ಮುಗಿಲ ಆಟ


                ಮುಗಿಲ ಆಟ
                 ------------
ವಸಂತಕಾಲದ ಒಂದು ಸಂಜೆಯಲಿ
ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ
ಬೆಳ್ಳಿಮೋಡಗಳ ಮೆರವಣಿಗೆ ನೀಲಿ ಆಗಸದಲ್ಲಿ
ಭಾಸ್ಕರನೆಡೆಗೆ ವೈಯಾರದ ನೋಟವ ತಾ ಬೀರುತಲಿ

ದಿನದ ಪಯಣ ಮುಗಿಸುವ ಆತುರ ರವಿಗೆ
ಚಿನ್ನಾಟವಾಡುವ ಬಯಕೆ ಬೆಳ್ಮುಗಿಲ ಸಾಲಿಗೆ
ಮುಗಿಲು ಧರಿಸಿತು ಸೂರ್ಯರಶ್ಮಿಯ ಬೆಳ್ಳಿಗೆರೆ ತನ್ನಂಚಿಗೆ
ನಾಚಿದ ಬೆಳ್ಳಿಮೋಡದ ಒಡಲಾಯಿತು ಕೆಂಪಗೆ

ಇದ ಕಂಡು ರವಿ ತಾನೂ ಮುಂದಾದ ಓಕುಳಿಗೆ
ಎರಚಿದ ಇನ್ನಷ್ಟು ರಂಗುಗಳ ಮುಗಿಲ ಕಡೆಗೆ
ಭಾನು ಮುಗಿಲಿನ ಆಟದಲಿ ನಾ ಮೈ ಮರೆತೆ
ರಂಗುರಂಗಾದ ಮುಗಿಲೆ ನಾ ನಿನಗೆ ಮನಸೋತೆವರ್ಷಾರ‍ಂಭದ ಇನ್ನೊಂದು ಸಂಜೆಯಲಿ
ರವಿಯ ಮರೆ ಮಾಡಿತ್ತು ಕರಿಮುಗಿಲು ಪಡುವಣದಲಿ
ಗಂಭೀರ ವದನವ ತಾ ತೋರುತಲಿ
ಮೆಲು ನಡೆಯಲಿ ಸಾಗುತಿವೆ ಕಾರ್ಮುಗಿಲು ಸಾಲಿನಲಿ

ಗುಡುಗು ಸಿಡಿಲುಗಳ ಹಿಮ್ಮೇಳವೇಕೆ ಈ ಕಾರ್ಮುಗಿಲಿಗೆ?
ತಟ್ಟನೆ ಹೊಳೆಯಿತು ಕರಿಮೋಡದಂಚಿನ ಕೋಲ್ಮಿಂಚಿಗೆ
ದುಗುಡ ದುಮ್ಮಾನಗಳಿರಬಹುದು ಪ್ರಸವಕ್ಕೆ ಹೊರಟ ಹೆಣ್ಣಿಗೆ
ತುಂಬಿದ ತನ್ನೊಡಲ ಭಾರ ಇಳಿಸಿಕೊಳ್ಳುವ ಕಾಲ ಕರಿಮುಗಿಲಿಗೆ

ಕಾರ್ಮುಗಿಲು ಕರಗಿ ನೀರಾಗಿ ಮಳೆ ಸುರಿಯಿತು
ಒಣ ಭೂಮಿ ಮಿಂದು ತಂಪಾಯಿತು
ಹಸಿರುಟ್ಟು ನಲಿದಳು ವಸುಂಧರೆ
ಜೀವಸಂಕುಲಕೆ ನೀಡಿತು ಹರ್ಷ ಈ ವರ್ಷಧಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.