ಅಭಿರುಚಿ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವ



ಅಭಿರುಚಿ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಕೈವಲ್ಯ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಸಮಾನತೆಯನ್ನು ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ "ಸ್ವರವಚನ-ಕೀರ್ತನಾ ಸಾಮರಸ್ಯ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಮುಪ್ಪಿನ ಷಡಕ್ಷರಿ ಮತ್ತು ನಿಜಗುಣ ಶಿವಯೋಗಿಯವರ ರಚನೆಗಳನ್ನು ವಿದುಷಿ ಶ್ರೀಮತಿ ಸುಕನ್ಯಾ ಪ್ರಭಾಕರ್, ಮೈಸೂರು ಮತ್ತು ಕನಕ-ಪುರಂದರರ ಕೀರ್ತನೆಗಳನ್ನು ವಿದ್ವಾನ್ ಬಳ್ಳಾರಿ ರಾಘವೇಂದ್ರ, ಮೈಸೂರು ಅವರು ಹಾಡಿದರು.ಈ ಸಂಗೀತಗಾರರಿಬ್ಬರೂ ತಮ್ಮ ಸುಶ್ರಾವ್ಯ ಗಾಯನದಿಂದ ಪ್ರೇಕ್ಷಕರ ಮನತಣಿಸಿದರು.ಇಬ್ಬರು ಕಲಾವಿದರ ನಡುವೆ ಸೇತುವೆಯಂತಿದ್ದ  ಡಾ||ಎ.ಜಿ.ಗೋಪಾಲಕೃಷ್ಣಕೊಳ್ತಾಯರವರು ತಮ್ಮ ಅತ್ಯುತ್ತಮ ನಿರೂಪಣೆಯ ಮೂಲಕ  ವಚನ-ದಾಸ ಸಾಹಿತ್ಯಗಳಲ್ಲಿರುವ ಸಮಾನತೆಯನ್ನು ಸಮರ್ಥವಾಗಿ ನಿರೂಪಿಸಿದರು.




ಇದೇ ಸಂದರ್ಭದಲ್ಲಿ ಅಭಿರುಚಿ ಸಂಸ್ಥೆಯು ತನ್ನದೇ ಆದ ಅಂತರ್ಜಾಲತಾಣವನ್ನು ಬಿಡುಗಡೆಗೊಳಿಸಿತು.
ಅಧ್ಯಕ್ಷರಾದ ಡಾ|| ಶಿವರಾಮಕೃಷ್ಣ ಅವರು ಅಂತರ್ಜಾಲ ತಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ದಯಮಾಡಿ http://abhiruchivedike.blogspot.in/  ವಿಳಾಸಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನು ತಿಳಿಸಿ.









ಚಿಣ್ಣರ ದೀಪಾವಳಿ

        ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳು


ಮರಳಿ ಬಂದಿದೆ ದೀಪಾವಳಿ
ಮರೆಯದೆ ತಂದಿದೆ ಹರುಷಾವಳಿ
ಮನೆಮನ ಬೆಳಗಿವೆ ದೀಪಗಳು
ಮಕ್ಕಳ ಕುಣಿಸಿವೆ ಪಟಾಕಿಗಳು

ಎಳೆಯರ ಕೈಗೆ ಗನ್ನನು ತಂದಿದೆ
ಚಟಪಟ ಸದ್ದಿನ ಚಿನಕುರಳಿ
ಜಂಬದೆ ಢಂ ಢಂ ನಾದವ ಮಾಡುತ
ಸಂತಸ ತಂದಿದೆ ಈ ಸುರಳಿ

ಗದ್ದಲವಿಲ್ಲದೆ ಮೆಲ್ಲಗೆ
ಬೆಳಗಿದೆ ಮತಾಪು ಕಡ್ಡಿಗಳು
ಭಯವನು ಮರೆಸಲು ಅಮ್ಮನ 
ಕೈ ಜೊತೆ ಕಂದನ ಕೈಯಿಗಳು


ಸುರು ಸುರು ನಾದವಗೈಯ್ಯುತ
ಬೆಳಗುವ ನಕ್ಷತ್ರ ಕಡ್ಡಿಗಳು
ಇದ ಸವಿಯುತ ಮನ
ಲಗ್ಗೆಯಿಟ್ಟಿದೆ ತಾರಾಲೋಕದೊಳು

ಕಿಡಿಯನು ಸೋಕಿಸೆ ಒಡನೆಯೆ
ಚಿಮ್ಮಿದೆ ಸೊಯ್ಯನೆ ಗಗನಕೆ ರಾಕೇಟು
ಚಿಣ್ಣರ ರಂಜಿಸೆ ಇಸ್ರೋ
ಕಳುಹಿದೆ ಚಂದ್ರಲೋಕಕೆ ಟಿಕೇಟು

ಬೆಂಕಿಯನುಗುಳುತ ಗರಗರ
ತಿರುಗಿವೆ ತರತರ ಚಕ್ರಗಳು
ಬಣ್ಣಬಣ್ಣದ ಹೂ ಮಳೆಗರೆಯುತ
ಕಣ್ಮನ ತಣಿಸಿವೆ ಹೂ ಕುಂಡಗಳು

ಧರೆಯನು ನಡುಗಿಸಿ
ಕಿವಿಗಪ್ಪಳಿಸಿವೆ ಆಟಂಬಾಂಬುಗಳು
ದೀಪ ಧೂಪಗಳ ಸಂಗಮದಾರತಿ
ಇದುವೇ ನಲಿವಿನ ದೀಪಾವಳಿಯು.