ವಿದೇಶ ವಿಹಾರ-1---ಗೃಹ ಪ್ರವೇಶ ಸಮಾರಂಭ


ಆಸ್ಟ್ರೇಲಿಯಾ ದೇಶದ ಕ್ವೀನ್ಸ್ ಲ್ಯಾಂಡ್  ರಾಜ್ಯದ ಟೌನ್ಸ್ವಿಲ್ ನಲ್ಲಿ ನಮ್ಮ ಅಳಿಯ-ಮಗಳು ಮನೆ ಕಟ್ಟಿಸಿದ್ದಾರೆ. ನೂತನ ಮನೆ ’ಮಿಲನ’ ದ ಗೃಹಪ್ರವೇಶಕ್ಕೆಂದು ನಮ್ಮೆಲ್ಲರನ್ನು  (ನಾನು,ನನ್ನವರು ಮತ್ತು ನಮ್ಮ ಅಳಿಯನ ತಂದೆ-ತಾಯಿ,ತಂಗಿ-ತಮ್ಮ) ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದರು. ಹಾಗಾಗಿ ನಾವೆಲ್ಲರೂ ಒಟ್ಟಿಗೆ ವಿದೇಶ ಪ್ರವಾಸ ಮಾಡುವ ಯೋಗ ಕೂಡಿಬಂದಿತ್ತು.ಇದು ನಮ್ಮ ಮೊದಲ ವಿದೇಶಯಾತ್ರೆ. ಆಗಸ್ಟ್ ೨೦೧೧ ರಲ್ಲಿ ಮಗಳ ಮನೆಯಲ್ಲಿ ಕಳೆದ ಆ ದಿನಗಳು ನನ್ನ ಬದುಕಿನ ಅವಿಸ್ಮರಣೀಯ ಗಳಿಗೆಗಳು.  ಅ ಸವಿ ನೆನಪಿನ ಗುಂಗಿನಲ್ಲಿ ನಾನು ಈ ಲೇಖನಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಒಂದು ತಿಂಗಳ ವಿದೇಶದಲ್ಲಿನ ನನ್ನ ಅನುಭವಗಳನ್ನು ನನ್ನದೇ ಆದ ಮಾತುಗಳಲ್ಲಿ ನನ್ನ ಬ್ಲಾಗಿನಲ್ಲಿ ದಾಖಲಿಸುವುದು ನನಗೆ ಅತ್ಯಾನಂದವೇ ಸರಿ.

ಪರದೇಶಕ್ಕೆ ಮೊದಲು ಹೋದಾಗ  ನಮ್ಮ ದೇಶದಲ್ಲಿ ಸಿಗುವ ಯಾವ ವಸ್ತುಗಳು ಇಲ್ಲಿ ಸಿಗುತ್ತವೆ,ಅಲ್ಲಿನವರಿಗೂ ನಮಗೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳೇನು ಎಂಬುದನ್ನು ನಾವು ಹುಡುಕಲು ಶುರುಮಾಡಿಕೊಳ್ಳುತ್ತೇವೆ.ನಮ್ಮ ದೇಶದ ಜನ ಮತ್ತು ವಸ್ತುಗಳನ್ನು ಕಂಡರೆ ಅಭಿಮಾನ ಉಕ್ಕಿ ಹರಿಯುತ್ತದೆ.ಅಲ್ಲದೆ ಆ ದೇಶದ ಜನರ ನಡೆ-ನುಡಿಯ ಬಗ್ಗೆ ಅರಿಯಬೇಕೆಂಬ ಕುತೂಹಲ ಮೂಡುವುದೂ ಸಹಜವೇ.  ಇಲ್ಲಿ ಈ ವಿಷಯಗಳೇ ನನ್ನ ಲೇಖನದ ವಸ್ತುಗಳು.

ನಾವು ಟೌನ್ಸ್ವಿಲ್ ನ ನನ್ನ ಮಗಳ ಮನೆ ತಲುಪಿದ  ಮರುದಿನವೇ ಅಂದರೆ ಆಗಸ್ಟ್ ನಾಲ್ಕನೆ ತಾರೀಖು  ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು.ಹಾಗಾಗಿ ಅಲ್ಲಿಂದಲೇ ನನ್ನ ವಿದೇಶ ಯಾತ್ರೆಯ ಅನುಭವವನ್ನು ಆರಂಭಿಸುತ್ತೇನೆ.

ಟೌನ್ಸ್ವಿಲ್ ಏರ್ ಪೋರ್ಟಿನಿಂದ ಇಳಿದು ನನ್ನ ಮಗಳ ಮನೆಯನ್ನು ಪ್ರವೇಶಿಸುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಬಾಳೆಯ ಕಂದು ಮತ್ತು ಮಾವಿನಸೊಪ್ಪು.ಗೃಹಪ್ರವೇಶ ಸಮಾರಂಭಕ್ಕಾಗಿ ನಮ್ಮ ಅಳಿಯನ ಸ್ನೇಹಿತರ ತೋಟದಿಂದ ಅವುಗಳನ್ನು ತರಿಸಿಟ್ಟಿದ್ದರು.ದಾಸವಾಳದ ಹೂಗಳೂ ಸಮೃದ್ಧಿಯಾಗಿ ಸಿಕ್ಕಿದ್ದವು.ಶಿವನ ಪೂಜೆಗೆ ಶ್ರೇಷ್ಟವಾದ ರುದ್ರ ಗೊರಟೆ ಗಿಡವನ್ನು ನೋಡಿ ಬಿಲ್ವಪತ್ರೆಯನ್ನು ಕಂಡಂತೆ ಆನಂದವಾಯಿತು.

ಇವುಗಳನ್ನು ನೋಡಿ ನಮ್ಮ ದೇಶದಲ್ಲೇ ಇದ್ದೇವೇನೋ ಎನ್ನುವ ಭಾವ ಒಂದು ಕ್ಷಣ ಬಂದು ಹೋಯಿತು....


ಗೃಹಪ್ರವೇಶದ ಹೋಮಕ್ಕೆಂದು ಸಿಡ್ನಿಯಿಂದ ಭಟ್ಟರನ್ನು ಕರೆಸಿದ್ದರು.ಅವರ ಹೆಸರು ಶ್ರೀ ಹೃಷಿಕೇಶ್ ಭಟ್. ಅವರು ಮೂಲತಃ ದಕ್ಷಿಣ ಭಾರತದ ತಿರುಪತಿಯವರು.ಇಪ್ಪತ್ತು ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳೇ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ.ಅಲ್ಲಿ ನೆಲೆಸಿರುವ ಭಾರತೀಯರ ಮನೆಗಳಲ್ಲಿ ಸತ್ಯನಾರ‍ಾಯಣ ಪೂಜೆ,ಶುಭ ಸಮಾರಂಭಗಳಲ್ಲಿ ಹೋಮ ಹವನಗಳನ್ನು ಮಾಡಿಕೊಡುತ್ತಾರೆ.

ಹೃಷಿಕೇಶ್ ಭಟ್ ರವರ ನೇತೃತ್ವದಲ್ಲಿ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ವಿನಾಯಕನ ಪೂಜೆ ಮೊದಲುಗೊಂಡು ಕಲಶ ಪೂಜೆ,ವಾಸ್ತು ,ನವಗ್ರಹ ಮತ್ತು ಮೃತ್ಯುಂಜಯ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು.ಹೋಮವನ್ನು  ಮಾಡಿಸುವ ಉದ್ದೇಶವನ್ನು ಈಗಿನ ಮಕ್ಕಳಿಗೆ ಅರ್ಥವಾಗುವಂತೆ ಅಂದರೆ ಕಂಪ್ಯೂಟರ್ ಹಾರ್ಡ್ವೇರ್, ಸಾಫ್ಟ್ ವೇರ್ ಗಳ ಉದಾಹರಣೆಯೊಂದಿಗೆ ಪುರೋಹಿತರು ಚೆನ್ನಾಗಿ ವಿವರಿಸಿದರು.ಮಗಳು-ಅಳಿಯ ಇಬ್ಬರೂ ಭಟ್ಟರೊಂದಿಗೆ ಕುಳಿತು ಹೋಮವನ್ನು ಸಾಂಗವಾಗಿ ನೆರವೇರಿಸಿದರು.

ಅಗ್ನಿದೇವ ಸುಪ್ರೀತನಾದನು. ಮನೆಯೆಲ್ಲಾ ಹೋಮದ ಸುಗಂಧದಿಂದ ತುಂಬಿತು.ಅಂತೆಯೇ ನಮ್ಮ ಮನದಲ್ಲಿ ಹರುಷವೂ ತುಂಬಿ ಬಂತು.

ವಿದೇಶದಲ್ಲಿ ಅದರಲ್ಲೂ ಆಸ್ಟೇಲಿಯಾದಲ್ಲಿ ಹೋಮಕುಂಡವನ್ನು ಕಂಡು ನಮಗೆಲ್ಲಾ ಆಶ್ಚರ್ಯವಾಯಿತು. ಅಲ್ಲಿನ ಭಾರತೀಯರೊಬ್ಬರು ಹೋಮಕುಂಡವನ್ನು ಇಟ್ಟುಕೊಂಡಿದ್ದು, ಸಮಯಕ್ಕೆ ನಮಗೆ ಸಿಕ್ಕಿದ್ದು ತುಂಬಾ ಅನುಕೂಲವಾಯಿತು.ದಂಪತಿಗಳಿಂದ ಹೊಸ ಮನೆಯ ಬಾಗಿಲ ಪೂಜೆಯನ್ನೂ ಮಾಡಿಸಿದರು.

ಅತ್ತ ಹೋಮ ನಡೆಯುತ್ತಿರುವಾಗ ಮನೆಯವರು ಮತ್ತು ಅಗಮಿಸಿದ್ದ ಭಾರತೀಯ ಮಿತ್ರರೆಲ್ಲಾ ಸೇರಿ ಗ್ಯಾಸ್ ಸ್ಟವ್ ಪೂಜೆ ಮಾಡಿ ಹಾಲು ಉಕ್ಕಿಸಿ ನೂತನ ಮನೆಯಲ್ಲಿ ಸುಖ,ಶಾಂತಿ,ಸಮೃದ್ಧಿಯನ್ನು ತಾರೆಂದು ಬೇಡಿಕೊಂಡೆವು.


ಕುಂಬಳಕಾಯಿಯನ್ನು(ಸಮಯಕ್ಕೆ ಸರಿಯಾಗಿ ಬೂದುಗುಂಬಳ ಸಿಗಲಿಲ್ಲ ಅಷ್ಟೆ)  ಒಡೆದು ದೃಷ್ಟಿ ತೆಗೆದದ್ದೂ ಆಯಿತು.

ಬಂದವರಿಗೆಲ್ಲಾ ಭಟ್ಟರ ಆಶೀರ್ವಾದದೊಂದಿಗೆ ಪ್ರಸಾದ ವಿನಿಯೋಗವಾಯಿತು.ನಮ್ಮೂರಿನ ಕಾಯಿಹೋಳಿಗೆಯೊಡನೆ ಅಲ್ಲಿ ತಯಾರಿಸಿದ ರುಚಿಯಾದ ಪರೋಟ,ಮೋದಕ, ಪಾಯಸದ ಮಿನಿ ಔತಣವಾಯಿತು.  


ದೂರದ ದೇಶದಲ್ಲಿ ಗೃಹಪ್ರವೇಶ ಹೇಗೆ ನಡೆಯುತ್ತದೋ ಎಂಬ ಅಳುಕಿತ್ತು.ದೇವರ ಅನುಗ್ರಹದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ವಿಧಿವತ್ತಾಗಿ ಕಾರ್ಯಕ್ರಮ ನೆಡೆದದ್ದು ಸಮಾಧಾನವಾಯಿತು.ಪರಸ್ಥಳದಲ್ಲಿ ಮನೆ ಕಟ್ಟಲು ಮತ್ತು ನಮ್ಮ ಸಂಪ್ರದಾಯದಂತೆ ಗೃಹಪ್ರವೇಶ ಮಾಡಬೇಕೆಂದು ನಮ್ಮ ಅಳಿಯ-ಮಗಳು ಇಬ್ಬರೂ ತುಂಬಾ ಕಷ್ಟಪಟ್ಟಿದ್ದರು.ಅವರ ಶ್ರಮ ಇಂದು ಸಾರ್ಥಕವಾಯಿತು.ಅವರಿಬ್ಬರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ.

ಜಾಗತೀಕರಣದ ಪ್ರಭಾವದಿಂದಾಗಿ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಭಾರತೀಯರು ವಾಸವಾಗಿದ್ದಾರೆ. ಪರದೇಶದಲ್ಲೂ ನಮ್ಮ ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ನಾವು ಉಳಿಸಿಕೊಳ್ಳಲು ಬೇಕಾದ ಸಾಕಷ್ಟು ವ್ಯವಸ್ಥೆಯೂ ಈಗ ಎಲ್ಲೆಡೆಯೂ ಇದೆ.ಇದನ್ನು ಹುಡುಕಿಕೊಂಡು ಹೋಗುವ ತಾಳ್ಮೆ,ಮನೋಬಲ ನಮ್ಮಲ್ಲಿರಬೇಕು. ಅಲ್ಲದೆ ಅಲ್ಲಿರುವ ಭಾರತೀಯರೆಲ್ಲ ಬೆರೆತು ಬಾಳಬೇಕು ಅಷ್ಟೆ. ಟೌನ್ಸ್ವಿಲ್ ನಲ್ಲಿ ನೆಲೆಸಿರುವ ಭಾರತೀಯರಲ್ಲಿ ನಾನಿದನ್ನು ಕಂಡು ಸಂತಸಪಟ್ಟೆ.

10 ಕಾಮೆಂಟ್‌ಗಳು:

  1. ನಿಮಗೆ, ನಿಮ್ಮ ಮಗಳು ಹಾಗು ಅಳಿಯಂದರಿಗೆ ಶುಭಾಶಯಗಳು. ದೂರದ ದೇಶದಲ್ಲಿಯೂ ಸಹ ಭಾರತೀಯತೆಯನ್ನು ಪೋಷಿಸುತ್ತಿರುವದು ಖುಶಿ ನೀಡುತ್ತಿದೆ.

    ಪ್ರತ್ಯುತ್ತರಅಳಿಸಿ
  2. ಸುನಾಥ್ ಸಾರ್,
    ನಿಮ್ಮ ಪ್ರತಿಕ್ರಿಯೆ ಮತ್ತು ಶುಭ ಹಾರೈಕೆಗಳಿಗೆ ವಂದನೆಗಳು.
    "ಎಲ್ಲಾದರು ಇರು
    ಎಂತಾದರು ಇರು
    ನಮ್ಮ ಸಂಸ್ಕೃತಿಯನ್ನು ಮರೆಯದಿರು" ಎನ್ನುವುದೇ ನಮ್ಮ ಆಶಯ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಪ್ರವಾಸ ಕಥನ ತು೦ಬಾ ಆತ್ಮೀಯವಾಗಿದೆ. ನಿರೂಪಣೆಯೊಡನೆ, ಪೈಪೋಟಿ ನೀಡುವ ಅನುರೂಪ ಚಿತ್ರಗಳೂ ಕೂಡ ಚಿತ್ತಾಕರ್ಷಿಸುತ್ತವೆ. ಭಾರತೀಯರು ಯಾವಾಗಲೂ ಬೆರೆತು ಬಾಳುವವರೇ ಅಲ್ಲವೆ? ಸ೦ತಸ ಕ್ಷಣಗಳನ್ನು ನಮ್ಮೊಡನೆ ಹ೦ಚಿಕೊ೦ಡ ನಿಮಗೆ ಮತ್ತು ಎಲ್ಲ ಕುಟು೦ಬವಗ೯ಕ್ಕೆ ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  4. ಸುಸ೦ಸ್ಕೃತ ಆಶಯವನ್ನು ಹೊತ್ತ ಸು೦ದರ ಬರಹ..

    ನಿಮ್ಮ ಮಗಳ ಮನೆಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ತಿಳಿದು ಸ೦ತೋಷವಾಯಿತು.
    ನಿಮಗೂ, ನಿಮ್ಮ ಮಗಳು ಅಳಿಯ ಅವರಿಗೂ ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  5. ಅನಂತರಾಜ್ ರವರೆ,
    ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.ನೀವಂದಂತೆ ಸಹಬಾಳ್ವೆ ನಮ್ಮ ಉಸಿರು. ನಿಮ್ಮ ಶುಭ ಹಾರೈಕೆಗೆ ವಂದನೆಗಳು

    ಪ್ರತ್ಯುತ್ತರಅಳಿಸಿ
  6. ಮನಮುಕ್ತಾರವರೆ,
    ನಿಮ್ಮ ಅಭಿಪ್ರಾಯಕ್ಕೆ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ವಂದನೆಗಳು.ಇದು ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  7. ಮಂಜುಳಾದೇವಿಯವರೇ,
    ನಿಮ್ಮ ಮಗಳು-ಅಳಿಯ ಅವರ ನೂತನ ಮನೆ ’ಮಿಲನ’ ದ ಗೃಹಪ್ರವೇಶಕ್ಕೆ ನಮ್ಮನ್ನೂ ಕರೆದೊಯ್ದು, ಸ೦ಭ್ರಮವನ್ನು ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು! ನಿಮ್ಮೆಲ್ಲರಿಗೂ ಶುಭಾಶಯಗಳು. ಸು೦ದರ ಚಿತ್ರಗಳೊ೦ದಿಗಿನ ಬರಹ ಆತ್ಮೀಯವಾಗಿದೆ.

    ಪ್ರತ್ಯುತ್ತರಅಳಿಸಿ
  8. ಪ್ರಭಾಮಣಿಯವರೆ,
    ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ ನಿಮಗೆ ನಮನಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರೆಯಲಿ.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.