ಋತುಗಾನ.....


            
ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ.ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿರುತ್ತದೆ. ಕಾಲದೊಂದಿಗೆ ಆಗುವ ಬದಲಾವಣೆ ನಮಗೆ ಜೀವನದಲ್ಲಿ ಬಹಳಷ್ಟನ್ನು ಕಲಿಸುತ್ತದೆ. ಕಾಲದ ಚಲನೆಯಲ್ಲಿ ವಸಂತನ ಚಿಗುರಿದೆ, ವರ್ಷನ ಸಿಂಚನವಿದೆ, ಶರತ್ -ಹೇಮಂತರ ಸಂತೃಪ್ತಿಯಿದೆ, ಹಾಗೇ ಗ್ರೀಷ್ಮ-ಶಿಶಿರದ ಬೇಗೆಯೂ ಇದೆ.ಕಷ್ಟಗಳನ್ನು ಕಂಡಾಗಲೇ ಸುಖದ ಬೆಲೆ ತಿಳಿಯುತ್ತದೆ.ಇವುಗಳನ್ನು ಒಂದರ ನಂತರ ಒಂದನ್ನು ಅನುಭವಿಸಿದಾಗಲೇ ಈ ಬದುಕು ಸಾರ್ಥಕ.ಯಾವುದು ಅತಿಯಾದರೂ ಬದುಕು ಬಾಡುತ್ತದೆ. ಸಮರಸದ ಬದುಕು ಎಲ್ಲರ ಆಶಯ. ಪ್ರಕೃತಿಯಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ಗಮನಿಸಿದರೆ ನಮ್ಮ ಬದುಕಿನೊಡನೆ ಅದು ಎಷ್ಟೊಂದು ಹೋಲುತ್ತದೆ ಎನ್ನಿಸುತ್ತದೆ.ಇದರಿಂದ ನಾವು ಕಲಿಯುವುದು ಬಹಳವಿದೆ ಎನ್ನಿಸದಿರದು. ಕಾಲಮಾನಕ್ಕೆ ತಕ್ಕಂತೆ ನಲಿಯುವ,ಉಲಿಯುವ  ಪ್ರಕೃತಿಯಲ್ಲಿನ ಈ ಋತುಗಾನ ಮಾನವನ ಬದುಕಿಗೊಂದು ಪಾಠ.


ಋತುಗಳ ರಾಜನಾದ ವಸಂತಋತುವಿನ ಆಗಮನದಿಂದ ನೂತನ  ಯುಗದ ಆರಂಭ. ಚೈತ್ರ-ವೈಶಾಖ ಮಾಸಗಳ ಕಾಲ. ಹಿತವಾದ ಚಳಿ, ಮಿತವಾದ ಬಿಸಿಲು ವಸಂತನ ಹಿರಿಮೆ. ಪ್ರಕೃತಿಯಲ್ಲಿ ಆಹ್ಲಾದತೆ ತುಂಬಿರುತ್ತದೆ. ಕೋಗಿಲೆಯ ಗಾಯನ, ಹಕ್ಕಿ ಪಕ್ಷಿಗಳ ಕಲರವ, ದುಂಭಿಗಳ ಝೇಂಕಾರ ಮೊಳಗುವ, ನವಿಲು ನರ್ತಿಸುವ ಮೋಹಕ ಕಾಲವಿದು. ಪ್ರಕೃತಿಯಲ್ಲಿ ಜೀವನ್ಮುಖಿಯಾದ ಚಿಗುರು ಕುಡಿಯೊಡೆಯುವ ಸಮಯ.ಎಲ್ಲೆಲ್ಲೂ ಸಂತಸದ ಕಾರಂಜಿ ಚಿಮ್ಮಿಸುವ ಮಧುರವಾದ ಮಾಸವಿದು. ಕಬ್ಬಿಗನ ಕಾವ್ಯಕ್ಕೆ ಸ್ಫೂರ್ತಿ ನೀಡುವ ಮಧುಮಾಸವಿದು.
"ಬೆಡಗಿನ ಲೋಕದ ಹುಡುಗಿಯ ತೆರದಲಿ
 ಬನವಿರೆ ಹೊಸ ವೈಯ್ಯಾರದಲಿ" ಎಂದು ರಸಋಷಿ ಹಾಡಿದರೆ
"ಚಿಗುರು ಚಿಗುರಿಗೆ ಚೆಲುವ ತುಂಬಿಸಿ ಹೂವು ತೋರಣ ಕಟ್ಟಿತು" ಎಂದು ವಿ ಸೀ ಚೈತ್ರಮಾಸವನ್ನು ಬಣ್ಣಿಸುತ್ತಾರೆ.


ಜೇಷ್ಠ-ಆಷಾಢ ಮಾಸಗಳೊಂದಿಗೆ ಗ್ರೀಷ್ಮನ ಆಗಮನವಾಗುತ್ತದೆ. ಆಗತಾನೆ ಕುಡಿಯೊಡೆಯುತ್ತಿರುವ ಜೀವರಾಶಿಯನ್ನು ಪೋಷಿಸಿ,ಬೆಳೆಯಲು ಸಹಕರಿಸುವುದು ಇವನ ಕೆಲಸ. ಇದಕ್ಕೆ ತಕ್ಕುದಾದ ವೇಷವನ್ನು ಧರಿಸುವುದು ಇವನ ಹೊಣೆ. ಗ್ರೀಷ್ಮ- ಹೆಸರೇ ಸೂಚಿಸುವಂತೆ ತೀಕ್ಷ್ಣವಾದ ಬಿಸಿಲಿನ ತಾಪದ ಜೊತೆಗೆ ಆಗಾಗ ಸಿಡಿಲು-ಗುಡುಗಿನ ಆರ್ಭಟದೊಂದಿಗೆ ಸುರಿವ ಮುಂಗಾರಿನ ಮಳೆ ಇವನ ವೈಭೋಗ. ಸೂರ್ಯ,ವರುಣರ ಆರೈಕೆಯಲ್ಲಿ ಸಸ್ಯರಾಶಿ ಭೂಮಿಯಲ್ಲಿ ಬೇರೂರಿ ತಲೆ ಎತ್ತಿ ಬೆಳೆಯುವುದು ಈ ಋತುವಿನ ಒಡನಾಟದಲ್ಲಿ.ಆಷಾಢ ಮಾಸದಲ್ಲಿ ಬೀಸಿ ಬರುವ ಗಾಳಿ, ಮಳೆ ಮೋಡಗಳನ್ನು ಹೊತ್ತು ತಂದು ಸಸ್ಯರಾಶಿಯ ಬೆಳವಣಿಗೆಗೆ ಸಹಕರಿಸುತ್ತದೆ.

ಶ್ರಾವಣ- ಭಾದ್ರಪದ ಮಾಸಗಳ ಜೊತೆಗೆ ಬರುವುದು ವರ್ಷಋತು. ಇದು ಮಳೆಗಾಲ.’ಶ್ರಾವಣ ಬಂತು ಬೆಟ್ಟಕ.. ಬಾನ ಮಟ್ಟಕ..
ಏರ‍್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು’ ಎಂದು ಮಳೆರಾಯನ ಮಹಿಮೆಯನ್ನು ಹಾಡಿದ ಕವಿನುಡಿಯನ್ನು ಮರೆಯಲಾದೀತೆ? ಗುಡುಗು,ಸಿಡಿಲಿನ ಅಬ್ಬರವಿಲ್ಲದೆ, ಘನಗಾಂಭೀರ್ಯದಿಂದ ಸುರಿವ ಮಳೆ ಈ ಋತುವಿನ ವಿಶೇಷ.ಬೇರೂರಿ ನಿಂತ ಸಸ್ಯಕುಲಕ್ಕೆ ಹಸಿರು ಉಡುಗೆಯ ತೊಡಿಸಿ ಮೈಮರೆಸುವ ಕಾಲ. ಹಸಿರು ಹೂವಾಗಿ, ಹೂ ಕಾಯಾಗುವ ಪರ್ವಕಾಲ. ಇದೆಲ್ಲ ವರ್ಷಋತುವಿನ ಕೈಚಳಕ.



ವರ್ಷನ ಕರಾಮತ್ತಿನಿಂದ ಫಲಭರಿತವಾದ ಪ್ರಕೃತಿ ಶರದೃತುವಿನಲ್ಲಿ ವೈಭವದಿಂದ ಕಾಣುತ್ತಾಳೆ.ಆಶ್ವಯುಜ-ಕಾರ್ತಿಕ ಮಾಸಗಳು ಇವನ ಗೆಳೆಯರು.ಸುಡುವ ಬಿಸಿಲ ಬೇಗೆಯಿಲ್ಲ, ಸುರಿವ ಜಡಿಮಳೆಯೂ ಇಲ್ಲದೆ ಜೀವಕ್ಕೆ ಹಿತ ನೀಡುವ ಕಾಲವಿದು. ಕಾಯಿ ಹಣ್ಣಾಗಿ ನಿಲ್ಲುವ ಈ ದಿನಗಳು ಜೀವಕುಲಕ್ಕೆ ಸಂತೃಪ್ತಭಾವ ನೀಡುತ್ತದೆ.


ಮಾರ್ಗಶಿರ-ಪುಷ್ಯ ಮಾಸಗಳೊಡನೆ ಹೇಮಂತನ ಆಗಮನವಾಗುತ್ತದೆ.ಹೇಮಂತನ ಆಣತಿಯಂತೆ ಪ್ರಕೃತಿಯಲ್ಲಿನ ಗಿಡಮರಗಳಲ್ಲಿ ಕಾಯಿ ಹಣ್ಣಾಗಿ,ಹಣ್ಣು ಕಳಿತು ಮುಂದಿನ ಸಂತತಿಗೆ ಬೀಜವಾಗುವ ಪರಿ, ಈ ಕಾಲದ ಮಹಿಮೆ.ಪ್ರಕೃತಿದೇವಿ ಈ ಕಾಲದಲ್ಲಿ ಮಂಜಿನ ಸೆರಗನ್ನೊದ್ದು, ಹಿಮಮಣಿಯ ಆಭರಣವನ್ನಿಟ್ಟು ನಿಂತಿದ್ದಾಳೆ.ಹಿತವಾದ ಬಿಸಿಲಿನೊಡನೆ ಸಣ್ಣದಾಗಿ ಚಳಿ ಅಡಿಯಿಡುವುದು ಈ ಋತುವಿನ ನಿಯಮ.



ಮಾಘ-ಪಾಲ್ಗುಣ ಮಾಸದಲ್ಲಿ ಮೈ ನಡುಗಿಸುವ ಚಳಿಯೊಡನೆ ಶಿಶಿರನ ಪ್ರತಾಪ ಪ್ರಾರಂಭವಾಗುತ್ತದೆ.   ಜೀವಜಲವನ್ನೆಲ್ಲಾ ಹೀರಿ ಮರಗಿಡಗಳ ಹಸಿರಿಗೆ ವಿದಾಯ ಹೇಳುವ, ಯುಗಾಂತ್ಯವ ಸಾರುವ ಋತುವಿದು.ಮರಣಮುಖಿ ಹಣ್ಣೆಲೆಗಳನ್ನೆಲ್ಲ ನಿರ್ದಯವಾಗಿ ಉದುರುಸಿ ಬರಡಾಗಿಸುವ ಇವನ ಹೊಡೆತಕ್ಕೆ ಪ್ರಕೃತಿ ಬೋಳಾಗುತ್ತಾಳೆ. ಇದು ಬಂದ ನೋವನ್ನು ನುಂಗುವ ಸಮಯ.ಸುಖದ ನಿರೀಕ್ಷೆಯಲ್ಲಿ ಕಾಲತಳ್ಳುವ ದಿನಗಳಿವು. ಆದರೆ ಶಿಶಿರನು ವಸಂತನಿಗೆ ಮಾರ್ಗ ತೋರಲು ಬಂದಿದ್ದಾನೆ ಎಂಬುದಂತೂ ಸತ್ಯ.



ಕಾಲಚಕ್ರ ತಿರುಗಲೇಬೇಕು. ಮತ್ತೆ ವಸಂತ ಬರಲೇಬೇಕು.ಮಾವು ಚಿಗುರಲೇಬೇಕು,ಕೋಗಿಲೆಯ ಮಧುರ ಕಂಠ ಮೊಳಗಲೇಬೇಕು.ಕಾಯುವ ತಾಳ್ಮೆಯೊಂದಿರಬೇಕು ಅಷ್ಟೇ."ತೊಲಗಿತು ಮಾಗಿ ಎನ್ನುತ ಕೂಗಿ ಮುಕ್ತಿಯ ಸಾರೈ ಸ್ವರಯೋಗಿ" ಎನ್ನುತ್ತಾರೆ ಕುವೆಂಪು.ಕಾಲಕ್ಕೆ ತಕ್ಕಂತೆ ಬದಲಾಗುವ ಋತುವಿನ ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕಿದಾಗಲೇ ಬದುಕು ಪರಿಪೂರ್ಣ.ಇದು ಪ್ರಕೃತಿಯಿಂದ ಮಾನವ ಕಲಿಯಬೇಕಾದ ಪಾಠ. ಋತುಗಳ ರಾಜ ವಸಂತ ಮತ್ತೊಮ್ಮೆ ಬರುತ್ತಿದ್ದಾನೆ, ನಮ್ಮ ಸುತ್ತಮುತ್ತಲಿನ ನಿಸರ್ಗದಲ್ಲಿ ಬದಲಾವಣೆ ನಿಚ್ಚಳವಾಗಿ ಕಾಣತೊಡಗಿದೆ. ಸಸ್ಯಸಂಕುಲದಲ್ಲಿ, ಪಕ್ಷಿಸಂಕುಲದಲ್ಲಿ ವಸಂತನ ಆಗಮನಕ್ಕೆ ಎಲ್ಲವೂ ಅಣಿಯಾಗಿದೆ. ಸಂತಸ ಮೇರೆ ಮೀರಿದೆ. ನಾವೂ ಈ ಹರುಷದಲ್ಲಿ ಭಾಗಿಯಾಗೋಣ.

"ಮಧುವೆ ಬಾರ ಮುದವ ತಾರ ನೀನೆ ದೇವ ದೂತನು
ಪರದ ಚಿಂತೆ ಮರೆಯದಂತೆ ಕಳುಹುವನು ವಿಧಾತನು
ಭುವಿಯ ಸಿಂಗರಿಸುತ ಬಾರ
ಪರದ ಬೆಳಕನಿಳೆಗೆ ತಾರ
ಸೊಬಗೆ ಶಿವನು ಎಂದು ಸಾರ
ಬಾರ ಶಕ್ತಿದಾಯಕ
ಹಳೆತ ಕೂಡಿ ಹೊಸತು ಮಾಡಿ ಬಾರೆಲೆ ಋತುನಾಯಕ" ಎಂದು ಕವಿನುಡಿಯನ್ನು ನಾವೆಲ್ಲರೂ ಹಾಡೋಣ,ಶುಭಹಾರೈಸೋಣ.

ಆತ್ಮೀಯ ಬ್ಲಾಗಿಗರೆ, ನಿಮಗೆಲ್ಲರಿಗೂ ವಸಂತೋತ್ಸವದ ಶುಭಾಶಯಗಳು.



6 ಕಾಮೆಂಟ್‌ಗಳು:

  1. ಒಪ್ಪ ಓರಣದ ಸು೦ದರ ಬರಹ. ಚಿತ್ರ-ಚಿತ್ರಣಗಳ ಜುಗಲಬ೦ದಿಯೊಡನೆ ಕವಿ-ವಾಣಿಯ ಸರಮಾಲೆ ಮನ ಮುದಗೊಳಿಸಿತು. ಶುಭಾಶಯಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  2. ಅನಂತರಾಜ್ ರವರೆ,
    ನಿಮ್ಮ ಸವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಕಾಲಕಾಲಕ್ಕೆ ನಿಸರ್ಗದಲ್ಲಿ ಕಾಣುವ ಬದಲಾವಣೆಗಳನ್ನು ಚೆನ್ನಾಗಿ ವರ್ಣಿಸಿದ್ದೀರಿ.

    ಪ್ರತ್ಯುತ್ತರಅಳಿಸಿ
  4. ವಿವೇಕ್,
    ನನ್ನ ಬ್ಲಾಗ್ ಗೆ ಸ್ವಾಗತ,ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. ಮಂಜುಳಾದೇವಿಯವ್ರೇ, ಋತು ಚಿತ್ರ ಮತ್ತು ಚಕ್ರಗಳ ಪರಿಚಯ ವಿಶಿಷ್ಟರೀತಿಯಲ್ಲಿ ಮಾಡಿಕೊಟ್ಟಿರಿ...ನಿಮ್ಮ ಬ್ಲಾಗ್ ಗೆ ಮೊದಲ ಹೆಜ್ಜೆ...ಮುಂದುವರೆಸಿ...

    ಪ್ರತ್ಯುತ್ತರಅಳಿಸಿ
  6. ಜಲನಯನರವರೆ,ನಿಮಗೆ ಸ್ವಾಗತ.
    ಮೆಚ್ಚುಗೆಯ ಮಾತಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.