ವಿದೇಶ ವಿಹಾರ 17- ಅಂತರರಾಷ್ಟ್ರೀಯ ವಿಮಾನದೊಳಗೆ ಹೇಗಿರಬಹುದು...?!!ಏನಿರಬಹುದು..?!!


ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಮ್ಮ ಆಪ್ತರಿಂದ ಬೀಳ್ಕೊಂಡು,ಒಳಗೆ ಪ್ರವೇಶಿಸುತ್ತಿದ್ದಂತೆಯೇ ಚೆಕ್-ಇನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಇದು ನಮ್ಮೂರಿನಲ್ಲಿ ಬಸ್ಸು,ರೈಲುಗಳನ್ನು ಹತ್ತಿದಂತೆ ಸುಲಭವಲ್ಲ...!! ಸಾಮಾನ್ಯವಾಗಿ ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಮಗೆ ನಿಗದಿತವಾದ ಕೌಂಟರಿನಲ್ಲಿ ನಮ್ಮ ಪಾಸ್ ಪೋರ್ಟ್, ಏರ್ ಟಿಕೆಟ್ ಮತ್ತು ನಮ್ಮ ಲಗ್ಗೇಜುಗಳನ್ನು ತಪಾಸಣೆ ಮಾಡುತ್ತಾರೆ.ನಮ್ಮ ಕ್ಯಾರಿ ಬ್ಯಾಗ್, ವ್ಯಾನಿಟಿ ಬ್ಯಾಗ್ ಗಳನ್ನು ಮತ್ತು ಪ್ರತಿ  ಪ್ರಯಾಣಿಕರನ್ನೂ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ.ಇದೆಲ್ಲವೂ ಓಕೆ ಆದಮೇಲೆ ಇಮ್ಮಿಗ್ರೇಶನ್ ಸರ್ಟಿಫಿಕೇಟ್ ಕೊಡಲಾಗುತ್ತದೆ.ಇದಿಷ್ಟೂ ಮುಗಿದ ನಂತರವಷ್ಟೇ ನಮಗೆ ಬೋರ್ಡಿಂಗ್ ಪಾಸ್ ನೀಡುತ್ತಾರೆ. ಇಲ್ಲಿಗೆ ನಮ್ಮ ಚೆಕ್ ಇನ್ ಪ್ರಕ್ರಿಯೆ ಅಂತ್ಯಗೊಂಡು ಸಮಾಧಾನವಾಗುತ್ತದೆ.

ಈಗ ನಮ್ಮ ವಿಮಾನ ಹತ್ತುವ ಗೇಟ್ ನಲ್ಲಿ ವ್ಯವಸ್ಥೆ ಮಾಡಿರುವ ಆಸನಗಳಲ್ಲಿ ಕಾದು ಕುಳಿತು ನಮ್ಮ ಸರದಿ ಬಂದಾಗ ಏರೋಬ್ರಿಜ್ ಮೂಲಕ ಹಾದು ವಿಮಾನದೊಳಗೆ ಪ್ರವೇಶಿಸುತ್ತೇವೆ.ನಾವು ಪ್ರಯಾಣಿಸಿದ್ದು ಸಿಂಗಪೂರ್ ಏರ್ ಲೈನ್ಸಿನಲ್ಲಿ. ನಾವು ಪ್ರಯಾಣಿಸಿದ ವಿಮಾನದಲ್ಲಿ ಸುಮಾರು ೩೫೦ ರಿಂದ ೪೦೦ ಜನ ವಿಮಾನಯಾನ ಮಾಡಬಹುದಾದಷ್ಟು ದೊಡ್ಡದು. ವಿಮಾನದ ದ್ವಾರದಲ್ಲಿಯೇ ಸಿಂಗಾಪೂರ್ ಸುಂದರಿಯರಾದ ಗಗನಸಖಿಯರು ನಗುಮೊಗದಿಂದ ನಮ್ಮನ್ನು  ಸ್ವಾಗತಿಸಿ, ನಮ್ಮ ಆಸನಗಳನ್ನು ಹುಡುಕಲು ಮತ್ತು ನಮ್ಮ ಕ್ಯಾರಿ ಬ್ಯಾಗುಗಳನ್ನು ಮೇಲಿಡಲು ಸಹಾಯ ಮಾಡುತ್ತಾರೆ.

ವಿಮಾನದೊಳಗಿನ ಸ್ವಚ್ಚವಾದ ವಾತಾವರಣ, ಸುಸಜ್ಜಿತವಾದ ಪುಶ್ ಬ್ಯಾಕ್ ಆಸನಗಳ ವ್ಯವಸ್ಥೆ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ.ಸರಿ ಸುಮಾರು ಅರ್ಧ ದಿನವೆಲ್ಲಾ ವಿಮಾನದಲ್ಲಿಯೇ ಕಾಲ ಕಳೆಯಬೇಕಾಗುವುದರಿಂದ ತನ್ನ ಪ್ರಯಾಣಿಕರನ್ನು ಸಂತೋಷವಾಗಿಡಲು ಬೇಕಾದ ಇಲ್ಲಾ ಐಶಾರಾಮಿ ವ್ಯವಸ್ಥೆಯೂ ಇಲ್ಲಿದೆ.ವಿಮಾನ ಮೇಲೇರುವ ಮುನ್ನ ಪ್ರಯಾಣಿಕರಿಗೆ ಕೆಲವು ಸೂಚನೆಗಳನ್ನು (ಬೆಲ್ಟ್ ಉಪಯೋಗಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಕೆಲವು ಅಗತ್ಯ ನಿಯಮಗಳ ಬಗ್ಗೆ)  ವೀಡಿಯೋ ಮೂಲಕ ಮತ್ತು ಸ್ವತಃ ಗಗನಸಖಿ ತಿಳಿಸಿಕೊಡುತ್ತಾರೆ.ಒಮ್ಮೆ ವಿಮಾನ ಮೇಲೇರಿತೆಂದರೆ ಗಗನಸಖಿಯರ ಚಟುವಟಿಕೆ ಶುರು. ನಮ್ಮ ಮುಖ,ಕೈಗಳನ್ನು ಒರೆಸಲು ಹಬೆಯಾಡುತ್ತಿರುವ ಶುಭ್ರ ಬಿಳಿಯ ಚಿಕ್ಕಚಿಕ್ಕ ಟವೆಲ್ಲುಗಳನ್ನು ಪ್ರತಿಯೊಬ್ಬರಿಗೂ ಕೊಡಲಾಗುತ್ತದೆ. ಏ ಸಿ ವ್ಯವಸ್ಥೆ ಇರುವುದರಿಂದ ಹೊದೆಯಲು ರಗ್ಗು,ಕಾಲಿಗೆ ಹಾಕಿಕೊಳ್ಳಲು ಸಾಕ್ಸ್,ನೀರಿನ ಬಾಟಲ್, ಟೀವಿ ಕೇಳಲು ಇಯರ್ ಫೋನ್ ಗಳನ್ನು ಕೊಡುತ್ತಾರೆ.ತಿಂಡಿ ಸಮಯಕ್ಕೆ ತಿಂಡಿ ,ಊಟದ ವೇಳೆಗೆ ಊಟದ ವ್ಯವಸ್ಥೆಯಿರುತ್ತದೆ. ಇವುಗಳ ನಡುವೆ ಬಾಯಾಡಿಸಲು ಕಾರದ ಗೋಡಂಬಿ,ಕಡ್ಲೆಬೀಜ,ಚಾಕೋಲೇಟುಗಳ ಜೊತೆಗೆ ಜ್ಯೂಸ್,ಕಾಫಿ,ಟೀ ಮುಂತಾದುವುಗಳನ್ನು ಗಗನಸಖಿಯರು ಬಿಡುವಿಲ್ಲದಂತೆ ಒದಗಿಸುತ್ತಿರುತ್ತಾರೆ. ಅಗತ್ಯವಿರುವವರಿಗೆ ಡ್ರಿಂಕ್ಸ್ ವ್ಯವಸ್ಥೆ ಸಹ ಇರುತ್ತದೆ. ಇಂಟರ್ ನ್ಯಾಷನಲ್ ಫ಼್ಲೈಟ್ ಗಳಲ್ಲಿ ಇವುಗಳಿಗೆಲ್ಲಾ ಪ್ರತ್ಯೇಕ ಶುಲ್ಕವಿರುವುದಿಲ್ಲ...!!.ಹಾಗಂತ ಫ಼್ರೀ ಅಂತ ತಿಳಿಬೇಡಿ..!! ಟಿಕೇಟಿನಲ್ಲಿ ಎಲ್ಲಾ ಶುಲ್ಕಗಳನ್ನೂ ಸೇರಿಸಿರುತ್ತಾರೆ ಅಷ್ಟೇ...!!ಆದರೆ ಡೊಮ್ಯಾಸ್ಟಿಕ್  ಫ಼್ಲೈಟ್ ಗಳಲ್ಲಿ ಒಂದು ಚಿಕ್ಕ ನೀರಿನ ಬಾಟಲಿಗೂ ದುಬಾರಿ ಬೆಲೆ ತೆರಬೇಕಾಗುತ್ತದೆ.ಇದಿಷ್ಟೇ ಅಲ್ಲದೇ ,ನಿಗದಿತ ಹಣ ಸಂದಾಯ ಮಾಡಿದರೆ ಚಿಕ್ಕ ಮಕ್ಕಳಿಗೆ ಮಲಗಿಸಲು ತೊಟ್ಟಿಲು, ವಯಸ್ಸಾದವರಿಗಾಗಿ ಮತ್ತು ಅನಾರೋಗ್ಯ ಪೀಡಿತರಿಗೆ ಮಲಗಲು ವ್ಯವಸ್ಥೆಯೂ ಇರುತ್ತದೆ. 

ವಿಮಾನದೊಳಗೆ ನಾ ಕಂಡ ಕೆಲವು ವಿಶೇಷತೆಗಳ ಕಿರು ಪರಿಚಯ:-

ಸಿಂಗಪೂರ್ ಏರ್ಲೈನ್ಸ್ ನ ವಿಮಾನದೊಳಗಿನ ದೃಶ್ಯವಿದು. ಆರಾಮದಾಯಕವಾದ ಆಸನಗಳು. ಸೀಟಿನ ಮೇಲ್ಗಡೆ ಕಾಣುವುದು ನಮ್ಮ ಕ್ಯಾಬಿನು ಬ್ಯಾಗುಗಳನ್ನು ಇಡಲು ವ್ಯವಸ್ಥೆ.ನಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಟಿವಿಯ ವ್ಯವಸ್ಥೆ ಇದೆ.ಇದರಲ್ಲಿ ಬರೋಬ್ಬರಿ ನೂರಕ್ಕಿಂತಾ ಹೆಚ್ಚು ಚಾನಲ್ಲುಗಳು ಬರುತ್ತದೆ!! ನಗುವನ್ನು ಸೂಸುತ್ತಾ ಮಾರ್ಗದರ್ಶನ ನೀಡುತ್ತಿರುವ ಸಿಂಗಪೂರ್ ಗಗನಸಖಿಯರನ್ನೂ ಇಲ್ಲಿ ಕಾಣಬಹುದು.

ವಿಮಾನದಲ್ಲಿ ನಮಗಾಗಿ ನೀಡಿದ ಊಟದ ಚಿತ್ರ.ಹಾಲು,ಮೊಸರು,ಬೆಣ್ಣೆ,ಹಪ್ಪಳ,ರೈಸ್ ,ಸಾಂಬಾರ್,ಸಕ್ಕರೆ,ತರಕಾರಿ ಸಲಾಡ್,ಬನ್ ಪ್ರತಿಯೊಂದೂ ಪ್ಯಾಕಿಂಗ್ ಆಗಿರುವ ಪರಿ ನೋಡಿ.ಪ್ರತಿಯೊಬ್ಬರಿಗೂ ಟಿವಿ ಮತ್ತು ಇಯರ್ ಫೋನ್ ಇರುತ್ತದೆ.ನಮ್ಮ ಆಸಕ್ತಿಗೆ ಅನುಗುಣವಾಗಿ ನಮಗೆ ಬೇಕಾದ ಚಾನಲ್ಲನ್ನು ನೋಡುತ್ತಾ ಸಮಯ ಕಳೆಯಬಹುದು.ಸುಮಾರು ನೂರು ಚಾನಲ್ಲುಗಳಿರುತ್ತದೆ.ಇದರಲ್ಲಿ ಹಿಂದಿ ಸಿನಿಮಾ ಚಾನಲ್ಲುಗಳೂ ಇದ್ದವು.ಬೆಂಗಳೂರಿನಿಂದ ಹೊರಡುವ ಮತ್ತು ಇಲ್ಲಿಗೆ ಬರುವ ವಿಮಾನಗಳಲ್ಲಿ ಕನ್ನಡ ಚಾನಲ್ಲುಗಳನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆಂದು ಕೇಳಿದೆ.ಹಾಗಾದಲ್ಲಿ ಮುಂದೆ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಸದ್ಯದಲ್ಲೇ ಒದಗಿ ಬರಬಹುದು.

ವಿಮಾನದೊಳಗೆ ಟಾಯ್ಲೆಟ್ ಮತ್ತು ವಾಶ್ ಬೇಸಿನ್ ವ್ಯವಸ್ಥೆಯ ಒಂದು ನೋಟ.ಇಲ್ಲಿನ ಟಿವಿ ಚಾನಲ್ಲಿನಲ್ಲಿ ನಮ್ಮ ಪ್ರಯಾಣದ ಕ್ಷಣ ಕ್ಷಣದ ಮಾಹಿತಿ ನೀಡುವ "ಫ್ಲೈಟ್ ಪಾತ್" ಚಾನಲ್ ನನಗೆ ತುಂಬಾ ಮೆಚ್ಚುಗೆಯಾಯಿತು.ಈಗ ನಾವೆಲ್ಲಿದ್ದೇವೆ,ಭೂಮಿಯಿಂದ ಎಷ್ಟು ಎತ್ತರದಲ್ಲಿ ಹಾರುತ್ತಿದ್ದೇವೆ,ನಾವು ತಲುಪಬೇಕಾದ ಸ್ಥಳಕ್ಕೆ ಇರುವ ದೂರವೇನು,ಅಲ್ಲಿನ ಸಮಯ ಮತ್ತು ನಾವಿರುವ ಪ್ರದೇಶದಲ್ಲಿ ಆಗಿರುವ ಸಮಯ ಎಲ್ಲ ವಿವರವನ್ನೂ ನಾವಿಲ್ಲಿ ತಿಳಿದುಕೊಳ್ಳಬಹುದು.ನನಗೆ ಇದು ತುಂಬಾ ಹಿಡಿಸಿತು.

ಬೆಳಗಿನಜಾವ ಐದೂವರೆ ಸಮಯದಲ್ಲಿ ನಾವು ಸಿಂಗಪೂರ್ ನಲ್ಲಿ ಲ್ಯಾಂಡ್ ಆಗುವ ಮೊದಲು, ವಿಮಾನದ ಮೇಲಿನಿಂದ ಸಿಂಗಪೂರ್ ಎಂಬ ಸುಂದರ ದೇಶ ನನ್ನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.
 ದೊಡ್ಡದಾದ,ಅತ್ಯಾಧುನಿಕವಾದ,ಸುಸಜ್ಜಿತವಾದ,ವ್ಯವಸ್ಥಿತವಾದ ಮತ್ತು ನೆಲವೇ ಕಾಣದಂತೆ ಕಾರ್ಪೆಟು ಹಾಸಿ ವಿಶ್ವದ ಎಲ್ಲಾ ಭಾಗದ ಜನರನ್ನೂ ಸ್ವಾಗತಿಸುವ ಸಿಂಗಪೂರ್ ನ "ಚಾಂಗಿ ಏರ್ಪೋರ್ಟ್" ನ ವೈಭವವನ್ನು ಸಾರುವ ಕೆಲವೇ ಕೆಲವು ದೃಶ್ಯಗಳು.

ಗಗನಸಖಿ ಎಂದರೆ ಚೆಂದವಾಗಿ ಅಲಂಕರಿಸಿಕೊಂಡು ವಿಮಾನದಲ್ಲಿ ಅಲ್ಲಿಂದಿಲ್ಲಿಗೆ ಓಡಾಡುವ ಸುಂದರ ಬೊಂಬೆಗಳು ಎಂದು ತಿಳಿದಿದ್ದೆ. ಆದರೆ ಬೆಂಗಳೂರಿನಿಂದ ಹೊರಟು ಸಿಂಗಪೂರ್ ತಲುಪುವ ವೇಳೆಗೆ ನನ್ನ ಈ ಅಭಿಪ್ರಾಯ ಬದಲಾಗಿತ್ತು....!! ಅವರು ತಮ್ಮ ಡ್ಯೂಟಿ ವೇಳೆಯಲ್ಲಿ ಪ್ರಯಾಣಿಕರ ಸೇವೆಯೇ ತಮ್ಮ ಕರ್ತವ್ಯ ಎಂದು ತಿಳಿದಿರಬೇಕು.ಎಲ್ಲಾ ವಿಮಾನ ಸಂಸ್ಥೆಗಳೂ ತನ್ನ ಪ್ರಯಾಣಿಕರನ್ನು ಸಂತಸದಿಂದಿಡಲು ಮತ್ತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಮಹತ್ವ ನೀಡುತ್ತವೆ. ಗಗನಸಖಿ ಎಂದರೆ ಸಂಸ್ಥೆ ಮತ್ತು ಪ್ರಯಾಣಿಕರ ನಡುವಿನ ಕೊಂಡಿಯಂತೆ. ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ಗಗನಸಖಿಯರು ಮಾಡಬೇಕು

ಹಾಗಾಗಿ ತನ್ನ ಕೆಲಸದ ವೇಳೆಯಲ್ಲಿ ನಗುಮೊಗದಿಂದ ಕೂಡಿದ ಸೌಜನ್ಯಯುತ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.ಬೇಸರಿಸದೇ, ಸಿಡಿಮಿಡಿಗೊಳ್ಳದೇ ಪ್ರತಿಯೊಬ್ಬ ಪ್ರಯಾಣಿಕರ ಕರೆಗೆ ತತ್ ಕ್ಷಣ ಓಗೊಡಬೇಕಾಗುತ್ತದೆ. ಚೈತನ್ಯದ ಚಿಲುಮೆಯಂತೆ  ತಮ್ಮ ಕೆಲಸದಲ್ಲಿ ಚುರುಕಾಗಿರಬೇಕಾಗುತ್ತದೆ.ತನ್ನ ಪ್ರಯಾಣಿಕರಿಗೆ ಸಹಾಯ ಹಸ್ತ ನೀಡಬೇಕಾಗುತ್ತದೆ. ಗಗನಸಖಿಯರೇ, ನಿಮಗೊಂದು ನನ್ನ ಸೆಲ್ಯೂಟ್...!
ವಿಮಾನ ಭೂಸ್ಪರ್ಶವಾದ ನಂತರ ಗಗನಸಖಿಯರಿಂದ ಶುಭ ವಿದಾಯವನ್ನು ಸ್ವೀಕರಿಸಿ, ವಿಮಾನದಿಂದಿಳಿದು ನಮ್ಮ ಲಗ್ಗೇಜುಗಳನ್ನು ತೆಗೆದುಕೊಳ್ಳುವಲ್ಲಿಗೆ ಹೋಗಿ, ನಮ್ಮ ಸೂಟ್ಕೇಸುಗಳನ್ನು ತಳ್ಳುಗಾಡಿಯಲ್ಲಿರಿಸಿಕೊಂಡರೆ ನಮ್ಮ ಅರ್ಧ ಕೆಲಸವಾದಂತೆ. ಮುಂದೆ ಆ ದೇಶದ ಕಸ್ಟಮ್ಸ್ ನವರಿಂದ ಲಗ್ಗೇಜುಗಳ ಪರಿಶೀಲನೆ ನಡೆಯುತ್ತದೆ. ನಾವು ತಂದಿರುವ ಎಲ್ಲಾ ವಸ್ತು ಮತ್ತು ತಿಂಡಿಗಳನ್ನೂ ಚೆಕ್ ಮಾಡಿ ನೋಡುತ್ತಾರೆ. ಕೆಲವೊಮ್ಮೆ ಉಪ್ಪಿನಕಾಯಿ,ಮಸಾಲೆ ಪದಾರ್ಥಗಳನ್ನು ಡಸ್ಟ್ ಬಿನ್ನಿಗೆ ಎಸೆಯುವುದೂ ಇರುತ್ತದೆ.ಇಲ್ಲಿ ಲಗ್ಗೇಜ್ ತಪಾಸಣೆ ಮುಗಿಸಿದರೆ ನಾವು ವಿದೇಶದಲ್ಲಿರುವ ನಮ್ಮವರಿಗಾಗಿ ಅತಿ ಮುತುವರ್ಜಿಯಿಂದ ತಂದ ವಸ್ತುಗಳೆಲ್ಲಾ ಅವರಿಗೆ ತಲುಪಿದಂತೆಯೇ..!! ಇವೆಲ್ಲವನ್ನು ಮುಗಿಸಿದ ನಂತರವಷ್ಟೇ ನಾವು ವಿಮಾನ ನಿಲ್ದಾಣದಿಂದ ಹೊರಬರಬಹುದು.
4 ಕಾಮೆಂಟ್‌ಗಳು:

 1. ಇಷ್ಟು ದೊಡ್ಡದಾದ ವಿಮಾನದಲ್ಲಿ ಎಷ್ಟೆಲ್ಲ ವ್ಯವಸ್ಥ ಮಾಡಿರುತ್ತಾರಲ್ಲ ಎಂದು ಬೆರಗಾದೆ. ನಿಮ್ಮ ಲೇಖನವು ಅಮೂಲ್ಯ ಮಾಹಿತಿಯನ್ನು ನೀಡಿದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸಾರ್.

   ಅಳಿಸಿ
 2. ಮೊದಲು ವಿಮಾನ ಯಾನ ಮಾಡುವ ಮತ್ತು ಅಪರೂಪಕ್ಕೆ ಹತ್ತುವ ನಮಗೆಲ್ಲರಿಗೂ ಹತ್ತುವ ಮತ್ತು ಇಳಿಯುವ ವಿಮಾನ ನಿಲ್ದಾಣಗಳಲ್ಲಿ ಏನೇನು ಮಾಡಬೇಕು ಮತ್ತು ವಿಮಾನದ ಒಳಗಡೆ ಅಸಲು ಏನೇನು ಇರುತ್ತವೆ, ಸೇವೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಸಚಿತ್ರ ಸಮೇತ ವಿವರಿಸಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಇದು ನಮಗೆ ಸಂಗ್ರಾಹ್ಯ ಲೇಖನ.
  http://badari-poems.blogspot.in

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸಾರ್.

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.