ವಿದೇಶ ವಿಹಾರ - 20 - ಸುಂದರ ನಗರ Townsville

ಆಸ್ಟ್ರೇಲಿಯಾದ Queens Land ರಾಜ್ಯದ ಕಡಲತೀರದ ಒಂದು ಸುಂದರ ನಗರ Townsville.ಈ ನಗರದ ಉತ್ತರಕ್ಕೆ Crains ಮತ್ತು ದಕ್ಷಿಣಕ್ಕೆ Brisbane ನಗರಗಳಿವೆ. ಈ ಎರಡು ದೊಡ್ಡ ನಗರಗಳಿಗೆ ಸೇತುವೆಯಂತಿದೆ ಈ ನಗರ. ತನ್ನ ಹೃದಯ ಭಾಗದಲ್ಲಿರುವ ಕ್ಯಾಸಲ್ ಬೆಟ್ಟ( Castal Hill) ದ ಸುತ್ತ ಹರಡಿಕೊಂಡಿರುವ ಸಮತಟ್ಟಾದ ಪ್ರದೇಶದಲ್ಲಿ ಟೌನ್ಸ್ವಿಲ್ಲ್ ನಗರ ಬೆಳೆದು ನಿಂತಿದೆ. ನಗರದ ತುಂಬೆಲ್ಲಾ ತಲೆ ಎತ್ತಿ ನಿಂತಿರುವ ಮರಗಳು ಈ ಊರನ್ನು ಹಸಿರಾಗಿಸಿವೆ ಮತ್ತು ತಂಪಾಗಿಸಿವೆ. ಇದೊಂದು ಅತ್ಯುತ್ತಮ ವಾಣಿಜ್ಯ ಕೇಂದ್ರ, ಕೈಗಾರಿಕ ಪ್ರದೇಶ, ಬಂದರು ಮತ್ತು ಪ್ರವಾಸೀತಾಣ.ಇಲ್ಲಿನ ಬಂದರಿನಿಂದ ಹಡಗಿನಲ್ಲಿ ಲೋಹಯುಕ್ತ ಅದಿರು, ಸಕ್ಕರೆ ಮುಂತಾದುವುಗಳನ್ನು ಬೇರೆಡೆಗೆ ರಫ್ತು ಮಾಡಲಾಗುತ್ತದೆ. 

ಇದು ಚಿಕ್ಕ ನಗರವಾದರೂ ಸ್ನೇಹಜೀವಿ ಜನರಿರುವ ಸ್ಥಳ. ಇಲ್ಲಿ ವಾಸಿಸುವ ಬಹುತೇಕ ಜನರು ನಗರಕ್ಕೆ ಹತ್ತಿರವಿರುವ ಮೈನಿಂಗ್ ಇಂಡಸ್ಟ್ರಿಗಳಲ್ಲಿ ದುಡಿಮೆ ಮಾಡುತ್ತಾರೆ.ಇಲ್ಲಿನ ಸಾಲ್ಟ್ ವಾಟರ್ ಆಕ್ವೇರಿಯಮ್ ತುಂಬಾ ಪ್ರಸಿದ್ಧವಾದುದು. ಹಸಿರಾದ ಪಾರ್ಕುಗಳು ಮತ್ತು ತಿಳಿನೀರಿನ ಸರೋವರಗಳು ನಗರದ ಸೊಬಗನ್ನು ಹೆಚ್ಚಿಸಿವೆ. ಇಡೀ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಹಸಿರು ಲಾನ್ ಕಣ್ಣಿಗೆ ತಂಪನ್ನೀಯುತ್ತದೆ. ನಗರದಲ್ಲಿ ಎಲ್ಲಿಯೇ ಹೋದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ.ಇದೊಂದು ನಿರ್ಮಲವಾದ ಸುಂದರ ನಗರ.ಇವು ನಮ್ಮ ದೇಶಕ್ಕೆ ಮಾದರಿಯಾಗಿವೆ.ನಮ್ಮ ಮಗಳು- ಅಳಿಯ, ತಮ್ಮ ಕೆಲಸದೊತ್ತಡದ ಮಧ್ಯೆಯೂ ನಮ್ಮನ್ನು ಎಲ್ಲೆಡೆಯೂ ಸುತ್ತಾಡಿಸಿ,ಅಲ್ಲಿನ ವಿಶೇಷತೆಗಳನ್ನು ನಮಗೆ ವಿವರವಾಗಿ ತಿಳಿಸಿಕೊಟ್ಟರು.ಅದಕ್ಕಾಗಿ ಅವರಿಗೊಂದು ಧನ್ಯವಾದಗಳನ್ನು ನಾನು ಇಲ್ಲಿ ಹೇಳಲೇಬೇಕು. Thanks to Smitha & Girish...

ಈ ನಗರದಲ್ಲಿ ಹರಿಯುವ ರಾಸ್ ನದಿ ನಗರಕ್ಕೊಂದು ಶೋಭೆಯನ್ನು ತಂದಿದೆ.ನಮ್ಮ ಮಗಳಿದ್ದ ’Mint Apartment’ ಈ ನದಿಯ ದಂಡೆಯಲ್ಲಿದೆ.ಮನೆಯ ಹಿಂಭಾಗದ ಟೆರೇಸಿನಲ್ಲಿ ನಿಂತರೆ ನದಿಯ ನೀರಿನ ಏರಿಳಿತಗಳು,ನೀರಿನ ಸಣ್ಣ ಕಲರವ,ಮೀನಿಗಾಗಿ ಗಾಳ ಹಾಕಿ ಕುಳಿತ ಜನ,ಕಾದು ಕುಳಿತು ಸರ್ರನೆ ಹಾರಿ ಬಂದು ಮೀನನ್ನು ಕಚ್ಚಿ ಹಾರುವ ಹಕ್ಕಿಗಳ ದೃಶ್ಯಗಳು ಮನಸೆಳೆಯುತ್ತಿದ್ದವು.
ಇವುಗಳನ್ನು ನೋಡುತ್ತಲೇ ನಮ್ಮ ಊಟೋಪಚಾರಗಳು,     ಮನೆಯ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಎಂದರೆ ತಪ್ಪಲ್ಲ....!! ಆ ಸುಂದರ ದಿನಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ .

ಟೌನ್ಸ್ವಿಲ್ಲ್ ನಲ್ಲಿ ಜನರ  ಮನರಂಜನೆಗಾಗಿ ಅನೇಕ ಸುಂದರ ಬೀಚ್ ಗಳಿವೆ. ಅವುಗಳಲ್ಲಿ  Pallarenda ಮತ್ತು Strand ಬೀಚುಗಳು ಪ್ರಮುಖವಾದುವುಗಳು.

Pallarenda  Beach


ಇದು ಮರಳಿನಿಂದ ಕೂಡಿರುವ ಪ್ರಕೃತಿದತ್ತವಾದ ಸಮುದ್ರದಂಡೆ.  ಇದನ್ನು ನೋಡಿದರೆ ನಮ್ಮ ಭಾರತದ ಬೀಚುಗಳನ್ನು ನೋಡಿದಂತೆ ಭಾಸವಾಯಿತು. ಆದರೆ ಇಲ್ಲಿರುವ ಸ್ವಚ್ಛತೆಯನ್ನು ಮಾತ್ರ ನಮ್ಮ ಸಮುದ್ರ ತೀರಗಳಲ್ಲಿ ಕಾಣಲು ಎಂದೆಂದಿಗೂ ಸಾಧ್ಯವಿಲ್ಲ ಎಂಬುದು ಮಾತ್ರ ಸತ್ಯ...!!!
Strand Beach



ಸ್ಟ್ರ‍ಾಂಡ್ ಬೀಚ್ ಅತ್ಯಂತ ಉದ್ದವಾದ ಸಮುದ್ರ ತೀರವನ್ನು ಹೊಂದಿದೆ.ರಸ್ತೆ ಮತ್ತು ಸಮುದ್ರ ದಂಡೆಯ ಮಧ್ಯೆ ಬೆಳೆಸಿರುವ ಹಸಿರು ಲಾನ್ ಮತ್ತು ಮರಗಿಡಗಳು ಈ ಬೀಚಿನ ಸೌಂದರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.

ಇದು ಆಸ್ಟ್ರೇಲಿಯಾದಲ್ಲಿಯೇ ಸುಂದರವಾದ,ನಿರ್ಮಲವಾದ ಮತ್ತು ಅತ್ಯುತ್ತಮವಾದ ಬೀಚ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆಯಂತೆ....! ಇಲ್ಲಿರುವ ಸ್ಟ್ರಾಂಡ್ ಪಾರ್ಕ್, ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್ ಗಳು, ಕಾಫಿಕೆಫೆಗಳ ಅನುಕೂಲಗಳು ಜನರನ್ನು ಆಕರ್ಷಿಸುವಲ್ಲಿ ಮತ್ತು ಮಕ್ಕಳಿಗೆ ಇಷ್ಟವಾಗುವಲ್ಲಿ ನೆರವಾಗಿವೆ.

ಬೆಳಗಿನ ವೇಳೆಯಲ್ಲಿ ಸುಂದರ ಸೂರ್ಯೋದಯವನ್ನು ಮತ್ತು ಸಂಜೆಯ ವರ್ಣರಂಜಿತ ಸೂರ್ಯಾಸ್ತವನ್ನು ಕಾಣಲು ಜನ ಇಲ್ಲಿಗೆ ಬರುತ್ತಾರೆ. ಬೆಳಗಿನ ಮತ್ತು ಸಂಜೆಯ ಜಾಗಿಂಗಿಗೆ ಹೇಳಿಮಾಡಿಸಿದ ಜಾಗವಿದಾಗಿದೆ.  
Castle Hill
ನಗರದ ಪ್ರಮುಖ ಆಕರ್ಷಣೆ ಎಂದರೆ "ಕ್ಯಾಸಲ್ ಹಿಲ್"...!!!!!

ಇದು  ಟೌನ್ಸ್ವಿಲ್ಲ್ ನಗರದ ಮಧ್ಯಭಾಗದಲ್ಲಿದೆ. ಈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಬಹುದು. ಸಂಜೆಯ ವೇಳೆ ಈ ಬೆಟ್ಟವನ್ನು ಬಹಳ ಜನ ಹತ್ತಿ- ಇಳಿದು ತಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಪ್ರಯತ್ನಿಸುತ್ತಾರೆ. ಅಂದರೆ ವ್ಯಾಯಮಕ್ಕೆ ಉತ್ತಮ ಜಾಗವಿದೆಂದು ಹೇಳಬಹುದು. ಈ ಬೆಟ್ಟದ ಮೇಲೇರಲು ರಸ್ತೆ ಸಹ ಇದೆ. ಹಾಗಾಗಿ ವಾಹನದಲ್ಲಿ ಕೂಡ ಬೆಟ್ಟದ ತುದಿ ತಲುಪಬಹುದು. ಬೆಟ್ಟದ ಮೇಲಿನಿಂದ ಟೌನ್ಸ್ವಿಲ್ಲ್ ನಗರ ಅತಿ ಸುಂದರವಾಗಿ ಕಾಣುತ್ತದೆ..! ಮ್ಯಾಗ್ನೆಟಿಕ್ ದ್ವೀಪದ ದೃಶ್ಯವನ್ನೂ  ಇಲ್ಲಿಂದ ಸವಿಯಬಹುದು.....!! ರಾತ್ರಿ ವೇಳೆಯಲ್ಲಿ ಈ ದೃಶ್ಯಗಳು ಇನ್ನೂ ರಂಜನೀಯವೆನ್ನಿಸುತ್ತವೆ. ಈ ಬೆಟ್ಟವು ಅನೇಕ ಜಾತಿಯ ಸಸ್ಯ ಮತ್ತು ಪಕ್ಷಿಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ.ಈ ಎಲ್ಲಾ ಕಾರಣದಿಂದಾಗಿ ಈ ಬೆಟ್ಟವು ಪ್ರವಾಸಿಗರನ್ನು ಅಕರ್ಷಿಸುತ್ತಿದೆ.  

Shopping Complex

ಜನಮನ ಸೆಳೆಯುವ ಶಾಪಿಂಗ್ ಮಾಲ್ ಗಳಿವೆ. "ಕ್ಯಾಸಲ್ ಟೌನಿಗೆ" ಹೋದರೆ ಪ್ರತಿಯೊಂದು ವಸ್ತುವೂ ಒಂದೆಡೆಯೇ ಸಿಗುತ್ತದೆ.ಸವಿಸ್ತಾರವಾದ ಪಾರ್ಕಿಂಗ್ ಅನುಕೂಲವಿರುವ ಇಲ್ಲಿ  BIG W , TARGET, WOOLWORTHS, BEST & LESS ಮುಂತಾದ ಬೃಹತ್ತಾದ ಮಾಲ್ ಗಳು ಇಲ್ಲಿ ಒಂದೆಡೆಯೇ ಇವೆ.....!!! ಹಾಗಾಗಿ ಇಲ್ಲಿ ಪರ್ಸಿನ ತುಂಬಾ ಹಣವಿಟ್ಟುಕೊಂಡು  ಒಮ್ಮೆ ಒಳ ಹೋದರೆ, ಹೊರ ಬರಲು ಗಂಟೆಗಳೇ ಬೇಕಾಗುತ್ತದೆ..!!ಆದರೆ ಹಣ ಮಾತ್ರ ನೀರಿನಂತೆ ಹರಿದುಹೋಗುತ್ತದೆ ಅಷ್ಟೆ...!!!!

ಇಂಡಿಯನ್ ಸ್ಟೋರ್ ನಲ್ಲಿ ಭಾರತೀಯರಿಗೆ ಅವಶ್ಯವಾದ ಎಲ್ಲಾ ವಸ್ತುಗಳು ಅಂದರೆ ಅಡುಗೆಗೆ ಬೇಕಾದ ದಿನಸಿ ಸಾಮಾನುಗಳು, ತರಕಾರಿಗಳು ಎಲ್ಲವೂ ದೊರೆಯುತ್ತದೆ.ನಮ್ಮ ದೇಶದಲ್ಲಿ ಸಿಗುವುದಕ್ಕಿಂತಾ ತಾಜಾ ಮತ್ತು ಶುದ್ಧವಾಗಿರುತ್ತವೆ...!!ಇದು ನಿಜಕ್ಕೂ ಭಾರತೀಯರಾದ ನಮಗೆ ಸಮಾಧಾನಕರವಾದ ಸಂಗತಿ.

ನನ್ನ ಮಗಳು ಮತ್ತು ಅಳಿಯ ವಾಸವಾಗಿರುವ ನಗರದ ಬಗ್ಗೆ ನನಗೆ  ಅಭಿಮಾನವಿದೆ.ಅಲ್ಲಿ ಓಡಾಡಿದ ಪ್ರತಿ ನಿಮಿಷವೂ, ಅಲ್ಲಿ ನೋಡಿದ ಪ್ರತಿಯೊಂದು ದೃಶ್ಯವೂ ನನಗೆ ಅವಿಸ್ಮರಣೀಯ ಆನಂದವನ್ನು ತಂದಿದೆ...!!!! ಅಲ್ಲಿನ ಶುಚಿತ್ವ, ಮೂಲಭೂತ ಸೌಕರ್ಯಗಳ ಸಮಂಜಸ ನಿರ್ವಹಣೆಯನ್ನು ಮೆಚ್ಚುವುದರೊಂದಿಗೆ ನಮ್ಮ ದೇಶದಲ್ಲಿ ಇದನ್ನು ಕಾಣುವುದು ಎಂದಿಗೆ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ನನ್ನನ್ನು ಕಾಡುತ್ತಿದೆ......?!!!!  


ವಿದೇಶ ವಿಹಾರ - 19 - ಮನಸೆಳೆವ Magnetic Island


ಮ್ಯಾಗ್ನೆಟಿಕ್ ಐಲ್ಯಾಂಡ್ ಟೌನ್ಸ್ವಿಲ್ ನಗರದಿಂದ ೭-೮ ಕಿಲೋಮೀಟರ‍್ ದೂರದಲ್ಲಿದೆ. ಫೆರ್ರಿನಲ್ಲಿ ಹೋದರೆ ಇಪ್ಪತ್ತು ನಿಮಿಷಗಳಲ್ಲಿ ತಲುಪಬಹುದು.ಈ ದ್ವೀಪಕ್ಕೆ ಈ ಹೆಸರನ್ನಿಟ್ಟಿದ್ದು ಕ್ಯಾಪ್ಟನ್ ಕುಕ್. ಈ ದ್ವೀಪದ ಹತ್ತಿರ ಬರುತ್ತಿದ್ದಂತೆಯೇ ತನ್ನ ಹಡಗಿನ ಕಾಂಪಾಸ್ಸಿನಲ್ಲಿ ಉಂಟಾದ ಆಯಸ್ಕಾಂತೀಯ ಬದಲಾವಣೆಯನ್ನು ಗಮನಿಸಿ, ಈ ಪ್ರದೇಶದ ಆಯಸ್ಕಾಂತೀಯ ಗುಣವೇ ತನ್ನ ನೌಕೆಯ ಪಥವನ್ನು ಬದಲಾಯಿಸಿತು ಎಂದು ತಿಳಿದು ಇದನ್ನು "ಮ್ಯಾಗ್ನೆಟಿಕ್ ಐಲ್ಯಾಂಡ್" ಎಂದು ಕರೆದನಂತೆ. ನಂತರದ ಬೆಳವಣಿಗೆಗಳಲ್ಲಿ ಈ ಪ್ರದೇಶಕ್ಕೆ ಯಾವುದೇ ರೀತಿಯಾದ ವಿಶೇಷ ಆಯಸ್ಕಾಂತೀಯ ಶಕ್ತಿಯಿಲ್ಲವೆನ್ನುವುದು ತಿಳಿದು ಬಂದಿತಂತೆ.

ಟೌನ್ಸ್ವಿಲ್ ನಗರದಿಂದ ಈ ದ್ವೀಪಕ್ಕೆ ಫೆರ್ರಿಯಲ್ಲಿ ಸಾಗುವುದು ಒಂದು ವಿಶೇಷ ಅನುಭವವನ್ನು ತಂದುಕೊಡುತ್ತದೆ.ಈ ಫೆರ್ರಿಯಲ್ಲಿ ಕುಳಿತಾಗ ನನಗೆ ಸಿಗಂಧೂರಿಗೆ ಲಾಂಚ್ ನಲ್ಲಿ ಪಯಣಿಸಿದ್ದು ನೆನಪಾಯಿತು.ಆ ಲಾಂಚ್ ಚಿಕ್ಕದು ಮತ್ತು ಅಷ್ಟೊಂದು ಸುರಕ್ಷಿತವಾಗಿರಲಿಲ್ಲ ಎನ್ನಿಸಿತ್ತು.   ಆದರೆ ಇಲ್ಲಿನ ಫೆರ್ರಿಗಳು ಬೃಹತ್ತಾಗಿದ್ದುವಲ್ಲದೆ ಎರಡು,ಮೂರು ಅಂತಸ್ತುಗಳನ್ನು ಹೊಂದಿರುತ್ತವೆ.ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇರುತ್ತದೆ.ಎಲ್ಲೆಲ್ಲೂ ಶುಚಿತ್ವ ಎದ್ದು ಕಾಣುತ್ತದೆ. ವಿಮಾನದಲ್ಲಿ ಆಗಸದಲ್ಲಿ ಹಾರಾಡುವಾಗ ಉಂಟಾದ ಹಾಗೆಯೇ, ಫೆರ್ರಿಯಲ್ಲಿ ಕುಳಿತು ಸಮುದ್ರದ ಮೇಲೆ ಸಾಗುವಾಗಲೂ ವಿಶೇಷ ಅನುಭವವನ್ನು ಪಡೆದಂತಾಯಿತು. ಆಸ್ಟೇಲಿಯಾಕ್ಕೆ ಬಂದಾಗಿನಿಂದಲೂ ಜನಸಂದಣಿ ಪ್ರದೇಶ ಎನ್ನುವುದೇ ಮರೆತು ಹೋಗಿತ್ತು.ಆದರೆ ಇಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರಿಗಳಲ್ಲಿ ಮತ್ತು ಫೆರ್ರಿಗಳಲ್ಲಿ ಆಸ್ಟ್ರೇಲಿಯನ್ಸ್ ಮತ್ತು ಅನೇಕ ವಿದೇಶಿಯರನ್ನು ನೋಡಿ ಖುಷಿಯಾಯಿತು.ಅಲ್ಲದೆ ಈ ಪ್ರದೇಶದ ಆದಿವಾಸಿ (ಆಸ್ಟ್ರೇಲಿಯನ್ ಅಬಾರಿಜಿನಲ್ಸ್)ಗಳ ದರುಶನವನ್ನೂ ಪಡೆದೆವು. ಅಲ್ಲಿ ಈ ಮೂಲನಿವಾಸಿಗಳ ಸ್ಥಿತಿಯನ್ನು ಕಂಡು ಮನಸ್ಸು ಆರ್ದ್ರವಾಯಿತು.

ಮ್ಯಾಗ್ನೆಟಿಕ್ ಐಲ್ಯಾಂಡಿನಲ್ಲಿ ಸುಂದರವಾದ ಅನೇಕ ಕೊಲ್ಲಿ ಪ್ರದೇಶಗಳಿವೆ.ಅವುಗಳಲ್ಲಿ ಅರ್ಕಡಿಯಾ ಬೇ, ನೆಲ್ಲೀ ಬೇ,ಹಾರ್ಸ್ ಶೂ ಬೇ ಮತ್ತು ಪಿಕ್ನಿಕ್ ಬೇ ಮುಖ್ಯವಾದವುಗಳು.ನಾವು ಫೆರ್ರಿಯಲ್ಲಿ ಬಂದು ’ನೆಲ್ಲೀ ಬೇ’ನಲ್ಲಿಳಿಯುತ್ತೇವೆ. ಈ ದ್ವೀಪದಲ್ಲಿರುವ ವಿವಿಧ ಜಾತಿಯ ಸಸ್ಯವರ್ಗ, ವರ್ಣರಂಜಿತ ಬೆಟ್ಟ ಪ್ರದೇಶ, ಅಪರೂಪದ ಪ್ರ‍ಾಣಿ-ಪಕ್ಷಿಗಳು ಮತ್ತು ಎತ್ತೆತ್ತಲೂ ಕಾಣುವ ನೀಲ ಸಾಗರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.ದ್ವೀಪದ ಎಲ್ಲಾಭಾಗಗಳನ್ನು ನೋಡಲು ಬಸ್ಸಿನ ವ್ಯವಸ್ಥೆ ಇದೆ. ಅಲ್ಲದೆ ಚಿಕ್ಕ ಜೀಪ್ ಗಳಂತಿರುವ ಮೋಕ್ ಗಳು ಮತ್ತು ಟಾಪ್ ಲೆಸ್ ಕಾರುಗಳು ಬಾಡಿಗೆಗೆ ಸಿಗುತ್ತವೆ. ಇಲ್ಲಿ ಸುತ್ತಾಡಲು ಸ್ಕೂಟರ್ ಸಹ ಬಾಡಿಗೆಗೆ ಸಿಗುತ್ತದೆ. ನಾನು ಆಸ್ಟ್ರೇಲಿಯಾಗೆ ಬಂದಾಗಿನಿಂದ ಎಲ್ಲೆಲ್ಲೂ ಬರೀ ಕಾರುಗಳನ್ನೆ ಕಂಡಿದ್ದೆ ಆದರೆ ಸ್ಕೂಟರನ್ನು ನೋಡಿದ್ದು ಇಲ್ಲಿ ಮಾತ್ರ ಎಂದು ಹೇಳಬಹುದು...!! ನಮ್ಮ ಅಳಿಯನ ಪರಿಚಿತರು ನಮಗೆ ಇಲ್ಲಿ ಸುತ್ತಾಡಲು ಎರಡು ಟಾಪ್ ಲೆಸ್ ಕಾರುಗಳನ್ನು ವ್ಯವಸ್ಥೆ ಮಾಡಿಕೊಟ್ಟರು.ಹಾಗಾಗಿ ನಮಗಿಲ್ಲಿ ತಿರುಗಾಡಲು ಮತ್ತು ಸಂಜೆಯತನಕ ಎಲ್ಲವನ್ನೂ ನೋಡಲು ತುಂಬಾ ಅನುಕೂಲವಾಯಿತು. 
 

ಇಲ್ಲಿನ ನ್ಯಾಷನಲ್ ಪಾರ್ಕ್ ಮತ್ತು ಪಕ್ಷಿಧಾಮಗಳಲ್ಲಿ ದಿನದ ಅನೇಕ ಭಾಗವನ್ನು ನಿದ್ದೆಯಲ್ಲಿಯೇ ಕಳೆಯುವ, ಮುದ್ದಾದ ಮಗುವಿನಂತಿರುವ ಅಪರೂಪದ ಪ್ರಾಣಿ ’ಕೊಯಲಾ’ಗಳಲ್ಲದೆ ಅನೇಕ ಬಗೆಯ ಸರಿಸೃಪಗಳನ್ನು,ಪಕ್ಷಿಗಳನ್ನೂ ನೋಡಿ ಮತ್ತು ನಮ್ಮ ಕೈಗಳಲ್ಲಿಡಿದು ಆನಂದಿಸಬಹುದು. ಅವುಗಳೊಂದಿಗೆ ಫೋಟೋಗಳನ್ನೂ ತೆಗೆದುಕೊಳ್ಳಬಹುದು. 

ಈ ದ್ವೀಪದಲ್ಲಿ ಪ್ರವಾಸಿಗರಿಗಾಗಿ ಅನೇಕ ಬಗೆಯ ಆಕ್ವಾಟಿಕ್ ಸ್ಪೋರ್ಟ್ಸ್ ಗಳನ್ನು ಆಡಲು ವ್ಯವಸ್ಥೆ ಮಾಡಿದ್ದಾರೆ. ಜೆಟ್ ಸ್ಕೈ , ಪೆಡಲ್ ಬೋಟುಗಳು ಬಾಡಿಗೆಗೆ ಸಿಗುತ್ತವೆ.
ನಾವು ಪೆಡಲ್ ಬೋಟಿನಲ್ಲಿ ಸಾಗರಯಾನವನ್ನು ಮಾಡಿ ಖುಷಿಪಟ್ಟೆವು. ಸಮುದ್ರದ ದಂಡೆಯಲ್ಲಿ ಮರಳಿನ ಮೇಲೆ ಬಿಸಿಲಿಗೆ ತಮ್ಮ ಮೈ ಚಿಲ್ಲಿ ಮಲಗಿ ಸನ್ ಬಾತ್ ಮಾಡುತ್ತಿರುವ ಆಸ್ಟ್ರೇಲಿಯನ್ನರನ್ನೂ ಕಾಣಬಹುದು.. .!!! ಒಟ್ಟಿನಲ್ಲಿ ಈ ದ್ವೀಪದಲ್ಲಿ ಕಳೆದ ಪ್ರತಿಕ್ಷಣವೂ ನಮಗೆ ನೂತನ ಅನುಭವಗಳನ್ನು ನೀಡಿ ನಮಗೆ ಹರ್ಷ ಕೊಟ್ಟಿತು. ಹೆಸರಿಗೆ ತಕ್ಕಂತೆ ಈ ದ್ವೀಪಕ್ಕೆ ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುವ ಶಕ್ತಿ ಇರುವುದಂತೂ ಸತ್ಯ...!!    

ಗರಿಕೆ


ಹಸಿರು ಹಸಿರಾಗಿ ಬೆಳೆವ
ಪುಟ್ಟ ಹುಲ್ಲೇ....!
ಎಂಥ ಸಾರ್ಥಕ
ಬದುಕು ನಿನದಲ್ಲೆ...!!

ಗಾಳಿಮಳೆಗೆ ಧೃತಿಗೆಡದೆ
ನೀ ತಳೆವೆ ಸ್ಥಿರತೆ.
ಧರೆಯನಪ್ಪಿ ಬೆಳೆದು
ತೋರುತಿಹೆ ಧೃಡತೆ..!!

ಪೋಷಣೆಯ ಬಯಸದೆ
ಬೆಳೆವೆ ನೀ ಎಲ್ಲೆಲ್ಲು...
ಹೆಮ್ಮರಗಳೂ ನಮಿಸಿವೆ
ನಿನ್ನ ಅಚಲತೆಗೆ ಮರೆತು ಸೊಲ್ಲು...!!

ಪಶುಗಳ ಹಸಿವ ನೀಗಿ
ನೀನಾದೆ ಜೀವಾಧಾರ.
ಕೋಮಲ ತೆನೆಯಲ್ಲಿ
ತುಂಬಿಕೊಂಡಿರುವೆ ಮದ್ದಿನ ಸಾರ...!!

ಪ್ರಥಮ ಪೂಜ್ಯನಿಗೆ
ನೀನಾದೆ ಪ್ರಿಯ ಗರಿಕೆ..!
ಗಜಮುಖನು ಸೋತನೆ
ನಿನ್ನ ನಿರಹಂಕಾರಕೆ..!!!

ಮಂಗಳ ಕಾರ್ಯಕೆ
ರಕ್ಷಾಸೂತ್ರ ನೀ ದೂರ್ವೆ.
ಪರೋಪಕಾರವೆ ಜೀವನಸೂತ್ರ
ಎಂದು ನೀ ಸಾರುವೆ...!!!
        


ವಿದೇಶ ವಿಹಾರ - 18 - ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳ ಕೆಲವು ದೃಶ್ಯಾವಳಿಗಳು


ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು


ಜಗತ್ತಿನಲ್ಲಿ ಅತ್ಯುತ್ತಮವಾದ ಮತ್ತು ಬೃಹತ್ತಾದ ಸಿಂಗಪೂರ್ ನ "ಚಾಂಗೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣ"ದ ಒಳಗಿನ ಕೆಲವು ದೃಶ್ಯಾವಳಿಗಳು.


ವಿಮಾನದಿಂದ ಇಳಿಯುತ್ತಿದ್ದಂತೆಯೇ ನೆಲವೇ ಕಾಣಿಸದಂತೆ ಹಾಸಿದ ಕಾರ್ಪೆಟ್ ನಮ್ಮನ್ನು ಸ್ವಾಗತಿಸುತ್ತದೆ. ಝಗಮಗಿಸುವ ಲೈಟುಗಳು ನಮ್ಮ ಕಣ್ಣನ್ನು ಕೋರೈಸುತ್ತವೆ.ಸಿಂಗಪೂರ್ ವಿಮಾನ ನಿಲ್ದಾಣ ಒಂದು ರೀತಿ ಮಿನಿ ಪ್ರಪಂಚವಿದ್ದಂತೆ.ಎಲ್ಲಾ ದೇಶದ ಜನರನ್ನೂ ಇಲ್ಲಿ ನೋಡಬಹುದು.ವಿಶ್ವದ ದೊಡ್ಡ ಏರ್ ಪೋರ್ಟ್ ಗಳಲ್ಲಿ ಒಂದಾದ ಇಲ್ಲಿ ಒಂದು ಟರ್ಮಿನಲ್ ನಿಂದ ಇನ್ನೊಂದು ಟರ್ಮಿನಲ್ ಗೆ ಹೋಗಲು ಸ್ಕೈ ಟ್ರೈನ್ ವ್ಯವಸ್ಥೆ ಇದೆ. ಒಂದೊಂದು ಟರ್ಮಿನಲ್ ಗಳಲ್ಲೂ ಅನೇಕ ಗೇಟ್ ಗಳಿರುವುದರಿಂದ ಕಿಲೋಮೀಟರ್ ಗಟ್ಟಲೆ ನಡೆಯಬೇಕಾಗುತ್ತದೆ.ಪ್ರಯಾಣಿಕರ ಈ ತೋದರೆಯನ್ನು ನಿವಾರಿಸಲು ಎಸ್ಕಲೇಟರ್ (ಚಲಿಸುವ ಪಥ ಅಥವ ಸೋಪಾನ ಪಥ ಎನ್ನಬಹುದು)  ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಲಗ್ಗೇಜುಗಳನ್ನು ಹಿಡಿದು ನಮ್ಮ ಗೇಟ್ ಬಳಿಗೆ ಹೋಗಲು ತುಂಬಾ ಸಹಾಯವಾಗುತ್ತದೆ.
ಸಾಮಾನ್ಯವಾಗಿ ಬೇರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ನಾವು ಬಳಸುವ ಅಂತರ್ಜಾಲಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ.  ಆದರೆ ಇಲ್ಲಿ ಇಂಟರ್ ನೆಟ್ ಬಳಸುವವರಿಗಾಗಿ ಉಚಿತ ಕಂಪ್ಯೂಟರ್ ವ್ಯವಸ್ಥೆ ಇದೆ. ಮಕ್ಕಳಿಗೆ ಸಮಯ ಕಳೆಯಲು ಆಟಗಳಿವೆ ಮತ್ತು ಶಾಪಿಂಗ್ ಮಾಡಲೂಬಹುದು. ಇಲ್ಲಿನ ಟಾಯ್ಲೆಟ್ ಮತ್ತು ಬಾತ್ ರೂಂ ಗಳ ಶುಚಿತ್ವದ ಬಗ್ಗೆಯಂತೂ ಎಷ್ಟು ವರ್ಣಿಸಿದರೂ ಕಡಿಮೆಯೇ. ಎತ್ತ ನೋಡಿದರೂ ಅಚ್ಚುಕಟ್ಟು ಎದ್ದು ಕಾಣುತ್ತದೆ. ಇದೇ ಸಿಂಗಪೂರ್ ನ ವಿಶೇಷತೆ.

ಇದು ಆಸ್ಟೇಲಿಯಾದ ಬ್ರಿಸ್ಬೇನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು
  

ಇದು ಆಸ್ಟೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು

ಪ್ರಖ್ಯಾತ ಜ್ಯೋತಿಷಿಗಳಾದ ಶ್ರೀ ಸೋಮಯಾಜಿಯವರು ನಾವು ಹೊರಟ ವಿಮಾನದಲ್ಲಿ ಪ್ರಯಾಣಿಸಿದ್ದೊಂದು ವಿಶೇಷ.ಅವರೊಡನೆ ಮಾತನಾಡುವ ಅವಕಾಶ ನಮಗೆ ಇಲ್ಲಿ ಸಿಕ್ಕಿತು.

ಇದು ಆಸ್ಟೇಲಿಯಾದ ಟೌನ್ಸ್ವಿಲ್ ನ ಡೊಮೆಸ್ಟಿಕ್ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು.



ಇದು ನಮ್ಮ ಮಗಳಿರುವ ಸ್ಥಳವಾದ್ದರಿಂದ ಇಲ್ಲಿ ಕಾಲಿಡುತ್ತಿರುವಂತೆಯೇ ಒಂದು ರೀತಿಯ ಆತ್ಮೀಯ ಭಾವ ಮೂಡಿದ್ದು ಮಾತ್ರ ನಿಜ. ಹಾಗೆಯೇ ವಾಪಾಸಾಗುವಾಗ ಅಳಿಯ-ಮಗಳಿಗೆ ವಿದಾಯ ಹೇಳುವ ಸಮಯದಲ್ಲಿ ಕಣ್ತುಂಬಿ ಬಂದು ಎದೆ ಭಾರವಾಗಿತ್ತು.




ವಿದೇಶ ವಿಹಾರ 17- ಅಂತರರಾಷ್ಟ್ರೀಯ ವಿಮಾನದೊಳಗೆ ಹೇಗಿರಬಹುದು...?!!ಏನಿರಬಹುದು..?!!


ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಮ್ಮ ಆಪ್ತರಿಂದ ಬೀಳ್ಕೊಂಡು,ಒಳಗೆ ಪ್ರವೇಶಿಸುತ್ತಿದ್ದಂತೆಯೇ ಚೆಕ್-ಇನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಇದು ನಮ್ಮೂರಿನಲ್ಲಿ ಬಸ್ಸು,ರೈಲುಗಳನ್ನು ಹತ್ತಿದಂತೆ ಸುಲಭವಲ್ಲ...!! ಸಾಮಾನ್ಯವಾಗಿ ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಮಗೆ ನಿಗದಿತವಾದ ಕೌಂಟರಿನಲ್ಲಿ ನಮ್ಮ ಪಾಸ್ ಪೋರ್ಟ್, ಏರ್ ಟಿಕೆಟ್ ಮತ್ತು ನಮ್ಮ ಲಗ್ಗೇಜುಗಳನ್ನು ತಪಾಸಣೆ ಮಾಡುತ್ತಾರೆ.ನಮ್ಮ ಕ್ಯಾರಿ ಬ್ಯಾಗ್, ವ್ಯಾನಿಟಿ ಬ್ಯಾಗ್ ಗಳನ್ನು ಮತ್ತು ಪ್ರತಿ  ಪ್ರಯಾಣಿಕರನ್ನೂ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ.ಇದೆಲ್ಲವೂ ಓಕೆ ಆದಮೇಲೆ ಇಮ್ಮಿಗ್ರೇಶನ್ ಸರ್ಟಿಫಿಕೇಟ್ ಕೊಡಲಾಗುತ್ತದೆ.ಇದಿಷ್ಟೂ ಮುಗಿದ ನಂತರವಷ್ಟೇ ನಮಗೆ ಬೋರ್ಡಿಂಗ್ ಪಾಸ್ ನೀಡುತ್ತಾರೆ. ಇಲ್ಲಿಗೆ ನಮ್ಮ ಚೆಕ್ ಇನ್ ಪ್ರಕ್ರಿಯೆ ಅಂತ್ಯಗೊಂಡು ಸಮಾಧಾನವಾಗುತ್ತದೆ.

ಈಗ ನಮ್ಮ ವಿಮಾನ ಹತ್ತುವ ಗೇಟ್ ನಲ್ಲಿ ವ್ಯವಸ್ಥೆ ಮಾಡಿರುವ ಆಸನಗಳಲ್ಲಿ ಕಾದು ಕುಳಿತು ನಮ್ಮ ಸರದಿ ಬಂದಾಗ ಏರೋಬ್ರಿಜ್ ಮೂಲಕ ಹಾದು ವಿಮಾನದೊಳಗೆ ಪ್ರವೇಶಿಸುತ್ತೇವೆ.ನಾವು ಪ್ರಯಾಣಿಸಿದ್ದು ಸಿಂಗಪೂರ್ ಏರ್ ಲೈನ್ಸಿನಲ್ಲಿ. ನಾವು ಪ್ರಯಾಣಿಸಿದ ವಿಮಾನದಲ್ಲಿ ಸುಮಾರು ೩೫೦ ರಿಂದ ೪೦೦ ಜನ ವಿಮಾನಯಾನ ಮಾಡಬಹುದಾದಷ್ಟು ದೊಡ್ಡದು. ವಿಮಾನದ ದ್ವಾರದಲ್ಲಿಯೇ ಸಿಂಗಾಪೂರ್ ಸುಂದರಿಯರಾದ ಗಗನಸಖಿಯರು ನಗುಮೊಗದಿಂದ ನಮ್ಮನ್ನು  ಸ್ವಾಗತಿಸಿ, ನಮ್ಮ ಆಸನಗಳನ್ನು ಹುಡುಕಲು ಮತ್ತು ನಮ್ಮ ಕ್ಯಾರಿ ಬ್ಯಾಗುಗಳನ್ನು ಮೇಲಿಡಲು ಸಹಾಯ ಮಾಡುತ್ತಾರೆ.

ವಿಮಾನದೊಳಗಿನ ಸ್ವಚ್ಚವಾದ ವಾತಾವರಣ, ಸುಸಜ್ಜಿತವಾದ ಪುಶ್ ಬ್ಯಾಕ್ ಆಸನಗಳ ವ್ಯವಸ್ಥೆ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ.ಸರಿ ಸುಮಾರು ಅರ್ಧ ದಿನವೆಲ್ಲಾ ವಿಮಾನದಲ್ಲಿಯೇ ಕಾಲ ಕಳೆಯಬೇಕಾಗುವುದರಿಂದ ತನ್ನ ಪ್ರಯಾಣಿಕರನ್ನು ಸಂತೋಷವಾಗಿಡಲು ಬೇಕಾದ ಇಲ್ಲಾ ಐಶಾರಾಮಿ ವ್ಯವಸ್ಥೆಯೂ ಇಲ್ಲಿದೆ.ವಿಮಾನ ಮೇಲೇರುವ ಮುನ್ನ ಪ್ರಯಾಣಿಕರಿಗೆ ಕೆಲವು ಸೂಚನೆಗಳನ್ನು (ಬೆಲ್ಟ್ ಉಪಯೋಗಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಕೆಲವು ಅಗತ್ಯ ನಿಯಮಗಳ ಬಗ್ಗೆ)  ವೀಡಿಯೋ ಮೂಲಕ ಮತ್ತು ಸ್ವತಃ ಗಗನಸಖಿ ತಿಳಿಸಿಕೊಡುತ್ತಾರೆ.ಒಮ್ಮೆ ವಿಮಾನ ಮೇಲೇರಿತೆಂದರೆ ಗಗನಸಖಿಯರ ಚಟುವಟಿಕೆ ಶುರು. ನಮ್ಮ ಮುಖ,ಕೈಗಳನ್ನು ಒರೆಸಲು ಹಬೆಯಾಡುತ್ತಿರುವ ಶುಭ್ರ ಬಿಳಿಯ ಚಿಕ್ಕಚಿಕ್ಕ ಟವೆಲ್ಲುಗಳನ್ನು ಪ್ರತಿಯೊಬ್ಬರಿಗೂ ಕೊಡಲಾಗುತ್ತದೆ. ಏ ಸಿ ವ್ಯವಸ್ಥೆ ಇರುವುದರಿಂದ ಹೊದೆಯಲು ರಗ್ಗು,ಕಾಲಿಗೆ ಹಾಕಿಕೊಳ್ಳಲು ಸಾಕ್ಸ್,ನೀರಿನ ಬಾಟಲ್, ಟೀವಿ ಕೇಳಲು ಇಯರ್ ಫೋನ್ ಗಳನ್ನು ಕೊಡುತ್ತಾರೆ.ತಿಂಡಿ ಸಮಯಕ್ಕೆ ತಿಂಡಿ ,ಊಟದ ವೇಳೆಗೆ ಊಟದ ವ್ಯವಸ್ಥೆಯಿರುತ್ತದೆ. ಇವುಗಳ ನಡುವೆ ಬಾಯಾಡಿಸಲು ಕಾರದ ಗೋಡಂಬಿ,ಕಡ್ಲೆಬೀಜ,ಚಾಕೋಲೇಟುಗಳ ಜೊತೆಗೆ ಜ್ಯೂಸ್,ಕಾಫಿ,ಟೀ ಮುಂತಾದುವುಗಳನ್ನು ಗಗನಸಖಿಯರು ಬಿಡುವಿಲ್ಲದಂತೆ ಒದಗಿಸುತ್ತಿರುತ್ತಾರೆ. ಅಗತ್ಯವಿರುವವರಿಗೆ ಡ್ರಿಂಕ್ಸ್ ವ್ಯವಸ್ಥೆ ಸಹ ಇರುತ್ತದೆ. ಇಂಟರ್ ನ್ಯಾಷನಲ್ ಫ಼್ಲೈಟ್ ಗಳಲ್ಲಿ ಇವುಗಳಿಗೆಲ್ಲಾ ಪ್ರತ್ಯೇಕ ಶುಲ್ಕವಿರುವುದಿಲ್ಲ...!!.ಹಾಗಂತ ಫ಼್ರೀ ಅಂತ ತಿಳಿಬೇಡಿ..!! ಟಿಕೇಟಿನಲ್ಲಿ ಎಲ್ಲಾ ಶುಲ್ಕಗಳನ್ನೂ ಸೇರಿಸಿರುತ್ತಾರೆ ಅಷ್ಟೇ...!!ಆದರೆ ಡೊಮ್ಯಾಸ್ಟಿಕ್  ಫ಼್ಲೈಟ್ ಗಳಲ್ಲಿ ಒಂದು ಚಿಕ್ಕ ನೀರಿನ ಬಾಟಲಿಗೂ ದುಬಾರಿ ಬೆಲೆ ತೆರಬೇಕಾಗುತ್ತದೆ.ಇದಿಷ್ಟೇ ಅಲ್ಲದೇ ,ನಿಗದಿತ ಹಣ ಸಂದಾಯ ಮಾಡಿದರೆ ಚಿಕ್ಕ ಮಕ್ಕಳಿಗೆ ಮಲಗಿಸಲು ತೊಟ್ಟಿಲು, ವಯಸ್ಸಾದವರಿಗಾಗಿ ಮತ್ತು ಅನಾರೋಗ್ಯ ಪೀಡಿತರಿಗೆ ಮಲಗಲು ವ್ಯವಸ್ಥೆಯೂ ಇರುತ್ತದೆ. 

ವಿಮಾನದೊಳಗೆ ನಾ ಕಂಡ ಕೆಲವು ವಿಶೇಷತೆಗಳ ಕಿರು ಪರಿಚಯ:-

ಸಿಂಗಪೂರ್ ಏರ್ಲೈನ್ಸ್ ನ ವಿಮಾನದೊಳಗಿನ ದೃಶ್ಯವಿದು. ಆರಾಮದಾಯಕವಾದ ಆಸನಗಳು. ಸೀಟಿನ ಮೇಲ್ಗಡೆ ಕಾಣುವುದು ನಮ್ಮ ಕ್ಯಾಬಿನು ಬ್ಯಾಗುಗಳನ್ನು ಇಡಲು ವ್ಯವಸ್ಥೆ.ನಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಟಿವಿಯ ವ್ಯವಸ್ಥೆ ಇದೆ.ಇದರಲ್ಲಿ ಬರೋಬ್ಬರಿ ನೂರಕ್ಕಿಂತಾ ಹೆಚ್ಚು ಚಾನಲ್ಲುಗಳು ಬರುತ್ತದೆ!! ನಗುವನ್ನು ಸೂಸುತ್ತಾ ಮಾರ್ಗದರ್ಶನ ನೀಡುತ್ತಿರುವ ಸಿಂಗಪೂರ್ ಗಗನಸಖಿಯರನ್ನೂ ಇಲ್ಲಿ ಕಾಣಬಹುದು.

ವಿಮಾನದಲ್ಲಿ ನಮಗಾಗಿ ನೀಡಿದ ಊಟದ ಚಿತ್ರ.ಹಾಲು,ಮೊಸರು,ಬೆಣ್ಣೆ,ಹಪ್ಪಳ,ರೈಸ್ ,ಸಾಂಬಾರ್,ಸಕ್ಕರೆ,ತರಕಾರಿ ಸಲಾಡ್,ಬನ್ ಪ್ರತಿಯೊಂದೂ ಪ್ಯಾಕಿಂಗ್ ಆಗಿರುವ ಪರಿ ನೋಡಿ.



ಪ್ರತಿಯೊಬ್ಬರಿಗೂ ಟಿವಿ ಮತ್ತು ಇಯರ್ ಫೋನ್ ಇರುತ್ತದೆ.ನಮ್ಮ ಆಸಕ್ತಿಗೆ ಅನುಗುಣವಾಗಿ ನಮಗೆ ಬೇಕಾದ ಚಾನಲ್ಲನ್ನು ನೋಡುತ್ತಾ ಸಮಯ ಕಳೆಯಬಹುದು.ಸುಮಾರು ನೂರು ಚಾನಲ್ಲುಗಳಿರುತ್ತದೆ.ಇದರಲ್ಲಿ ಹಿಂದಿ ಸಿನಿಮಾ ಚಾನಲ್ಲುಗಳೂ ಇದ್ದವು.ಬೆಂಗಳೂರಿನಿಂದ ಹೊರಡುವ ಮತ್ತು ಇಲ್ಲಿಗೆ ಬರುವ ವಿಮಾನಗಳಲ್ಲಿ ಕನ್ನಡ ಚಾನಲ್ಲುಗಳನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆಂದು ಕೇಳಿದೆ.ಹಾಗಾದಲ್ಲಿ ಮುಂದೆ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಸದ್ಯದಲ್ಲೇ ಒದಗಿ ಬರಬಹುದು.









ವಿಮಾನದೊಳಗೆ ಟಾಯ್ಲೆಟ್ ಮತ್ತು ವಾಶ್ ಬೇಸಿನ್ ವ್ಯವಸ್ಥೆಯ ಒಂದು ನೋಟ.



ಇಲ್ಲಿನ ಟಿವಿ ಚಾನಲ್ಲಿನಲ್ಲಿ ನಮ್ಮ ಪ್ರಯಾಣದ ಕ್ಷಣ ಕ್ಷಣದ ಮಾಹಿತಿ ನೀಡುವ "ಫ್ಲೈಟ್ ಪಾತ್" ಚಾನಲ್ ನನಗೆ ತುಂಬಾ ಮೆಚ್ಚುಗೆಯಾಯಿತು.



ಈಗ ನಾವೆಲ್ಲಿದ್ದೇವೆ,ಭೂಮಿಯಿಂದ ಎಷ್ಟು ಎತ್ತರದಲ್ಲಿ ಹಾರುತ್ತಿದ್ದೇವೆ,ನಾವು ತಲುಪಬೇಕಾದ ಸ್ಥಳಕ್ಕೆ ಇರುವ ದೂರವೇನು,ಅಲ್ಲಿನ ಸಮಯ ಮತ್ತು ನಾವಿರುವ ಪ್ರದೇಶದಲ್ಲಿ ಆಗಿರುವ ಸಮಯ ಎಲ್ಲ ವಿವರವನ್ನೂ ನಾವಿಲ್ಲಿ ತಿಳಿದುಕೊಳ್ಳಬಹುದು.ನನಗೆ ಇದು ತುಂಬಾ ಹಿಡಿಸಿತು.

ಬೆಳಗಿನಜಾವ ಐದೂವರೆ ಸಮಯದಲ್ಲಿ ನಾವು ಸಿಂಗಪೂರ್ ನಲ್ಲಿ ಲ್ಯಾಂಡ್ ಆಗುವ ಮೊದಲು, ವಿಮಾನದ ಮೇಲಿನಿಂದ ಸಿಂಗಪೂರ್ ಎಂಬ ಸುಂದರ ದೇಶ ನನ್ನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.
 ದೊಡ್ಡದಾದ,ಅತ್ಯಾಧುನಿಕವಾದ,ಸುಸಜ್ಜಿತವಾದ,ವ್ಯವಸ್ಥಿತವಾದ ಮತ್ತು ನೆಲವೇ ಕಾಣದಂತೆ ಕಾರ್ಪೆಟು ಹಾಸಿ ವಿಶ್ವದ ಎಲ್ಲಾ ಭಾಗದ ಜನರನ್ನೂ ಸ್ವಾಗತಿಸುವ ಸಿಂಗಪೂರ್ ನ "ಚಾಂಗಿ ಏರ್ಪೋರ್ಟ್" ನ ವೈಭವವನ್ನು ಸಾರುವ ಕೆಲವೇ ಕೆಲವು ದೃಶ್ಯಗಳು.

ಗಗನಸಖಿ ಎಂದರೆ ಚೆಂದವಾಗಿ ಅಲಂಕರಿಸಿಕೊಂಡು ವಿಮಾನದಲ್ಲಿ ಅಲ್ಲಿಂದಿಲ್ಲಿಗೆ ಓಡಾಡುವ ಸುಂದರ ಬೊಂಬೆಗಳು ಎಂದು ತಿಳಿದಿದ್ದೆ. ಆದರೆ ಬೆಂಗಳೂರಿನಿಂದ ಹೊರಟು ಸಿಂಗಪೂರ್ ತಲುಪುವ ವೇಳೆಗೆ ನನ್ನ ಈ ಅಭಿಪ್ರಾಯ ಬದಲಾಗಿತ್ತು....!! ಅವರು ತಮ್ಮ ಡ್ಯೂಟಿ ವೇಳೆಯಲ್ಲಿ ಪ್ರಯಾಣಿಕರ ಸೇವೆಯೇ ತಮ್ಮ ಕರ್ತವ್ಯ ಎಂದು ತಿಳಿದಿರಬೇಕು.ಎಲ್ಲಾ ವಿಮಾನ ಸಂಸ್ಥೆಗಳೂ ತನ್ನ ಪ್ರಯಾಣಿಕರನ್ನು ಸಂತಸದಿಂದಿಡಲು ಮತ್ತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಮಹತ್ವ ನೀಡುತ್ತವೆ. ಗಗನಸಖಿ ಎಂದರೆ ಸಂಸ್ಥೆ ಮತ್ತು ಪ್ರಯಾಣಿಕರ ನಡುವಿನ ಕೊಂಡಿಯಂತೆ. ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ಗಗನಸಖಿಯರು ಮಾಡಬೇಕು

ಹಾಗಾಗಿ ತನ್ನ ಕೆಲಸದ ವೇಳೆಯಲ್ಲಿ ನಗುಮೊಗದಿಂದ ಕೂಡಿದ ಸೌಜನ್ಯಯುತ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.ಬೇಸರಿಸದೇ, ಸಿಡಿಮಿಡಿಗೊಳ್ಳದೇ ಪ್ರತಿಯೊಬ್ಬ ಪ್ರಯಾಣಿಕರ ಕರೆಗೆ ತತ್ ಕ್ಷಣ ಓಗೊಡಬೇಕಾಗುತ್ತದೆ. ಚೈತನ್ಯದ ಚಿಲುಮೆಯಂತೆ  ತಮ್ಮ ಕೆಲಸದಲ್ಲಿ ಚುರುಕಾಗಿರಬೇಕಾಗುತ್ತದೆ.ತನ್ನ ಪ್ರಯಾಣಿಕರಿಗೆ ಸಹಾಯ ಹಸ್ತ ನೀಡಬೇಕಾಗುತ್ತದೆ. ಗಗನಸಖಿಯರೇ, ನಿಮಗೊಂದು ನನ್ನ ಸೆಲ್ಯೂಟ್...!
ವಿಮಾನ ಭೂಸ್ಪರ್ಶವಾದ ನಂತರ ಗಗನಸಖಿಯರಿಂದ ಶುಭ ವಿದಾಯವನ್ನು ಸ್ವೀಕರಿಸಿ, ವಿಮಾನದಿಂದಿಳಿದು ನಮ್ಮ ಲಗ್ಗೇಜುಗಳನ್ನು ತೆಗೆದುಕೊಳ್ಳುವಲ್ಲಿಗೆ ಹೋಗಿ, ನಮ್ಮ ಸೂಟ್ಕೇಸುಗಳನ್ನು ತಳ್ಳುಗಾಡಿಯಲ್ಲಿರಿಸಿಕೊಂಡರೆ ನಮ್ಮ ಅರ್ಧ ಕೆಲಸವಾದಂತೆ. ಮುಂದೆ ಆ ದೇಶದ ಕಸ್ಟಮ್ಸ್ ನವರಿಂದ ಲಗ್ಗೇಜುಗಳ ಪರಿಶೀಲನೆ ನಡೆಯುತ್ತದೆ. ನಾವು ತಂದಿರುವ ಎಲ್ಲಾ ವಸ್ತು ಮತ್ತು ತಿಂಡಿಗಳನ್ನೂ ಚೆಕ್ ಮಾಡಿ ನೋಡುತ್ತಾರೆ. ಕೆಲವೊಮ್ಮೆ ಉಪ್ಪಿನಕಾಯಿ,ಮಸಾಲೆ ಪದಾರ್ಥಗಳನ್ನು ಡಸ್ಟ್ ಬಿನ್ನಿಗೆ ಎಸೆಯುವುದೂ ಇರುತ್ತದೆ.ಇಲ್ಲಿ ಲಗ್ಗೇಜ್ ತಪಾಸಣೆ ಮುಗಿಸಿದರೆ ನಾವು ವಿದೇಶದಲ್ಲಿರುವ ನಮ್ಮವರಿಗಾಗಿ ಅತಿ ಮುತುವರ್ಜಿಯಿಂದ ತಂದ ವಸ್ತುಗಳೆಲ್ಲಾ ಅವರಿಗೆ ತಲುಪಿದಂತೆಯೇ..!! ಇವೆಲ್ಲವನ್ನು ಮುಗಿಸಿದ ನಂತರವಷ್ಟೇ ನಾವು ವಿಮಾನ ನಿಲ್ದಾಣದಿಂದ ಹೊರಬರಬಹುದು.




ಚೈತ್ರ ಸಂಭ್ರಮ


ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು.
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ.

ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಫೂರ್ತಿಗೊಂಡಿತು ಚೈತ್ರನಿಂದಲೆ.
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮ ಸಿಂಚನ.

ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ.
ಅಳಿಸಿ ಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು.

ಪ್ರಕೃತಿಯಂತೆಯೆ ನಮ್ಮ ಬದುಕು
ಚೈತ್ರದಾಗಮ ಬಯಸಿದೆ.
ಹಳೆಯ ನೋವಿನ ಕೊಳೆಯ ನೀಗಿಸಿ
ಸಂತಸದ ಚಿಗುರಿಗೆ ಕಾದಿದೆ.

ನೇತ್ರದಾನ

                 

ಅನ್ನದಾನವೆ ಶ್ರೇಷ್ಠ ಎಂಬುದೊಂದು ಉಕ್ತಿ
ವಿದ್ಯಾದಾನಕ್ಕಿದೆ ಜ್ಞಾನದಾ ಬೆಳಕು ನೀಡುವ ಶಕ್ತಿ

ಮರಣದ ನಂತರ ನೀವು ಮಾಡುವ ನೇತ್ರದಾನ
ದಾನಗಳಲ್ಲೆಲ್ಲ ಶ್ರೇಷ್ಠ ಎಂದಿದೆ ವೈದ್ಯಕೀಯ ವಿಜ್ಞಾನ

ದೃಷ್ಠಿ ಹೀನರಿಗೆ ಬೆಳಕಾಗಬಲ್ಲ ನಿಮ್ಮ ನಯನ
ನಿಮ್ಮೊಡನೆ ಮಣ್ಣಾಗಿಸದೆ ನೀಡಿ ದೃಷ್ಠಿದಾನ

ಅಂಧಕಾರವೆಂಬುದು ಮನುಜಕುಲಕೆ ಶಾಪ
ನೀವಾಗಬಾರದೇಕೆ ಕಣ್ಣಿಲ್ಲದವರ ಬಾಳಬೆಳಗುವ ದೀಪ?

ಸುಟ್ಟು ಬೂದಿಯಾಗಬಾರದು ದೇಹ ನಿರರ್ಥಕವಾಗಿ
ಸಾರ್ಥಕವಾಗಲಿ ಬದುಕು ಅಂಧರ ಬಾಳಿನ ಬೆಳಕಾಗಿ

           

ಅಳಿಲು ಸೇವೆ.. ಮಳಲ ಭಕ್ತಿ...!


          ಸೀತೆಯನ್ನು ಕದ್ದೊಯ್ದ ರಾವಣನ ಮೇಲೆ ಯುದ್ಧ ಅನಿವಾರ್ಯವಾದ ಸಂದರ್ಭ. ಆಗ ರಾಮ ಕಪಿಸೇನೆಯ ಸಹಾಯದಿಂದ ಲಂಕೆಗೆ ಸೇತುವೆ ನಿರ್ಮಿಸುವ ಕಾರ್ಯ ಕೈಗೊಳ್ಳುತ್ತಾನೆ. ವಾನರರೆಲ್ಲರೂ ಈ ಕಾರ್ಯವನ್ನು ಭಗವಂತನ ಸೇವೆಯೆಂದು ,ರಾಮನಾಮವನ್ನು ಜಪಿಸುತ್ತಾ, ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತು ತಂದು ಸೇತುವೆ ನಿರ್ಮಿಸಲು ತೊಡಗುತ್ತಾರೆ. ಆಗ  ಚಿಕ್ಕ ಅಳಿಲೊಂದು ಈ ಮಹತ್ತರ ಕಾರ್ಯದಲ್ಲಿ ತಾನೂ ಕೈ ಜೋಡಿಸಬೇಕೆಂದು ಬಯಸಿ, ಸೇತುವೆ ನಿರ್ಮಾಣಕ್ಕೆ ಬೇಕಾದ ಮರಳನ್ನು ಒಟ್ಟುಗೂಡಿಸಿ ಅರ್ಪಿಸಿತಂತೆ. ಸಮುದ್ರದ ನೀರಿನಲ್ಲಿ ಮುಳುಗಿ, ತನ್ನ ಒದ್ದೆ ಮೈಯನ್ನು ಮರಳಿನಲ್ಲಿ ಹೊರಳಿಸಿ ,ತನ್ನ ಮೈಗಂಟಿದ ಮರಳನ್ನು ಸೇತುವೆ ನಿರ್ಮಾಣಕ್ಕೆ ಶೇಖರಿಸಿತಂತೆ. ಆ ಪುಟ್ಟ ಅಳಿಲಿನ ಈ ಕೆಲಸವನ್ನು ಕಂಡ ರಾಮ ಸಂತಸದಿಂದ ಅದರ ಮೈದಡವಿ ಆಶೀರ್ವದಿಸಿದನಂತೆ. ರಾಮನ ಆಶೀರ್ವಾದದ ಕುರುಹಾಗಿ ಅದರ ಬೆನ್ನಿನ ಮೇಲೆ ಈಗಲೂ ಮೂರು ಗೆರೆಗಳಿವೆ ಎಂಬುದು ಪ್ರತೀತಿ. ಇದರಿಂದ "ಅಳಿಲು ಸೇವೆ" ಎಂಬ ಉಕ್ತಿ ಚಾಲ್ತಿಯಾಯಿತು.

ಯಾವುದಾದರು ಮಹತ್ತರವಾದ, ಪುಣ್ಯದ ಕೆಲಸದಲ್ಲಿ - ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ನಮ್ಮ ಕೈಲಾದ ಸಹಾಯಮಾಡುವ ಮನಸ್ಥಿತಿಯನ್ನು  ’ಅಳಿಲು ಸೇವೆ’ ಎಂದು ಕರೆಯಲಾಯಿತು.

ಅಳಿಲು ತನ್ನ ಪುಟ್ಟ ದೇಹದಿಂದ ಅದೆಷ್ಟು ಮರಳನ್ನು ಸಂಗ್ರಹಿಸಿರಲು ಸಾಧ್ಯ. ವಿಸ್ತಾರವಾದ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಬೊಗಸೆಯಷ್ಟು ಮರಳಿಗೆ  ಮಹತ್ವವೆನ್ನಿಸುವುದಿಲ್ಲ.ಆದರೆ ಇಲ್ಲಿ ಅಳಿಲು ಶೇಖರಿಸಿದ ಮರಳಿನ ಪ್ರಮಾಣ ಮುಖ್ಯವಾಗುವುದೇ ಇಲ್ಲ. ಮಹತ್ತರವಾದ ಕಾರ್ಯದಲ್ಲಿ ತನಗಾದ ಸೇವೆಯನ್ನೋ, ಸಹಾಯವನ್ನೋ ಮಾಡಬೇಕೆಂಬ ಮನಸ್ಥಿತಿಯೇ ಹೆಚ್ಚುಗಾರಿಕೆಯಾಗಿ ನಿಲ್ಲುತ್ತದೆ. ವೀರಾಧಿವೀರ ಕಪಿ ಸೈನ್ಯದ ಮುಂದೆ ತಾನೇನು ಮಾಡಬಲ್ಲೆ ಎಂದು ಅಳಿಲು ಅಂದು ಯೋಚಿಸಿದ್ದರೆ ಆ ಭಗವಂತನ ಪ್ರೀತಿಯನ್ನು ಪಡೆಯಲಾಗುತ್ತಿತ್ತೇ?  

ಯಾವುದೇ ಒಳ್ಳೆಯ ಕಾರ್ಯದಲ್ಲಿ ಭಾಗಿಯಾಗುವ ಮನೋಭಾವವನ್ನು ರೂಢಿಸಿಕೊಳ್ಳಲು ಪುಟ್ಟ ಅಳಿಲು ನಮಗೆ ಮಾದರಿ.ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಸಂಕೋಚವನ್ನು ದೂರವಿಡಬೇಕು. ಹಿಂಜರಿಕೆ ತೊರೆದು ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು. ಸೇವೆ ಎಂದರೆ ಸೇವೆ, ಸಹಾಯವೆಂದರೆ ಸಹಾಯ ಅಷ್ಟೆ. ಅದರಲ್ಲಿ ಚಿಕ್ಕದು ದೊಡ್ಡದೆಂಬ ಭೇದವಿಲ್ಲ. ಹನಿ-ಹನಿ ಸೇರಿದರೆ ತಾನೇ ಹಳ್ಳವಾಗುವುದು. 

ಚಿಕ್ಕ ಅಳಿಲಿನ ಬಗ್ಗೆ ಇನ್ನೊಂದು ವಿಷಯವಿದೆ.ಅಳಿಲುಗಳು ತಮಗೆ ತಿಳಿದೋ, ತಿಳಿಯದೆಯೋ ಇನ್ನೊಂದು ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಳಿಲುಗಳು ತಮಗೆ ಮುಂದೆ ಉಪಯೋಗಕ್ಕೆ ಬರಬಹುದೆಂದೋ ಏನೋ ಭೂಮಿಯಲ್ಲಿ ಅಡಗಿಸಿಟ್ಟ ಎಷ್ಟೋ ಬೀಜಗಳು ಮೊಳೆತು, ಹೆಮ್ಮರವಾಗಿ ಬೆಳೆಯಲು ಸಹಾಯಕವಾಗಿದೆ. ಇಂತಹ ಚಿಕ್ಕ ಪ್ರಾಣಿ ಇಷ್ಟೆಲ್ಲಾ ಪರೋಪಕಾರಿಯಾಗಿರುವಾಗ ಮಾನವರಾದ ನಾವೇಕೆ ಹಿಂದೆ ಬೀಳಬೇಕು. ಸಂಕೋಚ ಬಿಡಿ, ಈಗಿನಿಂದಲೇ ನಮ್ಮ "ಅಳಿಲು ಸೇವೆ"ಯನ್ನು ಪ್ರಾರಂಭಿಸೋಣ ಬನ್ನಿ.    

(ಚಿತ್ರಕೃಪೆ - ಅಂತರ್ಜಾಲ)

ಚೆಂಗುಲಾಬಿ

ನಮ್ಮ ಕೈತೋಟದಲ್ಲಿ ಅರಳಿದ ಚೆಂಗುಲಾಬಿಯೊಂದಿಗೆ, ಬ್ಲಾಗ್ ಮಿತ್ರರಿಗೆ ಸಂಕ್ರಾಂತಿಯ ಶುಭಾಶಯಗಳು


ಪುಟ್ಟಕರು


ಅಂಬಾ... ಎಂದು
ಕರೆಯುತಲಿಹುದು
ಕೊಟ್ಟಿಯಲ್ಲಿಹ
ಪುಟ್ಟ ಕರು

ಹತ್ತಿರ ಸೆಳೆದು
ಮೈಯನು ನೆಕ್ಕಿ
ಮಮತೆಯ ತೋರಿತು
ತಾಯಿ ಹಸು

ಹಾಲನು ಕುಡಿದು
ಹೊಟ್ಟೆಯು ತುಂಬಿರೆ
ಕೊಟ್ಟಿಗೆ ತುಂಬ
ನೆಗೆವ ಕರು

ಬಾಲವನೆತ್ತಿ
ಕಿವಿಗಳ ಅರಳಿಸಿ
ಜೊತೆಯವರೊಂದಿಗೆ
ನಲಿವ ಕರು