ವಿದೇಶ ವಿಹಾರ - 16 - ವಿಮಾನಯಾನದ ಗಮ್ಮತ್ತು


ಇಪ್ಪತ್ತು ವರ್ಷಗಳ ಹಿಂದೆ ವಿಮಾನಯಾನ, ವಿದೇಶಯಾತ್ರೆ ಎಂದರೆ ನಮ್ಮಂತಹ ಮಧ್ಯಮವರ್ಗದವರ ಪಾಲಿಗೆ ಒಂದು ಕನಸೇ ಸರಿ! ಆದರೆ ಕಾಲಚಕ್ರ ಈ ಪರಿ ವೇಗವಾಗಿ ಬದಲಾಗಬಹುದೆಂಬ ಕಲ್ಪನೆ ಸಹ ನಮ್ಮದಾಗಿರಲಿಲ್ಲ. ಐಟಿ ಯುಗ, ಜಾಗತೀಕರಣ ಎಂದೆಲ್ಲಾ ಬಂದದ್ದೇ ಬಂದದ್ದು ನಮ್ಮಂಥವರ ಜೀವನ ಶೈಲಿಯೇ ಬದಲಾಗಿ ಹೋಯಿತು !! ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ,ಅವರ ಪ್ರತಿಭೆಗೆ ತಕ್ಕ ಅವಕಾಶ ಒದಗಿ ಬರುವ ಭಾಗ್ಯ ನಮ್ಮದಾಯಿತು. ದೇಶ-ವಿದೇಶಗಳಲ್ಲಿ ನಮ್ಮ ಮಕ್ಕಳು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದು , ನಮಗೆ ಮತ್ತು ನಮ್ಮ ನಾಡಿಗೇ ಕೀರ್ತಿ ತರುತ್ತಿದ್ದಾರೆ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ಭಾರತೀಯರೆಂದರೆ ವಿದೇಶಗಳಲ್ಲಿ ಗೌರವ ಭಾವನೆ ಮೂಡುತ್ತಿದೆ.ಭಾರತೀಯ ಯುವಕ-ಯುವತಿರ ಪ್ರತಿಭೆಯನ್ನು ಕಂಡು ಅವರು ಬೆರಗಾಗಿದ್ದಾರೆ !! ವಿದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯರು ನಮ್ಮ ಸಂಸ್ಕೃತಿಯನ್ನು,ನಮ್ಮ ಭವ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪ್ರಚಾರ ಮಾಡುತ್ತಿರುವ " ಸಾಂಸ್ಕೃತಿಕ ರಾಯಭಾರಿ"ಗಳಾಗಿದ್ದಾರೆ.ಆದರೆ ಈ ಬೆಳವಣಿಗೆಯ ಬಗ್ಗೆ ಗೊಣಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ.  ಒಳಿತು-ಕೆಡುಕು ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಒಂದರೊಡನೊಂದು ಇದ್ದೇ ಇರುತ್ತವೆ.ಆರಿಸಿಕೊಳ್ಳುವಾಗ ಎಚ್ಚರವಾಗಿರಬೇಕು ಅಷ್ಟೆ...!!.ನಮ್ಮ ಬದುಕಿಗೆ ಬೇಕಾದ ಸನ್ಮಾರ್ಗದ ಹಾದಿಯನ್ನು ಹುಡುಕಿ ನಡೆಯಬೇಕಾದ ಸಂಸ್ಕಾರ ನಮ್ಮಲ್ಲಿರಬೇಕು.ಬೇವನ್ನು ಬಿತ್ತಿ ಮಾವನ್ನು ಬೆಳೆಯಲು ಸಾಧ್ಯವಿಲ್ಲ ಎಂಬ ಅರಿವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು.

ಇರಲಿ, ನಾನೀಗ ನನ್ನ ಮೊದಲ ವಿಮಾನ ವಿಹಾರದ ಅನುಭವವನ್ನಿಲ್ಲಿ ಹೇಳಲು ಹೊರಟಿದ್ದೇನೆ.ವಿಮಾನದಲ್ಲಿ ಸಂಚರಿಸುವುದು ನನ್ನ ಬಹು ದಿನದ ಕನಸಾಗಿತ್ತು. ಸಿಂಗಪೂರ್ ಏರ‍್ಲೈನ್ಸ್ (ಎಸ್ ಕ್ಯು ೫೦೪- ೦೧/೦೮/೨೦೧೧)ನಲ್ಲಿ ಬೆಂಗಳೂರಿನಿಂದ ಸಿಂಗಪೂರ್ ಗೆ ನನ್ನ ಮೊದಲ ವಿಮಾನಯಾನ. ಅಲ್ಲದೆ, ನನ್ನ ಪ್ರಥಮ ವಿದೇಶ ಪ್ರವಾಸವೂ ಆಗಿತ್ತು.ಆ ದಿನಕ್ಕಾಗಿ,ವಿನೂತನ ಅನುಭವಕ್ಕಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೆ.ಅಂದಿನಿಂದ ಆರಂಭವಾದ ನಮ್ಮ ಗಗನ ಸಂಚಾರ‍ ಮುಂದಿನ ಒಂದು ತಿಂಗಳಲ್ಲಿ ೭-೮ ವಿಮಾನಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ನಮ್ಮ ಮಕ್ಕಳು ನಮಗೆ ಒದಗಿಸಿ ಕೊಟ್ಟರು. ಹಗಲಿನಲ್ಲಿ ಅಂಬರದಲ್ಲಿ ಹಾರಾಡುವ ಅನುಭವವು ರಾತ್ರಿಯ ಸಮಯದ ಗಗನ ಸಂಚಾರಕ್ಕಿಂತ ಭಿನ್ನವಾಗಿರುತ್ತದೆ.ನಾನಂತೂ ವಿಮಾನ ಏರಿ ಕುಳಿತೆನೆಂದರೆ, ಅದು ಹಗಲಿರಲಿ ರಾತ್ರಿ ಇರಲಿ ಒಂದು ನಿಮಿಷವೂ ವ್ಯರ್ಥ ಮಾಡದಂತೆ ಕಿಟಕಿಯಲ್ಲಿ ಕಣ್ಣಿಟ್ಟು ಹೊರಗಿನ ದೃಶ್ಯವನ್ನು ವೀಕ್ಷಿಸುವುದರಲ್ಲಿ ತಲ್ಲೀನಳಾಗಿ ಬಿಡುತ್ತಿದ್ದೆ....!!! 

"ಹಾರುತ ದೂರಾ.. ದೂರಾ..ಮೇಲೇರುವ ಬಾರಾ..ಬಾರಾ..
ನಾವಾಗುವ ಚಂದಿರ ತಾರಾ... ಸುಂದರ ಗಗನವಿಹಾರ..."

ರಾತ್ರಿ ವೇಳೆಯಲ್ಲಿ ವಿಮಾನಯಾನದ ಅನುಭವ:-

ಆಸ್ಟ್ರ‍ೇಲಿಯಾಗೆ ಹೋಗುವಾಗ ಬೆಂಗಳೂರಿನಿಂದ ಸಿಂಗಪೂರ್ ಮತ್ತು ವಾಪಾಸಾಗುವಾಗ ಸಿಂಗಪೂರ್ ನಿಂದ ಬೆಂಗಳೂರಿಗೆ ರಾತ್ರಿ ಸಂಚರಿಸುವ ಅವಕಾಶ ನಮ್ಮದಾಯಿತು.   

ವಿಮಾನ ಮೇಲೇರುವ ಮೊದಲು ನಿಲ್ದಾಣದಲ್ಲಿ ಚಕ್ರಗಳ ಮೇಲೆ ಚಲಿಸುತ್ತಾ ನಿಗದಿಯಾದ ರನ್ ವೇ ನಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ನಿಧಾನವಾಗಿ ನೆಲವನ್ನು ಬಿಟ್ಟು ಮೇಲೇರುತ್ತದೆ.ಈ ಲೋಹದ ಹಕ್ಕಿಯೂ ನಾವು ದಿನನಿತ್ಯ ನೋಡುವ ಪಕ್ಷಿಗಳಂತೆಯೇ ಹಗುರವಾಗಿ, ಸ್ವಲ್ಪ ಓರೆಯಾಗಿ ಮೇಲೇರುವ ಒಂದೆರಡು ಕ್ಷಣ ಹೊಟ್ಟೆಯಲ್ಲಿ ಒಂದು ರೀತಿಯ ಅನುಭವವಾಗಿ ಆನಂದವಾಗುತ್ತದೆ. ನಂತರ ವಿಮಾನ ಹಂತಹಂತವಾಗಿ ಆಕಾಶಕ್ಕೆ ನೆಗೆಯುತ್ತಾ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಭೂಮಿಗೆ ಸಮಾನಾಂತರವಾಗಿ ಚಲಿಸಲಾರಂಭಿಸುತ್ತದೆ.ಇನ್ನು ಬರೀ ಗಾಳಿಯಲ್ಲಿ ತೇಲಿದಂತಾಗುತ್ತದೆ...! ಮೊದಲ ಸಲ ಈ ನೆಲದಿಂದ ಮುಗಿಲಿಗೆ ಹಾರಿದ ಸಂತಸ.ಆಕಾಶದಿಂದ ನನ್ನ ಭರತ ಭೂಮಿಯನ್ನು ವೀಕ್ಷಿಸುವ ಸುಯೋಗ.ನಿಧಾನವಾಗಿ ಮೇಲೇರಿದಂತೆ ಬೆಂಗಳೂರಿನ ರಾತ್ರಿಯ ವೈಭವದ ನೋಟ ನಯನ ಮನೋಹರ...!!ಕೆಳಗೆ ದೀಪಗಳ ಸರಮಾಲೆ, ಹರಿದಾಡುವ ವಾಹನಗಳು  ಮಾತ್ರ ನಮಗೆ ಕಾಣುತ್ತದೆ.ರಾತ್ರಿ ವೇಳೆ ಧರೆಯಲ್ಲಿ ನಿಂತು ಆಕಾಶದ ನಕ್ಷತ್ರಗಳನ್ನು ನೋಡಿದಂತಾಗುತ್ತದೆ....!! ವಿಮಾನದ ರೆಕ್ಕೆಗಳನ್ನು ಬಿಟ್ಟರೆ ಬೇರ‍ೆನೂ ಗೋಚರಿಸದು.ರೆಕ್ಕೆಯ ಅಂಚಿನಲ್ಲಿ ಪುಕ್.. ಪುಕ್.. ಎನ್ನುವ ದೀಪವೊಂದೇ ಆ ಕಗ್ಗತ್ತಲಿನಲ್ಲಿ ಕಾಣುತ್ತಿರುತ್ತದೆ.ಎಷ್ಟೊಂದು ಬೃಹದಾಕಾರವಾಗಿದ್ದ ಮತ್ತು ಅಷ್ಟೊಂದು ತೂಕವನ್ನು ಹೊತ್ತ ವಿಮಾನ ಈ ಪರಿ ಹಗುರವಾಗಿದ್ದು ಹೇಗೆ ಎಂದು ವಿಸ್ಮಿತಳಾದೆ....!!! ಹಾಗೆ ಮಾನವನ ಬುದ್ಧಿಮತ್ತೆಗೆ ಮನದಲ್ಲಿಯೇ ಒಮ್ಮೆ ಜಯಕಾರ ಮಾಡಿದೆ.ಒಂದು ಚಿಕ್ಕ ಸದ್ದು ಬಿಟ್ಟರೆ ಬೇರ‍ೇನೂ ಕೇಳಿಸದು, ರಾತ್ರಿಯಾದ್ದರಿಂದ ಬೇರೇನೂ ಕಾಣಿಸದು. ವಿಮಾನ ನಿಂತಲ್ಲೇ ನಿಂತ ಅನುಭವ.....!!!  ಗಾಳಿಯಲ್ಲಿ ಹಾರಿದಂತೆ ಎಲ್ಲವೂ ಸುಖಮಯ. ಹದಿನೈದು ಇಪ್ಪತ್ತು ಸಾವಿರ ಅಡಿಗಳ ಎತ್ತರದಿಂದ ಚನ್ನೈ ನಗರವನ್ನು ಹಾದು ಸಮುದ್ರದ ಮೇಲೆ ಬಂದಾಗ ಸಹ ಬರೀ ಕತ್ತಲು. ವಿಮಾನ ಮುಂದೆ ಸಾಗಿದಂತೆ, ಚಿಕ್ಕ ಚಿಕ್ಕ ದ್ವೀಪಗಳ ಮೇಲೆ ಹಾದು ಹೋಗುವಾಗ ಮಾತ್ರ ದೂರದಲ್ಲಿ ನಕ್ಷತ್ರಗಳು ಮಿನುಗಿದಂತೆ ಅನುಭವ! ಇಂಡೋನೇಷಿಯಾದ ಮೇಲೆ ಹೋಗುವಾಗಲಂತೂ ಚಿಕ್ಕಚಿಕ್ಕ ದ್ವೀಪಗಳು ಮುತ್ತು,ರತ್ನ,ಹವಳಗಳಿಂದ ಕುಸುರಿ ಕೆಲಸ ಮಾಡಿದ ಚಿನ್ನದ ಪದಕಗಳಂತೆ, ವಿವಿಧ ವಿನ್ಯಾಸದ ಕಿವಿಯ ಓಲೆಗಳಂತೆ ಮನಸೆಳೆಯುತ್ತವೆ. ಉದ್ದವಾದ ಭೂಪ್ರದೇಶವನ್ನು ಹೊಂದಿದ ದ್ವೀಪಗಳು ನವರತ್ನಗಳಿಂದ ನಿರ್ಮಿತವಾದ ,ಆ ಪದಕಗಳಿಗೆ ಜೋಡಿಸಿದ ಅಮೂಲ್ಯವಾದ ಹಾರವೇನೋ ಎಂಬಂತೆ ಕಾಣುತ್ತಿತ್ತು....!! ಈ ಅಪರೂಪದ ದೃಶ್ಯವನ್ನು ಇನ್ನೂ ಸ್ವಲ್ಪ ಹೊತ್ತು ನೋಡೋಣ ಅನ್ನಿಸುವಷ್ಟರಲ್ಲಿ ನಮ್ಮ ವಿಮಾನ ವೇಗವಾಗಿ ಮುಂದೋಡಿರುತ್ತದೆ. ಆ ವೈಭವದ ನೋಟ ಮಾತ್ರ ಅಚ್ಚಳಿಯದ ನೆನಪಾಗುತ್ತದೆ.

ಸಿಂಗಪೂರ್ ಹತ್ತಿರವಾದಂತೆ ಝಗಮಗಿಸುವ ದೀಪಗಳ ಸಾಲು ಕಣ್ ಕೋರೈಸುತ್ತದೆ. ಭವ್ಯವಾದ,ಸುಂದರವಾದ ನೋಟ.ನಾವು ಕುಳಿತ ವಿಮಾನ ನಿಧಾನವಾಗಿ, ಹಂತಹಂತವಾಗಿ ಕೆಳಗಿಳಿಯತೊಡಗುತ್ತದೆ.ಆಗಿನ್ನು ಬೆಳಗಿನ ಜಾವ ಐದು ಗಂಟೆ. ಆರುನೂರು ಅಡಿಗಳ ಎತ್ತರದಿಂದ ಆ ದೇಶವನ್ನು ನೋಡುವುದೇ ಒಂದು ಸೊಗಸು.ಸುತ್ತೆಲ್ಲಾ ಬರೀ ಸಮುದ್ರ. ಒಂದಿಷ್ಟೂ ನೆಲವೇ ಕಾಣದಂತೆ ಒತ್ತೊತ್ತಾಗಿ, ಸುಸಜ್ಜಿತವಾಗಿ ಮತ್ತು ಬಹು ಎತ್ತರಕ್ಕೆ ಕಟ್ಟಿದ ಕಟ್ಟಡಗಳ ಕಲಾಕೃತಿಗಳು ಕಾಣಬರುತ್ತವೆ. ಇಂದ್ರನ ಅಮರಾವತಿಯನ್ನು ಪ್ರವೇಶಿಸಿದಂತೆ ಅನುಭವ ನೀಡುವ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ...! ವಿಮಾನ ಲ್ಯಾಂಡ್ ಆಗುವಾಗ ಹಂತಹಂತವಾಗಿ ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ, ರನ್ ವೇಗೆ ಬಂದು ಭೂಸ್ಪರ್ಶ ಮಾಡಿದ ಒಂದು ಕ್ಷಣ ಝಕ್ ...ಎಂದು ಒಂದು ಜರಕು ಹೊಡೆದು ಜೋರಾಗಿ ರನ್ ವೇನಲ್ಲಿ ಓಡುತ್ತದೆ. ಓಟವನ್ನು ನಿಧಾನಗೊಳಿಸುತ್ತಾ ನಮ್ಮ ವಿಮಾನಕ್ಕಾಗಿ ನಿಗದಿಪಡಿಸಲಾದ ಗೇಟಿಗೆ ಬಂದು ನಿಲ್ಲುತ್ತದೆ. ನಾವೀಗ ವಿಮಾನದಿಂದ ಇಳಿಯಲು ಅನುಮತಿ ಸಿಗುತ್ತದೆ. ಗಗನಸಖಿಯರ ನಗುಮೊಗದ ವಿದಾಯವನ್ನು ಸ್ವೀಕರಿಸಿ ಹೊರಬರುತ್ತೇವೆ.  ನನ್ನ ಜೀವಿತದಲ್ಲಿ ಮೊದಲಬಾರಿ ತಾಯ್ನೆಲವನ್ನು ಬಿಟ್ಟು ಬೇರೆ ನೆಲವನ್ನು ಸ್ಪರ್ಶಿಸಿದ ವಿಶಿಷ್ಟ ಗಳಿಗೆಯಿದು.  

ಬೆಳಗಿನ ವೇಳೆಯ ವಿಮಾನಯಾನದ ಅನುಭವ:-
(ಸಿಂಗಪೂರ್-ಆಸ್ಟ್ರೇಲಿಯಾದ ಬ್ರಿಸ್ಬೇನ್ - ಟೌನ್ಸ್ವಿಲ್ ಮತ್ತು ಟೌನ್ಸ್ವಿಲ್ - ಬ್ರಿಸ್ಬೇನ್ -ಮೆಲ್ಬೋರ್ನ್ - ಸಿಂಗಪೂರ್)

ಬೆಳಗಿನ ವೇಳೆಯ ವಿಮಾನಯಾನದ ಅನುಭವವನ್ನಿಲ್ಲಿ ನಾನೀಗ ಹೇಳಹೊರಟಿದ್ದೇನೆ.ಇದೂ ಸಹ ವಿಭಿನ್ನ ಅನುಭವ. ಕೊಂಚ ಮೇಲಕ್ಕೆ ಹೋದಂತೆ ನಮ್ಮ ಪಕ್ಕದಲ್ಲಿಯೇ ಮೋಡಗಳ ಮನೋಹರ ಲೋಕ. ನಾವೀಗ ಮೋಡದ ನಾಡಿನ ಅತಿಥಿಗಳು....!!! ಪೌರಾಣಿಕ ಸಿನಿಮಾದಲ್ಲಿ ನಮ್ಮ ತ್ರಿಲೋಕ ಸಂಚಾರಿ ನಾರದರು ’ಗೊಂಬೆಯಾಟವಯ್ಯಾ... ಈ ಲೋಕವೇ ಆ ದೇವನಾಡುವಾ.. ಗೊಂಬೆಯಾಟವಯ್ಯಾ...’ ಎಂದು ಹಾಡುತ್ತಾ ಮೋಡಗಳ ಮೇಲೆ ಏರಿ ,ಲೋಕದಿಂದ ಲೋಕಕ್ಕೆ ಸುತ್ತುತ್ತಿದ್ದ ದೃಶ್ಯ ನನ್ನ ಕಣ್ಮುಂದೆ ಸುಳಿದು ಹೋಯಿತು. ನಾನೀಗ ವಿದೇಶ ಸಂಚಾರಿ.ಅಂದು ಆ ನಾರದರು ಪಡೆದ ಅದ್ಭುತ ಅನುಭವ ಇಂದು ನನ್ನ ಪಾಲಿಗೆ ಬಂದಿದೆ ಎನ್ನಿಸಿತು. ಓಹ್... ದೂರದಲ್ಲೇಲ್ಲೋ ಚಲಿಸುವ ಮೋಡಗಳೇ,ನಿಮ್ಮ ಸನಿಹಕ್ಕೆ ನಾನೀಗ ಹಾರಿ ಬಂದಿದ್ದೇನೆ.ಹತ್ತಿಯ ದೊಡ್ಡ ದೊಡ್ಡ ಉಂಡೆಗಳಂತಿರುವ ನಿಮ್ಮನ್ನು ಕೈಯಿಂದ ಒಮ್ಮೆ ಮುಟ್ಟಿಬಿಡಲೇ ಎಂದುಕೊಳ್ಳುತ್ತಿರುವಂತೆಯೇ, ನಾವೀಗ ಈ ಮೋಡಗಳನ್ನು ಭೇದಿಸಿಕೊಂಡು ಇನ್ನೂ ಎತ್ತರಕ್ಕೆ ಹಾರಿಬಿಟ್ಟಿದ್ದೇವೆ ... ! ಕೆಳಗೆ ನೋಡಿದರೆ ಮೇಘ ಮಂದಾರ....!! ! ಕವಿ ಕಾಳಿದಾಸ ಈ ಮೋಡಗಳ ಮೂಲಕವೇ ಅಲ್ಲವೆ ತನ್ನ ಪ್ರಿಯತಮೆಗೆ ಸಂದೇಶ ಕಳುಹಿಸಿದ್ದು.ಎಂತಹ  ಮನೋಹರವಾದ ಕವಿಕಲ್ಪನೆ...!!! ನಾನು ವಿಮಾನದಲ್ಲಿ ಕುಳಿತು ಹಾರಾಡುತ್ತಿದ್ದರೂ ಮನಸ್ಸು ಮಾತ್ರ ಕಾಳಿದಾಸನಿಗೆ ನಮೋ.. ಎನ್ನುತ್ತಿತ್ತು. ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು ನಿಜವೆ. ಕವಿಗಳ ಕಲ್ಪನಾ ಪ್ರಪಂಚಕ್ಕೆ ಸಾಟಿಯಾದುದು ಬೇರಾವುದೂ ಇಲ್ಲ ಎನಿಸಿತು.         

ಸೂರ್ಯೋದಯದ ಮತ್ತು ಮುಸ್ಸಂಜೆಯ ಗಗನ ವಿಹಾರವಂತೂ ಮರೆಯಲಾಗದ ಮನೋಹರ ನೋಟ.ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶದಲ್ಲಿ ಹೊಂಗಿರಣವನ್ನು ಚೆಲ್ಲಿದ ಸೂರ್ಯ ನಮ್ಮ ವಿಮಾನದ ಪಕ್ಕವೇ ಇದ್ದಾನೆ, ನಾವು ಅವನೊಂದಿಗೇ ಸಾಗುತ್ತಿದ್ದೇವೆನೋ ಎಂಬ ರೋಮಾಂಚನ. ಒಟ್ಟಿನಲ್ಲಿ ಮರೆಯಲಾರದ, ಸುಂದರ ಗಗನ ವಿಹಾರ ನಮ್ಮದಾಯಿತು.    

2 ಕಾಮೆಂಟ್‌ಗಳು:

  1. ವಿಮಾನಯಾನದ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ. ಇದೊಂದು ರೋಚಕ ಸಂಗತಿ.

    ಪ್ರತ್ಯುತ್ತರಅಳಿಸಿ
  2. ಗಾಳಿಯಲ್ಲಿ ತೇಲಿದಂತೆ,
    ಮೋಡದೊಳಗೆ ಸೇರಿದಂತೆ,
    ನಮ್ಮ ನಾವು ಮರೆಯುವಂತೆ
    ಮೇಲೆ ಮೇಲೆ ಹಾರುತಿರಲು,
    ಮನದ ತುಂಬಾ ತನನ... ತನನ...
    ಮರೆಯಲಾರೆ ವಿಮಾನಯಾನ...!!

    ಧನ್ಯವಾದಗಳು ಸುನಾಥ್ ಸಾರ್.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.