ದೇವಿಗಿರಿ ಅಥವಾ ದೇವೀರಮ್ಮ ಬೆಟ್ಟ


ಪಶ್ಚಿಮ ಘಟ್ಟ ಪರ್ವತ ಪ್ರದೇಶದ ಚಂದ್ರದ್ರೋಣ ಪರ್ವತ ಶ್ರೇಣಿಯ ಮೂರು ಮುಖ್ಯ ಬೆಟ್ಟಗಳೆಂದರೆ ಮುಳ್ಳಯ್ಯನಗಿರಿ,ದೇವಿಗಿರಿ ಮತ್ತು ಬಾಬಾಬುಡಾನಗಿರಿ.ಇದರಲ್ಲಿ ಮುಳ್ಳಯ್ಯನಗಿರಿ ಕರ್ನಾಟಕದಲ್ಲಿಯೇ ಅತೀ ಎತ್ತರವಾದ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. …!!ಬಾಬಾಬುಡಾನಗಿರಿಯಲ್ಲಿ ಪ್ರಸಿದ್ಧವಾದ ದತ್ತಪೀಠವಿದೆ. ಇದರಲ್ಲಿ ದೇವಿಗಿರಿಯ ಬೆಟ್ಟದ ತುತ್ತ ತುದಿಯಲ್ಲಿ ಪುರಾತನವಾದ ಮತ್ತು ಬಹಳ ಮಹಿಮೆಯುಳ್ಳ ದೇವಿಯ (ಚಾಮುಂಡೇಶ್ವರಿ) ಗುಡಿ ಇರುವುದರಿಂದ ಈ ಗಿರಿಯು ದೇವಿಗಿರಿ ಅಥವಾ ಜನರ ಆಡುಭಾಷೆಯಲ್ಲಿ “ದೇವೀರಮ್ಮ ಬೆಟ್ಟವೆಂದು ಹೆಸರಾಗಿದೆ. ಒಟ್ಟಿನಲ್ಲಿ ಚಂದ್ರದ್ರೋಣ ಪರ್ವತವು ಚಾರಣಿಗರಿಗೆ ಬಲು ಪ್ರಿಯವಾದ ತಾಣ….!!! 

 ದೇವಿಗಿರಿಯು ಪ್ರಕೃತಿಯ ಸೊಬಗಿಗೆ, ಚಾರಣಕ್ಕೆ ಅಲ್ಲದೇ ಪ್ರಸಿದ್ಧ  ಪುಣ್ಯಕ್ಷೇತ್ರವಾಗಿಯೂ ತನ್ನ ಛಾಪನ್ನು ಮೂಡಿಸಿದೆ….!! ವರ್ಷಕ್ಕೊಮ್ಮೆ ಅಂದರೆ ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಬೆಟ್ಟದ ಮೇಲಿರುವ ದೇವಾಲಯದ ಬಾಗಿಲು ತೆರೆದು ಪೂಜೆ ನೆರವೇರಿಸುತ್ತಾರೆ.  ದೇವಿಯು ತುಂಬಾ ಮಹಿಮೆಯುಳ್ಳ  ಮಾತೆ ಎಂಬ ಪ್ರತೀತಿಯಿದೆ. ಅಂದರೆ ಬೆಟ್ಟದ ಮೇಲಿರುವ ಮೂಲ ದೇವಸ್ಥಾನಕ್ಕೆ ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ  ದೀಪಾವಳಿಯ ನರಕಚತುರ್ದಶಿಯ ಹಿಂದಿನ ದಿನ ಮಧ್ಯರಾತ್ರಿಯಿಂದಲೇ  ಸಾವಿರಾರು ಭಕ್ತರು ಪಾದರಕ್ಷೆರಹಿತವಾಗಿ ಕಾಲ್ನಡಿಗೆಯಲ್ಲಿ ಕಡಿದಾದ ಬೆಟ್ಟವನ್ನೇರಿ, ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.ದೇವಿಯನ್ನು ಭಕ್ತಿಯಿಂದ ಆರಾಧಿಸಿ ತಮ್ಮ ಬೇಡಿಕೆಯನ್ನು ಈಡೇರಿಸಲು ಕೋರುವ ಮತ್ತು ತಮ್ಮ  ಇಷ್ಟಾರ್ಥ ನಡೆಸಿಕೊಟ್ಟ ಮಾತೆಗೆ ಭಕ್ತಿಯಿಂದ ಹರಕೆಯನ್ನು ಒಪ್ಪಿಸುವ ಪರಂಪರೆ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿದ್ದು, ಇಂದಿಗೂ ಸಹ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ.

 ಹರಕೆ ಇದ್ದವರು ಬೆಟ್ಟವನ್ನೇರಿ ಸೇವೆ ಸಲ್ಲಿಸುತ್ತಾರೆ . ಇಲ್ಲದಿದ್ದರೆ ಹಲವರು ಮನೆಯಲ್ಲಿಯೇ ಆರತಿ ಬೆಳಗಿ ದೇವಿಯನ್ನು ತಪ್ಪದೇ ಸ್ಮರಿಸುತ್ತಾರೆ .ಪ್ರತಿ ದೀಪಾವಳಿಯಲ್ಲಿ, ಮನೆಮನೆಗಳಲ್ಲಿ , ಹೆಣ್ಣುಮಕ್ಕಳು ಚಿಗಣಿ ಮತ್ತು ತಂಬಿಟ್ಟಿನ ಜೋಡಿ  ದೀಪವನ್ನು  ಮಾಡಿ , ದೇವೀರಮ್ಮನ ಹೆಸರಿನಲ್ಲಿ ತುಪ್ಪದಾರತಿ ಬೆಳಗುವ ಮತ್ತು ನಂತರ ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯ ಇಂದಿಗೂ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ.ಇದರಿಂದ ಹೆಣ್ಣುಮಕ್ಕಳಿಗೆ ಶೀಘ್ರವಾಗಿ ಅಥವ ಸಕಾಲದಲ್ಲಿ ವಿವಾಹ ಮತ್ತು ಸಂತಾನ ಭಾಗ್ಯ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಆಗಿನ ಕಾಲದಲ್ಲಿ ಮೈಸೂರಿನ ಮಹಾರಾಜರು ದೀಪಾವಳಿಯ ದಿನ ಈ ಬೆಟ್ಟದ ಮೇಲಿಂದ ಜ್ಯೋತಿ ಕಂಡ ನಂತರವೇ ಹಬ್ಬವನ್ನು ಆಚರಿಸುತ್ತಿದ್ದರಂತೆ. ಸುಮಾರು ವರ್ಷಗಳ ಹಿಂದೆ ಪ್ರತಿವರ್ಷವೂ ಅರಮನೆಯಿಂದ  ದೇವಿಯ ಸೇವೆಗಾಗಿ ಪೂಜಾ ಪರಿಕರಗಳು.ಎಣ್ಣೆ ಡಬ್ಬಗಳು ಮತ್ತು ಕಾಣಿಕೆ ಪೂರೈಕೆಯಾಗುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ. ಈಗ ಈ ದೇವಾಲಯವು ಕರ್ನಾಟಕ ಪುರಾತತ್ವ ಇಲಾಖೆಯ ವಶದಲ್ಲಿದೆ.

ಏಳೆಂಟು ಕಿಲೋಮೀಟರ್ ಬೆಟ್ಟ ಹತ್ತಿ ನಿತ್ಯವೂ ದೇವಿಗೆ ಪೂಜೆ  ಸಲ್ಲಿಸುವುದು ಕಷ್ಟ ಸಾಧ್ಯವಾದ ಕಾರಣ ಈ ಬೆಟ್ಟದ ತಪ್ಪಲಿನ ಬಿಂಡಿಗ-ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವೀರಮ್ಮ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಚಿಕ್ಕಮಗಳೂರಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪ್ರತಿನಿತ್ಯವೂ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ  ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಲಾಗಿದೆ.ಗಣಪತಿ, ದೇವೀರಮ್ಮ,  ಲಕ್ಷ್ಮೀ ಮತ್ತು ಅನ್ನಪೂರ್ಣೆಶ್ವರಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಪ್ರತಿದಿನವೂ ಪೂಜೆಯನ್ನು ಸಾಂಗವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲಿನಿಂದ ನೂರಾರು ಭಕ್ತರು ದೇವಿಯ ದರ್ಶನಕ್ಕಾಗಿ ಪ್ರತಿದಿನವೂ ಆಗಮಿಸುತ್ತಾರೆ.ಈ ದೇವಾಲಯದ ಮುಂಭಾಗದಲ್ಲಿ ಒಂದು ಸುಂದರವಾದ ಕೊಳವಿದೆ. ಇಲ್ಲಿ ಗಂಗಾ ಮಾತೆಯ ಗುಡಿಯಿದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಇಲ್ಲಿ ಪೂಜೆಸಲ್ಲಿಸಿ, ಈ ಕೊಳದ ನೀರನ್ನು ಒಂದೆರಡು ಬಿಂದಿಗೆ ಹಾಕಿಸಿಕೊಳ್ಳುವ ಪದ್ಧತಿ ಇಲ್ಲಿದೆ.ಇದರಿಂದ ಒಳ್ಳೆಯದಾಗುತ್ತದೆ ಎಂಬ ಪ್ರತೀತಿಯಿದೆ. ಇಲ್ಲಿ ಜಾತ್ರೆಯ ಸಮಯದಲ್ಲಿ ಕೆಂಡದಾರ್ಚನೆ ಸಹ ನಡೆಯುತ್ತದೆ.

ಪ್ರತಿದಿನ ಮಧ್ಯಾನ್ಹ ಮಹಾಮಂಗಳಾರತಿಯ ನಂತರ ಅನ್ನ ದಾಸೋಹದ ವ್ಯವಸ್ಥೆಯನ್ನು ಸ್ಥಳೀಯರಾದ ಈ ದೇವಸ್ಥಾನದ ಸಮಿತಿಯವರು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ದೇವಾಲಯವನ್ನು ಸುತ್ತುವರಿದಿರುವ ಸೊಂಪಾಗಿ ಬೆಳೆದಿರುವ ಅಡಿಕೆ ತೆಂಗಿನತೋಟಗಳು,ಹಸಿರು ಹೊಲಗಳು ಮತ್ತು ಕಣ್ಣಿಗೆ ತಂಪನ್ನೀಯುವ ಅಚ್ಚಹಸಿರಾದ ಗಿರಿಸಾಲುಗಳು ನಮ್ಮ ಮನಸೆಳೆಯುತ್ತವೆ. ಇನ್ನೂ ಕೆಲವು ಸಮಯವನ್ನು ಇಲ್ಲಿಯೇ ಕಳೆಯುವ ಭಾವ ನಮ್ಮಲ್ಲಿ ಸಹಜವಾಗಿಯೇ ಮೂಡಿದರೆ ಅಚ್ಚರಿಯೇನೂ ಇಲ್ಲ…..!! ಈ ಸ್ಥಳಕ್ಕೆ ಭೇಟಿಯಿತ್ತರೆ ದೇವಾಲಯದ ಪ್ರಶಾಂತವಾದ ವಾತಾವರಣದಲ್ಲಿ ಮನಸ್ಸು ಪ್ರಫುಲ್ಲಿತವಾಗುತ್ತದೆ  ಎನ್ನುವುದಂತೂ ಸತ್ಯ….!!

 ದೇವಾಲಯದ ಕೆಲವು ಛಾಯಚಿತ್ರಗಳು......:- 

ಗಣಪತಿ ದೇವಾಲಯಅನ್ನಪೂರ್ಣೇಶ್ವರಿ
ಲಕ್ಷ್ಮೀದೇವಿ


4 ಕಾಮೆಂಟ್‌ಗಳು:

 1. ತಮ್ಮ ಈ ಬರಹ ಓದಿ, ಅಲ್ಲಿಗೊಮ್ಮೆ ಭೇಟಿಕೊಡಲೇಬೇಂಕೆಂದು ಆಸೆಯಾಗುತಿದೆ.
  ನಿಮ್ಮ ಆಶೀರ್ವಾದವಿದ್ದರೆ ಚಲೋ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀವು ಮನಸ್ಸು ಮಾಡಿದರೆ, ಆ ದೇವಿಯ ಅನುಗ್ರಹವಿದ್ದರೆ ಸಾಕು ನಿಮ್ಮ ಭೇಟಿ ನಿಶ್ಚಿತ........!!!ಧನ್ಯವಾದಗಳು ಸಾರ್.....

   ಅಳಿಸಿ
 2. ದೇವೀರಮ್ಮನ ಬೆಟ್ಟದ ಬಗೆಗೆ ವಿಪುಲ ಮಾಹಿತಿಯನ್ನು ಸುಂದರ ಚಿತ್ರಗಳ ಜೊತೆಗೆ ನೀಡಿದ್ದೀರಿ. ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು ಸಾರ್.......!

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.