ವಿದೇಶ ವಿಹಾರ - 8 - Billabong Sanctuaryಯಲ್ಲಿ ಕಾಂಗರೂಗಳೊಡನೆ...ಆಸ್ಟ್ರೇಲಿಯಾ ಕಾಂಗರೂಗಳ ನಾಡು.ಇವುಗಳು ಈ ನಾಡಿಗೊಂದು ಶೋಭೆ.ಆಸ್ಟ್ರೇಲಿಯವೆಂದೊಡನೆ ನಮ್ಮ ಕಣ್ಮುಂದೆ ಕಾಂಗರೂ ಸುಳಿಯುವುದು ನಿಶ್ಚಿತ.ತನ್ನ ಹೊಟ್ಟೆಯ ಚೀಲದಲ್ಲಿ ಮರಿಯನ್ನಿಟ್ಟುಕೊಂಡು ಬೆಳೆಸುವ, ಜಗತ್ತಿನಲ್ಲಿಯೇ ವಿಶೇಷವಾದ ಸಸ್ತನಿಯಾದ ಕಾಂಗರೂಗಳು ಇಲ್ಲಿ ಗುಂಪು-ಗುಂಪಾಗಿ ವಾಸಮಾಡುವುದನ್ನು ನೋಡುವುದೇ ಒಂದು ಸೊಗಸು.

ಯೂರೋಪಿನ ಯಾತ್ರಿಗಳು ಮೊದಲಬಾರಿಗೆ ಆಸ್ಟೇಲಿಯಾಕ್ಕೆ ಭೇಟಿಯಿತ್ತಾಗ ಈ ವಿಚಿತ್ರವಾದ ಪ್ರ‍ಾಣಿಯನ್ನು ನೋಡಿ ಇದೇನೆಂದು ಕೇಳಿದರಂತೆ.ಅಲ್ಲಿನ ಆದಿವಾಸಿ ಜನಾಂಗ  ಅವರ ಭಾಷೆ ಅರ್ಥವಾಗದೆ "ಕಾಂಗರೂ" ಎಂದರಂತೆ.ಆಸ್ಟೇಲಿಯಾದ ಆದಿವಾಸಿಗಳ ಭಾಷೆಯಲ್ಲಿ ಕಾಂಗರೂ ಎಂದರೆ "ನನಗೆ ಅರ್ಥವಾಗಲಿಲ್ಲ" ಎಂದು ಅರ್ಥವಂತೆ.ಮುಂದೆ ಅದೇ ಹೆಸರು ಈ ಪ್ರ‍ಾಣಿಗೆ ಶಾಶ್ವತವಾಯಿತು.


ಕೆಂಪು,ಬೂದು ಬಣ್ಣವಲ್ಲದೆ ಸ್ವಲ್ಪ ಕಪ್ಪು ವರ್ಣದ ಕಾಂಗರೂಗಳನ್ನೂ ನಾವಿಲ್ಲಿ ನೋಡಬಹುದು.     ತನ್ನ ಹೊಟ್ಟೆಯ ಚೀಲದಲ್ಲಿ ಮರಿಯನ್ನಿಟ್ಟುಕೊಂಡು ಓಡಾಡುವ ಅಮ್ಮ ಕಾಂಗರೂವನ್ನು ನೋಡುವುದೇ ಚೆಂದ.ನಾವು ನೀಡುವ ಕಾಳುಗಳನ್ನು ತಿನ್ನುವ ಆಸೆಗೆ ಅವು
ನಮ್ಮ ಬಳಿ ಬರುತ್ತದೆ.ಮುಂದಿನೆರಡು ಕಾಲುಗಳನ್ನೆತ್ತಿ ತನ್ನ ಹಿಂದಿನ ಎರಡು ಕಾಲಿಗಳಿಂದ ಕುಪ್ಪಳಿಸಿ ನೆಗೆಯುತ್ತಾ ಓಡಾಡುವ ಇದು ಮಕ್ಕಳಿಗೆ ಬಲು ಪ್ರಿಯವಾದ ಪ್ರಾಣಿ.ಪ್ರವಾಸಿಗರಿಗೆ ಕಾಂಗರೂಗಳೆಂದರೆ ವಿಶೇಷ ಆಕರ್ಷಣೆ.ಆಸ್ಟ್ರೇಲಿಯಾದ ಯಾವುದೇ ಪ್ರಾಣಿಸಂಗ್ರಹಾಲಯಕ್ಕೆ ಹೋದರೂ ಇವುಗಳನ್ನು  ಮುಟ್ಟಿ ,ಅವುಗಳ ಚಲನವಲನಗಳನ್ನು ಸಮೀಪದಿಂದ ನೋಡಿ ಆನಂದಿಸಬಹುದು. ಕಾಂಗರೂಗಳು ಶಕ್ತಿಯುತವಾದ ಉದ್ದಪಾದಗಳೊಂದಿಗೆ ದೊಡ್ಡದಾದ ಹಿಂದಿನಕಾಲುಗಳನ್ನು ಹೊಂದಿದೆ. ಮುಂದಿನ ಕಾಲುಗಳು ಚಿಕ್ಕವು.ತನ್ನ ಬಲಿಷ್ಟವಾದ ಬಾಲವನ್ನು ಆಧಾರವಾಗಿಟ್ಟುಕೊಂಡು ಹಿಂದಿನ ಕಾಲುಗಳಿಂದ ನೆಗೆಯುತ್ತಾ ಓಡಾಡುತ್ತವೆ.ಇವುಗಳು ಹುಲ್ಲು,ಕಾಳುಕಡ್ಡಿಗಳನ್ನು ತಿನ್ನುತ್ತವೆ. ಕಾಂಗರೂಗಳು ಒಳ್ಳೆಯ ಈಜುಗಾರರು.ಮರದ ಮೇಲೆ ವಾಸಿಸುವ ಕಾಂಗರೂಗಳೂ ಇಲ್ಲಿವೆಯಂತೆ. ಅವನ್ನು ನೋಡಿ ಆನಂದಿಸುವ ಭಾಗ್ಯ ನಮಗೆ ಸಿಗಲಿಲ್ಲ.


ಈ ದೇಶದಲ್ಲೇ ಸರಿಸುಮಾರು ಕಾಂಗರೂಗಳ ಐವತ್ತಕ್ಕೂ ಹೆಚ್ಚು ಪ್ರಭೇದಗಳಿದ್ದವಂತೆ.ಆದಿವಾಸಿಗಳ ಕಾಲದಿಂದ ಹಾಗು ಈಗಲೂ ಸಹ ಇವುಗಳನ್ನು ಮಾಂಸಕ್ಕಾಗಿ ಮತ್ತು ಚರ್ಮಕ್ಕಾಗಿ ಬೇಟೆಯಾಡುತ್ತಿದ್ದುದರಿಂದ ಕಾಂಗರೂಗಳ ಅನೇಕ ಪ್ರಭೇದಗಳನ್ನು ನಾವೀಗ ನೋಡಲೂ ಸಾಧ್ಯವಿಲ್ಲದಂತಾಗಿದೆ.ಇನ್ನುಳಿದಿರುವ ಕೆಲವನ್ನು ಸಂರಕ್ಷಿಸಲು ಅಲ್ಲಿನ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.  

ನಾವು ಕೈರ್ನ್ಸ್  ಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಎರಡೂ ಪಕ್ಕದ ಹುಲ್ಲುಗಾವಲಿನಲ್ಲಿ ಇವುಗಳ ದೊಡ್ಡ ಗುಂಪುಗಳನ್ನು ನೋಡಿ ಆನಂದಿಸಿದೆವು.ಆಸ್ಟೇಲಿಯಾದ ರಾಷ್ಟ್ರ‍ೀಯ ಸಂಕೇತವಾದ ಮತ್ತು ಅಪರೂಪದ ಈ ಪ್ರ‍ಾಣಿಯನ್ನು ಸಂರಕ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶ. ಇವುಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಹೈವೇಗಳಲ್ಲಿ "ಕಾಂಗರೂ ಕ್ರಾಸಿಂಗ್" ಚಿಹ್ನೆಯ ಬೋರ್ಡುಗಳನ್ನು ಹಾಕಿರುತ್ತಾರೆ. ಆ ಪ್ರದೇಶದಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ.ಕಾಂಗರೂ ಗುಂಪು ರಸ್ತೆ ದಾಟುವ ತನಕ ವಾಹನ ಚಾಲಕರು ಕಾಯಬೇಕು. ಆದರೂ  ರಸ್ತೆಯನ್ನು ದಾಟುವಾಗ ವಾಹನಗಳಿಗೆ ಸಿಕ್ಕು ಕೆಲವು ಕಾಂಗರೂಗಳು ಸಾವನ್ನಪ್ಪಿದುದನ್ನು ಕಂಡು ನನ್ನ ಮನಸ್ಸಿಗೆ ಖೇದವಾಯಿತು.


ಆಸ್ಟ್ರೇಲಿಯಾದ ರಾಷ್ಟ್ರ ಲಾಂಛನದಲ್ಲಿ ಮತ್ತು  ಆಸ್ಟ್ರೇಲಿಯನ್ ಡಾಲರುಗಳ ಮೇಲೆ ಕಾಂಗರೂ ಚಿತ್ರವನ್ನು ಹಾಕಿ ಈ ಪ್ರಾಣಿಯನ್ನು ಗೌರವಿಸಲಾಗಿದೆ.ಸಾಮಾನ್ಯವಾಗಿ ಇಲ್ಲಿನ ಲೋಗೋಗಳಲ್ಲಿ,ಎಂಬ್ಲಮ್ ಗಳಲ್ಲಿ ಮತ್ತು ಮಕ್ಕಳ ಆಟದ ಸಾಮಾನುಗಳ ಮೇಲೆ  ಕಾಂಗರೂ ಗುರುತುಗಳು ಇದ್ದೇ ಇರುತ್ತವೆ.ಇವೆಲ್ಲವೂ ಆಸ್ಟೇಲಿಯನ್ನರು ಜಗತ್ತಿನಲ್ಲೇ ಅಪೂರ್ವವಾದ ಈ ಪ್ರಾಣಿಯನ್ನು ಗೌರವಿಸುವುದರ ಸಂಕೇತ.  ಒಟ್ಟಿನಲ್ಲಿ ಈ ವಿಶೇಷವಾದ ಪ್ರಾಣಿಯ ಸಂರಕ್ಷಣೆ ಮಾನವನ ಆದ್ಯ ಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

2 ಕಾಮೆಂಟ್‌ಗಳು:

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.