ವಿದೇಶ ವಿಹಾರ- 7 - Indian Cultural Festival In Australia

                    (ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ನನ್ನ ಮಗಳು-ಅಳಿಯ ಇರುವ ಟೌನ್ಸ್ವಿಲ್ ನಲ್ಲಿ ವಾಸಿಸುವ ಭಾರತೀಯರೆಲ್ಲ ಒಟ್ಟು ಸೇರಿ ಇಂಡಿಯನ್ ಸೊಸೈಟಿಯನ್ನು ಹುಟ್ಟುಹಾಕಿದ್ದಾರೆ.ಇವರೆಲ್ಲ ವೀಕೆಂಡಿನಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಒಂದೆಡೆ ಸೇರುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಗೌರಿ-ಗಣಪತಿ, ದೀಪಾವಳಿ, ವರಮಹಾಲಕ್ಷ್ಮಿ ಮುಂತಾದ ಹಬ್ಬಗಳನ್ನು ಒಂದೆಡೆ ಸೇರಿ ಆಚರಿಸುತ್ತಾರೆ.ನಮ್ಮ ನಾಡ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಪೂಜೆಯೆಲ್ಲಾ
ಸಾಂಗವಾಗಿ ನೆರವೇರಿದ ನಂತರ ಪ್ರತಿಯೊಬ್ಬರೂ ಮಾಡಿ ತಂದ ಬಗೆಬಗೆಯ ಅಡಿಗೆಯ ರುಚಿಯನ್ನು ಎಲ್ಲರೂ ಸವಿಯುತ್ತಾ ,ಕಲೆತು ಮಾತನಾಡುತ್ತಾ ಹಬ್ಬದ ಸುಖವನ್ನು ಅನುಭವಿಸುವ ಪರಿ ಅನನ್ಯವೆನಿಸಿತು.  ವರ್ಷಕ್ಕೊಮ್ಮೆನಮ್ಮ ಮಹಾನ್ ಸಂಸ್ಕೃತಿಯನ್ನು ಬಿಂಬಿಸುವ ಇಂಡಿಯನ್ ಕಲ್ಚರಲ್ ಫೆಸ್ಟಿವಲ್ ನಡೆಸಿಕೊಂಡು ಬಂದಿದ್ದಾರೆ.

ನಾರ್ತ್ ಕ್ವೀನ್ಸ್ ಲ್ಯಾಂಡ್ ಹಿಂದೂ ಕಮ್ಯುನಿಟಿ ಯವರು ಪ್ರಸ್ತುತ ಪಡಿಸಿದ ’ಅರ್ಪಣ್ - ಒಂದು ಕೊಡುಗೆ" ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನಮಗೆ ಅಲ್ಲಿದ್ದಾಗ ದೊರಕಿತು. ಇಲ್ಲಿರುವ ನಮ್ಮ ಭಾರತೀಯರು ವರ್ಷಕ್ಕೊಮ್ಮೆ ’ಇಂಡಿಯನ್ ಕಲ್ಚರಲ್ ಫೆಸ್ಟಿವಲ್’ ಅನ್ನು ಆಚರಿಸುತ್ತಾರೆ.ಬೇರೆ ದೇಶದಲ್ಲಿದ್ದರೂ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿ-ಬೆಳೆಸುವುದೇ ಅಲ್ಲದೆ ವಿದೇಶಿಯರಿಗೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸಬೇಕೆಂಬ ತುಡಿತವನ್ನು ನಾವಿಲ್ಲಿ ಕಾಣಬಹುದು.
ಪ್ರತಿ ದಿನ ತಮ್ಮ ಅನುಕೂಲಕ್ಕಾಗಿ ಬಗೆಬಗೆಯ ಉಡುಗೆಗಳನ್ನು ಧರಿಸುವ ನಮ್ಮ ಹೆಣ್ಣುಮಕ್ಕಳು ಇಂದು ಸೀರೆಯನ್ನು ಮತ್ತು ಗಂಡಸರು ಕುರ್ತಾ ಧರಿಸಿ ಈ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಓಡಾಡುವುದು ಕಂಡುಬಂದಿತು.ಇಲ್ಲಿಗೆ ಆಗಮಿಸಿದವರಿಗೆಲ್ಲಾ, ವಿದೇಶಿಯರಿಗೂ ಸಹ ಹಣೆಗೆ ತಿಲಕವನ್ನಿಟ್ಟು ಆರತಿ ಬೆಳಗಿ ಬರಮಾಡಿಕೊಂಡುದು ನಮ್ಮ ಪರಂಪರೆಯನ್ನು ಬಿಂಬಿಸುತ್ತಿತ್ತು.

ಪ್ರತಿಯೊಂದು ಟೇಬಲ್ಲಿನ ಮೇಲೂ ತಮ್ಮ ಕೈಯಾರೆ ತಯಾರಿಸಿದ ಸುಂದರ ಹೂವಿನ ಬೊಕ್ಕೆಗಳ ಅಲಂಕಾರ ಮನಸೆಳೆಯುವಂತಿತ್ತು.ಎಲ್ಲಾ ಮೇಜುಗಳಿಗೂ ನಂಬರುಗಳನ್ನು ಹಾಕಿ,ಆ ದಿನದ ಕಾರ್ಯಕ್ರಮದ ಪಟ್ಟಿ, ನೀರಿನ ಬಾಟಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು.ಲಘು ಉಪಹಾರ ಮತ್ತು ತಂಪು ಪಾನೀಯದ ನಂತರ ಆ ಸಂಜೆಯ ಕಾರ್ಯಕ್ರಮಗಳು ಪ್ರಾರಂಭವಾಯಿತು.
 ಇಂಡಿಯಾದಿಂದ ತರಿಸಲಾದ ಅಮೂಲ್ಯವಾದ ಕರಕುಶಲ ವಸ್ತುಗಳ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನೂ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮ ನಡೆಯುವ ವೇದಿಕೆಯು ನಮ್ಮ ಭಾರತೀಯತೆಯ ಧ್ಯೋತಕವಾಗಿತ್ತು.ಗಣ್ಯರಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸ್ವಾಗತದ ಬಳಿಕ ಹಿಂದೂ ಕಮ್ಯುನಿಟಿಯ ಅಧ್ಯಕ್ಷರಾದ ಶ್ರ‍ೀ ಶಶಿಧರ್ ಅವರಿಂದ ಪ್ರಾಸ್ತಾವಿಕ ನುಡಿಗಳೊಂದಿಗೆ ಕಲಾಪ ಮುಂದುವರೆಯಿತು.ಭಾರತೀಯ ಸಂಗೀತದ ಬಗ್ಗೆ ಪರಿಚಯಿಸುವುದು ಅಂದಿನ ಮುಖ್ಯ ಉದ್ದೇಶ.
ನಿರೂಪಣೆಯಲ್ಲಿ ನಮ್ಮ ದೇಶದ ಶ್ರೀಮಂತಿಕೆಯನ್ನು ಸಾರುವ ಗಾಯನ-ವಾದ್ಯ ಸಂಗೀತ-ನಾಟ್ಯ ಕಲೆಗಳು ಬೆಳೆದು ಬಂದ ದಾರಿ,ಸಂಗೀತ ಸರಸ್ವತಿಯ ಸೇವೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟ ವಿದ್ವಾಂಸರುಗಳ ನೆನಪುಗಳನ್ನು ಮಿತೇಶ್ ಮತ್ತು ರಿಚಾ ಮಾಡಿಕೊಟ್ಟರು. ಜೊತೆಗೆ ಇದಕ್ಕೆ ಪೂರಕವಾದ ವೀಡಿಯೋಗಳನ್ನು ತೋರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರಿನವರಾದ ಈಗ ಸಿಡ್ನಿಯಲ್ಲಿ ನೆಲೆಸಿರುವ ಶ್ರ‍ೀಮತಿ ನಿಖಿಲ ಕಿರಣ್ ಮತ್ತು ಇವರ ಶಿಷ್ಯೆಯಾದ ಪ್ರಿಯಾದತ್ ಇವರಿಂದ ನೃತ್ಯದ ಜೊತೆಗೆ ಟೌನ್ಸ್ ವಿಲ್ ನಲ್ಲಿ ಕರ್ನಾಟಕ ಸಂಗೀತಪಾಠವನ್ನು ಕಲಿಸುತ್ತಿರುವ ಶ್ರೀಮತಿ ನಿತಾ ಫ್ರಾನ್ಸಿಸ್ ರವರಿಂದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ನಿಖಿಲ ಮತ್ತು ಪ್ರಿಯಾರವರು ಗಣೇಶ ಸ್ತುತಿ,ಶಿವ ಪಂಚಾಕ್ಷರಿ ಶ್ಲೋಕಂ,ಜತಿಸ್ವರಂ,ಶೃಂಗಾರ ಲಹರಿ,ಶ್ರೀರಾಮಚಂದ್ರ ಕೃಪಾಳು ಭಜಮನ  ಮುಂತಾದ ರಸವತ್ತಾದ ಭಾಗಗಳನ್ನು ತಮ್ಮ ಮನಸೆಳೆಯುವ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.ನಿಖಿಲ ಕಿರಣ್ ರವರು ಕನ್ನಡ ಮತ್ತು ಸಂಸ್ಕೃತದ ಶ್ಲೋಕಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ವಿಶೇಷವೆನಿಸಿತು.ತಮ್ಮ ವೈವಿಧ್ಯವಾದ ಭಾವಾಭಿನಯದಿಂದ ಇವರಿಬ್ಬರೂ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದರು.

ಇಂಡಿಯಾದಿಂದ ತರಿಸಲಾದ ಅತ್ಯುತ್ತಮ ಕಲಾಕೃತಿಗಳನ್ನು ಹರಾಜು  ಮಾಡಲಾಯಿತು. ಇದರಲ್ಲಿ ಆಸ್ಟ್ರ‍ೇಲಿಯನ್ಸ್ ಉತ್ಸಾಹದಿಂದ ಭಾಗವಹಿಸಿ ಅವುಗಳನ್ನು ಉತ್ತಮ ಡಾಲರಿಗೆ ಕೊಂಡುಕೊಂಡು ನಮ್ಮ ಕಲೆಯ ಬಗ್ಗೆ ತಮಗಿರುವ ಗೌರವವನ್ನು ಪ್ರದರ್ಶಿಸಿದರು.ಈ ರೀತಿಯ ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ಅಲ್ಲಿ ದೇವಾಲಯವನ್ನು ಕಟ್ಟಲು ಉಪಯೋಗಿಸುವ ಆಶಯವನ್ನು ಹಿಂದೂ ಕಮ್ಯುನಿಟಿಯವರು ವ್ಯಕ್ತಪಡಿಸಿದರು. ಆಸ್ಟ್ರೇಲಿಯನ್ನರು ಈ ಎಲ್ಲಾ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ವೀಕ್ಷಿಸಿ ನಮ್ಮ ಮೆಚ್ಚುಗೆಗೆ ಪಾತ್ರರಾದರು.


 ಮುಖ್ಯ ಅತಿಥಿಗಳ ಮೇಜಿನ ಬಳಿಯೇ ಹೋಗಿ ವಂದನಾರ್ಪಣೆಯನ್ನು ಮಾಡಿದುದು ವಿನೂತನವಾಗಿತ್ತು. ಅಂತಿಮವಾಗಿ ರಮಾ ಆಂಟಿಯವರ ನೇತೃತ್ವದಲ್ಲಿ ತಯಾರಿಸಲಾದ ರುಚಿಕಟ್ಟಾದ ಭಾರತೀಯ ಸಂಪ್ರದಾಯದ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಯುವಕ-ಯುವತಿಯರು ಉತ್ಸಾಹದಿಂದ ಭಾಗವಹಿಸಿ,ತಮ್ಮ ಮನೆಯಲ್ಲಿ ಸಮಾರಂಭ ಮಾಡಿದ ಸಂತಸವನ್ನು ಪಡೆದರಲ್ಲದೆ ನಮ್ಮ ದೇಶದಿಂದ ದೂರವಿದ್ದೇವೆಂಬ ಬೇಸರವನ್ನು ಪರಿಹರಿಸಿಕೊಂಡರು ಎಂದು ಹೇಳುವ ಅವಶ್ಯಕತೆಯಿಲ್ಲ.
ನಮಗೆ ಕೂಡ ಈ ಕಾರ್ಯಕ್ರಮಗಳು ತೃಪ್ತಿಯನ್ನು ನೀಡಿದವು.ನಾವು ಎಲ್ಲೇ ಇದ್ದರೂ ನಮ್ಮ ದೇಶ, ನಮ್ಮ ಭಾಷೆ, ನಮ್ಮ ಜನರೊಂದಿಗೆ ಬೆರೆತಾಗ ಸಿಗುವ ಆನಂದಕ್ಕೆ ಮಿಗಿಲಾದದ್ದು ಬೇರೆ ಉಂಟೆ .... ?! ಈ ಸದವಕಾಶಗಳನ್ನು ನಮ್ಮದಾಗಿಸಿಕೊಳ್ಳುವ ಮನಸ್ಸಿದ್ದರೆ ಸಾಕು. ನಾವು ಎಲ್ಲಿದ್ದರೆ ಏನು ಎನ್ನುವ ಭಾವ ನನಗಾಯಿತು.ಕುವೆಂಪುರವರ "ಎಲ್ಲಾದರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು" ನುಡಿಯನ್ನು ಮನ ಸ್ಮರಿಸಿತು.  ಟೌನ್ಸ್ವಿಲ್ ಭಾರತೀಯರ ಅಪೇಕ್ಷೆಯಂತೆ ದೇಗುಲದ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಯಲಿ ಎಂದು ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ.  

    

6 ಕಾಮೆಂಟ್‌ಗಳು:

 1. ನಮ್ಮ ಸ೦ಸ್ಕೃತಿಯನ್ನು ದೂರದ ನಾಡಿನಲ್ಲಿ ಪಸರಿಸುವ೦ತಹ ಕಾಳಜಿ ಇರುವ ಭಾರತೀಯರು ಅಭಿನ೦ದನಾರ್ಹರು. ಮನಸೂರೆಗೊಳ್ಳುವ ಚಿತ್ರಗಳು ಹಾಗೂ ಉತ್ತಮ ನಿರೂಪಣೆಯೊ೦ದಿಗೆ ಸಾದರ ಪಡಿಸುತ್ತಿರುವ ಮ೦ಜುಳಾ ಅವರೂ ಕೂಡ ಅಭಿನ೦ದನಾಹ೯ರು.

  ಅನ೦ತ್

  ಪ್ರತ್ಯುತ್ತರಅಳಿಸಿ
 2. ಅನಂತರಾಜ್ ರವರೆ,
  ನನ್ನ ಲೇಖನಗಳನ್ನು ಓದಿ ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. ನನ್ನ ಲೇಖನಗಳನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸುತ್ತಿರುವ ನಿಮಗೆ ಧನ್ಯವಾದಗಳು ಮನಮುಕ್ತರವರೆ.ನಿಮ್ಮ ಸಹಕಾರ ಮುಂದೆಯೂ ಇರಲಿ.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.