" ನಾನೂ... ನನ್ನ ಕನಸು"

ಪ್ರಕಾಶ್ ರೈ ರವರ " ನಾನೂ... ನನ್ನ ಕನಸು" ಚಿತ್ರ ಮಕ್ಕಳನ್ನು ಅದರಲ್ಲೂ ಮಗಳನ್ನು ಅತಿಯಾಗಿ ಪ್ರೀತಿಸುವ ಎಲ್ಲಾ ಅಪ್ಪ-ಅಮ್ಮಂದಿರ ಕನಸೆಂದರೆ ಖಂಡಿತಾ ತಪ್ಪಲ್ಲ. ನಮ್ಮ ಮನೆಯಲ್ಲಿಯೇ ನಡೆದ, ನಡೆಯುತ್ತಿರುವ ಬಹಳಷ್ಟು ಸನ್ನಿವೇಶಗಳು ಚಿತ್ರದಲ್ಲಿ ಯಥಾವತ್ತಾಗಿ ಮೂಡಿಬಂದಿವೆ. ನಮ್ಮ ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಅವರು ತೆಗೆದುಕೊಳ್ಳುವ ನಿರ್ಣಯಗಳು ಎಲ್ಲಿ ತಪ್ಪಾಗಿಬಿಡುತ್ತದೋ, ಅವರಿಗೆ ನೋವು-ನಿರಾಶೆಗಳಾಗಿಬಿಡುತ್ತದೋ ಎಂಬ ಆತಂಕ ಹೆತ್ತವರಿಗಿದ್ದೇ ಇರುತ್ತದೆ. ಆದರೆ ಮಕ್ಕಳ ಬಗೆಗಿನ ಅತಿಯಾದ ಕಾಳಜಿ ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡಬಹುದು ಮತ್ತು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ಮನವರಿಕೆ ಮಾಡಿಕೊಡಲಾಗಿದೆ.
ಆದರೆ ನಾವೇ ಎತ್ತಿ ಆಡಿಸಿ,ಬೆಳೆಸಿದ ನಮ್ಮ ಮಕ್ಕಳು ಉನ್ನತ ಧ್ಯೇಯಗಳನ್ನು ತಮ್ಮದಾಗಿಸಿಕೊಂಡು ನಮಗೇ ಮಾದರಿಯಾದಾಗ ಹೆತ್ತವರಿಗೆ ಹೆಮ್ಮೆಯಾಗುವುದು ಸಹಜ. ಪ್ರಕಾಶ್ ರೈ ಹೇಳುವ " ನಾನು ಬೆಳೆದಿಲ್ಲ, ನನ್ನ ಮಗಳು ನನ್ನನ್ನು ಬೆಳೆಸಿದಳು" ಎಂಬ ಮಾತು ಅಪ್ಪ-ಅಮ್ಮಂದಿರಿಗೆ ಹೆಮ್ಮೆಯ ವಿಷಯ. ಒಬ್ಬಳೇ ಮಗಳೆಂದರೆ ಹಟಮಾರಿ, ಸ್ವಾರ್ಥಿ ಎಂದು ಸಾಧಾರಣವಾಗಿ ಭಾವಿಸಲಾಗುತ್ತದೆ. ಇದು ತಪ್ಪು ಅಭಿಪ್ರಾಯ. ಒಬ್ಬಳೇ ಮಗಳಾಗಿ ಬೆಳೆದರೂ ಪರರ ನೋವಿಗೆ ಸ್ಪಂದಿಸುವ, ಅಪ್ಪ-ಅಮ್ಮನ ಭಾವನೆಗಳಿಗೆ ಬೆಲೆಕೊಡುವ ,ಸಮಯಕ್ಕೆ ತಕ್ಕಂತೆ, ಸರಿಯಾದ ರೀತಿಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ , ಉತ್ತಮ ಸಮಾಜಕ್ಕೆ ನಾಂದಿ ಹಾಡುವ ಮಗಳಾಗಿ ಬೆಳೆದದ್ದು ಹೇಗೆ ಎಂಬುದು ಅಚ್ಚರಿತರಿಸುತ್ತದೆ.
ತನ್ನೆಲ್ಲಾ ಭಾವನೆಗಳನ್ನು ಬದಿಗಿರಿಸಿ ಗಂಡ-ಮಗಳನ್ನು ಮುನ್ನೆಡೆಸಿದ ಅಮ್ಮ, ತನ್ನ ಜೀವನದಲ್ಲಿ ತಾನೇನು ತಪ್ಪು ಹೆಜ್ಜೆಗಳನ್ನಿರಿಸಿದೆ ಎಂದು ತನ್ನ ಮಗಳ ನಡವಳಿಕೆಯಿಂದ ಕಲಿತು ಎತ್ತರಕ್ಕೇರಿದ ಅಪ್ಪ ಮತ್ತು ವಿದ್ಯಾವಂತರಾಗಿ,ಬುದ್ಧಿವಂತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಮೈಗೂಡಿಸಿಕೊಂಡ ಮಗಳು- ಅಳಿಯನನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರವಿದು. ನವಿರಾದ ಹಾಸ್ಯ, ಪ್ರಕೃತಿಯ ಚೆಲುವು, ಅತ್ಯುತ್ತಮವಾದ ಮೆಸೇಜ್ ಈ ಚಿತ್ರದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.