ಬಹುಮಾನ

ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ ತೇಲಿ ಬರುತ್ತಿದೆ ಎಂದು ಅಚ್ಚರಿಪಡುತ್ತಾ, ಗಾಯನ ಸಂಪೂರ್ಣಗೊಂಡ ನಂತರ ನಿಧಾನವಾಗಿ ಹಾಸಿಗೆಯಿಂದೆದ್ದೆ. ನನಗೆ ಆ ದಿನವೆಲ್ಲಾ ಉಲ್ಲಾಸಕರವೆನ್ನಿಸಿತು. ಮುಂದಿನ ನಾಲ್ಕೈದು ದಿನಗಳೂ ಸವಿಗಾನದ ಸುಪ್ರಭಾತ ನನ್ನದಾಗತೊಡಗಿದಾಗ ಈ ಹಾಡುಗಾರ್ತಿ ಯಾರಿರಬಹುದು ಎಂಬ ಕುತೂಹಲ ಜೊತೆಗೆ ಆಕೆಯನ್ನು ಕಾಣುವ ಹಂಬಲ ಮೆಲ್ಲಗೆ ಮೊಳಕೆಯೊಡೆಯಿತು.

ಮರುದಿನ ನಸುಕಿನಲ್ಲಿಯೇ ಎದ್ದು, ಮಧುರ ಕಂಠದ ಜಾಡನ್ನು ಹಿಡಿದು ಹೊರಟೆ. ಸುತ್ತಮುತ್ತಲೆಲ್ಲಾ ಸುಮಧುರ ತರಂಗಗಳೇ ವಿನಾ ಹಾಡುಗಾರ್ತಿಯ ಸುಳಿವು ಸಿಗಲಿಲ್ಲ. ನನ್ನ ಪ್ರಯತ್ನವನ್ನು ಮಾತ್ರ ನಾನು ನಿಲ್ಲಿಸಲಿಲ್ಲ. ಆಕೆಯನ್ನು ಕಂಡು ಅವಳ ಹಾಡುಗಾರಿಕೆಯನ್ನು ತುಂಬುಕಂಠದಿಂದ ಹೊಗಳಿ ,ಆಕೆಗೊಂದು ಮೆಚ್ಚುಗೆಯ ಬಹುಮಾನವನ್ನು ನೀಡಬೇಕೆಂಬ ಕಾತರ ನನಗೆ ದಿನೇದಿನೇ ಹೆಚ್ಚಾಗತೊಡಗಿತು. ಒಂದು ದಿನವಂತೂ ಆಕೆಯನ್ನು ಕಂಡೆ ಎಂದುಕೊಳ್ಳುತ್ತಿರುವಂತೆಯೇ ನನ್ನನ್ನು ದೂರದಿಂದಲೇ ಗಮನಿಸಿ, ಹಾಡುವುದನ್ನು ನಿಲ್ಲಿಸಿ ಮರಗಳ ಮರೆಗೆ ಹೊರಟುಹೋದಳು. ಈಕೆ ಬಲು ಚೂಟಿ ಎಂದು ನಿರಾಶೆಗೊಳಗಾದೆ.


ಸತತ ಪ್ರಯತ್ನದ ನಂತರ ಒಂದು ಮುಂಜಾನೆ ಸಿರಿಕಂಠದ ಒಡತಿಯ ದರ್ಶನ ಭಾಗ್ಯ ನನ್ನದಾಯಿತು. ಕೆಂಪು ಕಂಗಳ ಚೆಲುವೆಯನ್ನು ಕಣ್ತುಂಬಿಕೊಳ್ಳುತ್ತ ಆತುರಾತುರವಾಗಿ "ನಿನಗಾಗಿ ಎಷ್ಟು ದಿನಗಳಿಂದ ಹುಡುಕುತಿದ್ದೆ ಗೆಳತಿ.ಇಷ್ಟು ಇಂಪಾದ ಸಂಗೀತವನ್ನು ನಿನಗೆ ಕಲಿಸಿದವರಾರು?" ಎಂದೆ. ಏನೋ ನನ್ನ ಪುಣ್ಯ ಆಕೆ ಓಡಿಹೋಗಲಿಲ್ಲ. ನಿಧಾನವಾಗಿ ಉಲಿದಳು ’ಗೆಳತಿ ನನ್ನ ಹಾಡಿನಲ್ಲಿ ಅಂಥಾ ವಿಶೇಷವೇನಿದೆ? ದೇವರಿತ್ತ ಕೊಡುಗೆಯಿದು. ನನ್ನ ಬಳಗದವರೆಲ್ಲಾ ಹಾಡುಗಾರರೇ. ನನ್ನ ಹುಟ್ಟಿನಿಂದಲೇ ಈ ಸಂಗೀತಕಲೆ ನನಗೆ ಒಲಿದು ಬಂದಿದೆ. ನಿತ್ಯದ ಕೆಲಸಗಳ ಜೊತೆಗೆ ನನಗಾಗಿ ನಾನು ಹಾಡಿಕೊಳ್ಳುತ್ತಿರುತ್ತೇನೆ."

"ಗೆಳತಿ, ನಿನ್ನ ಗಾಯನ ಸಾಮರ್ಥ್ಯದ ಅರಿವು ನಿನಗಿದ್ದಂತಿಲ್ಲ. ಸಂಗೀತದಲ್ಲಿ ನಿನ್ನನ್ನು ಮೀರಿಸುವವರುಂಟೆ? ದಿನವೆಲ್ಲ ನಿನ್ನ ಹಾಡನ್ನು ಕೇಳುವ ಬಯಕೆ. ನೀನು ನನ್ನೊಡನೆ ಬರುವೆಯಾ? ನಿನ್ನ ಈ ಸವಿಗಾನಕೆ ಬಹುಮಾನವನ್ನು ನೀಡಿ ಸನ್ಮಾನಿಸುವಾಸೆ. ಬಾ ಗೆಳತಿ" ಎಂದಾಗ ಆಕೆ ಕೊರಳ ಕೊಂಕಿಸಿ " ನನಗೇಕೆ ಬಹುಮಾನಗಳು..ಸನ್ಮಾನಗಳು...ಗೆಳೆಯ ?? ನಾನು ಯಾರಿಗಾಗಿಯೂ ಹಾಡಲಾರೆ. ನನ್ನ ಆತ್ಮತೃಪ್ತಿಗಾಗಿ ಮಾತ್ರ ನನ್ನ ಈ ಗಾಯನ. ಚೈತ್ರದ ಸೌಂದರ್ಯ ಕಣ್ತುಂಬುತ್ತಿದ್ದಂತೆ ನನ್ನ ಕಂಠಕ್ಕೆ ಮತ್ತೇರುತ್ತದೆ. ಹಾಡುವ ಬಯಕೆ ಮೈದುಂಬುತ್ತದೆ. ಹಚ್ಚಹಸಿರಿನ ಬನದ ಚೆಲುವು, ಮಾವು ಬೇವುಗಳ ಹೊಸ ಚಿಗುರು ನನ್ನ ಇಂಚರಕ್ಕೆ ಸ್ಫೂರ್ತಿ. ಅದಿರಲಿ , ನೀನೇನಂದೆ ...? ಬಹುಮಾನ ನೀಡುವೆ ಎಂದೆಯಲ್ಲವೇ? ಹಾಗಾದರೆ ಒಂದು ಕೆಲಸ ಮಾಡುವೆಯಾ? ನನಗಾಗಿ , ನನ್ನ ಪರಿವಾರಕ್ಕಾಗಿ ಮರಗಿಡಗಳನ್ನು ಕಡಿದು ಹಾಕದೆ ಎಲ್ಲೆಲ್ಲಿಯೂ ಹಸಿರನ್ನು ಉಳಿಸಬಲ್ಲೆಯಾ ? ಇದೇ.. ಇದೇ.. ನೀನು ನನಗೆ ನೀಡುವ ಸಮಂಜಸ ಬಹುಮಾನ" ಎಂದು ನನ್ನ ಉತ್ತರಕ್ಕೂ ಕಾಯದೆ ಮತ್ತೆ ತನ್ನ ಮಧುರ ಕಂಠದಿಂದ ಕುಹೂ...ಕುಹೂ.... ಎಂದು ಹಾಡುತ್ತಾ ಪುರ್ರನೆ ಹಾರಿಹೋದ ಕೋಗಿಲೆಯನ್ನೇ ನೋಡುತ್ತಾ , ನಿನಗೆ ಬಹುಮಾನ ನೀಡುವ ಯೋಗ್ಯತೆ ಈ ಸ್ವಾರ್ಥಿ ಮಾನವನಿಗಿದೆಯೇ ಎನ್ನಿಸಿತು. ಆದರೆ ಕರ್ಣಾನಂದಕರವಾದ ಕುಹೂ.. ಇಂಚರಕ್ಕೆ ಪ್ರತಿಯಾಗಿ ಗೆಳತಿ ಕೇಳಿದ ಬಹುಮಾನವನ್ನು ಕೊಡಲು ನನ್ನ ಕೈಲಾದ ಪ್ರಯತ್ನ ಮಾಡಲೇಬೇಕೆಂಬ ನಿಶ್ಚಯಕ್ಕೆ ಬಂದಾಗ ಮನ ಹಗುರಾಯಿತು.

"ಮಾತು"

ಈ ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋಚಿಸುವ ಹಾಗು ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ. ಭಾವನೆಗಳ ಅಭಿವ್ಯಕ್ತಿಗೆ "ಮಾತು" ಆ ದೇವರು ನಮಗಿತ್ತ ಅಪೂರ್ವ ಕೊಡುಗೆ.ಮುಗ್ಧ ಮನಸ್ಸಿನ ಮಗುವಿನ ತೊದಲುನುಡಿ ಕೇಳಲು ಹಿತ. ಹಾಗೇ ಙ್ಞಾನಿಯಾದವನ ಅನುಭವಜನ್ಯ ನುಡಿಗಳು ಅತ್ಯಮೂಲ್ಯವೆನ್ನಿಸುತ್ತವೆ. ಮಾತನಾಡುವುದು ಒಂದು ಕಲೆ. ಎಲ್ಲರ‍ಿಗೂ ಈ ಕಲೆ ಒಲಿದಿರುವುದಿಲ್ಲ.ಈ ಅಪೂರ್ವವಾದ ಮಾತಿನ ಬಗ್ಗೆ ನಮ್ಮ ಹಿರಿಯರ ಅನುಭವಭರಿತ ಅಭಿಪ್ರಾಯಗಳು ನಮಗೆ ದಾರಿದೀಪ.ಸಂಸ್ಕಾರವಂತರಾಗಿ ಬದುಕಲು ಇವು ನಮಗೆ ಮಾರ್ಗದರ್ಶಿಯಾಗಿವೆ.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾನು ನೆಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ

ಬಸವಣ್ಣನವರ ಈ ವಚನ ನಮ್ಮ ಮಾತು ಹೇಗಿರಬೇಕೆಂಬುದರ ಬಗ್ಗೆ ಪೂರ್ಣ ಮಾಹಿತಿ ನೀಡುವಂತಿದೆ. ಸುಂದರವಾದ,ನಿಷ್ಕಲ್ಮಶವಾದ,ನೇರವಾದ ಮತ್ತು ಆತ್ಮಸಾಕ್ಷಿಗೆ ಒಪ್ಪುವ ಮಾತು ಆ ದೇವರಿಗೂ ಪ್ರೀತಿ ಎಂದಿದ್ದಾರೆ.

ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಮಾತೇ ಕಾರಣ ಎನ್ನುವುದು ಸರ್ವಙ್ಞನ ಅಭಿಪ್ರಾಯ.
ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವಸಂಪದವು
ಜಗಕೆ ಮಾತೆ ಮಾಣಿಕವು ಸರ್ವಙ್ಞ

ಇನ್ನು ನಮ್ಮ ಜನಪದರ ಅನುಭವದ ಮಾತು ನೋಡೋಣ.

ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು

ಮಾತೇ ಮುತ್ತು ಮಾತೇ ಮೃತ್ಯು

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು

ಮಾತೇ ಸಂಪತ್ತು ಮಾತೇ ಆಪತ್ತು

ಮಾತೇ ಮುತ್ತು ಮಾತೇ ಕುತ್ತು

ಮಾತೇ ಮಾಣಿಕ್ಯ

ಕಳೆದು ಹೋದ ಕಾಲ, ಬಾಯಿಯಿಂದ ಜಾರಿದ ಮಾತು ಮರಳಿ ಪಡೆಯಲು ಸಾಧ್ಯವಿಲ್ಲ.ಆದ್ದರಿಂದ ಮಾತನಾಡುವಾಗ ಯೋಚಿಸಿ ಮಾತನಾಡುವುದು ಉತ್ತಮ.ಆಡಿದ ಮಾತಿಗೆ ಬದ್ಧರಾಗಿರುವುದು ನಮ್ಮ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಕ್ಷಣ ಚಿತ್ತ ಕ್ಷಣ ಪಿತ್ತವೆಂಬಂತೆ ಊಸರವಳ್ಳಿಯ ರೀತಿ ಮಾತು ಬದಲಿಸುವುದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ.ನುಡಿಯಲ್ಲಿ ನಯ ಮತ್ತು ನಿಸ್ವಾರ್ಥತೆಯಿರಬೇಕು. ಕಲಾತ್ಮಕವಾಗಿ, ಸಂದರ್ಭೋಚಿತವಾಗಿ ಮಾತನಾಡುವ ಕಲೆಯನ್ನು ನಾವು ನಮ್ಮದಾಗಿಸಿಕೊಳ್ಳಬೇಕೆಂಬುದು ಮೇಲಿನ ಗಾದೆಮಾತುಗಳ ಅರ್ಥವಾಗಿದೆ.

ಕವಿ ಚನ್ನವೀರ ಕಣವಿಯವರ ಕವಿತೆಯ ಸಾಲೊಂದನ್ನು ನಾನಿಲ್ಲಿ ಉಲ್ಲೇಖಿಸಲು ಇಚ್ಚಿಸುತ್ತೇನೆ.ಈ ಕವಿತೆಯ ಶೀರ್ಷಿಕೆ "ಮಾತು"

ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತದ ಹೂವು ಸುರಿಸುವಂತೆ
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಠಿ ಸಂಪೂರ್ಣತೆಯ ಬಿಂಬಿಪಂತೆ.

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ

ಎಷ್ಟೊಂದು ಅಮೂಲ್ಯವಾದ ಸಾಲುಗಳು.ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬಹು ಯೋಗ್ಯವಾದ ಬರಹಗಳು.ನಾವು ಮಾತನಾಡುವಾಗ ಹಿರಿಯರ ಈ ನುಡಿಗಳನ್ನು ನೆನಪಿಸಿಕೊಳ್ಳುವುದು ಒಳ್ಳೆಯದು.

ಹನಿಗವನಗಳು

ಹನಿಗವನಗಳು

ಇಬ್ಬನಿ - ಎರಡು ಹನಿ

ಶ್ವೇತವಸ್ತ್ರಧಾರ‍ಿಣಿ
ಶುಭ್ರತೆಯ ಪ್ರತಿರೂಪಿಣಿ
ಎಳೆಬಿಸಿಲಿಗೆ ಮಾಯವಾಗುವ
ವಿಸ್ಮಯದ ಮಣಿ


*************

ನಿರಾಭರಣ ಸುಂದರಿ
ಪಾರದರ್ಶಕ ಕಿನ್ನರಿ
ಕಣ್ಮನ ತುಂಬುವ
ಮಂಜಿನ ಹನಿ
ನೀ ಚೇತೋಹಾರಿ

*************