ನನಗೆ ಕುವೆಂಪುರವರ ಹುಟ್ಟೂರು ಕುಪ್ಪಳ್ಳಿಯನ್ನು ನೋಡಿದಾಗೆಲ್ಲಾ ನಾನು ಮಲೆನಾಡಿನಲ್ಲಿ ಹುಟ್ಟಬೇಕಿತ್ತು ಎನ್ನಿಸುತ್ತದೆ. ಬನವಾಸಿ, ಕುಪ್ಪಳ್ಳಿಗಳು ಕನ್ನಡಿಗರ ಪಾಲಿಗೆ ಸ್ವರ್ಗ ಸಮಾನ ಸ್ಥಳಗಳು ಎಂದರೆ ತಪ್ಪಾಗಲಾರದು.ಎಷ್ಟು ವರ್ಣನೆಗೈದರೂ ಮುಗಿಯದ ಸೊಬಗಿನೊಂದಿಗೆ ಕವಿಗಳ ಮನಸೂರೆಗೊಳಿಸಿದ ತಾಣಗಳಿವು.ಇಂತಹ ಸುಂದರ ಪರಿಸರದಲ್ಲಿ ವಿಹರಿಸುವ ಸೌಭಾಗ್ಯ ಎಲ್ಲರಿಗೂ ಲಭ್ಯವಾಗುವುದಿಲ್ಲ.ಆದರೆ ನಾವು ಸ್ವಲ್ಪ ಮನಸ್ಸು ಮಾಡಿದರೆ ನಾವಿರುವ ಜಾಗದಲ್ಲಿಯೇ ನಿಸರ್ಗದ ಚಿಕ್ಕಪುಟ್ಟ ಅಚ್ಚರಿಗಳನ್ನು ಕಂಡು ಆನಂದಿಸಬಹುದು.ಬಾಲ್ಯದಿಂದಲೂ ನನಗೆ ಕೀ.. ಕೀ.. ಎಂದು ಇಂಚರಗೈಯ್ಯುತ್ತಾ, ಪುರ್ರನೆ ಆಗಸಕ್ಕೆ ಹಾರಿ ಸ್ವೇಚ್ಛೆಯಾಗಿ ವಿಹರಿಸುವ ಪಕ್ಷಿಗಳೆಂದರೆ ಅಕ್ಕರೆ ಒಂದೆಡೆಯಾದರೆ ಅವುಗಳ ದಿನಚರಿ ಕುರಿತು ಕುತೂಹಲ ಇನ್ನೊಂದೆಡೆ.ಕೆಲವಾರು ನಿಮಿಷಗಳಾದರೂ ಹಕ್ಕಿ ಪಕ್ಷಿಗಳ ಚಿನ್ನಾಟವನ್ನು ನಮ್ಮ ಮನೆಯಂಗಳದಲ್ಲಿಯೇ ಕಂಡು ಆನಂದಿಸುವ ಅವಕಾಶ ದೊರೆತರೆ......!!ವಾಹ್....!! ಇಲ್ಲಿದೆ ನೋಡಿ ನಮ್ಮ ಮನೆಯಂಗಳದ ಮಾತು.....!
ಹದಿನಾರು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿರುವ ಪ್ರಿಯದರ್ಶಿನಿ ಬಡಾವಣೆಯಲ್ಲಿ ಮನೆ ಕಟ್ಟುವ ನಿರ್ಧಾರಕ್ಕೆ ಬಂದೆವು. ನಮ್ಮದೇ ಆದ ಪುಟ್ಟ ಗೂಡಿಗೆ ವಾಸಕ್ಕೆ ಬಂದೆವು.ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು.ನಮ್ಮ ಬಡಾವಣೆ ಶಿವಮೊಗ್ಗದ ಸಿಟಿಯಿಂದ ಸುಮಾರು ೩-೪ ಕಿ ಮೀ ದೂರವಿದೆ.ಆದರೆ ಈಗ ಊರು ಇದಕ್ಕೂ ಮುಂದೆ ಬೆಳೆದು ನಿಂತಿದೆ-ಆ ಮಾತು ಬೇರೆ.
ಹದಿನಾರು ವರ್ಷಗಳ ಹಿಂದೆ ನಮ್ಮ ಬಡಾವಣೆ ಜನಸಂದಣಿ ಮತ್ತು ವಾಹನ ಭರಾಟೆಯಿಂದ ದೂರವಿದ್ದುದರಿಂದ ಅಲ್ಲಿ ಮೌನ,ಗಂಭೀರತೆ ಮನೆ ಮಾಡಿತ್ತು.ಅಲ್ಲೊಂದು ಇಲ್ಲೊಂದಿದ್ದ ಮನೆಗಳು. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಗಂಡ-ಹೆಂಡತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗುತ್ತಿದ್ದುದರಿಂದ ಬೆಳಗಿನ ವೇಳೆ ಬಡಾವಣೆಯಲ್ಲಿ ಎಲ್ಲವೂ ಖಾಲಿ ಎನಿಸುತ್ತಿತ್ತು.ಬೇಸಿಗೆಯಲ್ಲಿ ರಣ ಬಿಸಿಲಿನ ಬೇಗೆಯಾದರೆ ಮಳೆಗಾಲದಲ್ಲಿ ಸುರಿಯುವ ಮಳೆಯೊಂದಿಗೆ ಬಿಚ್ಚಿ ಬೀಳಿಸುವ ಗುಡುಗು-ಸಿಡಿಲಿನ ಅಬ್ಬರ. ರಾತ್ರಿಯಲ್ಲಿ ಕಳ್ಳರ ಭಯ. ಮನೆಯಲ್ಲಿದ್ದಾಗ ಏನೋ ಒಂದು ರೀತಿ ಹೆದರಿಕೆಯ ಭಾವ .ಅಲ್ಲೊಂದು-ಇಲ್ಲೊಂದಿದ್ದ ಮನೆಯವರಲ್ಲಿ ಆತ್ಮೀಯತೆ ಬೆಳೆಯಲು ಈ ವಾತಾವರಣವೂ ಪ್ರೇರಣೆಯಾಗಿತ್ತು ಎಂಬುದು ಬೇರೆ ಮಾತು. ಹಾಗಾಗಿ ೧೦-೧೨ ಮನೆಯವರೆಲ್ಲಾ ಸೇರಿ ಒಂದು ಸಂಘವನ್ನು ಮಾಡಿಕೊಂಡೆವು. ಸಂಘದ ಮೂಲಕ ನಮ್ಮ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸುತ್ತಾ ,ನಮ್ಮ ಮನದ ಸಂತಸಕ್ಕಾಗಿ ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡೆವು.ಪ್ರತಿ ವರ್ಷವೂ ಜನವರಿ ಒಂದನೇ ತಾರೀಖಿನಂದು ನಮ್ಮ ಬಡಾವಣೆಯವರೆಲ್ಲ ಒಟ್ಟಾಗಿ ಕಲೆತು ನೂತನ ವರ್ಷಾಚರಣೆಯನ್ನು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದೆವು.ಇವತ್ತಿಗೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ.ಈಗ ನಮ್ಮ ಹದಿನಾರನೇ ವಾರ್ಷಿಕೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ಆ ಹಿಂದಿನ ದಿನಗಳು ನೆನಪುಗಳು ನನ್ನನ್ನು ಕಾಡುತ್ತಿದೆ.
ನಮ್ಮ ಸಂಘ ಮತ್ತೊಂದು ಸ್ತುತ್ಯಾರ್ಹ ಕೆಲಸವನ್ನು ಮಾಡಿತು.ಬಿಸಿಲಿನ ಬೇಗೆಯನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ಬಡಾವಣೆಯಲ್ಲಿ ಬೆಳೆಸುವ ವಿಚಾರವನ್ನು ಕಾರ್ಯರೂಪಕ್ಕೆ ತರಲಾಯಿತು.ಅಂದಿನ ಆ ನಿರ್ಧಾರ ನಮ್ಮ ಬಡಾವಣೆಯನ್ನು ಇಂದು ಹಸಿರಾಗಿಸಿ, ಮಾದರಿ ಬಡಾವಣೆ ಎನ್ನಿಸಿದೆ.ಅಂದು ಬೆರಳೆಣಿಕೆಯ ಜನ ಉತ್ಸಾಹದಿಂದ ನೆಟ್ಟು, ಬೆಳೆಸಿದ ಸಸಿಗಳು ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತು ನಮಗೆ ತಂಪನ್ನೀಯುತ್ತಿವೆ. ವಿವಿಧ ರೀತಿಯ ಪಕ್ಷಿಸಂಕುಲಕ್ಕೆ ಆಶ್ರಯ ನೀಡಿ, ಅವುಗಳ ಉಳಿವಿಗೆ ಮಾರ್ಗ ತೋರಿವೆ. ಮೌನದ ಬೀಡಾಗಿದ್ದ ನಮ್ಮ ಬಡಾವಣೆಯಲ್ಲೀಗ ಹಕ್ಕಿಗಳ ಕಲರವದಿಂದಾಗಿ ,ಒಂದು ರೀತಿಯ ಮಂಗಳಕರ ನಿನಾದ ಸದಾ ಮೊಳಗುತ್ತಿರುವಂತಿದೆ.
ನಮ್ಮ ಮನೆಯ ಮುಂದಿರುವ ಹಸಿರಾದ ಮರ-ಗಿಡಗಳು ನನಗೀಗ ಆತ್ಮೀಯವಾಗಿವೆ. ಕಾರಣ ಇಲ್ಲಿ ಆಶ್ರಯ ಪಡೆದಿರುವ ನೂರಾರು ಪಕ್ಷಿಗಳು.ಅವುಗಳ ಶಿಸ್ತುಬದ್ಧವಾದ ಜೀವನ ಶೈಲಿ ನನಗೆ ಅಚ್ಚರಿ ಉಂಟುಮಾಡಿದೆ. ಮುಂಜಾನೆಯ ಹಕ್ಕಿಗಳ ಕಲರವ ನಮ್ಮನ್ನು ಬೆಳಗಾಯಿತೆಂದು ಎಚ್ಚರಿಸುತ್ತದೆ. ಬಿಡುವಿನ ದಿನಗಳಲ್ಲಿ ಜೋಡಿ ಹಕ್ಕಿಗಳ ಚಿನ್ನಾಟ,ಗೂಡು ಕಟ್ಟುವಾಗಿನ ಕಾರ್ಯತತ್ಪರತೆ,ಮರಿಗಳಿಗೆ ಗುಟುಕು ನೀಡಿ ಸಾಕುವ ಪರಿಯನ್ನು ನೋಡಿ ಆನಂದಿಸಿದ್ದೇನೆ.ಅವುಗಳ ದಿನಚರಿಯನ್ನು ಕುತೂಹಲದಿಂದ ನೋಡಿ ಬೆರಗಾಗಿದ್ದೇನೆ. ರೆಕ್ಕೆ ಬಂದ ಮರಿ ಹಕ್ಕಿಗೆ ಮಾರ್ಗದರ್ಶನ ಮಾಡುವ ಹಿರಿತನವನ್ನು ಕಂಡು ಮೈಮರೆತಿದ್ದೇನೆ.ಹಾಗೆಯೇ ,ತಮ್ಮ ಮೊಟ್ಟೆಗಳನ್ನು ಬೆಕ್ಕೋ, ಹಾವೋ ಅಪಹರಿದಾಗಿನ ಅವುಗಳ ಆರ್ತನಾದವನ್ನು ಕೇಳಿ ಸಂಕಟವನ್ನೂ ಅನುಭವಿಸಿದ್ದೇನೆ. ನಾವೀಗ ಬರೀ ಪುಸ್ತಕದಲ್ಲಿ ಮಾತ್ರ ನೋಡಿದ,ಹೆಸರೇ ತಿಳಿಯದ ಕೆಲವು ಪಕ್ಷಿಗಳನ್ನು ಮನೆಯ ಮುಂದಿನ ಮರ-ಗಿಡಗಳಲ್ಲಿ, ನಮ್ಮ ಮನೆಯ ಟೆರೇಸ್ ಮೇಲೆ ನೋಡಿ ಅನಿರ್ವಚನೀಯವಾದ ಆನಂದವನ್ನು ಅನುಭವಿಸುತ್ತಿದ್ದೇನೆ. ಆಫೀಸಿಗೆ ರಜವಿದ್ದಾಗ, ಒಬ್ಬಳೇ ಮನೆಯಲ್ಲಿದ್ದಾಗ ಮನೆಯ ಕಿಟಕಿಯಿಂದ ತೂರಿ ಬರುವ ಕೋಗಿಲೆಯ ಕುಹೂ.. ಗಾನಕ್ಕೆ ಮೈಮರೆತಿದ್ದೇನೆ.ಅರಗಿಳಿಗಳ ಹಾರಾಟಕ್ಕೆ ಆನಂದಿತಳಾಗಿದ್ದೇನೆ. ಹಕ್ಕಿ-ಪಕ್ಷಿಗಳ ಇಂಚರಕ್ಕೆ ತಲೆದೂಗಿದ್ದೇನೆ. ಸಂಜೆಗತ್ತಲಾಗುವ ಮುನ್ನವೇ ನಮ್ಮ ಮನೆ ಮುಂದಿನ ಮರದ ಆಶ್ರಯಕ್ಕೆ ಎಲ್ಲೆಲ್ಲಿಂದಲೋ ಬಂದು ರಾತ್ರಿ ಕಳೆಯುವ ನೂರಾರು ಪಕ್ಷಿಗಳನ್ನು ನೋಡಿ ಕೌತುಕಪಟ್ಟಿದ್ದೇನೆ.
ಮುದ್ದು ಅಳಿಲಿನ ಪುಟು-ಪುಟು ಓಡಾಟಕ್ಕೆ ಮನದಲ್ಲಿ ಮುದಗೊಂಡಿದ್ದೇನೆ. ಬಣ್ಣ-ಬಣ್ಣದ ಚಿಟ್ಟೆಗಳ ವೈಯ್ಯಾರದ ನರ್ತನಕ್ಕೆ ಮೈಮರೆಯುತ್ತೇನೆ. ಕಾಲಚಕ್ರ ತಿರುಗಿದಂತೆ ಅವುಗಳಲ್ಲಿ ಉಂಟಾಗುವ ಬದಲಾವಣೆಗೆ ಅಚ್ಚರಿಪಟ್ಟಿದ್ದೇನೆ.ಸಾವಿರಾರು ಜೇನುಹುಳಗಳು ಒಗ್ಗಟ್ಟಿನಿಂದ ಗೂಡು ಕಟ್ಟಿ, ಮಧುವಾಗಿಸುವಾಗಿನ ಅವುಗಳ ಕಾರ್ಯತತ್ಪರತೆ ಕಂಡು ಬೆರಗಾಗಿದ್ದೇನೆ.ನೆರಳಿನಾಶ್ರಯ ಬಯಸಿ ಬಂದ ಗೋವುಗಳ ಅಂಬಾ ದನಿಗೆ, ಮನಸ್ಸಿಗೆ ಉಲ್ಲಾಸದ ಹೂಮಳೆ ಸುರಿಸಿದ ಮಧುರಾನುಭೂತಿಯನ್ನು ಅನುಭವಿಸಿದ್ದೇನೆ.
ಕೇವಲ ಕೆಲವಾರು ಮರಗಳಿಂದಲೇ ಇಷ್ಟೆಲ್ಲಾ ಆನಂದವೇ ಎಂದು ಮನ ಅಚ್ಚರಿಪಡುವಂತಾಗಿದೆ.....!! ಅಂದು ನಮ್ಮ ಮನೆಯಂಗಳದಲ್ಲಿ ಮತ್ತು ಬಡಾವಣೆಯಲ್ಲಿ ಮನೆ ಮಾಡಿದ್ದ ಅಸಹನೀಯ ಮೌನ ಮುರಿದು ಮಾತಾಗಿದ್ದಕ್ಕೆ, ಮಾತು ಮಧುರಗೀತೆಯಾಗಿದ್ದಕ್ಕೆ ಇಂದು ಸಂತಸವಾಗಿದೆ.
ನಮೋ ಆಶ್ರಯದಾತ ....! ನಮೋ ನಮೋ ವೃಕ್ಷರಾಜ.....!!
೨೦೧೨ ಕ್ಕೆ ತೆರೆ ಬೀಳುತ್ತಿದೆ. ಮತ್ತೊಂದು ನೂತನ ವರ್ಷ ಆಗಮಿಸುತ್ತಿದೆ. ಸರ್ವರಿಗೂ ಎರಡುಸಾವಿರದ ಹದಿಮೂರನೇ ವರ್ಷಕ್ಕೆ ಶುಭಾಶಯಗಳು.