ವಿದೇಶ ವಿಹಾರ - 2 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಇದು ಪಾರ್ಕಿಂಗ್ ಟಿಕೆಟ್ ಮಿಶನ್.ಆಸ್ಟ್ರೇಲಿಯಾದ ಎಲ್ಲಾ ರಸ್ತೆಗಳ ಫುಟ್ಪಾತಿನಲ್ಲಿ ಅಲ್ಲಲ್ಲಿ ಕಾಣಬರುತ್ತದೆ.ಇಲ್ಲಿ ನಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲು ಗಂಟೆಗೆ ಇಂತಿಷ್ಟು ಎಂದು ಹಣ ತೆಗೆದುಕೊಳ್ಳುವ ವ್ಯವಸ್ಥೆ ಇದೆ.ನಾವು ಈ ಸ್ಥಳದಲ್ಲಿ ಎಷ್ಟು ಸಮಯ ನಿಲ್ಲಿಸಬೇಕಾಗಬಹುದೊ ಅಷ್ಟು ಸಮಯಕ್ಕೆ ಅನುಗುಣವಾಗಿ  ಡಾಲರನ್ನು ಈ ಮಿಶನ್ನಿನಲ್ಲಿ ಹಾಕಿದರೆ ನಮಗೆ ವಾಹನ ನಿಲ್ಲಿಸಲು ಬೇಕಾದ ಸಮಯಕ್ಕೆ ಅನುಮತಿಸುವ ಒಂದು ಚಿಕ್ಕ ಕಾರ್ಡ್ ಬರುತ್ತದೆ. ಈ ಕಾರ್ಡನ್ನು ನಮ್ಮ ಕಾರಿನ ಒಳಗೆ ಗ್ಲಾಸಿನ ಮೂಲಕ ಕಾಣುವಂತೆ ಇಟ್ಟು ನಮ್ಮ ಕೆಲಸಗಳಿಗೆ ಹೋಗಬಹುದು.ಸಿಟಿ ಕೌನ್ಸಿಲ್ ನ ಟಿಕೆಟ್ ಮ್ಯಾನ್ ಚೆಕ್ಕಿಂಗಿಗೆ ಬಂದರೆ ಕಾರಿನೊಳಗೆ ಕಾಣುವ ಕಾರ್ಡನ್ನು ನೋಡುತ್ತಾರೆ.ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್ಡನ್ನು ಪಡೆಯುತ್ತಾರೆ.ಇದು ಮೆಚ್ಚತಕ್ಕ ವಿಷಯ. ನಮ್ಮ ದೇಶದಲ್ಲೂ ಈ ವ್ಯವಸ್ಥೆ ಬಂದರೆ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಸ್ವಲ್ಪ ಕಡಿವಾಣ ಬೀಳಬಹುದೇನೋ...?


ತನ್ನ ಪುಟ್ಟ ಕೈಯಿಂದ ಕಾಂಗರೂ ಮೈ ಸವರಲು ಹೊರಟ ಮುದ್ದು ಆಸ್ಟ್ರೇಲಿಯನ್ ಬೇಬಿ.ನಾವು ಫೋಟೊ ತೆಗೆಯುತ್ತಿರುವುದನ್ನು ನೋಡಿ ಬಾಲೆ ಗಲಿಬಿಲಿಯಾದ ಹಾಗಿದೆ. ಅಲ್ಲಿನ ಮಕ್ಕಳನ್ನು ಕಂಡರೆ ಮತ್ತೆ ಮತ್ತೆ ನೋಡುತ್ತಿರಬೇಕು ಎನಿಸುತ್ತದೆ.


ಗತ್ತಿನಲ್ಲಿ ನಿಂತು ತನ್ನ ವಾಹನಕ್ಕೆ ಪೆಟ್ರೋಲನ್ನು ತುಂಬಿಸಿಕೊಳ್ಳುತ್ತಿರುವ ಲೇಡಿ ಪೋಲಿಸ್.


’ಬಿಲ್ಲಬ್ಯಾಂಗೊ ಸ್ಯಾಂಚುರಿ’ಯಲ್ಲಿ ಕಂಡು ಬಂದ ಚಿಕ್ಕ ಬಿದಿರು ಮೆಳೆ.ನಮ್ಮ ಮಲೆನಾಡಿನಲ್ಲಿರುವಂತೆ ದೊಡ್ಡ ಬಿದಿರು ಮೆಳೆಗಳಲ್ಲ.ಆದರೆ ಅಲ್ಲೂ ಬಿದಿರುಂಟು.

ಇದೇನು ಹೇಳಿ ನೋಡೋಣ...... ? ಸರಿಯಾಗಿದೆ ನಿಮ್ಮ ಊಹೆ....ಇದು ಕೆಸವಿನಸೊಪ್ಪಿರಬಹುದು... ಆ ದೇಶದಲ್ಲಿ ಇದನ್ನು ಕಂಡು ಅಚ್ಚರಿಪಟ್ಟೆ!.....ಕ್ಯಾಮರಾದಲ್ಲಿ ಸೆರೆಹಿಡಿದೆ.

ನಾನು ಚಿಕ್ಕವರಿದ್ದಾಗ ನಮ್ಮ ದೇಶದಲ್ಲಿ ಮರದ ಲೈಟು ಕಂಬಗಳನ್ನು ನೋಡಿದ್ದೆನು. ಆದರೆ ಇತ್ತೀಚೆಗೆ ಇವುಗಳನ್ನು ಕಂಡಿಲ್ಲ. ಆಸ್ಟ್ರೇಲಿಯಾದಲ್ಲಿ ಮರದ ಲೈಟು ಕಂಬಗಳು ನನ್ನನ್ನು ಆಶ್ಚರ್ಯ ಚಕಿತಳನ್ನಾಗಿಸಿತು.ಅಲ್ಲಿನ ಕಾಡುಗಳಲ್ಲಿ ರೆಂಬೆ-ಕೊಂಬೆಗಳಿಲ್ಲದೆ ನೇರವಾಗಿ ,ಎತ್ತರಕ್ಕೆ ಬೆಳೆಯುವ   ಮರಗಳು ಹೆಚ್ಚು. ಹಾಗಾಗಿ ಅವುಗಳ ಉಪಯೋಗವನ್ನು ಮಾಡಿಕೊಳ್ಳುತ್ತಾರ‍ೆ.


ಕ್ವೀನ್ಸ್ ಲ್ಯಾಂಡ್ ನಲ್ಲಿ ಹೋದೆಡೆಯಲ್ಲೆಲ್ಲಾ ನನಗೆ ಸುಂದರ ಆಕಾಶವನ್ನು ಗಮನಿಸಿ ಆಸ್ವಾದಿಸುವುದೇ ಪ್ರಿಯವಾಗಿತ್ತು.ದಟ್ಟ ನೀಲಿ ಬಣ್ಣದ ಆಗಸ, ಅಚ್ಚಬಿಳಿ ಬಣ್ಣದ ಮೋಡಗಳು ನನ್ನ ಮನಸೆಳೆಯುತ್ತಿದ್ದವು.ಹತ್ತಿರವೇ ಸಾಗರವಿರುವುದರಿಂದ ಇಷ್ಟು ನೀಲಿಯೋ, ಮೋಡಗಳ ಶುಭ್ರತೆ ಇದಕ್ಕೆ ಕಾರಣವೋ ಅಥವಾ ಅಲ್ಲಿ ಓಝೋನ್ ಪದರವು ತೂತಾಗಿರುವುದು ಕಾರಣವೋ ನನಗೆ ತಿಳಿದಿಲ್ಲ.ಇದನ್ನು ತಿಳಿದವರು ಹೇಳಬೇಕು.


ತನ್ನ ಕಂಪನಿಯ ವಸ್ತುಗಳ ಜಾಹೀರಾತಿಗಾಗಿ ಮನೆಮನೆಗೆ ಪಾಂಪ್ಲೆಟ್ ಹಂಚುತ್ತಿರುವ ಯುವತಿ.

6 ಕಾಮೆಂಟ್‌ಗಳು:

  1. ಮಂಜುಳಾದೇವಿಯವರೆ,
    ಅಚ್ಚುಕಟ್ಟಾದ ಮಾಹಿತಿ ಹಾಗು ಸುಂದರ ಫೋಟೋಗಳಿಗಾಗಿ ಧನ್ಯವಾದಗಳು. ಆಸ್ಟ್ರೇಲಿಯಾದಲ್ಲಿ ಭಾರತೀಯರ ವಿರುದ್ಧ ಕೆಲವೊಂದು ಘಟನೆಗಳು ನಡೆದುವಲ್ಲ. ಅದರ ಬಗೆಗೆ ನಿಮಗೆ ಏನಾದರೂ ಮಾಹಿತಿ ದೊರೆಯಿತೆ?

    ಪ್ರತ್ಯುತ್ತರಅಳಿಸಿ
  2. ಹೆಚ್ಚಿನ ಬರಹಗಳಿಗಾಗಿ ಕಾಯುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  3. ಸುನಾಥ್ ಸಾರ್,
    ಮೆಲ್ಬೋರ್ನ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಜನಾಂಗೀಯ ಹಲ್ಲೆಯ ಬಗ್ಗೆ ನಾನೂ ಕೂಡ ನಮ್ಮ ಮಾಧ್ಯಮಗಳಲ್ಲಿ ಕೇಳಿ ಆತಂಕಪಟ್ಟಿದ್ದೇನೆ. ಆದರೆ ಅಲ್ಲಿ ನೆಲೆಸಿರುವ ಭಾರತೀಯರಿಗೆ ಈ ವಿಷಯದ ಬಗ್ಗೆ ಏನೂ ತಿಳಿದಿರುವುದಿಲ್ಲ.ನಾವು ಈ ಬಗ್ಗೆ ವಿಚಾರಿಸಿದರೆ ಅಷ್ಟೊಂದು ಕಳವಳ ಪಡುವಂತಹದ್ದು ಇಲ್ಲಿ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ.ಅವುಗಳು ವೈಯುಕ್ತಿಕ ದ್ವೇಷ ಪ್ರಕರಣಗಳಿರಬಹುದು ಎನ್ನುತ್ತಾರೆ.
    ನಾನೂ ಟೌನ್ಸ್ ವಿಲ್ ನಲ್ಲಿ ಕಂಡಂತೆ ಅಲ್ಲಿ ನೆಲೆಸಿರುವ ನಮ್ಮವರನ್ನು ಆಸ್ಟ್ರೇಲಿಯನ್ನರು ತುಂಬಾ ಆದರಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.ಅಲ್ಲದೆ ಭಾರತೀಯರ ನಡೆ-ನುಡಿಗಳನ್ನು,ಅವರ ಕರ್ತವ್ಯ ನಿಷ್ಠೆಯನ್ನು ಗೌರವಿಸುತ್ತಾರೆ.ನಮ್ಮವರೂ ಸಹ ಅವರೊಂದಿಗೆ ಸಾಮರಸ್ಯದಿಂದ ಬಾಳುತ್ತಿದ್ದಾರೆ .
    ನಿಮ್ಮ ಚೈತನ್ಯದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಸುಬ್ರಮಣ್ಯ ರವರೆ,
    ಅಲ್ಲಿನ ನನ್ನ ಅನುಭವಗಳನ್ನು ಹಂಚಿಕೊಳ್ಳಲು ನಾನೂ ಉತ್ಸಾಹಿತಳಾಗಿದ್ದೇನೆ. ವಿನ್ಯಾಸಕ್ಕೆ ಆಗಾಗ ಬರುತ್ತಿರಿ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ಸು೦ದರ ಫೊಟೋಗಳೊ೦ದಿಗೆ ಒಳ್ಳೆಯ ಮಾಹಿತಿಯುಕ್ತ ಅನುಭವವನ್ನು ಓದಿ ಖುಶಿಯಾಯಿತು.

    ಪ್ರತ್ಯುತ್ತರಅಳಿಸಿ
  6. ಮನಮುಕ್ತಾ ರವರೆ,
    ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.