ವಿದೇಶ ವಿಹಾರ - 6- "ಸೂರ್ಯೋದಯ" ಮತ್ತು "ಚಂದ್ರೋದಯ".


2012-ನೂತನ ವರ್ಷದ ಹಾರ್ಧಿಕ ಶುಭಾಶಯಗಳು 
(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ಸೂರ್ಯೋದಯ

"ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯೆ ಕಣೋ"
ಎಂದಿದ್ದಾರೆ ನಮ್ಮ ಜಗದ ಕವಿ ಯುಗದ ಕವಿ ಕುವೆಂಪು.
ಸೃಷ್ಟಿಯ ಅದ್ಭುತಗಳನ್ನು ಸವಿಯಲು,ಅದರಲ್ಲಿ ದೇವರನ್ನು ಕಾಣಲು ಸಾಮಾನ್ಯರಾದ ನಮಗೆ ಸುಲಭ ಸಾಧ್ಯವೆ....?

ನನ್ನ ಆಸ್ಟೇಲಿಯಾ ಪ್ರವಾಸದಲ್ಲಿ ನಾನು ಕಂಡ ನಯನ ಮನೋಹರ ದೃಶ್ಯಗಳ ವೈಭವವನ್ನಿಲ್ಲಿ ದಾಖಲಿಸಲೇಬೇಕು.ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಿ ಕಂಡ   "ಸೂರ್ಯೋದಯ" ಮತ್ತು ಕ್ರೈನ್ಸ್ ನಿಂದ ಮರಳುವಾಗ ನೋಡಿದ "ಚಂದ್ರೋದಯ"ವನ್ನು ನಾನೆಂದೂ ಮರೆಯಲಾರೆ. ಭೌಗೋಳಿಕವಾಗಿ ನಡೆಯುವ ಈ ಎರಡು ಅಪರೂಪದ ದೃಶ್ಯಗಳನ್ನು ಆನಂದದಿಂದ ಅನುಭವಿಸುವ ಅವಕಾಶ ನಮ್ಮದಾಯಿತು.

ವಿಸ್ತಾರವಾದ,ಅಲೆಗಳ ಆರ್ಭಟವಿಲ್ಲದ, ಹೆಸರಿಗೆ ತಕ್ಕಂತೆ ಪ್ರಶಾಂತವಾಗಿರುವ ಶಾಂತ ಸಾಗರವನ್ನು ನೋಡುವುದೇ ಚೆಂದ. ಮುಂಜಾನೆ ದಿಗಂತದಲ್ಲಿ ಸೂರ್ಯ ಸಮುದ್ರದೊಳಗಿನಿಂದ ಮೇಲೇರಿ ಬರುವ ಅಪೂರ್ವ ದೃಶ್ಯ ಕಣ್ಣಿಗೆ ಹಬ್ಬವೇ ಸರಿ.ಸೂರ್ಯ ಆಗಮಿಸುವ ಸಮಯವಾಯ್ತೆಂದು ಬಾನೆಲ್ಲ ಕೆಂದಾರತಿಯನ್ನಿಡಿದು ಸ್ವಾಗತಕ್ಕೆ ಅಣಿಯಾಯಿತು.ಸಾಗರವೆಲ್ಲಾ ಕೆಂಪಾಗಿ ಭೂಮಿ-ಬಾನಿನ ನಡುವಿನ ಅಂತರವೇ ಕಾಣದಾಯಿತು.ಆಗ ಸುವರ್ಣ ಬಣ್ಣದ ಬೆಳಕು ದಿಗಂತದಲ್ಲಿ ಮೇಲೇರ ತೊಡಗಿದಂತೆ ರಕ್ತ ವರ್ಣದ ಆಗಸ ಚಿನ್ನದ ಬಣ್ಣವಾಗತೊಡಗಿತು.ಸೂರ್ಯನ ರಶ್ಮಿ ನಿಧಾನವಾಗಿ ಜಗತ್ತನ್ನು ತುಂಬತೊಡಗಿತು.ದಿಗಂತದಿಂದ ಮೇಲೇರಿದ ರವಿಯ ಚಿನ್ನದ ಕಿರಣಗಳು ನಮ್ಮನ್ನು ತಾಕಿ ಆನಂದವನ್ನುಂಟು ಮಾಡಿದವು.ಮೋಡದ ವಾತಾವರಣದ ಕಾರಣ ಕನ್ಯಾಕುಮಾರಿಯಲ್ಲಿ ಅನುಭವಿಸಲಾಗದ ದೃಶ್ಯ ವೈಭವದ ಅನುಭವ ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಾಯಿತು.    
"ಚಂದ್ರೋದಯ"


ಕೈರ್ನ್ಸ್ ನ ಸುತ್ತಾಮುತ್ತಾ ಪ್ರ‍ೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ವಾಪಾಸು ನಮ್ಮ ಮಗಳು-ಅಳಿಯನ ಊರು ಟೌನ್ಸ್ವಿಲ್ ಗೆ ಹಿಂದಿರುತ್ತಿದ್ದೆವು.ಆ ದಿನ ಸಂಕಷ್ಟ ಹರ ಚತುರ್ಥಿ. ಪ್ರತಿ ತಿಂಗಳೂ ಈ ದಿನ ಉಪವಾಸವಿದ್ದು ಸಂಜೆ ಗಣಪತಿ ಪೂಜೆ ಮಾಡಿ ರಾತ್ರಿ ಚಂದ್ರನನ್ನು ನೋಡುವ ಪದ್ಧತಿ ನನ್ನದು.ರ‍ಾತ್ರಿ ಎಂಟು ಗಂಟೆಯ ವೇಳೆಗೆ ದಾರಿಯಲ್ಲಿ ನಮ್ಮ ಹುಂಡೈ ವ್ಯಾನು ಗಾಳಿಯಲ್ಲಿ ತೇಲಿದಂತೆ ಹೋಗುತ್ತಿತ್ತು. ರಸ್ತೆ ಉಬ್ಬುತಗ್ಗುಗಳಿಲ್ಲದೆ ಸಮನಾಗಿತ್ತು.ನುಣುಪಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ ಹಾಗೇ ಜೊಂಪು ಬಂದಂತೆ ಆಗುತ್ತಿತ್ತು.ಕನ್ನಡ-ಹಿಂದಿ ಹಾಡುಗಳನ್ನು ಕೇಳುತ್ತಾ ದಾರಿ ಸಾಗುತ್ತಿದ್ದುದೇ ತಿಳಿಯುತ್ತಿರಲಿಲ್ಲ.ಒಂದೇ ದಿನ ೪೫೦-೫೦೦ ಕಿ ಮಿ ಓಡಾಡಿದರೂ ದಣಿವೆನ್ನಿಸಲಿಲ್ಲ.

ನಾನು ಕಿಟಕಿಯಿಂದ ಹೊರಗೆ ಅಷ್ಟೇನೂ ದಟ್ಟವಾಗಿರದ ಕಾಡು, ಮರ-ಗಿಡಗಳನ್ನು ನೋಡುತ್ತಾ ಕುಳಿತಿದ್ದೆ.ರಸ್ತೆಯ ಇಕ್ಕೆಲಗಳಲ್ಲೂ ನಮ್ಮ ಮಲೆನಾಡಿನಷ್ಟು ದಟ್ಟವಾಗಿರದ ಕಾಡು.ನಮ್ಮ ದೇಶದ ಪ್ರಕೃತಿ ಸಂಪತ್ತು ಅಪಾರ.ಅದು ನಮಗೆ ದೇವರಿತ್ತ ವರ.ನಮ್ಮ ದೇಶದಲ್ಲಿನ ಸಮೃದ್ಧವಾದ ಮತ್ತು ವೈವಿಧ್ಯಮಯವಾದ ಸಸ್ಯರಾಶಿಗಳನ್ನಾಗಲೀ, ಪ್ರಾಣಿಪ್ರಪಂಚವನ್ನಾಗಲೀ ಆಸ್ಟೇಲಿಯಾದಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲಿ ನಮ್ಮ ನೀಲಗಿರಿ ಜಾತಿಗೆ ಸೇರಿದ ಮರಗಳೇ ಹೆಚ್ಚು.ಅವು ನೇರವಾಗಿ ಎತ್ತರಕ್ಕೆ ಬೆಳೆದಿರುತ್ತವೆ.ಹಾಗಾಗಿ ಕಾರಿನಲ್ಲಿ ಕುಳಿತು ರಸ್ತೆಯ ಪಕ್ಕಕ್ಕೆ ತುಂಬಾ ದೂರದವರೆಗೆ ದೃಷ್ಠಿಹಾಯಿಸಬಹುದು. ಹಾಗಾಗಿ ದೂರದಲ್ಲಿ ಬಾನು-ಭೂಮಿ ಒಂದಾದ ಅನುಭವ ನನಗಾಗುತ್ತಿತ್ತು. ಮರಗಳ ಮಧ್ಯೆ ದೂರದಲ್ಲಿ ವಸುಂಧರೆಯ ಒಡಲಿನಿಂದ ನಸುಗೆಂಪು ವರ್ಣದ ಆಕೃತಿಯ ತುಣುಕೊಂದು ಗೋಚರವಾದಂತಾಯ್ತು...! ಅರೆ... ಇದೇನು ಎಂದು ಒಂದರೆಕ್ಷಣ ಅಚ್ಚರಿಯಾಯಿತು.ಆದರೆ ತಕ್ಷಣ ತಿಳಿಯಿತು ... ಅದು "ಚಂದ್ರೋದಯ"ವೆಂದು.ನನ್ನ ಕಣ್ಣನ್ನು ಅಲ್ಲಿಂದ ಕದಲಿಸಲಾಗಲಿಲ್ಲ.ಕೊಂಚ ಕೊಂಚವೇ ಮೇಲೇರಿ ಬರುವ ಅರ್ಧ ಚಂದ್ರ ಪೂರ್ಣಚಂದಿರನಾಗುವ ದೃಶ್ಯ ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ನೆಲೆ ನಿಂತಿತು.

ಸಾಮಾನ್ಯವಾಗಿ ನಾವು ನಮ್ಮ ಕಾಂಕ್ರಿಟಿನ ನಗರದಲ್ಲಿ ಉದಯಿಸುತ್ತಿರುವ ಚಂದ್ರನ ಸೊಬಗನ್ನು ಕಾಣಲಸಾಧ್ಯ.ನಾವೇನಿದ್ದರೂ ಬಾನೇರಿ ನಿಂತ ಶಶಿಯನ್ನು ನೋಡಿ ತೃಪ್ತಿಪಡಬೇಕು ಅಷ್ಟೆ .
ನೋಡನೋಡುತ್ತಿದ್ದಂತೆ ಮೇಲೇರಿ ಬರುವ ಕಿತ್ತಳೆ ಬಣ್ಣದ ಪೂರ್ಣಚಂದ್ರ‍ನ ರೂಪವನ್ನು ತುಂಬಿಕೊಳ್ಳಲು ನನ್ನೆರಡು ಕಣ್ಣುಗಳು ಸಾಲದಾಯಿತು.ನಿಮಿಷಗಳು ಸರಿದಂತೆ ಬೆಳ್ಳಗೆ ಹೊಳೆಯುವ ತುಂಬುಚಂದಿರ ನಗುತ್ತಾ ಬೆಳದಿಂಗಳನ್ನು ಚೆಲ್ಲುತ್ತಾ ನಮ್ಮ ದಾರಿಗೆ  ಜೊತೆಯಾದ.ಗಣಪನ ಪೂಜೆಗೆ ಮುನ್ನವೇ ಚಂದ್ರ ದರ್ಶನದ ಅಪರೂಪದ ಗಳಿಗೆಯದು. ಅದರಲ್ಲೂ ವಿದೇಶದಲ್ಲಿ ಮೊದಲ ಸಂಕಷ್ಟ ಹರ ಚತುರ್ಥಿ ಆಚರಣೆ ವಿನೂತನವೆನಿಸಿತು. 

ಸೂರ್ಯೋದಯ ಮತ್ತು ಚಂದ್ರೋದಯಗಳಲ್ಲಿ ಆ ಶಿವನನ್ನೇ ಕಂಡ ಕವಿಯ ನುಡಿಗಳು ನನ್ನನ್ನು ಮತ್ತೊಮ್ಮೆ ಭಾವಪರವಶವಾಗುವಂತೆ ಮಾಡಿತು. ಮರೆಯಲಾರದ ರಸಮಯ ಕ್ಷಣಗಳ ಪಾಲು ನನ್ನದಾಯಿತು.   


8 ಕಾಮೆಂಟ್‌ಗಳು:

  1. ಮಂಜುಳಾದೇವಿಯವರೇ ಹೊಸವರ್ಷದ ಶುಭಾಶಯಗಳು... ನಿಮ್ಮ ಆಸ್ಟ್ರೇಲಿಯಾ ನೆನಪುಗಳನ್ನು ಚಿತ್ರ ಸಹಿತ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.