ವಿದೇಶ ವಿಹಾರ - 10 ಆಸ್ಟ್ರೇಲಿಯಾ ದೇಶ.. ಜನ..ಪರಿಸರ...


ವಿಸ್ತಾರವಾದ ದೇಶ.ವಿರಳ ಜನಸಂಖ್ಯೆ.ಆಸ್ಟ್ರ‍ೇಲಿಯಾ ದೇಶದ ಸುತ್ತಲಿರುವ ಕಡಲತಡಿಯಲ್ಲಿ ಮಾತ್ರ ನಾವು ನಗರಗಳನ್ನು ಮತ್ತು ಜನವಸತಿಯನ್ನು ಕಾಣಬಹುದು. ಮಧ್ಯ ಭಾಗದಲ್ಲಿ ದಟ್ಟ ಅರಣ್ಯ.ಕೃಷಿ, ಹೈನುಗಾರಿಕೆ, ಗಣಿಗಾರಿಕೆ ಇಲ್ಲಿನ ಜನರ ಮುಖ್ಯ ಉದ್ಯೋಗ.ವಾರವೆಲ್ಲ ಕಷ್ಟಪಟ್ಟು ದುಡಿದು, ವಾರಾಂತ್ಯದ ಎರಡು ದಿನ ತಮ್ಮ ಕುಟುಂಬದೊಂದಿಗೆ ಜಾಲಿಯಾಗಿ ಕಾಲಕಳೆಯುವ ಮನೋಭಾವದ ಜನರೇ ಇಲ್ಲಿ ಹೆಚ್ಚು.ಇಂಗ್ಲೆಂಡಿನ ಮೂಲದವರೇ ಹೆಚ್ಚಿರುವ ಕಾರಣ,ಇಂಗ್ಲೀಷ್ ಇಲ್ಲಿನವರ ಮಾತೃಭಾಷೆ.ಸಹಜವಾಗಿಯೇ ಕ್ರಿಸ್ಮಸ್ ಈ ದೇಶದ ದೊಡ್ಡಹಬ್ಬ.
   







ನಗರ ಪ್ರದೇಶವಿರಲಿ ಹಳ್ಳಿಗಳಿರಲಿ (ಇಲ್ಲಿ ಹಳ್ಳಿಗಳಿಗೆ ಕಂಟ್ರಿಸೈಡ್ ಎನ್ನುತ್ತಾರೆ) ಅಲ್ಲಿನ ಶುಚಿತ್ವ ಮೆಚ್ಚುಗೆಗೆ ಪಾತ್ರವಾಗುತ್ತದೆ.ಅಲ್ಲಿನ ಜನರ ನಗುಮೊಗದ ನಡೆನುಡಿ ಮನಸ್ಸಿಗೆ ಹಿತವೆನ್ನಿಸುತ್ತದೆ.ಕಾನೂನು ಪರಿಪಾಲನೆ ಎಲ್ಲರ  ಧ್ಯೇಯ.ಸೌಜನ್ಯಯುತ ನಡವಳಿಕೆ.ಮಿತ ಮಾನವ ಶಕ್ತಿಯ ಪರಿಣಾಮ ಯಂತ್ರಗಳ ಬಳಕೆ ಅಧಿಕ.

ಎಲ್ಲೆಲ್ಲೂ ಶುಚಿಯೋ ಶುಚಿ.......


ರಸ್ತೆಯಲ್ಲಿ,ಫುಟ್ಪಾತ್ ನಲ್ಲಿ ಉಗುಳುವುದು,ಗಲೀಜು ಮಾಡುವುದು ಹಾಳು ಮಾಡುವುದು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ಎಲ್ಲೆಡೆಯೂ ಕಸದ ತೊಟ್ಟಿ ಕಂಡುಬರುತ್ತದೆ.ನಮ್ಮ ದೇಶದಂತೆ ಅವು ತುಂಬಿ ಚೆಲ್ಲಿದರೂ ಖಾಲಿ ಮಾಡದ್ದನ್ನು ನಾನಿಲ್ಲಿ ಎಲ್ಲಿಯೂ ಕಾಣಲಿಲ್ಲ.ಇಲ್ಲಿನ ರಸ್ತೆಗಳು ನುಣುಪಾಗಿ ವಿಶಾಲವಾಗಿರುತ್ತದೆ.ಒಂದು ಚಿಕ್ಕ ಗುಂಡಿಯನ್ನಾಗಲೀ, ಕಸಕಡ್ಡಿಯನ್ನಾಗಲೀ ರಸ್ತೆಗಳಲ್ಲಿ ಹುಡುಕಿದರೂ ಸಿಕ್ಕದು. ಸ್ವಚ್ಛತೆಗೆ ಮೊದಲ ಆದ್ಯತೆ.ಸಾರ್ವಜನಿಕ ಸ್ಥಳಗಳು ಶುಚಿಯಾಗಿರಲು ಇಲ್ಲಿನ ಜನರ ಮನೋಭಾವನೆ ,ಸಹಕಾರದೊಂದಿಗೆ ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆಯೂ ಕಾರಣ.ಕಂಡಲ್ಲಿ ಉಗಿಯುವುದು, ತಿಂದು-ಕುಡಿದು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ರಸ್ತೆ,ಏರ್ ಪೋರ್ಟ್, ಬೀಚ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಎಲ್ಲೆಡೆಯೂ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಇಟ್ಟಿರುತ್ತಾರೆ. ಜನರೂ ಸಹ ಇವುಗಳನ್ನು ಹುಡುಕಿ ಕಸ ಹಾಕುತ್ತಾರೆ.ನಿಯಮಿತವಾಗಿ ಕಸವನ್ನು ಖಾಲಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿಡುವ ವ್ಯವಸ್ಥೆಯನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು.ನಮ್ಮ ಮುನ್ಸಿಪಾಲಿಟಿಯ ಕಸದತೊಟ್ಟಿ ತುಂಬಿ ಕೊಳೆತು ನಾರುತ್ತಿದ್ದರೂ ಖಾಲಿ ಮಾಡುವ ಸೌಜನ್ಯ ನಮ್ಮ ಸರ್ಕಾರಿ ಇಲಾಖೆಯಲ್ಲಿ ಯಾಕಿಲ್ಲ ಎಂದು ಬೇಸರವಾಗುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ನಿರ್ವಹಣೆ ಜನರು ಮತ್ತು ಸರ್ಕಾರ ಎರಡೂ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂಬುದನ್ನು ನಾವಿಲ್ಲಿ ತಿಳಿಯಬಹುದು.         

ಈ ದೇಶದಲ್ಲಿ ಪ್ರತಿದಿನದ ಕಸ ಮತ್ತು ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆ ಮನಮೆಚ್ಚುವಂತಿದೆ.ಪ್ರತಿಯೊಂದು ಮನೆಗೂ ದೊಡ್ಡದಾದ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಸಿಟಿ ಕೌನ್ಸಿಲ್ ಒದಗಿಸಿರುತ್ತದೆ. ತ್ಯಾಜ್ಯವಸ್ತುಗಳನ್ನು Dust Binಗೂ ಮತ್ತು  ಪ್ಲಾಸ್ಟಿಕ್, ಪೇಪರ್ ಮುಂತಾದುವುಗಳನ್ನು Recycle Binಗೂ ಹಾಕಿಡಬೇಕು.ನಿಗದಿಯಾದ ದಿನ ಮನೆಯ ಹೊರಗೆ,ರಸ್ತೆಯ ಪಕ್ಕದಲ್ಲಿ ತುಂಬಿರುವ ಈ ಕಸದ ಡಬ್ಬಗಳನ್ನು ಇಟ್ಟರೆ ಕಸ ವಿಲೇವಾರಿಯ ವಾಹನ ಬಂದು ಅದನ್ನು ಖಾಲಿ ಮಾಡಿ ಇಟ್ಟು ಹೋಗುತ್ತದೆ.ಮನೆಗಳಿಗಾದರೆ ವಾರದಲ್ಲಿ ಎರಡು ಬಾರಿ ಕಸ ವಿಲೇವಾರಿ ಮಾಡುತ್ತಾರೆ. ಹೆಚ್ಚು ಕಸ ಬೀಳುವ ಹೋಟೆಲ್,ಹಾಸ್ಪಿಟಲ್ ಮುಂತಾದುವೆಡೆಗಳಲ್ಲಿ ದಿನವೂ ಕಸವನ್ನು ನಿಯಮಿತವಾಗಿ ತೆಗೆದುಕೊಂಡು ಹೋಗುವ  ವ್ಯವಸ್ಥೆಯಿರುವುದರಿಂದ ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಣಬಹುದು.


ನುಣುಪಾದ ರಸ್ತೆಗಳು ಮತ್ತು ಸಂಚಾರಿ ನಿಯಮ


ಇಲ್ಲಿನ ಜನ ಟ್ರಾಫಿಕ್ ನಿಯಮಗಳನ್ನು ತುಂಬಾ ಚೆನ್ನಾಗಿ ಪಾಲಿಸುತ್ತಾರೆ.ವಾಹನ ಚಾಲನೆಗೆ ಲೈಸನ್ಸ್ ನೀಡುವಾಗಲೇ ಎರಡು Test ಗಳನ್ನು ಕಟ್ಟುನಿಟ್ಟಾಗಿ ಮಾಡಿ , ಪಾಸಾದ ನಂತರ ಡ್ರೈವಿಂಗ್ ಲೈಸನ್ಸ್ ನೀಡುತ್ತಾರೆ. ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೋಲಿಸರಿರುವುದಿಲ್ಲ. ಎಲ್ಲೆಡೆಯೂ ಸಿ ಸಿ ಕ್ಯಾಮರಾಗಳನ್ನು ಅಳವಡಿಸಿರುತ್ತಾರೆ.ಯಾರಾದರು ರೂಲ್ಸ್ ಮುರಿದರೆ ಈ ಕ್ಯಾಮರಾದಲ್ಲಿ ಚಿತ್ರಿತವಾಗಿರುತ್ತದೆ. ನಂತರ ವಾಹನ ಮಾಲಿಕರ ಮನೆಗೆ ಫೈನ್ ಕಟ್ಟಲು ನೋಟೀಸ್ ಕಳುಹಿಸುತ್ತಾರೆ.ಇಂತಹ ನೋಟೀಸ್ ಗಳನ್ನು ಆಗ್ಗಾಗ್ಗೆ ಪಡೆದವರ ಡ್ರ‍ೈವಿಂಗ್ ಲೈಸನ್ಸನ್ನು ರದ್ದು ಮಾಡುವ ಕಟ್ಟುನಿಟ್ಟಿನ ಕ್ರಮ ಇಲ್ಲಿದೆ.ಹಾಗಾಗಿ ಇಲ್ಲಿನ ಜನ ರಸ್ತೆ ನಿಯಮಗಳನ್ನು ಪರಿಪಾಲಿಸುವುದರಿಂದ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಸುಲಭ ಮತ್ತು ಸುರಕ್ಷಿತ.ಪ್ರತಿ ರಸ್ತೆಯಲ್ಲಿಯೂ ಮಿತಿಮೀರಿದ ವೇಗದಿಂದ ವಾಹನವನ್ನು ಚಲಾಯಿಸುವಂತಿಲ್ಲ.ಇದೇ ವೇಗದಲ್ಲಿಯೇ ನಿಮ್ಮ ವಾಹನವನ್ನು ಓಡಿಸಬೇಕೆಂಬ ಸೂಚನಾ ಫಲಕಗಳನ್ನು  ರಸ್ತೆ ಬದಿಯಲ್ಲಿ ನಿಲ್ಲಿಸಿರುತ್ತಾರೆ. ಆ ಮಿತಿಯೊಳಗೇ  ನಾವು ಹೋಗಬೇಕು ಇಲ್ಲದಿದ್ದರೆ ಫೈನ್ ಗ್ಯಾರಂಟಿ.ನಮ್ಮ ಮುಂದಿರುವ ವಾಹನಕ್ಕೂ ನಮ್ಮ ವಾಹನಕ್ಕೂ ಇಂತಿಷ್ಟೇ ಅಂತರವಿರಬೇಕು.ಸಿಕ್ಕ ಸಿಕ್ಕಲ್ಲಿ ನಮ್ಮ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವಂತಿಲ್ಲ.ಓವರ್ ಟೇಕ್ ಮಾಡಲು ಅನುಮತಿ ಇರುವೆಡೆ ಮಾತ್ರ ನಮ್ಮ ಮುಂದಿನ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಬೇಕು. ಜನರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಕಾನೂನುಗಳನ್ನು ಮಾಡಿದ್ದಾರೆ. ಜನರೂ ಸಹ ಅದನ್ನು ತಪ್ಪದೆ ಪಾಲಿಸುತ್ತಾರೆ.ಇಲ್ಲದಿದ್ದರೆ ಅಲ್ಲಿನ ಕಟ್ಟಿನಿಟ್ಟಿನ ಕಾನೂನಿನಿಂದಾಗಿ ಲೈಸನ್ಸ್ ರದ್ದಾಗುವ ಭಯವಿದೆ. ನಮ್ಮಲ್ಲೂ ನಮ್ಮ ಸರ್ಕಾರ ಜನರ ಸುರಕ್ಷತೆಗಾಗಿ ಅನೇಕ ಕಾನೂನುಗಳನ್ನು ಮಾಡಿರುವುದು ನಿಜ.ಆದರೆ ಅದನ್ನು ಪರಿಪಾಲಿಸುವ ಅಧಿಕಾರಿಗಳು ಮತ್ತು ಜನರು ಬಹಳ ಕಡಿಮೆ. ಇದೇ ನಮ್ಮ ದೇಶದಲ್ಲಿ ಅಪಘಾತಗಳು ಹೆಚ್ಚಲು ಕಾರಣ.ನಮ್ಮ ಜನರಲ್ಲಿ ಕಾನೂನಿಗೆ ಅನುಗುಣವಾಗಿ ನೆಡೆಯುವ ಪ್ರಜ್ಞೆ ಮೂಡಿಬರಬೇಕು.ಆಗಲೇ ಶಿಸ್ತುಬದ್ಧ ಜೀವನ ಸಾಧ್ಯ.    
     
ನಮ್ಮ ದೇಶದಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು,ದನಕರುಗಳು,ಕತ್ತೆ,ಕುದುರೆಗಳು ಅಲ್ಲದೆ ಹಂದಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ಮತ್ತು ಹಿಂಡುಹಿಂಡಾಗಿ ಮಲಗಿರುವುದನ್ನು ನೋಡಿದ್ದೇವೆ.ನಮ್ಮ ದೇಶದ ಅನೇಕ ಅಪಘಾತಗಳಿಗೆ ಇವೇ ಕಾರಣವೆನ್ನುವುದು ಸಹ ನಮಗೆ ತಿಳಿಯದ್ದೇನಲ್ಲ.ಆದರೆ ಇದನ್ನು ತಡೆಯಲು ನಮ್ಮಲ್ಲಿ ಸಾಧ್ಯವಾಗಿಲ್ಲ.ಆದರೆ ಆಸ್ಟ್ರೇಲಿಯಾದಲ್ಲಿ ರಸ್ತೆಗಳಲ್ಲಿ ಒಂದಾದರೂ ಪ್ರಾಣಿಯನ್ನು ನಾನು ನೋಡಲಿಲ್ಲ. ಪಟ್ಟಣ ಪ್ರದೇಶದಿಂದ ಹೊರಗೆ ವಿಶಾಲವಾದ ಜಾಗಗಳಲ್ಲಿ ಮಾತ್ರ (ನಮ್ಮಲ್ಲಿ ಗೋಮಾಳವಿದ್ದಂತೆ) ಪ್ರಾಣಿಗಳನ್ನು,ಹಸುಗಳನ್ನು ಸಾಕಬಹುದು.ಆದ್ದರಿಂದ ನಮ್ಮಲ್ಲಿಯಂತೆ ಹಾದಿಬೀದಿಗಳಲ್ಲಿ ಸಾಕುಪ್ರಾಣಿಗಳ ಹಾವಳಿ ಕಂಡುಬರುವುದಿಲ್ಲ.

ರಸ್ತೆಯ ಇಕ್ಕೆಲಗಳಲ್ಲೂ ಹುಲ್ಲಿನ ಲಾನುಗಳನ್ನು ಬೆಳೆಸಿರುವುದರಿಂದ ರಸ್ತೆಯಲ್ಲಿ ಧೂಳೇಳುವ ಸಾಧ್ಯತೆಗಳಿಲ್ಲ.ಇದರಿಂದ ಸುತ್ತಮುತ್ತಲ ಪರಿಸರ ಶುಭ್ರವಾಗಿರುತ್ತದೆ.

ಇಲ್ಲಿ ಕರೆಂಟ್ ಹೋಗುವುದೇ ಇಲ್ಲ.....!!!!!

ಪ್ರತಿ ಮನೆಮನೆಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಶುದ್ಧವಾದ ನೀರು ಮತ್ತು ವಿದ್ಯುತ್ತನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸೋಲಾರ್ ಪವರ್ ಉಪಯೋಗಿಸಲು ಇಲ್ಲಿನ ಸರಕಾರ ಹೆಚ್ಚಿನ ಒತ್ತು ನೀಡಿ, ಸೋಲಾರ್ ಉಪಯೋಗಿಸುವವರಿಗಾಗಿ ಕೆಲವು ಆಕರ್ಷಕ ರಿಯಾಯಿತಿಗಳನ್ನೂ ಜನರಿಗೆ ನೀಡಿ ಪ್ರೋತ್ಸಾಹ ಕೊಡುತ್ತದೆ.  
ಒಟ್ಟಿನಲ್ಲಿ ನೆಮ್ಮದಿಯಾಗಿ ಬದುಕಲು ಇರಬೇಕಾದ ಮೂಲಭೂತ ಸೌಕರ್ಯಗಳನ್ನು ಇಲ್ಲಿನ ಜನರು ಪಡೆದಿದ್ದಾರೆ.ನಿರ್ಮಲವಾದ ಗಾಳಿ,ಬೆಳಕು,ನೀರು ಮತ್ತು ಸ್ವಚ್ಛವಾದ ಪರಿಸರ ಇಲ್ಲಿನ ಜನರ ಸೌಭಾಗ್ಯವೆಂದು ನನ್ನ ಅನಿಸಿಕೆ.....!!

6 ಕಾಮೆಂಟ್‌ಗಳು:

  1. ಆಸ್ಟ್ರ್‍ಏಲಿಯಾ ದೇಶದ ಸ್ವಚ್ಛತಾಗುಣವನ್ನು ಓದಿ ಚಕಿತನಾದೆ. ನಮ್ಮ ಭಾರತದಲ್ಲಿ civic sense ಎನ್ನುವುದು ಸುಶಿಕ್ಷಿತರಲ್ಲಿಯೂ ಕಾಣಸಿಗದು! ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯನ್ನು ಅತಿ ಶೀಘ್ರವಾಗಿ ನೀಡಿರುವಿರಿ ಸುನಾಥ್ ಸಾರ್. ನಿಮಗೆ ನನ್ನ ಧನ್ಯವಾದಗಳು

      ಅಳಿಸಿ
  2. ಸುನಾಥಣ್ಣನ ಮಾತನ್ನು ಅನುಮೋದಿಸುತ್ತೇನೆ.... ನಮ್ಮಲ್ಲಿ ನಾಗರೀಕರು ಅನಾಗರೀಕರಂತೆ ವರ್ತಿಸೋದೇ ಮುಖ್ಯ ಕಾರಣ... ಚನ್ನಾಗಿದೆ ಪ್ರವಾಸ ಕಥನ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜಲನಯನರವರೆ, ನಿಮ್ಮಿಬ್ಬರ ಮಾತೂ ನಿಜ. ನಮ್ಮಲ್ಲಿ ಹಕ್ಕುಗಳನ್ನು ಕೇಳುತ್ತೇವೆ ಆದರೆ ನಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯವಾಗಿರುವವರೇ ಜಾಸ್ತಿ. ಹಾಗಾಗಿ ಭಾರತದ ಪರಿಸ್ಥಿತಿ ಹೀಗಿದೆ. ನಾವು ಬದಲಾಗುವುದು ಯಾವಾಗ ಎಂದು ನಮ್ಮನ್ನು ನಾವೇ ಕೇಳಿಕೊಳ್ಳುವುದು ಒಳ್ಳೆಯದು.
      ಧನ್ಯವಾದಗಳು.

      ಅಳಿಸಿ
  3. ಇನ್ನಷ್ಟು ಮಾಹಿತಿಗಳಿಗಾಗಿ ಕಾಯುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನಗೆ ತಿಳಿದ ಮಾಹಿತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಕಾತರ ನನಗೂ ಇದೆ. ನನ್ನ ಬ್ಲಾಗಿನಲ್ಲಿ ಕಣ್ಣಾಡಿಸಲು ಮಾತ್ರ ನೀವು ಮರೆಯದಿರಿ ಸುಬ್ರಹ್ಮಣ್ಯರವರೆ.
      ಧನ್ಯವಾದಗಳು.

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.