೆಹಾಲಿನ ಮೈ ಬಣ್ಣಕ್ಕೆ ಚೋಟುದ್ದದ ಡ್ರೆಸ್ ಹಾಕಿಕೊಂಡು,ತಮ್ಮ ಕಪ್ಪುಕೂದಲನ್ನು ಹರಡಿಕೊಂಡು ,ಹೈಹೀಲ್ಡ್ ಚಪ್ಪಲಿ ಧರಿಸಿ ಓಡಾಡುವ ಯುವತಿಯರು ನಮ್ಮ ಕಣ್ತುಂಬುವುದರಲ್ಲಿ ಸಂದೇಹವಿಲ್ಲ.ಒಳ್ಳೆ ರಸಗುಲ್ಲಗಳಂತಿರುವ ಮಕ್ಕಳನ್ನು ನೋಡಿದೊಡನೆ ಕೆನ್ನೆ ಸವರುವ ಮನಸ್ಸಾಗುತ್ತಿತ್ತು.

ಈ ದೇಶದಲ್ಲಿ ಮನೆಗೆಲಸಕ್ಕೆ ಜನ ಸಿಗುವುದು ಕಷ್ಟ.ಸಿಕ್ಕರೂ ದುಬಾರಿ ಸಂಬಳ ನೀಡಬೇಕು.ಗಂಟೆಗೆ ಮೂವತ್ತು ಡಾಲರುಗಳನ್ನು (ಅಂದರೆ ನಮ್ಮ ದೇಶದ ರೂಪಾಯಿಯಂತೆ ೧೫೦೦/-)   ಪಾವತಿಸಬೇಕಾಗುತ್ತದೆ.

ನನ್ನ ಮಗಳ ಮನೆಗೆ ಕೆಲಸ ಮಾಡಿಕೊಡಲು ವಯಸ್ಸಾದ ಮಹಿಳೆಯೊಬ್ಬರು ವಾರಕ್ಕೊಮ್ಮೆ ಬರುತ್ತಾರೆ. ಅವರಿಗೆ ಏನಿಲ್ಲವೆಂದರೂ ಅರವತ್ತು ವರ್ಷಗಳಿರಬಹುದು.ಆದರೆ ಅವರ ಉತ್ಸಾಹ ,ಚುರುಕುತನ ನಮ್ಮನ್ನು ನಾಚುವಂತೆ ಮಾಡುತ್ತದೆ.ಟ್ರಿಂ ಆಗಿ ತಮ್ಮ ಟೊಯೋಟಾ ಕಾರಿನಲ್ಲಿ ಬಂದಿಳಿಯುವ ಇವರು ಮನೆಯೊಳಗೆ ಕಾಲಿಟ್ಟ ಒಂದೆರಡು ಗಂಟೆಗಳಲ್ಲಿ ಇಡೀ ಮನೆ ಶುಭ್ರವಾಗಿಬಿಡುತ್ತದೆ.ಕಿಚನ್, ಬಾತ್ ರೂಂ ,ಟಾಯ್ಲೆಟ್ ಗಳು, ಮನೆಯ ಎಲ್ಲಾ ಗಾಜಿನ ಬಾಗಿಲು, ಕಿಟಕಿಗಳು ಇವರ ಕೈಚಳಕದಿಂದ ಮಿರಿಮಿರಿ ಮಿನುಗುತ್ತವೆ. ಮನೆಯವರೊಡನೆ ನಗುನಗುತ್ತಾ, ಮಾತನಾಡುತ್ತಾ ಕೆಲಸವನ್ನು ಮುಗಿಸುತ್ತಾರೆ.ಇಲ್ಲಿನ ಜನರಲ್ಲಿ ಮಾಡುವ ಕೆಲಸದಲ್ಲಿ ಮೇಲು-ಕೀಳೆಂಬ ಮನೋಭಾವವಿಲ್ಲ.ಒಟ್ಟಿನಲ್ಲಿ ದುಡಿದು ತಿನ್ನಬೇಕೆಂಬ ನಿಯಮ ಅಷ್ಟೆ.ನನಗೆ ಇವರ ಕೆಲಸವನ್ನು  ನೋಡಿದಾಗ ಕೆಲಸ ಯಾವುದಾದರೇನು, ಅದನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಮಾಡುವುದು ಮುಖ್ಯ ಎಂಬ ನಮ್ಮ ಹಿರಿಯರ ನುಡಿ ನೆನಪಾಯಿತು.