ಮಹಾಶಿವರಾತ್ರಿ – ಸರ್ವಂ ಶಿವಮಯಂ


ಶಿಶಿರ ಋತುವಿನ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ನಾವು ಶಿವರಾತ್ರಿ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತೇನೆ. ತ್ರಯೋದಶಿಯು ಶಕ್ತಿರೂಪ ಮತ್ತು ಚತುರ್ದಶಿಯು ಶಿವ ರೂಪ. ಹಾಗಾಗಿ ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದನ್ನು ಶಿವಶಕ್ತಿಯೋಗವೆನ್ನುತ್ತಾರೆ. ಇದು ಶಿವರಾತ್ರಿಯ ವಿಶೇಷವೆಂದು ನಮ್ಮ ಹಿರಿಯರು ಹೇಳಿದ್ದಾರೆ.

ಶಿವನೆಂದರೆ ಮಂಗಳಕರ ಎಂದರ್ಥವಾಗುತ್ತದೆ. ಸಮುದ್ರ ಮಂಥನ ಕಾಲದಲ್ಲಿ ಮೊದಲಿಗೆ ಹಾಲಾಹಲ ಉತ್ಪತ್ತಿಯಾದಾಗ, ಲೋಕಕಲ್ಯಾಣಕ್ಕಾಗಿ ಪರಶಿವನು ಆ ವಿಷವನ್ನು ತಾನೇ ಕುಡಿದುಬಿಟ್ಟನು. ಆದರೆ ಪಾರ್ವತಿಯು ಆ ವಿಷವು ಶಿವನ ಕಂಠದಿಂದ ಕೆಳಗಿಳಿಯದಂತೆ  ಆ ರಾತ್ರಿಯಿಡೀ ತಡೆಹಿಡಿದಳು. ಆಗ ನೆರೆದಿದ್ದ ದೇವತೆಗಳು ರಾತ್ರಿಯೆಲ್ಲಾ ಶಿವನ ಭಜನೆ ಮಾಡಿದ ದಿನವಿದು ಎಂಬುದನ್ನು ಶಿವಪುರಾಣದಲ್ಲಿ ನೋಡಬಹುದು. ಹಾಗಾಗಿ ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ,ಶಿವಧ್ಯಾನವನ್ನು ಮಾಡುವ ಪದ್ಧತಿ ಬೆಳೆದುಬಂದಿದೆ.

ಸರ್ವೇಶ್ವರನಾದ ಪರಶಿವನ ಆದಿ ಅಂತ್ಯವನ್ನು ಹುಡುಕಲು ಹೊರಟ ವಿಷ್ಣು ಬ್ರಹ್ಮರಿಗೆ ಶಿವರಾತ್ರಿಯಂದೇ ಜಗದೀಶ್ವರನು ಲಿಂಗರೂಪದಲ್ಲಿ ದರ್ಶನವಿತ್ತನೆಂದು ಪ್ರತೀತಿಯಿದೆ. ಶಿವ ಪಾರ್ವತಿಯರ ವಿವಾಹ ಮಹೋತ್ಸವ ನಡೆದ ದಿನವೂ ಇದೆಂದು ಉಲ್ಲೇಖವಿದೆ. ಅಲ್ಲದೆ ಈ ದಿನವು ಶಿವನಿಗೆ ತುಂಬಾ ಪ್ರಿಯವಾದ ದಿನ. ಮಹೇಶ್ವರನು ತನ್ನ ವಲ್ಲಭೆ ಪಾರ್ವತಿಯೊಡನೆ ಈ ದಿನ ಕೈಲಾಸದಿಂದ ಇಳಿದುಬಂದು ತನ್ನ ಭಕ್ತರ ಪೂಜೆಯನ್ನು  ಸ್ವೀಕರಿಸಿ, ಅನುಗ್ರಹಿಸುತ್ತಾನೆ ಎಂಬುದು ನಮ್ಮ ನಂಬಿಕೆ.

ಶಿವರಾತ್ರಿಯಂದು ಜಗತ್ತೇ ಶಿವಮಯವು.ಶಿವನು ಅಭಿಷೇಕ ಪ್ರಿಯ. ಬಿಲ್ವ ಪ್ರಿಯ. ತುಂಬೆ ಪ್ರಿಯ. ಹಾಗಾಗಿ ಈ ದಿನದಂದು ಹಗಲೆಲ್ಲ  ಉಪವಾಸ ಮಾಡಿ ರಾತ್ರಿಯಿಡೀ ಶಿವಪೂಜೆ ಶಿವಧ್ಯಾನದಿಂದ ಜಾಗರಣೆ ಮಾಡಿದರೆ ಪಾಪಕರ್ಮಗಳು ನಿವಾರಣೆಯಾಗಿ ಮುಕ್ತಿ ದೊರೆಯುತ್ತದೆ. ಅಜ್ಞಾನದ ಅಂಧಕಾರವನ್ನು ನೀಗಿಸಿ  ಜ್ಞಾನದ ಬೆಳಕನ್ನು ಕರುಣಿಸು ಎಂದು ಶಿವನಲ್ಲಿ ಬೇಡುವ ದಿನವೇ ಶಿವರಾತ್ರಿಯಾಗಿದೆ. ಶಿವನು ಭಕ್ತಿಪ್ರಿಯ. ಬಸವಣ್ಣನವರು ಹೇಳಿದಂತೆ ನಮ್ಮ ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ. ಆಡಂಬರ ಪ್ರಿಯನಲ್ಲವೇ ಅಲ್ಲ. ಇವೆಲ್ಲಕ್ಕಿಂತ ಶಿವನು  ಭಕ್ತಿಪ್ರಿಯ. ನಿಷ್ಕಲ್ಮಶವಾದ ,ಪರಿಶುದ್ಧವಾದ ಭಕ್ತಿಗೆ ಒಲಿಯುವಂಥವನು. ಅದ್ದರಿಂದ ಶುದ್ಧ ಮನಸ್ಸಿನಿಂದ ಅವನ ಪೂಜೆಯನ್ನು ಮಾಡಿ ಪರಶಿವನ ಕೃಪೆಗೆ ಪಾತ್ರರಾಗೋಣ. ಜಗತ್ತಿನ ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಆ ಪರಮೇಶ್ವರನನ್ನು ಪ್ರಾರ್ಥನೆ ಮಾಡೋಣ. 
                            ಸರ್ವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.

4 ಕಾಮೆಂಟ್‌ಗಳು:

  1. ಮಂಜುಳಾದೇವಿಯವರೆ,
    ಶಿವರಾತ್ರಿಯ ಬಗೆಗೆ ಸುಂದರ ಲೇಖನ. ನಿಮಗೂ ಸಹ ಶಿವರಾತ್ರಿಯ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಸಾರ್......ನಿಮಗೂ ಮತ್ತೊಮ್ಮೆ ಮಹಾಶಿವರಾತ್ರಿಯ ಶುಭಾಶಯಗಳು......!!

    ಪ್ರತ್ಯುತ್ತರಅಳಿಸಿ
  3. nimm ella lekhanagalu tumba chennagive ri.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.