ವಿದೇಶ ವಿಹಾರ - 9 - Sunday Market

(ಫೋಟೋ ಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



ಭಾನುವಾರ ಬೆಳಗ್ಗೆ ನಿಮ್ಮನ್ನು ಒಂದು ಮಾಯಾಬಜಾರ್ ಗೆ ಕರೆದುಕೊಂಡು ಹೋಗುತ್ತೇನೆ,ಎಲ್ಲರೂ ಬೇಗ ಎದ್ದು ರೆಡಿಯಾಗಬೇಕು ಎಂದು ನನ್ನ  ಮಗಳು ಹೇಳಿದ್ದಳು. ನಾವೂ ಉತ್ಸಾಹದಿಂದ ಎದ್ದು ಹೊರಟೆವು.ಅವಳು ನಮ್ಮನ್ನು ಕರೆದುಕೊಂಡು ಹೋಗಿದ್ದು ಸಂಡೇ ಮಾರ್ಕೆಟ್ ಗೆ.....ಟೌನ್ಸ್ವಿಲ್ ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಸಂಡೇ ಮಾರ್ಕೆಟ್ ಇರುತ್ತದೆ.ಇದು ಒಂದು ಥರ ನಮ್ಮ ಸಂತೆ ಇದ್ದಂತೆ ಅಂತ ಹೇಳಬಹುದು. ಇಲ್ಲಿ ಸಿಗದ ವಸ್ತುಗಳಿಲ್ಲ.ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳಲ್ಲಿ ಕಾಣದ,ಸಿಗದ ವಸ್ತುಗಳು ಇಲ್ಲಿ ಸಿಗುತ್ತದೆ.

ಭಾನುವಾರದ ಬಜಾರಿಗಾಗಿ ಸಿಟಿ ಕೌನ್ಸಿಲ್ಲಿನ ಆಡಳಿತ ಈ ನಗರದ ಒಂದು ಮುಖ್ಯ ರಸ್ತೆಯನ್ನು ಮಧ್ಯಾಹ್ನ ಎರಡು ಗಂಟೆಯ ತನಕ ಬಂದ್ ಮಾಡಿ, ರಸ್ತೆ ಮತ್ತು ಫುಟ್ಪಾತ್ ಗಳಲ್ಲಿ ಸ್ಟಾಲುಗಳನ್ನಿಡಲು ಅನುಮತಿ ನೀಡುತ್ತದೆ.ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ.ಮಧ್ಯಾಹ್ನ ಎರಡರ ನಂತರ ಈ ರಸ್ತೆಯಲ್ಲಿ ಮಾರ್ಕೆಟ್ ಇತ್ತೇ ಎಂಬ ಸಂಶಯ ಉಂಟಾಗುವಷ್ಟು ಶುಚಿಯಾಗಿಯೇ ಇರುತ್ತದೆ..!!! ಜೊತೆಗೆ ವಾಹನಗಳ ಓಡಾಟ ಮೊದಲಿನಂತಾಗುತ್ತದೆ..!! ಇದನ್ನೆಲ್ಲ ವೀಕ್ಷಿಸಿದ ನನಗೆ ನಮ್ಮೂರಿನ ಸಂತೆಯ ಗೌಜು, ಗದ್ದಲ, ಅವ್ಯವಸ್ಥೆಯನ್ನು ನೆನೆದು ಕಸಿವಿಸಿಯಾಯಿತು. ಸಾರ್ವಜನಿಕ ಸ್ಥಳಗಳನ್ನು ತಮ್ಮ ಮನೆಯಂತೆ ಶುಚಿಯಾಗಿಡಬೇಕೆಂಬ ಇಲ್ಲಿನವರ ಮನೋಭಾವ ನಮಗೆ ನಿಜಕ್ಕೂ ಮಾದರಿಯಾಗಬೇಕು.ಇದನ್ನು ನಾವೂ ಪಾಲಿಸಿದರೆಷ್ಟು ಚೆನ್ನ ಎನ್ನಿಸಿತು.        

ತಾಜಾ ತರಕಾರಿ,ಹಣ್ಣುಹಂಪಲು ಬೇಕಿದ್ದರೆ ವಾರಕ್ಕೊಮ್ಮೆ ಇಲ್ಲಿಗೆ ಬರಬೇಕು.ನಮಗೆ ಬೇಕಾದ ದಿನನಿತ್ಯದ ವಸ್ತುಗಳನ್ನು ಇಲ್ಲಿ ಕೊಂಡು ರೆಫ್ರಿಜರೇಟರಿನಲ್ಲಿ ಇಟ್ಟುಕೊಂಡರ‍ೆ ವಾರವಿಡೀ ತರಕಾರಿ,ಹಣ್ಣುಗಳಿಗೆ ಪರದಾಡಬೇಕಿಲ್ಲ.ಆಗತಾನೆ ಕಿತ್ತುತಂದ ಹಸಿರಾದ ಸೊಪ್ಪು,ತರಕಾರಿಗಳನ್ನು ತೆಗೆದುಕೊಳ್ಳಬೇಕೆನ್ನುವ ಆಸೆಯಾಗುತ್ತದೆ.ಅಷ್ಟೊಂದು ತಾಜಾ ಮತ್ತು ಶುಚಿಯಾಗಿರುತ್ತದಲ್ಲದೆ ಮಾಡಿದ ಸಾಂಬಾರು,ಪಲ್ಯಗಳು ಬಲು ರುಚಿಯಾಗಿಯೂ ಇರುತ್ತವೆ.ನಮ್ಮ ದೇಶದಲ್ಲಿ ಸಿಗುವ ಸರಿ ಸುಮಾರು ಎಲ್ಲಾ ತರಕಾರಿಗಳನ್ನೂ ನಾನಿಲ್ಲಿ ಕಂಡೆ. ಸಿಹಿಗುಂಬಳ,ಹಾಲುಸೋರೆ, ಸಬ್ಬಸಿಗೆ ಸೊಪ್ಪು ಎಲ್ಲವೂ ಇಲ್ಲಿ ಲಭ್ಯ.ಇಲ್ಲಿ ದೊರಕುವ ವಿವಿಧ ರೀತಿಯ ತಾಜಾ ಸೊಪ್ಪುಗಳು ಅದರಲ್ಲೂ ಚಿಕ್ಕ ಚಿಕ್ಕ ಪಾಟಿನಲ್ಲಿ ಸಿಗುವ ಕೊತ್ತಂಬರಿ ಸೊಪ್ಪನ್ನಂತು ನಾನೆಂದೂ ಮರೆಯಲಾರೆ. ಅಲ್ಲಿ ಸಿಗುವ "ಬೇಬಿ ಸ್ಪಿನಾಚ್" ಸೊಪ್ಪಿನಿಂದ ತಯಾರಿಸಿದ ಅಡುಗೆಯ ಘಮಲು, ರುಚಿ ನನಗಿನ್ನೂ ಮರೆಯಲಾಗಿಲ್ಲ.


















ಇನ್ನು ಹಣ್ಣುಗಳ ವಿಚಾರಕ್ಕೆ ಬಂದರೆ ಇಲ್ಲಿ ಸಿಗುವ ಎಷ್ಟೋ ಹಣ್ಣುಗಳನ್ನು ನಾನು ನೋಡೇ ಇರಲಿಲ್ಲ.ಆಗತಾನೆ ಕಿತ್ತು ತಂದ ರಸಭರಿತ ಹಣ್ಣುಗಳು,ತರಕಾರಿಗಳು ನಮ್ಮಂತಹ ಪುಳಿಚಾರುಗಳಿಗೆ ಸಮಾಧಾನ ತರುತ್ತದೆ. ಸಧ್ಯ... ವಿದೇಶಕ್ಕೆ ಬಂದರೂ ನಮ್ಮ ಶೈಲಿಯ ಊಟೋಪಚಾರಕ್ಕೆ ಭಂಗವಿಲ್ಲದಂತೆ ಇರಬಹುದು ಎಂಬ ಸಮಾಧಾನ ಉಂಟಾಗುತ್ತದೆ.

ನಿಮಗೆ ಮೆಹಂದಿ,ಹಚ್ಚೆಯ ಅಥವ ಟ್ಯಾಟೋ ಹುಚ್ಚೆ....?  ಹಾಗಾದರೆ ಇಲ್ಲಿ ಬಂದು ನೋಡಿ...!ಮೈ..ಕೈ ಮೇಲೆಲ್ಲಾ ಚಿತ್ರ ಬಿಡಿಸುವ ಮಂದಿ ತಮ್ಮ ಸ್ಟಾಲ್ ಗಳಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ.ದೇಹದ ತುಂಬಾ ಹಚ್ಚೆ ಬರೆಸಿಕೊಳ್ಳುತ್ತಿರುವ ವಿದೇಶಿಯರನ್ನೂ ನಾವಿಲ್ಲಿ ಕಾಣಬಹುದು.ಆಸ್ಟ್ರೇಲಿಯನ್ ಯುವಕರು ತಮ್ಮ ಮೈ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಓಡಾಡುತ್ತಾರೆ.   ಸಾಮಾನ್ಯವಾಗಿ ಮೆಹಂದಿಯ ಸ್ಟಾಲ್ ಗಳ ಮಾಲೀಕರು ನಮ್ಮ  ಭಾರತೀಯರೆನ್ನುವುದು ಮೆಚ್ಚುಗೆಯ ವಿಷಯ. ಟ್ಯಾಟೋ ಸ್ಟಿಕ್ಕರುಗಳೂ ಇಲ್ಲಿ ದೊರೆಯುತ್ತವೆ.

ಸಮುದ್ರದಲ್ಲಿ ಸಿಗುವ ಕಪ್ಪೆಚಿಪ್ಪು,ಶಂಖಗಳು,ನಕ್ಷತ್ರ ಮೀನಿನ ಚಿಪ್ಪುಗಳಿಂದ ತಯಾರಿಸಲಾದ ಅಲಂಕಾರಿಕ ವಸ್ತುಗಳನ್ನು ಇಲ್ಲಿ ಹೇರಳವಾಗಿ ಮಾರಾಟಕ್ಕಿಟ್ಟುಕೊಂಡಿರುತ್ತಾರೆ. ಶೋಕೇಸಿನಲ್ಲಿಡುವ ವಸ್ತುಗಳು,ಬಿದಿರಿನಿಂದ ತಯಾರಿಸಲಾದ ಬುಟ್ಟಿ,ತೆಂಗಿನ ಕಡ್ಡಿ ಪೊರಕೆಯನ್ನೂ ನಾನಿಲ್ಲಿ ಕಂಡು ಆಶ್ಚರ್ಯಪಟ್ಟೆ. ವಾರವಿಡೀ ಕುಳಿತು ತಮ್ಮ ಕೈಯ್ಯಾರೆ ತಯಾರಿಸಲಾದ ಆಕರ್ಷಕವಾದ ಪೇಯಿಂಟಿಂಗ್ ಮತ್ತು ಕಸೂತಿ ವಸ್ತುಗಳನ್ನು ಮನೆ ಗೋಡೆಗಳಿಗೆ ಹಾಕಲು ಜನ ಖರೀದಿಸುತ್ತಾರೆ.















ವೀಕೆಂಡ್ ಎಂದು ಆರಾಮಾಗಿ ಕಾಲ ಕಳೆಯುವ ಇಲ್ಲಿನ ಜನ , ಭಾನುವಾರ ಬೆಳಗ್ಗೆ ಇಲ್ಲಿಗೆ ತಮ್ಮ ಫ್ಯಾಮಿಲಿಯೊಂದಿಗೆ ಬಂದು ಬೇಕಾದ ಸಾಮಾನು ಕೊಂಡು,ಬೆಳಗಿನ ಉಪಾಹಾರವನ್ನು,ಕಾಫಿ,ಜ್ಯೂಸನ್ನು ಇಲ್ಲೇ ಮುಗಿಸಿ ಕಾಲ ಕಳೆಯುತ್ತಾರೆ.ಇಲ್ಲಿ ಕಾಫಿ ಸ್ಟಾಲ್ ,ಬ್ರೆಡ್ ಬೇಕರಿ ಸ್ಟಾಲುಗಳನ್ನು ಸಹ ಹಾಕಿರುತ್ತಾರೆ.
ಜನರ ಮನೋರಂಜನೆಗಾಗಿ ಮತ್ತು ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಉದಯೋನ್ಮುಖ ಕಲಾವಿದರು ಟೆಂಟುಗಳನ್ನು ಹಾಕಿಕೊಂಡು ಹಾಡುವುದು ಮತ್ತು ಗಿಟಾರ್ ನುಡಿಸುತ್ತಿರುತ್ತಾರೆ.ಬಂದ ಕೆಲಸ ಮುಗಿಸಿ ಇಲ್ಲಿನ ಫುಟ್ಪಾತಿನಲ್ಲಿರುವ ಬೆಂಚುಗಳ ಮೇಲೆ ಕುಳಿತು ಸಂಗೀತವನ್ನು ಆಸ್ವಾದಿಸುವ ಬಿಳಿಯರನ್ನು ನಾವಿಲ್ಲಿ ಕಾಣಬಹುದು.ಮನೆಯಿಂದ ಹೊರಗೆ ಬಂದರೆ ತಮ್ಮ ವಾಹನಗಳಲ್ಲೇ ಓಡಾಡುವ ಇಲ್ಲಿನ ಜನರನ್ನು ನೋಡಬೇಕೆಂದರೆ ನಾವು ಈ ಮಾರ್ಕೆಟ್ ಗೆ ಹೋಗಲೇಬೇಕು.ನಮ್ಮ ದೇಶದಲ್ಲಿ ಎಲ್ಲೆಂದರಲ್ಲಿ ಜನವೋ ಜನ ಆದರೆ ಇಲ್ಲಿ ಮಾತ್ರ ಬರೀ ಕಾರುಗಳು. ಕೈ ಹಿಡಿದು ಬರುವ   ವಯಸ್ಸಾದ ದಂಪತಿಗಳು, ತಮ್ಮ ಪುಟ್ಟ ಮಗುವನ್ನು ಮಕ್ಕಳಗಾಡಿಗಳಲ್ಲಿ ಕೂರಿಸಿಕೊಂಡು ಅತ್ತಿತ್ತ ಓಡಾಡುತ್ತಾ ತಮಗೆ ಬೇಕಾದ ವಸ್ತುವನ್ನು ಖರೀದಿಸುವ ಯುವ ದಂಪತಿಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ.

ಮಕ್ಕಳಿಗೆ ಆಟವಾಡಲು ಪ್ಲಾಸ್ಟಿಕ್ಕಿನ ಜಾರುವಬಂಡಿ ಹಾಗೂ ಇನ್ನಿತರ ಆಟಗಳನ್ನು ಇಲ್ಲಿ ಸಿದ್ಧಪಡಿಸಿರಿತ್ತಾರೆ. ಚಿಕ್ಕ ಮಕ್ಕಳು ಆಡಿ -ನಲಿದು ಸಂತಸಪಡುತ್ತಾರೆ.
ಭಿಕ್ಷೆ ಬೇಡುತ್ತಿರುವ ಪೋಲಿಯೊ ಪೀಡಿತ ಬಾಲಕ

ಗಿಟಾರ್ ನುಡಿಸಿ, ತನ್ನ ಓದಿಗಾಗಿ ಹಣ ಸಂಪಾದಿಸುತ್ತಿರುವ ಆಸ್ಟ್ರೇಲಿಯನ್ ಮುದ್ದುಬಾಲೆ 
ನಮ್ಮನ್ನು ನೋಡಿ ಆತ್ಮೀಯ ಭಾವವನ್ನು ಪ್ರಕಟಿಸುವ ಮತ್ತು Excuse me, Sorry ಎಂದು ಉಲಿಯುತ್ತಾ,ನಗು ಸೂಸುತ್ತಾ ಓಡಾಡುವ ಬಿಳಿಯರ ಬಗ್ಗೆ ನಮಗೆ ಗೌರವ ಭಾವ ಉಂಟಾಗುತ್ತದೆ. 

ಅಲ್ಲಿನ ಸಂಡೇ ಮಾರ್ಕೆಟ್ ನಲ್ಲಿ ಕಳೆದ ಗಂಟೆಗಳು ನಮಗೆ ಆಸ್ಟ್ರೇಲಿಯನ್ ಜನರ ಜೀವನದ ಒಂದು ಮುಖವನ್ನು ಪರಿಚಯಿಸಿತಲ್ಲದೆ ನಮಗೆ ಸಂತಸವನ್ನು ನೀಡಿತು.      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.