ಗಾಜಿನ ಬಾಗಿಲುಗಳು (Glass Doors)
ಈ ದೇಶದಲ್ಲಿ ದೊಡ್ಡ ಶಾಪ್ ಗಳಿರಲಿ,ಸರ್ಕಾರಿ ಕಛೇರಿಗಳಿರಲಿ,ಯಾವುದೇ ಕಟ್ಟಡಗಳಿಗೂ ನಮ್ಮಲ್ಲಿರುವಂತೆ ಮರದ ಅಥವಾ ಕಬ್ಬಿಣದ ಬಾಗಿಲುಗಳಿರುವುದಿಲ್ಲ.ಉದ್ದುದ್ದವಾದ ಮೂರ್ನಾಲ್ಕು ಗ್ಲಾಸಿನ ಬಾಗಿಲುಗಳಿರುತ್ತವೆ.ಮನೆಗಳಿಗೆ ಮಾತ್ರ ಹೊರಗಿನಿಂದ ಮೆಶ್ ಡೋರಿರುತ್ತದೆ ಅಷ್ಟೆ.ಆದರೆ ದೊಡ್ಡ ದೊಡ್ಡ ಅಂಗಡಿಗಳಿಗೆ ಮೆಶ್ ಡೋರ್ ಸಹ ಇರುವುದಿಲ್ಲ. ರಾತ್ರಿ ವೇಳೆ ಗಾಜಿನ ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಿದರೆ ಮುಗಿಯಿತು.
ರಸ್ತೆಯಲ್ಲಿ ಓಡಾಡುವ ನಮಗೆ ಒಳಗೆ ಜೋಡಿಸಿಟ್ಟಿರುವ ಎಲ್ಲಾ ವಸ್ತುಗಳು ಕಾಣುತ್ತಿರುತ್ತವೆ. ಸಂಜೆ ಏಳಕ್ಕೆ ಅಲ್ಲಿನ ಅಂಗಡಿಗಳೆಲ್ಲ ಬಂದಾಗಿರುತ್ತವೆ.ಬರೀ ಗಾಜಿನ ಬಾಗಿಲುಗಳನ್ನು ಹಾಕಿರುವುದನ್ನು ನೋಡಿ ನನಗಂತೂ ಬಹಳ ಆಶ್ಚರ್ಯವಾಯಿತು.ನನ್ನ ಮಗಳ ಮನೆಯಲ್ಲಿಯೂ ಇದೇ ರೀತಿಯ ದೊಡ್ಡ ದೊಡ್ಡ ಗಾಜಿನ ಬಾಗಿಲುಗಳಿವೆ.ರಾತ್ರಿ ವೇಳೆ ಗ್ಲಾಸಿನ ಮತ್ತು ಮೆಶ್ ಡೋರುಗಳನ್ನು ಲಾಕ್ ಮಾಡಿ ಕರ್ಟನ್ ಎಳೆದರೆ ಮುಗಿಯಿತು.ಕಳ್ಳತನದ ಭಯವಿಲ್ಲ. ಅಲ್ಲದೆ ಇಲ್ಲಿನ ಎಲ್ಲಾ ಮನೆಗಳಲ್ಲಿ ಮತ್ತು ಇತರ ಎಲ್ಲಾ ಕಟ್ಟಡಗಳಲ್ಲಿ ಅಲಾರಾಂ ಮತ್ತು ಸಿ ಸಿ ಕ್ಯಾಮರದ ವ್ಯವಸ್ಥೆಯೂ ಇರುತ್ತದೆ.
ಬಾಳೆ ಮತ್ತು ಕಬ್ಬಿನ ಕೃಷಿ
ಟೌನ್ಸ್ವಿಲ್ ನಿಂದ ಕೈರ್ನ್ಸ್ ಗೆ ಹೋಗುವ ಮಾರ್ಗದಲ್ಲಿ ಬಾಳೆಯ ತೋಟ ನಮ್ಮನ್ನು ಸೆಳೆಯಿತು. ಗೊನೆಗಳಿಗೆ ಪ್ಲಾಸ್ಟಿಕ್ಕಿನ ಚೀಲದಿಂದ ಮುಚ್ಚಿರುವುದನ್ನು ನೋಡಬಹುದು.ಮತ್ತೊಂದು ಸಂಗತಿಯೆಂದರೆ ಇಲ್ಲಿ ಸೇಬನ್ನು ಕಡಿಮೆ ಡಾಲರಿಗೆ ಕೊಳ್ಳಬಹುದು. ಆದರೆ ಒಂದು ಬಾಳೆಹಣ್ಣಿನ ಬೆಲೆ ಮೂರರಿಂದ ಮೂರೂವರೆ ಡಾಲರ್... ! ಅಂದರೆ ಬರೋಬ್ಬರಿ ನೂರೈವತ್ತರಿಂದ ನೂರ ಎಪ್ಪತೈದು ರೂಪಾಯಿಗಳು..!!
ಇತ್ತೀಚೆಗೆ ಬೀಸಿದ "ಯಾಸಿ" ಚಂಡಮಾರುತಕ್ಕೆ ಅಲ್ಲಿನ ಬಾಳೆತೋಟಗಳಿಗೆ ಹೆಚ್ಚಿನ ಹಾನಿಯಾಗಿರುವುದರಿಂದ ಬಾಳೇಹಣ್ಣಿನ ಬೆಲೆ ಹೆಚ್ಚಾಗಲು ಕಾರಣವಾಗಿದೆ.
ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅಸ್ಟ್ರೇಲಿಯಾದ ರಾಜ್ಯ ಕ್ವೀನ್ಸ್ ಲ್ಯಾಂಡಿನ ಆರ್ಥಿಕತೆ ನಿಂತಿದೆ. ಇಲ್ಲಿ ಕಬ್ಬು ಪ್ರಮುಖ ಬೆಳೆ.
ಕಬ್ಬನ್ನು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಾರೆ.ಇದು ಕಬ್ಬನ್ನು ಕಾರ್ಖಾನೆಗೆ ಸಾಗಿಸುವ ರೈಲು.ಬೆಳೆದು ನಿಂತ ಕಬ್ಬನ್ನು ಸಾಗಿಸಲು ಅಲ್ಲಿನವರು ನಮ್ಮಂತೆ ಕಷ್ಟಪಡಬೇಕಿಲ್ಲ. ಕಬ್ಬಿನ ಜಲ್ಲೆಯನ್ನು ಸಣ್ಣ ತುಂಡು ಮಾಡಿ ಈ ರೈಲಿನ ತೊಟ್ಟಿಗಳಲ್ಲಿ ತುಂಬಿಸಲು ಯಂತ್ರವನ್ನು ಬಳಸುತ್ತಾರೆ.ಎಲ್ಲಾ ಬೋಗಿಗಳು ತುಂಬಿದ ನಂತರ ಸ್ವಯಂಚಾಲಿತ ರೈಲು ಅದನ್ನು ಕಾರ್ಖಾನೆಗೆ ತಲುಪಿಸುತ್ತದೆ.
ಅಲ್ಲಿನ ಅತ್ಯಾಧುನಿಕವಾದ ಮತ್ತು ಕಂಪ್ಯೂಟರೀಕೃತವಾದ ಕಾರುಗಳಲ್ಲಿ "ನಾವಿಗೇಟರ್ "ಅನ್ನು ಅಳವಡಿಸಿರುತ್ತಾರೆ.ಇದರ ಸಹಾಯದಿಂದ ಆ ದೇಶದ ಯಾವ ಸ್ಥಳಕ್ಕಾದರೂ ಯಾರ ಮಾರ್ಗದರ್ಶನವಿಲ್ಲದೆ ಹೋಗಬಹುದು.ನಮ್ಮ ಮನೆಯಿಂದ ಹೊರಡುವಾಗ ನಾವು ತಲುಪಬೇಕಾದ ಸ್ಥಳದ ವಿಳಾಸವನ್ನು ಇದರಲ್ಲಿ ಹಾಕಿದರೆ ಸಾಕು. ನಮಗೆ ಅದೇ ಮಾರ್ಗವನ್ನು ತಿಳಿಸುತ್ತಾ ಹೋಗುತ್ತದೆ. ಸರ್ಕಲ್ಲುಗಳು ಬಂದಾಗ ನಾವು ಯಾವ ಕಡೆ ತಿರುಗಿಸಬೇಕು ,ನಾವು ನಮ್ಮ ಗಮ್ಯವನ್ನು ತಲುಪಲು ಇನ್ನೆಷ್ಟು ದೂರ ಪ್ರಯಾಣಿಸಬೇಕು ಎಂಬುದನ್ನೆಲ್ಲಾ ತಿಳಿಸುತ್ತಿರುತ್ತದೆ.ಕೊನೆಗೆ ನಾವು ತಲುಪ ಬೇಕಾದ ತಾಣಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ.ಇದನ್ನು ಕಂಡು ನಮಗೆ ತುಂಬಾ ಅಚ್ಚರಿಯಾಯಿತು.
ಟೌನ್ಸ್ವಿಲ್ ನಲ್ಲಿ ಫ್ಲೈಟ್ ಇಳಿದಾಗ ನಮ್ಮನ್ನು ಕರೆದುಕೊಂಡು ಹೋಗಲು ತಮ್ಮ BMW ಕಾರಿನಲ್ಲಿ ಬಂದಿದ್ದ ನಮ್ಮ ಅಳಿಯ ನಾವಿಗೇಟರ‍್ ನ ಉಪಯೋಗವನ್ನು ನಮಗೆ ತಿಳಿಸಿ ಕೊಟ್ಟರು. ಜನರೇ ಕಾಣದ ಈ ಊರುಗಳಲ್ಲಿ ಇದು ತುಂಬಾ ಪ್ರಯೋಜನಕಾರಿ.
POST OFFICE
ಆಸ್ಟ್ರೇಲಿಯಾ ದೇಶದ ಪೋಸ್ಟ್ ಆಫೀಸು.ನಮ್ಮ ದೇಶದಲ್ಲಿ ಪೋಸ್ಟ್ ಆಫೀಸ್ ಹಿಂದೆ ನಮ್ಮ ಬಿ ಎಸ್ ಎನ್ ಎಲ್ ನ ಸೋದರ ಸಂಸ್ಥೆಯಾಗಿತ್ತು ಎಂಬ ಭಾವ ನನ್ನ ಕ್ಯಾಮರ ಇದರತ್ತ ಹೊರಳಲು ಕಾರಣವಿರಬಹುದು.
ನಾನು ಬಿ ಎಸ್ ಎನ್ ಎಲ್ ಉದ್ಯೋಗಿ. ಹಾಗಾಗಿ ಯಾವ ಪ್ರದೇಶಕ್ಕೆ ಹೋದರೂ ಅಲ್ಲಿನ ಟೆಲಿಪೋನ್ ಎಕ್ಸ್ಚೇಂಜುಗಳು, ಬೂತುಗಳು ನನ್ನ ಗಮನ ಸೆಳೆಯುತ್ತದೆ. ಅಂಥಾದ್ದರಲ್ಲಿ ವಿದೇಶದಲ್ಲಿ ಟೆಲಿಕಾಂ ಕಂಪನಿಗಳು,ಬೂತುಗಳು ನನ್ನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೆ?
AUSTRELIAN TELECOMMUNICATION COMPANY
’ಟೆಲ್ ಸ್ಟ್ರಾ’ ಆಸ್ಟ್ರೇಲಿಯಾದ ಅತಿ ದೊಡ್ಡ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆ.ಹಾಗಾಗಿ ಆಸ್ಟ್ರೇಲಿಯಾದ ಯಾವ ಪ್ರದೇಶಕ್ಕೆ ಹೋದರೂ ಈ ಕಂಪನಿಯ ಬೂತುಗಳನ್ನು ಕಾಣಬಹುದು.ನನ್ನ ಮಗಳು ಟೌನ್ಸ್ವಿಲ್ ನಲ್ಲಿ ಇದೇ ಕಂಪನಿಯಲ್ಲಿ ಉದ್ಯೋಗಿ. ಈ ಬೂತುಗಳು ನನ್ನ ಮನಸೆಳೆಯಲು ಇವಿಷ್ಟು ವಿಚಾರಗಳು ಸಾಕೆನಿಸುತ್ತದೆ.
ನಮ್ಮ ತ್ರಿವರ್ಣಧ್ವಜ
ಕೈರ್ನ್ಸ್ ಗೆ ಹೋಗುವ ದಾರಿಯಲ್ಲಿ ಜೂಸ್ ಕುಡಿಯಲು ಒಂದು ರೆಸ್ಟೋರೆಂಟಿನ ಬಳಿ ಹೋದಾಗ ನೋಡಿದ ದೃಶ್ಯ.ಬೇರೆ ದೇಶದ ಬಾವುಟಗಳ ಜೊತೆ ನಮ್ಮ ಧ್ವಜವೂ ಹೆಮ್ಮೆಯಿಂದ ಹಾರಾಡುತ್ತಾ ನಮಗೆ ಸ್ವಾಗತ ಕೋರುತ್ತಿತ್ತು.ಪರದೇಶದಲ್ಲಿದ್ದಾಗ ನಮ್ಮ ದೇಶದ ಜನರನ್ನು ಕಂಡರೇ ಅರಳುವ ನಮ್ಮ ಮನ, ನಮ್ಮ ತ್ರಿವರ್ಣ ಧ್ವಜ ಹಾರುತ್ತಿರುವುದನ್ನು ನೋಡಿ ಹೆಮ್ಮೆಯಿಂದ ಬೀಗಿತು.