ಚೈತ್ರ ಸಂಭ್ರಮ


ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು.
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ.

ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಫೂರ್ತಿಗೊಂಡಿತು ಚೈತ್ರನಿಂದಲೆ.
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮ ಸಿಂಚನ.

ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ.
ಅಳಿಸಿ ಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು.

ಪ್ರಕೃತಿಯಂತೆಯೆ ನಮ್ಮ ಬದುಕು
ಚೈತ್ರದಾಗಮ ಬಯಸಿದೆ.
ಹಳೆಯ ನೋವಿನ ಕೊಳೆಯ ನೀಗಿಸಿ
ಸಂತಸದ ಚಿಗುರಿಗೆ ಕಾದಿದೆ.

ನೇತ್ರದಾನ

                 

ಅನ್ನದಾನವೆ ಶ್ರೇಷ್ಠ ಎಂಬುದೊಂದು ಉಕ್ತಿ
ವಿದ್ಯಾದಾನಕ್ಕಿದೆ ಜ್ಞಾನದಾ ಬೆಳಕು ನೀಡುವ ಶಕ್ತಿ

ಮರಣದ ನಂತರ ನೀವು ಮಾಡುವ ನೇತ್ರದಾನ
ದಾನಗಳಲ್ಲೆಲ್ಲ ಶ್ರೇಷ್ಠ ಎಂದಿದೆ ವೈದ್ಯಕೀಯ ವಿಜ್ಞಾನ

ದೃಷ್ಠಿ ಹೀನರಿಗೆ ಬೆಳಕಾಗಬಲ್ಲ ನಿಮ್ಮ ನಯನ
ನಿಮ್ಮೊಡನೆ ಮಣ್ಣಾಗಿಸದೆ ನೀಡಿ ದೃಷ್ಠಿದಾನ

ಅಂಧಕಾರವೆಂಬುದು ಮನುಜಕುಲಕೆ ಶಾಪ
ನೀವಾಗಬಾರದೇಕೆ ಕಣ್ಣಿಲ್ಲದವರ ಬಾಳಬೆಳಗುವ ದೀಪ?

ಸುಟ್ಟು ಬೂದಿಯಾಗಬಾರದು ದೇಹ ನಿರರ್ಥಕವಾಗಿ
ಸಾರ್ಥಕವಾಗಲಿ ಬದುಕು ಅಂಧರ ಬಾಳಿನ ಬೆಳಕಾಗಿ

           

ಅಳಿಲು ಸೇವೆ.. ಮಳಲ ಭಕ್ತಿ...!


          ಸೀತೆಯನ್ನು ಕದ್ದೊಯ್ದ ರಾವಣನ ಮೇಲೆ ಯುದ್ಧ ಅನಿವಾರ್ಯವಾದ ಸಂದರ್ಭ. ಆಗ ರಾಮ ಕಪಿಸೇನೆಯ ಸಹಾಯದಿಂದ ಲಂಕೆಗೆ ಸೇತುವೆ ನಿರ್ಮಿಸುವ ಕಾರ್ಯ ಕೈಗೊಳ್ಳುತ್ತಾನೆ. ವಾನರರೆಲ್ಲರೂ ಈ ಕಾರ್ಯವನ್ನು ಭಗವಂತನ ಸೇವೆಯೆಂದು ,ರಾಮನಾಮವನ್ನು ಜಪಿಸುತ್ತಾ, ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತು ತಂದು ಸೇತುವೆ ನಿರ್ಮಿಸಲು ತೊಡಗುತ್ತಾರೆ. ಆಗ  ಚಿಕ್ಕ ಅಳಿಲೊಂದು ಈ ಮಹತ್ತರ ಕಾರ್ಯದಲ್ಲಿ ತಾನೂ ಕೈ ಜೋಡಿಸಬೇಕೆಂದು ಬಯಸಿ, ಸೇತುವೆ ನಿರ್ಮಾಣಕ್ಕೆ ಬೇಕಾದ ಮರಳನ್ನು ಒಟ್ಟುಗೂಡಿಸಿ ಅರ್ಪಿಸಿತಂತೆ. ಸಮುದ್ರದ ನೀರಿನಲ್ಲಿ ಮುಳುಗಿ, ತನ್ನ ಒದ್ದೆ ಮೈಯನ್ನು ಮರಳಿನಲ್ಲಿ ಹೊರಳಿಸಿ ,ತನ್ನ ಮೈಗಂಟಿದ ಮರಳನ್ನು ಸೇತುವೆ ನಿರ್ಮಾಣಕ್ಕೆ ಶೇಖರಿಸಿತಂತೆ. ಆ ಪುಟ್ಟ ಅಳಿಲಿನ ಈ ಕೆಲಸವನ್ನು ಕಂಡ ರಾಮ ಸಂತಸದಿಂದ ಅದರ ಮೈದಡವಿ ಆಶೀರ್ವದಿಸಿದನಂತೆ. ರಾಮನ ಆಶೀರ್ವಾದದ ಕುರುಹಾಗಿ ಅದರ ಬೆನ್ನಿನ ಮೇಲೆ ಈಗಲೂ ಮೂರು ಗೆರೆಗಳಿವೆ ಎಂಬುದು ಪ್ರತೀತಿ. ಇದರಿಂದ "ಅಳಿಲು ಸೇವೆ" ಎಂಬ ಉಕ್ತಿ ಚಾಲ್ತಿಯಾಯಿತು.

ಯಾವುದಾದರು ಮಹತ್ತರವಾದ, ಪುಣ್ಯದ ಕೆಲಸದಲ್ಲಿ - ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ನಮ್ಮ ಕೈಲಾದ ಸಹಾಯಮಾಡುವ ಮನಸ್ಥಿತಿಯನ್ನು  ’ಅಳಿಲು ಸೇವೆ’ ಎಂದು ಕರೆಯಲಾಯಿತು.

ಅಳಿಲು ತನ್ನ ಪುಟ್ಟ ದೇಹದಿಂದ ಅದೆಷ್ಟು ಮರಳನ್ನು ಸಂಗ್ರಹಿಸಿರಲು ಸಾಧ್ಯ. ವಿಸ್ತಾರವಾದ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಬೊಗಸೆಯಷ್ಟು ಮರಳಿಗೆ  ಮಹತ್ವವೆನ್ನಿಸುವುದಿಲ್ಲ.ಆದರೆ ಇಲ್ಲಿ ಅಳಿಲು ಶೇಖರಿಸಿದ ಮರಳಿನ ಪ್ರಮಾಣ ಮುಖ್ಯವಾಗುವುದೇ ಇಲ್ಲ. ಮಹತ್ತರವಾದ ಕಾರ್ಯದಲ್ಲಿ ತನಗಾದ ಸೇವೆಯನ್ನೋ, ಸಹಾಯವನ್ನೋ ಮಾಡಬೇಕೆಂಬ ಮನಸ್ಥಿತಿಯೇ ಹೆಚ್ಚುಗಾರಿಕೆಯಾಗಿ ನಿಲ್ಲುತ್ತದೆ. ವೀರಾಧಿವೀರ ಕಪಿ ಸೈನ್ಯದ ಮುಂದೆ ತಾನೇನು ಮಾಡಬಲ್ಲೆ ಎಂದು ಅಳಿಲು ಅಂದು ಯೋಚಿಸಿದ್ದರೆ ಆ ಭಗವಂತನ ಪ್ರೀತಿಯನ್ನು ಪಡೆಯಲಾಗುತ್ತಿತ್ತೇ?  

ಯಾವುದೇ ಒಳ್ಳೆಯ ಕಾರ್ಯದಲ್ಲಿ ಭಾಗಿಯಾಗುವ ಮನೋಭಾವವನ್ನು ರೂಢಿಸಿಕೊಳ್ಳಲು ಪುಟ್ಟ ಅಳಿಲು ನಮಗೆ ಮಾದರಿ.ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಸಂಕೋಚವನ್ನು ದೂರವಿಡಬೇಕು. ಹಿಂಜರಿಕೆ ತೊರೆದು ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು. ಸೇವೆ ಎಂದರೆ ಸೇವೆ, ಸಹಾಯವೆಂದರೆ ಸಹಾಯ ಅಷ್ಟೆ. ಅದರಲ್ಲಿ ಚಿಕ್ಕದು ದೊಡ್ಡದೆಂಬ ಭೇದವಿಲ್ಲ. ಹನಿ-ಹನಿ ಸೇರಿದರೆ ತಾನೇ ಹಳ್ಳವಾಗುವುದು. 

ಚಿಕ್ಕ ಅಳಿಲಿನ ಬಗ್ಗೆ ಇನ್ನೊಂದು ವಿಷಯವಿದೆ.ಅಳಿಲುಗಳು ತಮಗೆ ತಿಳಿದೋ, ತಿಳಿಯದೆಯೋ ಇನ್ನೊಂದು ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಳಿಲುಗಳು ತಮಗೆ ಮುಂದೆ ಉಪಯೋಗಕ್ಕೆ ಬರಬಹುದೆಂದೋ ಏನೋ ಭೂಮಿಯಲ್ಲಿ ಅಡಗಿಸಿಟ್ಟ ಎಷ್ಟೋ ಬೀಜಗಳು ಮೊಳೆತು, ಹೆಮ್ಮರವಾಗಿ ಬೆಳೆಯಲು ಸಹಾಯಕವಾಗಿದೆ. ಇಂತಹ ಚಿಕ್ಕ ಪ್ರಾಣಿ ಇಷ್ಟೆಲ್ಲಾ ಪರೋಪಕಾರಿಯಾಗಿರುವಾಗ ಮಾನವರಾದ ನಾವೇಕೆ ಹಿಂದೆ ಬೀಳಬೇಕು. ಸಂಕೋಚ ಬಿಡಿ, ಈಗಿನಿಂದಲೇ ನಮ್ಮ "ಅಳಿಲು ಸೇವೆ"ಯನ್ನು ಪ್ರಾರಂಭಿಸೋಣ ಬನ್ನಿ.    

(ಚಿತ್ರಕೃಪೆ - ಅಂತರ್ಜಾಲ)

ಚೆಂಗುಲಾಬಿ

ನಮ್ಮ ಕೈತೋಟದಲ್ಲಿ ಅರಳಿದ ಚೆಂಗುಲಾಬಿಯೊಂದಿಗೆ, ಬ್ಲಾಗ್ ಮಿತ್ರರಿಗೆ ಸಂಕ್ರಾಂತಿಯ ಶುಭಾಶಯಗಳು


ಪುಟ್ಟಕರು


ಅಂಬಾ... ಎಂದು
ಕರೆಯುತಲಿಹುದು
ಕೊಟ್ಟಿಯಲ್ಲಿಹ
ಪುಟ್ಟ ಕರು

ಹತ್ತಿರ ಸೆಳೆದು
ಮೈಯನು ನೆಕ್ಕಿ
ಮಮತೆಯ ತೋರಿತು
ತಾಯಿ ಹಸು

ಹಾಲನು ಕುಡಿದು
ಹೊಟ್ಟೆಯು ತುಂಬಿರೆ
ಕೊಟ್ಟಿಗೆ ತುಂಬ
ನೆಗೆವ ಕರು

ಬಾಲವನೆತ್ತಿ
ಕಿವಿಗಳ ಅರಳಿಸಿ
ಜೊತೆಯವರೊಂದಿಗೆ
ನಲಿವ ಕರು

ಮನೆಯಂಗಳದ ಮಾತು.....!

 ನನಗೆ ಕುವೆಂಪುರವರ ಹುಟ್ಟೂರು ಕುಪ್ಪಳ್ಳಿಯನ್ನು ನೋಡಿದಾಗೆಲ್ಲಾ ನಾನು ಮಲೆನಾಡಿನಲ್ಲಿ ಹುಟ್ಟಬೇಕಿತ್ತು ಎನ್ನಿಸುತ್ತದೆ. ಬನವಾಸಿ, ಕುಪ್ಪಳ್ಳಿಗಳು ಕನ್ನಡಿಗರ ಪಾಲಿಗೆ ಸ್ವರ್ಗ ಸಮಾನ ಸ್ಥಳಗಳು ಎಂದರೆ ತಪ್ಪಾಗಲಾರದು.ಎಷ್ಟು ವರ್ಣನೆಗೈದರೂ ಮುಗಿಯದ ಸೊಬಗಿನೊಂದಿಗೆ ಕವಿಗಳ ಮನಸೂರೆಗೊಳಿಸಿದ ತಾಣಗಳಿವು.ಇಂತಹ ಸುಂದರ ಪರಿಸರದಲ್ಲಿ ವಿಹರಿಸುವ ಸೌಭಾಗ್ಯ ಎಲ್ಲರ‍ಿಗೂ ಲಭ್ಯವಾಗುವುದಿಲ್ಲ.ಆದರೆ ನಾವು ಸ್ವಲ್ಪ ಮನಸ್ಸು ಮಾಡಿದರೆ ನಾವಿರುವ ಜಾಗದಲ್ಲಿಯೇ ನಿಸರ್ಗದ ಚಿಕ್ಕಪುಟ್ಟ ಅಚ್ಚರಿಗಳನ್ನು ಕಂಡು ಆನಂದಿಸಬಹುದು.ಬಾಲ್ಯದಿಂದಲೂ ನನಗೆ ಕೀ.. ಕೀ.. ಎಂದು ಇಂಚರಗೈಯ್ಯುತ್ತಾ, ಪುರ್ರನೆ ಆಗಸಕ್ಕೆ ಹಾರಿ ಸ್ವೇಚ್ಛೆಯಾಗಿ ವಿಹರಿಸುವ  ಪಕ್ಷಿಗಳೆಂದರೆ ಅಕ್ಕರೆ ಒಂದೆಡೆಯಾದರೆ ಅವುಗಳ ದಿನಚರಿ ಕುರಿತು ಕುತೂಹಲ ಇನ್ನೊಂದೆಡೆ.ಕೆಲವಾರು ನಿಮಿಷಗಳಾದರೂ ಹಕ್ಕಿ ಪಕ್ಷಿಗಳ ಚಿನ್ನಾಟವನ್ನು ನಮ್ಮ ಮನೆಯಂಗಳದಲ್ಲಿಯೇ ಕಂಡು ಆನಂದಿಸುವ ಅವಕಾಶ ದೊರೆತರೆ......!!ವಾಹ್....!! ಇಲ್ಲಿದೆ ನೋಡಿ ನಮ್ಮ ಮನೆಯಂಗಳದ ಮಾತು.....!     

ಹದಿನಾರು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿರುವ ಪ್ರಿಯದರ್ಶಿನಿ ಬಡಾವಣೆಯಲ್ಲಿ ಮನೆ ಕಟ್ಟುವ ನಿರ್ಧಾರಕ್ಕೆ ಬಂದೆವು. ನಮ್ಮದೇ ಆದ ಪುಟ್ಟ ಗೂಡಿಗೆ ವಾಸಕ್ಕೆ ಬಂದೆವು.ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು.ನಮ್ಮ ಬಡಾವಣೆ ಶಿವಮೊಗ್ಗದ ಸಿಟಿಯಿಂದ ಸುಮಾರು ೩-೪ ಕಿ ಮೀ ದೂರವಿದೆ.ಆದರೆ ಈಗ ಊರು ಇದಕ್ಕೂ ಮುಂದೆ ಬೆಳೆದು ನಿಂತಿದೆ-ಆ ಮಾತು ಬೇರೆ.

ಹದಿನಾರು ವರ್ಷಗಳ ಹಿಂದೆ ನಮ್ಮ ಬಡಾವಣೆ ಜನಸಂದಣಿ ಮತ್ತು ವಾಹನ ಭರಾಟೆಯಿಂದ ದೂರವಿದ್ದುದರಿಂದ ಅಲ್ಲಿ ಮೌನ,ಗಂಭೀರತೆ ಮನೆ ಮಾಡಿತ್ತು.ಅಲ್ಲೊಂದು ಇಲ್ಲೊಂದಿದ್ದ ಮನೆಗಳು. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಗಂಡ-ಹೆಂಡತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗುತ್ತಿದ್ದುದರಿಂದ ಬೆಳಗಿನ ವೇಳೆ ಬಡಾವಣೆಯಲ್ಲಿ ಎಲ್ಲವೂ ಖಾಲಿ ಎನಿಸುತ್ತಿತ್ತು.ಬೇಸಿಗೆಯಲ್ಲಿ ರಣ ಬಿಸಿಲಿನ ಬೇಗೆಯಾದರೆ ಮಳೆಗಾಲದಲ್ಲಿ ಸುರಿಯುವ ಮಳೆಯೊಂದಿಗೆ ಬಿಚ್ಚಿ ಬೀಳಿಸುವ ಗುಡುಗು-ಸಿಡಿಲಿನ ಅಬ್ಬರ. ರ‍ಾತ್ರಿಯಲ್ಲಿ ಕಳ್ಳರ ಭಯ. ಮನೆಯಲ್ಲಿದ್ದಾಗ ಏನೋ ಒಂದು ರೀತಿ ಹೆದರಿಕೆಯ ಭಾವ .ಅಲ್ಲೊಂದು-ಇಲ್ಲೊಂದಿದ್ದ ಮನೆಯವರಲ್ಲಿ ಆತ್ಮೀಯತೆ ಬೆಳೆಯಲು ಈ ವಾತಾವರಣವೂ ಪ್ರೇರಣೆಯಾಗಿತ್ತು ಎಂಬುದು ಬೇರೆ ಮಾತು. ಹಾಗಾಗಿ ೧೦-೧೨ ಮನೆಯವರೆಲ್ಲಾ ಸೇರಿ ಒಂದು ಸಂಘವನ್ನು ಮಾಡಿಕೊಂಡೆವು. ಸಂಘದ ಮೂಲಕ ನಮ್ಮ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸುತ್ತಾ ,ನಮ್ಮ ಮನದ ಸಂತಸಕ್ಕಾಗಿ ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡೆವು.ಪ್ರತಿ ವರ್ಷವೂ ಜನವರಿ ಒಂದನೇ ತಾರೀಖಿನಂದು ನಮ್ಮ ಬಡಾವಣೆಯವರೆಲ್ಲ ಒಟ್ಟಾಗಿ ಕಲೆತು ನೂತನ ವರ್ಷಾಚರಣೆಯನ್ನು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದೆವು.ಇವತ್ತಿಗೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ.ಈಗ ನಮ್ಮ ಹದಿನಾರನೇ ವಾರ್ಷಿಕೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ಆ ಹಿಂದಿನ ದಿನಗಳು ನೆನಪುಗಳು ನನ್ನನ್ನು ಕಾಡುತ್ತಿದೆ.    

ನಮ್ಮ ಸಂಘ ಮತ್ತೊಂದು ಸ್ತುತ್ಯಾರ್ಹ ಕೆಲಸವನ್ನು ಮಾಡಿತು.ಬಿಸಿಲಿನ ಬೇಗೆಯನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ಬಡಾವಣೆಯಲ್ಲಿ ಬೆಳೆಸುವ ವಿಚಾರವನ್ನು ಕಾರ್ಯರೂಪಕ್ಕೆ ತರಲಾಯಿತು.ಅಂದಿನ ಆ ನಿರ್ಧಾರ  ನಮ್ಮ ಬಡಾವಣೆಯನ್ನು ಇಂದು ಹಸಿರಾಗಿಸಿ, ಮಾದರಿ ಬಡಾವಣೆ ಎನ್ನಿಸಿದೆ.ಅಂದು ಬೆರಳೆಣಿಕೆಯ ಜನ ಉತ್ಸಾಹದಿಂದ ನೆಟ್ಟು, ಬೆಳೆಸಿದ ಸಸಿಗಳು ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತು ನಮಗೆ ತಂಪನ್ನೀಯುತ್ತಿವೆ. ವಿವಿಧ ರೀತಿಯ ಪಕ್ಷಿಸಂಕುಲಕ್ಕೆ ಆಶ್ರಯ ನೀಡಿ, ಅವುಗಳ ಉಳಿವಿಗೆ ಮಾರ್ಗ ತೋರಿವೆ. ಮೌನದ ಬೀಡಾಗಿದ್ದ ನಮ್ಮ ಬಡಾವಣೆಯಲ್ಲೀಗ ಹಕ್ಕಿಗಳ ಕಲರವದಿಂದಾಗಿ ,ಒಂದು ರ‍ೀತಿಯ ಮಂಗಳಕರ ನಿನಾದ ಸದಾ  ಮೊಳಗುತ್ತಿರುವಂತಿದೆ.

ನಮ್ಮ ಮನೆಯ ಮುಂದಿರುವ ಹಸಿರಾದ ಮರ-ಗಿಡಗಳು ನನಗೀಗ  ಆತ್ಮೀಯವಾಗಿವೆ. ಕಾರಣ ಇಲ್ಲಿ ಆಶ್ರಯ ಪಡೆದಿರುವ ನೂರಾರು ಪಕ್ಷಿಗಳು.ಅವುಗಳ ಶಿಸ್ತುಬದ್ಧವಾದ ಜೀವನ ಶೈಲಿ ನನಗೆ ಅಚ್ಚರಿ ಉಂಟುಮಾಡಿದೆ. ಮುಂಜಾನೆಯ ಹಕ್ಕಿಗಳ ಕಲರವ ನಮ್ಮನ್ನು ಬೆಳಗಾಯಿತೆಂದು ಎಚ್ಚರಿಸುತ್ತದೆ. ಬಿಡುವಿನ ದಿನಗಳಲ್ಲಿ ಜೋಡಿ ಹಕ್ಕಿಗಳ ಚಿನ್ನಾಟ,ಗೂಡು ಕಟ್ಟುವಾಗಿನ ಕಾರ್ಯತತ್ಪರತೆ,ಮರಿಗಳಿಗೆ ಗುಟುಕು ನೀಡಿ ಸಾಕುವ ಪರಿಯನ್ನು ನೋಡಿ ಆನಂದಿಸಿದ್ದೇನೆ.ಅವುಗಳ ದಿನಚರಿಯನ್ನು ಕುತೂಹಲದಿಂದ ನೋಡಿ ಬೆರಗಾಗಿದ್ದೇನೆ. ರೆಕ್ಕೆ ಬಂದ ಮರಿ ಹಕ್ಕಿಗೆ ಮಾರ್ಗದರ್ಶನ ಮಾಡುವ ಹಿರಿತನವನ್ನು ಕಂಡು ಮೈಮರೆತಿದ್ದೇನೆ.ಹಾಗೆಯೇ ,ತಮ್ಮ ಮೊಟ್ಟೆಗಳನ್ನು ಬೆಕ್ಕೋ, ಹಾವೋ ಅಪಹರಿದಾಗಿನ ಅವುಗಳ ಆರ್ತನಾದವನ್ನು ಕೇಳಿ ಸಂಕಟವನ್ನೂ ಅನುಭವಿಸಿದ್ದೇನೆ.   ನಾವೀಗ ಬರೀ ಪುಸ್ತಕದಲ್ಲಿ ಮಾತ್ರ ನೋಡಿದ,ಹೆಸರೇ ತಿಳಿಯದ ಕೆಲವು ಪಕ್ಷಿಗಳನ್ನು ಮನೆಯ ಮುಂದಿನ ಮರ-ಗಿಡಗಳಲ್ಲಿ, ನಮ್ಮ ಮನೆಯ ಟೆರೇಸ್ ಮೇಲೆ  ನೋಡಿ ಅನಿರ್ವಚನೀಯವಾದ ಆನಂದವನ್ನು ಅನುಭವಿಸುತ್ತಿದ್ದೇನೆ. ಆಫೀಸಿಗೆ ರಜವಿದ್ದಾಗ, ಒಬ್ಬಳೇ ಮನೆಯಲ್ಲಿದ್ದಾಗ ಮನೆಯ ಕಿಟಕಿಯಿಂದ ತೂರಿ ಬರುವ ಕೋಗಿಲೆಯ ಕುಹೂ.. ಗಾನಕ್ಕೆ ಮೈಮರೆತಿದ್ದೇನೆ.ಅರಗಿಳಿಗಳ ಹಾರಾಟಕ್ಕೆ ಆನಂದಿತಳಾಗಿದ್ದೇನೆ. ಹಕ್ಕಿ-ಪಕ್ಷಿಗಳ ಇಂಚರಕ್ಕೆ ತಲೆದೂಗಿದ್ದೇನೆ. ಸಂಜೆಗತ್ತಲಾಗುವ ಮುನ್ನವೇ ನಮ್ಮ ಮನೆ ಮುಂದಿನ ಮರದ ಆಶ್ರಯಕ್ಕೆ ಎಲ್ಲೆಲ್ಲಿಂದಲೋ ಬಂದು ರಾತ್ರಿ ಕಳೆಯುವ ನೂರಾರು ಪಕ್ಷಿಗಳನ್ನು ನೋಡಿ ಕೌತುಕಪಟ್ಟಿದ್ದೇನೆ.   

 ಮುದ್ದು ಅಳಿಲಿನ ಪುಟು-ಪುಟು ಓಡಾಟಕ್ಕೆ ಮನದಲ್ಲಿ ಮುದಗೊಂಡಿದ್ದೇನೆ. ಬಣ್ಣ-ಬಣ್ಣದ ಚಿಟ್ಟೆಗಳ ವೈಯ್ಯಾರದ ನರ್ತನಕ್ಕೆ ಮೈಮರೆಯುತ್ತೇನೆ. ಕಾಲಚಕ್ರ ತಿರುಗಿದಂತೆ ಅವುಗಳಲ್ಲಿ ಉಂಟಾಗುವ ಬದಲಾವಣೆಗೆ ಅಚ್ಚರಿಪಟ್ಟಿದ್ದೇನೆ.ಸಾವಿರಾರು ಜೇನುಹುಳಗಳು ಒಗ್ಗಟ್ಟಿನಿಂದ ಗೂಡು ಕಟ್ಟಿ, ಮಧುವಾಗಿಸುವಾಗಿನ ಅವುಗಳ ಕಾರ್ಯತತ್ಪರತೆ ಕಂಡು ಬೆರಗಾಗಿದ್ದೇನೆ.ನೆರಳಿನಾಶ್ರಯ ಬಯಸಿ ಬಂದ ಗೋವುಗಳ ಅಂಬಾ ದನಿಗೆ, ಮನಸ್ಸಿಗೆ ಉಲ್ಲಾಸದ ಹೂಮಳೆ ಸುರಿಸಿದ ಮಧುರಾನುಭೂತಿಯನ್ನು ಅನುಭವಿಸಿದ್ದೇನೆ.    

ಕೇವಲ ಕೆಲವಾರು ಮರಗಳಿಂದಲೇ ಇಷ್ಟೆಲ್ಲಾ ಆನಂದವೇ ಎಂದು ಮನ ಅಚ್ಚರಿಪಡುವಂತಾಗಿದೆ.....!! ಅಂದು ನಮ್ಮ ಮನೆಯಂಗಳದಲ್ಲಿ ಮತ್ತು ಬಡಾವಣೆಯಲ್ಲಿ ಮನೆ ಮಾಡಿದ್ದ ಅಸಹನೀಯ ಮೌನ ಮುರಿದು ಮಾತಾಗಿದ್ದಕ್ಕೆ,  ಮಾತು ಮಧುರಗೀತೆಯಾಗಿದ್ದಕ್ಕೆ ಇಂದು ಸಂತಸವಾಗಿದೆ.
ನಮೋ ಆಶ್ರಯದಾತ ....! ನಮೋ ನಮೋ ವೃಕ್ಷರಾಜ.....!!

 ೨೦೧೨ ಕ್ಕೆ ತೆರೆ ಬೀಳುತ್ತಿದೆ. ಮತ್ತೊಂದು ನೂತನ ವರ್ಷ ಆಗಮಿಸುತ್ತಿದೆ. ಸರ್ವರಿಗೂ ಎರಡುಸಾವಿರದ ಹದಿಮೂರನೇ ವರ್ಷಕ್ಕೆ ಶುಭಾಶಯಗಳು.   

ವಿದೇಶ ವಿಹಾರ - 16 - ವಿಮಾನಯಾನದ ಗಮ್ಮತ್ತು


ಇಪ್ಪತ್ತು ವರ್ಷಗಳ ಹಿಂದೆ ವಿಮಾನಯಾನ, ವಿದೇಶಯಾತ್ರೆ ಎಂದರೆ ನಮ್ಮಂತಹ ಮಧ್ಯಮವರ್ಗದವರ ಪಾಲಿಗೆ ಒಂದು ಕನಸೇ ಸರಿ! ಆದರೆ ಕಾಲಚಕ್ರ ಈ ಪರಿ ವೇಗವಾಗಿ ಬದಲಾಗಬಹುದೆಂಬ ಕಲ್ಪನೆ ಸಹ ನಮ್ಮದಾಗಿರಲಿಲ್ಲ. ಐಟಿ ಯುಗ, ಜಾಗತೀಕರಣ ಎಂದೆಲ್ಲಾ ಬಂದದ್ದೇ ಬಂದದ್ದು ನಮ್ಮಂಥವರ ಜೀವನ ಶೈಲಿಯೇ ಬದಲಾಗಿ ಹೋಯಿತು !! ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ,ಅವರ ಪ್ರತಿಭೆಗೆ ತಕ್ಕ ಅವಕಾಶ ಒದಗಿ ಬರುವ ಭಾಗ್ಯ ನಮ್ಮದಾಯಿತು. ದೇಶ-ವಿದೇಶಗಳಲ್ಲಿ ನಮ್ಮ ಮಕ್ಕಳು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದು , ನಮಗೆ ಮತ್ತು ನಮ್ಮ ನಾಡಿಗೇ ಕೀರ್ತಿ ತರುತ್ತಿದ್ದಾರೆ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ಭಾರತೀಯರೆಂದರೆ ವಿದೇಶಗಳಲ್ಲಿ ಗೌರವ ಭಾವನೆ ಮೂಡುತ್ತಿದೆ.ಭಾರತೀಯ ಯುವಕ-ಯುವತಿರ ಪ್ರತಿಭೆಯನ್ನು ಕಂಡು ಅವರು ಬೆರಗಾಗಿದ್ದಾರೆ !! ವಿದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯರು ನಮ್ಮ ಸಂಸ್ಕೃತಿಯನ್ನು,ನಮ್ಮ ಭವ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪ್ರಚಾರ ಮಾಡುತ್ತಿರುವ " ಸಾಂಸ್ಕೃತಿಕ ರಾಯಭಾರಿ"ಗಳಾಗಿದ್ದಾರೆ.ಆದರೆ ಈ ಬೆಳವಣಿಗೆಯ ಬಗ್ಗೆ ಗೊಣಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ.  ಒಳಿತು-ಕೆಡುಕು ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಒಂದರೊಡನೊಂದು ಇದ್ದೇ ಇರುತ್ತವೆ.ಆರಿಸಿಕೊಳ್ಳುವಾಗ ಎಚ್ಚರವಾಗಿರಬೇಕು ಅಷ್ಟೆ...!!.ನಮ್ಮ ಬದುಕಿಗೆ ಬೇಕಾದ ಸನ್ಮಾರ್ಗದ ಹಾದಿಯನ್ನು ಹುಡುಕಿ ನಡೆಯಬೇಕಾದ ಸಂಸ್ಕಾರ ನಮ್ಮಲ್ಲಿರಬೇಕು.ಬೇವನ್ನು ಬಿತ್ತಿ ಮಾವನ್ನು ಬೆಳೆಯಲು ಸಾಧ್ಯವಿಲ್ಲ ಎಂಬ ಅರಿವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು.

ಇರಲಿ, ನಾನೀಗ ನನ್ನ ಮೊದಲ ವಿಮಾನ ವಿಹಾರದ ಅನುಭವವನ್ನಿಲ್ಲಿ ಹೇಳಲು ಹೊರಟಿದ್ದೇನೆ.ವಿಮಾನದಲ್ಲಿ ಸಂಚರಿಸುವುದು ನನ್ನ ಬಹು ದಿನದ ಕನಸಾಗಿತ್ತು. ಸಿಂಗಪೂರ್ ಏರ‍್ಲೈನ್ಸ್ (ಎಸ್ ಕ್ಯು ೫೦೪- ೦೧/೦೮/೨೦೧೧)ನಲ್ಲಿ ಬೆಂಗಳೂರಿನಿಂದ ಸಿಂಗಪೂರ್ ಗೆ ನನ್ನ ಮೊದಲ ವಿಮಾನಯಾನ. ಅಲ್ಲದೆ, ನನ್ನ ಪ್ರಥಮ ವಿದೇಶ ಪ್ರವಾಸವೂ ಆಗಿತ್ತು.ಆ ದಿನಕ್ಕಾಗಿ,ವಿನೂತನ ಅನುಭವಕ್ಕಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೆ.ಅಂದಿನಿಂದ ಆರಂಭವಾದ ನಮ್ಮ ಗಗನ ಸಂಚಾರ‍ ಮುಂದಿನ ಒಂದು ತಿಂಗಳಲ್ಲಿ ೭-೮ ವಿಮಾನಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ನಮ್ಮ ಮಕ್ಕಳು ನಮಗೆ ಒದಗಿಸಿ ಕೊಟ್ಟರು. ಹಗಲಿನಲ್ಲಿ ಅಂಬರದಲ್ಲಿ ಹಾರಾಡುವ ಅನುಭವವು ರಾತ್ರಿಯ ಸಮಯದ ಗಗನ ಸಂಚಾರಕ್ಕಿಂತ ಭಿನ್ನವಾಗಿರುತ್ತದೆ.ನಾನಂತೂ ವಿಮಾನ ಏರಿ ಕುಳಿತೆನೆಂದರೆ, ಅದು ಹಗಲಿರಲಿ ರಾತ್ರಿ ಇರಲಿ ಒಂದು ನಿಮಿಷವೂ ವ್ಯರ್ಥ ಮಾಡದಂತೆ ಕಿಟಕಿಯಲ್ಲಿ ಕಣ್ಣಿಟ್ಟು ಹೊರಗಿನ ದೃಶ್ಯವನ್ನು ವೀಕ್ಷಿಸುವುದರಲ್ಲಿ ತಲ್ಲೀನಳಾಗಿ ಬಿಡುತ್ತಿದ್ದೆ....!!! 

"ಹಾರುತ ದೂರಾ.. ದೂರಾ..ಮೇಲೇರುವ ಬಾರಾ..ಬಾರಾ..
ನಾವಾಗುವ ಚಂದಿರ ತಾರಾ... ಸುಂದರ ಗಗನವಿಹಾರ..."

ರಾತ್ರಿ ವೇಳೆಯಲ್ಲಿ ವಿಮಾನಯಾನದ ಅನುಭವ:-

ಆಸ್ಟ್ರ‍ೇಲಿಯಾಗೆ ಹೋಗುವಾಗ ಬೆಂಗಳೂರಿನಿಂದ ಸಿಂಗಪೂರ್ ಮತ್ತು ವಾಪಾಸಾಗುವಾಗ ಸಿಂಗಪೂರ್ ನಿಂದ ಬೆಂಗಳೂರಿಗೆ ರಾತ್ರಿ ಸಂಚರಿಸುವ ಅವಕಾಶ ನಮ್ಮದಾಯಿತು.   

ವಿಮಾನ ಮೇಲೇರುವ ಮೊದಲು ನಿಲ್ದಾಣದಲ್ಲಿ ಚಕ್ರಗಳ ಮೇಲೆ ಚಲಿಸುತ್ತಾ ನಿಗದಿಯಾದ ರನ್ ವೇ ನಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ನಿಧಾನವಾಗಿ ನೆಲವನ್ನು ಬಿಟ್ಟು ಮೇಲೇರುತ್ತದೆ.ಈ ಲೋಹದ ಹಕ್ಕಿಯೂ ನಾವು ದಿನನಿತ್ಯ ನೋಡುವ ಪಕ್ಷಿಗಳಂತೆಯೇ ಹಗುರವಾಗಿ, ಸ್ವಲ್ಪ ಓರೆಯಾಗಿ ಮೇಲೇರುವ ಒಂದೆರಡು ಕ್ಷಣ ಹೊಟ್ಟೆಯಲ್ಲಿ ಒಂದು ರೀತಿಯ ಅನುಭವವಾಗಿ ಆನಂದವಾಗುತ್ತದೆ. ನಂತರ ವಿಮಾನ ಹಂತಹಂತವಾಗಿ ಆಕಾಶಕ್ಕೆ ನೆಗೆಯುತ್ತಾ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಭೂಮಿಗೆ ಸಮಾನಾಂತರವಾಗಿ ಚಲಿಸಲಾರಂಭಿಸುತ್ತದೆ.ಇನ್ನು ಬರೀ ಗಾಳಿಯಲ್ಲಿ ತೇಲಿದಂತಾಗುತ್ತದೆ...! ಮೊದಲ ಸಲ ಈ ನೆಲದಿಂದ ಮುಗಿಲಿಗೆ ಹಾರಿದ ಸಂತಸ.ಆಕಾಶದಿಂದ ನನ್ನ ಭರತ ಭೂಮಿಯನ್ನು ವೀಕ್ಷಿಸುವ ಸುಯೋಗ.ನಿಧಾನವಾಗಿ ಮೇಲೇರಿದಂತೆ ಬೆಂಗಳೂರಿನ ರಾತ್ರಿಯ ವೈಭವದ ನೋಟ ನಯನ ಮನೋಹರ...!!ಕೆಳಗೆ ದೀಪಗಳ ಸರಮಾಲೆ, ಹರಿದಾಡುವ ವಾಹನಗಳು  ಮಾತ್ರ ನಮಗೆ ಕಾಣುತ್ತದೆ.ರಾತ್ರಿ ವೇಳೆ ಧರೆಯಲ್ಲಿ ನಿಂತು ಆಕಾಶದ ನಕ್ಷತ್ರಗಳನ್ನು ನೋಡಿದಂತಾಗುತ್ತದೆ....!! ವಿಮಾನದ ರೆಕ್ಕೆಗಳನ್ನು ಬಿಟ್ಟರೆ ಬೇರ‍ೆನೂ ಗೋಚರಿಸದು.ರೆಕ್ಕೆಯ ಅಂಚಿನಲ್ಲಿ ಪುಕ್.. ಪುಕ್.. ಎನ್ನುವ ದೀಪವೊಂದೇ ಆ ಕಗ್ಗತ್ತಲಿನಲ್ಲಿ ಕಾಣುತ್ತಿರುತ್ತದೆ.ಎಷ್ಟೊಂದು ಬೃಹದಾಕಾರವಾಗಿದ್ದ ಮತ್ತು ಅಷ್ಟೊಂದು ತೂಕವನ್ನು ಹೊತ್ತ ವಿಮಾನ ಈ ಪರಿ ಹಗುರವಾಗಿದ್ದು ಹೇಗೆ ಎಂದು ವಿಸ್ಮಿತಳಾದೆ....!!! ಹಾಗೆ ಮಾನವನ ಬುದ್ಧಿಮತ್ತೆಗೆ ಮನದಲ್ಲಿಯೇ ಒಮ್ಮೆ ಜಯಕಾರ ಮಾಡಿದೆ.ಒಂದು ಚಿಕ್ಕ ಸದ್ದು ಬಿಟ್ಟರೆ ಬೇರ‍ೇನೂ ಕೇಳಿಸದು, ರಾತ್ರಿಯಾದ್ದರಿಂದ ಬೇರೇನೂ ಕಾಣಿಸದು. ವಿಮಾನ ನಿಂತಲ್ಲೇ ನಿಂತ ಅನುಭವ.....!!!  ಗಾಳಿಯಲ್ಲಿ ಹಾರಿದಂತೆ ಎಲ್ಲವೂ ಸುಖಮಯ. ಹದಿನೈದು ಇಪ್ಪತ್ತು ಸಾವಿರ ಅಡಿಗಳ ಎತ್ತರದಿಂದ ಚನ್ನೈ ನಗರವನ್ನು ಹಾದು ಸಮುದ್ರದ ಮೇಲೆ ಬಂದಾಗ ಸಹ ಬರೀ ಕತ್ತಲು. ವಿಮಾನ ಮುಂದೆ ಸಾಗಿದಂತೆ, ಚಿಕ್ಕ ಚಿಕ್ಕ ದ್ವೀಪಗಳ ಮೇಲೆ ಹಾದು ಹೋಗುವಾಗ ಮಾತ್ರ ದೂರದಲ್ಲಿ ನಕ್ಷತ್ರಗಳು ಮಿನುಗಿದಂತೆ ಅನುಭವ! ಇಂಡೋನೇಷಿಯಾದ ಮೇಲೆ ಹೋಗುವಾಗಲಂತೂ ಚಿಕ್ಕಚಿಕ್ಕ ದ್ವೀಪಗಳು ಮುತ್ತು,ರತ್ನ,ಹವಳಗಳಿಂದ ಕುಸುರಿ ಕೆಲಸ ಮಾಡಿದ ಚಿನ್ನದ ಪದಕಗಳಂತೆ, ವಿವಿಧ ವಿನ್ಯಾಸದ ಕಿವಿಯ ಓಲೆಗಳಂತೆ ಮನಸೆಳೆಯುತ್ತವೆ. ಉದ್ದವಾದ ಭೂಪ್ರದೇಶವನ್ನು ಹೊಂದಿದ ದ್ವೀಪಗಳು ನವರತ್ನಗಳಿಂದ ನಿರ್ಮಿತವಾದ ,ಆ ಪದಕಗಳಿಗೆ ಜೋಡಿಸಿದ ಅಮೂಲ್ಯವಾದ ಹಾರವೇನೋ ಎಂಬಂತೆ ಕಾಣುತ್ತಿತ್ತು....!! ಈ ಅಪರೂಪದ ದೃಶ್ಯವನ್ನು ಇನ್ನೂ ಸ್ವಲ್ಪ ಹೊತ್ತು ನೋಡೋಣ ಅನ್ನಿಸುವಷ್ಟರಲ್ಲಿ ನಮ್ಮ ವಿಮಾನ ವೇಗವಾಗಿ ಮುಂದೋಡಿರುತ್ತದೆ. ಆ ವೈಭವದ ನೋಟ ಮಾತ್ರ ಅಚ್ಚಳಿಯದ ನೆನಪಾಗುತ್ತದೆ.

ಸಿಂಗಪೂರ್ ಹತ್ತಿರವಾದಂತೆ ಝಗಮಗಿಸುವ ದೀಪಗಳ ಸಾಲು ಕಣ್ ಕೋರೈಸುತ್ತದೆ. ಭವ್ಯವಾದ,ಸುಂದರವಾದ ನೋಟ.ನಾವು ಕುಳಿತ ವಿಮಾನ ನಿಧಾನವಾಗಿ, ಹಂತಹಂತವಾಗಿ ಕೆಳಗಿಳಿಯತೊಡಗುತ್ತದೆ.ಆಗಿನ್ನು ಬೆಳಗಿನ ಜಾವ ಐದು ಗಂಟೆ. ಆರುನೂರು ಅಡಿಗಳ ಎತ್ತರದಿಂದ ಆ ದೇಶವನ್ನು ನೋಡುವುದೇ ಒಂದು ಸೊಗಸು.ಸುತ್ತೆಲ್ಲಾ ಬರೀ ಸಮುದ್ರ. ಒಂದಿಷ್ಟೂ ನೆಲವೇ ಕಾಣದಂತೆ ಒತ್ತೊತ್ತಾಗಿ, ಸುಸಜ್ಜಿತವಾಗಿ ಮತ್ತು ಬಹು ಎತ್ತರಕ್ಕೆ ಕಟ್ಟಿದ ಕಟ್ಟಡಗಳ ಕಲಾಕೃತಿಗಳು ಕಾಣಬರುತ್ತವೆ. ಇಂದ್ರನ ಅಮರಾವತಿಯನ್ನು ಪ್ರವೇಶಿಸಿದಂತೆ ಅನುಭವ ನೀಡುವ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ...! ವಿಮಾನ ಲ್ಯಾಂಡ್ ಆಗುವಾಗ ಹಂತಹಂತವಾಗಿ ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ, ರನ್ ವೇಗೆ ಬಂದು ಭೂಸ್ಪರ್ಶ ಮಾಡಿದ ಒಂದು ಕ್ಷಣ ಝಕ್ ...ಎಂದು ಒಂದು ಜರಕು ಹೊಡೆದು ಜೋರಾಗಿ ರನ್ ವೇನಲ್ಲಿ ಓಡುತ್ತದೆ. ಓಟವನ್ನು ನಿಧಾನಗೊಳಿಸುತ್ತಾ ನಮ್ಮ ವಿಮಾನಕ್ಕಾಗಿ ನಿಗದಿಪಡಿಸಲಾದ ಗೇಟಿಗೆ ಬಂದು ನಿಲ್ಲುತ್ತದೆ. ನಾವೀಗ ವಿಮಾನದಿಂದ ಇಳಿಯಲು ಅನುಮತಿ ಸಿಗುತ್ತದೆ. ಗಗನಸಖಿಯರ ನಗುಮೊಗದ ವಿದಾಯವನ್ನು ಸ್ವೀಕರಿಸಿ ಹೊರಬರುತ್ತೇವೆ.  ನನ್ನ ಜೀವಿತದಲ್ಲಿ ಮೊದಲಬಾರಿ ತಾಯ್ನೆಲವನ್ನು ಬಿಟ್ಟು ಬೇರೆ ನೆಲವನ್ನು ಸ್ಪರ್ಶಿಸಿದ ವಿಶಿಷ್ಟ ಗಳಿಗೆಯಿದು.  

ಬೆಳಗಿನ ವೇಳೆಯ ವಿಮಾನಯಾನದ ಅನುಭವ:-
(ಸಿಂಗಪೂರ್-ಆಸ್ಟ್ರೇಲಿಯಾದ ಬ್ರಿಸ್ಬೇನ್ - ಟೌನ್ಸ್ವಿಲ್ ಮತ್ತು ಟೌನ್ಸ್ವಿಲ್ - ಬ್ರಿಸ್ಬೇನ್ -ಮೆಲ್ಬೋರ್ನ್ - ಸಿಂಗಪೂರ್)

ಬೆಳಗಿನ ವೇಳೆಯ ವಿಮಾನಯಾನದ ಅನುಭವವನ್ನಿಲ್ಲಿ ನಾನೀಗ ಹೇಳಹೊರಟಿದ್ದೇನೆ.ಇದೂ ಸಹ ವಿಭಿನ್ನ ಅನುಭವ. ಕೊಂಚ ಮೇಲಕ್ಕೆ ಹೋದಂತೆ ನಮ್ಮ ಪಕ್ಕದಲ್ಲಿಯೇ ಮೋಡಗಳ ಮನೋಹರ ಲೋಕ. ನಾವೀಗ ಮೋಡದ ನಾಡಿನ ಅತಿಥಿಗಳು....!!! ಪೌರಾಣಿಕ ಸಿನಿಮಾದಲ್ಲಿ ನಮ್ಮ ತ್ರಿಲೋಕ ಸಂಚಾರಿ ನಾರದರು ’ಗೊಂಬೆಯಾಟವಯ್ಯಾ... ಈ ಲೋಕವೇ ಆ ದೇವನಾಡುವಾ.. ಗೊಂಬೆಯಾಟವಯ್ಯಾ...’ ಎಂದು ಹಾಡುತ್ತಾ ಮೋಡಗಳ ಮೇಲೆ ಏರಿ ,ಲೋಕದಿಂದ ಲೋಕಕ್ಕೆ ಸುತ್ತುತ್ತಿದ್ದ ದೃಶ್ಯ ನನ್ನ ಕಣ್ಮುಂದೆ ಸುಳಿದು ಹೋಯಿತು. ನಾನೀಗ ವಿದೇಶ ಸಂಚಾರಿ.ಅಂದು ಆ ನಾರದರು ಪಡೆದ ಅದ್ಭುತ ಅನುಭವ ಇಂದು ನನ್ನ ಪಾಲಿಗೆ ಬಂದಿದೆ ಎನ್ನಿಸಿತು. ಓಹ್... ದೂರದಲ್ಲೇಲ್ಲೋ ಚಲಿಸುವ ಮೋಡಗಳೇ,ನಿಮ್ಮ ಸನಿಹಕ್ಕೆ ನಾನೀಗ ಹಾರಿ ಬಂದಿದ್ದೇನೆ.ಹತ್ತಿಯ ದೊಡ್ಡ ದೊಡ್ಡ ಉಂಡೆಗಳಂತಿರುವ ನಿಮ್ಮನ್ನು ಕೈಯಿಂದ ಒಮ್ಮೆ ಮುಟ್ಟಿಬಿಡಲೇ ಎಂದುಕೊಳ್ಳುತ್ತಿರುವಂತೆಯೇ, ನಾವೀಗ ಈ ಮೋಡಗಳನ್ನು ಭೇದಿಸಿಕೊಂಡು ಇನ್ನೂ ಎತ್ತರಕ್ಕೆ ಹಾರಿಬಿಟ್ಟಿದ್ದೇವೆ ... ! ಕೆಳಗೆ ನೋಡಿದರೆ ಮೇಘ ಮಂದಾರ....!! ! ಕವಿ ಕಾಳಿದಾಸ ಈ ಮೋಡಗಳ ಮೂಲಕವೇ ಅಲ್ಲವೆ ತನ್ನ ಪ್ರಿಯತಮೆಗೆ ಸಂದೇಶ ಕಳುಹಿಸಿದ್ದು.ಎಂತಹ  ಮನೋಹರವಾದ ಕವಿಕಲ್ಪನೆ...!!! ನಾನು ವಿಮಾನದಲ್ಲಿ ಕುಳಿತು ಹಾರಾಡುತ್ತಿದ್ದರೂ ಮನಸ್ಸು ಮಾತ್ರ ಕಾಳಿದಾಸನಿಗೆ ನಮೋ.. ಎನ್ನುತ್ತಿತ್ತು. ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು ನಿಜವೆ. ಕವಿಗಳ ಕಲ್ಪನಾ ಪ್ರಪಂಚಕ್ಕೆ ಸಾಟಿಯಾದುದು ಬೇರಾವುದೂ ಇಲ್ಲ ಎನಿಸಿತು.         

ಸೂರ್ಯೋದಯದ ಮತ್ತು ಮುಸ್ಸಂಜೆಯ ಗಗನ ವಿಹಾರವಂತೂ ಮರೆಯಲಾಗದ ಮನೋಹರ ನೋಟ.ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶದಲ್ಲಿ ಹೊಂಗಿರಣವನ್ನು ಚೆಲ್ಲಿದ ಸೂರ್ಯ ನಮ್ಮ ವಿಮಾನದ ಪಕ್ಕವೇ ಇದ್ದಾನೆ, ನಾವು ಅವನೊಂದಿಗೇ ಸಾಗುತ್ತಿದ್ದೇವೆನೋ ಎಂಬ ರೋಮಾಂಚನ. ಒಟ್ಟಿನಲ್ಲಿ ಮರೆಯಲಾರದ, ಸುಂದರ ಗಗನ ವಿಹಾರ ನಮ್ಮದಾಯಿತು.    

ನುಡಿಮುತ್ತುಗಳು - 1


 ನನ್ನ ಗೆಳತಿ ಶ್ರೀಮತಿ ಮಹಾಲಕ್ಷ್ಮಿಯವರಿಗೆ ನುಡಿಮುತ್ತುಗಳನ್ನು ಸಂಗ್ರಹಿಸುವ ಮತ್ತು ಅವುಗಳನ್ನು ತನ್ನ ಮಿತ್ರರಿಗೆ  S M S ಕಳುಹಿಸುವ ಒಂದು ಉತ್ತಮ ಹವ್ಯಾಸವಿದೆ.ಅವರಿಂದ ನನಗೆ ಬಂದ ಕೆಲವು ಅರ್ಥವತ್ತಾದ ನುಡಿಮುತ್ತುಗಳನ್ನಿಲ್ಲಿ ಹಂಚಿಕೊಳ್ಳಲು ನನಗೆ ಸಂತಸವಾಗಿದೆ.








ಋತುಗಾನ


ಕಾಶ್ಮೀರದ ಟುಲಿಪ್ ಗಾರ್ಡನ್ನಿನ ವೀಡಿಯೊ ಚಿತ್ರಗಳೊಂದಿಗೆ ನನ್ನ ಲೇಖನದ ಪ್ರಸ್ತುತಿ.
ವೀಡಿಯೊ, ಲೇಖನ ಮತ್ತು ನಿರೂಪಣೆ
ಶ್ರೀಮತಿ ಮಂಜುಳಾದೇವಿ, ವಿನ್ಯಾಸ, ಶಿವಮೊಗ್ಗ.

ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಬಣ್ಣದ ಬಳೆ... ರವಿಗೆ ಕಳೆ..!!


    ಬಾಹ್ಯಾಕಾಶ ವಿಸ್ಮಯಗಳ ಆಗರ.ವಾತಾವರಣದ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿ ಜರುಗುವ ಅನೇಕ ಕ್ರಿಯೆಗಳು ಅತ್ಯದ್ಭುತ.ಇಂತಹ ಅಚ್ಚರಿಗಳಲ್ಲಿ, ಅಂಬರದಲ್ಲಿ ಮೂಡುವ ಕಾಮನಬಿಲ್ಲು ಸಹ ಒಂದು ಮನೋಹರ ಚಿತ್ರ.ಇದೇ ಕಾಮನಬಿಲ್ಲು ಸೂರ್ಯನ ಸುತ್ತ ಬಣ್ಣದ ಬಳೆಯಾಕಾರದಲ್ಲಿ ಮೂಡಿದರೆ ಆ ದೃಶ್ಯವೆಷ್ಟು ನಯನ ಮನೋಹರವಲ್ಲವೇ........!!!??? 

ಇತ್ತೀಚೆಗೆ ಭದ್ರಾವತಿಯಲ್ಲಿ ನಮ್ಮವರ ಕ್ಯಾಮರದಲ್ಲಿ ಸೆರೆಸಿಕ್ಕ ಈ ಮನಮೋಹಕ ದೃಶ್ಯಾವಳಿಗಳಿವು.ವೃತ್ತಾಕಾರದ ಬಣ್ಣದ ಬಳೆಗಳ ನಡುವೆ ಪ್ರಜ್ವಲಿಸುತ್ತಿದ್ದ ಸೂರ್ಯನನ್ನು ನೋಡುವುದೇ ಒಂದು ಅಪರೂಪದ ದೃಶ್ಯ.


  ನಿಸರ್ಗದಲ್ಲಿ ಉಂಟಾಗುವ ಅದ್ಭುತ ದೃಶ್ಯಕಾವ್ಯಗಳಲ್ಲಿ ಇದೂ ಒಂದು. ಭೂಮಿಯಿಂದ ಐದರಿಂದ ಎಂಟು ಕಿಲೋಮೀಟರ್ ಎತ್ತರದ ವಾತಾವರಣದಲ್ಲಿ ನಿರ್ಮಾಣವಾಗುವ ಹಿಮದ ಹರಳುಗಳ ಮೂಲಕ ಹಾದುಹೋಗುವ ರವಿಕಿರಣಗಳಿಂದುಂಟಾಗುವ ಪ್ರತಿಫಲನ,ವಕ್ರೀಭವನ ಮತ್ತು ಚದುರುವಿಕೆಯ ಕ್ರಿಯೆಗಳು ಈ ಬಣ್ಣದ ಬಳೆಗಳ ರಚನೆಗೆ ಕಾರಣವಂತೆ.ಇಲ್ಲಿ ಸೂರ್ಯನ ಬೆಳಕಿನ ಕಿರಣಗಳ ಎದುರು ಹಿಮದ ಹರಳುಗಳು ಪ್ರಿಸಂನಂತೆ ಮತ್ತು ದರ್ಪಣವಾಗಿ ವರ್ತಿಸಿ ಮನಸೆಳೆಯುವ ಕಾಮನಬಿಲ್ಲಿನ ಬಳೆಯ ಸೃಷ್ಟಿಗೆ ಕಾರಣವಾಗಿದೆ. ಇದನ್ನೇ ನಮ್ಮ ಪೂರ್ವಜರು ಸೂರ್ಯ ಗೂಡು ಕಟ್ಟಿದ್ದಾನೆ, ಮಳೆ ಬರುವ ಸೂಚನೆ ಎಂದು ಹೇಳುತ್ತಿದ್ದರು.